ಬೆಂಗಳೂರು; ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2024-25ನೇ ಸಾಲಿನಲ್ಲಿ ಆಹಾರ ಧಾನ್ಯಗಳನ್ನು ಖರೀದಿ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು 41,186 ರೈತರಿಗೆ ಇನ್ನೂ 384.23 ಕೋಟಿ ರು.ಗಳನ್ನು ಪಾವತಿಸಲು ಬಾಕಿ ಉಳಿಸಿಕೊಂಡಿದೆ.
ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಪರಿಶೀಲಿಸಲು ರಚಿಸಲಾಗಿರು ಸಚಿವ ಸಂಪುಟದ ಉಪ ಸಮಿತಿಯು 2025ರ ಜೂನ್ 5ರಂದು ನಡೆಸಿದ್ದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಹಿಂಗಾರು ಹಂಗಾಮಿನಲ್ಲಿ ರಾಜ್ಯಾದಾದ್ಯಂತ ರೈತರಿಂದ ಭತ್ತ, ರಾಗಿ ಮತ್ತು ಬಿಳಿ ಜೋಳ ಖರೀದಿ ಮಾಡಿತ್ತು. ಕನಿಷ್ಟ ಬೆಂಬಲ ಯೋಜನೆಯಡಿಯಲ್ಲಿ 13,175 ರೈತರು ನೋಂದಣಿಯಾಗಿದ್ದರು. ಈ ಪೈಕಿ 1,079 ರೈತರಷ್ಟೇ ಆಹಾರ ಧಾನ್ಯಗಳನ್ನು ನೀಡಿದ್ದರು. ಈ ರೈತರಿಂದ 70,463.50 ಕ್ವಿಂಟಾಲ್ ಪ್ರಮಾಣದಷ್ಟು ಆಹಾರ ಧಾನ್ಯವನ್ನು ಖರೀದಿಸಿತ್ತು. ಇದರ ಪ್ರಮಾಣ 23.75 ಕೋಟಿ ರುಪಾಯಿನಷ್ಟಿತ್ತು ಎಂಬುದು ನಡವಳಿಯಿಂದ ತಿಳಿದು ಬಂದಿದೆ.
2,300 ಕ್ವಿಂಟಾಲ್ ಭತ್ತ, 3,371 ಕ್ವಿಂಟಾಲ್ ಬಿಳಿ ಜೋಳ ಖರೀದಿಸಲಾಗಿತ್ತು. ಈ ಪೈಕಿ ಕೇವಲ 5 ಮಂದಿ ರೈತರು ನೋಂದಣಿಯಾಗಿದ್ದರು. ಬಿಳಿ ಜೋಳ ಮಾರಾಟ ಮಾಡಲು 13,175 ರೈತರು ನೋಂದಣಿಯಾಗಿದ್ದರು.
ಮುಂಗಾರು ಹಂಗಾಮಿನಲ್ಲಿ 47,78,328.50 ಕ್ವಿಂಟಾಲ್‌ನಷ್ಟು ರಾಗಿ, ಬಿಳಿ ಜೋಳ ಮತ್ತು ಭತ್ತವನ್ನು 2,02,376 ರೈತರಿಂದ ಖರೀದಿಸಿತ್ತು. ಈ ಆಹಾರ ಧಾನ್ಯದ ಮೌಲ್ಯ 1,622.11 ಕೋಟಿಯಷ್ಟಿತ್ತು. ಈ ಪೈಕಿ 1,61,190 ರೈತರಿಗೆ ಡಿಬಿಟಿ ಮೂಲಕ 1,237.88 ಕೋಟಿಯನ್ನು ಪಾವತಿ ಮಾಡಲಾಗಿತ್ತು. ಇನ್ನೂ 41,186 ರೈತರಿಗೆ 384.23 ಕೋಟಿಯಷ್ಟು ಡಿಬಿಟಿ ಮೂಲಕ ಪಾವತಿ ಮಾಡಲು ಬಾಕಿ ಇರುವುದು ನಡವಳಿಯಿಂದ ಗೊತ್ತಾಗಿದೆ.
37,35,897 ಕ್ವಿಂಟಾಲ್ ಪ್ರಮಾಣದಲ್ಲಿ ರಾಗಿಯನ್ನು 1,87,241 ರೈತರು ನೀಡಿದ್ದರು. ಇದರ ಮೌಲ್ಯ 1,271.24 ಕೋಟಿಯಷ್ಟಿತ್ತು. ಈ ಪೈಕಿ 1,52,258 ರೈತರಿಗೆ 1,021.76 ಕೋಟಿ ರು.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿತ್ತು. 18,87,399.50 ಕ್ವಿಂಟಾಲ್ ಬಿಳಿ ಜೋಳವನ್ನು 14,976 ರೈತರು ನೀಡಿದ್ದರು. ಇದರ ಮೌಲ್ಯ 349.71 ಕೋಟಿಯಷ್ಟಿತ್ತು. 8,776 ರೈತರಿಗೆ 214.98 ಕೋಟಿ ಪಾವತಿ ಮಾಡಲಾಗಿತ್ತು.
5,031 ಕ್ವಿಂಟಾಲ್ ಭತ್ತವನ್ನು 2,02,376 ರೈತರಿಂದ ಖರೀದಿಸಲಾಗಿತ್ತು. ಇದರ ಮೌಲ್ಯ 1,622.11 ಕೋಟಿಯಷ್ಟಿತ್ತು. ಈ ಪೈಕಿ 1,61,190 ರೈತರಿಗೆ 1,237.88 ಕೋಟಿ ರು.ಗಳನ್ನು ಪಾವತಿಸಲಾಗಿತ್ತು.
ಏನಿದು ಕನಿಷ್ಟ ಬೆಂಬಲ ಯೋಜನೆ
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಎಂಬುದು ಕೃಷಿ ಉತ್ಪನ್ನದ ಬೆಲೆಯಲ್ಲಿ ಯಾವುದೇ ತೀವ್ರ ತರಹದ ಕುಸಿತ ಉಂಟಾದಾಗ ಕೃಷಿ ಉತ್ಪಾದಕರ ಸಹಾಯಕ್ಕೆ ಧಾವಿಸುವ ಹಣಕಾಸಿನ ನೆರವಿನ ರೂಪ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಕೆಲವು ಬೆಳೆಗಳಿಗೆ ಬಿತ್ತನೆ ಕಾಲದ ಆರಂಭದಲ್ಲಿ ಭಾರತ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗಳನ್ನು ಘೋಷಿಸುತ್ತದೆ. ಉತ್ಪಾದನೆ ಭಾರಿ ಹೆಚ್ಚಳವಾದ ವರ್ಷಗಳಲ್ಲಿ ಅತಿಯಾದ ಬೆಲೆ ಕುಸಿತವಾದ ಸಂದರ್ಭಗಳಲ್ಲಿ ಉತ್ಪಾದಕ ರೈತರನ್ನು ರಕ್ಷಿಸುವ ಉದ್ದೇಶದಿಂದ ಕನಿಷ್ಟ ಬೆಂಬಲ ಬೆಲೆಯನ್ನು ಭಾರತ ಸರ್ಕಾರ ನಿಗದಿಪಡಿಸುತ್ತದೆ.
ಕನಿಷ್ಠ ಬೆಂಬಲ ಬೆಲೆಗಳು ಸರ್ಕಾರದಿಂದ ಕೃಷಿ ಉತ್ಪನ್ನಗಳಿಗೆ ಮಾರಾಟದ ಖಾತರಿ ನೀಡುತ್ತದೆ. ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭಗಳಲ್ಲಿ ಎದುರಾಗುವ ಅಡೆತಡೆಗಳನ್ನು ಕನಿಷ್ಠ ಬೆಂಬಲ ಬೆಲೆ ನಿವಾರಣೆ ಮಾಡಲಿದೆ. ಒಂದೊಮ್ಮೆ ಭಾರಿ ಬೆಳೆ ಉತ್ಪಾದನೆಯಾಗಿ ಸರಕುಗಳ ಮಾರುಕಟ್ಟೆ ಬೆಲೆ ಘೋಷಿತ ಕನಿಷ್ಠ ಬೆಲೆಗಿಂತ ಕಡಿಮೆಯಾಗುವ ಸಂದರ್ಭಗಳಲ್ಲಿರೈತರು ನೀಡುವ ಸಂಪೂರ್ಣ ಪ್ರಮಾಣದ ಬೆಳೆಯನ್ನು ಘೋಷಿಸಿದ ಕನಿಷ್ಠ ಬೆಲೆಗೆ ಸರ್ಕಾರಿ ಸಂಸ್ಥೆಗಳೇ ನೇರವಾಗಿ ಖರೀದಿಸುತ್ತವೆ.
ಸರ್ಕಾರವು ಕಡ್ಡಾಯವಾಗಿ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್‌ಪಿ) ಮತ್ತು ಕಬ್ಬಿಗೆ ನ್ಯಾಯಯುತ ಮತ್ತು ಸಂಭಾವನೆ ದರವನ್ನು (ಎಫ್ಆರ್‌ಪಿ) ಬೆಲೆ ಕುಸಿತದ ವಿವಿಧ ಸಂದರ್ಭಗಳಲ್ಲಿ ಪ್ರಕಟಿಸುತ್ತದೆ. ಕಡ್ಡಾಯ ಬೆಳೆಗಳು ಖಾರಿಫ್ ಕಾಲದ 14 ಬೆಳೆಗಳು, 6 ರಾಬಿ ಬೆಳೆಗಳು ಮತ್ತು ಇತರ ಎರಡು ವಾಣಿಜ್ಯ ಬೆಳೆಗಳನ್ನು ಒಳಗೊಂಡಿವೆ. ಇದಲ್ಲದೆ, ಟೊರಿಯಾ ಮತ್ತು ಡಿ-ಹಸ್ಕ್ ತೆಂಗಿನಕಾಯಿಯ ಎಂಎಸ್‌ಪಿಗಳನ್ನು ಕ್ರಮವಾಗಿ ರಾಪ್ಸೀಡ್/ಸಾಸಿವೆ ಮತ್ತು ಕೊಪ್ರಾಗಳ ಎಂಎಸ್‌ಪಿಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ.
ಸಿರಿಧಾನ್ಯಗಳು (7) – ಭತ್ತ, ಗೋಧಿ, ಬಾರ್ಲಿ, ಜೋವರ್, ಬಜ್ರಾ, ಮೆಕ್ಕೆ ಜೋಳ ಮತ್ತು ರಾಗಿ, ದ್ವಿದಳ ಧಾನ್ಯಗಳು (5) ಕಡಲೆ, ಅರ್ಹರ್/ತೊಗರಿ , ಹೆಸರು, ಉದ್ದು ಮತ್ತು ಮಸೂರ, ಎಣ್ಣೆಕಾಳುಗಳು (8) – ನೆಲಗಡಲೆ, ರಾಪ್ಸೀಡ್/ ಸಾಸಿವೆ, ಟೋರಿಯಾ, ಸೋಯಾಬೀನ್, ಸೂರ್ಯಕಾಂತಿ ಬೀಜ, ಎಳ್ಳು, ಕುಂಕುಮ ಬೀಜ ಮತ್ತು ನೈಗರ್ ಬೀಜ, ಕಚ್ಚಾ ಹತ್ತಿ, ಕಚ್ಚಾ ಸೆಣಬು, ಕೊಪ್ರಾ, ಡಿ-ಹಸ್ಕ್ಡ್ ತೆಂಗಿನಕಾಯಿ, ಕಬ್ಬು (ನ್ಯಾಯೋಚಿತ ಮತ್ತು ಸಂಭಾವನೆ ಬೆಲೆ) ವರ್ಜೀನಿಯಾ ಫ್ಲೂ ಕ್ಯೂರ್ಡ್ (ವಿಎಫ್‌ಸಿ) ತಂಬಾಕು ಬೆಳೆಗಳು ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಯಲ್ಲಿ ಬರುತ್ತವೆ.