ದುಬಾರಿ ದರದಲ್ಲಿ ಸ್ಮಾರ್ಟ್ ಡೋರ್‍‌ ಲಾಕ್, ಸೇಫ್‌ ಲಾಕರ್ಸ್‌, ಎನರ್ಜಿ ಸಲ್ಯೂಷನ್ಸ್‌ ಉಪಕರಣ ಖರೀದಿ; ಬೊಕ್ಕಸಕ್ಕೆ ನಷ್ಟ!

ಬೆಂಗಳೂರು; ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಮುಕ್ತ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರ ತೆತ್ತು ಸ್ಮಾರ್ಟ್ ಸೇಫ್‌ ಲಾಕರ್ಸ್‌, ಸ್ಮಾರ್ಟ್‌ ಡೋರ್‍‌ ಲಾಕ್‌ ಮತ್ತು ಸ್ಮಾರ್ಟ್‌ ಎನರ್ಜಿ ಮಾನಟಿರಿಂಗ್‌ ಸೊಲ್ಯೂಷನ್ಸ್‌ ಉಪಕರಣಗಳನ್ನು ಖರೀದಿಸಿರುವುದನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ಮುಕ್ತ ಮಾರುಕಟ್ಟೆ ಮತ್ತು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಂಪನಿಗಳು ಈ ಉಪಕರಣಗಳಿಗೆ ನಮೂದಿಸಿರುವ ದರಪಟ್ಟಿಗೆ ಹೋಲಿಸಿದರೇ ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಅಳವಡಿಸಿರುವ ಉಪಕರಣಗಳ ದರಗಳು ಅತ್ಯಂತ ದುಬಾರಿಯಾಗಿವೆ. ಇದರಿಂದ ವಿಧಾನಸಭೆ ಸಚಿವಾಲಯದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ!

 

ಈ ಉಪಕರಣಗಳ ಅಳವಡಿಸುವ ಉದ್ದೇಶಕ್ಕಾಗಿ ಅನುದಾನವನ್ನು ನಿಗದಿಪಡಿಸಿಕೊಂಡಿಲ್ಲ. ಮತ್ತು ಪ್ರಸ್ತುತ ಇರುವ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಸಾಧ್ಯವಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನೂ ವಿಧಾನಸಭೆ ಸಚಿವಾಲಯವು ಬದಿಗೊತ್ತಿರುವುದು ಗೊತ್ತಾಗಿದೆ.

 

ಶಾಸಕರ ಭವನದ ಕೊಠಡಿಗಳಿಗೆ ಸ್ಮಾರ್ಟ್ ಡೋರ್‍‌ ಲಾಕ್‌, ಸ್ಮಾರ್ಟ್ ಸೇರ್ಫ್ ಲಾಕರ್ಸ್‌, ಸ್ಮಾರ್ಟ್ ಎನರ್ಜಿ ಮಾನಟಿರಿಂಗ್‌ ಸೊಲ್ಯೂಷನ್ಸ್‌ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ‘ದಿ ಫೈಲ್‌’, ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಮಂಗಳೂರು ಮೂಲದ ಆಸ್ಕಿನ್‌ ಆಟೋಮೇಷನ್‌ ಪ್ರೈವೈಟ್‌ ಲಿಮಿಟೆಡ್‌ ನಿಂದ ನೇರವಾಗಿ ಈ ಉಪಕರಣಗಳನ್ನು ವಿಧಾನಸಭೆ ಸಚಿವಾಲಯವು ಖರೀದಿಸಿದೆ. ಇದಕ್ಕಾಗಿ ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿಯನ್ನೂ ಪಡೆದುಕೊಂಡಿದೆ. ಆದರೆ ಈ ಉಪಕರಣಗಳ ದರದ ಬಗ್ಗೆ ವಿಧಾನಸಭೆ ಸಚಿವಾಲಯದ ಅಧಿಕಾರಿಗಳೂ ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಈ ಉಪಕರಣಗಳಿಗೆ ತಗಲುವ ವೆಚ್ಚ ವಿವರಗಳನ್ನು ವಿಧಾನಸಭೆ ಸಚಿವಾಲಯವು ಆರ್ಥಿಕ ಇಲಾಖೆಗೆ ಒದಗಿಸಿತ್ತು. ಈ ದರಪಟ್ಟಿಯನ್ನು ಮುಕ್ತ ಮತ್ತು ಆನ್‌ಲೈನ್‌ ಮಾರುಕಟ್ಟೆಯಲ್ಲಿನ ದರಗಳಿಗೆ ‘ದಿ ಫೈಲ್’ ಹೋಲಿಸಿ ನೋಡಿದೆ.

 

ಇದರ ಪ್ರಕಾರ ಪ್ರತಿಷ್ಠಿತ ಕಂಪನಿಗಳು ನಮೂದಿಸಿರುವ ದರಕ್ಕೂ ಮತ್ತು ವಿಧಾನಸಭೆ ಸಚಿವಾಲಯವು ನಮೂದಿಸಿರುವ ದರಕ್ಕೂ ಅಜಗಜಾಂತರವಿರುವುದು ಕಂಡು ಬಂದಿದೆ.

 

ವಿಧಾನಸಭೆ ಸಚಿವಾಲಯದ ದರ ಪಟ್ಟಿ

 

224 ಶಾಸಕರ ಕೊಠಡಿಗಳಿಗೆ ಸ್ಮಾರ್ಟ್‌ ಡೋರ್‍‌ ಲಾಕ್‌ ಗಳನ್ನು ಖರೀದಿಸಿರುವ ವಿಧಾನಸಭೆ ಸಚಿವಾಲಯವು ಉಪಕರಣವೊಂದಕ್ಕೆ 49,000 ರು ವೆಚ್ಚ ಮಾಡಿದೆ. ಇದರ ಪ್ರಕಾರ 224 ಕೊಠಡಿಗಳಿಗೆ ಸ್ಮಾರ್ಟ್‌ ಡೋರ್‍‌ ಲಾಕ್‌ಗಳಿಗೆ 1,09,76,000 ರು ವೆಚ್ಚವಾಗಲಿದೆ. ಅದೇ ರೀತಿ ಸ್ಮಾರ್ಟ್‌ ಸೇಫ್‌ ಲಾಕರ್ಸ್‌ ತಲಾ 35,000 ರು ನಂತೆ ಒಟ್ಟು 78,40,000 ರು ವೆಚ್ಚವಾಗಲಿದೆ. 123 ಸ್ಮಾರ್ಟ್‌ ಎನರ್ಜಿ ಮಾನಿಟಿರಿಂಗ್‌ ಸೊಲ್ಯೂಷನ್ಸ್‌ ಗಳಿಗೆ ತಲಾ 90,500 ರು.ನಂತೆ ಒಟ್ಟು 1,11,31,500 ರು ನಂತೆ ಒಟ್ಟಾರೆ ಈ ಎಲ್ಲಾ ಉಪಕರಣಗಳಿಗೆ 2,99,47,500 ರು ವೆಚ್ಚವಾಗಲಿದೆ ಎಂದು ವಿಧಾನಸಭೆ ಸಚಿವಾಲಯವು ಆರ್ಥಿಕ ಇಲಾಖೆ ಮುಂದಿಟ್ಟಿತ್ತು.

 

 

ಈ ಉಪಕರಣಗಳ ದರವನ್ನು ಮುಕ್ತ ಮಾರುಕಟ್ಟೆ ಮತ್ತು ಆನ್‌ ಲೈನ್‌ ಮಾರುಕಟ್ಟೆಯಲ್ಲಿನ ದರಗಳೊಂದಿಗೆ ‘ದಿ ಫೈಲ್‌’, ಪರಿಶೀಲನೆಗೆ ಒಳಪಡಿಸಿತು.

 

ಪ್ರತಿಷ್ಠಿತ ಕಂಪನಿಯಾಗಿರುವ ಗೋದ್ರೇಜ್‌ ಕಂಪನಿಯು ಸ್ಮಾರ್ಟ್‌  ಲಾಕ್‌ಗಳಿಗೆ 14,620 ರು., 16,499 ರು, ಕ್ಯೂಬೋ ಸ್ಮಾರ್ಟ್‌ ಲಾಕ್‌ 9,990, 13,990,

 

 

 

ಓಜೋನ್‌ ಸ್ಮಾರ್ಟ್‌ ಲಾಕ್‌ ಗೆ 7,999 ರು ದರ ನಿಗದಿಪಡಿಸಿದೆ.

 

 

ಅದೇ ರೀತಿ ಸ್ಪೀಡಿ ಡಿಎಆರ್‍‌ಎಲ್‌ ಕಂಪನಿಯು 4,257,

 

 

 

ಸ್ಟೀಲ್‌ ಅರ್ಬನ್‌ ಕಂಪಿನಿಯು 7,4999,. ಲಾವನಾ ಸ್ಮಾರ್ಟ್‌ ಡೋರ್‍‌ ಲಾಕ್‌ಗೆ 3,790 ದರವಿದೆ.

 

ಸೇಫ್‌ ಲಾಕರ್ಸ್‌ಗೆ ಗೋದ್ರೇಜ್‌ ಕಂಪನಿಯು ಮುಕ್ತ ಮಾರುಕಟ್ಟೆಯಲ್ಲಿ ನಮೂದಿಸಿರುವ ದರದ ಪ್ರಕಾರ 12,254, 22,419, 4,274, 7,905, 12,350, 61,464, 17,527 9, 3212, 6,399 ರು ಇದೆ.

 

 

 

ಸ್ಮಾರ್ಟ್ ಎನರ್ಜಿ ಮಾನಿಟಿರಿಂಗ್‌ ಸೊಲ್ಯೂಷನ್ಸ್‌ ಉಪಕರಣವೊಂದಕ್ಕೆ 30,000 ರು ದರವಿದೆ.

 

 

ಈ ಮೇಲಿನ ಎಲ್ಲಾ ಉಪಕರಣಗಳ ದರಗಳು ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರವಿದ್ದರೂ ಸಹ ವಿಧಾನಸಭೆ ಸಚಿವಾಲಯವು ದುಪ್ಪಟ್ಟು ದರದಲ್ಲಿ ಖರೀದಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಅದೇ ರೀತಿ ಶಾಸಕರ ಭವನದ ಎಲ್ಲಾ ಕಟ್ಟಡಗಳಲ್ಲಿನ ಮಹಡಿಗಳಲ್ಲಿ ಶಾಸಕರ ಕೊಠಡಿಗಳಿಗೆ ಸ್ಮಾರ್ಟ್‌ ಡೋರ್ ಲಾಕ್‌ಗಳನ್ನು ಅಳವಡಿಸಿದೆಯೇ ಇಲ್ಲವೇ, ಅಳವಡಿಸಿದ್ದರೇ ಯಾವ ಕಂಪನಿ, ಬ್ರಾಂಡ್‌ನದ್ದು ಎಂದು ‘ದಿ ಫೈಲ್‌’, ಭೌತಿಕವಾಗಿ ಪರಿಶೀಲನೆ ನಡೆಸಿತು. ಶಾಸಕರ ಭವನದ 1, 2, 3, 4, 5 ಮತ್ತು 6 ಕಟ್ಟಡಗಳಲ್ಲಿನ ಎಲ್ಲಾ ಮಹಡಿಗಳನ್ನೂ ಪರಿಶೀಲಿಸಿತು.

 

ಅನೇಕ ಶಾಸಕರು ಇನ್ನೂ ತಮ್ಮ ಕೊಠಡಿಗಳಿಗೆ ಸ್ಮಾರ್ಟ್‌ ಡೋರ್‍‌ ಲಾಕ್‌ನ್ನು ಅಳವಡಿಸಿಕೊಳ್ಳದಿರುವುದು ಕಂಡು ಬಂದಿತು. ಬೆರಳಿಕೆಯಷ್ಟು ಶಾಸಕರು ತಮ್ಮ ಕೊಠಡಿಗಳಿಗೆ ಸ್ಮಾರ್ಟ್‌ ಡೋರ್‍‌ ಲಾಕ್‌ ನ್ನು ಅಳವಡಿಸಿಕೊಂಡಿದ್ದರು. ಕೊಠಡಿಗಳಿಗೆ ಅಳವಡಿಸಿಕೊಂಡಿದ್ದ ಉಪಕರಣದ ಮೇಲೆ CARD ಎಂಬ ಹೆಸರಿತ್ತು.

 

ಶಾಸಕರೊಬ್ಬರ ಕೊಠಡಿಯಲ್ಲಿನ ಬಾಗಿಲಿಗೆ ಅಳವಡಿಸಿಕೊಂಡಿದ್ದ ಸ್ಮಾರ್ಟ್‌ ಡೋರ್‍‌ ಲಾಕ್‌

 

ಈ CARD ಹೆಸರಿನ ಸ್ಮಾರ್ಟ್‌ ಡೋರ್‍‌ ಲಾಕ್‌ ಯಾವ ಕಂಪನಿಯದ್ದು, CARD ಎನ್ನುವುದು ಸ್ಥಳೀಯ ಕಂಪನಿಯೋ, ದೇಶೀಯ ಅಥವಾ ಜಾಗತಿಕ ಮಾರುಕಟ್ಟೆಯಲ್ಲಿದೆಯೇ ಎಂದು   ಆನ್‌ಲೈನ್‌ನಲ್ಲಿ ‘ದಿ ಫೈಲ್‌’, ಪರಿಶೀಲಿಸಿತು. ಆದರೆ CARD ಕುರಿತು ಯಾವುದೇ ಮಾಹಿತಿಯೂ ಲಭ್ಯವಾಗಲಿಲ್ಲ.

 

ಮತ್ತೊಂದು ವಿಶೇಷವೆಂದರೇ ಸ್ಮಾರ್ಟ್‌ ಡೋರ್‍‌ ಲಾಕ್‌ಗಳನ್ನು ಅಳವಡಿಸಲು 4 (ಜಿ) ವಿನಾಯಿತಿ ಪಡೆದುಕೊಂಡಿರುವ ಆಸ್ಕಿನ್‌ ಆಟೋಮೇಷನ್‌ ಕಂಪನಿಯು ಸ್ವತಃ ಸ್ಮಾರ್ಟ್‌ ಡೋರ್‍‌ ಲಾಕ್‌ಗಳನ್ನು ತಯಾರಿಸುತ್ತದೆ.

 

 

ಚಿತ್ರ ಕೃಪೆ; https://www.aaskin.in/digital_door_lock.html

 

ಆದರೇ ಶಾಸಕರ ಭವನಗಳ ಕೊಠಡಿಗಳ ಬಾಗಿಲುಗಳಿಗೆ ಅಳವಡಿಸಿರುವ ಸ್ಮಾರ್ಟ್‌ ಡೋರ್‍‌ ಲಾಕ್‌ಗಳು ಆಸ್ಕಿನ್‌ ಕಂಪನಿಯದ್ದಾಗಿರಲಿಲ್ಲ ಎಂಬುದು ತಪಾಸಣೆ ವೇಳೆಯಲ್ಲಿ ಕಂಡು ಬಂದಿತು. ಸ್ಮಾರ್ಟ್ ಡೋರ್‍‌ ಲಾಕ್‌ಗಳನ್ನು ಸ್ವತಃ ತಯಾರಿಸುತ್ತಿದ್ದರೂ ಸಹ ಈ ಕಂಪನಿಯು ಶಾಸಕರ ಭವನದ ಕೊಠಡಿಗಳಿಗೇಕೆ ತನ್ನಕಂಪನಿಯದ್ದೇ ಲಾಕ್‌ಗಳನ್ನು ಅಳವಡಿಸಲಿಲ್ಲ ಎಂಬುದು ನಿಗೂಢವಾಗಿದೆ.

 

 

 

 

 

ಅನುದಾನವೇ ಇರಲಿಲ್ಲ

 

224 ಶಾಸಕರ ಕೊಠಡಿಗಳಿಗೆ ಸ್ಮಾರ್ಟ್‌ ಡೋರ್‍‌ ಲಾಕ್, ಸ್ಮಾರ್ಟ್‌ ಸೇಫ್‌ ಲಾಕರ್ಸ್‌, ಸ್ಮಾರ್ಟ್ ಎನರ್ಜಿ ಮಾನಿಟಿರಿಂಗ್‌ ಸೊಲ್ಯುಷನ್ಸ್ ಉಪಕರಣಗಳನ್ನು ಅಳವಡಿಸಲು 2024-25 ಮತ್ತು 2025-26ನೇ ಸಾಲಿನ ಆಯವ್ಯಯದಲ್ಲಿ ಯಾವುದೇ ಅನುದಾನ ನಿಗದಿಪಡಿಸಿರಲಿಲ್ಲ.

 

 

2023-24ನೇ ಸಾಲಿನ ಆಯವ್ಯಯ ತಯಾರಿಕೆಯಲ್ಲಿಯೂ ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನೂಒದಗಿಸಿರಲಿಲ್ಲ.

 

 

2024-25ನೇ ಸಾಲಿನಲ್ಲಿ (ಲೆಕ್ಕ ಶೀರ್ಷಿಕೆ; 2011-02-104-01-180) ಅಡಿಯಲ್ಲಿ 10 ಲಕ್ಷ ಅನುದಾನ ಮಾತ್ರ ನಿಗದಿಪಡಿಸಿದೆ. ಈ ಉದ್ದೇಶಕ್ಕಾಗಿ ಯಾವುದೇ ಅನುದಾನ ನಿಗದಿಪಡಿಸಿಕೊಂಡಿರುವುದಿಲ್ಲ. ಈ ಪ್ರಸ್ತಾವನೆಗೆ ಸಮ್ಮತಿ ವ್ಯಕ್ತಪಡಿಸಿದ್ದಲ್ಲಿ 4.80 ಕೋಟಿ ರು ಹೆಚ್ಚುವರಿ ಅನುದಾನ ಒದಗಿಸಬೇಕಾಗುತ್ತದೆ. ಪ್ರಸ್ತುತ ಇರುವ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಹೆಚ್ಚಿನ ಅರ್ಥಿಕ ಕಾರ್ಯಭಾರ ಹೊರಲು ಅವಕಾಶವಿಲ್ಲ. ಆದ್ದರಿಂದ ಈ ಪ್ರಸ್ತಾವನೆಯನ್ನು ಮುಂದೂಡಬೇಕು ಎಂದು ವಿಧಾನಸಭೆ ಸಚಿವಾಲಯಕ್ಕೆ ತಿಳಿಸಬಹುದು ಎಂದು ಆರ್ಥಿಕ ಇಲಾಖೆಯು ಹೇಳಿತ್ತು.

 

 

ಆದರೂ ವಿಧಾನಸಭೆ ಸಚಿವಾಲಯದ ಲೆಕ್ಕ ಶೀರ್ಷಿಕೆಯಲ್ಲಿ (2011-02-101-0-05-041) ಅಡಿಯಲ್ಲಿ ಅನುದಾನ ಉಳಿತಾಯವಾಗಲಿದೆ ಎಂಬ ಕಾರಣ ನೀಡಿ ಈ ಉಪಕರಣಗಳಿಗೆ ಹಣವನ್ನು ಮರು ಹೊಂದಿಸಿಕೊಂಡಿರುವುದು ಕಡತದ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಟೆಂಡರ್‍‌ ಕರೆಯಲಿಲ್ಲವೇಕೆ?

 

ಈ ಉಪಕರಣಗಳನ್ನು ಖರೀದಿಸಲು 4(ಜಿ) ವಿನಾಯಿತಿ ಕೋರಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆಯು ಆರಂಭದಲ್ಲಿ ಒಪ್ಪಿರಲಿಲ್ಲ. ಟೆಂಡರ್‍‌ ಮೂಲಕವೇ ಖರೀದಿಸಬೇಕು ಎಂದು ಸಲಹೆ ನೀಡಿತ್ತು. ಆಡಳಿತ ಇಲಾಖೆಯಾಗಿರುವ ವಿಧಾನಸಭೆ ಸಚಿವಾಲಯವು ಇಡೀ ಪ್ರಸ್ತಾವವನ್ನು ರೀ ವರ್ಕ್ ಮಾಡಬೇಕು. ಆರ್ಥಿಕ ಇಲಾಖೆಯು ಈ ಪ್ರಸ್ತಾವವನ್ನು ಅನುಮೋದಿಸುವುದಿಲ್ಲ.

 

 

ವಾಟರ್ ಫಿಲ್ಟರ್‍‌ಗಳನ್ನು ಟೆಂಡರ್‍‌ ಮೂಲಕವೇ ಖರೀದಿಸಬೇಕು. ಉಳಿದ ಉಪಕರಣಗಳನ್ನು ಅಳವಡಿಸಲು ಅಗತ್ಯತೆ ಕುರಿತು ಮರು ಪರಿಶೀಲಿಸಬೇಕು ಎಂದು ಸ್ಪಷ್ಟವಾಗಿ ಅಭಿಪ್ರಾಯ ನೀಡಿತ್ತು.

 

 

ಆದರೆ ಇದನ್ನು ವಿಧಾನಸಭೆ ಸಚಿವಾಲಯವು ತಳ್ಳಿ ಹಾಕಿತ್ತು. ಈ ಉಪಕರಣಗಳನ್ನು ತುರ್ತಾಗಿ ಖರೀದಿಸಲೇಬೇಕು ಎಂದು ಪಟ್ಟು ಹಿಡಿದಿತ್ತು.

 

ವಿಧಾನಸಭೆ ಸಚಿವಾಲಯದ ಸಮರ್ಥನೆ ಏನು?

 

ಬೆಂಗಳೂರು ಐ ಟಿ ರಾಜಧಾನಿಯಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಹೊಂದಿದೆ. ಸರ್ವೆ ಸಾಮಾನ್ಯವಾದ ಖಾಸಗಿ ಹೋಟೆಲ್‌, ಲಾಡ್ಜ್‌ಗಳಲ್ಲಿ ಡಿಜಿಟಲ್‌ ಲಾಕ್‌, ಸ್ಮಾರ್ಟ್‌ ಲಾಕ್‌ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಾಸಕರ ಭವನದಲ್ಲಿ ಹಲವಾರು ವರ್ಷಗಳಿಂದಲೂ ಹಳೆಯ ಕಾಲದ ಬೀಗ ಮತ್ತು ಬೀಗದ ಕೈ ಬಳಕೆ ಮಾಡುವ ಪಾಟ್‌ಲಾಕ್‌ ಬಳಕೆ ಚಾಲ್ತಿಯಲ್ಲಿದೆ. ಆಧುನೀಕರಣದ ಹಿನ್ನೆಲೆಯಲ್ಲಿ ಕೊಠಡಿಗಳ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಡಿಜಿಟಲ್‌ ಲಾಕ್‌, ನಂಬರ್ ಲಾಕ್‌ ಅಳವಡಿಕೆ ಮಾಡುವ ಬಗ್ಗೆ ಶಾಸಕರು ಕೋರಿರುತ್ತಾರೆ ಎಂದು ಸಚಿವಾಲಯವು ಸಮರ್ಥಿಸಿಕೊಂಡಿರುವುದು ತಿಳಿದು ಬಂದಿದೆ.

 

 

ಶಾಸಕರ ಭವನದ ಕೊಠಡಿಗಳಲ್ಲಿ ಶಾಸಕರನ್ನು ಭೇಟಿ ಮಾಡಲು ಕಾರ್ಯಕರ್ತರು, ಸಾರ್ವಜನಿಕರು ಸೇರಿದಂತೆ ನೂರಾರು ಜನರು ಭೇಟಿ ನೀಡುತ್ತಾರೆ. ಶಾಸಕರು ತಮ್ಮ ಕೊಠಡಿಗಳಲ್ಲಿ ಬೆಲೆಬಾಳುವ ವಸ್ತುಗಳಾದ ಮೊಬೈಲ್‌, ವಾಚ್‌, ಉಂಗುರ, ನಗದು ಹಣ ಇತ್ಯಾದಿಗಳನ್ನು ಸಂರಕ್ಷಿಸಲು ಯಾವುದೇ ರೀತಿಯ ಭದ್ರತಾ ಕಪಾಟುಗಳನ್ನು ಹೊಂದಿಲ್ಲ. ಇದರಿಂದ ಅವರಿಗೆ ತುಂಬಾ ಅನಾನುಕೂಲವಾಗಿದೆ.

 

 

ಕೆಲವು ಪ್ರಕರಣಗಳಲ್ಲಿ ತಮ್ಮ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ದೂರುಗಳನ್ನು ಸಲ್ಲಿಸಿರುತ್ತಾರೆ. ಆದ್ದರಿಂದ ಶಾಸಕರ ಕೊಠಡಿಗಳ ಪೈಕಿ ಖಾಸಗಿ ಕೊಠಡಿಗಳಲ್ಲಿ ಸೇಪ್‌ ಲಾಕರ್‍‌ಗಳನ್ನು ಅಳವಡಿಸಬೇಕು. ಇದರಿಂದ ಹಲವು ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಆಧುನೀಕರಣ, ಕೊಠಡಿಗಳ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಸ್ಮಾರ್ಟ್‌ ಸೇಫ್‌ ಲಾಕರ್ಸ್‌ ಅಳವಡಿಕೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಸಮಜಾಯಿಷಿ ನೀಡಿದ್ದರು.

 

ಅದೇ ರೀತಿ ಶಾಸಕರ ಭವನದಲ್ಲಿ ವಿದ್ಯುತ್ ಬಳಕೆಯಿಂದ ಪ್ರತಿ ತಿಂಗಳು ಸುಮಾರು 9 ಲಕ್ಷದಿಂದ 10 ಲಕ್ಷದವರೆಎ ವಿದ್ಯುತ್‌ ಬಿಲ್‌ ಪಾವತಿಯಾಗುತ್ತಿದೆ. ಹಲವು ಸಂದರ್ಭಗಳಲ್ಲಿ ಶಾಸಕರು ತಮ್ಮ ಕೊಠಡಿಯ ಗೀಜರ್‍‌ ಸ್ವಿಚ್‌, ಲೈಟ್‌ ಸ್ವಿಚ್‌, ಫ್ಯಾನ್‌ ಇತ್ಯಾದಿಗಳನ್ನು ಬಳಕೆ ಮಾಡಿಕೊಂಡ ನಂತರ ಕೆಲಸ ಕಾರ್ಯಗಳ ಒತ್ತಡದಿಂದ ಇವುಗಳನ್ನು ಆಫ್‌ ಮಾಡಲು ಮರೆಯುತ್ತಿದ್ದಾರೆ. ಹೀಗಾಗಿ ಸ್ಮಾರ್ಟ್‌ ಎನರ್ಜಿ ಮಾನಿಟಿಂಗ್‌ ಸೊಲ್ಯೂಷನ್ಸ್‌ ಉಪಕರಣಗಳನ್ನು ಅಳವಡಿಸುವುದರಿಂದ ವಿದ್ಯುತ್‌ ಸ್ವಿಚ್‌ಗಳು ಆಟೋಮ್ಯಾಟಿಕ್‌ ಆಗಿ ಆಫ್‌ ಅಗಲಿವೆ. ಅಲ್ಲದೇ ಲಕ್ಷಾಂತರ ಮೊತ್ತದ ಬಿಲ್‌ ಹಣವನ್ನು ಉಳಿಕೆ ಮಾಡಬಹುದು ಎಂದೂ ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

 

 

 

ಶಾಸಕರ ಭವನದಲ್ಲಿನ ಕೊಠಡಿಗಳಿಗೆ ಅಳವಡಿಸಿರುವ ಸ್ಮಾರ್ಟ್‌ ಲಾಕರ್‍‌ಗಳನ್ನು ‘ದಿ ಫೈಲ್‌’ ಖುದ್ದು ಭೇಟಿ ನೀಡಿ ಪರಿಶೀಲಿಸಿತು. ಶಾಸಕರ ಭವನದ ಕೊಠಡಿಗಳ ಬಾಗಿಲುಗಳಿಗೆ ಅಳವಡಿಸಿರುವ ಸ್ಮಾರ್ಟ್‌ ಲಾಕರ್‍‌ಗಳು ಯಾವ ಕಂಪನಿಗಳದ್ದು ಎಂಬ ಮಾಹಿತಿ ದೊರೆಯಲಿಲ್ಲ. ಅಲ್ಲದೇ ಅಳವಡಿಕೆ ಆಗಿರುವ ಲಾಕರ್‍‌ಗಳ ಮೇಲೆ ಕಂಪನಿಯ ಹೆಸರು, ಲೋಗೋ ಕೂಡ ಕಾಣಿಸಲಿಲ್ಲ.

 

ಈ ಸಂಬಂಧ ‘ದಿ ಫೈಲ್‌’, ಖುದ್ದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿ ಮಾಡಿತು. ಈ ಬಗ್ಗೆ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರ ಬಳಿ ಹೆಚ್ಚಿನ ಮಾಹಿತಿಯೇ ಇರಲಿಲ್ಲ. ಅಳವಡಿಸಿರುವ ಉಪಕರಣಗಳ ಬಗ್ಗೆ ಮಾಹಿತಿ ಇದೆಯೇ, ಯಾವ ಕಂಪನಿ ಉಪಕರಣ ಅಳವಡಿಸಲಾಗಿದೆ ಎಂದು ಪ್ರಶ್ನಿಸಿದ್ದಕ್ಕೆ ಕಡತ ತರಿಸಿ ಹೇಳುತ್ತೇನೆ ಎಂದಷ್ಟೇ ಪ್ರತಿಕ್ರಿಯಿಸಿದರು.

 

ಅಲ್ಲದೇ ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳಲ್ಲಿ ವಸ್ತುಗಳು ಕಳುವು ಆಗಿರುವ ಬಗ್ಗೆ ದೂರುಗಳೇನಾದರೂ ದಾಖಲಾಗಿವೆಯೇ ಎಂದು ಕೇಳಿದ್ದಕ್ಕೆ ಶಾಸಕರಿಂದ ಲಿಖಿತ ದೂರುಗಳಿಲ್ಲ, ಮೌಖಿಕವಾಗಿ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

 

ಹೆಚ್ಚುವರಿ ಅನುದಾನಕ್ಕೆ ಹಲವು ಪ್ರಸ್ತಾವ

 

ಕರ್ನಾಟಕ ವಿಧಾನಸಭೆ ಸಚಿವಾಲಯವು ಹೆಚ್ಚುವರಿ ಅನುದಾನ ಕೋರಿ  ಆರ್ಥಿಕ ಇಲಾಖೆಗೆ ಹಲವು ಪ್ರಸ್ತಾವಗಳನ್ನು ಸಲ್ಲಿಸಿತ್ತು. ಶಾಸಕರ ಭವನದ ಕೊಠಡಿಗಳಿಗೆ ನೂತನ ಪೀಠೋಪಕರಣಗಳನ್ನು ಖರೀದಿಸಲು ಹೆಚ್ಚುವರಿ ಅನುದಾನ ಕೋರಿತ್ತು. ಇದಕ್ಕಾಗಿ 5.40 ಕೋಟಿ ರು ವೆಚ್ಚವಾಗಲಿದೆ ಎಂದು ವಿವರಿಸಿತ್ತು.  ಈ ಪ್ರಸ್ತಾವವು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದ್ದಾಗಲೇ ಶಾಸಕರ ಭವನದ ಕೊಠಡಿಗಳಿಗೆ ಸ್ಮಾರ್ಟ್‌ ಲಾಕರ್‍‌, ಸೇಫ್‌ ಲಾಕರ್‍‌ ಮತ್ತು ಸ್ಮಾರ್ಟ್ ಎನರ್ಜಿ ಮಾನಿಟಿರಿಂಗ್‌ ಸೊಲ್ಯೂಷನ್ಸ್‌  ಉಪಕರಣಗಳ ಖರೀದಿಗೂ ಪ್ರಸ್ತಾವ ಸಲ್ಲಿಸಿತ್ತು.

 

 

ಹಾಗೆಯೇ ಗಣಕ ಯಂತ್ರ, ಜೆರಾಕ್ಸ್‌ ಮತ್ತಿತರೆ ಉಪಕರಣಗಳ ನಿರ್ವಹಣೆ ಮತ್ತು ಖರೀದಿಗೆ 34.49 ಕೋಟಿ ರು ವೆಚ್ಚವೂ ಸೇರಿತ್ತು. ಅಲ್ಲದೇ ಪಿಡಬ್ಲ್ಯೂಎಫ್‌ಸಿ ಶಾಖೆಯೂ ಸಹ ಬೆಳಗಾವಿ ಸುವರ್ಣ ಸೌಧಧ ನಿರ್ವಹಣೆಗಾಗಿ 9.96 ಕೋಟಿ ರು ವೆಚ್ಚದ ಪ್ರಸ್ತಾವ ಸೇರಿಸಿತ್ತು.

 

ಅದೇ ರೀತಿ ಶಾಸಕರ ಭವನಕ್ಕೆ ಸ್ಟೈನ್‌ಲೆಸ್‌ ಸ್ಟೀಲ್‌ ವಾಟರ್‍‌ ಫ್ಯೂರಿಫೈಯರ್‍‌ಗಳನ್ನು ಖರೀದಿಸಲು ಸಹ ಪ್ರಸ್ತಾವಿಸಿತ್ತು. ಇದಕ್ಕೆ ಸಮರ್ಥನೆಯನ್ನೂ ನೀಡಿತ್ತು.

 

ಶಾಸಕರ ಭವನದಲ್ಲಿ ಶಾಸಕರು ಮತ್ತು ಈ ಸ್ಥಾನಮಾನ ಹೊಂದಿರುವ ನಿಗಮ,  ಮಂಡಳಿಗಳ ಅಧ್ಯಕ್ಷರು, ಗಣ್ಯ ವ್ಯಕ್ತಿಗಳು ವಾಸ್ತವ್ಯ ಹೂಡುತ್ತಾರೆ. ಪ್ರಸ್ತುತ 20 ಲೀಟರ್‍‌ ಕ್ಯಾನ್‌ನಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಶಾಸಕರ ಭವನದ ಮಹಡಿಗೆ ಒಂದರಂತೆ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಿದಲ್ಲಿ ನಿರ್ದಿಷ್ಟ ಸ್ಥಳಕ್ಕೆ ಬಂಧು ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲು ಅನಾನುಕೂಲವಾಗುತ್ತದೆ. ಮತ್ತು  ನೀರನ್ನು ಕೊಠಡಿಗಳಲ್ಲಿ ಶೇಖರಿಸಿಡಲು ಕಷ್ಟಕರವಾಗುತ್ತದೆ ಎಂದು ವಿವರಿಸಿತ್ತು.

 

 

ಶಾಸಕರ ಭವನದಲ್ಲಿ ಸದಸ್ಯರ ಉಪಯೋಗಕ್ಕಾಗಿ ಪ್ರತಿ ಕೊಠಡಿಗೆ ಒಂದರಂತೆ 235 ಸಂಖ್ಯೆಯ ಸ್ಟೈಲ್‌ಲೆಸ್‌ ಸ್ಟೀಲ್‌ ವಾಟರ್‍‌ ಫ್ಯೂರಿಫೈಯರ್‍‌ ಯಂತ್ರಗಳನ್ನು ಅಳವಡಿಸಲು ಆರ್ಥಿಕ ಇಲಾಖೆಯನ್ನು ಕೋರಿತ್ತು. ಇದಕ್ಕಾಗಿ ಪ್ರತಿ ಘಟಕಕ್ಕೆ 65,000 ರು. ದರದ ಲೆಕ್ಕದಲ್ಲಿ   1.80 ಕೋಟಿ ರು ಒದಗಿಸಲು ಪ್ರಸ್ತಾವಿಸಿತ್ತು.

 

 

ಈ ದರವನ್ನೂ ‘ದಿ ಫೈಲ್‌’, ಮುಕ್ತ ಮಾರುಕಟ್ಟೆ ಮತ್ತು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಒರೆಗೆ ಹಚ್ಚಿತ್ತು. ಇಂಡಿಯಾ ಮಾರ್ಟ್‌, ಅಮೆಜಾನ್‌ ಆನ್‌ಲೈನ್‌ನಲ್ಲಿ ಸ್ಟೈನ್‌ಲೆಸ್‌ ಸ್ಟೀಲ್‌ ವಾಟರ್‍‌ ಫ್ಯೂರಿಫೈಯರ್‍‌ಗೆ ನಮೂದಿಸಿರುವ ದರ ಮತ್ತು ವಿಧಾನಸಭೆ ಸಚಿವಾಲಯವು ನಮೂದಿಸಿದ್ದ ದರಕ್ಕೂ ಅಜಗಜಾಂತರವಿರುವುದು ಕಂಡು ಬಂದಿದೆ.

 

16,000 ರುಗಳಿಂದ 53,000 ರು ವರೆಗೂ ಅನ್‌ಲೈನ್‌ ಮಾರುಕಟ್ಟೆಯಲ್ಲಿ ದರ ನಮೂದಿಸಿದೆ.

 

 

 

 

 

 

ಮುಕ್ತ ಮತ್ತು ಆನ್‌ಲೈನ್‌ ಮಾರುಕಟ್ಟೆಯಲ್ಲಿ ನಮೂದಿಸಿರುವ ದರಕ್ಕೆ ಹೋಲಿಸಿದರೆ ವಿಧಾನಸಭೆ ಸಚಿವಾಲಯವು ನಮೂದಿಸಿದ್ದ ದರವು ದುಬಾರಿಯಾಗಿತ್ತು.

 

ಸ್ಟೈನ್‌ಲೆಸ್‌ ಸ್ಟೀಲ್‌ ವಾಟರ್‍‌ ಫ್ಯೂರಿಫೈಯರ್‍‌ ಅಳವಡಿಸುವ ಪ್ರಸ್ತಾವನೆಯನ್ನು  ಆರ್ಥಿಕ ಇಲಾಖೆಯು ಒಪ್ಪಿಕೊಂಡಿತ್ತಾದರೂ ಬೇರೆ ಲೆಕ್ಕ ಶೀರ್ಷಿಕೆಯಲ್ಲಿರುವ ಅನುದಾನವನ್ನು ಮರು ಹೊಂದಿಸಬೇಕು ಎಂದು ಹೇಳಿತ್ತು.

 

 

 

ಆದರೆ ಟೆಂಡರ್‍‌ ಪ್ರಕ್ರಿಯೆ ನಡೆಸಲು ಸಮಯಾವಕಾಶ ಕೋರಿದ್ದ ವಿಧಾನಸಭೆ ಸಚಿವಾಲಯದ ಸಮರ್ಥನೆಯನ್ನು ಆರ್ಥಿಕ ಇಲಾಖೆಯು ಒಪ್ಪಿರಲಿಲ್ಲ.

ಶಾಸಕರ ಕೊಠಡಿಗಳಿಗೆ ಸ್ಮಾರ್ಟ್‌ ಡೋರ್ ಲಾಕ್‌, ಸೇಫ್‌ ಲಾಕರ್ಸ್‌ ಖರೀದಿ; 4.80 ಕೋಟಿ ಹೆಚ್ಚುವರಿ ಅನುದಾನ!

 

ಅಲ್ಲದೇ ಈ ಕಡತವನ್ನು ವಿಧಾನಸಭೆ ಸಚಿವಾಲಯಕ್ಕೆ ವಾಪಸ್ ಕಳಿಸಿತ್ತು.

 

ಈ ಕುರಿತು ‘ದಿ ಫೈಲ್‌’ , ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರ ಪ್ರತಿಕ್ರಿಯೆ ಕೋರಿ  ಪ್ರಶ್ನಾವಳಿಗಳನ್ನು 2023ರ ಸೆ. 23ರಂದೇ ಅಧಿಕೃತ ಇ ಮೈಲ್‌ಗೆ  ಕಳಿಸಿತ್ತು. ಆದರೆ ಇದುವರೆಗೂ ಯಾವುದೇ ಮಾಹಿತಿ, ಪ್ರತಿಕ್ರಿಯೆ ನೀಡಿಲ್ಲ. ಮಾಹಿತಿ ಮತ್ತು ಪ್ರತಿಕ್ರಿಯೆ ಸ್ವೀಕೃತಗೊಂಡ ನಂತರ ಇದೇ ವರದಿಯನ್ನು ನವೀಕರಿಸಲಾಗುತ್ತದೆ.

Your generous support will help us remain independent and work without fear.

Latest News

Related Posts