ಬೆಂಗಳೂರು; ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ 18.25 ಕೋಟಿ ರು ವೆಚ್ಚದ ಪ್ರಸ್ತಾವನೆಗೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಆಡಳಿತಾತ್ಮಕ ಅನುಮೋದನೆಯನ್ನೇ ಪಡೆದಿಲ್ಲ. ಅಲ್ಲದೇ ಈ ಘಟಕಕ್ಕೆ ಅಗತ್ಯವಾದ ಉಪಕರಣಗಳ ಖರೀದಿಗೆ 18.25 ಕೋಟಿ ರು ಅನುದಾನ ಒದಗಿಸಿದ್ದರೂ ಸಹ 26.60 ಕೋಟಿ ರು ಮೊತ್ತದಲ್ಲಿ ಟೆಂಡರ್ ಕರೆದಿರುವುದನ್ನು ಆರ್ಥಿಕ ಇಲಾಖೆಯು ಪತ್ತೆ ಹಚ್ಚಿದೆ.
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ 2018ರಲ್ಲೇ 18.25 ಕೋಟಿ ರು ಅನುದಾನಕ್ಕೆ ಅನುಮೋದನೆ ನೀಡಿತ್ತು. ಆದರೂ ವೈದ್ಯಕೀಯ ಶಿಕ್ಷಣ ಇಲಾಖೆಯು 2025ರ ಜೂನ್ 23 ಅಂತ್ಯದವರೆಗೂ ಆಡಳಿತಾತ್ಮಕ ಅನುಮೋದನೆಯನ್ನೇ ಪಡೆದಿಲ್ಲ. ಅಂದರೇ ಸರ್ಕಾರವು ಈ ಅನುದಾನವನ್ನು ಮಂಜೂರು ಮಾಡಿ 7 ವರ್ಷ ಕಳೆದಿದ್ದರೂ ಸಹ ವೈದ್ಯಕೀಯ ಶಿಕ್ಷಣ ಇಲಾಖೆಯು ಅನುಮೋದನೆ ಪಡೆಯುವಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿತ್ತು.
ಅದಷ್ಟೇ ಅಲ್ಲ, ಅನುಮೋದನೆಗೂ ಮುನ್ನವೇ 5.00 ಕೋಟಿ ರು ಗಳನ್ನು ಬಿಡುಗಡೆ ಮಾಡಿ ಆದೇಶವನ್ನೂ ಹೊರಡಿಸಲಾಗಿತ್ತು.
ಈ ಸಂಬಂಧ ಆರ್ಥಿಕ ಇಲಾಖೆಯು 2025ರ ಜೂನ್ 23ರಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಟರ್ಷಿಯರಿ ಕ್ಯಾನ್ಸರ್ ಕೇರ್ ಸೆಂಟರ್ ಸ್ಥಾಪಿಸಲು ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಮುಂದಾಗಿತ್ತು. 2023-24ರಲ್ಲಿ ಟೆಂಡರ್ ಕೂಡ ಆಹ್ವಾನಿಸಿತ್ತು. 26.60 ಕೋಟಿ ರು ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಲು ಸರಬರಾಜು ಆದೇಶ ನೀಡಲಾಗಿತ್ತು. ವಿಶೇಷವೆಂದರೇ ಆಡಳಿತ ಇಲಾಖೆಯ ಪ್ರಸ್ತಾವನೆ ಪ್ರಕಾರ 18.25 ಕೋಟಿ ರು ಅನುದಾನಕ್ಕೆ ಅನುಮೋದನೆ ದೊರೆತಿತ್ತು. ಆದರೂ 26.60 ಕೋಟಿ ರು ಮೊತ್ತಕ್ಕೆ ಟೆಂಡರ್ ಕರೆದಿತ್ತು.
ಇದನ್ನು ಬಲವಾಗಿ ಆಕ್ಷೇಪಿಸಿರುವ ಆರ್ಥಿಕ ಇಲಾಖೆಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ.
ಆರ್ಥಿಕ ಇಲಾಖೆಯ ಪತ್ರದಲ್ಲೇನಿದೆ?
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ 2018ರ ಸೆ.17ರಂದು 18.25 ಕೋಟಿ ರು ವೆಚ್ಚದಲ್ಲಿ ಸ್ಥಾಪಿಸಲು ಸರ್ಕಾರವು ಅನುಮೋದನೆ (ಆದೇಶ ಸಂಖ್ಯೆ; ಆಕುಕ 310 ಕೆವಿಎಂ 2018) ನೀಡಿದೆ. ಆದರೆ ಈ ಘಟಕ ಸ್ಥಾಪನೆಗೆ ಅಗತ್ಯವಿರುವ ಸಿವಿಲ್ ಕಾಮಗಾರಿಗಳಿಗೆ ಸವಿವರ ಅಂದಾಜು ಪಟ್ಟಿಯನ್ನು ಹಾಗೂ ಅಗತ್ಯವಿರುವ ಉಪಕರಣಗಳ ಖರೀದಿಗಾಗಿ ಉಪಕರಣಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಆಡಳಿತಾತ್ಮಕ ಅನುಮೋದನೆ ಪಡೆದ ನಂತರವೇ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು ಎಂದು ಪತ್ರದಲ್ಲಿ ತಿಳಿಸಿರುವುದು ಗೊತ್ತಾಗಿದೆ.
‘ಆದರೆ ಸದರಿ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆಯನ್ನು ಇದುವರೆವಿಗೂ ಪಡೆದಿರುವುದಿಲ್ಲ ಎಂದು ತಿಳಿಸಿರುತ್ತೀರಿ. ಹಾಗಿದ್ದಲ್ಲಿ 18.25 ಕೋಟಿ ರು ಅನುದಾನಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆದಿರುವುದಿಲ್ಲವೇ,’ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಅನುಮೋದನೆಗೂ ಮುನ್ನವೇ 5 ಕೋಟಿ ಬಿಡುಗಡೆ

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾನ್ಸರ್ ಕೇರ್ ಘಟಕವನ್ನು ಸ್ಥಾಪಿಸಲು 2018ರ ಸೆ.17ರಲ್ಲಿ 18.25 ಕೋಟಿ ರು ವೆಚ್ಚಕ್ಕೆ ಅನುಮೋದನೆ ನೀಡಿತ್ತು. ಆದರೆ ಇದಕ್ಕಿಂತಲೂ ಮುಂಚಿತವಾಗಿಯೇ ಅಂದರೇ 2018ರ ಮಾರ್ಚ್ 7ರಂದೇ 5 ಕೋಟಿ ರು ಅನುದಾನ ಬಿಡುಗಡೆ ಮಾಡಿತ್ತು. ‘ಇದು ಹೇಗೆ ಸಾಧ್ಯ’ ಎಂದು ವಿವರಣೆ ನೀಡಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಟೆಂಡರ್ ಮೊತ್ತದಲ್ಲಿ ಹೆಚ್ಚಳ
ಕಿಮ್ಸ್‌ನಲ್ಲಿ ಟರ್ಷಿಯರಿ ಕ್ಯಾನ್ಸರ್ ಕೇರ್ ಘಟಕ ಸ್ಥಾಪಿಸಲು ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಲು ಟೆಂಡರ್ (ME/TENDER/33/2023-24) ಕರೆಯಲಾಗಿತ್ತು. ಈ ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯು 26.60 ಕೋಟಿ ರು ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಲು ಸರಬರಾಜು ಆದೇಶ ನೀಡಿತ್ತು.
‘ಆಡಳಿತ ಇಲಾಖೆಯ ಪ್ರಸ್ತಾವನೆಯ ಅನ್ವಯ 18.25 ಕೋಟಿ ರು ಗಳ ಅನುದಾನಕ್ಕೆ ಅನುಮೋದನೆ ನೀಡಿದಲ್ಲಿ 26.60 ಕೋಟಿ ರು ವೆಚ್ಚಕ್ಕೆ ಟೆಂಡರ್ ಕರೆಯಲು ಹೇಗೆ ಸಾಧ್ಯ. ಅನುಮೋದನೆ ಮೊತ್ತಕ್ಕೆ ಹೋಲಿಸಿದಲ್ಲಿ ಟೆಂಡರ್ ಕರೆದ ಮೊತ್ತವೇ ಹೆಚ್ಚಾಗಿದೆ. ಟೆಂಡರ್ ಕರೆಯುವ ಮುನ್ನ ಆಡಳಿತಾತ್ಮಕ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲವೇ, ಪಡೆಯದಿದ್ದಲ್ಲಿ ಸೂಕ್ತ ಕಾರಣಗಳನ್ನು ಒದಗಿಸಬೇಕು,’ ಎಂದು ಆರ್ಥಿಕ ಇಲಾಖೆಯು ಸೂಚಿಸಿರುವುದು ಗೊತ್ತಾಗಿದೆ.

ಅಲ್ಲದೇ ಪ್ರಸ್ತುತ ಸಿವಿಲ್ ಉಪಕರಣ ಸೇರಿ 35.33 ಕೋಟಿ ರು ಎಂದು ತಿಳಿಸಿತ್ತು. ಈ ಮೂರು ಸೇರಿ ಒಂದೇ ಯೋಜನೆಯೇ ಅಥವಾ ಬೇರೆ ಬೇರೆ ಯೋಜನೆಯಾಗಿರುತ್ತದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಬೇಕು ಎಂದೂ ನಿರ್ದೇಶಿಸಿದೆ.
ಹಾಗೆಯೇ ಕ್ಯಾನ್ಸರ್ ಘಟಕ ಸ್ಥಾಪನೆ, ಅಗತ್ಯವಾಗಿ ಖರೀದಿಸಬೇಕಿರುವ ಉಪಕರಣಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಪಡೆದ ನಂತರವೇ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು. ಆದರೂ ಸರ್ಕಾರದಿಂದ ಬಿಡುಗಡೆಯಾದ 5 ಕೋಟಿ ರು ಅನುದಾನ ಮತ್ತು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ 10.00 ಕೋಟಿ ರು.ಗಳನ್ನು ಎನ್‌ಇಎಫ್‌ಟಿ ಮೂಲಕ ವರ್ಗಾಯಿಸಿತ್ತು ಎಂದು 2024ರ ಮಾರ್ಚ್ 11ರ ಪತ್ರದಲ್ಲಿ ತಿಳಿಸಿತ್ತು. ಇದಕ್ಕೂ ಸೂಕ್ತ ಕಾರಣ ನೀಡಬೇಕು ಎಂದು ಸೂಚಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗ್ರಾಮೀಣ ಭಾಗದಲ್ಲಿಯೇ ಕ್ಯಾನ್ಸರ್ (Cancer Patients) ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಜನವರಿ 2023ರಿಂದ ಡಿಸೆಂಬರ್ 2023ವರೆಗೆ ಕಾರವಾರದ ಕ್ರಿಮ್ಸ್‌ನಲ್ಲೇ (Karwar Institute of Medical Sciences) 225 ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು.
ರೋಗಿಗಳಲ್ಲಿ ಕ್ಯಾನ್ಸರ್ ಪತ್ತೆಯಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್, ಮಂಗಳೂರು ನಗರದ ಆಸ್ಪತ್ರೆಗಳ ಪ್ರಯಾಣ ಬೆಳೆಸುವಂತಾಗಿದೆ. ಕಾರವಾರದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಸಾಧ್ಯವಾಗದೆ ಮಣಿಪಾಲ್, ಮಂಗಳೂರು ನಗರದ ಆಸ್ಪತ್ರೆಗಳಿಗೆ ಹೋಗಿ ರೋಗಿಗಳು ದಾಖಲಾಗುತ್ತಿದ್ದಾರೆ.
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚು ಪತ್ತೆಯಾಗುತ್ತಿದ್ದು, 225 ಕ್ಯಾನ್ಸರ್ ರೋಗಿಗಳ ಪೈಕಿ 55 ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಪತ್ತೆಯಾಗಿದೆ. ಕಾರವಾರದ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳು ಪತ್ತೆ ಆಗುತ್ತಿರುವುದು ಸ್ಥಳೀಯರಲ್ಲಿ ಕಳವಳ ಹೆಚ್ಚಿಸಿದೆ.
ಉತ್ತರ ಕನ್ನಡದ ಕ್ರೀಮ್ಸ್ ಆಸ್ಪತ್ರೆಗೆ ಆಗಮಿಸುವ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸಕ್ತ ವರ್ಷದಲ್ಲಿಯೇ 247ಕ್ಕೂ ಹೆಚ್ಚು ರೋಗಿಗಳಲ್ಲಿ ಮಾರಕ ಕ್ಯಾನ್ಸರ್ ಲಕ್ಷಣಗಳು ಗೋಚರವಾಗಿವೆ. ಆಸ್ಪತ್ರೆಯಲ್ಲಿ ಕಾಯಿಲೆಗೆ ಸೂಕ್ತ ಚಿಕಿತ್ಸಾ ಸೌಕರ್ಯವಿಲ್ಲದ ಕಾರಣ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಸಕ್ತ ಸಾಲಿನ ಜನವರಿಯಿಂದ ಈವರೆಗೆ 247 ಮಂದಿಯಲ್ಲಿ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಕ್ತ ಸೌಲಭ್ಯವಿಲ್ಲದೆ ಬೇರೆ ಆಸ್ಪತ್ರೆಗಳಿಗೆ ಕಳುಹಿಸಲಾಗಿತ್ತು. ಕಳೆದ ಜನವರಿಯಲ್ಲಿ 24 ಪ್ರಕರಣ ಪತ್ತೆಯಾದರೆ, ಫೆಭ್ರವರಿಯಲ್ಲಿ 48, ಮಾರ್ಚ್ ನಲ್ಲಿ 17, ಏಪ್ರಿಲ್ ನಲ್ಲಿ 17, ಮೇ ನಲ್ಲಿ 25, ಜೂನ್ ನಲ್ಲಿ25, ಜುಲೈ ನಲ್ಲಿ 18, ಆಗಸ್ಟ್ ನಲ್ಲಿ 20, ಸೆಪ್ಟೆಂಬರ್ ನಲ್ಲಿ 25, ಅಕ್ಟೋಬರ್ ನಲ್ಲಿ 11 ಹಾಗೂ ನವೆಂಬರ್ ನಲ್ಲಿ 17 ಪ್ರಕರಣ ಪತ್ತೆಯಾಗಿದ್ದವು.
ಅದರಲ್ಲಿಯೂ ಕ್ರೀಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಪೈಕಿ ಅತಿ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಗಳು ಕಂಡುಬಂದಿತ್ತು. ಇನ್ನು ಇದಲ್ಲದೆ ಆಯಾ ತಾಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಭೇಟಿ ನೀಡಿ ಬಳಿಕ ಚಿಕಿತ್ಸೆಗೆ ಹೊರ ಜಿಲ್ಲೆಗಳಿಗೆ ತೆರಳುತ್ತಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚೆಗೆ ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಎರಡು ವರ್ಷಗಳ ನಂತರವೇ ಈ ಚಿಕಿತ್ಸೆ ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಕ್ಯಾನ್ಸರ್ ಪತ್ತೆಯಾದವರು ಬೇರೆ ಜಿಲ್ಲೆಗಳಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗಿದೆ.
ಕ್ಯಾನ್ಸರ್ ಹೆಚ್ಚಲು ವಿಕಿರಣ ಕಾರಣವೇ?
ಕಾರವಾರದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಾಗಲು ವಿಕಿರಣ, ತಂಬಾಕು ಸೇವನೆ, ಆಹಾರ ಪದ್ದತಿ ಜೊತೆಗೆ ಅನುವಂಶೀಯ ಕಾರಣ ಇರಬಹುದು ಹೇಳಲಾಗುತ್ತಿದೆ. ಕೈಗಾ ಪರಮಾಣು ವಿದ್ಯುತ್ ಸ್ಥಾವರ (ಕೆಎಪಿಎಸ್) ಇರುವ ಕಾರವಾರ ತಾಲ್ಲೂಕಿನಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಮೂರು ವರ್ಷಗಳ ಅವಧಿಯಲ್ಲಿ ಶೇ. 200 ರಷ್ಟು ಹೆಚ್ಚಾಗಿದೆ ಎಂದು ಟಾಟಾ ಸ್ಮಾರಕ ಕೇಂದ್ರವು ಕಂಡುಹಿಡಿದಿತ್ತು.
ಮುಂಬೈ ಮೂಲದ ಕೇಂದ್ರದ ತಂಡವು 2010-2013ರ ಅವಧಿಯಲ್ಲಿ ಒಂದು ಅಧ್ಯಯನವನ್ನು ನಡೆಸಿತ್ತು. ಕಾರವಾರ ತಾಲ್ಲೂಕಿನಲ್ಲಿ 2010 ಕ್ಕಿಂತ ಮೊದಲು ಸುಮಾರು 70-80 ಕ್ಯಾನ್ಸರ್ ರೋಗಿಗಳಿದ್ದರು ಎಂದು ತಂಡವು ಕಂಡುಹಿಡಿದಿತ್ತು. ಆದರೆ 2010-2013 ರ ಅವಧಿಯಲ್ಲಿ ರೋಗಿಗಳ ಸಂಖ್ಯೆ 316 ಕ್ಕೆ ಏರಿತ್ತು. ಅನೇಕ ಪರಿಸರವಾದಿಗಳು ಈ ಸ್ಥಾವರವನ್ನು ವಿರೋಧಿಸಿದ್ದರು.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ರಾಜ್ಯ ಸರ್ಕಾರ ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿಗಳನ್ನು (ಪಿಬಿಸಿಆರ್) ನಡೆಸಲು ಒಪ್ಪಿಕೊಂಡಿದ್ದವು. ಮತ್ತು ಟಾಟಾ ಮೆಮೋರಿಯಲ್ ಸೆಂಟರ್ 2010-2013 ರ ಅವಧಿಯಲ್ಲಿ ಅಧ್ಯಯನವನ್ನು ಪ್ರಾರಂಭಿಸಿತ್ತು.









