ಹಿಂಗಾರು ಹಂಗಾಮಿನ ಬಿಳಿ ಜೋಳ ಖರೀದಿ; ರಾಜ್ಯ ಬೊಕ್ಕಸಕ್ಕೆ 250 ಕೋಟಿ ಹೊರೆ ಬೀಳಲಿದೆಯೇ?

ಬೆಂಗಳೂರು; ರಾಜ್ಯ ಉಗ್ರಾಣ ನಿಗಮದ ಮೂಲಕ ಸಂಗ್ರಹವಾಗುವ ಹಿಂಗಾರು ಹಂಗಾಮಿನ ಬಿಳಿ ಜೋಳವು ಒಂದೊಮ್ಮೆ ಮಾನವ ಬಳಕೆಗೆ ಯೋಗ್ಯವಾಗಿರದಿದ್ದರೇ ರಾಜ್ಯ ಬೊಕ್ಕಸಕ್ಕೆ ಅಂದಾಜು 50ರಿಂದ 250 ಕೋಟಿ ರುಪಾಯಿಗಳ ಹೊರೆಬೀಳಲಿದೆ.

 

ಕೃಷಿ ಉತ್ಪನ್ನ ತೋಟಗಾರಿಕೆ ಉತ್ಪನ್ನಗಳ ಬೆಂಬಲ ಬೆಲೆ ನಿಗದಿಪಡಿಸುವ ಸಂಬಂಧ ಸಚಿವ ಎನ್‌ ಚೆಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿರುವ ಸಂಪುಟ ಉಪ ಸಮಿತಿಯು  2025ರ ಜೂನ್‌ 5ರಂದು  ಪರಿಶೀಲನೆ ನಡೆಸಿತ್ತು. ಈ ಸಮಿತಿಯು  ಈ  ನಷ್ಟವನ್ನು ಅಂದಾಜಿಸಿದೆ.

 

 

ಸಚಿವ ಸಂಪುಟ ಉಪ ಸಮಿತಿ ಸಭೆಯ ನಡವಳಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಕೇಂದ್ರ ಸರ್ಕಾರದ ಅನುಮೋದನೆ ಮೇರೆಗೆ 2024-25ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 10.43 ಲಕ್ಷ ಕ್ವಿಂಟಾಲ್‌ (2025ರ ಜೂನ್‌ 3ರ ಅಂತ್ಯಕ್ಕೆ)  ಬಿಳಿ ಜೋಳವನ್ನು ಖರೀದಿ ಮಾಡಲಾಗಿತ್ತು. ಖರೀದಿ ಮಾಡಿರುವ ಈ ಜೋಳವನ್ನು 2025ರ ಅಕ್ಟೋಬರ್‍‌ ಕೊನೆಯವರೆಗೆ ಸಾರ್ವಜನಿಕ ವಿತರಣಾ ಪದ್ಧತಿ ಮೂಲಕ ವಿತರಣೆ ಮಾಡಬೇಕಿದೆ. ಹೀಗಾಗಿ 2024-25ನೇ ಸಾಲಿನ  ಹಿಂಗಾರು ಹಂಗಾಮಿನ ಬಿಳಿ ಜೋಳವನ್ನು ಖರೀದಿಸಬೇಕಿದೆ.

 

ಆದರೆ ಈ ಜೋಳವನ್ನು ಖರೀದಿ ಮಾಡುವಾಗ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಫ್‌ಎ ಕ್ಯೂ ಮಾನದಂಡಗಳನ್ನು ಅನುಸರಿಸಬೇಕು. ಈಗಾಗಲೇ ಸಂಗ್ರಹಿಸುತ್ತಿರುವ ಕೇಂದ್ರ ಉಗ್ರಾಣ ನಿಗಮವನ್ನು ಬದಲಾಯಿಸಿ ರಾಜ್ಯ ಉಗ್ರಾಣ ನಿಗಮದ ಮೂಲಕ ಬಿಳಿ ಜೋಳ ಸಂಗ್ರಹಿಸಿದಲ್ಲಿ ಹಾಗೂ ಎಫ್‌ ಎ ಕ್ಯೂ ಗುಣಮಟ್ಟದಲ್ಲಿ ಯಾವುದಾದರೂ ರಾಜಿ ಮಾಡಿಕೊಂಡಲ್ಲಿ 2025ರ ನವೆಂಬರ್‍‌ ತಿಂಗಳ ನಂತರ ಈ ಬಿಳಿ ಜೋಳದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟಕರ ಎಂದು ಉಪ ಸಮಿತಿಯು ಆತಂಕ ವ್ಯಕ್ತಪಡಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಯೋಗ್ಯವಾಗಿದ್ದಲ್ಲಿ ಮಾತ್ರ ಎತ್ತುವಳಿ

 

ಬಿಳಿ ಜೋಳವನ್ನು   ಪ್ರತಿ ತಿಂಗಳು ವಿತರಣೆಗೆ ನೀಡುವ ಮುನ್ನ ಮಾನವ ಬಳಕೆಗೆ ಯೋಗ್ಯವೇ, ಗುಣಮಟ್ಟದಿಂದ ಕೂಡಿದೆಯೇ  ಎಂಬುದರ ಬಗ್ಗೆ ಪ್ರಯೋಗಾಲಯದಿಂದ ವರದಿ ಪಡೆಯಬೇಕು. ಉಪಯೋಗಿಸಲು ಯೋಗ್ಯವಾಗಿದ್ದಲ್ಲಿ ಮಾತ್ರ ಎತ್ತುವಳಿ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಗುಣಮಟ್ಟದಲ್ಲಿ ಯಾವುದಾದರೂ ಲೋಪವಾದಲ್ಲಿ ಪಡಿತರದಾರರಿಂದ ವ್ಯಾಪಕವಾದ ದೂರುಗಳು ಬರುವ ಸಂಭವವಿದೆ ಎಂದು ಉಪ ಸಮಿತಿಯು ಅಧಿಕಾರಿಗಳನ್ನು ಎಚ್ಚರಿಸಿದೆ.

 

ಬೊಕ್ಕಸಕ್ಕೆ 250 ಕೋಟಿ ಹೊರೆ?

 

‘ಮಾನವ ಬಳಕೆಗೆ ಯೋಗ್ಯವೇ ಎಂಬುದರ ಬಗ್ಗೆ ಬಿಳಿ ಜೋಳದ ಗುಣಮಟ್ಟದ ಬಗ್ಗೆ ಪ್ರಯೋಗಾಲಯದಿಂದ ವರದಿ ಪಡೆದಾಗ ಮಾನವ ಬಳಕೆಗೆ ಯೋಗ್ಯವಿಲ್ಲ ಎಂಬ ಬಗ್ಗೆ ವರದಿ ಬಂದಲ್ಲಿ ಸದರಿ ಬಿಳಿ ಜೋಳವನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕಾಗುತ್ತದೆ. ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಅಂದಾಜು 50ರಿಂದ 250 ಕೋಟಿಗಳ ಹೊರೆಬೀಳುವ ಸಾಧ್ಯತೆಯಿರುತ್ತದೆ,’ ಎಂದು ಉಪ ಸಮಿತಿಯು ಆತಂಕ ವ್ಯಕ್ತಪಡಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

 

 

ಒಂದೊಮ್ಮೆ ಮಾನವ ಬಳಕೆಗೆ ಯೋಗ್ಯವಿಲ್ಲ ಎಂದು ಪ್ರಯೋಗಾಲಯದ ವರದಿ ಬಂದಲ್ಲಿ ನಿಯಮಾನುಸಾರ ಈ ಲಾಟನ್ನು ವಿಲೇವಾರಿ ಮಾಡಬೇಕಾಗುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಅಂದಾಜು 50ರಿಂದ 250 ಕೋಟಿ ರು ಗಳ ಹೊರೆಯನ್ನು ಕರ್ನಾಟಕ ಸರ್ಕಾರದಿಂದ ಆವರ್ತ ನಿಧಿಯಿಂದ ಭರಿಸಬೇಕು ಎಂದೂ ಉಪ ಸಮಿತಿಯು ತೀರ್ಮಾನ ಕೈಗೊಂಡಿರುವುದು ಗೊತ್ತಾಗಿದೆ.

 

 

ಹಿಂಗಾರು ಹಂಗಾಮಿನಲ್ಲಿ ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ ಬದಲಾಗಿ 20 ಕ್ವಿಂಟಾಲ್‌ ಖರೀದಿಸಲು ಒಪ್ಪಿಕೊಳ್ಳುವುದರ ಬಗ್ಗೆಯೂ ಉಪ ಸಮಿತಿಯು ಚರ್ಚಿಸಿದೆ. 20 ಕ್ವಿಂಟಾಲ್‌ ಖರೀದಿಸಲು ಒಪ್ಪಿಕೊಂಡು ಖರೀದಿ ಮುಂದುವರೆಸಿದ್ದಲ್ಲಿ ಹಿಂಗಾರು ಹಂಗಾಮಿನ ಗುಣಮಟ್ಟವಿಲ್ಲದ ಹೆಚ್ಚು ಪ್ರಮಾಣದ ಬಿಳಿ ಜೋಳವನ್ನು ಖರೀದಿಸುವ ಸ್ಥಿತಿ ಉದ್ಭವವಾಗುತ್ತದೆ ಎಂದೂ ಅಧಿಕಾರಿಗಳನ್ನು ಉಪ ಸಮಿತಿಯು ಎಚ್ಚರಿಸಿದೆ.

 

ಪ್ರಸ್ತುತ ಹಂತದಲ್ಲಿ ಹಿಂಗಾರು ಹಂಗಾಮಿನಲ್ಲಿ 20 ಕ್ವಿಂಟಾಲ್‌ ಬದಲಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್‌ ಖರೀದಿಸಿದಲ್ಲಿ ಮುಂದಿನ ದಿನಗಳಲ್ಲಿ ಗುಣಮಟ್ಟದಲ್ಲಿ ವ್ಯತ್ಯಯವಾದರೂ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ ಎಂದು ಉಪ ಸಮಿತಿಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ರಾಜ್ಯ ಉಗ್ರಾಣ ನಿಗಮವೇ ಖರೀದಿ ಏಜೆನ್ಸಿಯಾಗಿರಲಿ

 

ಸಂಪುಟ ಉಪ ಸಮಿತಿಯು ಬಿಳಿ ಜೋಳವನ್ನು ಬೆಳೆಯುವ ರೈತರ ಹಿತದೃಷ್ಟಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಮುಂಗಾರು ಹಂಗಾಮಿನ ಬಿಳಿ ಜೋಳವನ್ನು ಸಂಗ್ರಹಿಸಲು ರಾಜ್ಯ ಉಗ್ರಾಣ ನಿಗಮವನ್ನೇ ಸಂಗ್ರಹಣಾ ಏಜೆನ್ಸಿಯನ್ನಾಗಿ ನೇಮಿಸಲು ಒಲವು ತೋರಿದೆ. ಆದರೂ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿರುವ ಎಫ್‌ಎಕ್ಯೂ ಗುಣಮಟ್ಟವನ್ನು ಕಡ್ಡಾಯವಾಗಿ ಪಾಲಿಸಿ ದಾಸ್ತಾನು ಸ್ವೀಕರಿಸಬೇಕು ಎಂದು ಸೂಚಿಸಿದೆ.

 

ಪ್ರತಿ ಎಕರೆಗೆ 15 ಕ್ವಿಂಟಾಲ್ ಖರೀದಿ

 

ಹಿಂಗಾರು ಹಂಗಾಮಿನಲ್ಲಿ ಪ್ರತಿ ರೈತರಿಂದ ಪ್ರತಿ ಎಕರೆಗೆ 15 ಕ್ವಿಂಟಾಲ್ ನಂತೆ ಗರಿಷ್ಠ 150 ಕ್ವಿಂಟಾಲ್ ಮಿತಿಯೊಳಗೆ ಬಿಳಿ ಜೋಳದ ಖರೀದಿಸಲು ಉಪ ಸಮಿತಿಯು ಸಮ್ಮತಿಸಿದೆ.

 

ಬೆಂಬಲ ಬೆಲೆಗೆ 1,000 ಕೋಟಿ 

 

2024-25ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಖರೀದಿಸಲಾದ ಭತ್ತ, ರಾಗಿ ಮತ್ತು ಬಿಳಿಜೋಳ ಉತ್ಪನ್ನಗಳಿಗೆ ದ್ವಿತೀಯ ಮತ್ತು ತೃತೀಯ ಹಂತದಲ್ಲಿ 1,000 ಕೋಟಿ ರು ಬಿಡುಗಡೆ ಮಾಡಲು ಉಪ ಸಮಿತಿಯು ತೀರ್ಮಾನಿಸಿದೆ.

 

ಭತ್ತ, ರಾಗಿ, ಬಿಳಿ ಜೋಳ ಖರೀದಿಸಲು ಹಾಗೂ ಆಹಾರ ಧಾನ್ಯ ಮಾರಾಟ ಮಾಡಿದ ರೈತರಿಗೆ ಡಿಬಿಟಿ ಮೂಲಕ ಹಣ ಪಾವತಿ ಮಾಡಲು ಆವರ್ತ ನಿಧಿಯಿಂದ ದ್ವಿತೀಯ ಮತ್ತು ತೃತೀಯ ಹಂತದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆದು 1,000 ಕೋಟಿ ರು.ಗಳ ಮೊತ್ತವನ್ನು ಬಿಡುಗಡೆ ಮಾಡಲು ಸಮ್ಮತಿಸಿದೆ.

 

ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಹಣ ಬಿಡುಗಡೆಯಾದ ಕೂಡಲೇ ಈ ಮೊತ್ತವನ್ನು ಆವರ್ತ ನಿಧಿಗೆ ಮರುಪಾವತಿಸುವ ಷರತ್ತಿಗೊಳಪಟ್ಟು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮಕ್ಕೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಬಿಡುಗಡೆ ಮಾಡಲು ಈಗಾಗಲೇ ಹೊರಡಿಸಿರುವ ಆದೇಶಕ್ಕೆ ಉಪ ಸಮಿತಿಯು ಮಂಜೂರು ಮಾಡಿತ್ತು.

ಆವರ್ತ ನಿಧಿಯಲ್ಲಿರುವುದು ಕೇವಲ 189 ಕೋಟಿ, ಬಾಕಿ ಬರಬೇಕಿದೆ 2,500 ಕೋಟಿ

 

ಬೆಲೆ ವ್ಯತ್ಯಾಸ ಪಾವತಿಗೆ 100 ಕೋಟಿ

 

ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (Price Deficency Payment Scheme-PDPS) ಅಡಿ 0.73 ಲಕ್ಷ ಮೆಟ್ರಿಕ್ ಟನ್‌ ಪ್ರಮಾಣದ  ಒಣ  ಮೆಣಸಿನಕಾಯಿ ಖರೀದಿಸಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಈ ಪ್ರಮಾಣಕ್ಕೆ ಅಂದಾಜು 800 ಕೋಟಿ ರು ಆಗಲಿದೆ. ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸವು ಶೇ.25ರಂತೆ ಲೆಕ್ಕ ಹಾಕಿದಲ್ಲಿ ಅಂದಾಜು ಗರಿಷ್ಠ 200 ಕೋಟಿ ರು ಆಗಲಿದೆ. ಈ ಹಣವನ್ನು 50;50ರ ಅನುಪಾತದಲ್ಲಿ ಭರಿಸಬೇಕಾಗುತ್ತದೆ.

 

 

ಇದರ ಪ್ರಕಾರ ರಾಜ್ಯ ಸರ್ಕಾರವು 100 ಕೋಟಿ ರು ಗಳನ್ನು ಭರಿಸಬೇಕಾಗುತ್ತದೆ. ಈ ಹಣವನ್ನು ಕರ್ನಾಟಕ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿಗೆ ಬಿಡುಗಡೆ ಮಾಡಲು ಸಭೆಯು ತೀರ್ಮಾನಿಸಿರುವುದು ಗೊತ್ತಾಗಿದೆ.

 

ಆವರ್ತ ನಿಧಿಗೆ 640.94 ಕೋಟಿ

 

ರಾಜ್ಯ ಸರ್ಕಾರದ ಪ್ರೋತ್ಸಾಹ ಧನದ ಮೊತ್ತವನ್ನು ಆವರ್ತ ನಿಧಿಯ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸಂಪುಟ ಉಪ ಸಮಿತಿಯು ಸಮ್ಮತಿಸಿದೆ.

 

 

ಇದರ ಪ್ರಕಾರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ 376.58 ಕೋಟಿ ರು., ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ 187.85 ಕೋಟಿ ರು., ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ 46.39 ಕೋಟಿ ರು., ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಗೆ 30.12 ಕೋಟಿ ರು ಸೇರಿ ಒಟ್ಟಾರೆ 640.94 ಕೋಟಿ ರು.ಗಳನ್ನು ಪಾವತಿಸಲಿದೆ.

 

 

ಈ ಹಣವನ್ನು ಈಗಾಗಲೇ ರೈತರಿಗೆ ಪಾವತಿಸಿರುವುದರಿಂದ ಆವರ್ತ ನಿಧಿಯಿಂದ ಬಿಡುಗಡೆ ಮಾಡಲಾದ ಮೊತ್ತದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆದು ಆವರ್ತ ನಿಧಿಯ ಮೊತ್ತದಲ್ಲಿ ಮರು ಹೊಂದಾಣಿಕೆ ಮಾಡಿಕೊಳ್ಳಲು ಸಂಪುಟ ಉಪ ಸಮಿತಿಯು ಒಪ್ಪಿಗೆ ಸೂಚಿಸಿದೆ.

Your generous support will help us remain independent and work without fear.

Latest News

Related Posts