ಬೆಂಗಳೂರು: ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಿ ಸುಸಜ್ಜಿತವಾದ ಪ್ರಯೋಗಾಲಯಗಳು, ಸೂಕ್ತ ತಜ್ಞ ಸಿಬ್ಬಂದಿಯೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ.
ಕುಡಿಯುವ ನೀರಿನ ಪರೀಕ್ಷೆ ನಡೆಸುವಾಗಲೂ ಮಂಡಳಿಯ ಪ್ರಯೋಗಾಲಯಗಳಲ್ಲಿ, ಬ್ಯಾಕ್ಟೀರಿಯಾಗಳಿವೆಯೇ, ಕೀಟ ನಾಶಕದ, ವಿಕಿರಣದ ಹಾಗೂ ವಿಷಕಾರಿ ಅಂಶಗಳಿವೆಯೇ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತಿಲ್ಲ. ಇದರಿಂದಾಗಿ ಮಂಡಳಿಯು ನೀಡುವ ಪರೀಕ್ಷಾ ವರದಿಗಳನ್ನು ಸಾರ್ವಜನಿಕರು, ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ನಂಬಿ ಮೋಸಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಲಿನ್ಯದ ತಪಾಸಣೆ ನಡೆಸುವುದು, ಮಾದರಿಗಳನ್ನು ಸಂಗ್ರಹಿಸುವುದು, ಪರೀಕ್ಷಿಸುವುದು ಮತ್ತು ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸುವುದು ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿಯಾಗಿದೆ.
ಮಹಾಲೇಖಪಾಲರು (ಸಿಎಜಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಲೆಕ್ಕ ಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಸಿಎಜಿಯ ಈ ವರದಿಯನ್ನು 2025ರ ಆಗಸ್ಟ್‌ನಲ್ಲಿ ನಡೆದ ವಿಧಾನ ಸಭೆಯ ಅಧಿವೇಶನದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ನೇಮಕಗೊಂಡಿದ್ದಾರೆ. ಮಂಡಳಿಯಲ್ಲಿ ಕರ್ತವ್ಯಲೋಪ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಡಳಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ನೇತೃತ್ವದ ತಂಡ ಕಳೆದ ಜೂನ್ 25 ರಂದು ಮಂಡಳಿಯ ಕೇಂದ್ರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2023ರ ಮಾರ್ಚ್‌ವರೆಗೆ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಕೇಂದ್ರ ಪರಿಸರ ಪ್ರಯೋಗಾಲಯ (ಸಿಇಎಲ್) ಮತ್ತು ಬೆಳಗಾವಿ, ಧಾರವಾಡ, ಹಾಸನ, ಕಲಬುರಗಿ, ಮಂಗಳೂರು, ಮೈಸೂರು ಮತ್ತು ರಾಯಚೂರಿನಲ್ಲಿ ಪ್ರಾದೇಶಿಕ ಪ್ರಯೋಗಾಲಯ (ಆರ್‌ಎಲ್) ಹೊಂದಿತ್ತು. ಈ ಪ್ರಯೋಗಾಲಯಗಳು ಎಲ್ಲ ಕಡ್ಡಾಯ ಪರೀಕ್ಷೆಗಳನ್ನು ನಡೆಸಲು ಸಮರ್ಪಕವಾಗಿ ಸುಸಜ್ಜಿತವಾಗಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.
ಪರಿಸರ ಸಂರಕ್ಷಣೆ ಕಾಯ್ದೆ ಮತ್ತು ಭಾರತೀಯ ಗುಣಮಟ್ಟ ಪರೀಕ್ಷಾ ಪ್ರಾಧಿಕಾರದ ಅಡಿಯಲ್ಲಿ ಹೊರಡಿಸಲಾಗಿರುವ ಆದೇಶಗಳ ಪ್ರಕಾರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ, ಒಳಚರಂಡಿ ನೀರಿನ ಮತ್ತು ಕೈಗಾರಿಕೆಗಳ ತ್ಯಾಜ್ಯ ನೀರಿನ, ಅಪಾಯಕಾರಿಯಾದ ತ್ಯಾಜ್ಯಗಳ ಮತ್ತು ಗಾಳಿಯ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿರುತ್ತದೆ. ಈ ಮಂಡಳಿಯು ನಡೆಸುವ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆಯೇ ಮುಂದಿನ ತೀರ್ಮಾನಗಳನ್ನು ಸರ್ಕಾರದ ವಿವಿಧ ಇಲಾಖೆಗಳು ತೆಗೆದುಕೊಳ್ಳುತ್ತಿರುತ್ತವೆ.
ನೀರು, ಒಳಚರಂಡಿ, ಕೈಗಾರಿಕಾ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಗಾಳಿಯ ಸುತ್ತುವರಿದ ಮತ್ತು ಸ್ಟಾಕ್ ಹೊರಸೂಸುವಿಕೆಗಳ ಮೇಲೆ ವಿಶ್ಲೇಷಿಸಬೇಕಾದ 307 ಮಾಲಿನ್ಯಕಾರಕಗಳಲ್ಲಿ ಬೆಂಗಳೂರಿನ ಒಂದು ಕೇಂದ್ರ ಪರಿಸರ ಪ್ರಯೋಗಾಲಯ ಕೇವಲ ಶೇ. 79 ರಷ್ಟು ಪ್ಯಾರಮೀಟರ್‌ಗಳನ್ನು (ನಿಯತಾಂಕ) ವಿಶ್ಲೇಷಿಸಲು ಸಜ್ಜುಗೊಂಡಿದೆ.
ದಾವಣಗೆರೆಯಲ್ಲಿರುವ ಕೇಂದ್ರ ಪರಿಸರ ಪ್ರಯೋಗಾಲಯ ಮತ್ತು ಏಳು ಪ್ರಾದೇಶಿಕ ಪ್ರಯೋಗಾಲಯಗಳು ಕೇವಲ ಶೇ.40ರಿಂದ 48 ರಷ್ಟು ಪ್ಯಾರಮೀಟರ್‌ಗಳನ್ನು ಪರೀಕ್ಷಿಸಲು ಮಾತ್ರ ಸಮರ್ಥವಾಗಿವೆ ಎಂದು ಸಿಎಜಿಯ ವರದಿಯಲ್ಲಿ ಹೇಳಲಾಗಿದೆ.
307 ಮಾಲಿನ್ಯ ಕಾರಕಗಳಲ್ಲಿ 56 ಕಾರಗಳನ್ನು ಪರೀಕ್ಷಿಸಲು ಯಾವುದೇ ಪ್ರಯೋಗಾಲಯ ಸಜ್ಜುಗೊಂಡಿಲ್ಲ. ಗಾಳಿಯ ಪರೀಕ್ಷೆ ನಡೆಸುವಾಗ 31 ಪ್ಯಾರಮೀಟರ್‌ಗಳನ್ನು ಪರೀಕ್ಷಿಸಬೇಕಾಗಿದ್ದು, ಈ ಪ್ರಯೋಗಾಲಯಗಳು 25 ಪ್ಯಾರಮೀಟರ್‌ಗಳನ್ನು ಪರೀಕ್ಷಿಸುತ್ತಲೇ ಇಲ್ಲ ಎಂದು ಸಿಎಜಿಯ ವರದಿಯು ಬೊಟ್ಟು ಮಾಡಿದೆ.
ಕುಡಿಯುವ ನೀರಿನ ಪರೀಕ್ಷೆಯೂ ಸರಿಯಾಗಿಲ್ಲ
2020ರ ಫೆಬ್ರವರಿ ಮತ್ತು 2023ರ ಮಾರ್ಚ್ ನಡುವೆ ಮಂಡಳಿಯ ಒಂಬತ್ತು ಪ್ರಾದೇಶಿಕ ಕಚೇರಿಗಳು 236 ಅಂತರ್ಜಲ ಮಾದರಿಗಳನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬೆಳಗಾವಿ ಮತ್ತು ರಾಯಚೂರು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದವು. ಇವುಗಳಲ್ಲಿ 35 ಮಾದರಿಗಳು ನಿಗದಿತ ಮಾನದಂಡದಂತೆ ಇದ್ದು, ಕುಡಿಯಲು ಯೋಗ್ಯವಾಗಿದೆ ಎಂದು ಪ್ರಯೋಗಾಲಯಗಳು ಪ್ರಮಾಣೀಕರಿಸಿದ್ದವು. 160 ಮಾದರಿಗಳು ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿ ನೀಡಿದ್ದರೆ, 18 ಮಾದರಿಗಳ ಬಗ್ಗೆ ರಾಯಚೂರಿನ ಪ್ರಯೋಗಾಲಯ ಯಾವುದೇ ವರದಿಯನ್ನು ನೀಡಿರಲಿಲ್ಲ.
ಕುಡಿಯಲು ಯೋಗ್ಯವೆಂದು ತಿಳಿಸಿದ 35 ನೀರಿನ ಮಾದರಿಗಳ ವರದಿಯನ್ನು ಸಿಎಜಿಯು ಪರಿಶೀಲಿಸಿದ್ದು, ಐಎಸ್‌ಐ ಗುಣಮಟ್ಟದ ಪ್ರಕಾರ ಪರೀಕ್ಷಿಸಬೇಕಾಗಿದ್ದ 64 ಪ್ಯಾರಮೀಟರ್‌ಗಳಿಗೆ ಬದಲಾಗಿ ಕೇವಲ 11-13 ಪ್ಯಾರಮೀಟರ್‌ಗಳನ್ನು ಮಾತ್ರ ಪರೀಕ್ಷಿಸಿ, ಈ ವರದಿ ನೀಡಲಾಗಿತ್ತು.
ಹೀಗೆ ಪರೀಕ್ಷಿಸದ ಪ್ಯಾರಮೀಟರ್‌ಗಳಲ್ಲಿ ಬ್ಯಾಕ್ಟೀರಿಯಾಗಳಿವೆಯೇ, ಕೀಟನಾಶಕದ, ವಿಕಿರಣ ಅಂಶಗಳಿವೆಯೇ, ವಿಷಕಾರಿ ವಸ್ತುಗಳಿವೆಯೇ ಎಂಬುದೆಲ್ಲಾ ಸೇರಿತ್ತು. ಇದರ ಅರ್ಥ, ಕೀಟನಾಶಕದ, ವಿಕಿರಣದ, ವಿಷಕಾರಿಯಾದ ಅಂಶಗಳಿವೆಯೇ ಎಂದು ಪರೀಕ್ಷೆ ನಡೆಸದೆಯೇ ಈ ಪ್ರಯೋಗಾಲಯಗಳು ಕುಡಿಯಲು ನೀರು ಯೋಗ್ಯ ಎಂಬ ವರದಿ ನೀಡಿದ್ದವು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಸಿಎಜಿಯು ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಕ್ಕೆ ಉತ್ತರಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಯು, ಎಲ್ಲ ಪ್ಯಾರಮೀಟರ್‌ಗಳನ್ನು ವಿಶ್ಲೇಷಿಸುವುದು ಪ್ರಯೋಗಿಕವಾಗಿ ಕಾರ್ಯಸಾಧ್ಯವಲ್ಲದ ಕಾರಣ ಈ ವರದಿ ನೀಡಲಾಗಿದೆ. ಕುಡಿಯುವ ನೀರಿನ ಎಲ್ಲ ಪ್ಯಾರಮೀಟರ್‌ಗಳನ್ನು ಪರೀಕ್ಷಿಸಿ, ವರದಿ ನೀಡಲು ಅಗತ್ಯ ಕ್ರಮಗಳನ್ನು ಮಂಡಳಿಯು ತೆಗೆದುಕೊಳ್ಳುತ್ತಿದೆ ಎಂಬ ಉತ್ತರ ನೀಡಿದೆ.
2022ರ ಏಪ್ರಿಲ್‌ನಿಂದ 2023ರ ಮಾರ್ಚ್ ನಡುವೆ ಮಂಗಳೂರಿನ ಪ್ರಾದೇಶಿಕ ಕಚೇರಿಯಿಂದ ಪರೀಕ್ಷಿಸಲಾದ ಸಂಸ್ಕರಿಸಿದ ವ್ಯಾಪಾರ ತ್ಯಾಜ್ಯ ಮತ್ತು ಸಂಸ್ಕರಿಸಿದ ಒಳಚರಂಡಿ ತ್ಯಾಜ್ಯ /ಲೀಚೇಟ್‌ನ 34 ಮಾದರಿಗಳಲ್ಲಿ ಮಂಗಳೂರು ಪ್ರಾದೇಶೀಕ ಪ್ರಯೋಗಾಲಯದಲ್ಲಿ ಸೌಲಭ್ಯವಿದ್ದರೂ ಪ್ರಮುಖ ನಾಲ್ಕು ಪ್ಯಾರಮೀಟರ್‌ಗಳ ಪರೀಕ್ಷೆ ನಡೆಸಲಾಗಿರಲಿಲ್ಲ ಎಂಬುದನ್ನು ಸಿಎಜಿ ಗುರುತಿಸಿ, ಆಕ್ಷೇಪಣೆ ವ್ಯಕ್ತಪಡಿಸಿತ್ತು.
ಇದಕ್ಕೆ ಉತ್ತರ ನೀಡಿರುವ ಮಂಡಳಿಯು, ತಜ್ಞರ ಕೊರತೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಈ ಕಡ್ಡಾಯ ಪ್ಯಾರಮೀಟರ್‌ಗಳನ್ನು ಪರೀಕ್ಷಿಸಲಾಗಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಸಿಎಜಿಯ ವರದಿಯಲ್ಲಿ ಹೇಳಲಾಗಿದೆ.
ಮಂಡಳಿಯು ನೀಡುವ ಪರೀಕ್ಷಾ ವರದಿಗಳನ್ನು ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು ನಂಬುತ್ತಾರೆ. ನೀರಿನ ಗುಣಮಟ್ಟ ಪರೀಕ್ಷೆ ನಡೆಸುವುದು ಮಂಡಳಿಯ ಬಾಧ್ಯತೆಯಾಗಿದೆ. ಆದ್ದರಿಂದ ಮಂಡಳಿಯು ಪ್ರಯೋಗಾಲಯವನ್ನು ಸುಸಜ್ಜಿತಗೊಳಿಸಬೇಕು ಮತ್ತು ಅಗತ್ಯ ತಜ್ಞ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಸಿಎಜಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಗೆ ಆರ್ಥಿಕ ಕೊರತೆ ಏನಿಲ್ಲ. ಹೀಗಾಗಿ ಮಂಡಳಿಯು ಈ ಪ್ರಯೋಗಾಲಯಗಳನ್ನು ಆಧುನೀಕರಣಗೊಳಿಸಬೇಕು. ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯ ಸೂಕ್ತ ವರದಿಗಳನ್ನಿಟ್ಟುಕೊಂಡು, ಮಾಲಿನ್ಯ ಕಾರಕ ಕೈಗಾರಿಕೆಗಳು ಮತ್ತು ಇತರ ಚಟುವಟಿಕೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಜಿಯು ಈ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಪರೀಕ್ಷೆ ನಡೆಸಲು ಸಿಬ್ಬಂದಿಯೂ ಇಲ್ಲ
ಮಾಲಿನ್ಯದ ಪರೀಕ್ಷೆಗಳನ್ನು ನಡೆಸಲು, ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲು ಮಂಡಳಿಯಲ್ಲಿ ಅಗತ್ಯ ತಾಂತ್ರಿಕ ಮತ್ತು ವೈಜ್ಞಾನಿಕ ಸಿಬ್ಬಂದಿಯೂ ಇಲ್ಲ ಎಂಬುದರ ಬಗ್ಗೆಯೂ ಸಿಎಜಿಯು ವರದಿಯಲ್ಲಿ ಗಮನಸೆಳೆದಿದೆ.
ಮಂಡಳಿಯ ಪ್ರಯೋಗಾಲಯಗಳು ಶೇ. 70 ರಷ್ಟು ವೈಜ್ಞಾನಿಕ ಅಧಿಕಾರಿಗಳ ಕೊರತೆ ಎದುರಿಸುತ್ತಿವೆ. ಇನ್ನು ಮಾಲಿನ್ಯ ನಿವಾರಣೆಗೆ ಯೋಜನೆ, ಪ್ರಯೋಗಾಲಯಗಳ ಮೇಲ್ವಿಚಾರಣೆ ಇತ್ಯಾದಿ ಕಾರ್ಯನಿರ್ವಹಿಸಬೇಕಾದ ತಾಂತ್ರಿಕ ವರ್ಗದಲ್ಲಿನ ಶೇ.46 ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಮಂಡಳಿಗೆ ತನ್ನ ಕಡ್ಡಾಯವಾದ ಪರೀಕ್ಷೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಮಂಡಳಿಯಲ್ಲಿ ಅಧಿಕ ಪ್ರಮಾಣದಲ್ಲಿ (ಸುಮಾರು ಶೇ. 35ಕ್ಕಿಂತ ಹೆಚ್ಚು) ವೈಜ್ಞಾನಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ಇದ್ದಾರೆ. ಡೇಟಾ ಎಂಟ್ರಿ ಆಪರೇಟರ್‌ಗಳು, ಚಾಲಕರು, ಪ್ಯೂನ್‌ಗಳಂತಹ ನಿರ್ಣಯಕವಲ್ಲದ ಸಹಾಯಕ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಸಾಂಖ್ಯಿಕ ಸಲಹೆಗಾರರು, ಸಹಾಯಕ ಆಡಳಿತಾಧಿಕಾರಿಗಳು, ಅಧೀಕ್ಷಕರು ಮತ್ತು ಕಾನೂನು ಸಹಾಯಕರ ಹುದ್ದೆಗಳು ಖಾಲಿ ಇದ್ದು, ಇವು ಆಡಳಿತಾತ್ಮಕ ಉದ್ದೇಶಗಳಿಗೆ ಅವಶ್ಯಕವಾಗಿವೆ ಎಂದು ಸಿಎಜಿಯು ಅಭಿಪ್ರಾಯಪಟ್ಟಿದೆ.
ಆಡಳಿತ ಕಾಯಿದೆಗಳು, ನಿಯಮಗಳು ಮತ್ತು ನಿಬಂಧನೆಗಳಿಗೆ ಅನುದಾರವಾಗಿ ವಿವಿಧ ರೀತಿಯ ತ್ಯಾಜ್ಯಗಳು, ಮಾಲಿನ್ಯಕಾರಕಗಳು ಇತ್ಯಾದಿಗಳ ಮೇಲೆ ಅಗತ್ಯವಿರುವ ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಡಲು ತಾಂತ್ರಿಕ ಮತ್ತು ವೈಜ್ಞಾನಿಕ ವರ್ಗಗಳಲ್ಲಿನ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರವು ಮಂಡಳಿಗೆ ತಕ್ಷಣದ ಕ್ರಮ ಕೈಗೊಳ್ಳಲು ಅನುಮತಿ ನೀಡಬಹುದು ಎಂದು ಸಿಎಜಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ವೈದ್ಯಕೀಯ ತ್ಯಾಜ್ಯ; 147.56 ಕೋಟಿ ಪರಿಸರ ಪರಿಹಾರ ಸಂಗ್ರಹಿಸುವ ಅವಕಾಶ ಕೈಚೆಲ್ಲಿದ ಮಾಲಿನ್ಯ ಮಂಡಳಿ
ಜೈವಿಕ-ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಸಂಬಂಧಿಸಿದಂತೆ ತಾನು ನೀಡಿದ್ದ ನಿರ್ದೇಶನಗಳನ್ನು ಅನುಸರಿಸದ ಆಸ್ಪತ್ರೆ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ 147.56 ಕೋಟಿ ರು. ಪರಿಸರ ಪರಿಹಾರ (environment compensation) ಸಂಗ್ರಹಿಸುವ ಅವಕಾಶವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೈಚೆಲ್ಲಿತ್ತು. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.
ನಿಷ್ಕ್ರೀಯವಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ; ಕೈಗಾರಿಕೆಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ ಎಂದ ಸಿಎಜಿ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 2,756 ಕೈಗಾರಿಕೆಗಳ ಪೈಕಿ ಶೇ. 66.29 ರಷ್ಟು ಕೈಗಾರಿಕೆಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಒಪ್ಪಿಗೆಯನ್ನು ಪಡೆದುಕೊಂಡೇ ಇಲ್ಲ. ಇದರಿಂದ ಕೈಗಾರಿಕೆಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿತ್ತು. ಈ ಕುರಿತು ಕೂಡ ʻದಿ ಫೈಲ್ʼ ವರದಿ ಪ್ರಕಟಿಸಿತ್ತು.