ಬೆಂಗಳೂರು: ಲೋಕೋಪಯೋಗಿ ಇಲಾಖೆಯು ತನ್ನ ವಶದಲ್ಲಿರುವ ಬೆಲೆ ಬಾಳುವ ಜಮೀನು, ಕಟ್ಟಡಗಳನ್ನು ಗುತ್ತಿಗೆ, ಬಾಡಿಗೆ ನೀಡುವ ಸಂದರ್ಭದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೆ ಕೋಟ್ಯಂತರ ರು. ನಷ್ಟ ಮಾಡಿಕೊಳ್ಳುತ್ತಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.
ಮಹಾಲೇಖಪಾಲರು ನಡೆಸಿದ ಲೆಕ್ಕಪರಿಶೋಧನೆಯ ವೇಳೆಯಲ್ಲಿ ಪರೀಕ್ಷಾರ್ಥವಾಗಿ ಪರಿಶೀಲಿಸಿದ ಪ್ರಕರಣಗಳಲ್ಲಿಯೇ 155.26 ಕೋಟಿ ರು. ಇಲಾಖೆಗೆ ಪಾವತಿಯಾಗದೆ ಬಾಕಿ ಉಳಿದಿತ್ತು. ಆದರೂ ಇದನ್ನು ವಸೂಲಿ ಮಾಡಲು ಇಲಾಖೆಯು ಸೂಕ್ತ ಕ್ರಮ ತೆಗೆದುಕೊಂಡಿರಲಿಲ್ಲ.
ಇಲಾಖೆಯು ಕಟ್ಟಡ ಅಥವಾ ಜಮೀನನ್ನು ಗುತ್ತಿಗೆ ಪಡೆದವರಿಂದ ನಿಯಮಿತವಾಗಿ ಗುತ್ತಿಗೆ ಬಾಡಿಗೆ ಪಡೆಯುತ್ತಿಲ್ಲ, ಅವಧಿ ಮುಗಿದ ಗುತ್ತಿಗೆಯವನ್ನು ಸಹ ಸಕಾಲದಲ್ಲಿ ನವೀಕರಣ ಮಾಡುತ್ತಿಲ್ಲ ಹಾಗೂ ಗುತ್ತಿಗೆ ಬಾಡಿಗೆಗಳ ದರ ಪರಿಷ್ಕರಣೆಯನ್ನು ಸಹ ಮಾಡುತ್ತಿಲ್ಲ. ಇದರಿಂದಾಗಿ ಇಲಾಖೆಗೆ ವಾರ್ಷಿಕ ಕೋಟ್ಯಂತರ ರು. ನಷ್ಟವಾಗುತ್ತಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.
1028-19 ರಿಂದ 2022 -23ರ ವರೆಗಿನ ಅವಧಿಯಲ್ಲಿ ಈ ಲೆಕ್ಕಪರಿಶೋಧನೆ ನಡೆಸಲಾಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಗೋವಿಂದ ಕಾರಜೋಳ ಮತ್ತು ಸಿ.ಸಿ.ಪಾಟೀಲ್ ಲೋಕೋಪಯೋಗಿ ಸಚಿವರಾಗಿದ್ದರು. ಈಗ ಸತೀಶ್ ಜಾರಕಿಹೊಳಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಲಾಖೆಯು ರಾಜ್ಯದಲ್ಲಿ 156 ಆಸ್ತಿಯನ್ನು ಗುತ್ತಿಗೆಗೆ ನೀಡಿದೆ. ಇವುಗಳಲ್ಲಿ ಕೇವಲ ನಾಲ್ಕು ಜಿಲ್ಲೆಗಳಲ್ಲಿನ ಲೋಕೋಪಯೋಗಿ ಇಲಾಖೆಯ ಆರು ವಿಭಾಗಗಳಲ್ಲಿನ 149 ಗುತ್ತಿಗೆಗಳ ಲೆಕ್ಕಪರಿಶೋಧನೆಯನ್ನು ನಡೆಸಿದಾಗ 155.26 ಕೋಟಿ ರು. ಬಾಕಿ ಇರುವುದು ಗೊತ್ತಾಗಿದೆ. ಈ ವಿಭಾಗಗಳಲ್ಲಿ ಕಟ್ಟಡಗಳ ಮಾಹಿತಿ ವ್ಯವಸ್ಥೆ (ಬಿಐಎಸ್), ಬೇಡಿಕೆ ಸಂಗ್ರಹಣೆ ಮತ್ತು ಸಮತೋಲನ (ಡಿಸಿಬಿ) ನೋಂದಣಿ ಮತ್ತಿತರ ಪ್ರಮುಖ ನಿಯಂತ್ರಣ ರೆಜಿಸ್ಟರ್‌ಗಳು ಮತ್ತು ಮಾಹಿತಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲಾಗಿರಲಿಲ್ಲ ಎಂದೂ ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿದೆ.
ಸಿಎಜಿಯು ಎತ್ತಿಹಿಡಿದಿರುವ ಈ ಎಲ್ಲ ಲೋಪಗಳನ್ನು ಈಗಿನ ಸರ್ಕಾರ, 2024ರಲ್ಲಿ ಒಪ್ಪಿಕೊಂಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಿಎಜಿಗೆ ಭರವಸೆ ನೀಡಿದೆ. ಆದರೆ ಆಗಿರುವ ನಷ್ಟವನ್ನು ಹೇಗೆ ವಸೂಲಿ ಮಾಡಲಾಗುತ್ತದೆ ಎಂದು ಸಿಎಜಿಗೆ ತಿಳಿಸಿಲ್ಲ. ಅಲ್ಲದೆ ಸ್ಪಷ್ಟ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿಲ್ಲ. ನಾಲ್ಕು ಜಿಲ್ಲೆಗಳಲ್ಲಿಯೇ 155.26 ಕೋಟಿ ಬಾಕಿ ಇರುವಾಗ, ಇಲಾಖೆಯು ರಾಜ್ಯದಲ್ಲಿ ಒಟ್ಟು ಎಷ್ಟು ಕೋಟಿ ಬಾಕಿ ಉಳಿಸಿಕೊಂಡಿರಬಹುದೆಂಬ ಬಗ್ಗೆ ಈಗ ಸರ್ಕಾರ ಲೆಕ್ಕಾಚಾರ ಹಾಕಬೇಕಾಗಿದೆ.
ʻಕರ್ನಾಟಕ ಲೋಕೋಪಯೋಗಿ ಇಲಾಖೆ ಸಂಹಿತೆʼ (KPWD ಸಂಹಿತೆ)ಯ ಕಂಡಿಕೆ 55 ಇಲಾಖೆಯು ಕಟ್ಟಡಗಳ ಮಾಹಿತಿ ವ್ಯವಸ್ಥೆಯನ್ನು (ಬಿಐಸಿ) ಹೊಂದಿರಬೇಕೆಂದು ಸೂಚಿಸಿದೆ. ಆದರೆ ಈ ವ್ಯವಸ್ಥೆಯೇ ಇರಲಿಲ್ಲವಾದ್ದರಿಂದ ಇಲಾಖೆಯ ಕಟ್ಟಡಗಳ ಯಾವ ದಾಖಲೆಗಳೂ ಲಭ್ಯವಿರಲಿಲ್ಲ. ಗುತ್ತಿಗೆ ನೀಡಿದ ಒಪ್ಪಂದಗಳ ಕುರಿತೂ ಸರಿಯಾದ ರೀತಿಯಲ್ಲಿ ರೆಜಿಸ್ಟರ್ ನಿರ್ವಹಿಸಲಾಗಿರಲಿಲ್ಲ ಎಂದು ಸಿಎಜಿಯು ವರದಿಯಲ್ಲಿ ಬೊಟ್ಟು ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಇಲಾಖೆಯು, ಈ ಎಲ್ಲ ದಾಖಲೆಗಳನ್ನು ಸಂಯೋಜಿಸಲು ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಅದು ಪೂರ್ಣಗೊಂಡ ನಂತರ ಎಲ್ಲ ಕಟ್ಟಡಗಳ ಮತ್ತು ಇಲಾಖೆಯು ಹೊಂದಿರುವ ಭೂಮಿಯ ಮಾಹಿತಿಯನ್ನು ಅದಕ್ಕೆ ಅಪ್‌ಲೋಡ್ ಮಾಡಲಾಗುತ್ತದೆ ಎಂದು ತಿಳಿಸಿದೆ ಎಂದು ಸಿಎಜಿ ವರದಿಯಲ್ಲಿ ದಾಖಲಿಸಲಾಗಿದೆ.
ಇಲಾಖೆಯು ಪ್ರಮುಖ ಸ್ಥಳಗಳಲ್ಲಿ ಹೊಂದಿರುವ ಕಟ್ಟಡಗಳ ಅಥವಾ ಭೂಮಿಯನ್ನ ಗುತ್ತಿಗೆಗೆ ಅಥವಾ ಬಾಡಿಗೆಗೆ ನೀಡುವಾಗ ನ್ಯಾಯಾಯುತವಾದ ಬಾಡಿಗೆ/ಗುತ್ತಿಗೆ ನಿಗದಿಪಡಿಸಲು ಸಮಿತಿಯೊಂದನ್ನು ರಚಿಸಬೇಕೆಂದು KPWD ಸಂಹಿತೆಯು ಹೇಳಿದೆ. ಆದರೆ ಸಿಎಜಿಯು ಗಮನಿಸುವವರೆಗೂ ಇಲಾಖೆ ಈ ರೀತಿಯ ಸಮಿತಿಯೊಂದನ್ನು ರಚಿಸಿಯೇ ಇರಲಿಲ್ಲ.
ಸಿಎಜಿಯು ಈ ಬಗ್ಗೆ ಇಲಾಖೆಯ ಗಮನ ಸೆಳೆದ ನಂತರ 2023ರಲ್ಲಿ ಮೂವರು ಮುಖ್ಯ ಇಂಜಿನಿಯರುಗಳನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಅದಕ್ಕೂ ಮೊದಲು ಸಮಿತಿಯೇ ಇಲ್ಲದೆ, ಬಾಡಿಗೆ ಅಥವಾ ಗುತ್ತಿಗೆಗೆ ನೀಡಿದ ಪ್ರಕರಣದಲ್ಲಿ ನ್ಯಾಯಾಯುತವಾದ ದರ ನಿಗದಿಪಡಿಸಲಾಗಿತ್ತೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ಲೆಕ್ಕಪರಿಶೀಲನೆಯ ವೇಳೆಯಲ್ಲಿ ಸಿಎಜಿಗೇ ಸಾಧ್ಯವಾಗಿರಲಿಲ್ಲ ಎಂದು ವರದಿಯಲ್ಲಿ ಅಸಹಾಯಕತೆ ವ್ಯಕ್ತಪಡಿಸಲಾಗಿದೆ.
ಹಣಕಾಸು ಇಲಾಖೆಯ ಒಪ್ಪಿಗೆಯೇ ಇಲ್ಲ
KPWD ಸಂಹಿತೆಯ ಪ್ರಕಾರ ಸರ್ಕಾರದ ಭೂಮಿಯನ್ನು ಬೇರೆ ಯಾವುದಾದರೂ ಸರ್ಕಾರಿ ಏಜೆನ್ಸಿಗೆ ಗುತ್ತಿಗೆ ನೀಡುವುದಾದರೆ ಸರ್ಕಾರವು ಹಣಕಾಸು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಬಾಡಿಗೆಯನ್ನು ನಿಗದಿಪಡಿಸಬೇಕಾಗಿರುತ್ತದೆ. ಆದರೆ ಸಿಎಜಿಯು ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಿದ 28 ಜಮೀನು ನೀಡಿಕೆ ಪ್ರಕರಣಗಳಲ್ಲಿ, 20 ಪ್ರಕರಣಗಳ ಗುತ್ತಿಗೆ ಬಾಡಿಗೆಯನ್ನು ನಿಗದಿಪಡಿಸಲು ಹಣಕಾಸು ಇಲಾಖೆಯನ್ನು ಸಂಪರ್ಕಿಸಿಯೇ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಈ 20 ಪ್ರಕರಣಗಳಲ್ಲಿ ನಾಲ್ಕರಲ್ಲಿ ಹಣಕಾಸು ಇಲಾಖೆ ಮತ್ತು ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆದ ನಂತರ ಗುತ್ತಿಗೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಇದಕ್ಕೆ ಯಾವುದೇ ದಾಖಲಾತಿ ಸಾಕ್ಷ್ಯವನ್ನು ಒದಗಿಸಲಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಗುತ್ತಿಗೆ ಬಾಡಿಗೆಯನ್ನು ಸರಿಯಾಗಿ ಮತ್ತು ಸಮಯೋಚಿತವಾಗಿ ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳಲು, ಬೇಡಿಕೆಯ ನಿರ್ವಹಣೆ, ಸಂಗ್ರಹಣೆ ಮತ್ತು ಬಾಕಿಗಳ ನೋಂದಣಿ (ಡಿಸಿಬಿ) ಪುಸ್ತಕವನ್ನು ನಿರ್ವಹಿಸಬೇಕಿರುತ್ತದೆ. ಸಿಎಜಿಯು ಲೆಕ್ಕಪರಿಶೋಧನೆ ನಡೆಸಿದ ಯಾವುದೇ ವಿಭಾಗದಲ್ಲಿಯೂ ಈ ರೀತಿಯ ಪುಸ್ತಕವನ್ನು ನಿರ್ವಹಿಸಲಾಗಿರಲೇ ಇಲ್ಲ. ಬಾಡಿಗೆ ವಸೂಲಿಗೆ ಸಂಬಂಧಿಸಿದಂತೆ ಖಜಾನೆ ಖಾತೆಗಳೊಂದಿಗೆ ಸಮನ್ವಯವನ್ನು ನಡೆಸಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಬಗ್ಗೆ ಸಿಎಜಿಯು ಗಮನ ಸೆಳೆದಾಗ ಸರ್ಕಾರ ಬಾಡಿಗೆಗಳ ನೋಂದಣಿ ಪುಸ್ತಕವನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಿತಾದರೂ ಸಿಎಜಿಗೆ ಅದನ್ನು ಒಪ್ಪಿಸಿರಲಿಲ್ಲ. ಅಲ್ಲದೆ, ಇನ್ನು ಮುಂದೆ ಡಿಸಿಬಿ ರಿಜಿಸ್ಟರ್‌ಗಳನ್ನು ನಿರ್ವಹಿಸಲು ಎಲ್ಲ ವಿಭಾಗಗಳಿಗೆ ಅಗತ್ಯ ಸೂಚನೆಗಳನ್ನು ಮತ್ತೊಮ್ಮೆ ನೀಡಲಾಗುವುದು ಎಂದು ಹೇಳಿ ಈ ಲೋಪವನ್ನು ಮುಚ್ಚುವ ಕೆಲಸ ಮಾಡಿದೆ ಎಂದು ಸಿಎಜಿ ವರದಿಯಲ್ಲಿ ದಾಖಲಿಸಲಾಗಿದೆ.
ಇಲಾಖೆಯ ಜಮೀನು ಅಥವಾ ಕಟ್ಟಡವನ್ನು ಬೇರೆಯವರಿಗೆ ಗುತ್ತಿಗೆ ನೀಡಿದಾಗ ಗುತ್ತಿಗೆ ಕರಾರರುಗಳನ್ನು ನೋಂದಣಿ ಮಾಡಿಸಬೇಕಿರುತ್ತದೆ. ಸಿಎಜಿ ಪರೀಕ್ಷೆಗೆ ಒಳಪಟ್ಟ ವಿಭಾಗಗಳಲ್ಲಿನ 149 ಗುತ್ತಿಗೆ ನೀಡಿದ ಪ್ರಕರಣಗಳಲ್ಲಿ 64 ಪ್ರಕರಣಗಳ ಗುತ್ತಿಗೆ ಕರಾರುಗಳನ್ನು ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಯೇ ಇರಲಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.
ಸಿಎಜಿಯು ಈ ಬಗ್ಗೆ ಗಮನ ಸೆಳೆದ ಮೇಲೆ ಸರ್ಕಾರವು ಈ ಎಲ್ಲ ಗುತ್ತಿಗೆ ಒಪ್ಪಂದವನ್ನು ನೋಂದಾಯಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಮೊದಲೇ ನೋದಾಯಿಸದೇ ಕಾರ್ಯಾಚರಣೆ ನಡೆಸಲು ಅನುವು ಮಾಡಿಕೊಟ್ಟಿದ್ದರಿಂದ ಸರ್ಕಾರಕ್ಕೆ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ಆದಾಯದ ನಷ್ಟ ಉಂಟಾಗಿದೆ ಎಂದು ಸಿಎಜಿ ವರದಿಯು ಗಮನ ಸೆಳೆದಿದೆ.
ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ
ಗುತ್ತಿಗೆ ನೀಡುವಲ್ಲಿನ ಎಲ್ಲ ಲೋಪಗಳಿಗೆ ವಿಭಾಗ ಮಟ್ಟದ ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ ಎಂದು ಸಿಎಜಿಯು ನೇರವಾಗಿ ಬೊಟ್ಟು ಮಾಡಿದ್ದು, ಗುತ್ತಿಗೆ ನೀಡುವಲ್ಲಿ ನಿಗದಿತ ಕಾರ್ಯವಿಧಾನ ಅನುಸರಿಸದೇ ಇರುವುದು, ನಿಗದಿತ ನಿಯಂತ್ರಣ ರೆಜಿಸ್ಟರ್‌ಗಳು ಮತ್ತು ಇತರ ದಾಖಲೆಗಳ ನಿರ್ವಹಣೆ ಮಾಡದಿರುವುದು, ಗುತ್ತಿಗೆಯನ್ನು ಸಕಾಲದಲ್ಲಿ ನವೀಕರಿಸದೇ ಇರುವುದು, ಗುತ್ತಿಗೆ ಪಡೆದವರು ಷರತ್ತುಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸದೇ ಇರಲು ಈ ಅಧಿಕಾರಿಗಳು ಮೇಲ್ವಿಚಾರಣೆ ನಡೆಸದಿರುವುದೇ ಕಾರಣ ಎಂದು ಸಿಎಜಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಗುತ್ತಿಗೆಯ ಬಾಡಿಗೆಯನ್ನು ಸಮಯೋಚಿತವಾಗಿ ಪರಿಷ್ಕರಣೆ ಮಾಡದೇ ಇರುವುದರಿಂದ ಮತ್ತು ಗುತ್ತಿಗೆ ಬಾಡಿಗೆಯನ್ನು ಮತ್ತು ಇತರ ಮೊತ್ತಗಳನ್ನು ಗುತ್ತಿಗೆ ದಾರರಿಂದ ಸರಿಯಾದ ಸಮಯಕ್ಕೆ ಸಂಗ್ರಹಿಸದೇ ಇರುವುದರಿಂದ ಇಲಾಖೆಗೆ ಕೋಟ್ಯಂತರ ರು. ನಷ್ಟವಾಗುತ್ತಿದೆ ಎಂದು ಸಿಎಜಿ ವರದಿಯು ತಿಳಿಸಿದೆ.
ಯಾವುದೇ ವಿಭಾಗಗಳಲ್ಲಿ ತಪಾಸಣಾ ನೋಂದಣಿಯನ್ನು ನಿರ್ವಹಿಸಲಾಗಿರಲಿಲ್ಲ. ಬೆಂಗಳೂರು, ಮೈಸೂರು ಮತ್ತು ಕಲಬುರಗಿ ವಿಭಾಗಗಳಲ್ಲಿ ಗುತ್ತಿಗೆ ನೀಡಿದ ಆಸ್ತಿಯನ್ನು ವರ್ಷದಲ್ಲಿ ಒಮ್ಮೆಯೂ ಪರಿಶೀಲಿಸಲಾಗಿರಲಿಲ್ಲ. ಇದರಿಂದಾಗಿ ಸರ್ಕಾರಿ ಜಮೀನು ಮತ್ತು ಕಟ್ಟಡಗಳನ್ನು ಗುತ್ತಿಗೆದಾರರು ಅನಧಿಕೃತ ಒತ್ತುವರಿ ಮಾಡಿಕೊಳ್ಳಲು ಹಾಗೂ ಗುತ್ತಿಗೆ ನೀಡಲಾದ ಆಸ್ತಿಗಳ ದುರುಪಯೋಗಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿತ್ತು ಎಂದು ಸಿಎಜಿಯ ವರದಿಯಲ್ಲಿ ಹೇಳಲಾಗಿದೆ.
ಬಾಡಿಗೆದಾರರ ಆಯ್ಕೆ ಮತ್ತು ಗುತ್ತಿಗೆ ಬಾಡಿಗೆ ನಿಗದಿಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಪಾರದರ್ಶಕ ನೀತಿಯೇ ಇರಲಿಲ್ಲ ಎಂದು ಸಿಎಜಿಯ ವರದಿಯು ಬಹಳ ಮುಖ್ಯವಾಗಿ ಈ ವರದಿಯಲ್ಲಿ ಹೇಳಿದೆ.
ಕಟ್ಟಡಗಳ ಮಾಹಿತಿ ವ್ಯವಸ್ಥೆ (ಬಿಐಎಸ್), ಬಾಡಿಗೆ ರೆಜಿಸ್ಟರ್‌ಗಳನ್ನು ನಿಯಮಿತವಾಗಿ ನಿರ್ವಹಿಸುವಂತೆ ಮತ್ತು ನಿಯಮಿತವಾಗಿ ತಪಾಸಣೆ ನಡೆಸುವಂತೆ, ಆಸ್ತಿಗಳ ಗುತ್ತಿಗೆ ಮತ್ತು ಬಾಡಿಗೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ KPWD ಸಂಹಿತೆಯನ್ನು ಕೆಎಫ್‌ಸಿಯ ನಿಬಂಧನೆಗಳನ್ನು ಅನುಸರಿಸುವಂತೆ ಇಲಾಖೆಗೆ ಸರ್ಕಾರವು ಸೂಚನೆ ನೀಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಪಿಡಬ್ಲ್ಯುಡಿಯಲ್ಲಿ ಜಿಂಕೆ ವೇಗದ ಕೆಲಸ; ಬಿಜೆಪಿ ಅವಧಿಯಲ್ಲಿ ನಿಯಮ ಬಾಹಿರವಾಗಿ 21.23 ಕೋಟಿ ಪಾವತಿ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ ಬಳ್ಳಾರಿ ಮತ್ತು ಕೊಪ್ಪಳ ವಿಭಾಗದಲ್ಲಿ ಕೇವಲ 21 ದಿನಗಳ ಅಲ್ಪ ಅವಧಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಿದ್ದ ಗುತ್ತಿಗೆದಾರಿಗೆ ನಿಯಮಬಾಹಿರವಾಗಿ 21.23 ಕೋಟಿ ಹಣವನ್ನೂ ಪಾವತಿಸಿರುವ ಪ್ರಕರಣವನ್ನು ಸಿಎಜಿ ಪತ್ತೆ ಹಚ್ಚಿತ್ತು. ಈ ಕುರಿತು ʻದಿ ಫೈಲ್ʼ ವಿವರವಾದ ವರದಿ ಪ್ರಕಟಿಸಿತ್ತು.