ಕುತಂತ್ರ; ಬಿ ಆರ್‌ ಶೆಟ್ಟಿ ಕಂಪನಿ ಪಾಲಾಗಿವೆ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್‌ ಯಂತ್ರ

ಬೆಂಗಳೂರು; ತೀವ್ರತರದ ಆರ್ಥಿಕ ನಷ್ಟ ಅನುಭವಿಸುತ್ತಿರುವ ಬಿಲಿಯನೇರ್ ಬಿ ಆರ್‌ ಶೆಟ್ಟಿ ಅವರು ನಿರ್ದೇಶಕರಾಗಿರುವ ಬಿ ಆರ್‌ ಎಸ್‌ ಹೆಲ್ತ್‌ ಅಂಡ್‌ ರಿಸರ್ಚ್ ಪ್ರೈ ಲಿ., ಗೆ ಉತ್ತರ ಮತ್ತು ಹೈದರಾಬಾದ್‌ ಕರ್ನಾಟಕದ ಹಿಂದುಳಿದ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಪಯೋಗಿಸದೇ ಸುಸ್ಥಿತಿಯಲ್ಲಿದ್ದ ಮತ್ತು ಬಳಕೆಗೆ ಯೋಗ್ಯವಾಗಿದ್ದ ಡಯಾಲಿಸಿಸ್‌ ಉಪಕರಣಗಳನ್ನು ಅತ್ಯಂತ ಕಡಿಮೆ ದರಕ್ಕೆ ನೀಡಿರುವ ಪ್ರಕರಣ ಇದೀಗ ಬಹಿರಂಗವಾಗಿದೆ.


ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ಖರೀದಿಸಿ ವಿವಾದಕ್ಕೀಡಾಗಿರುವ ಬೆನ್ನಲ್ಲೇ ಡಯಾಲಿಸಿಸ್‌ ಉಪಕರಣವನ್ನು 2019ರಲ್ಲಿ ಕನಿಷ್ಠ ದರದಲ್ಲಿ ವಿಲೇವಾರಿ ಮಾಡಿರುವ ಪ್ರಕರಣ ಮುನ್ನೆಲೆಗೆ ಬಂದಿದೆ. ಸಾರ್ವಜನಿಕರಿಗೆ ಬಳಕೆ ಆಗಬೇಕಿದ್ದ ಡಯಾಲಿಸಿಸ್‌ ಉಪಕರಣಗಳು, ಖಾಸಗಿ ಕಂಪನಿಗೆ ಮಾರಾಟ ಆಗಿರುವುದರ ಹಿಂದೆ ಇಲಾಖೆಯ ಉನ್ನತ ಅಧಿಕಾರಿಗಳ ಬಹುಮುಖ್ಯ ಪಾತ್ರವಿದೆ.


ಬಿ ಆರ್‌ ಎಸ್‌ ಹೆಲ್ತ್‌ ಅಂಡ್‌ ರಿಸರ್ಚ್ ಪ್ರೈ ಲಿ., ಗೆ ವಿಲೇವಾರಿ ಆಗಿರುವ ಡಯಾಲಿಸಿಸ್‌ ಉಪಕರಣಗಳು ಚಿಕ್ಕೋಡಿ, ರಾಮದುರ್ಗ, ಸಿರಗುಪ್ಪ, ಹುಮನಾಬಾದ್‌, ಬಾಗೇವಾಡಿ, ಚಿತ್ರದುರ್ಗ, ಜಗಳೂರು, ಕಲಬುರಗಿ, ಹಾವೇರಿ, ಶಿಗ್ಗಾಂವ್‌, ಕೊಪ್ಪಳ, ಲಿಂಗಸುಗೂರು, ಕುಂದಾಪುರ, ಕಾರವಾರ, ದಾಂಡೇಲಿ, ಯಾದಗಿರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿದ್ದವು ಎಂಬುದು ವಿಲೇವಾರಿ ಆದೇಶದಿಂದ ತಿಳಿದು ಬಂದಿದೆ.

ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಉಪಕರಣಗಳನ್ನು ಅಲ್ಲಿನ ವೈದ್ಯಾಧಿಕಾರಿಗಳು ಬಳಕೆ ಮಾಡುವ ಗೋಜಿಗೆ ಹೋಗಿಲ್ಲ. ಕ್ಷುಲ್ಲಕ ಕಾರಣಗಳನ್ನು ಮುಂದೊಡ್ಡಿ ಬಿ ಆರ್‌ ಎಸ್‌ ಹೆಲ್ತ್‌ ಅಂಡ್‌ ರಿಸರ್ಚ್‌ ಕಂಪನಿಗೆ ಮಾರಾಟ ಮಾಡಿದೆ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.


ರಾಜ್ಯ ಸರ್ಕಾರ 2013-14, 2014-15, 2015-16ರಲ್ಲಿ ಖರೀದಿಸಿದ್ದ ಒಟ್ಟು 102 ಡಯಾಲಿಸಿಸ್‌ ಉಪಕರಣಗಳನ್ನು ಬಿ ಆರ್‌ ಎಸ್‌ ಹೆಲ್ತ್‌ ಅಂಡ್‌ ರಿಸರ್ಚ್ ಪ್ರೈ ಲಿ.ಗೆ ವಿಲೇವಾರಿ ಮಾಡಿದೆ. ಈ ಉಪಕರಣಗಳನ್ನು 2022-23ರವರೆಗೂ ಬಳಸಬಹುದಿತ್ತು. ಅಲ್ಲದೆ, ಈ ಉಪಕರಣಗಳ ಖರೀದಿ ವರ್ಷದಿಂದ ಕನಿಷ್ಠ 7 ವರ್ಷಗಳ ತನಕ ಬಳಕೆ ಮಾಡಬಹುದಾಗಿದ್ದರೂ ಖಾಸಗಿ ಕಂಪನಿ ಪಾಲಾಗಿಸಿದೆ. ವಿಪರ್ಯಾಸವೆಂದರೆ 2015-16ರಲ್ಲಿ ಖರೀದಿಸಿದ್ದವು ಎನ್ನಲಾಗಿದ್ದ ಉಪಕರಣಗಳನ್ನೂ ಬಿ ಆರ್‌ ಎಸ್‌ ಹೆಲ್ತ್‌ ರಿಸರ್ಚ್ ಕಂಪನಿಗೆ ಮಾರಾಟ ಮಾಡಲಾಗಿದೆ.


ಅಲ್ಲದೆ ಈ ಉಪಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಪಯೋಗಿಸಿಯೇ ಇರಲಿಲ್ಲ. ‘ಸಲಕರಣೆಗಳನ್ನು ಕಳಚಿದ ನಂತರ ಕೆಲವು ಆಸ್ಪತ್ರೆಗಳಲ್ಲಿ ಉತ್ತಮ ಸ್ಥಿತಿಯಲ್ಲಿ ಸಂರಕ್ಷಿಸಿ ಇಟ್ಟಿರಲಿಲ್ಲ. ಕಳಚಿ ಇಟ್ಟಿರುವ ಸಲಕರಣೆಗಳಲ್ಲಿ ಇಲಿಗಳು ಒಳನುಗ್ಗಿ ನಾಶ ಮಾಡಿವೆಯಲ್ಲದೆ ಇವುಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಆದರೂ ಕಳಚಿಡಲಾಗಿತ್ತು. ಕೆಲವು ಸಂಸ್ಥೆಗಳಲ್ಲಿನ ಸಲಕರಣೆಗಳನ್ನು ಉತ್ತಮ ರೀತಿಯಲ್ಲಿರಿಸಿದ್ದರೂ ಉಪಯೋಗಿಸಿರಲಿಲ್ಲ. ಹೀಗಾಗಿ ಟ್ಯೂಬ್‌ಗಳೆಲ್ಲಾ ಬ್ಲಾಕ್‌ ಆಗಿದ್ದವು,’ ಎಂಬ ಮಾಹಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಲಕರಣಾಧಿಕಾರಿಗಳ ಟಿಪ್ಪಣಿಯಿಂದ ತಿಳಿದು ಬಂದಿದೆ.

ಡಯಾಲಿಸಿಸ್‌ ಉಪಕರಣವೊಂದಕ್ಕೆ 7-8 ಲಕ್ಷ ರು. ಮೌಲ್ಯವಿದ್ದರೂ ಬಿ ಆರ್‌ ಎಸ್‌ ಹೆಲ್ತ್‌ ಅಂಡ್‌ ರಿಸರ್ಚ್‌ ಪ್ರೈವೈಟ್‌ ಲಿ.ಗೆ 85,000 ರು.ನಿಂದ ಗರಿಷ್ಠ 1 ಲಕ್ಷ ರು.ದರದಲ್ಲಿ ಒಟ್ಟು 30ಕ್ಕೂ ಅಧಿಕ ಸಂಖ್ಯೆಯ ಉಪಕರಣಗಳನ್ನು ಅನುಗ್ರಹಿಸಿದೆ. ಅಂದಾಜು 2 ಕೋಟಿ ರು. ಮೊತ್ತದಲ್ಲಿ ಖರೀದಿಸಿದ್ದ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಬಿ ಆರ್‌ ಎಸ್‌ ಹೆಲ್ತ್ ಅಂಡ್‌ ರಿಸರ್ಚ್‌ ಪ್ರೈ ಲಿ., ಗೆ ಕೇವಲ 24,14,298 ರು. ದರ ನಿಗದಿಗೊಳಿಸಿ ವಿಲೇವಾರಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಮತ್ತೊಂದು ವಿಶೇಷ ಸಂಗತಿ ಎಂದರೆ ಬಿ ಆರ್‌ ಎಸ್‌ ಹೆಲ್ತ್‌ ಅಂಡ್‌ ರಿಸರ್ಚ್‌ ಪ್ರೈ ಲಿ., ನಮೂದಿಸಿದ್ದ ದರವನ್ನೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2019ರ ಮಾರ್ಚ್‌ 3ರಂದು ಅನುಮೋದಿಸಿ ವಿಲೇವಾರಿ ಆದೇಶವನ್ನೂ ಹೊರಡಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ಈ ವ್ಯವಹಾರದಲ್ಲಿ ಆಸಕ್ತಿ ವಹಿಸಿದ್ದ ಇಲಾಖೆಯ ಉನ್ನತ ಅಧಿಕಾರಿಗಳ ನಡವಳಿಕೆ ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.


ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಮೂಲಕ ಡಯಾಲಿಸಿಸ್‌ ಉಪಕರಣಗಳನ್ನು ಸರಬರಾಜು ಮಾಡಿದ್ದ ಖಾಸಗಿ ಕಂಪನಿ, 3ರಿಂದ 4 ವರ್ಷದ ಖಾತ್ರಿಯನ್ನು ನೀಡಿತ್ತು. ಅಲ್ಲದೆ ಈ ಉಪಕರಣವನ್ನು ಕನಿಷ್ಠ 7 ವರ್ಷಗಳವರೆಗೆ ಬಳಕೆ ಮಾಡಬಹುದು. ಆದರೆ ಈ ಉಪಕರಣಗಳನ್ನು 7 ವರ್ಷದವರೆಗೆ ಬಳಕೆ ಮಾಡದೆಯೇ ಸುಸ್ಥಿತಿಯಲ್ಲಿರುವಾಗಲೇ ಖಾಸಗಿ ಕಂಪನಿಗೆ ಕನಿಷ್ಠ ಬೆಲೆಗೆ ಮಾರಾಟವಾಗಿದೆ.


ಡಯಾಲಿಸಿಸ್‌ ಉಪಕರಣಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿಯೂ ಹಲವು ಲೋಪಗಳು ನಡೆದಿದೆ ಎಂದು ತಿಳಿದು ಬಂದಿದೆ. ಬಹಿರಂಗವಾಗಿ ಹರಾಜು ಮಾಡುವ ಮುನ್ನ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಇದಕ್ಕೆ ತಾಂತ್ರಿಕ ಸಮಿತಿಯ ಅನುಮೋದನೆ ಇರಬೇಕು. ಆದರಿಲ್ಲಿ ಬಹಿರಂಗ ಹರಾಜು ನಡೆಸುವ ಮುನ್ನ ಸಾರ್ವಜನಿಕ ಪ್ರಕಟಣೆ ಹೊರಡಿಸದೆಯೇ ವಿಲೇವಾರಿ ಮಾಡಲಾಗಿದೆ ಎಂದು ಗೊತ್ತಾಗಿದೆ. ಸುಸ್ಥಿತಿ ಮತ್ತು ಬಳಕೆಗೆ ಯೋಗ್ಯವಾಗಿದ್ದ ಉಪಕರಣಗಳನ್ನು ವಿಲೇವಾರಿ ಮಾಡಲು ತಾಂತ್ರಿಕ ಸಮಿತಿ ಒಂದು ವೇಳೆ ಅನುಮೋದನೆ ನೀಡಿದ್ದರೆ ಈ ಸಮಿತಿ ಬಗ್ಗೆಯೂ ಸಹಜವಾಗಿ ಅನುಮಾನ ಮೂಡಲಿದೆ.


ರಾಜ್ಯದ ಬಹುತೇಕ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಉಪಕರಣಗಳಿದ್ದರೂ ಸಮರ್ಥವಾಗಿ ಬಳಕೆ ಮಾಡುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ. ರಾಮನಗರದಲ್ಲಿ ಕಳೆದ 7 ವರ್ಷಗಳಿಂದಲೂ ಡಯಾಲಿಸಿಸ್‌ ಉಪಕರಣಗಳನ್ನು ಬಳಕೆ ಮಾಡಿಯೇ ಇಲ್ಲ. ತಾಂತ್ರಿಕ ಅನುಭವ ಹೊಂದಿರುವ ಮತ್ತು ತಜ್ಞ ವೈದ್ಯರು ಇಲ್ಲದಿರುವುದೇ ಬಳಕೆ ಮಾಡದಿರಲು ಕಾರಣ ಎನ್ನಲಾಗಿದೆ.


ಯುಕೆ ಮತ್ತು ಯುಎಇಯಲ್ಲಿ ಎರಡು ಉನ್ನತ ದರ್ಜೆಯ ಕಂಪನಿಗಳಾದ ಎನ್‌ಎಂಸಿ ಹೆಲ್ತ್ ಮತ್ತು ಫಿನಾಬ್ಲರ್ ಗಳನ್ನು ಹೊಂದಿದ್ದು ಬಿಲಿಯನೇರ್ ಬಿ.ಆರ್.ಶೆಟ್ಟಿ ಅವರು ಇದೀಗ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.ಕಾರ್ಪೊರೇಟ್ ಆಡಳಿತ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಶೆಟ್ಟಿ ಕ್ಯಾಲಿಫೋರ್ನಿಯಾ ಮೂಲದ ಸಂಶೋಧನಾ ಸಂಸ್ಥೆ, ಮಡ್ಡಿ ವಾಟರ್ಸ್ ತನ್ನ ವರದಿಯಲ್ಲಿ ಯುಎಇಯಲ್ಲಿ ಕನಿಷ್ಠ ಒಂದು ಡಜನ್ ಬ್ಯಾಂಕುಗಳಿಗೆ ಸಾಲ ಮರುಪಾವತಿಲ್ಲ ಎಂಬುದು ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು.


ಶೆಟ್ಟಿಯವರಿಗೆ ಸೇರಿದ ಕಂಪನಿಯು ಸುಮಾರು 1,981 ಮಿಲಿಯನ್ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎನ್‌ಎಂಸಿ ಮತ್ತು ಫಿನಾಬ್ಲರ್ ಷೇರುಗಳು ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ (ಎಲ್‌ಎಸ್‌ಇ) ನಲ್ಲಿ ವಹಿವಾಟು ನಿಲ್ಲಿಸಿರುವುದನ್ನು ಸ್ಮರಿಸಬಹುದು.


ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಶೆಟ್ಟಿ ಅವರು ಎರಡೂವರೆ ದಶಕಗಳ ಹಿಂದೆ ಅಬುಧಾಬಿಯಲ್ಲಿ ತಮ್ಮದೇ ಆದ ಎನ್‌ಎಂಸಿಯನ್ನು ಸ್ಥಾಪಿಸಿದ್ದರು. ಯುಎಇಯ ಅತಿದೊಡ್ಡ ಖಾಸಗಿ ಆರೋಗ್ಯ ಪೂರೈಕೆದಾರರ ಅಧ್ಯಕ್ಷರಾಗಲು ಹೊರಟಿದ್ದ ಶೆಟ್ಟಿ ಅವರು 2018 ರಲ್ಲಿ 2 4.2 ಬಿಲಿಯನ್ ಸಂಪತ್ತು ಹೊಂದಿದ್ದರೆಂದು ಫೋರ್ಬ್ಸ್ ವರದಿ ಮಾಡಿತ್ತು.

the fil favicon

SUPPORT THE FILE

Latest News

Related Posts