ಸ್ಮಾರ್ಟ್‌ ಸಿಟಿಯ ಅವಧಿ ಮುಗಿದರೂ ಪೂರ್ಣವಾಗದ ಕಾಮಗಾರಿ; ಆಮೆಗತಿಯಲ್ಲಿ 26 ಯೋಜನೆಗಳು!

sbi research report on smart cities

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ʻಸ್ಮಾರ್ಟ್‌ ಸಿಟಿ ಮಿಷನ್‌ʼನ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ 415 ಕೋಟಿ ರು. ವೆಚ್ಚದ 26 ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ.

 

ಕೇಂದ್ರ ಸರ್ಕಾರದ ʻಸ್ಮಾರ್ಟ್‌ಸಿಟಿ ಮಿಷನ್‌ʼ ಅವಧಿ ಕಳೆದ ಮಾರ್ಚ್‌ 31 ಕ್ಕೇ ಮುಗಿದು ಹೋಗಿದೆ. ಅವಧಿ ಮುಗಿದರೂ ರಾಜ್ಯದಲ್ಲಿನ 26 ಯೋಜನೆಗಳು ಪೂರ್ಣಗೊಂಡಿರಲಿಲ್ಲ. ಈ ಸಂಬಂಧ ಕೇಂದ್ರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಮುಂದಿನ ಡಿಸೆಂಬರ್‌ ಅಂತ್ಯದ ಒಳಗೆ ಪೂರ್ಣ ಗೊಳಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

 

ಬಾಕಿ ಉಳಿದಿರುವ 26 ಕಾಮಗಾರಿಗಳಲ್ಲಿ 12 ಕಾಮಗಾರಿಗಳು ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಗೆ ಸೇರಿವೆ. 144 ಕೋಟಿ ರು. ವೆಚ್ಚದಲ್ಲಿ ಈ 12 ಕಾಮಗಾರಿಗಳನ್ನು ನಡೆಸಲಾಗುತ್ತಿದೆ.

 

ರಾಜ್ಯದ ಒಟ್ಟು ಏಳು ನಗರಗಳು ಈ ಯೋಜನೆಗೆ ಆಯ್ಕೆಯಾಗಿದ್ದವು. ಈ ನಗರಗಳಲ್ಲಿ ಒಟ್ಟು 917 ಯೋಜನೆಗಳನ್ನು 13,808 ಕೋಟಿ ರು.ಗಳ ವೆಚ್ಚದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರಲ್ಲಿ 13,393 ಕೋಟಿ ರು. ವೆಚ್ಚದ 891 ಯೋಜನೆಗಳು ಪೂರ್ಣಗೊಂಡಿವೆ. ಇನ್ನೂ 26 ಯೋಜನೆಗಳ ಕಾಮಗಾರಿ ನಡೆಯುತ್ತಿದೆ ಎಂಬುದು ಎಸ್‌ಬಿಐ ಬ್ಯಾಂಕ್‌ನ ಅಧ್ಯಯನ ವರದಿಯಿಂದ ಗೊತ್ತಾಗಿದೆ.

 

sbi research report on smart cities

 

ಎಸ್‌ಬಿಐ ಬ್ಯಾಂಕ್‌ನ ರೀಸರ್ಚ್‌ ಟೀಮ್‌ ಕಳೆದ ಏಪ್ರಿಲ್‌22ರ ವರೆಗೆ ದೇಶದ ಎಲ್ಲ ʻಸ್ಮಾರ್ಟ್‌ ಸಿಟಿʼ ಯೋಜನೆಗಳ ಕುರಿತು ಅಧ್ಯಯನ ನಡೆಸಿದ್ದು, ರಾಜ್ಯದಲ್ಲಿ ಈ ಯೋಜನೆಯಡಿ ಶೇ.97 ರಷ್ಟು ಪ್ರಾಜೆಕ್ಟ್‌ಗಳು ಪೂರ್ಣಗೊಂಡಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿಯನ್ನು ಬ್ಯಾಂಕ್‌ನ ವೆಬ್‌ಸೈಟಿನಲ್ಲಿ ಬಿಡುಗಡೆ ಮಾಡಲಾಗಿದೆ.

 

sbi research report on smart cities

 

ತಂತ್ರಜ್ಞಾನ ಆಧರಿತ, ಸಕಲ ಸೌಕರ್ಯಗಳನ್ನೊಳಗೊಂಡ, ಅತ್ಯುತ್ತಮ ಜೀವನ ಗುಣಮಟ್ಟ ನೀಡಬಲ್ಲ, ಸ್ವಚ್ಛ ಹಾಗೂ ಸುಸ್ಥಿರ ವಾತಾವರಣವನ್ನೊಳಗೊಂಡ ಮಾದರಿ ನಗರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 2015ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಜಾಗತಿಕ ಮಟ್ಟದ ನಗರಗಳ ನಿರ್ಮಾಣ ಇದರ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಆಗ ಪ್ರಕಟಿಸಿದ್ದರು.

 

ದೇಶಾದ್ಯಂತ ಒಟ್ಟು ನೂರು ನಗರಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಈ ನಗರಗಳಲ್ಲಿ 1.64 ಲಕ್ಷ ಕೋಟಿ ರು.ಗಳ 8000 ಸಾವಿರ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ ಶೇ. 90 ರಷ್ಟು ಯೋಜನೆಗಳು (1.50 ಲಕ್ಷ ಕೋಟಿ ವೆಚ್ಚದ 7,504 ಯೋಜನೆಗಳು) ಪೂರ್ಣಗೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 

sbi research report on smart cities

 

ಈಗಾಗಲೇ ಕೇಂದ್ರ ಸರ್ಕಾರ ಐದು ಬಾರಿ ಈ ಯೋಜನೆಯ ಅವಧಿಯನ್ನು ವಿಸ್ತರಿಸಿತ್ತು. ಆದರೆ 2025ರ ಮಾರ್ಚ್‌ಗೆ ಅಂತ್ಯಗೊಂಡಿದ್ದ ವೇಳೆ ವಿಸ್ತರಿಸಲಾಗಿಲ್ಲ. ಈಗ ಚಾಲ್ತಿಯಲ್ಲಿರುವ ಯೋಜನೆಗಳ ನಡೆಯುತ್ತಿರುವ ಕಾಮಗಾರಿಗಳನ್ನು ಈ ವರ್ಷದ ಡಿಸೆಂಬರ್‌ನೊಳಗೆ ಪೂರ್ಣಗೊಳಿಸಿ, ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಯಾವುದೇ ಹೊಸ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಾರದೆಂದೂ ಕೇಂದ್ರ ಸರ್ಕಾರ ತಿಳಿಸಿದೆ.

 

ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ತುಮಕೂರು ಈ ಯೋಜನೆಗೆ ಆಯ್ಕೆಯಾಗಿದ್ದವು. ಬೆಳಗಾವಿ ಮತ್ತು ತುಮಕೂರಿನಲ್ಲಿ ತಲಾ 217 ಯೋಜನೆಗಳನ್ನು ಈ ʻಸ್ಮಾರ್ಟ್‌ಸಿಟಿʼ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿತ್ತು.

 

ಬೆಳಗಾವಿಯಲ್ಲಿ 217 ಯೋಜನೆಗಳಿಗೆ 2,780 ಕೋಟಿ ರು. ವಿನಿಯೋಗಿಸಲಾಗಿದ್ದರೆ, ತುಮಕೂರಿನಲ್ಲಿ 2,099 ಕೋಟಿ ರು. ಖರ್ಚುಮಾಡಲಾಗಿದೆ ಎಂದು ಈ ಅಧ್ಯಯನ ವರದಿ ತಿಳಿಸಿದೆ.

 

ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಬೆಳಗಾವಿ ಮತ್ತು ತುಮಕೂರು ದೇಶದಲ್ಲಿಯೇ ಅತಿ ಹೆಚ್ಚು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ನಾಲ್ಕು ಮತ್ತು ಐದನೇ ನಗರಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ದಾವಣಗೆರೆಯಲ್ಲಿ 128, ಶಿವಮೊಗ್ಗದಲ್ಲಿ 112 ಮತ್ತು ಮಂಗಳೂರಿನಲ್ಲಿ 105 ಪ್ರಾಜೆಕ್ಟ್‌ಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

 

sbi research report on smart cities

 

ದಾವಣಗೆರೆಯಲ್ಲಿ1,976 ಮೊತ್ತದ 128 ಯೋಜನೆಗಳನ್ನು, ಮಂಗಳೂರಿನಲ್ಲಿ2,573 ಮೊತ್ತದ 105 ಯೋಜನೆಗಳನ್ನು ಹಾಗೂ ಶಿವಮೊಗ್ಗದಲ್ಲಿ 1,381 ಮೊತ್ತದ 112 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

 

ಬೆಳಗಾವಿಯಲ್ಲಿ ಒಂದು ಯೋಜನೆಗೆ 12.8 ಕೋಟಿ ರು. ಖರ್ಚಾಗಿದ್ದರೆ, ತುಮಕೂರಿನಲ್ಲಿ 9.7 ಕೋಟಿ, ದಾವಣಗೆರೆಯಲ್ಲಿ 15.4 ಕೋಟಿ, ಶಿವಮೊಗ್ಗದಲ್ಲಿ 12.3 ಕೋಟಿ, ಮಂಗಳೂರಿನಲ್ಲಿ 24.5 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಈ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

 

ಈ ಯೋಜನೆ ಜಾರಿಯಲ್ಲಿ ಬೇರೆ ರಾಜ್ಯಗಳ ನಗರಗಳ ಸಾಧನೆಯನ್ನು ಹೋಲಿಕೆ ಮಾಡಿದಲ್ಲಿ, ನಮ್ಮ ರಾಜ್ಯದ ಏಳು ನಗರಗಳ ಸಾಧನೆ ಕಳಪೆಯಾಗಿದೆ ಎಂಬುದು ಈ ಅಧ್ಯಯನ ವರದಿಯಿಂದ ಗೊತ್ತಾಗಿದೆ.  ಮಧ್ಯಪ್ರದೇಶದ ಇಂದೋರ್‌ ಮತ್ತು ಭೋಪಾಲ್‌ ನಗರಗಳು ಈ ಯೋಜನೆಯನ್ನು ಜಾರಿಗೆ ತಂದ ಅತ್ಯುತ್ತಮ ನಗರಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ ಎಂದು ಈ ವರದಿಯು ತಿಳಿಸಿದೆ.

 

sbi research report on smart cities

 

ಅಲ್ಲದೆ, ಈ ಯೋಜನೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP)ದಲ್ಲಿ ಹಣ ಹೊಂದಿಸಬೇಕೆಂಬ ಆಶಯ ವ್ಯಕ್ತಪಡಿಸಲಾಗಿದ್ದರೂ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಗೆ ಸಾಲ ಮಾಡಲಾಗಿದೆ ಎಂದು ಈ ಅಧ್ಯಯನ ವರದಿಯಲ್ಲಿ ಬೊಟ್ಟು ಮಾಡಲಾಗಿದೆ.

 

ಸ್ಮಾರ್ಟ್‌ ಸಿಟಿ ಯೋಜನೆಯನ್ನು ಜಾರಿಗೆ ತಂದಿರುವ ನಗರಗಳಲ್ಲಿ, ಈ ಯೋಜನೆಗೆ ಆಯ್ಕೆಯಾಗದೇ ಇರುವ ನಗರಗಳಿಗೆ ಹೋಲಿಸಿದಲ್ಲಿ ಶೇ. 23 ರಷ್ಟು ವಾಯುಮಾಲಿನ್ಯ ಕಡಿಮೆಯಾಗಿದೆ ಎಂದು ಅಧ್ಯಯನ ವರದಿಯು ಹೇಳಿದೆ.

 

ರಾಜ್ಯದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ಸರಿಯಾಗಿ ನಡೆದಿಲ್ಲವೆಂಬ ದೂರುಗಳು ಕೇಳಿ ಬರುತ್ತಲೇ ಇದೆ. ಈ ಸಂಬಂಧ ತನಿಖೆ ನಡೆಸಲು ಕಳೆದ ಜನವರಿಯಲ್ಲಿ ನಗಾರಭಿವೃದ್ಧಿ ಸಚಿವ ಬೈರತಿ ಸುರೇಶ್‌ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದರು. ಈ ಸಂಬಂಧ ತನಿಖಾ ಸಮಿತಿಯನ್ನೂ ರಚಿಸಲಾಗಿತ್ತು.

 

ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕರ್ನಾಟಕಕ್ಕೆ 566 ಕೋಟಿ; ಗುಜರಾತ್‌, ಉತ್ತರ ಪ್ರದೇಶಕ್ಕೆ ಸಿಂಹಪಾಲು

 

ಸ್ಮಾರ್ಟ್‌ ಸಿಟಿ ಯೋಜನೆ ಜಾರಿ ವಿಳಂಬವಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರ ಸಕಾಲದಲ್ಲಿ ಅನುದಾನ ನೀಡದೇ ಇರುವುದೂ ಕಾರಣ ಎಂದು ಹೇಳಲಾಗುತ್ತಿದೆ.2023ರಲ್ಲಿ ಈ ಯೋಜನೆಗೆ ರಾಜ್ಯಕ್ಕೆ 566 ಕೋಟಿ ಕೋಟ್ಟು, ಗುಜರಾತ್‌, ಉತ್ತರ ಪ್ರದೇಶಕ್ಕೆ ಹೆಚ್ಚಿನ ಹಣ ನೀಡಿದ್ದರ ಕುರಿತು ʻದಿ ಫೈಲ್‌ʼ ವರದಿ ಮಾಡಿತ್ತು.

Your generous support will help us remain independent and work without fear.

Latest News

Related Posts