ಬೆಂಗಳೂರು: ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʻಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿʼ (ಕೆಬಿಒಸಿಡಬ್ಲ್ಯುಡಬ್ಲ್ಯುಬಿ)ಯಲ್ಲಿ ಅವ್ಯವಹಾರ ನಡೆದಿದ್ದು, ಮಂಡಳಿಗೆ ಜಮೆಯಾಗಿದ್ದ 12.09 ಕೋಟಿ ರು. ನಾಪತ್ತೆಯಾಗಿದೆ.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ (ಕೆಎಸ್‌ಡಿಬಿ) ಜಮೆಯಾದ ಕಾರ್ಮಿಕ ಉಪಕರ 11.91 ಕೋಟಿ ಮತ್ತು ಆರ್ ಟಿಜಿಎಸ್ ಮೂಲಕ ಪಾವತಿಯಾದ 21 ಪ್ರಕರಣಗಳಲ್ಲಿನ ಹಣ 0.18 ಕೋಟಿ ಸೇರಿ ಒಟ್ಟು 12.09 ಕೋಟಿ ರು. ಮಂಡಳಿಯ ಬ್ಯಾಂಕ್ ಖಾತೆಯಲ್ಲಿ ಇಲ್ಲ.
ಕೆಎಸ್‌ಡಿಬಿ ವಿವಿಧ ವಿಭಾಗಗಳು 2018-19 ರಿಂದ 2022-23ರ ಅವಧಿಯಲ್ಲಿ ಉಪಕರ ಸಂಗ್ರಹಿಸಿ ಮಂಡಳಿಗೆ ಕಳುಹಿಸಿವೆ. ಡಿಡಿ/ ಚೆಕ್ಕುಗಳ ಮೂಲಕ ಈ ಹಣವನ್ನು ಮಂಡಳಿಗೆ ಪಾವತಿಸಲಾಗಿದೆ. ಆದರೆ ಒಟ್ಟು 257 ಪ್ರಕರಣಗಳಿಗೆ ಸಂಬಂಧಿಸಿದ 11.91 ಕೋಟಿ ರು.ಗಳು 2024ರ ಜನವರಿಯವರೆಗೆ ಮಂಡಳಿಯ ಬ್ಯಾಂಕ್ ಖಾತೆಗಳಲ್ಲಿ ಪತ್ತೆಯಾಗಿಲ್ಲ.
ಈ ವಿಷಯವನ್ನು ಮಹಾಲೇಖಪಾಲರು (ಸಿಎಜಿ) ʻಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿʼಯ (ಕೆಬಿಒಸಿಡಬ್ಲ್ಯುಡಬ್ಲ್ಯುಬಿ) ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಪತ್ತೆ ಹಚ್ಚಿದ್ದಾರೆ. ಈ ಸಿಎಜಿ ವರದಿಯನ್ನು ಇತ್ತೀಚೆಗೆ ನಡೆದ ವಿಧಾನ ಸಭೆಯ ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ. ಈ ಮಂಡಳಿಯು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಂತೋಷ್ ಲಾಡ್ ಈಗ ಕಾರ್ಮಿಕ ಸಚಿವರಾಗಿದ್ದಾರೆ.
ಆರ್ ಟಿಜಿಎಸ್ ಮೂಲಕ ಮಂಡಳಿಗೆ ಪಾವತಿಯಾದ 21 ಪ್ರಕರಣಗಳಲ್ಲಿನ ಹಣ 0.18 ಕೋಟಿ ಮಂಡಳಿಯ ಬ್ಯಾಂಕ್ ಖಾತೆಗಳಲ್ಲಿ ಪತ್ತೆಯಾಗಿಲ್ಲ. ಈ ಬಗೆಗಿನ ಆರ್‌ಟಿಜಿಎಸ್ ವಿವರಗಳನ್ನು ಕೇಳಿದರೂ ಕೆಎಸ್ ಡಿಬಿಯು ಒದಗಿಸಿಲ್ಲ. ಆದ್ದರಿಂದ ಈ ನಿಧಿಗಳ ತಾತ್ಕಾಲಿಕ ದುರುಪಯೋಗದ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಹೀಗಾಗಿ, ಕೆಎಸ್‌ಡಿಬಿಯಿಂದ ಜಮಾ ಮಾಡಲಾಗಿದೆ ಎನ್ನಲಾದ ಒಟ್ಟು 12.09 ಕೋಟಿಗಳನ್ನು (11.91 ಕೋಟಿ ಮತ್ತು 0.18 ಕೋಟಿ) ಮಂಡಳಿಯ ಬ್ಯಾಂಕ್ ಖಾತೆಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.
ಈ ಬಗ್ಗೆ ಸಿಎಜಿಯು ಸರ್ಕಾರದಿಂದ ವಿವರಣೆಯನ್ನು ಕೋರಿದ್ದು, ಮಂಡಳಿಯ ಬ್ಯಾಂಕ್ ತಖ್ತೆಗಳಲ್ಲಿ 6.82 ಕೋಟಿ ರು. ಗಳನ್ನು ಪತ್ತೆಹಚ್ಚಲಾಗಿದ್ದು ಕೆಎಸ್‌ಡಿಬಿ ಎಲ್ಲಾ ವಿಭಾಗೀಯ ಅಧಿಕಾರಿಗಳಿಗೆ ಪತ್ರಗಳನ್ನು ಕಳುಹಿಸುವ ಮೂಲಕ ಉಳಿದ 5.27 ಕೋಟಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ ಎಂದು ಸಿಎಜಿಯ ಈ ವರದಿಯಲ್ಲಿ ತಿಳಿಸಲಾಗಿದೆ.
ಕಾರ್ಮಿಕ ಉಪಕರ ಸಂಗ್ರಹಣೆ ಮತ್ತು ಜಮಾವಣೆಯನ್ನು ಗಮನಿಸಲು ಮಂಡಳಿಯಲ್ಲಿ ಸೂಕ್ತ ವ್ಯವಸ್ಥೆ ಇರಲಿಲ್ಲ. ವ್ಯವಸ್ಥೆಯಲ್ಲಿನ ನ್ಯೂನತೆಗಳು ಮತ್ತು ಉಪಕರ ಮೊತ್ತದ ಸಂಗ್ರಹಣೆ ಮತ್ತು ಪಾವತಿಯಲ್ಲಿ ಹೊಂದಾಣಿಕೆಯಾಗದ ಕಾರಣ ಸ್ಥಳೀಯ ಸಂಸ್ಥೆಗಳು ಅಥವಾ ಪ್ರಾಧಿಕಾರಗಳು ಸಂಗ್ರಹಿಸಿದ ಮೊತ್ತವನ್ನು ವಿಳಂಬವಾಗಿ ಹಾಗೂ ಕಳುಹಿಸದೇ ಇರಲು ಕಾರಣವಾಗಿದೆ ಎಂದು ಸಿಎಜಿಯು ವರದಿಯಲ್ಲಿ ಬೊಟ್ಟು ಮಾಡಿದೆ.
ಕಾರ್ಮಿಕ ಕಲ್ಯಾಣ ಉಪಕರಕ್ಕಾಗಿ ಪಡೆದ ಮೊತ್ತಗಳ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಈ ಹಣವನ್ನು ಮಂಡಳಿಯ ಖಾತೆಗೆ ಸಮಯೋಚಿತವಾಗಿ ಜಮಾ ಆಗುವಂತೆ ಮಾಡುವಲ್ಲಿ ಮಂಡಳಿ ವಿಫಲವಾಗಿದೆ. ಸರ್ಕಾರಿ ಸಂಸ್ಥೆಗಳು ಹಾಗೂ ಇತರ ಮಂಡಳಿಗಳು ಕಳುಹಿಸಿದ ಉಪಕರ ಮೊತ್ತಗಳು ಮತ್ತು ಮಂಡಳಿಯು ಸ್ವೀಕರಿಸಿದ ಮೊತ್ತಗಳ ನಡುವೆ ಗಮನಾರ್ಹ ವ್ಯತ್ಯಾಸಗಳನ್ನು ಗಮನಿಸಲಾಗಿದೆ ಎಂದೂ ಸಿಎಜಿ ವರದಿ ಹೇಳಿದೆ.
ಸ್ಥಳೀಯ ಪ್ರಾಧಿಕಾರವು ಕಟ್ಟಡ ಅಥವಾ ಇತರ ನಿರ್ಮಾಣ ಕಾರ್ಯಗಳಿಗೆ ಅನುಮೋದನೆ ನೀಡುವ ಸಮಯದಲ್ಲಿ ಮಂಡಳಿಯು ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಯಗಳ ವೆಚ್ಚದ ಮೇಲೆ ಉದ್ಯೋಗದಾತರಿಂದ ಶೇಕಡಾ ಒಂದರ ದರದಲ್ಲಿ ಉಪಕರ ವಿಧಿಸುತ್ತದೆ ಮತ್ತು ಸಂಗ್ರಹಿಸುತ್ತದೆ.
ಸರ್ಕಾರ ಅಥವಾ ಸಾರ್ವಜನಿಕ ವಲಯದ ಸಂಸ್ಥೆಯ ಕಟ್ಟಡ ಅಥವಾ ಇತರ ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದಂತೆ, ಚಾಲ್ತಿಯಲ್ಲಿರುವ ಬಿಲ್ಲುಗಳ ಮೂಲದಲ್ಲೇ ಉಪಕರವನ್ನು ಕಡಿತಗೊಳಿಸುತ್ತವೆ. ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ಸರ್ಕಾರವು ಸಂಗ್ರಹಿಸಿದ ಉಪಕರವನ್ನು ಸಂಗ್ರಹಿಸಿದ 30 ದಿನಗಳ ಒಳಗೆ ಮಂಡಳಿಗೆ ಪಾವತಿಸಬೇಕು. ಮುಂಚಿತವಾಗಿ ಉಪಕರವನ್ನು ಪಾವತಿಸುವುದು ನಿರ್ಮಾಣ ವೆಚ್ಚದ ಅಂತಿಮ ಮೌಲ್ಯಮಾಪನಕ್ಕೆ ಒಳಪಟ್ಟಿರುತ್ತದೆ.
ಕಾರ್ಮಿಕ ಉಪಕರ ಮೊತ್ತವನ್ನು ಸ್ಥಳೀಯ ಸಂಸ್ಥೆಗಳು ಕಟ್ಟಡ ಪರವಾನಗಿ ಅರ್ಜಿದಾರರಿಂದ ಡಿಡಿ / ಚೆಕ್ ರೂಪದಲ್ಲಿ ಸಂಗ್ರಹಿಸಿ ಮಂಡಳಿಗೆ ಕಳುಹಿಸುತ್ತವೇ. ಇಲ್ಲವೇ, ಕಟ್ಟಡ ಪರವಾನಗಿ ಅರ್ಜಿದಾರನು ಕಾರ್ಮಿಕ ಉಪಕರ ಮೌಲ್ಯಮಾಪನ ಮೊತ್ತವನ್ನು ನೇರವಾಗಿ ಮಂಡಳಿಯ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಸೂಚಿಸುತ್ತವೆ. ಬಹುತೇಕ ಸ್ಥಳೀಯ ಸಂಸ್ಥೆಗಳು ಕಾರ್ಮಿಕ ಉಪಕರ ಮೊತ್ತವನ್ನು ಸಂಗ್ರಹಿಸಿ, ಅದರ ಸ್ವಂತ ಖಾತೆಗೆ ಜಮಾ ಮಾಡಿಕೊಂಡು ಮುಂದೆ ಎಲ್ಲ ಹಣವನ್ನೂ ಒಟ್ಟುಗೂಡಿಸಿ ಮಂಡಳಿಗೆ ಪಾವತಿ ಮಾಡುತ್ತವೆ.
ಲೋಕೋಪಯೋಗಿ, ನೀರಾವರಿ ಮುಂತಾದ ಸರ್ಕಾರಿ ಇಲಾಖೆಗಳು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಾಗ, ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ಲುಗಳಿಂದ ಕಾರ್ಮಿಕ ಉಪಕರ ಮೊತ್ತವನ್ನು ಕಡಿತಗೊಳಿಸಿ ಸರ್ಕಾರದ ಸಾರ್ವಜನಿಕ ಖಾತೆಗೆ ಭರಿಸುತ್ತವೆ. ಆನಂತರ ಖಜಾನೆಗಳ ಆಯುಕ್ತರು ಸಾರ್ವಜನಿಕ ಖಾತೆಯಲ್ಲಿ ಸಂಗ್ರಹವಾದ ಬಾಕಿಯನ್ನು ನಿಯಮಿತವಾಗಿ ಮಂಡಳಿಯ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಾರೆ.
ಉಪಕರ ಪಾವತಿಸುವಲ್ಲಿ ಪಾರದರ್ಶಕ ವ್ಯವಸ್ಥೆ ಇಲ್ಲದಿರುವುದು, ಅವ್ಯವಹಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಮಂಡಳಿಯು ಉಪಕರ ನಿರ್ಧಾರ ಮಾಡುವ, ಸಂಗ್ರಹಣೆ ಮಾಡುವ ಮತ್ತು ಪಾವತಿಸುವ ಸ್ಥಳೀಯ ಸಂಸ್ಥೆಗಳ ಅಥವಾ ಪ್ರಾಧಿಕಾರಗಳ ಬಗ್ಗೆ ಅಗತ್ಯ ದಾಖಲೆಗಳನ್ನೇ ಹೊಂದಿಲ್ಲ ಎಂದೂ ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ವಸೂಲಿಯೇ ಆಗದ 18.12 ಕೋಟಿ
ಮಂಡಳಿಯು 2007-08 ರಿಂದ ಸಂಗ್ರಹವಾದ ಒಟ್ಟು 9,654 ಕೋಟಿ ರು.ಗಳಲ್ಲಿ ಒಟ್ಟು 218.12 ರು. ಕೋಟಿ ಮೌಲ್ಯದ ದೋಷಯುಕ್ತ ಚೆಕ್ ಗಳು ಅಥವಾ ಡಿಮ್ಯಾಂಡ್ ಡ್ರಾಫ್ಟ್ ಗಳನ್ನು ಹಿಂದಿರುಗಿಸಿದೆ. ಈ ಪೈಕಿ 79.90 ಕೋಟಿ ಮೌಲ್ಯದ 7,139 ಚೆಕ್ಕು ಅಥವಾ ಡಿಮ್ಯಾಂಡ್ ಡ್ರಾಫ್ಟ್‌ಗಳು ತಪ್ಪಾದ ಸ್ವೀಕೃತಕರ್ತನ ಹೆಸರು ಮತ್ತು ಅವಧಿ ಮೀರಿದ ದಿನಾಂಕಗಳಂತಹ ಕಾರಣಗಳಿಗಾಗಿ ಮಂಡಳಿಯು ಕೊಟ್ಟವರಿಗೆ ಹಿಂದಿರುಗಿಸಿದ್ದರೆ, 78.22 ಕೋಟಿ ಮೌಲ್ಯದ 2,515 ದೋಷಯುಕ್ತ ಚೆಕ್ಕು ಅಥವಾ ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ಅವಧಿ ಮುಗಿದ ಅಥವಾ ಅಸ್ತಿತ್ವದಲ್ಲಿಲ್ಲದ ಖಾತೆಗಳಿಂದ ಪಾವತಿಸಲಾಗಿದೆ ಎಂದು ಬ್ಯಾಂಕುಗಳು ಹಿಂದಿರುಗಿಸಿವೆ.
ಈ ಸಮಸ್ಯೆಯನ್ನು ಪರಿಹರಿಸಲು, ಮಂಡಳಿಯು 2022ರಲ್ಲಿಯೇ ಈ ರೀತಿ ಹಣವನ್ನು ಪಾವತಿಸಿದ ಏಜೆನ್ಸಿಗಳಿಗೆ, ಪ್ರಾಧಿಕಾರಗಳಿಗೆ ಮತ್ತು ನಿರ್ವಹಣಾ ಇಲಾಖೆಗಳಿಗೆ ವಿವರಗಳನ್ನು ಕೋರಿ ಪತ್ರಗಳನ್ನು ಕಳುಹಿಸಿಕೊಟ್ಟಿದೆ. ಆದರೆ ಪರಿಷ್ಕೃತ ಅಥವಾ ಸರಿಪಡಿಸಿದ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್‌ಗಳು ಮಂಡಳಿಗೆ ಬಂದೇ ಇಲ್ಲ ಎಂಬ ವಿಷಯವನ್ನು ಸಿಎಜಿಯು ತನ್ನ ವರದಿಯಲ್ಲಿ ಎತ್ತಿ ತೋರಿಸಿದೆ.
ಮಂಡಳಿಯು ಹಿಂದಿರುಗಿಸಿದ ಚೆಕ್ ಗಳು ಮತ್ತು ಡಿಮ್ಯಾಂಡ್ ಡ್ರಾಫ್ಟ್ ಗಳನ್ನು ಪತ್ತೆಹಚ್ಚಲು ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಬೇಕೆಂದು ಮತ್ತು ಈ ಮೂಲಕ ಸಂಗ್ರಹಿಸಿದ ಉಪಕರದ ಸರಿಯಾದ ಲೆಕ್ಕಪತ್ರವನ್ನು ಇಟ್ಟುಕೊಳ್ಳಲು ಕ್ರಮ ತೆಗೆದುಕೊಳ್ಳಬೇಕೆಂದು ಈ ಹಿಂದೆಯೇ ಲೆಕ್ಕಪರಿಶೋಧನಾ ವರದಿಯಲ್ಲಿ ಮಂಡಳಿಯ ಗಮನಕ್ಕೆ ತರಲಾಗಿದ್ದರೂ ಮಂಡಳಿಯು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸಿಎಜಿಯು ಚಾಟಿ ಬೀಸಿದೆ.
7,000 ಲ್ಯಾಪ್‌ಟಾಪ್ ಖರೀದಿ; ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 23 ಕೋಟಿ ರು. ಹಗರಣ
ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಬೆಳಗಾವಿ, ಕಲ್ಬುರ್ಗಿ, ಹಾಸನ, ಬೆಂಗಳೂರು-1, ಬೆಂಗಳೂರು-2 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ತಲಾ 1,400 ಲ್ಯಾಪ್‌ಟಾಪ್‌ಗಳಂತೆ ಒಟ್ಟು 7,000 ಲ್ಯಾಪ್‌ಟಾಪ್‌ಗಳನ್ನು 49.75 ಕೋಟಿ ರು. ದರದಲ್ಲಿ ಖರೀದಿಸಿತ್ತು. ಮುಕ್ತ ಮತ್ತು ಆನ್‌ಲೈನ್ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಲ್ಯಾಪ್ ಟಾಪ್ ಖರೀದಿಸಿರುವುದು ಬಹಿರಂಗಗೊಂಡಿತ್ತು. ಇದು 23.15 ಕೋಟಿ ರು. ಹಗರಣವಾಗಿತ್ತು. ಈ ಬಗ್ಗೆ ʻದಿ ಫೈಲ್ʼ ವಿಶೇಷ ವರದಿ ಪ್ರಕಟಿಸಿತ್ತು.