ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ 2000 ದಿಂದ 2016ರ ಅವಧಿಯಲ್ಲಿ ಜಾರಿಗೊಳಿಸಲಾದ 32 ಯೋಜನೆಗಳ ಪೈಕಿ 20 ಯೋಜನೆಗಳು ಸಾಂಸ್ಥಿಕ ದೋಷಗಳಿಂದಾಗಿಯೇ ನಿಷ್ಕ್ರಿಯಗೊಂಡಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ, ನೀರು ಸರಬರಾಜಿಗಾಗಿ ಮಾಡುತ್ತಿರುವ ಪ್ರತಿ 100 ರೂಪಾಯಿ ಖರ್ಚಿಗೆ ಪ್ರತಿಯಾಗಿ ಕೇವಲ 26 ರೂಪಾಯಿಗಳನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ಗ್ರಾಮ ಪಂಚಾಯಿತಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂಬುದು ಸರ್ಕಾರದ ಪರವಾಗಿ ನಡೆದ ಅಧ್ಯಯನದಿಂದ ಬಹಿರಂಗಗೊಂಡಿದೆ.
ಮೌಲ್ಯ ಮಾಪನ ಸಮಾಲೋಚನಾ ಸಂಸ್ಥೆಯಾಗಿರುವ (ECO) ʻನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ECO) ʻನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ʼ (ನ್ಯಾಬ್‌ಕಾನ್ಸ್-NABCONS) ಈ ಅಧ್ಯಯನ ನಡೆಸಿತ್ತು. ಈ ವರದಿಯನ್ನು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕೋರಿಕೆಯ ಮೇರೆಗೆ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಈ ಅಧ್ಯಯನ ನಡೆಸಿತ್ತು.
ಈ ಸಾಂಸ್ಥಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳದ ಹೊರತು ನೀರು ಸರಬರಾಜು ಯೋಜನೆಗಳಲ್ಲಿ ಸುಸ್ಥಿರತೆ ಸಾಧಿಸುವುದು ಅಸಾಧ್ಯವಾಗಲಿದೆ ಎಂದು ಈ ಅಧ್ಯಯನ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈ 32 ಯೋಜನೆಗಳ ಪೈಕಿ 23 ಯೋಜನೆಗಳು ಸರ್ವವಾರ್ಷಿಕವಲ್ಲದ ನೀರಿನ ಮೂಲಗಳನ್ನು ಹೊಂದಿವೆ. 31 ಯೋಜನೆಗಳು ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ರೂಪುರೇಷೆ ಹೊಂದಿಲ್ಲ. 29 ಯೋಜನೆಗಳ ವಿತರಣಾ ಜಾಲಗಳು ಹಾನಿಗೊಳಗಾಗಿವೆ. ಈ ಯೋಜನೆಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯಲ್ಲಿ ಸಂಬಂಧಿಸಿದ ಗ್ರಾ.ಪಂ.ಗಳು ಸರಾಸರಿ ಶೇಕಡ 74ರಷ್ಟು ನಷ್ಟ ಅನುಭವಿಸುತ್ತಿವೆ. ಅಂದರೆ, ನೀರು ಸರಬರಾಜಿಗಾಗಿ ಮಾಡುತ್ತಿರುವ ಪ್ರತಿ 100 ರೂಪಾಯಿ ಖರ್ಚಿಗೆ ಪ್ರತಿಯಾಗಿ ಕೇವಲ 26 ರೂಪಾಯಿಗಳನ್ನು ಸಂಗ್ರಹಿಸುತ್ತಿವೆ ಎಂದು ಈ ಅಧ್ಯಯನ ವರದಿಯಲ್ಲಿ ದಾಖಲಿಸಲಾಗಿದೆ.
ನೀರಿನ ವಿವೇಚನಾಯುಕ್ತ ಬಳಕೆ ಅನುಸರಣೆಯಾಗುತ್ತಿಲ್ಲ. ಬಳಕೆದಾರರಿಂದ ಮೀಟರ್ ಅಳವಡಿಸುವಿಕೆಗೆ ವಿರೋಧ ಕಂಡುಬರುತ್ತಿದೆ. ಗ್ರಾಮೀಣ ನೀರಿನ ವಲಯವನ್ನು ನಿಯಂತ್ರಿಸುವ ಸಲುವಾಗಿ ನೀತಿಗಳು ಹಾಗೂ ಸರ್ಕಾರದ ಆದೇಶಗಳು ಸಾಕಷ್ಟಿದ್ದರೂ ಅವು ಯಾವುದೇ ದಂಡನೀಯ ಕ್ರಮಗಳನ್ನು ಒಳಗೊಂಡಿರುವುದಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ನೀರು ಸರಬರಾಜಿಗಾಗಿ ಇನ್ನೂ ಹೈಡ್ರಾಲಿಕ್ ಮಾದರಿಯ ಸುತ್ತ ಒತ್ತು ನೀಡುತ್ತಿದೆಯೇ ಹೊರತು ಸುಸ್ಥಿರ ಜಲಸಂಪನ್ಮೂಲಗಳ ನಿರ್ವಹಣೆ ಬಗ್ಗೆ ಗಮನ ಕೇಂದ್ರೀಕರಿಸುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ (ಪಿಆರ್‌ಇಡಿ) ಮೂಲಕ ವಿನ್ಯಾಸಗೊಂಡು ಅನುಷ್ಠಾನಗೊಂಡಿರುವ ಈ ಯೋಜನೆಗಳಲ್ಲಿ ಮಾಲೀಕತ್ವಕ್ಕೆ ಸಂಬಂಧಿಸಿದ ವಿನ್ಯಾಸದ ಕೊರತೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ಹಂತದಲ್ಲಿ ದೃಢವಾದ ಸಾಂಸ್ಥಿಕ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವಲ್ಲಿ ವೈಫಲ್ಯ ನಿಚ್ಚಳವಾಗಿದೆ. ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರ್ಯತಂತ್ರಗಳೂ ಕಳಪೆಯಾಗಿವೆ. ಇವುಗಳ ಜೊತೆಗೆ, ನಿಧಿಯ ಕೊರತೆಯೂ ಬಾಧಿಸುತ್ತಿದೆ. ಈ ಅಂಶಗಳು ಯೋಜನೆಗಳ ಪರಿಣಾಮಕಾರಿತ್ವ ಹಾಗೂ ಅದರ ದೀರ್ಘ ಬಾಳಿಕೆ ಮೇಲೆ ಗಣನೀಯ ಪರಿಣಾಮ ಬೀರಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದಕ್ಕೆ ಕೆಲವು ಉದಾಹರಣೆಗಳನ್ನೂ ಅಧ್ಯಯನ ವರದಿಯಲ್ಲಿ ನೀಡಲಾಗಿದೆ. ಎಂವಿಎಸ್ ಗೋಗಿ ಹಾಗೂ 10 ಹಳ್ಳಿಗಳು ಮತ್ತು ಎಂವಿಎಸ್ ಅಸುಂಡಿ ಹಾಗೂ 3 ಗ್ರಾಮಗಳ ನೀರು ಸರಬರಾಜು ಯೋಜನೆಗಳ ಸಂದರ್ಭದಲ್ಲಿ ಮಾಡಿಕೊಳ್ಳಲಾಗಿರುವ ಕಾರ್ಯಾಚರಣೆ ಮತ್ತು ನಿರ್ವಹಣಾ ಒಪ್ಪಂದಗಳು ಸುಸ್ಥಿರವಾಗಿರಲಿಲ್ಲ ಎಂದು ಅಭಿಪ್ರಾಯ ಪಡಲಾಗಿದೆ.
ಮುಖ್ಯವಾಗಿ, ಗ್ರಾಮ ಪಂಚಾಯತಿಗಳು ವಿದ್ಯುತ್ ಹಾಗೂ ವೇತನಕ್ಕೆ ಸಂಬಂಧಿಸಿದಂತೆ ತಗಲುವ ವೆಚ್ಚಗಳನ್ನು ನಿರ್ವಹಿಸಲು ಅಸಮರ್ಥವಾಗಿವೆ ಎಂಬುದನ್ನು ಗುರುತಿಸಲಾಗಿದೆ. ಯೋಜನೆಯ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಹಣಕಾಸು ಒದಗಿಸಿಕೊಳ್ಳುವುದು ಗ್ರಾಮ ಪಂಚಾಯಿತಿಗಳಿಗೆ ಬಹು ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಇದು ನಿರ್ವಹಣಾ ಚಟುವಟಿಕೆಗಳಿಗೆ ತೊಡಕಾಗುವ ಜೊತೆಗೆ ಅಂತಿಮವಾಗಿ ಮೂಲಸೌಕರ್ಯ ವ್ಯವಸ್ಥೆಯ ಕುಸಿತಕ್ಕೂ ಎಡೆಮಾಡಿಕೊಟ್ಟಿದೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.
ಈ ಯೋಜನೆಗಳು ನೀರು ಸರಬರಾಜಿನ ಅಗತ್ಯಗಳನ್ನು ಪರಿಹರಿಸುವ ಸದುದ್ದೇಶದಿಂದ ಕೂಡಿದ್ದರೂ ಸುಸ್ಥಿರ ಯೋಜನೆಯ ಕೊರತೆಯು ಯಶಸ್ಸನ್ನು ದುರ್ಬಲಗೊಳಿಸಿದೆ. ಯೋಜನೆಯ ಆರಂಭಿಕ ಹಂತದಿಂದಲೇ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಒಳಗೊಂಡು ಸಮಗ್ರ ವಿಧಾನವನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿರುತ್ತದೆ.
ಇದಕ್ಕೆ ತಗುಲಬಹುದಾದ ವೆಚ್ಚವನ್ನು ಗಮನದಲ್ಲಿ ಇರಿಸಿಕೊಂಡು ಅಗತ್ಯ ನಿಧಿಯನ್ನು ಖಾತರಿಪಡಿಸುವುದಕ್ಕೂ ಒತ್ತು ನೀಡಬೇಕಾಗುತ್ತದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಾಗಲಿ ಅಥವಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಾಗಲಿ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂಬ ಬಗ್ಗೆ ಅಧ್ಯಯನ ವರದಿ ಗಮನಸೆಳೆದಿದೆ.
ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳಿಗೆ ತರಬೇತಿ, ಸಂಪನ್ಮೂಲಗಳನ್ನು ಒದಗಿಸುವುದು, ಸುಸ್ಥಿರ ಸ್ಪಷ್ಟ ಮಾರ್ಗಸೂಚಿಗಳು ಹಾಗೂ ಬೆಂಬಲ ಕಾರ್ಯವಿಧಾನಗಳ ಸ್ಥಾಪನೆ ಇವುಗಳ ಬಗ್ಗೆಯೂ ಕ್ರಮ ವಹಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇವುಗಳ ಜೊತೆಗೆ, ಹಲವು ಯೋಜನೆಗಳು ಕಾರ್ಯಾರಂಭದ ಹಂತದಲ್ಲೇ ಗಣನೀಯ ವಿಳಂಬ ಎದುರಿಸಿದ್ದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಉದಾಹರಣೆಗೆ, ಕಲಬುರಗಿ ಜಿಲ್ಲೆಯ ಎಂವಿಎಸ್ ಅಳ್ಳಗಿ ಹಾಗೂ 6 ಗ್ರಾಮಗಳ ಯೋಜನೆಗೆ ಮೀಸಲಾದ ಜೆಸ್ಕಾಂ ಫೀಡರ್ ಮೇನ್ ಸ್ಥಾಪನೆಯು ಏಳು ವರ್ಷ ವಿಳಂಬಗೊಂಡಿತು. ಇದರಿಂದ ಈ ಯೋಜನೆಯ ಕಾರ್ಯಸಾಮರ್ಥ್ಯ ತೀವ್ರವಾಗಿ ಇಳಿಮುಖಗೊಂಡಿತು.
ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆಗೆ, ಯೋಜನೆಗೆ ಮೀಸಲಾದ ಸ್ವತ್ತುಗಳು ಶಿಥಿಲಗೊಂಡು ಉಪಯೋಗಕ್ಕೆ ಬಾರದಂತಾಗಿದ್ದವು. ಮತ್ತೊಂದು ಪ್ರಕರಣದಲ್ಲಿ, ರಾಯಚೂರು ಜಿಲ್ಲೆ ಎಂವಿಎಸ್ ಕರಡಿಗುಡ್ಡ ಹಾಗೂ 18 ಗ್ರಾಮಗಳ ಯೋಜನೆಗೆ (ರಾಯಚೂರು ಜಿಲ್ಲೆ) ಕಚ್ಚಾ ನೀರು ಪಂಪ್ ಮಾಡುವ ಮುಖ್ಯ ಕೊಳವೆ ಮಾರ್ಗ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿ ನಡೆಯುವ ವೇಳೆ ಹಾನಿಗೀಡಾಯಿತು. ಆದರೆ, ಅದನ್ನು ತಕ್ಷಣ ದುರಸ್ತಿಗೊಳಿಸದಿದ್ದುದು ಯೋಜನೆಯ ನಿಷ್ಕ್ರಿಯತೆಗೆ ಕಾರಣವಾಯಿತು ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.
ಗದಗ, ತುಮಕೂರು, ಬೀದರ್, ಬಳ್ಳಾರಿ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ ಅಣೆಕಟ್ಟು, ಬ್ಯಾರೇಜು, ಕಾಲುವೆಗಳಿಂದ ನೀರು ಹರಿಸಲು ನೀರಾವರಿ ಇಲಾಖೆ ಮತ್ತಿತರ ಇಲಾಖೆಗಳನ್ನು ಅವಲಂಬಿಸಬೇಕಾಗಿರುವುದು ಪ್ರತಿಕೂಲ ಪರಿಣಾಮ ಬೀರಿದೆ. ಇಂತಹ ಅವಲಂಬನೆಯು ಅಡಚಣೆಗಳು ಹಾಗೂ ವಿಳಂಬಗಳಿಗೆ ಆಸ್ಪದ ಕಲ್ಪಿಸುತ್ತದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಇಂತಹ ಸನ್ನಿವೇಶ ಉದ್ಭವಿಸುತ್ತದೆ. ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್ ಸಂಪರ್ಕ ಲಭ್ಯವಾಗಿಸುವಲ್ಲಿ ಹಾಗೂ ವಿದ್ಯುತ್ ಬಿಲ್ಲಿಂಗ್ ಗೆ ಸಂಬಂಧಿಸಿದಂತೆ ಜೆಸ್ಕಾಂ ಕಾರ್ಯವೈಖರಿ ಸುಧಾರಣೆಗೊಳ್ಳಬೇಕಿದೆ ಎಂದು ಹೇಳಲಾಗಿದೆ.
ನೀರು ಪೂರೈಕೆ ವಿತರಣಾ ಜಾಲಕ್ಕೆ ಹಾನಿಯಾಗಿರುವುದು ಯೋಜನೆಗಳ ನಿಷ್ಕ್ರಿಯತೆಗೆ ಮತ್ತೊಂದು ಗಮನಾರ್ಹ ಕಾರಣವಾಗಿದೆ. ಮೌಲ್ಯಮಾಪನ ಮಾಡಿದ 32 ಯೋಜನೆಗಳ ಪೈಕಿ 29 ಯೋಜನೆಗಳ ವಿತರಣಾ ಜಾಲಕ್ಕೆ ಹಾನಿಯುಂಟಾಗಿರುವುದು ಕಂಡುಬಂದಿದೆ.
ಇದು ಹೆಚ್ಚಾಗಿ ಖಾಸಗಿ ಕೃಷಿ ಜಮೀನುಗಳ ಮಾಲೀಕರಿಂದ, ಅಂದರೆ, ಪೈಪ್ ಲೈನ್ ಅಳವಡಿಸಿರುವ ಸ್ಥಳಗಳ ಬಗ್ಗೆ ಜಮೀನಿನ ಮಾಲೀಕರಿಗೆ ಅರಿವಿದ್ದರೂ ಎಚ್ಚರಿಕೆ ವಹಿಸದೆ ಯಾಂತ್ರಿಕ ಉಳುಮೆ ಮಾಡಿಸಿರುವುದರಿಂದ ಸಂಭವಿಸಿರುವ ಹಾನಿಯಾಗಿದೆ. ಹೀಗೆ ಯಾಂತ್ರಿಕ ಉಳುಮೆ ಮಾಡಿಸುವ ವೇಳೆ ಪೈಪ್ ಲೈನುಗಳಿಗೆ ಗಣನೀಯ ಹಾನಿಯುಂಟಾಗಿದೆ. ಇದರಿಂದ ನೀರಿನ ಪೂರೈಕೆಗೆ ಅಡ್ಡಿಯಾಗಿ ಯೋಜನೆಗಳು ವಿಫಲವಾಗಿವೆ ಎಂದು ವರದಿಯು ಬೊಟ್ಟು ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದಂತಹ ಇಲಾಖೆಗಳು ನಡೆಸಿದ ರಸ್ತೆ ಕಾಮಗಾರಿಗಳು ಸಹ ಹಾನಿಗೆ ಕೊಡುಗೆ ನೀಡಿವೆ. ರಸ್ತೆ ನಿರ್ಮಾಣ ಹಾಗೂ ನಿರ್ವಹಣಾ ಕಾರ್ಯದಲ್ಲಿ ಬಳಸುವ ಭಾರಿ ಯಂತ್ರೋಪಕರಣಗಳು ಮತ್ತು ಉತ್ಖನನ ಚಟುವಟಿಕೆಗಳಿಂದಾಗಿ ಪೈಪ್ ಲೈನುಗಳು ಪದೇಪದೇ ಹಾನಿಗೀಡಾಗಿರುವುದು ತಿಳಿದುಬಂದಿದೆ. ಇದರಿಂದಾಗಿ ಪೈಪುಗಳು ಬಿರುಕುಬಿಟ್ಟು ಸೋರಿಕೆ ಉಂಟಾಗುತ್ತದೆ. ಹೀಗೆ ಪೈಪುಗಳು ಬಿರುಕುಬಿಟ್ಟಾಗ ಸಮರ್ಪಕವಾಗಿ ದುರಸ್ತಿಗೊಳಿಸದಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ.
ಅಧ್ಯಯನಕ್ಕೆ ಒಳಪಡಿಸಿದ 32 ಯೋಜನೆಗಳಲ್ಲಿ ಕಂಡುಬಂದ ಸಾಂಸ್ಥಿಕ ಲೋಪಗಳನ್ನು ಈ ಅಧ್ಯಯನ ವರದಿಯಲ್ಲಿ ವಿಸ್ತೃತವಾಗಿ ವರ್ಗೀಕರಿಸಿದೆ.
1) ಇತರ ಇಲಾಖೆಗಳ ಮೇಲಿನ ಅವಲಂಬನೆ ಹಾಗೂ ಹಾನಿ
ಜೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಆದ ವಿಳಂಬ, ನೀರಾವರಿ ಕಾಲುವೆಗಳಿಂದ ಇಂಪೌಂಡಿಂಗ್ ಜಲಾಶಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸರಬರಾಜು ಆಗದಿರುವುದು, ನೀರು ವಿತರಣಾ ಜಾಲಕ್ಕೆ ಹಾನಿಯಂತಹ ಸಮಸ್ಯೆಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಅಂತರ-ಇಲಾಖಾ ಅವಲಂಬನೆಗಳು ನೀರಿನ ಸ್ಥಿರವಾದ ವಿತರಣೆಯಲ್ಲಿ ಬಿಕ್ಕಟ್ಟು ಉಂಟುಮಾಡುವ ಜೊತೆಗೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬಕ್ಕೂ ಕಾರಣವಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2) ಹಣಕಾಸು ನಿರ್ಬಂಧಗಳು
ಗ್ರಾ.ಪಂ. ಮಟ್ಟದಲ್ಲಿನ ಹಣಕಾಸು ನಿರ್ಬಂಧಗಳು ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ಗ್ರಾ.ಪಂ.ಗಳು ಇಂಧನ, ವೇತನ ಹಾಗೂ ನಿರ್ವಹಣೆಯನ್ನು ಒಳಗೊಂಡಂತೆ ಅಗತ್ಯ ವೆಚ್ಚಗಳನ್ನು ಸರಿದೂಗಿಸಲಾಗದೆ ಹಣದ ಕೊರತೆಯಲ್ಲಿ ಸಿಲುಕಿವೆ. ಗ್ರಾ.ಪಂ.ಗಳು ಸರಾಸರಿ ಶೇಕಡ 74ರಷ್ಟು ಕೊರತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಅಂದರೆ, ನೀರು ಸರಬರಾಜಿಗಾಗಿ ಖರ್ಚು ಮಾಡಿದ ಪ್ರತಿ 100 ರುಪಾಯಿಗೆ 26 ರುಪಾಯಿಗಳನ್ನು ಮಾತ್ರ ಸಂಗ್ರಹಿಸುತ್ತಿವೆ. ಇಷ್ಟಾಗಿಯೂ ಗ್ರಾ.ಪಂ.ಗಳು ನೀರು ಕೊಯ್ಲು ಹಾಗೂ ಸಾಂಪ್ರದಾಯಿಕ ಮೂಲಗಳನ್ನು ಪುನರುಜ್ಜೀವದಂತಹ ಕ್ರಮಗಳಿಗೆ ಬದಲಾಗಿ ಹೊಸ ಕೊಳವೆಬಾವಿಗಳನ್ನು ತೋಡಲು ಹಣ ಹೂಡಿಕೆ ಮಾಡುತ್ತಿವೆ ಎಂಬುದನ್ನು ಅಧ್ಯಯನದಲ್ಲಿ ಗುರುತಿಸಲಾಗಿದೆ.
3) ಮಾಲೀಕತ್ವದ ಕೊರತೆ
ಗ್ರಾಮ ಪಂಚಾಯತ್ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಇವೆರಡೂ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡಿವೆ. ಆದರೆ, ಸೌಲಭ್ಯಗಳ ನಿರ್ವಹಣೆಯ ವಿಷಯಕ್ಕೆ ಬಂದಾಗ ಜವಾಬ್ದಾರಿ ವಹಿಸಿಕೊಳ್ಳಲು ಎರಡೂ ಇಲಾಖೆಗಳು ಹಿಂದೇಟು ಹಾಕುತ್ತವೆ. ಈ ಮಾಲೀಕತ್ವದ ಕೊರತೆಯು ಯೋಜನೆಗಳ ನಿರ್ಲಕ್ಷ್ಯ, ಕಳಪೆ ನಿರ್ವಹಣೆ ಹಾಗೂ ವೈಫಲ್ಯಕ್ಕೆ ಕಾರಣವಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
4) ಬದಲಾದ ಆದ್ಯತೆಗಳು
ಕುಡಿಯುವ ನೀರಿನ ಪೂರೈಕೆಗಿಂತ ಹೆಚ್ಚಾಗಿ ನೀರಾವರಿ ಅಗತ್ಯಗಳಿಗೆ ಆದ್ಯತೆ ನೀಡುತ್ತಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉದಾಹರಣೆಗೆ, ತುಮಕೂರು ಜಿಲ್ಲೆಯಲ್ಲಿ ಇನ್ನಿತರ ಸ್ಕೀಮುಗಳ ಮೂಲಕ ಜನರಿಗೆ ಸುರಕ್ಷಿತ ನೀರಿನ ಪೂರೈಕೆ ಖಾತರಿಯಾಗಿರುವುದರಿಂದ, ಆ ಪ್ರದೇಶದ ಜನರು ಹಾಲಿ ಯೋಜನೆಯಡಿ ಪೂರೈಕೆಯಾಗುವ ನೀರನ್ನು ನೀರಾವರಿಗೆ ಬಳಸಬೇಕೆಂಬ ಧೋರಣೆ ತಾಳಿದ್ದಾರೆ. ಹೀಗಾಗುವುದರಿಂದ ಯೋಜನೆಗಳ ಮೂಲಭೂತ ಉದ್ದೇಶ ದುರ್ಬಲಗೊಳ್ಳುತ್ತದೆ. ಜೊತೆಗೆ, ಸಂಪನ್ಮೂಲ ಹಂಚಿಕೆಯಲ್ಲಿ ಅಸಾಮರಸ್ಯಕ್ಕೆ ಕಾರಣವಾಗಿ ಯೋಜನೆಗಳ ಪರಿಣಾಮಕಾರಿತ್ವ ಇನ್ನಷ್ಟು ಕುಂಠಿತಗೊಳ್ಳುತ್ತದೆ.
ಮುಖ್ಯ ಸಂಗತಿಯೆಂದರೆ, ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ಮೂಲಸೌಕರ್ಯಕ್ಕೆ ಹಾನಿ ತಡೆಗಟ್ಟಲು ಅಂತರ ಇಲಾಖೆಗಳ ನಡುವಿನ ಸಮನ್ವಯ ಸುಧಾರಿಸುವುದು ಅತ್ಯವಶ್ಯ. ನೀರು ಸರಬರಾಜು ಯೋಜನೆಗಳನ್ನು ಕೈಗೊಳ್ಳಲು ಹಾಗೂ ನಿರ್ವಹಿಸಲು ಹೆಚ್ಚು ಸಂಯೋಜಿತ ಮತ್ತು ಸಹಭಾಗಿತ್ವದ ವಿಧಾನ ಅತ್ಯಗತ್ಯ ಎಂಬುದು ತಜ್ಞರ ಸ್ಪಷ್ಟ ಅಭಿಮತವಾಗಿದೆ.
32 ನೀರು ಸರಬರಾಜು ಯೋಜನೆಗೆ 214 ಕೋಟಿ ಖರ್ಚು; ಆದರೂ ದೊರೆಯುತ್ತಿಲ್ಲ ಯೋಗ್ಯ ಕುಡಿಯುವ ನೀರು
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಈ 32 ಕುಡಿಯುವ ನೀರಿನ ಪೂರೈಕೆ ಯೋಜನೆಗಳಿಗೆ ಮಿತಿ ಮೀರಿ ಹಣ ವಿನಿಯೋಗಿಸಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.
ಗ್ರಾಮೀಣ ಕುಡಿಯುವ ನೀರಿನ 34 ಯೋಜನೆ ಅಸಮರ್ಪಕ; ಕಲುಷಿತ ನೀರು ಸರಬರಾಜು, ಬಹುಕೋಟಿ ಪೋಲು
ಗ್ರಾಮೀಣ ಕುಡಿಯುವ ನೀರಿನ 32 ಯೋಜನೆಗಳು ಅಸಮರ್ಪಕವಾಗಿದ್ದು, ಇವುಗಳಲ್ಲಿನ ಶೇಕಡ 86 ರಷ್ಟು ಕುಡಿಯುವ ನೀರಿನ ಮಾದರಿಗಳು ಕುಡಿಯಲು ಯೋಗವಾಗಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿತ್ತು. ಈ ಕುರಿತು ಕೂಡ ʻದಿ ಫೈಲ್ʼ ವರದಿ ಪ್ರಕಟಿಸಿತ್ತು.