ಜಪಾನ್‌, ದಕ್ಷಿಣ ಕೊರಿಯಾಕ್ಕೆ ಪ್ರವಾಸ; ಪ್ರವಾಸೋದ್ಯಮ ಸಚಿವರಿಲ್ಲದೇ ತೆರಳಿದ ನಿಯೋಗ, ಸುತ್ತೋಲೆ ಉಲ್ಲಂಘನೆ?

ಬೆಂಗಳೂರು; 2025ರ ಡಿಸೆಂಬರ್‍‌ ಅಂತ್ಯದವರೆಗೆ ಯಾವುದೇ ಅಧಿಕಾರಿಗಳು ವಿದೇಶ ಅಧ್ಯಯನ ಪ್ರವಾಸಕ್ಕೆ ತೆರಳುವಂತಿಲ್ಲ ಎಂದು ಸರ್ಕಾರವು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಹೊರಬಿದ್ದು ಒಂದು ದಿನವೂ ಆಗಿಲ್ಲ. ಅಷ್ಟರಲ್ಲೇ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರೊಂದಿಗೆ ಅಧಿಕಾರಿಗಳ ತಂಡವು ಜಪಾನ್‌ ಮತ್ತು ದಕ್ಷಿಣ ಕೊರಿಯಾಕ್ಕೆ ವಿದೇಶ ಪ್ರವಾಸ ಬೆಳೆಸಿರುವುದು ಇದೀಗ ಬಹಿರಂಗವಾಗಿದೆ.

 

ಈ ನಿಯೋಗವು ಜಪಾನ್‌ ಮತ್ತು ದಕ್ಷಿಣ ಕೊರಿಯಾಕ್ಕೆ ತೆರಳಲು 2025ರ ಸೆ.24ರಂದು ಆದೇಶ ಹೊರಡಿಸಿದೆ. 2025ರ ಅಂತ್ಯದವರೆಗೆ ಯಾವುದೇ ಅಧಿಕಾರಿಗಳು ವಿದೇಶ ಅಧ್ಯಯನ ಪ್ರವಾಸಕ್ಕೆ ತೆರಳುವಂತಿಲ್ಲ ಎಂದು ಸರ್ಕಾರವು 2025ರ ಸೆ.23ರಂದು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ಹೊರಬಿದ್ದ ನಂತರವೂ ಪ್ರವಾಸೋದ್ಯಮ ಇಲಾಖೆಯ ಆಯುಕ್ತರು, ಸಚಿವರ ಆಪ್ತ ಕಾರ್ಯದರ್ಶಿ, ಜಂಟಿ ನಿರ್ದೇಶಕರು ವಿದೇಶ ಪ್ರವಾಸಕ್ಕೆ ತೆರಳಿರುವುದು, ಸುತ್ತೋಲೆಯನ್ನು ಉಲ್ಲಂಘಿಸಿದಂತಾಗಿದೆ.

 

ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷವೆಂದರೇ ಜಪಾನ್‌ ಮತ್ತು ದಕ್ಷಿಣ ಕೊರಿಯಾಕ್ಕೆ ಸಚಿವ ಎಚ್‌ ಕೆ ಪಾಟೀಲ್ ನೇತೃತ್ವದಲ್ಲಿ ತೆರಳಲಿದೆ ಎಂದು ಸರ್ಕಾರದ ಅಧಿಕೃತ ಆದೇಶದಲ್ಲಿ ಹೇಳಲಾಗಿದೆ. ಆದರೆ ಈ ನಿಯೋಗದಲ್ಲಿ ಸಚಿವ ಎಚ್‌ ಕೆ ಪಾಟೀಲ್‌ ಅವರು ತೆರಳಿಲ್ಲ ಎಂದು ಗೊತ್ತಾಗಿದೆ.

 

ಪ್ರವಾಸೋದ್ಯಮ ಇಲಾಖೆಯು ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮೇಳದಲ್ಲಿ  ಮಳಿಗೆ ತೆರೆದು ಭಾಗವಹಿಸುವ ಸಂಬಂಧ ಅಧಿಕಾರಿಗಳು 2025ರ ಸೆ.10ರಂದೇ ಕಡತ ತೆರೆದಿದ್ದರು. ಈ ಸಮ್ಮೇಳನವು 2025ರ ಸೆ.25ರಿಂದ 28ರವರೆಗೆ ನಡೆಯಲಿದೆ. ಜಪಾನ್‌ ಮತ್ತು ದಕ್ಷಿಣ ಕೋರಿಯಾದಲ್ಲಿ ಅಂತರಾಷ್ಟ್ರೀಯ ರೋಡ್‌ ಷೋ ಆಯೋಜಿಸಲು ಸರ್ಕಾರದ ಅನುಮೋದನೆ ಕೋರಿತ್ತು.

 

ಈ ನಿಯೋಗವು  ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ಇರಲಿದೆ. ಹೀಗಾಗಿ ಇಲಾಖೆ ಅಧಿಕಾರಿಗಳನ್ನು ಭಾಗವಹಿಸಲು ನಿಯೋಜಿಸಬೇಕು ಎಂದು ಸರ್ಕಾರದ ಅನುಮೋದನೆ ಕೋರಿತ್ತು. ಈ ಕಡತವು ಡಿಪಿಎಆರ್‍‌ ನಲ್ಲಿ 2025ರ ಸೆ.24ರಂದು ಅನುಮೋದನೆಗೆ ಬಾಕಿ ಇತ್ತು.

 

 

 

ಸಚಿವ ಹೆಚ್ ಕೆ ಪಾಟೀಲ್‌ ಅವರ ಅನುಪಸ್ಥಿತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಶ್ರೀನಿವಾಸ್‌ ನಿಯೋಗವು ಜಪಾನ್‌ ಮತ್ತು ದಕ್ಷಿಣ ಕೊರಿಯಾಕ್ಕೆ ಪ್ರವಾಸ ಬೆಳೆಸಿದೆ. ಈ ನಿಯೋಗದಲ್ಲಿ ಸಚಿವ ಪಾಟೀಲರ ಆಪ್ತ ಕಾರ್ಯದರ್ಶಿ ಶಿವಪುತ್ರ, ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಐಎಎಸ್‌ ಅಧಿಕಾರಿ ಅಕ್ರಂ ಪಾಷ, ಇಲಾಖೆಯ ಜಂಟಿ ನಿರ್ದೇಶಕ ಎಚ್‌ ಪಿ ಜನಾರ್ದನ ಅವರು ತೆರಳಿರುವುದು ಗೊತ್ತಾಗಿದೆ.

 

 

 

ಈ ನಿಯೋಗವು ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ತೆರಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅನುಮೋದನೆ ನೀಡಿದೆಯೇ ಇಲ್ಲವೇ ಎಂಬ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಲಭ್ಯವಿಲ್ಲ.

 

ಸರ್ಕಾರಿ ಅಧಿಕಾರಿಗಳ ವಿದೇಶ ಅಧ್ಯಯನ ಪ್ರವಾಸಕ್ಕೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು  ತಡೆ ನೀಡಿದ್ದರು. ತತ್‌ಕ್ಷಣದಿಂದ ಜಾರಿಗೆ ಬರುವಂತೆ 2025ರ ಅಂತ್ಯದ ತನಕ ಯಾವುದೇ ಅಧಿಕಾರಿಗಳು ವಿದೇಶ ಅಧ್ಯಯನ ಪ್ರವಾಸ ಹೋಗುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಅವರ ಸೂಚನೆಯಂತೆ ಸುತ್ತೋಲೆ ಹೊರಡಿಸಿತ್ತು.

 

ಹಲವು ಸರ್ಕಾರಿ ಅಧಿಕಾರಿಗಳು ವಿದೇಶ ಅಧ್ಯಯನ ಪ್ರವಾಸ ಮಾಡಿ ಬಂದು ವರದಿ ನೀಡಲು ವಿಫಲರಾಗಿದ್ದಾರೆ. ಆದ್ದರಿಮದ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳ ವಿದೇಶ ಅಧ್ಯಯನ ಪ್ರವಾಸದ ಮೇಲೆ ನಿರ್ಬಂಧ ಹೇರಲಾಗಿದೆ. ಈ ಆದೇಶ 2025ರ ಅಂತ್ಯದ ತನಕ ಜಾರಿಯಲ್ಲಿರುತ್ತದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿತ್ತು.

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದ್ದ ಸುತ್ತೋಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ಅನುಮೋದನೆ ನೀಡಿದ್ದರು.

 

ಆಗಸ್ಟ್ 2024 ರಿಂದ ಜುಲೈ 2025ರ ತನಕ ಹಲವು ಅಧಿಕಾರಿಗಳು ವಿದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಆದರೆ ಅವರು ವಾಪಸ್ ಆದ ಒಂದು ವಾರದಲ್ಲಿಯೇ ಅಧ್ಯಯನ ವರದಿ, ಶಿಫಾರಸುಗಳನ್ನು ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಸಲ್ಲಿಕೆ ಮಾಡಿಲ್ಲ ಎಂಬ ಸಂಗತಿಯು ಸುತ್ತೋಲೆಯಿಂದ ಗೊತ್ತಾಗಿದೆ.

 

ಅಲ್ಲದೇ ಈ ಸುತ್ತೋಲೆಯಲ್ಲಿ ಎಲ್ಲಾ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರು ಆಗಸ್ಟ್ 2024 ರಿಂದ ಜುಲೈ 2025ರ ತನಕ ವಿದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದರೆ, ಅವರು ತಕ್ಷಣ ವರದಿ, ಅಧ್ಯಯನ ವರದಿ ಮತ್ತು ಶಿಫಾರಸು ಸಲ್ಲಿಕೆ ಮಾಡಬೇಕು ಎಂದು ಸೂಚಿಸಿರುವುದು ತಿಳಿದು ಬಂದಿದೆ.

 

ಯಾವುದೇ ಸರ್ಕಾರಿ ಅಧಿಕಾರಿ ಮುಂದಿನ ವಿದೇಶ ಅಧ್ಯಯನ ಪ್ರವಾಸ ಕೈಗೊಳ್ಳುವ ಮೊದಲು ಈ ಹಿಂದಿನ ಪ್ರವಾಸದ ವರದಿ, ಶಿಫಾರಸುಗಳನ್ನು ಕಡ್ಡಾಯವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ಪ್ರವಾಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

 

ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೂ ಅಧಿಕಾರಿಗಳು ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳಲು ಪರಿಷ್ಕೃತ ಮಾರ್ಗಸೂಚಿ ಹೊರಡಿಸಿತ್ತು.

 

ಕೆಲವು ಅಧಿಕಾರಿಗಳು ನೇರವಾಗಿ ಸಿಎಂಗೆ ಪ್ರಸ್ತಾವನೆ ಸಲ್ಲಿಸಿ, ಅಧಿಕೃತ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡಿಪಿಎಆರ್‌ನ ಅಂದಿನ ಕಾರ್ಯದರ್ಶಿ ಅಂಜುಂ ಪವೇಜ್‌ ಪರಿಷ್ಕೃತ ಮಾರ್ಗಸೂಚಿ ಒಳಗೊಂಡ ಸುತ್ತೋಲೆ ಹೊರಡಿಸಿದ್ದರು.

 

ಅಧಿಕೃತ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಆಯಾ ಇಲಾಖಾ ಸಚಿವರ ಅನುಮೋದನೆ ಪಡೆದು ನಿಗದಿತ ನಮೂನೆಯಲ್ಲಿ ಕಡತವನ್ನು ಡಿಪಿಎಆರ್‌ಗೆ ಸಲ್ಲಿಸಬೇಕು. ಡಿಪಿಎಆರ್‌ ಮೂಲಕವೇ ಪ್ರಸ್ತಾವನೆಯನ್ನು ಸಿಎಂಗೆ ಸಲ್ಲಿಸಬೇಕು. ತಂಡದಲ್ಲಿ ಪ್ರವಾಸಕ್ಕೆ ತೆರಳುವುದಾದರೆ ನಿಯೋಗದ ಪೂರ್ಣ ಮಾಹಿತಿಯನ್ನೂ ಒದಗಿಸಬೇಕು.

 

ಜತೆಗೆ, ಪ್ರವಾಸದ ಉದ್ದೇಶ, ಅದರಿಂದ ಸರಕಾರ ಮತ್ತು ಅಧಿಕಾರಿಗೆ ಆಗುವ ಅನುಕೂಲ, ಉದ್ದೇಶಿತ ಪ್ರವಾಸದ ಅನುಭವ ಬಳಕೆಯಿಂದ ಸರಕಾರಕ್ಕೆ ಆಗುವ ಪ್ರತಿಫಲದ ಬಗ್ಗೆ ವಿವರಣೆ ಸಲ್ಲಿಸುವುದೂ ಕಡ್ಡಾಯ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿತ್ತು.

 

ಸಚಿವರ ನೇತೃತ್ವದ ನಿಯೋಗದಲ್ಲಿ ಅಧಿಕಾರಿಗಳು ಪ್ರವಾಸ ಕೈಗೊಳ್ಳುವುದಾದರೆ ಅದಕ್ಕೆ ಕೇಂದ್ರ ವಿದೇಶಾಂಗ ಸಚಿವಾಲಯದ ಅನುಮೋದನೆ ಅತ್ಯಗತ್ಯ. ವಿದೇಶ ಪ್ರವಾಸ ಸಂದರ್ಭದಲ್ಲಿ ಸಾರಿಗೆ, ವಸತಿ ವೆಚ್ಚ ಹಾಗೂ ವಿದೇಶಿ ಆತಿಥ್ಯ ಸ್ವೀಕರಿಸುವ ಪ್ರಸ್ತಾವನೆ ಇದ್ದಲ್ಲಿ ಕೇಂದ್ರ ಗೃಹ ಸಚಿವಾಲಯದೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆಯಬೇಕಿರುತ್ತದೆ.

 

ಅಖಿಲ ಭಾರತ ಸೇವೆಯ ಅಧಿಕಾರಿಗಳು ಕೇಂದ್ರ ವೃಂದ ನಿಯಂತ್ರಣ ಪ್ರಾಧಿಕಾರದಿಂದ ‘ಕೇಡರ್‌ ಕ್ಲಿಯರೆನ್ಸ್‌’ ಪಡೆಯಬೇಕು. ಹೀಗಾಗಿ, ಅಧಿಕೃತ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಅನುಮತಿ ಪ್ರಕ್ರಿಯೆಗೆ ಕನಿಷ್ಟ ಮೂರು ವಾರಗಳ ಕಾಲಾವಕಾಶ ಬೇಕಾಗಲಿದೆ. , ಸಾಕಷ್ಟು ಮುಂಚಿತವಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದನ್ನು ಸ್ಮರಿಸಬಹುದು.

 

ಈ ಕುರಿತು ‘ದಿ ಫೈಲ್‌,’ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಇ-ಮೈಲ್‌ ಮೂಲಕ  ಕೆಲವು ಸ್ಪಷ್ಟೀಕರಣ ಕೋರಿತ್ತು. ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಕ್ರಿಯೆ ನೀಡಿದ ನಂತರ ಈ ವರದಿಯನ್ನು ನವೀಕರಣಗೊಳಿಸಲಾಗುವುದು.

Your generous support will help us remain independent and work without fear.

Latest News

Related Posts