ಬೆಂಗಳೂರು; ಲಾಕ್‌ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ರಾಜ್ಯದ ಮತ್ತು ಹೊರರಾಜ್ಯದ ವಲಸಿಗ ಕಾರ್ಮಿಕರ ಹಕ್ಕುಗಳನ್ನು ಗೌರವಿಸಬೇಕಿದ್ದ ರಾಜ್ಯ ಸರ್ಕಾರ ಇದೀಗ ಆ ಹಕ್ಕುಗಳನ್ನೇ ಕಸಿದುಕೊಂಡಿದೆ. ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗದಂತೆ ಮತ್ತು ಅವರಿಗೆ ರಕ್ಷಣೆ ಒದಗಿಸಲು ಧಾವಿಸಬೇಕಿದ್ದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರ ಸುಳಿವೇ ಇಲ್ಲದಂತಾಗಿದೆ.
ಕಳೆದ 5 ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 1 ಲಕ್ಷ ಕಾರ್ಮಿಕರನ್ನು, 3,400ಕ್ಕೂ ಹೆಚ್ಚು ಬಸ್‌ಗಳ ಮೂಲಕ ಬೆಂಗಳೂರಿನಿಂದ ಸ್ಥಳಾಂತರಿಸಿರುವ ಸರ್ಕಾರ, ಇದೀಗ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣದ ಬಹುದೊಡ್ಡ ಕಂಪನಿಗಳ ಒತ್ತಡಕ್ಕೆ ಮಣಿದು ಹೊರರಾಜ್ಯಗಳಿಗೆ ಸಂಚರಿಸಬೇಕಿದ್ದ ವಿಶೇಷ ರೈಲುಗಳನ್ನು ರದ್ದುಗೊಳಿಸಿದೆ. ಇದು ಮುಂದಿನ ದಿನಗಳಲ್ಲಿ ಕಾರ್ಮಿಕರ ವಲಯದಲ್ಲಿ ಬಹುದೊಡ್ಡ ಅಶಾಂತಿ ಸೃಷ್ಟಿಸಲು ಕಾರಣವಾಗುವ ಲಕ್ಷಣಗಳು ಗೋಚರಿಸಿವೆ.
ಆರಂಭದಲ್ಲಿ ಹೊರರಾಜ್ಯದ ಕಾರ್ಮಿಕರನ್ನು ಸ್ಥಳಾಂತರಿಸಲು ಮುಂದಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ಇದ್ದಕ್ಕಿದ್ದಂತೆ ಬಿಲ್ಡರ್‌ಗಳ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿದೆಯಲ್ಲದೆ, ಕಾರ್ಮಿಕರಿಲ್ಲದೆ ಕಟ್ಟಡ ನಿರ್ಮಾಣ ಚಟುವಟಿಕೆಗಳು ಕುಂಠಿತಗೊಳ್ಳಬಹುದು ಎಂಬ ಕಾರಣವೊಡ್ಡಿ ಕಾರ್ಮಿಕರನ್ನು ತಡೆದು ನಿಲ್ಲಿಸಿದೆ.
ಬೆಂಗಳೂರಿನಲ್ಲಿಯೇ ಉಳಿಯಿರಿ, ನಿಮಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದೆಯಲ್ಲದೆ, ಹೊರ ರಾಜ್ಯದ ವಲಸಿಗ ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳಿಗೆ ತೆರಳಲು ದೌಡಾಯಿಸಿತ್ತಿರುವ ಮಧ್ಯೆಯೇ ರೈಲು ಸಂಚಾರವನ್ನೇ ರದ್ದುಗೊಳಿಸಿ ಅಮಾನವೀಯವಾಗಿ ನಡೆದುಕೊಂಡಿದೆ. ಇದು ಕಾರ್ಮಿಕರನ್ನು ಬಿಲ್ಡರ್‌ಗಳ ಬಳಿ ಸರ್ಕಾರವೇ ಒತ್ತೆಯಾಳಾಗಿರಿಸುತ್ತಿದೆ ಎಂಬ ಅಭಿಪ್ರಾಯ ಮೂಡಲು ಕಾರಣವಾಗಿದೆ.
ಸಂವಿಧಾನದ ವಿಧಿ 14 ಮತ್ತು 21ರಡಿಯಲ್ಲಿ ದೇಶದಲ್ಲಿ ಘನತೆಯಿಂದ ಬದುಕುವ ಹಕ್ಕನ್ನು ನಾಗರಿಕರಿಗೆ ನೀಡಲಾಗಿದೆ. ಅಲ್ಲದೆ, ಬಲವಂತದ ದುಡಿಮೆ ನಿರ್ಬಂಧ ಕಾಯ್ದೆ 1976 ಈಗಲೂ ಜಾರಿಯಲ್ಲಿದೆ. ಹೀಗಿರುವಾಗ ರಾಜ್ಯ ಸರ್ಕಾರ ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳಿಗೆ ತೆರಳಲು ಉತ್ಸುಕರಾಗಿದ್ದರೂ ಬಿಲ್ಡರ್‌ಗಳ ಒತ್ತೆಯಲ್ಲಿ ಸಿಲುಕಿದಂತಿರುವ ರಾಜ್ಯ ಸರ್ಕಾರ, ಕಾರ್ಮಿಕರನ್ನೂ ಜೀತದಲ್ಲಿರಿಸಲು ಹೊರಟಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಲಾಕ್‌ಡೌನ್ ಘೋಷಣೆ ಆದ ದಿನದಿಂದಲೂ ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ಇನ್ನಿತರೆ ಅಸಂಘಟಿತ ವಲಯದ ರಾಜ್ಯದೊಳಗಿನ ಮತ್ತು ಹೊರರಾಜ್ಯದ ವಲಸಿಗ ಕಾರ್ಮಿಕರು ಒಪ್ಪೊತ್ತಿನ ಗಂಜಿಗಾಗಿ ಪರದಾಡುತ್ತಿದ್ದರೂ ಸರ್ಕಾರ ತಲೆಹಾಕಿಯೂ ಮಲಗಿರಲಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ಕಾರ್ಮಿಕರ ಖಾತೆಗಳಿಗೆ ಹಣ ತುಂಬುವ ಕಾರ್ಯದಲ್ಲಿಯೂ ಹಿನ್ನೆಡೆ ಸಾಧಿಸಿರುವ ಕಾರ್ಮಿಕ ಇಲಾಖೆ, ಕಾರ್ಮಿಕರಿಗೆ ಪಡಿತರ ಕಿಟ್ ಮತ್ತು ಆಹಾರದ ಪೊಟ್ಟಣ ವಿತರಣೆಯಲ್ಲಿಯೂ ಹಿಂದೆ ಬಿದ್ದಿದೆ.
ಒಂದೆಡೆ ಕೊರೊನಾ ಸೋಂಕಿನ ಭೀತಿ, ಇನ್ನೊಂದೆಡೆ ಒಪ್ಪೊತ್ತಿನ ಗಂಜಿ ಇಲ್ಲದ ಸ್ಥಿತಿಯಲ್ಲಿ ಕಾರ್ಮಿಕರು ಅಕ್ಷರಶಃ ನರಳಾಡುತ್ತಿದ್ದರೂ ರಾಜ್ಯ ಸರ್ಕಾರ ನೆರವು ನೀಡುವುದಿರಲಿ, ಸ್ಪಂದಿಸಲು ಮುಂದಾಗಿರಲಿಲ್ಲ. ಸ್ವಂತ ಸ್ಥಳಗಳಿಗೆ ತೆರಳಲು ಹೊತೊರೆಯುತ್ತಿದ್ದ ಕಾರ್ಮಿಕರನ್ನು ಸ್ಥಳಾಂತರಿಸಿದ್ದ ಸರ್ಕಾರ ದಿಢೀರ್ ಎಂದು ರಾಗ ಬದಲಾಯಿಸಿರುವುದರ ಹಿಂದೆ ಬಿಲ್ಡರ್‌ಗಳ ಲಾಬಿ ಇದೆ ಎಂಬ ಅನುಮಾನಗಳೂ ವ್ಯಕ್ತವಾಗಿವೆ.
‘ಅಸಂಘಟಿತ ಕಾರ್ಮಿಕರ ಅಸಹಾಯಕತೆಯನ್ನು ರಾಜ್ಯ ಬಿಜೆಪಿ ಸರ್ಕಾರದುರುಪಯೋಗಪಡಿಸಿಕೊಂಡಿದೆ. ಬಿಲ್ಡರ್‌ಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.,’ ಎಂದು ಹಲವು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ. ಕಳೆದ ಭಾನುವಾರದಿಂದ ಮಂಗಳವಾರದವರೆಗೆ 1,200 ಕಾರ್ಮಿಕರನ್ನು ರೈಲುಗಳ ಮೂಲಕ ಬಿಹಾರ್, ಜಾರ್ಖಂಡ್ ಮತ್ತು ಒಡಿಶಾಕ್ಕೆ ಕಳಿಸಲಾಗಿದೆ. ಇನ್ನುಳಿದ ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳಿಗೆ ತೆರಳಬೇಕೆನ್ನುವಷ್ಟರಲ್ಲಿ ರೈಲುಗಳನ್ನೇ ರದ್ದುಗೊಳಿಸುವ ಮೂಲಕ ಕಾರ್ಮಿಕ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಾರ್ಮಿಕರ ಸ್ವಂತ ಸ್ಥಳಗಳಿಗೆ ಕಳಿಸಲು ವ್ಯವಸ್ಥೆಗೊಳಿಸಿದ್ದ 10 ರೈಲುಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿರುವುದು ಕಾರ್ಮಿಕರ ಆಕ್ರೋಶಕ್ಕೆ ತುತ್ತಾಗಿದೆ.
ಕಾರ್ಮಿಕರ ಖಾತೆಗಳಿಗೆ ಹಣ ತುಂಬಲು ನಾನಾ ನೆಪಗಳನ್ನೊಡ್ಡುತ್ತಿದ್ದ ಕಾರ್ಮಿಕ ಇಲಾಖೆ, ಕಣ್ಣೊರೆಸಲು ಮುಂದಾಗಿದೆಯಲ್ಲದೆ ಲಾಕ್ ಡೌನ್ ಸಂಪೂರ್ಣವಾಗಿ ತೆರವುಗೊಂಡ ಬಳಿಕ ಅವರು ತೆರಳಬಹುದು. ಸದ್ಯಕ್ಕೆ ಅವರು ಇಲ್ಲಿಯೇ ಇರಲಿ, ನಾವು ಅವರನ್ನು ಕಾಳಜಿ ವಹಿಸುತ್ತೇವೆ ಎಂದು ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಟ್ವೀಟ್ ಮಾಡಿದ್ದಾರೆ.
ಲಾಕ್‌ಡೌನ್ ಜಾರಿಯಾದ ದಿನದಿಂದ ಕಟ್ಟಡ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡಿತ್ತಲ್ಲದೆ, ಬಹುತೇಕ ಬಿಲ್ಡರ್‌ಗಳು ಕಾರ್ಮಿಕರಿಗೆ ವೇತನವನ್ನೇ ನೀಡಿಲ್ಲ ಎಂಬ ಆರೋಪಗಳೂ ಇವೆ. ಕೆಲವು ಬಿಲ್ಡರ್‌ಗಳು ಕಾರ್ಮಿಕರಿಗೆ ವೇತನವನ್ನು ಕಡಿತಗೊಳಿಸಿ ಅರ್ಧ ವೇತನವನ್ನು ನೀಡಿದ್ದಾರೆ. ಇದರ ಬಗ್ಗೆ ಸೊಲ್ಲೆತ್ತದ ರಾಜ್ಯ ಸರ್ಕಾರ, ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್‌ಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂಬ ಅಭಿಪ್ರಾಯ ಕಾರ್ಮಿಕ ಸಂಘಟನೆಗಳ ವಲಯದಲ್ಲಿ ವ್ಯಕ್ತವಾಗಿವೆ.