ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬೆಲೆ ಹೊಂದಾಣಿಕೆಯ ನಿಬಂಧನೆಗಳನ್ನು ಅನುಸರಿಸದೆ ಹೈದರಾಬಾದ್ ಮೂಲದ ಗುತ್ತಿಗೆದಾರರೊಬ್ಬರಿಗೆ ಹೆಚ್ಚುವರಿಯಾಗಿ 5.76 ಕೋಟಿ ರು. ಪಾವತಿಸಿರುವುದು ಬೆಳಕಿಗೆ ಬಂದಿದೆ.
ಬಳ್ಳಾರಿಯ ಪಾರ್ವತಿನಗರದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮತ್ತು ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಭವನ ನಿರ್ಮಾಣದ ಸಂದರ್ಭದಲ್ಲಿ ಹೀಗೆ ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ.
ಈ ಎರಡೂ ಕಾಮಗಾರಿಯ ಗುತ್ತಿಗೆಯನ್ನು ಹೈದರಾಬಾದ್ ಮೂಲದ ಕೆಎಂವಿ ಪ್ರಾಜೆಕ್ಟ್ಸ್ ಲಿಮಿಟೆಡ್ ಪಡೆದುಕೊಂಡಿತ್ತು.
ಮೂಲ ತ್ರೈಮಾಸಿಕವನ್ನು ತಪ್ಪಾಗಿ ನಿರ್ಧರಿಸಿರುವುದು ಮತ್ತು ಬೆಲೆ ಹೊಂದಾಣಿಕೆಯ ಲೆಕ್ಕಾಚಾರದಲ್ಲಿ ಸಗಟು ಬೆಲೆ ಸೂಚ್ಯಂಕದಿಂದ (ಡಬ್ಲ್ಯೂಪಿಐ) ತಪ್ಪಾದ ಸೂಚ್ಯಂಕ ಐಟಂ ಅನ್ನು ಅಳವಡಿಸಿಕೊಂಡಿದ್ದರಿಂದ ಬಳ್ಳಾರಿ ಮತ್ತು ಕಲಬುರಗಿ ಲೋಕೋಪಯೋಗಿ ಇಲಾಖೆಯ ವಿಭಾಗದಿಂದ ಗುತ್ತಿಗೆದಾರರಿಗೆ 5.76 ಕೋಟಿ ರು. ಹೆಚ್ಚುವರಿಯಾಗಿ ಪಾವತಿಯಾಗಿರುವುದು ಲೆಕ್ಕಪರಿಶೋಧನೆ ವೇಳೆ ಪತ್ತೆಯಾಗಿದೆ ಎಂದು ಇತ್ತೀಚೆಗೆ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಲೋಕೋಪಯೋಗಿ ಇಲಾಖೆಯ ಬಳ್ಳಾರಿ ಮತ್ತು ಕಲಬುರಗಿ ವಿಭಾಗದ ಲೆಕ್ಕಪರಿಶೋಧನೆಯನ್ನು ಸಿಎಜಿಯು 2022ರ ಆಗಸ್ಟ್ ನಿಂದ ಡಿಸೆಂಬರ್‌ವರೆಗೆ ನಡೆಸಿತ್ತು. ಬಿಜೆಪಿ ಸರ್ಕಾರದಲ್ಲಿ ಗೋವಿಂದ ಕಾರಜೋಳ ಮತ್ತು ಸಿ ಸಿ ಪಾಟೀಲ್ ಲೋಕೋಪಯೋಗಿ ಸಚಿವರಾಗಿದ್ದರು.
ಬಿಜೆಪಿ ಅಧಿಕಾರಾವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ನಡೆಸುವುದಾಗಿ ಪ್ರಚಾರ ಮಾಡಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಸಿಎಜಿಯು ಬೊಟ್ಟು ಮಾಡಿದ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡಿದೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿರುವ ಬಗ್ಗೆ ಸಿಎಜಿಗೆ ಮಾಹಿತಿ ನೀಡಿಲ್ಲ.
ಈ ಕಟ್ಟಡಗಳ ನಿರ್ಮಾಣಕ್ಕೆ 2017 ರಲ್ಲಿ ಆದೇಶ ನೀಡಲಾಗಿತ್ತು. ಬಳ್ಳಾರಿ ವಿಭಾಗವು ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಉತ್ಪಾದನೆಗೆ ಸೂಚ್ಯಂಕವನ್ನು ಅಳವಡಿಸಿಕೊಂಡಿತ್ತು ಮತ್ತು ಕಲಬುರಗಿ ವಿಭಾಗವು 2011-12 ರ ಮೂಲ ವರ್ಷದೊಂದಿಗೆ ಸಗಟು ಬೆಲೆ ಸೂಚ್ಯಂಕವನ್ನು ಎಲ್ಲಾ ಸರಕುಗಳಿಗೆ ಸೂಚ್ಯಂಕವಾಗಿ ಅಳವಡಿಸಿಕೊಂಡಿತ್ತು.
ಎರಡೂ ಕೆಲಸಗಳೂ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಅವು ತಪ್ಪಾಗಿದ್ದವು ಮತ್ತು ‘ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣಕ್ಕಾಗಿ ಯಂತ್ರೋಪಕರಣಗಳ ತಯಾರಿಕೆ’ ಸೂಚ್ಯಂಕವು ಸೂಕ್ತ ಸೂಚ್ಯಂಕವಾಗಿತ್ತು ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಲೋಕೋಪಯೋಗಿ ಇಲಾಖೆಯ ಬಳ್ಳಾರಿ ವಿಭಾಗದಿಂದ ಟೆಂಡರ್ ತೆರೆಯುವ ಕ್ಯಾಲೆಂಡರ್ ತಿಂಗಳ ಹಿಂದಿನ ಮೂರು ಸತತ ಕ್ಯಾಲೆಂಡರ್ ತಿಂಗಳ ಬದಲಿಗೆ ಟೆಂಡರ್ ತೆರೆಯಲಾದ ತ್ರೈಮಾಸಿಕದ ಹಿಂದಿನ ಕ್ಯಾಲೆಂಡರ್ ತ್ರೈಮಾಸಿಕವಾಗಿ ಮೂಲ ತ್ರೈಮಾಸಿಕವನ್ನು ತೆಗೆದುಕೊಳ್ಳಲಾಗಿತ್ತು.
ಕಲಬುರಗಿ ವಿಭಾಗವು ಮಾರ್ಪಾಡುಗಳ ಅಡಿಯಲ್ಲಿ ಕಾರ್ಯಗತಗೊಳಿಸಿದ ಕಾಮಗಾರಿಗಳು ಸೇರಿದಂತೆ ಒಟ್ಟು ಕಾಮಗಾರಿಗಳ ಮೌಲ್ಯದ ಮೇಲೆ ಬೆಲೆ ಹೊಂದಾಣಿಕೆಯನ್ನು ಲೆಕ್ಕಹಾಕಿ ಗುತ್ತಿಗೆದಾರರಿಗೆ ಪಾವತಿಸಿತ್ತು. ಈ ಮಾರ್ಪಾಡುಗಳು (ಹೆಚ್ಚುವರಿ ಐಟಂ ದರ ಪಟ್ಟಿ /ವರ್ಕ್ಸ್‌ಲಿಪ್) ಸಕ್ಷಮ ಪ್ರಾಧಿಕಾರದಿಂದ ಇನ್ನೂ ಅನುಮೋದಿಸಲ್ಪಡದ ಕಾರಣ ಇದು ನಿಯಮ ಬಾಹೀರವಾಗಿದೆ ಎಂದು ಸಿಎಜಿಯು ಬೊಟ್ಟು ಮಾಡಿದೆ.
ಪೂರಕ ಒಪ್ಪಂದದ ಮೂಲಕ ಯಾವುದೇ ಪರಸ್ಪರ ನಿಬಂಧನೆಗಳನ್ನು ನಮೂದಿಸದ ಕಾರಣ, ವ್ಯತ್ಯಾಸದ ಐಟಂಗಳ ಮೇಲೆ ಬೆಲೆ ಹೊಂದಾಣಿಗೆ ಪಾವತಿಗೆ ಯಾವುದೇ ಒಪ್ಪಂದ ಅನುವು ಮಾಡಿರಲಿಲ್ಲ. ಅಲ್ಲದೆ, ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಅನುಸರಿಸದ ಕಾರಣ ಗುತ್ತಿಗೆದಾರರಿಗೆ 5.76 ಕೋಟಿಯಷ್ಟು ಹೆಚ್ಚುವರಿ ಪಾವತಿಯಾಗಿದೆ ಎಂದು ಸಿಎಜಿಯ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಸಿಎಜಿಯು ಈ ಪ್ರಕರಣಗಳನ್ನು 2023ರ ನವೆಂಬರ್‌ನಲ್ಲಿಯೇ ಸರ್ಕಾರಕ್ಕೆ ವರದಿ ಮಾಡಿದೆ. ಬಳ್ಳಾರಿ ಮತ್ತು ಕಲಬುರಗಿ ಎರಡೂ ವಿಭಾಗಗಳು ಒದಗಿಸಿದ ಉತ್ತರವನ್ನು ಸರ್ಕಾರವು ಅನುಮೋದಿಸಿ ಸಿಎಜಿಗೆ ಕಳಿಸಿಕೊಟ್ಟಿದೆ.
ಬಳ್ಳಾರಿ ವಿಭಾಗವು ಲೆಕ್ಕಪರಿಶೋಧನೆಯ ಅವಲೋಕನವನ್ನು ಒಪ್ಪಿಕೊಂಡಿದ್ದರೆ, ಕಲಬುರಗಿ ವಿಭಾಗವು 2010ರ ಆಗಸ್ಟ್‌ನಲ್ಲಿ ʻಹೆವಿ ಮೆಷಿನರಿ ಮತ್ತು ಭಾಗಗಳʼ ಸೂಚ್ಯಂಕವನ್ನು ಸ್ಥಗಿತಗೊಳಿಸಿದ್ದರಿಂದ, ಸಗಟಿನ ಬೆಲೆ ಸೂಚ್ಯಂಕದಲ್ಲಿ ಒದಗಿಸಲಾದ ಎಲ್ಲ ಸರಕುಗಳಿಗೆ ಸೂಚ್ಯಂಕವನ್ನು ಅಳವಡಿಸಿಕೊಳ್ಳುವುದನ್ನು ಹೊರತುಪಡಿಸಿ ವಿಭಾಗಕ್ಕೆ ಯಾವುದೇ ಆಯ್ಕೆ ಇರಲಿಲ್ಲ ಎಂದು ವಾದಿಸಿತ್ತು ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ʻಗಣಿಗಾರಿಕೆ ತಯಾರಿಕೆ, ಕ್ವೆಯಿಂಗ್ ಮತ್ತು ನಿರ್ಮಾಣʼದ ಸೂಚ್ಯಂಕವು ತಪ್ಪಾಗಿರಬಹುದು. ಏಕೆಂದರೆ ಕೆಲಸವು ಕೇವಲ ಯಂತ್ರೋಪಕರಣಗಳನ್ನು ನಿಯೋಜಿಸುವ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಕೊಳಾಯಿ ಕಾರ್ಯಗಳ ಕಾರ್ಯಗತಗೊಳಿಸುವಿಕೆಯನ್ನು ಒಳಗೊಂಡಿರುತ್ತದೆ. ಕೆಲಸದ ವ್ಯಾಪ್ತಿ ಯಂತ್ರೋಪಕರಣಗಳ ತಯಾರಿಕೆಯನ್ನು ಒಳಗೊಂಡಿಲ್ಲವಾದ್ದರಿಂದ ಅಡಿಟ್ ಸೂಚಿಸಿದ ಸೂಚ್ಯಂಕ ಐಟಂ ಅನ್ನು ಅಳವಡಿಸಿಕೊಳ್ಳಲಾಗುತ್ತಿರಲಿಲ್ಲ. ಇದಲ್ಲದೆ, ತಪ್ಪಾದ ಬೆಲೆ ಹೊಂದಾಣಿಕೆಯ ಲೆಕ್ಕಾಚಾರವು ಒಪ್ಪಂದದ ವಿವಾದಗಳಿಗೆ ಕಾರಣವಾಗುತ್ತದೆ ಎಂದೂ ಕಲಬುರಗಿ ವಿಭಾಗವು ನೀಡಿದ ಉತ್ತರದಲ್ಲಿ ತಿಳಿಸಿತ್ತು.
ಕಲಬುರಗಿ ವಿಭಾಗದಿಂದ ಅನುಮತಿಸಲಾದ ಬೆಲೆ ಹೊಂದಾಣಿಕೆಗೆ ಸಂಬಂಧಿಸಿದಂತೆ, ಬೆಲೆ ಹೊಂದಾಣಿಕೆ ಪಾವತಿಗಳನ್ನು ತಾತ್ಕಾಲಿಕವಾಗಿ ಒಪ್ಪಿಕೊಳ್ಳಲಾಗಿದೆ ಮತ್ತು ವ್ಯತ್ಯಾಸದ ಪ್ರಮಾಣದಲ್ಲಿ ನಾಲ್ಕನೇ ಮೂರು ಭಾಗಕ್ಕೆ ಮಾತ್ರ ಪಾವತಿಸಲಾಗಿದೆ ಎಂದು ಹೇಳಲಾಗಿದೆ. ಆಡಳಿತಾತ್ಮಕ ಅನುಮೋದನೆ ಮತ್ತು ಪೂರಕ ಒಪ್ಪಂದದ ಅನುಪಸ್ಥಿತಿಯಲ್ಲಿ ವ್ಯತ್ಯಾಸದ ಐಟಂಗಳು ಮೂಲ ದರದ ಪಾವತಿಗೆ ಅರ್ಹವಾಗಿಲ್ಲದಿರುವುದರಿಂದ ಈ ವಿಭಾಗವು ನೀಡಿದ ಉತ್ತರವು ಸ್ವೀಕಾರಾರ್ಹವಲ್ಲ ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.
ಸರ್ಕಾರದಿಂದ ಎರಡು ವಿಭಾಗಗಳು ನೀಡಿದ ವಿಭಿನ್ನ ಉತ್ತರಗಳ ಅನುಮೋದನೆಯು ವಿರೋಧಾತ್ಮಕವಾಗಿದೆ ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ. ಬೆಲೆ ಹೊಂದಾಣಿಕೆಯ ಲೆಕ್ಕಾಚಾರ ಮತ್ತು ಹಣ ಪಾವತಿಗೆ ಸೂಕ್ತವಾದ ಸೂಚ್ಯಂಕವನ್ನು ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆಯು ಒದಗಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದೂ ವಿವರಿಸಿದೆ.
ಕಾಮಗಾರಿ ವೆಚ್ಚದಲ್ಲಿ ʻಪ್ಲಾಂಟ್ ಮತ್ತು ಮೆಷನರಿ ಸೋರ್ಸ್ʼ ಘಟಕಕ್ಕೆ ಬೆಲೆ ಹೊಂದಾಣಿಕೆಯ ಲೆಕ್ಕಾಚಾರ ಮತ್ತು ಪಾವತಿಗೆ ಸೂಕ್ತವಾದ ಸೂಚ್ಯಂಕ ಐಟಂ ಅನ್ನು ಸರ್ಕಾರವು ಸೂಚಿಸಬೇಕು ಎಂದು ಸಿಎಜಿಯು ಈ ವರದಿಯಲ್ಲಿ ಶಿಫಾರಸು ಮಾಡಿದೆ.
ಈ ಎರಡೂ ಪ್ರಕರಣಗಳಲ್ಲಿ ಗುತ್ತಿಗೆದಾರರಿಗೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಮತ್ತು ಬೆಲೆ ಹೊಂದಾಣಿಕೆ ಪಾವತಿಗಳನ್ನು ನಿಯಂತ್ರಿಸುವ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಲೋಕೋಪಯೋಗಿ ಇಲಾಖೆಯ ಎಲ್ಲ ವಿಭಾಗಗಳಿಗೆ ನಿರ್ದೇಶನ ನೀಡಬೇಕು ಎಂದೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಗುತ್ತಿಗೆದಾರರಿಗೆ 23.74 ಕೋಟಿ ಹೆಚ್ಚುವರಿಯಾಗಿ ಕೊಟ್ಟ ಬಿಜೆಪಿ; ಸರಿಯೆಂದು ಸಮಜಾಯಿಷಿ ನೀಡಿದ ಕಾಂಗ್ರೆಸ್!
ಇದೇ ರೀತಿಯಲ್ಲಿಯೇ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಟೆಂಡರ್ ಷರತ್ತುಗಳಿಗೆ ವ್ಯತಿರಿಕ್ತವಾಗಿ ಬೆಲೆ ಹೊಂದಾಣಿಕೆ ಮಾಡಿ, ಗುತ್ತಿಗೆದಾರರಿಗೆ ಒಟ್ಟು 23.74 ಕೋಟಿ ರು. ಗಳನ್ನು ಹೆಚ್ಚುವರಿಯಾಗಿ ಪಾವತಿಸಿ, ಅವರಿಗೆ ಆರ್ಥಿಕ ಲಾಭ ಮಾಡಿಕೊಟ್ಟ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ʻದಿ ಫೈಲ್ʼ ವಿವರವಾದ ವರದಿ ಪ್ರಕಟಿಸಿತ್ತು.