ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಹತ್ವಾಕಾಂಕ್ಷೆಯ ಯೋಜನೆ ʻರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ್ʼ (ರೂಸಾ) ಅನುಷ್ಠಾನದಲ್ಲಿ ತೋರಿದ ನಿರ್ಲಕ್ಷದಿಂದಾಗಿ ಕೇಂದ್ರ ಸರ್ಕಾರದ ಆರ್ಥಿಕ ನೆರವನ್ನು ರಾಜ್ಯವು ಸಂಪೂರ್ಣವಾಗಿ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
2021ರ ನಂತರ ʻರೂಸಾʼ ಯೋಜನೆಯಡಿ ಲಭ್ಯವಿದ್ದ ಹಣವನ್ನು ಆಗಿನ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬಳಸಿಕೊಂಡಿರಲಿಲ್ಲ. ಅಲ್ಲದೆ, ಬಳಸಿದ ನಿಧಿಗಳಿಗೆ ಇಲಾಖೆಯು ಬಳಕೆ ಪ್ರಮಾಣಪತ್ರಗಳನ್ನು ಸಹ ನೀಡಿರಲಿಲ್ಲ. ಬಿಡುಗಡೆಯಾದ ಮೊತ್ತವನ್ನು ಬಳಸದ ಕಾರಣ ಕೇಂದ್ರ ಸರ್ಕಾರವು 2021 ರಿಂದ 2024ರ ವರೆಗೆಗಿನ ಅವಧಿಯಲ್ಲಿ ಒಂದೇ ಒಂದು ರು.ಗಳನ್ನೂ ಮತ್ತೆ ಬಿಡುಗಡೆ ಮಾಡಿಲ್ಲ. ಇದರಿಂದ ಈ ಯೋಜನೆಯಡಿ ನಡೆಯುತ್ತಿದ್ದ ಕಾಮಗಾರಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿವೆ.
ರೂಸಾ ಎಂದೇ ಪರಿಚಿತವಾಗಿರುವ ʻರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ್ʼ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, 2013ರಲ್ಲಿ ಜಾರಿಗೆ ಬಂದಿತ್ತು. ರಾಜ್ಯ ಸರ್ಕಾರದ ವಿಶ್ವವಿದ್ಯಾಲಗಳಿಗೆ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ, ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಈ ಯೋಜನೆಯಡಿ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು 60:40ರ ಅನುಪಾತದಲ್ಲಿರುತ್ತದೆ.
ಮಹಾಲೇಖಪಾಲರು (ಸಿಎಜಿ) ಉನ್ನತ ಶಿಕ್ಷಣ ಇಲಾಖೆಯ ಲೆಕ್ಕಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಸಿಎಜಿಯ ಈ ವರದಿಯನ್ನು ಆಗಸ್ಟ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಡಾ. ಸಿ ಎನ್ ಅಶ್ವತ್ಥ ನಾರಾಯಣ್ ಉನ್ನತ ಶಿಕ್ಷಣ ಸಚಿವರಾಗಿದ್ದರು.
ʻರೂಸಾ 1.0ʼ ಅಡಿಯಲ್ಲಿ ರಾಜ್ಯದಲ್ಲಿನ ಒಟ್ಟು 104 ಯೋಜನೆಗಳನ್ನು 502 ಕೋಟಿ ರು.ಗಳಲ್ಲಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿತ್ತು. ಇದರಲ್ಲಿ ಕೇಂದ್ರದ ಪಾಲು 301.2 ಕೋಟಿ ರು.ಗಳಾಗಿತ್ತು. ʻರೂಸಾ 2.0ʼ ಅಡಿಯಲ್ಲಿ ಒಟ್ಟು 128 ಯೋಜನೆಗಳನ್ನು 471 ಕೋಟಿ ರು.ಗಳಲ್ಲಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿತ್ತು. ಇದರಲ್ಲಿ ಕೇಂದ್ರದ ಪಾಲು 282.6 ಕೋಟಿ ರು.ಗಳಾಗಿದ್ದವು.
ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅನುದಾನವನ್ನು ಪಡೆದ ಗರಿಷ್ಠ ಸಂಖ್ಯೆಯ ಕಾಲೇಜುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿತ್ತು. ʻರೂಸಾ 1.0ʼ ಅಡಿಯಲ್ಲಿ 91 ಮತ್ತು ʻರೂಸಾ 2.0ʼ ಅಡಿಯಲ್ಲಿ 113 ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲು ಒಪ್ಪಿಗೆ ದೊರೆತಿತ್ತು. ಇಂತಹ ಮಹತ್ವದ ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿತ್ತು ಎಂಬುದು ಈಗ ಬಹಿರಂಗಗೊಂಡಿದೆ.
2021-22ನೇ ವರ್ಷದವರೆಗೆ ಕೇಂದ್ರ ಸರ್ಕಾರವು ರೂಸಾ ಯೋಜನೆಯಡಿ 151.10 ಕೋಟಿ ರು.ಗಳನ್ನು ರಾಜ್ಯಕ್ಕೆ ಒದಗಿಸಿತ್ತು. ಆದರೆ ನಂತರ ರಾಜ್ಯ ಸರ್ಕಾರವು ಲಭ್ಯವಿರುವ ಹಣವನ್ನು ಸಂಪೂರ್ಣವಾಗಿ ಬಳಸಿಕೊಂಡಿರಲಿಲ್ಲ ಎಂದು ಸಿಎಜಿಯು ವರದಿಯು ಬೊಟ್ಟು ಮಾಡಿದೆ.
ಹೀಗಾಗಿಯೇ ಖಾತೆಯಲ್ಲಿ ಬಳಕೆಯಾಗದ ಕೇಂದ್ರದ ಪಾಲು ಮೊತ್ತ 25.41 ಕೋಟಿ ರು.ಗಳನ್ನು ಹಿಂದಿರುಗಿಸಲು ಕೇಂದ್ರ ಸರ್ಕಾರವು 2024ರ ಜನವರಿಯಲ್ಲಿ ನಿರ್ದೇಶಿಸಿತ್ತು. ಹೀಗಾಗಿ ನಿಧಿಯ ಬಳಕೆಯಲ್ಲಿ ವಿಫಲವಾದ ಕಾರಣ, 2021-24ರ ಅವಧಿಯಲ್ಲಿ ರಾಜ್ಯವು ಕೇಂದ್ರದ ಅನುದಾನವನ್ನು ಕಳೆದುಕೊಂಡಿತು ಮತ್ತು ಬಳಸದ ಬಾಕಿಯಿಂದ 25.41 ಕೋಟಿಯನ್ನು ಹಿಂದಿರುಗಿಸುವ ಹೊಣೆಗಾರಿಕೆಯನ್ನೂ ಹೊತ್ತುಕೊಳ್ಳಬೇಕಾಯಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ರಾಜ್ಯದಲ್ಲಿ ಯಾವೆಲ್ಲಾ ಕಾಮಗಾರಿಗಳನ್ನು ಈ ಯೋಜನೆಯಡಿ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ʻರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ್ʼ (ರೂಸಾ) ಯೋಜನೆಯ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. ತುಮಕೂರು ವಿವಿಗೆ ಈ ಯೋಜನಯಡಿ ಮೂಲ ಸೌಕರ್ಯ ಒದಗಿಸಲಾಗಿದ್ದು, ಇಲ್ಲಿ ಯೋಜನೆಯು ಯಶಸ್ವಿಯಾಗಿ ಜಾರಿಗೆ ಬಂದಿದೆ ಎಂದು ವೆಬ್‌ಸೈಟ್‌ನಲ್ಲಿ ಮಾಹಿತಿ ಒದಗಿಸಲಾಗಿದೆ.
ʻರೂಸಾ 1.0ʼ ಅಡಿಯಲ್ಲಿ ಮಂಡ್ಯದ ಸ್ವಾಯತ್ತ ಸರ್ಕಾರಿ ಕಾಲೇಜನ್ನು ಏಕೀಕೃತ ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಲಾಗಿದೆ. ಮಹಾರಾಣಿ ವಿಜ್ಞಾನ ಕಾಲೇಜು, ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮತ್ತು ಶ್ರೀಮತಿ ವಿ ಹೆಚ್ ಡಿ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜುಗಳನ್ನು ಪ್ರತಿ ಕಾಲೇಜಿಗೆ 55 ಕೋಟಿ ರು. ವೆಚ್ಚದಲ್ಲಿ ಸಮೂಹ ವಿಶ್ವವಿದ್ಯಾಲಯಗಳನ್ನಾಗಿ ಉನ್ನತಿಕರಿಸಲಾಗಿದೆ. ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ನಾಲ್ಕು ಕೋಟಿ ರು. ವೆಚ್ಚದಲ್ಲಿ ಮಾದರಿ ಪದವಿ ಕಾಲೇಜನ್ನಾಗಿ ಉನ್ನತೀಕರಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.
ʻರೂಸಾ 2.0ʼ ಅಡಿಯಲ್ಲಿ ತಲಾ 2 ಕೋಟಿ ರು. ವೆಚ್ಚದಲ್ಲಿ ಎರಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಮೂಲ ಸೌಕರ್ಯ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತಲಾ 12 ಕೋಟಿ ರು. ವೆಚ್ಚದಲ್ಲಿ ಎರಡು ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಬೆಂಗಳೂರಿನ ಸ್ವಾಯತ್ತ ಸರ್ಕಾರಿ ವಿಜ್ಞಾನ ಕಾಲೇಜನ್ನು 55 ಕೋಟಿ ರು. ವೆಚ್ಚದಲ್ಲಿ ಏಕೀಕೃತ ವಿಶ್ವವಿದ್ಯಾಲಯವನ್ನಾಗಿ ಉನ್ನತೀಕರಿಸಲಾಗಿದೆ. ಸುರಪುರ, ಶಹಾಪುರ ಮತ್ತು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ತಲಾ ನಾಲ್ಕು ಕೋಟಿ ರು. ವೆಚ್ಚದಲ್ಲಿ ಮಾದರಿ ಪದವಿ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗಿದೆ. ನವೀನ ಉಪಕ್ರಮಗಳ ಅಡಿಯಲ್ಲಿ ಹಾಸನದ ಸರ್ಕಾರಿ ಕಲಾ ಕಾಲೇಜು, ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು ಮತ್ತು ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳನ್ನುಕೂಡ ಈ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ವೆಬ್‌ಸೈಟಿನಲ್ಲಿ ಇಲಾಖೆಯು ವಿವರಿಸಿದೆ.
ʻರೂಸಾ 1.0ʼ ಅಡಿಯಲ್ಲಿ ಮಂಗಳೂರು ವಿವಿಗೆ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಿಸಲು ಏಳು ಕೋಟಿ ರು. ಒದಗಿಸಲಾಗಿತ್ತು. ಕಳೆದ ಏಪ್ರಿಲ್‌ನಲ್ಲಿ ರಾಜ್ಯ ಉನ್ನತ ಶಿಕ್ಷಣ ಸಮಿತಿಯ ತಜ್ಞರ ತಂಡ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿತ್ತು.
ಬಾರ್ ಅಸೋಸಿಯೇಷನ್ ಕಟ್ಟಡಗಳಿಗೆ ಕೇಂದ್ರದ ಹಣವಿಲ್ಲ; ಕೇಂದ್ರ ಪುರಸ್ಕೃತ ಯೋಜನೆಗಳಿಗೆ 872.71 ಕೋಟಿ ಕೊಟ್ಟಿಲ್ಲ
ಇದು ಕೇಂದ್ರ ಸರ್ಕಾರ ಹಣ ನೀಡಿದ್ದರೂ ಬಳಸದ ಪ್ರಕರಣವಾಗಿದ್ದರೆ, ಕೇಂದ್ರ ಸರ್ಕಾರ ಕೇಂದ್ರ ಪುರಸ್ಕೃತ ಯೋಜನೆಯಡಿ ನ್ಯಾಯಾಲಯಗಳ ಕಟ್ಟಡಗಳ ನಿರ್ಮಾಣಕ್ಕೆ ಬಿಡುಗಡೆ ಮಾಡಬೇಕಾಗಿದ್ದ 872.71 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಕುರಿತು ʻದಿ ಫೈಲ್ʼ ವಿವರವಾದ ವರದಿ ಪ್ರಕಟಿಸಿತ್ತು.
ಎಸ್‌ಸಿ, ಎಸ್‌ಟಿ ಉಪಯೋಜನೆಯಲ್ಲಿ ಕನಿಷ್ಠ ಪ್ರಗತಿ; ಶಿಕ್ಷಣ ಇಲಾಖೆಯಲ್ಲಿ ಕ್ರಿಯಾ ಯೋಜನೆಯೇ ಇಲ್ಲ
ಅಲ್ಲದೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಸಾ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿರಲಿಲ್ಲ. ಈ ಕುರಿತೂ ‘ದಿ ಫೈಲ್’, ದಾಖಲೆ ಸಹಿತ ವರದಿ ಪ್ರಕಟಿಸಿತ್ತು.