ಬೆಂಗಳೂರು: ಭ್ರಷ್ಟಾಚಾರ ನಿರ್ಮೂಲನೆಯ ವಿಷಯದಲ್ಲಿ ಸಕ್ರಿಯವಾಗಿರಬೇಕಾಗಿದ್ದ ʻಕರ್ನಾಟಕ ಲೋಕಾಯುಕ್ತʼ ಈಗ ಕುಂಟುತ್ತಾ ಸಾಗಿದೆ. ಇದರಿಂದಾಗಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಜುಲೈ ಅಂತ್ಯದ ವೇಳೆಗೆ ಬಾಕಿ ಇರುವ ದೂರು ಪ್ರಕರಣಗಳ ಸಂಖ್ಯೆ 22,699 ಕ್ಕೆ ಏರಿದೆ.
ಕೇವಲ ಜುಲೈ ತಿಂಗಳೊಂದರಲ್ಲಿಯೇ 1,270 ಪ್ರಕರಣಗಳು ದಾಖಲಾಗಿದ್ದವು. ಈ ತಿಂಗಳಿನಲ್ಲಿ ಒಟ್ಟು 845 ಪ್ರಕರಣಗಳನ್ನಷ್ಟೇ ವಿಲೇವಾರಿ ಮಾಡಲು ಲೋಕಾಯುಕ್ತಕ್ಕೆ ಸಾಧ್ಯವಾಗಿದೆ. ಹೀಗೆ ಪ್ರತಿ ತಿಂಗಳೂ ಸಲ್ಲಿಕೆಯಾಗುವ ದೂರುಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಸಾವಿರಾರು ದೂರು ಪ್ರಕರಣಗಳ ವಿಚಾರಣೆಯೇ ಇನ್ನೂ ಆರಂಭಗೊಂಡಿಲ್ಲ. ಆರಂಭಗೊಂಡಿರುವ ಪ್ರಕರಣಗಳ ವಿಚಾರಣೆ ಕೂಡ ಆಮೆ ವೇಗದಲ್ಲಿ ನಡೆಯುತ್ತಿದೆ.
ಕೇಂದ್ರ ಜಾಗೃತ ಆಯೋಗವು (ಸಿವಿಸಿ) 2024ರ ಡಿಸೆಂಬರ್ 31ರ ವರೆಗಿನ ಅಂಕಿ-ಅಂಶಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿದ 7,072 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ ಎಂದು ಪ್ರಕಟಿಸಿರುವುದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಭ್ರಷ್ಟಾಚಾರ, ಲಂಚಗುಳಿತನ, ಕರ್ತವ್ಯ ಲೋಪ, ಅಧಿಕಾರ ಮತ್ತು ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರತಿ ನಿತ್ಯವೂ ದೂರುಗಳು ದಾಖಲಾಗುತ್ತಲೇ ಇವೆ. ವಿಶೇಷವೆಂದರೇ ಮೂರು ಪಟ್ಟು ಹೆಚ್ಚು ಪ್ರಕರಣಗಳ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಯು ಆರಂಭಿಸಿಯೇ ಇಲ್ಲ ಎಂಬ ವಿಷಯ ಇದೀಗ ಚರ್ಚೆಯ ಮುನ್ನೆಲೆಗೆ ಬಂದಿದೆ.
ಕರ್ನಾಟಕ ಲೋಕಾಯುಕ್ತ ಅಧಿನಿಯಮ-1984ರ ಅಡಿಯಲ್ಲಿ ʻಕರ್ನಾಟಕ ಲೋಕಾಯುಕ್ತʼವನ್ನು ಸ್ಥಾಪಿಸಲಾಗಿದೆ. ಆಡಳಿತ ನಿರ್ವಹಣೆಯಲ್ಲಿ ನಡೆಯುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಶಿಸ್ತಿನ ಪ್ರಕಣಗಳೂ ಸೇರಿದಂತೆ, ಆಡಳಿತ ಕ್ರಮಗಳ ಸಂಬಂಧದಲ್ಲಿ ಬಂದ ದೂರುಗಳ ಬಗ್ಗೆ ವಿಚಾರಣೆ ನಡೆಸುವ ಮೂಲಕ ಸಾರ್ವಜನಿಕ ಆಡಳಿತ ಗುಣಮಟ್ಟಗಳನ್ನು ಸುಧಾರಿಸುವ ಉದ್ದೇಶಕ್ಕಾಗಿ ಲೋಕಾಯುಕ್ತವೆಂಬ ಸಂಸ್ಥೆಯನ್ನು ರಚಿಸುವಂತೆ ಆಡಳಿತ ಸುಧಾರನಾ ಸಮಿತಿಯು ಶಿಫಾರಸು ಮಾಡಿದ್ದ ಹಿನ್ನೆಲೆಯಲ್ಲಿ ಈ ಅಧಿನಿಯಮವನ್ನು ಜಾರಿಗೆ ತಂದು ಸಂಸ್ಥೆ ರಚಿಸಲಾಗಿತ್ತು. ಪ್ರಸ್ತುತ ನ್ಯಾ. ಬಿ.ಎಸ್. ಪಾಟೀಲ ಅವರು ಲೋಕಾಯುಕ್ತರಾಗಿ ಈಗ ಸೇವೆ ಸಲ್ಲಿಸುತ್ತಿದ್ದಾರೆ.
2010 ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ, ಶಿವಮೊಗ್ಗ ಲೋಕಸಭಾ ಸದಸ್ಯ ರಾಘವೇಂದ್ರ ಬಿ.ವೈ. ವಿರುದ್ಧ ವೈ.ಎಸ್.ವಿ. ದತ್ತ ಅಧಿಕಾರ ದುರುಪಯೋಗದ ಕುರಿತು ದೂರು ನೀಡಿದ್ದರು. ಈ ಪ್ರಕರಣ ಕೂಡ ಇನ್ನೂ ವಿಚಾರಣೆಗೆ ಬಾಕಿ ಇದ್ದು, 2023ರ ಮಾರ್ಚ್ ನಿಂದ ʻಅಂತಿಮ ಪರಿಶೀಲನೆʼ (final scrutiny) ನಡೆಯುತ್ತಲೇ ಇದೆ.
ಅದೇ ವರ್ಷ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಕೂಡ ಯಡಿಯೂರಪ್ಪ, ಆಗಿನ ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಕೆ.ಎಸ್. ಸಂಸದ ರಾಘವೇಂದ್ರ ಬಿ.ವೈ, ಆಗಿನ ಸಾರಿಗೆ ಸಚಿವ ಆರ್. ಅಶೋಕ್, ಆಗಿನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಹತ್ತು ಮಂದಿಯ ವಿರುದ್ಧ ಅಧಿಕಾರ ದುರುಪಯೋಗದ ಪ್ರಕರಣ ದಾಖಲಿಸಿದ್ದರು. ಅದೂ ಈಗ ಹೆಚ್ಚಿನ ಪರಿಶೀಲನೆಗೆ ಟಿಪ್ಪಣಿ ಬರೆದ (Further Scrutiny note) ಸ್ಥಿತಿಯಲ್ಲಿಯೇ ಇದೆ. ಇದೇ ರೀತಿ ರಾಜಕೀಯ ಮಹತ್ವ ಪಡೆದ ಅನೇಕ ದೂರುಗಳ ವಿಚಾರಣೆ ಕೂಡ ಬಾಕಿ ಇವೆ.
ಬಾಕಿ ಇರುವ 22,699 ಪ್ರಕರಣಗಳ ಪೈಕಿ, 7,143 ಪ್ರಕರಣಗಳು ಲೋಕಾಯುಕ್ತರ ವ್ಯಾಪ್ತಿಗೆ ಸಂಬಂಧಿಸಿದವುಗಳಾಗಿದ್ದರೆ 6,948 ಪ್ರಕರಣಗಳು ಉಪ ಲೋಕಾಯುಕ್ತ-1 ರ ವ್ಯಾಪ್ತಿಗೆ ಸೇರಿದ ಪ್ರಕರಣಗಳಾಗಿವೆ. ಉಳಿದ 8,608 ಪ್ರಕರಣಗಳು ಉಪ ಲೋಕಾಯುಕ್ತ-2 ರ ವ್ಯಾಪ್ತಿಗೆ ಸೇರಿವೆ ಎಂದು ಕರ್ನಾಟಕ ಲೋಕಾಯುಕ್ತವೇ ಅಧಿಕೃತವಾಗಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಕಳೆದ ಜುಲೈ ಅಂತ್ಯದವರೆಗೆ 1,296 ಶಿಸ್ತು ವಿಚಾರಣಾ ಪ್ರಕರಣಗಳು (Disciplinary Inquiry Case) ಕೂಡ ಬಾಕಿ ಇವೆ. ಸದ್ಯ ತಿಂಗಳಿಗೆ ಬೆರಳೆಣಿಕೆಯಷ್ಟು ಪ್ರಕರಣಗಳನ್ನುಮಾತ್ರ ವಿಲೇವಾರಿ ಮಾಡಲು ಲೋಕಾಯುಕ್ತಕ್ಕೆ ಸಾಧ್ಯವಾಗುತ್ತಿದೆ. ಇದರಿಂದ ಈ ಪ್ರಕರಣಗಳ ಸಂಖ್ಯೆ ಕೂಡ ಬೆಳೆಯುತ್ತಲೇ ಇದೆ. ಬೇಗನೆ ಈ ಪ್ರಕರಣಗಳು ಇತ್ಯರ್ಥವಾಗದೇ ಇರುವುದು ಸರ್ಕಾರದ ಆಡಳಿತದ ಮೇಲೂ ಪರಿಣಾಮ ಬೀರಲಾರಂಭಿಸಿದೆ.
ವಿಶೇಷವೆಂದರೆ ಬಾಕಿ ಇರುವ ದೂರು ಪ್ರಕರಣಗಳಲ್ಲಿ ಲೋಕಾಯುಕ್ತ ಬಿ.ಎಸ್. ಪಾಟೀಲ ಮತ್ತು ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರು ದಾಖಲಿಸಿರುವ ʻಸು ಮೋಟೋʼ (Suo Moto) ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ತಾನು ದಾಖಲಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲಾಗದ ಸ್ಥಿತಿಗೆ ಈಗ ಕರ್ನಾಟಕ ಲೋಕಾಯುಕ್ತ ಸಿಲುಕಿದೆ.
ಜುಲೈ ತಿಂಗಳೊಂದರಲ್ಲಿಯೇ 801 ಇತರೆ ದೂರಿನ ಪ್ರಕರಣಗಳು ನೊಂದಾಯಿಸಲ್ಪಟ್ಟಿವೆ. 513 ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ ಎಂದು ಲೋಕಾಯುಕ್ತವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
‘ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ಪರಿಶೀಲನೆ (Scrutiny) ಗೆ ಕನಿಷ್ಠ ಏಳೆಂಟು ತಿಂಗಳವರೆಗೆ ನಡೆಯುತ್ತಿದೆ. ತದನಂತರ ನೋಟೀಸ್ ಜಾರಿಯಾಗುವ ಹೊತ್ತಿಗೆ ಅಧಿಕಾರಿ ವರ್ಗ ನಿವೃತ್ತಿ ಹೊಂದಿರುತ್ತಾರೆ. ಮತ್ತೆ ಆಯಾ ಅಧಿಕಾರಿಗಳ ಹೊಸ ವಿಳಾಸ ತರಲು ದೂರುದಾರರಿಗೆ ನೋಟೀಸ್ ಜಾರಿ ಮಾಡುತ್ತಾರೆ. ನಿಷ್ಣಾತ ಅಧಿಕಾರಿಗಳು ತಮ್ಮ ವಿಳಾಸ ಯಾರಿಗೂ ತಿಳಿಯದಂತೆ ಎಚ್ಚರಿಕೆ ವಹಿಸುತ್ತಾರೆ. ಹೀಗಾಗಿ ಪ್ರಕರಣಗಳು ಕುಂಟುತ್ತಾ ಸಾಗುತ್ತವೆ ಎನ್ನುತ್ತಾರೆ,’ ʻಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆʼಯ ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ ಹಿರೇಚೌಟಿ.
ಸಿಬ್ಬಂದಿ ಕೊರತೆ ಕಾರಣ?
ಲೋಕಾಯುಕ್ತವು ಹೀಗೆ ಕುಂಟುತ್ತಾ ಸಾಗಲು ಸಿಬ್ಬಂದಿಯ ಕೊರತೆಯೂ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಜುಲೈನಲ್ಲಿ ಲೋಕಾಯುಕ್ತದಲ್ಲಿ ತೆಗೆದುಕೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ಲೋಕಾಯುಕ್ತ ನಿಬಂಧಕರು ಈ ವಿಷಯವನ್ನೂ ಪ್ರಸ್ತಾಪಿಸಿದ್ದರು.
ಸಂಸ್ಥೆಗೆ ಒಟ್ಟು 1,929 ಅಧಿಕಾರಿಗಳು ಹಾಗೂ ಸಿಬ್ಬಂದಿ ಹುದ್ದೆಗಳು ಮಂಜೂರಾಗಿದ್ದರೂ ಪೂರ್ತಿಯಾಗಿ ತುಂಬಲು ಸಾಧ್ಯವಾಗಿಲ್ಲ. ಗ್ರೂಪ್ ʻಎʼ ಮಂಜೂರಾದ 187 ಹುದ್ದೆಗಳ ಪೈಕಿ 45, ಗ್ರೂಪ್ ʻಬಿʼಯ ಮಂಜೂರಾದ 156 ಹುದ್ದೆಗಳ ಪೈಕಿ 24, ಗ್ರೂಪ್ ʻಸಿʼಯ 1379 ಹುದ್ದೆಗಳ ಪೈಕಿ 445 ಹಾಗೂ ಗ್ರೂಪ್ ʻಡಿʼಯ 207 ಹುದ್ದೆಗಳ ಪೈಕಿ 62 ಹುದ್ದೆಗಳು ಒಟ್ಟು 576 ಹುದ್ದೆಗಳು ಖಾಲಿ ಇವೆ ಎಂದು ಅವರು ತಿಳಿಸಿದ್ದಾರೆ.
ಗ್ರೂಪ್ -ಸಿ ವೃಂದದ ಪ್ರಥಮ, ದ್ವೀತಿಯ ದರ್ಜೆ ಸಹಾಯಕರು, ಕ್ಲರ್ಕ್ – ಟೈಪಿಸ್ಟ್ ಗಳು ಸೇರಿದಂತೆ ಒಟ್ಟು 66 ಹುದ್ದೆಗಳಿಗೆ ನೇರ ನೇಮಕಾತಿ, ಖಾಲಿಯಿರುವ 8 ಜಿಲ್ಲೆಗಳಲ್ಲಿ ಎಸ್ಪಿಗಳನ್ನು ತುಂಬುವಂತೆ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸದಾಗಿ 339 ಹುದ್ದೆಗಳನ್ನು ಸೃಜಿಸಲು ಕಳೆದ ವರ್ಷ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅದಿನ್ನೂ ಪರಿಶೀಲನಾ ಹಂತದಲ್ಲಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದರು.
ದಾಳಿ ಪ್ರಕರಣಗಳ ಮೇಲೂ ಪರಿಣಾಮ
ಲೋಕಾಯುಕ್ತವು ತಾನು ನಡೆಸಿದ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ತ್ವರಿತವಾಗಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಕಳೆದ ಎರಡು ವರ್ಷಗಳಲ್ಲಿ ನಡೆದ ಲೋಕಾಯುಕ್ತ ದಾಳಿಗೆ ಒಳಪಟ್ಟ ಒಬ್ಬರೇ ಒಬ್ಬ ಅಧಿಕಾರಿಗೂ ಇದುವರೆಗೆ ಶಿಕ್ಷೆಯಾಗಿಲ್ಲ.
ಲೋಕಾಯುಕ್ತವು ಕಳೆದ ಎರಡು ವರ್ಷಗಳಲ್ಲಿ, ಒಟ್ಟು 219 ಸರ್ಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧ 218 ದಾಳಿ ನಡೆಸಿತ್ತು. ಇದರಲ್ಲಿ 150 ಪ್ರಕರಣಗಳಿಗೆ ಸಂಬಂಧಪಟ್ಟ ಅಧಿಕಾರಿ ಅಥವಾ ನೌಕರರ ವಿರದ್ಧ ಮುಂದಿನ ಕ್ರಮಕ್ಕಾಗಿ ಲೋಕಾಯುಕ್ತವು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದೆ.
ಇದರಲ್ಲಿ ಕೇವಲ 82 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿ ಅಥವಾ ನೌಕರರನ್ನುಸೇವೆಯಿಂದ ಅಮಾನತ್ತು ಮಾಡಲಾಗಿದೆ. ನಾಲ್ಕು ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗಾಗಿ (ಪಿಎಸ್‌ಒ) ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. 2 ಪ್ರಕರಣಗಳಲ್ಲಿ ಸರ್ಕಾರವು ಪ್ರಾಷಿಕ್ಯೂಷನ್‌ಗೆ ಅನುಮತಿಯನ್ನು ನೀಡಿದೆ. ಉಳಿದ ಎರಡು ಪ್ರಕರಣಗಳಲ್ಲಿ ಸರ್ಕಾರ ಅನುಮತಿ ನೀಡುವುದು ಇನ್ನೂ ಬಾಕಿ ಇದೆ.
ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇತ್ತೀಚೆಗೆ ನಡೆದ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ. ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು, ದಾಳಿಗೆ ಒಳಗಾದ ಅಧಿಕಾರಿಗಳ ಸಂಪೂರ್ಣ ಮಾಹಿತಿ, ವಶಪಡಿಸಿಕೊಂಡಿರುವ ಆಸ್ತಿಯ ವಿವರಗಳನ್ನು ಹಂಚಿಕೊಂಡಿದ್ದಾರೆ.
218 ದಾಳಿ ಪ್ರಕರಣಗಳ ಪೈಕಿ 67 ಪ್ರಕರಣಗಳಲ್ಲಿ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 34 ಪ್ರಕರಣಗಳಲ್ಲಿ ಹೈಕೋರ್ಟ್ ಎಫ್‌ಐಆರ್ ಅನ್ನು ರದ್ದುಪಡಿಸಿದೆ. ಮೇಲ್ಮನವಿ ಸಲ್ಲಿಸುವ ಬಗ್ಗೆ ಕ್ರಮ ಜಾರಿಯಲ್ಲಿದೆ. 113 ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೂರು ವರ್ಷಗಳಲ್ಲಿ 222 ಲೋಕಾಯುಕ್ತ ದಾಳಿ; ಒಬ್ಬರೇ ಒಬ್ಬ ಅಧಿಕಾರಿಗೂ ಶಿಕ್ಷೆ ಇಲ್ಲ
ಕಳೆದ ಮೂರು ವರ್ಷಗಳಲ್ಲಿ ಲೋಕಾಯುಕ್ತವು ದಾಳಿ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಬ್ಬರೇ ಒಬ್ಬ ಅಧಿಕಾರಿಗೂ ಶಿಕ್ಷೆಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿಗೆ ತಿಳಿಸಿದ್ದರು. ಈ ಕುರಿತು ʻದಿ ಫೈಲ್ʼ ವರದಿ ಮಾಡಿತ್ತು.
ಸುಲಿಗೆ; ಸರ್ಕಾರಕ್ಕೆ ಬರೆದ ಪತ್ರ, ಹೇಳಿಕೆಗಳಲ್ಲಿ ಸಚಿವ ತಿಮ್ಮಾಪುರ ಹೆಸರಿಲ್ಲ, ರಕ್ಷಣೆಗಿಳಿದಿದೆಯೇ ಲೋಕಾಯುಕ್ತ?
ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಪ್ರಕರಣದ ಆರೋಪಿಗಳೊಂದಿಗೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ಸಂಪರ್ಕದಲ್ಲಿದ್ದರು ಮತ್ತು ಆರೋಪಿಗಳನ್ನು ಭೇಟಿ ಮಾಡಿದ್ದರು ಎಂಬ ಸಂಗತಿ ಹೊರಬಿದ್ದಿತ್ತು. ಈ ಕುರಿತು ʻದಿ ಫೈಲ್ʼ ಸರಣಿ ವರದಿ ಪ್ರಕಟಿಸಿತ್ತು.