ಎಕ್ಸ್‌ಲೆನ್ಸ್‌ ಕೇಂದ್ರದೊಂದಿಗೆ ವಿಟಿಯು ಒಪ್ಪಂದ; ಗುತ್ತಿಗೆ ಷರತ್ತು ಉಲ್ಲಂಘನೆ, ಜಾಣ ಮೌನ ವಹಿಸಿತೇ ಬಿಡಿಎ?

ಬೆಂಗಳೂರು; ಬೆಳಗಾವಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಬಿಡಿಎಯ ಷರತ್ತುಗಳನ್ನು ಉಲ್ಲಂಘಿಸಿರುವ ಗುರುತರವಾದ ಆರೋಪಕ್ಕೆ ಗುರಿಯಾಗಿದೆ.

 

ಬೆಂಗಳೂರಿನ ನಾಗರಬಾವಿಯಲ್ಲಿನ ಪ್ರಾದೇಶಿಕ ಕೇಂದ್ರದ ಕಟ್ಟಡದಲ್ಲಿ ಕ್ವಾಂಟಮ್ ತಂತ್ರಜ್ಞಾನ ಮತ್ತು ಸಂಬಂಧಿತ 5 ಜಿ ಮತ್ತು 6 ಜಿ  ತಂತ್ರಜ್ಞಾನಗಳಲ್ಲಿ ಶ್ರೇಷ್ಠತೆಯ ಕೇಂದ್ರವನ್ನು  ಸ್ಥಾಪಿಸಲು (TCOE-VTU-VRIF) ಒಪ್ಪಂದಕ್ಕೆ ಸಹಿ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

 

ನಾಗರೀಕ ಸೌಲಭ್ಯ ಉದ್ದೇಶಕ್ಕಾಗಿ ನೀಡಿರುವ  ನಿವೇಶನದಲ್ಲಿ ನಿರ್ಮಿಸಿದ್ದ ಕಟ್ಟಡದಲ್ಲಿ  ಯಾವುದೇ ಕಾರಣಕ್ಕೂ ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ  ಸಂಸ್ಥೆಯ ಕಾರ್ಯಚಟುವಟಿಕೆಗಳ ಬಳಕೆಗೆ ಅನುವು ಮಾಡಿಕೊಡಲು ಯಾವುದೇ ಅವಕಾಶವಿಲ್ಲ. ಆದರೂ  ವಿಟಿಯು, ಬಿಡಿಎನ  ಷರತ್ತುಗಳನ್ನು  ಉಲ್ಲಂಘಿಸಿ  ಟೆಲಿಕಾಂ ಸೆಂಟರ್‍‌ ಆಫ್‌ ಎಕ್ಸಲೆನ್ಸ್‌ ಇಂಡಿಯಾ  (Telecom Centres of Excellence India  (TCOE-VTU-VRIF) ಸಂಸ್ಥೆಯೊಂದಿಗೆ  ಒಡಂಬಡಿಕೆ ಮಾಡಿಕೊಂಡಿದೆ ಎಂಬ ಆಪಾದನೆ ಕೇಳಿ ಬಂದಿದೆ.

 

ಈ ಕೇಂದ್ರಕ್ಕೆ ಸ್ಥಳಾವಕಾಶ ಮಾಡಿಕೊಡುವ ಏಕೈಕ ಉದ್ದೇಶದಿಂದಲೇ ನಾಗರಬಾವಿಯಲ್ಲಿದ್ದ ಪ್ರಾದೇಶಿಕ ಕೇಂದ್ರವನ್ನು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಗೆ ಸ್ಥಳಾಂತರ ಮಾಡಲಾಗಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ.

 

ಬೆಳಗಾವಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಬೆಂಗಳೂರಿನ ನಾಗರಬಾವಿಯಲ್ಲಿ ಪ್ರಾದೇಶಿಕ ಕೇಂದ್ರ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು 2008ರಲ್ಲೇ ಹಲವು ಷರತ್ತುಗಳನ್ನು  ವಿಧಿಸಿ ಸಿ ಎ ನಿವೇಶನವನ್ನು ಮಂಜೂರು ಮಾಡಿತ್ತು.

 

ಆದರೆ ವಿಶ್ವವಿದ್ಯಾಲಯವು ಈ ಷರತ್ತುಗಳನ್ನು ಗಾಳಿಗೆ ತೂರಿ, ಈಗಾಗಲೇ ನಿರ್ಮಾಣವಾಗಿರುವ ಕಟ್ಟಡವನ್ನು ಕೇಂದ್ರ ಸರ್ಕಾರದ ಸಂಸ್ಥೆಯು ಕಾರ್ಯಾಚರಣೆ ಮಾಡಲು ಬಿಟ್ಟುಕೊಟ್ಟಿದೆ.  ಅಲ್ಲದೇ ನಾಗರಬಾವಿಯಲ್ಲಿರುವ ಪ್ರಾದೇಶಿಕ ಕೇಂದ್ರವನ್ನು ಏಕಾಏಕೀ ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಗೆ ಸ್ಥಳಾಂತರಿಸಿರುವುದಕ್ಕೆ ಅಧಿಕಾರಿ ನೌಕರರ ವಲಯದಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಗೆ ಕೆಲವು ದಾಖಲೆಗಳು ಲಭ್ಯವಾಗಿವೆ.

 

ಪ್ರಕರಣದ ವಿವರ

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಗರಬಾವಿಯಲ್ಲಿ ವಿಟಿಯುನ ಪ್ರಾದೇಶಿಕ ಕೇಂದ್ರ ನಿರ್ಮಾಣಕ್ಕಾಗಿ ನಾಗರಿಕ ಸೌಲಭ್ಯ ನಿವೇಶನವನ್ನು 2008ರಲ್ಲಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿತ್ತು.

 

 

 

ಗುತ್ತಿಗೆ ಅವಧಿಯು 30 ವರ್ಷದ್ದಾಗಿತ್ತು.

 

 

ಗುತ್ತಿಗೆ ಷರತ್ತುಗಳಲ್ಲೇನಿದೆ?

 

ಗುತ್ತಿಗೆ ಒಪ್ಪಂದದ ಪ್ರಕಾರ ಮಂಜೂರಾಗಿರುವ ಸಿ ಎ ನಿವೇಶನಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಷರತ್ತುಗಳನ್ನು ವಿಧಿಸಿತ್ತು. ಷರತ್ತಿನ ಸಂಖ್ಯೆ 5 ಮತ್ತು 6ರ ಪ್ರಕಾರ ವಿಟಿಯುಗೆ ಬಿಡಿಎನಿಂದ ಮಂಜೂರಾಗಿರುವ ನಿವೇಶನವನ್ನು ನಾಗರಬಾವಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮಾತ್ರ ಬಳಸಬೇಕು ಮತ್ತು ಅದನ್ನು ಯಾವುದೇ ರೀತಿಯಲ್ಲಿಯೂ ಸಬ್‌ ಡಿವೈಡ್‌ ಅಥವಾ ಸಬ್‌ ಲೀಸ್‌ ಅಥವಾ ಇನ್ಯಾವುದೇ ರೀತಿ ಪರಭಾರೆ ಮಾಡಲು ಅವಕಾಶವಿರುವುದಿಲ್ಲ ಎಂಬ ಕಟ್ಟುನಿಟ್ಟಿನ ಷರತ್ತನ್ನೂ ವಿಧಿಸಿರುವುದು ಗುತ್ತಿಗೆ ಪತ್ರದಿಂದ ತಿಳಿದು ಬಂದಿದೆ.

 

 

ಹಾಗೆಯೇ ಷರತ್ತಿನ ಕ್ರಮ ಸಂಖ್ಯೆ 11 ಮತ್ತು 11 ಎ ನ ಪ್ರಕಾರ ಬಿಡಿಎ ಸಿ ಎ ನಿವೇಶನದ ಕಾಯ್ದೆ 1989ಕ್ಕೆ ಬದ್ಧವಾಗಿರಬೇಕು. ಅಲ್ಲದೇ ಸಿ ಎ ನಿವೇಶನದ ಗುತ್ತಿಗೆ ಕ್ರಯಪತ್ರದ ಪ್ರಕಾರ ಷರತ್ತು ಉಲ್ಲಂಘನೆಯಾದಲ್ಲಿ ಈ ನಿವೇಶನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕನ್ನು ಕಾಯ್ದಿರಿಸಿದೆ ಎಂದೂ ಹೇಳಿತ್ತು.

 

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಿಧಿಸಿದ್ದ ಈ ಎಲ್ಲಾ ಷರತ್ತುಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಗಾಳಿಗೆ ತೂರಿದೆ.

 

ನಾಗರಬಾವಿಯಲ್ಲಿ ಬಿಡಿಎ ಮಂಜೂರು ಮಾಡಿದ್ದ ಸಿ ಎ ನಿವೇಶನದಲ್ಲಿ ಪ್ರಾದೇಶಿಕ ಕೇಂದ್ರ ಕಟ್ಟಡ ನಿರ್ಮಾಣ ಮಾಡಿದ್ದ ವಿಟಿಯು, ಪ್ರಾದೇಶಿಕ ಕೇಂದ್ರವನ್ನು ಚಿಕ್ಕಬಳ್ಳಾಪುರದಲ್ಲಿರುವ ಮುದ್ದೇನಹಳ್ಳಿ ಕ್ಯಾಂಪಸ್‌ಗೆ ಸ್ಥಳಾಂತರಿಸಿದೆ. ನಾಗರಬಾವಿಯಲ್ಲಿನ ಪ್ರಾದೇಶಿಕ ಕೇಂದ್ರದಲ್ಲಿ ವಿಶ್ವೇಶ್ವರಯ್ಯ ಸಂಶೋಧನ ಮತ್ತು ಇನ್ನೋವೇಷನ್‌ ಫೌಂಡೇಷನ್‌ ಮತ್ತು ಟೆಲಿಕಾಂ ಸೆಂಟರ್ ಫಾರ್‍‌ ಎಕ್ಷಲೆನ್ಸ್‌ ಹೆಸರಿನ ತರಬೇತಿ ಕೇಂದ್ರ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ವಿಟಿಯುನ ಕುಲಪತಿ ಡಾ ಎಸ್‌ ವಿದ್ಯಾಶಂಕರ್‍‌ ಅವರು ಅನುಮೋದನೆ ನೀಡಿರುವುದು ಗೊತ್ತಾಗಿದೆ.

 

ಇದಕ್ಕೂ ಮುನ್ನ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರೊಂದಿಗೂ ಚರ್ಚಿಸಿದ್ದರು ಎಂದು ತಿಳಿದು ಬಂದಿದೆ.

 

 

 

 

 

ಕ್ವಾಂಟಮ್ ತಂತ್ರಜ್ಞಾನ ಮತ್ತು ಸಂಬಂಧಿತ (5G/6G) ತಂತ್ರಜ್ಞಾನಗಳಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲು (TCOE-VTU-VRIF) ಒಪ್ಪಂದಕ್ಕೆ ಸಹಿ ಹಾಕಿದೆ.

 

ಟಿಒಸಿ ಕೇಂದ್ರದೊಂದಿಗೆ ವಿಟಿಯು ಒಪ್ಪಂದ ಮಾಡಿಕೊಂಡಿರುವುದು

 

ಈ ಕೇಂದ್ರದ ವಿಶೇಷತೆಯೇನು?

 

ಗಡಿನಾಡಿನ ತಂತ್ರಜ್ಞಾನಗಳಲ್ಲಿ ಭಾರತದ ಪ್ರಗತಿಯನ್ನು ವೇಗಗೊಳಿಸುವ ಗುರಿಯನ್ನು CoE ಹೊಂದಿದೆ ಮತ್ತು ಇದು 100 ದಿನಗಳ ಕಾರ್ಯಕ್ರಮದ ಭಾಗವಾಗಿದೆ. ಈ ಕೇಂದ್ರವು 400,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 2,000+ ಪಿಎಚ್‌ಡಿಗಳು ಮತ್ತು ಹಲವಾರು ಸಂಶೋಧಕರನ್ನು ಸಬಲೀಕರಣಗೊಳಿಸುತ್ತದೆ. ತಾಂತ್ರಿಕ ನಾವೀನ್ಯತೆಯಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ (TCOE) ಇಂಡಿಯಾ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) , ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನಾವೀನ್ಯತೆ ಪ್ರತಿಷ್ಠಾನ (VRIF) ನಡುವೆ ತಿಳುವಳಿಕೆ ಒಪ್ಪಂದ (MoU)ಕ್ಕೆ ಸಹಿ ಹಾಕಿದೆ.

 

ಕ್ವಾಂಟಮ್ ತಂತ್ರಜ್ಞಾನ, ಸಂಬಂಧಿತ (5G/6G) ತಂತ್ರಜ್ಞಾನಗಳು ಇತ್ಯಾದಿಗಳಲ್ಲಿ ಶ್ರೇಷ್ಠತೆಯ ಕೇಂದ್ರ (CoE) ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಇತರ ಗಡಿನಾಡು ಕ್ಷೇತ್ರಗಳನ್ನು ಸ್ಥಾಪಿಸುವ ಉದ್ದೇಶ ಈಡೇರಿಸಲು  ಈ ಮಹತ್ವದ ಒಪ್ಪಂದ ಮಾಡಿಕೊಂಡಿದೆ ಎಂದು ವಿಶ್ವವಿದ್ಯಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.    ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಸೆಂಟರ್‍‌ ಫಾರ್‍‌ ಎಕ್ಸ್‌ಲೆನ್ಸ್‌ ಕೇಂದ್ರವು (VTU-VRIF)    ಪ್ರಮುಖ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ ಮತ್ತು 100 ದಿನಗಳ ಕಾರ್ಯಕ್ರಮದ ಭಾಗವಾಗಿದೆ ಎಂದು ವಿವರಿಸಿತ್ತು.

 

ಸೆಂಟರ್‍‌ ಫಾರ್‍‌ ಎಕ್ಸ್‌ಲೆನ್ಸ್‌ ಕೇಂದ್ರವನ್ನು   ನಾವೀನ್ಯತೆಗಾಗಿ ಹಬ್-ಅಂಡ್-ಸ್ಪೋಕ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ವಿಟಿಯುನ 228 ಸಂಯೋಜಿತ ಕಾಲೇಜುಗಳ ಬೌದ್ಧಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯಗಳನ್ನು ಬಳಸಿಕೊಳ್ಳಳಿದೆ.    ಸೆಂಟರ್‍‌ ಫಾರ್‍‌ ಎಕ್ಸ್‌ಲೆನ್ಸ್‌ ಕೇಂದ್ರವು  ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಸಹಾಯಕನಾಗಿ ಕಾರ್ಯನಿರ್ವಹಿಸುತ್ತದೆ. ಈ ಮಾದರಿಯ ಮೂಲಕ ಅತ್ಯಾಧುನಿಕ ಸಂಶೋಧನೆಯನ್ನು ಸುಗಮಗೊಳಿಸುತ್ತದೆ ಮತ್ತು   ಸಹಯೋಗವನ್ನು ಬೆಳೆಸುತ್ತದೆ ಎಂದು ಹೇಳಲಾಗಿದೆ.

 

ಕ್ವಾಂಟಮ್ ಮತ್ತು ಸಂಬಂಧಿತ 5G/6G ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳನ್ನು ತ್ವರಿತವಾಗಿ ಸಂಶೋಧನೆ ಮಾಡಲಿದೆ.

 

ಡಾ ಎಸ್‌ ವಿದ್ಯಾಶಂಕರ್‍‌ ಅವರು ಈ ಹಿಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅವಧಿಯಲ್ಲಿಯೂ ಇಂತಹದ್ದೇ ತೀರ್ಮಾನ ಕೈಗೊಂಡಿದ್ದರು.

 

ಮೈಸೂರು ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಮಂಡಕಳ್ಳಿಯಲ್ಲಿ ವಿಶ್ವವಿದ್ಯಾಲಯದ ಹೆಸರಿನಲ್ಲಿದ್ದ 10 ಎಕರೆ ಜಮೀನು ಮತ್ತು 18,800 ಚದರ ಮೀಟರ್‍‌ನಲ್ಲಿದ್ದ ಸುಸಜ್ಜಿತ ಆಡಳಿತಾತ್ಮಕ ಭವನದ ಕಟ್ಟಡವನ್ನು 30 ವರ್ಷದ ಅವಧಿಗೆ ವಾರ್ಷಿಕ 14.5 ಲಕ್ಷ ರು ಬಾಡಿಗೆ ನೀಡಲಾಗಿತ್ತು. ಇದರಿಂದ ವಿಶ್ವವಿದ್ಯಾಲಯದ ಬೊಕ್ಕಸಕ್ಕೆ ವರ್ಷವೊಂದಕ್ಕೆ 1.60 ಕೋಟಿಯಷ್ಟು ಆರ್ಥಿಕ ನಷ್ಟ ಸಂಭವಿಸಲು ಕಾರಣವಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು.

 

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವರದಿಯಲ್ಲಿಯೂ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಲೋಕೋಪಯೋಗಿ ಇಲಾಖೆಯ ದರಕ್ಕೆ ಹೋಲಿಸಿದರೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 2022-23ರ ಸಾಲಿನಲ್ಲಿಯೇ 1.60 ಕೋಟಿಯಷ್ಟು ಹೆಚ್ಚಿನ ಆರ್ಥಿಕ ನಷ್ಟವಾಗಿದೆ ಎಂದು ಹೇಳಲಾಗಿತ್ತು. ಅಲ್ಲದೇ ಭವಿಷ್ಯದ ದಿನಗಳಲ್ಲಿ ಈ ಆರ್ಥಿಕ ನಷ್ಟದ ಮೊತ್ತವು ಏರಿಕೆಯಾಗಲಿದೆ ಎಂದೂ ವಿವರಿಸಿತ್ತು.

 

ಕರಾಮುವಿಯ ಹಾಲಿ ಕುಲಪತಿಗಳ ಅವಧಿಯಲ್ಲಿ (2024ರ ಜೂನ್‌ 18) ನಡೆದಿದ್ದ ವ್ಯವಸ್ಥಾಪನಾ ಮಂಡಳಿಯ ಸಭೆಯಲ್ಲೂ ಚರ್ಚೆಯಾಗಿದೆ. ಕರ್ನಾಟಕ ಆರ್ಥಿಕ ನಿಯಮಗಳಿಗೆ ವಿರುದ್ಧವಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿರುವುದರ ಕುರಿತು ಚರ್ಚೆ ಆಗಿತ್ತು. ಪಿಡಬ್ಲ್ಯೂಡಿ ಎಸ್‌ ಆರ್‍‌ ದರದ ಅನ್ವಯ ಹೊಸ ಕರಾರು ಮಾಡಿಕೊಳ್ಳಲು ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿಯಲ್ಲಿ ತೀರ್ಮಾನವೂ ಆಗಿತ್ತು. ಈ ತೀರ್ಮಾನ ಕೈಗೊಂಡು ವರ್ಷ ಕಳೆದಿದ್ದರೂ ಸಹ ತೀರ್ಮಾನವು ಅನುಷ್ಟಾನಕ್ಕೆ ಬಂದಿಲ್ಲ. ಬದಲಿಗೆ ಕಾಗದದಲ್ಲೇ ಉಳಿದುಕೊಂಡಿದೆ.

 

ಅಷ್ಟೇ ಅಲ್ಲದೇ ಈ ಬಾಡಿಗೆ ಪತ್ರದ ಅವಧಿಯು ಪೂರ್ಣಗೊಂಡ ನಂತರ ಈ ಸ್ವತ್ತನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಹಿಂಪಡೆಯಲೂ ಅನೇಕ ತಾಂತ್ರಿಕ ತೊಡಕುಗಳೂ ಇವೆ ಎಂಬುದು ತಿಳಿದು ಬಂದಿದೆ.

 

ಈ ಕುರಿತು ವಿಟಿಯು ರಿಜಿಸ್ಟ್ರಾರ್‍‌ ಅವರಿಂದ ಪ್ರತಿಕ್ರಿಯೆ ಬಯಸಿ, ದಿ ಫೈಲ್‌ ಪ್ರಶ್ನೆಗಳನ್ನು ಇ-ಮೈಲ್‌ ಮೂಲಕ ರವಾನಿಸಿದೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಪ್ರತಿಕ್ರಿಯೆ ನೀಡಿದ ನಂತರ ಇದೇ ವರದಿಯನ್ನು ನವೀಕರಿಸಲಾಗುತ್ತದೆ.

Your generous support will help us remain independent and work without fear.

Latest News

Related Posts