ಬೆಂಗಳೂರು: ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರ ಹಿತ ಕಾಪಾಡುವ ಉದ್ದೇಶದಿಂದ ರಚನೆಯಾಗಿರುವ ʻಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿʼ ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಜಾರಿಗೆ ನೀಡಲಾಗಿರುವ ಅನುದಾನವನ್ನು ಸಮಪರ್ಕವಾಗಿ ಬಳಕೆ ಮಾಡದೇ ಇರುವುದು ಬೆಳಕಿಗೆ ಬಂದಿದೆ.
ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಂಡಳಿಯು 2024-25ನೇ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ ಒಟ್ಟು 5.36 ಕೋಟಿ ರು. ಅನುದಾನವನ್ನು ವೆಚ್ಚಮಾಡದೇ ಬಾಕಿ ಉಳಿಸಿಕೊಂಡಿತ್ತು.
ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯು, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ, ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಎಲ್ಲ ಯೋಜನೆಗಳಿಗೆ ಮಂಜೂರು ಮಾಡಲಾಗಿರುವ ಹಣ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ.
ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮಿತಿಯು ನೀಡಿದ್ದ ಪ್ರಶ್ನಾವಳಿಗಳಿಗೆ ಕಾರ್ಮಿಕ ಇಲಾಖೆಯು ಸೆಪ್ಟೆಂಬರ್ 2 ರಂದು ಕಳಿಸಿರುವ ಉತ್ತರದಿಂದ ಈ ಮಾಹಿತಿ ಬಹಿರಂಗಗೊಂಡಿದೆ.
ಈ ಪ್ರಶ್ನೋತ್ತರದ ದಾಖಲೆ ʻದಿ ಫೈಲ್ʼಗೆ ಲಭ್ಯವಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ʻಆಶಾದೀಪʼ ಯೋಜನೆಗೆ ಬಿಡುಗಡೆಯಾದ ಅನುದಾನ ಕೂಡ ಕಳೆದ ಮೂರು ವರ್ಷಗಳಿಂದ ಸಂಪೂರ್ಣವಾಗಿ ಬಳಕೆಯಾಗದೆ ಬಾಕಿ ಉಳಿದಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಿವರಾಮ ಹೆಬ್ಬಾರ್ ಕಾರ್ಮಿಕ ಸಚಿವರಾಗಿದ್ದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸಂತೋಷ್ ಲಾಡ್ ಕಾರ್ಮಿಕ ಸಚಿವರಾಗಿದ್ದಾರೆ.
ಇದರಲ್ಲಿ ಬಹಳ ಮುಖ್ಯವಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ʻಗಿಗ್ ಕಾರ್ಮಿಕರ ವಿಮಾ ಯೋಜನೆ ʼಗೆ ಬಿಡುಗಡೆಯಾದ ಅನುದಾನದಲ್ಲಿ ಶೇ. 10ರಷ್ಟೂ ಬಳಕೆಯಾಗಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಯಕೆಯಂತೆ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ʻಗಿಗ್ ಕಾರ್ಮಿಕರ ವಿಮಾ ಯೋಜನೆʼಯನ್ನು 2023-24ನೇ ಸಾಲಿನಲ್ಲಿ ಜಾರಿಗೆ ತರಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ಕುರಿತು ರಾಹುಲ್ ಗಾಂಧಿಯವರೊಂದಿಗೆ ಚರ್ಚೆ ಕೂಡ ನಡೆಸಿದ್ದರು.
ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‌ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಸರ್ಕಾರ ಪ್ರಕಟಿಸಿತ್ತು.
ಕಾಂಗ್ರೆಸ್ ಪಕ್ಷ ಪ್ರಚಾರದ ಸಂದರ್ಭದಲ್ಲಿ ಬಹಳಷ್ಟು ಮಹತ್ವ ನೀಡಿದ ಈ ಯೋಜನೆಗೆ ಒದಗಿಸಿರುವ ಹಣ ಕೂಡ ಸಂಪೂರ್ಣವಾಗಿ ಬಳಕೆಯಾಗಿಲ್ಲ. ಈ ಯೋಜನೆಗೆ ಮೊದಲ ವರ್ಷ ಒಂದು ಕೋಟಿ ಒದಗಿಸಲಾಗಿತ್ತು. ಇದರಲ್ಲಿ 1.37 ಲಕ್ಷ ರೂ. ಮಾತ್ರ ಖರ್ಚಾಗಿತ್ತು. 98.63 ಲಕ್ಷ ವೆಚ್ಚವಾಗದೇ ಹಾಗೆಯೇ ಬಾಕಿ ಉಳಿದಿತ್ತು.
2024-25ನೇ ಸಾಲಿನಲ್ಲಿ ಮತ್ತೆ ಒಂದು ಕೋಟಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿಯೂ 9.84 ಲಕ್ಷ ರು. ಖರ್ಚಾಗಿತ್ತು. ಈ ಆರ್ಥಿಕ ಸಾಲಿನ ಅಂತ್ಯದಲ್ಲಿ 188.79 ಲಕ್ಷ ರು. ವೆಚ್ಚವಾಗದೆ ಬಾಕಿ ಉಳಿದಿದೆ ಎಂಬುದು ಕಾರ್ಮಿಕ ಇಲಾಖೆಯೇ ಸಿದ್ಧಪಡಿಸಿದ ದಾಖಲೆಯಿಂದ ಗೊತ್ತಾಗಿದೆ.
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ರಾಜ್ಯ ಸರ್ಕಾರ, ಕಳೆದ ಮೇ ತಿಂಗಳಿನಲ್ಲಿ ʻ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ)ʼ ಸುಗ್ರೀವಾಜ್ಞೆ ಹೊರಡಿಸಿತ್ತು. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರು.
ಈ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ʻಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆʼ ಇತ್ತೀಚೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಮಂಡಿಸಲಾಗಿದ್ದು, ವಿಧಾನಸಭೆಯು ಇದಕ್ಕೆ ಅಂಗೀಕಾರ ನೀಡಿದೆ. ಈ ಮಸೂದೆಯ ಅಡಿಯಲ್ಲಿ, ನಿಧಿ ಸಂಗ್ರಹಣೆ, ನಿರ್ವಹಣೆ , ಫಲಾನುಭವಿಗಳಿಗೆ ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ʻಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಕಲ್ಯಾಣ ಮಂಡಳಿʼ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ.
ಕಾರ್ಮಿಕರಿಗೆ ಸಿಗದ ಸಹಾಯ ʻಹಸ್ತʼ
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೆ ತಂದಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಗೆ 2023-24 ಮತ್ತು 2024-25ನೇ ಸಾಲಿನಲ್ಲಿ ತಲಾ ಐದು ಕೋಟಿ ಒದಗಿಸಲಾಗಿತ್ತು. ಇದರಲ್ಲಿ ಶೇ. 50ರಷ್ಟು ಹಣ ವೆಚ್ಚವಾಗದೆ ಬಾಕಿ ಉಳಿದಿದೆ.
2023-24 ರಲ್ಲಿ ಐದು ಕೋಟಿ ಅನುದಾನ ನಿಗದಿಪಡಿಸಿ, ಅಷ್ಟೂ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 370.23 ಲಕ್ಷ ಖರ್ಚಾಗಿದೆ. ಆ ಸಾಲಿನಲ್ಲಿ 223.89 ಲಕ್ಷ ವೆಚ್ಚವಾಗದೇ ಬಾಕಿ ಇತ್ತು. ಇದೇ ಪ್ರಕಾರವಾಗಿ 2024-25ರಲ್ಲಿಯೂ ಐದು ಕೋಟಿ ಅನುದಾನ ನೀಡಲಾಗಿತ್ತು. ಇದರಲ್ಲಿ 480.09 ಲಕ್ಷ ಖಾರ್ಚಾಗಿದೆ. ಈ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ ಮಂಡಳಿಯಲ್ಲಿ 243.80 ಲಕ್ಷ ಖರ್ಚಾಗದೆ ಬಾಕಿ ಉಳಿದಿದೆ ಎಂದು ಈ ದಾಖಲೆಗಳು ಹೇಳಿವೆ.
ಅಸಂಘಟಿತ ವಲಯದಲ್ಲಿನ ಹೊನ್ನೊಂದು ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಅಂದರೆ ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ‍್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕರಿಗೆ ನೆರವು ನೀಡುವ ಉದ್ದೇಶದಿಂದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಜಾರಿಗೆ ತರಲಾಗಿದೆ. ಇವರಿಗೆ ಸೌಕರ್ಯ ಒದಗಿಸಲು ನೀಡಿದ ಅನುದಾನ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ ಎಂಬುದು ಈ ದಾಖಲೆಗಳಿಂದ ಸ್ಪಷ್ಟವಾಗಿದೆ.
ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯ ಕಾರ್ಮಿಕ ಬಂಧು ಸೇವೆ ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರ
ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ‍್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ ರನ್ನು ಒಳಗೊಂಡಿರುವ ಈ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ʻಕಾರ್ಮಿಕ ಬಂಧುʼಗಳ ಸೇವೆಯನ್ನು ಕಾಂಗ್ರೆಸ್ ಸರ್ಕಾರವು ರದ್ದುಗೊಳಿಸಿತ್ತು. ಈ ಕುರಿತು ʻದಿ ಫೈಲ್ʼ ವಿಶೇಷ ವರದಿ ಪ್ರಕಟಿಸಿತ್ತು. ನಂತರ ಈ ಯೋಜನೆಯನ್ನು ಪುನಃ ಜಾರಿಗೆ ತರಲಾಗಿತ್ತು.
ಸಾರಿಗೆ ಕಾರ್ಮಿಕರ ಹಣವೂ ಬಾಕಿ
ರಾಜ್ಯ ಸರ್ಕಾರ 2011-12ನೇ ಸಾಲಿನಲ್ಲಿ ʻಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆʼಯನ್ನು ಜಾರಿಗೆ ತಂದಿದೆ. ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಇಂತಹ ಕಾರ್ಮಿಕರು ಅಪಘಾತಕ್ಕಿಡಾಗಿ ಮರಣಕ್ಕೆ ತುತ್ತಾಗುವ ಅಥಚಾ ಶಾಶ್ವತ ಅಂಗವಿಕಲತೆ ಅಥವಾ ತಾತ್ಕಾಲಿಕ ದುರ್ಬಲತೆ ಹೊಂದಿದ ಸಂದರ್ಭದಲ್ಲಿ, ಅವರ ದುಡಿಮೆಯನ್ನೇ ಅವಲಂಬಿಸಿರುವ ಅವರ ಕುಟುಂಬವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ. ಅಪಘಾತದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವು ನೀಡಲು ಈ ಯೋಜನೆ ಜಾರಿಗೆ ತರಲಾಗಿತ್ತು.
ಈ ಯೋಜನೆಗೆ 2022-23ನೇ ಸಾಲಿನಲ್ಲಿ 476.35 ಲಕ್ಷ ಅನುದಾನ ನೀಡಲಾಗಿತ್ತು.ಇದರಲ್ಲಿ 869.78 ಲಕ್ಷ ಖರ್ಚು ಮಾಡಲಾಗಿತ್ತು. ಆದರೂ 125.05 ಲಕ್ಷ ಅನುದಾನ ವೆಚ್ಚವಾಗದೇ ಮಂಡಳಿಯಲ್ಲಿ ಬಾಕಿ ಉಳಿದಿದೆ. 2023-24 ಮತ್ತು 2024-25ನೇ ಸಾಲಿನಲ್ಲಿ ತಲಾ ಹತ್ತು ಕೋಟಿ ಅನುದಾನ ನೀಡಲಾಗಿತ್ತು. 2023-24ನೇ ಸಾಲಿನಲ್ಲಿ 984.41 ಲಕ್ಷ ಅನುದಾನ ಖರ್ಚಾಗಿದೆ. ಈ ಸಾಲಿನಲ್ಲಿ 144.09 ಲಕ್ಷ ಖರ್ಚಾಗದೆ ಬಾಕಿ ಉಳಿದಿದೆ. 2024-25ನೇ ಸಾಲಿನಲ್ಲಿ ನೀಡಿದ ಅನುದಾನಕ್ಕಿಂತ ಹೆಚ್ಚು ಅಂದರೆ 1040.66 ಲಕ್ಷ ಖರ್ಚು ಮಾಡಲಾಗಿತ್ತು. ಆದರೂ 103.43 ಲಕ್ಷ ವೆಚ್ಚವಾಗದೆ ಮಂಡಳಿಯಲ್ಲಿ ಬಾಕಿ ಇತ್ತು.
2025-26ನೇ ಸಾಲಿನಲ್ಲಿಯೂ ಸರ್ಕಾರ ಈ ಯೋಜನೆಗೆ ಹತ್ತು ಕೋಟಿ ರು. ಅನುದಾನ ನೀಡಿದೆ. ಈಗಾಗಲೇ ಐದು ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ ಆಗಸ್ಟ್ ಅಂತ್ಯದವರೆಗೆ 393.63 ಲಕ್ಷ ರು.ಗಳನ್ನು ಬಳಕೆ ಮಾಡಿದೆ.
ದಿನ ಪತ್ರಿಕೆ ವಿತರಿಕರಿಗೂ ಸಿಗದ ನೆರವು
ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆಯನ್ನು 2023-24ನೇ ಸಾಲಿನಲ್ಲಿ ಜಾರಿಗೆ ತರಲಾಗಿದೆ. ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲೀನ ವೃತ್ತಿ ನಿರ್ವಹಿಸುವವರಾಗಿದ್ದಾರೆ.
ಪ್ರತಿನಿತ್ಯ ಮನೆ ಬಾಗಿಲಿಗೆ ಪತ್ರಿಕೆಗಳನ್ನು ವಿತರಿಸುವುದು ಇವರ ಕೆಲಸ. ಈ ಕಾರ್ಮಿಕರಲ್ಲಿ ಬಹುತೇಕರು ದಿನಪತ್ರಿಕೆ ವಿತರಿಸಲು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಕ್ಕೊಳಗಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಗೆ 2023-24ನೇ ಸಾಲಿನಲ್ಲಿ 130 ಲಕ್ಷ ರು. ಅನುದಾನ ಒದಗಿಸಲಾಗಿತ್ತು. ಇದರಲ್ಲಿ ಕೇವಲ 1.24 ಲಕ್ಷ ರು. ಖರ್ಚಾಗಿತ್ತು. 128.76 ಲಕ್ಷ ವೆಚ್ಚವಾಗದೆ ಬಾಕಿ ಉಳಿದಿತ್ತು. 2024-25 ನೇ ಸಾಲಿನಲ್ಲಿ ಈ ಯೋಜನೆಗೆ ಒಂದು ಕೋಟಿ ರು. ಅನುದಾನ ನೀಡಲಾಗಿತ್ತು. ಕೇವಲ 7.21 ಲಕ್ಷ ಮಾತ್ರ ಖರ್ಚಾಗಿತ್ತು. ಹೀಗಾಗಿ ಈ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ 2.21 ಕೋಟಿ ರು. ಖರ್ಚಾಗದೆ ಬಾಕಿ ಉಳಿದಿದೆ ಎಂಬುದು ಕಾರ್ಮಿಕ ಇಲಾಖೆಯ ದಾಖಲೆಗಳಿಂದ ಸ್ಪಷ್ಟವಾಗಿದೆ.
ʻಆಶಾದೀಪʼದ ಕೆಳಗೂ ಕತ್ತಲು!
ರಾಜ್ಯ ಸರ್ಕಾರವು, ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಹೆಚ್ಚು ಹೆಚ್ಚು ನೇಮಕಾತಿ ಮಾಡಿಕೊಳ್ಳಲು ಮಾಲೀಕರನ್ನು/ ಉದ್ಯೋಗದಾತರನ್ನು ಉತ್ತೇಜಿಸುವ ದೃಷ್ಠಿಯಿಂದ ಹಾಗೂ ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗುವಂತೆ ʻಆಶಾದೀಪʼ ಎಂಬ ಯೋಜನೆಯನ್ನು ರೂಪಿಸಿ, ಜಾರಿಗೆ ತಂದಿದೆ.
ಈ ಯೋಜನೆಯನ್ನು ʻಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿʼಯ ಮೂಲಕ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗೆ ನೀಡಲಾಗುತ್ತಿರುವ ಅನುದಾನ ಕೂಡ ಕಳೆದ ಮೂರು ವರ್ಷಗಳಿಂದ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ.
2022-23ನೇ ಸಾಲಿನಲ್ಲಿ ಈ ಯೋಜನೆಗೆಂದು 2.50 ಕೋಟಿ ಮಂಜೂರು ಮಾಡಲಾಗಿತ್ತು. ಇದರಲ್ಲಿ 180.89 ಲಕ್ಷ ರು. ಮಾತ್ರ ಖರ್ಚು ಮಾಡಲಾಗಿತ್ತು. ಈ ಆರ್ಥಿಕ ಸಾಲಿನ ಅಂತ್ಯದವೇಳೆಗೆ ಮಂಡಳಿಯಲ್ಲಿ ಒಟ್ಟು 344.07 ಲಕ್ಷ ರು. ಅನುದಾನ ಖರ್ಚಾಗದೆ ಬಾಕಿ ಉಳಿದಿತ್ತು. 2023-24 ನೇ ಸಾಲಿನಲ್ಲಿಯೂ 2.50 ಕೋಟಿ ಅನುದಾನ ನೀಡಲಾಗಿತ್ತು. ಈ ವರ್ಷ 440.03 ಲಕ್ಷ ಖರ್ಚು ಮಾಡಲಾಗಿತ್ತು. ಆದರೂ 155.04 ಲಕ್ಷ ರು. ಬಾಕಿ ಉಳಿದಿತ್ತು.
2024-25ನೇ ಸಾಲಿನಲ್ಲಿ 1,250 ಲಕ್ಷ ( 12.50 ಕೋಟಿ) ಅನುದಾನ ನೀಡಿ, ಇಷ್ಟೂ ಮೊತ್ತವನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 681.54 ಲಕ್ಷ ಖರ್ಚು ಮಾಡಲಾಗಿದೆ. 7.22 ಕೋಟಿ ರು. ಇನ್ನೂ ಮಂಡಳಿಯ ಬಳಿ ಬಾಕಿ ಇದೆ ಎಂಬುದು ಕಾರ್ಮಿಕ ಇಲಾಖೆಯು ಸಿದ್ಧಪಡಿಸಿದ ಈ ದಾಖಲೆಗಳಿಂದ ಸ್ಪಷ್ಟವಾಗಿದೆ.
ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಹಣ ಖರ್ಚು ಮಾಡದೇ ನಿರ್ಬಂಧ; ಬೆಳಗಲಿಲ್ಲ ‘ಆಶಾದೀಪ’
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕಾರ್ಮಿಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸುವ ‘ಆಶಾದೀಪ’ ಯೋಜನೆ ಸೇರಿದಂತೆ ಕಾರ್ಮಿಕ ಶ್ರೇಯೋಭಿವೃದ್ಧಿಗಾಗಿ ರೂಪಿತವಾಗಿದ್ದ ಯೋಜನೆಗಳು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲೇ ಪರಿಣಾಮಕಾರಿಯಾಗಿ ಅನುಷ್ಠಾನವಾಗಿರಲಿಲ್ಲ ಎಂಬ ಸಂಗತಿಯನ್ನು ಸಿಎಜಿ ವರದಿ ಹೊರಗೆಡವಿದೆ. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.