ಬೆಂಗಳೂರು; ಅಬಕಾರಿ ಅಧಿನಿಯಮಗಳ ಅಡಿಯಲ್ಲಿ ಅವಕಾಶಗಳು ಇರದಿದ್ದರೂ ಸಹ ರಾಜ್ಯದ ಪ್ರತಿಷ್ಠಿತ ಮದ್ಯ ತಯಾರಿಕೆಯ ಕಂಪನಿಗಳಾದ ಜೆ ಪಿ ಡಿಸ್ಟಿಲಿರೀಸ್ ಸೇರಿದಂತೆ 7 ಡಿಸ್ಟಿಲರಿಗಳು ಉತ್ಪಾದನೆ, ಬಾಟ್ಲಿಂಗ್ ಟೈ – ಅಪ್ ಒಪ್ಪಂದ ಮಾಡಿಕೊಂಡಿರುವುದನ್ನು ಸಿಎಜಿಯು ಲೆಕ್ಕಪರಿಶೋಧನೆ ವೇಳೆ ಪತ್ತೆ ಹಚ್ಚಿದೆ.
ಡಿಸ್ಟಿಲರಿ ಪರವಾನಿಗೆ ಹೊಂದಿರುವ ಜನಪ್ರಿಯವಲ್ಲದ ಬ್ರ್ಯಾಂಡ್ ಹೊಂದಿರುವವರು, ಜನಪ್ರಿಯ ಬ್ರ್ಯಾಂಡ್ ಹೊಂದಿರುವವರೊಂದಿಗೆ ಇಂತಹ ಬಾಟಲ್ ಟೈ-ಅಪ್ ವ್ಯವಸ್ಥೆಯಲ್ಲಿ ತೊಡಗಿರುವುದನ್ನು ಪತ್ತೆ ಹಚ್ಚಿರುವ ಪ್ರಧಾನ ಮಹಾಲೇಖಪಾಲರು, ಇಂತಹ ವ್ಯವಸ್ಥೆಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ಮತ್ತು ಈ ಸಂಬಂಧ ರಾಜ್ಯ ಸರ್ಕಾರವು ಇದುವರೆಗೆ ನಿರ್ದಿಷ್ಟ ನಿಯಮಗಳನ್ನೂ ರೂಪಿಸಿಲ್ಲ ಎಂದು ಬಹಿರಂಗಗೊಳಿಸಿದೆ.
ಅದಷ್ಟೇ ಅಲ್ಲ, ರಾಜ್ಯದಲ್ಲಿ ಯಾವುದೇ ಡಿಸ್ಟಿಲಿರಿಗಳನ್ನು ಹೊಂದಿರದೇ ಮತ್ತು ಯಾವುದೇ ಹೂಡಿಕೆಯನ್ನು ಮಾಡದೇ, ಇದಕ್ಕೆ ಔಪಚಾರಿಕೆ ಪರವಾನಿಗೆಯಿಲ್ಲದೆಯೂ ರಾಜ್ಯದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿವೆ.
ಗೋವಾ, ಕೇರಳ, ಆಂಧ್ರ ಪ್ರದೇಶದಲ್ಲಿ ಇಂತಹ ವ್ಯವಸ್ಥೆಗೆ ಶುಲ್ಕ ವಿಧಿಸಲು ಅವಕಾಶ ಕಲ್ಪಿಸಿವೆ. ಆದರೆ ರಾಜ್ಯದಲ್ಲಿ ಮಾತ್ರ ಇದುವರೆಗೂ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿಗಳಷ್ಟು ನಷ್ಟ ಸಂಭವಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
2025ರ ಆಗಸ್ಟ್‌ನಲ್ಲಿ ನಡೆದಿದ್ದ ರಾಜ್ಯ ವಿಧಾನಮಂಡಲದಲ್ಲಿ ರಾಜ್ಯ ಅಬಕಾರಿಗೆ ಸಂಬಂಧಿಸಿದಂತೆ ಮಂಡನೆಯಾಗಿರುವ ಸಿಎಜಿ ವರದಿಯು, ಬಾಟ್ಲಿಂಗ್ ಟೈ ಅಪ್ ವ್ಯವಸ್ಥೆ ಮೇಲೆ ಬೆಳಕು ಚೆಲ್ಲಿದೆ.
ಕರ್ನಾಟಕ ಅಬಕಾರಿ ಅಧಿನಿಯಮ 1965ರ ಪರಿಚ್ಛೇಧ 16ರ ಪ್ರಕಾರ ಅಬಕಾರಿ ಆಯಕ್ತರು ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ನಂತರ ಡಿಸ್ಟಿಲರಿಗಳು ಮತ್ತು ಬ್ರೂವೆರಿಗಳನ್ನು ಸ್ಥಾಪಿಸಬೇಕು. ಕರ್ನಾಟಕ ಅಬಕಾರಿ (ಡಿಸ್ಟಿಲರಿ ಮತ್ತು ಉಗ್ರಾಣ) ನಿಯಮಗಳು 1967ರ ಅಡಿಯಲ್ಲಿ ಪರವಾನಿಗೆ ಪಡೆದವರು ಹೆಸರಿಸಿದ ಯಾವುದೇ ವ್ಯಕ್ತಿಗೆ ಡಿಸ್ಟಿಲರಿಯನ್ನು ವರ್ಗಾಯಿಸಲು (ನಿಯಮ 4-ಸಿ), ಡಿಸ್ಟಿಲರಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು, ಪರವಾನಿಗೆ ಪಡೆದವರು ಹೆಸರಿಸಿದ ಯಾವುದೇ ವ್ಯಕ್ತಿಯ ಪರವಾಗಿ ಪರವಾನಿಗೆ ಪಡೆದವರು ಹೊಂದಿರುವ ಡಿಸ್ಟಿಲರಿ ಪರವಾನಿಗೆಯನ್ನು ಉಪ ಗುತ್ತಿಗೆ ಮಾಡಲು ಅವಕಾಶವಿದೆ.
ಬ್ರೂವೆರಿಗಳ ವರ್ಗಾವಣೆ, ಸ್ಥಳಾಂತರ ಮತ್ತು ಉಪ ಗುತ್ತಿಗೆಗಾಗಿ 1967ರ ಕರ್ನಾಟಕ ಅಬಕಾರಿ ನಿಯಮಗಳು 3-ಸಿ, 5-ಸಿ, ಮತ್ತು 5-ಡಿ ಅಡಿಯಲ್ಲಿ ಇದೇ ರೀತಿಯ ಅವಕಾಶಗಳಿದ್ದವು. ಈ ಕುರಿತು ಪ್ರಧಾನ ಮಹಾಲೇಖಪಾಲರು ಲೆಕ್ಕ ಪರಿಶೋಧನೆ ವೇಳೆ ಅವಲೋಕಿಸಿದ್ದಾರೆ. ಇವರ ಅವಲೋಕನದ ಪ್ರಕಾರ ರಾಜ್ಯದ 7 ಡಿಸ್ಟಿಲರಿಗಳು ಮತ್ತು 3 ಬ್ರೂವೆರಿಗಳು ತಮ್ಮ ಪರವಾನಿಗೆ ಪಡೆದ ಆವರಣದಲ್ಲಿ ಇತರೆ ಡಿಸ್ಟಿಲರಿಗಳ ಒಡೆತನದ ಬ್ರ್ಯಾಂಡ್‌ಗಳ ಉತ್ಪಾದನೆ ಮತ್ತು ಬಾಟ್ಲಿಂಗ್‌ಗಾಗಿ ಉತ್ಪಾದನೆ, ಬಾಟ್ಲಿಂಗ್- ಟೈ ಅಪ್ ಒಪ್ಪಂದಗಳನ್ನು ಮಾಡಿಕೊಂಡಿರುವುದು ಕಂಡು ಬಂದಿದೆ.
ಬಾಟ್ಲಿಂಗ್ ಟೈ-ಅಪ್ ಮಾಡಿಕೊಂಡಿರುವ ಪಟ್ಟಿ
ರಾಜ್ಯದ ಅತ್ಯಂತ ಪ್ರತಿಷ್ಠಿತ ಜೆ ಪಿ ಡಿಸ್ಟಿಲಿರೀಸ್, ಯುನಿಸ್ಟಿಲ್ ಅಲ್ಕೋಬ್ಲೆಂಡ್ಸ್, ಕೆ ಬಿ ಡಿ ಶುಗರ್ಸ್ ಅಂಡ್ ಡಿಸ್ಟಿಲಿರೀಸ್, ಸಹ್ಯಾದ್ರಿ ಶುಗರ್ ಅಂಡ್ ಡಿಸ್ಟಿಲಿರಿ ಪ್ರೈ ಲಿ., ಅಮೃತ್ ಡಿಸ್ಟಿಲಿರಿಸ್, ವುಡ್ ಪೆಕರ್ ಡಿಸ್ಟಿಲಿರೀಸ್ ಅಂಡ್ ಬ್ರೂವೆರಿ, ಯುನೈಟೆಡ್ ಬ್ರೂವೆರೀಸ್, ಕಾರ್ಲ್ಸ್ ಬರ್ಗ್ ಇಂಡಿಯಾ ಪ್ರೈ ಲಿ.,, ಅಬಕಾರಿ ಅಧಿನಿಯಮ ಮತ್ತು ಸಂಬಂಧಿತ ನಿಯಮಗಳ ಅಡಿಯಲ್ಲಿ ಉತ್ಪಾದನೆ, ಬಾಟ್ಲಿಂಗ್ ಟೈ ಅಪ್ ಗಳಂತಹ ವ್ಯವಸ್ಥೆಗೆ ಯಾವುದೇ ಅವಕಾಶಗಳು ಇರದಿದ್ದರೂ ಸಹ ಒಪ್ಪಂದ ಮಾಡಿಕೊಂಡಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಬೊಕ್ಕಸಕ್ಕೆ ನಷ್ಟವಾಗುತ್ತಿದೆಯೇ?
ಬಾಟ್ಲಿಂಗ್ ಟೈ ಅಪ್ ವ್ಯವಸ್ಥೆಗೆ ರಾಜ್ಯದಲ್ಲಿ ಯಾವುದೇ ಶುಲ್ಕವನ್ನು ವಿಧಿಸಲು ಅವಕಾಶಗಳನ್ನು ಮಾಡಿಕೊಂಡಿಲ್ಲ. ಟೈ ಅಪ್ ವ್ಯವಸ್ಥೆಯು ಉಪ ಗುತ್ತಿಗೆಗೆ ಹೋಲುತ್ತವೆ. ಆದರೂ ಸಹ ರಾಜ್ಯದಲ್ಲಿ ಇದಕ್ಕೆ ಯಾವುದೇ ಶುಲ್ಕ ವಿಧಿಸಿಲ್ಲ. ಆದರೂ ಸಹ 7 ಡಿಸ್ಟಿಲಿರಿಗಳು ಮತ್ತು 3 ಬ್ರೂವೆರಿಗಳು ತಮ್ಮ ಆವರಣದಲ್ಲಿ ಬಾಟ್ಲಿಂಗ್ ಟೈ ಅಪ್ ಒಪ್ಪಂದವನ್ನು ಮಾಡಿಕೊಂಡಿವೆ. ಈ ಪರವಾನಿಗೆ ಪಡೆದ ಡಿಸ್ಟಿಲಿರಿಗಳು ಮತ್ತು ಬ್ರೂವೆರಿಗಳು ಬ್ರ್ಯಾಂಡ್ ಗಳ ತಯಾರಿಕೆ ಮತ್ತು ಬಾಟ್ಲಿಂಗ್‌ಗಾಗಿ ಇತರೆ ಡಿಸ್ಟಿಲರಿಗಳಿಂದ ಬಾಟ್ಲಿಂಗ್ ಉತ್ಪಾದನಾ ಶುಲ್ಕವನ್ನು ಸಂಗ್ರಹಿಸುತ್ತಿದ್ದವು ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.
ರಾಜ್ಯದಲ್ಲಿ ಬಾಟ್ಲಿಂಗ್ ಟೈ ಅಪ್ ವ್ಯವಸ್ಥೆಗೆ ಇದುವರೆಗೂ ಯಾವುದೇ ಅವಕಾಶಗಳಿಲ್ಲ. ಮತ್ತುಇದಕ್ಕಾಗಿ ಯಾವುದೇ ಶುಲ್ಕವನ್ನೂ ವಿಧಿಸಿಲ್ಲ. ಆದರೆ, ಇತರೆ ಡಿಸ್ಟಿಲಿರಿಗಳಿಂದ ಸಂಗ್ರಹಿಸುತ್ತಿರುವ ಬಾಟ್ಲಿಂಗ್ ಉತ್ಪಾದನಾ ಶುಲ್ಕವು ಸರ್ಕಾರದ ಬೊಕ್ಕಸಕ್ಕೆ ಜಮೆಯಾಗುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವು ಸಂಭವಿಸಿರುವ ಸಾಧ್ಯತೆಗಳಿವೆ.
ಒಪ್ಪಂದಗಳ ಪ್ರಕಾರ ಡಿಸ್ಟಿಲಿರಿ ಪರವಾನಿಗೆ ಹೊಂದಿರುವವರು ತಮ್ಮ ಪರವಾನಿಗೆ ಪಡೆದ ಆವರಣದಲ್ಲಿ ಉತ್ಪಾದನೆ, ಬಾಟ್ಲಿಂಗ್, ಸಂಗ್ರಹಣೆ, ರಾಸಾಯನಿಕ ಪ್ರಯೋಗಾಲಯಗಳು, ಕಚೇರಿ, ಸ್ಥಳ, ಇತ್ಯಾದಿ ಇತರೆ ಟೈ-ಅಪ್ ಡಿಸ್ಟಿಲಿರಿಗಳ ಪರವಾಗಿ ಸ್ಥಳಾವಕಾಶ ಒದಗಿಸಿದರು. ಉತ್ಪಾದನೆ, ಬಾಟ್ಲಿಂಗ್ ಟೈ ಅಪ್ ಒಪ್ಪಂದ ಹೊಂದಿರುವವರು ಎಲ್ಲಾ ಕಚ್ಛಾ ವಸ್ತುಗಳನ್ನು ಖರೀದಿಸಿದರು. ಮದ್ಯಸಾರ ಮತ್ತು ಸಿದ್ಧಪಡಿಸಿದ ಸರಕುಗಳ ಪೂರೈಕೆಗಾಗಿ ಕರ್ನಾಟಕ ರಾಜ್ಯ ಪಾನೀಯಗಳ ನಿಗಮದಿಂದ ಸರಬರಾಜು ಆದೇಶವನ್ನೂ ಪಡೆದಿವೆ.
ಬಾಟ್ಲಿಂಗ್ ಟೈ ಅಪ್ ಒಪ್ಪಂದ ಹೊಂದಿರುವವರು ತಮ್ಮ ಹೆಸರಿನಲ್ಲಿ ಸಿದ್ಧಪಡಿಸಿದ ಸರಕುಗಳ ಪೂರೈಕೆಗಾಗಿ ಇನ್‌ವಾಯ್ಸ್‌ಗಳನ್ನು ನೀಡುತ್ತಿರುವ ಆರು ನಿದರ್ಶನಗಳನ್ನೂ ಸಿಎಜಿಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.
ಸರ್ಕಾರದ ನಿರ್ದೇಶನದಲ್ಲೇನಿದೆ?
ಡಿಸ್ಟಿಲಿರಿಯ ಪರವಾನಿಗೆ ಪಡೆದ ಆವರಣದಲ್ಲಿ ಉತ್ಪಾದಿಸಿ ಬಾಟ್ಲಿಮಗ್ ಮಾಡಿದ ಈ ಕಂಪನಿಗಳ ಹೆಸರಿನಲ್ಲಿ ಬಾಟಲ್ ಟೈ ಅಪ್ ಒಪ್ಪಂದಗಳು ಮತ್ತು ಬ್ರ್ಯಾಂಡ್ ಗಳ ಲೇಬಲ್‌ಗಳನ್ನ ಅಬಕಾರಿ ಆಯುಕ್ತರು ಅನುಮೋದಿಸಿದ್ದಾರೆ. ಅಂತಹ ಸಹಯೋಗಗಳಿಗೆ ಸಂಬಂಧಿಸಿದಂತೆ ಬಾಟ್ಲಿಂಗ್ ಟೈ ಅಪ್ ಒಪ್ಪಂದ ಮತ್ತು ಲೇಬಲ್ ಅನುಮೋದನೆಯನ್ನು ಅಬಕಾರಿ ಆಯುಕ್ತರು ಅನುಮೋದಿಸಬಹುದು ಎಂದು 2018ರ ಅಕ್ಟೋಬರ್ 05ರಂದೇ ( ಪತ್ರ ಸಂಖ್ಯೆ; ಎಇ 20 ಇಎಫ್‌ಎಲ್ 2018) ನಿರ್ದೇಶಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಲೆಕ್ಕ ಪರಿಶೋಧನೆಯಲ್ಲಿ ಗಮನಿಸಿದ್ದೇನು?
ಅಬಕಾರಿ ಅಧಿನಿಯಮ ಅಥವಾ ಸಂಬಂಧಿತ ನಿಯಮಗಳ ಅಡಿಯಲ್ಲಿ ಉತ್ಪಾದನೆ, ಬಾಟ್ಲಿಂಗ್ ಟೈ ಅಪ್ ಗಳಂತಹ ವ್ಯವಸ್ಥೆಗೆ ಯಾವುದೇ ಅನುವುಗಳು ಇರಲಿಲ್ಲ. ಕರ್ನಾಟಕದಲ್ಲಿ ಡಿಸ್ಟಿಲಿರಿ ಪರವಾನಿಗೆ ಹೊಂದಿರುವ ಜನಪ್ರಿಯವಲ್ಲದ ಬ್ರ್ಯಾಂಡ್ ಹೊಂದಿರುವವರು, ಜನಪ್ರಿಯ ಬ್ರ್ಯಾಂಡ್ ಹೊಂದಿರುವವರೊಂದಿಗೆ ಇಂತಹ ಬಾಟಲ್ ಟೈ ಅಪ್ ವ್ಯವಸ್ಥೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಅಂತಹ ಸಹಯೋಗವು ಜನಪ್ರಿಯವಲ್ಲದ ಬ್ರ್ಯಾಂಡ್ ಹೊಂದಿರುವರನ್ನು ಸಹ ವ್ಯವಹಾರದಲ್ಲಿ ಇರಿಸುತ್ತದೆ. ಮತ್ತು ಪ್ರತಿಯಾಗಿ ಅಬಕಾರಿ ಆದಾಯಕ್ಕೆ ಕೊಡುಗೆ ನೀಡುತ್ತದೆ ಎಂದು ಸಿಎಜಿ ವರದಿಯು ಹೇಳಿದೆ.
ಕರ್ನಾಟಕದಲ್ಲಿ ಡಿಸ್ಟಿಲಿರಿಗಳನ್ನು ಹೊಂದಿರದ ಬ್ರ್ಯಾಂಡ್‌ಗಳು ಡಿಸ್ಟಿಲಿರಿಗಳಲ್ಲಿ ಹೂಡಿಕೆ ಮಾಡದೇ ಮತ್ತು ಔಪಚಾರಿಕ ಪರವಾನಿಗೆ ಇಲ್ಲದೇ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡಲು ಅವಕಾಶ ಪಡೆಯುತ್ತದೆ ಎಂದು ವಿವರಿಸಿದೆ.
ಡಿಸ್ಟಿಲಿರಿಗಳು, ಬ್ರೂವೆರಿಗಳು ಉಪ- ಗುತ್ತಿಗೆ ಮೇಲೆ ತಿಳಿಸಲಾದ ನಿಯಮಗಳಲ್ಲಿ ಸೂಚಿಸಿರುವಂತೆ ಶುಲ್ಕದ ಪಾವತಿಗೆ ಒಳಪಟ್ಟಿರುತ್ತದೆ. ಉತ್ಪಾದನೆ, ಬಾಟ್ಲಿಂಗ್ ಒಪ್ಪಂದ ವ್ಯವಸ್ಥೆಗಳು ಉಪ ಗುತ್ತಿಗೆಗೆ ಹೋಲುತ್ತವೆಯಾದರೂ ಅಂತಹ ವ್ಯವಸ್ಥೆಗಳಿಗೆ ಯಾವುದೇ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ. ಗೋವಾ, ಕೇರಳ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಅಂತಹ ಸಂದರ್ಭಗಳಲ್ಲಿ ಶುಲ್ಕವನ್ನು ವಿಧಿಸಲು ನಿರ್ದಿಷ್ಟ ಅವಕಾಶಗಳನ್ನು ಮಾಡಿಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಸಿಎಜಿಗೆ ಸರ್ಕಾರದ ಉತ್ತರವೇನು?
ಈ ಕುರಿತು ಸಿಎಜಿಯು ಅಬಕಾರಿ ಇಲಾಖೆಯ ಆಯುಕ್ತರಿಂದ ಮಾಹಿತಿ ಕೇಳಿತ್ತು. ಇದಕ್ಕೆ ಉತ್ತರಿಸಿರುವ ಅಯುಕ್ತರು, ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಟೈ ಅಪ್ ಒಪ್ಪಂದಗಳನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರೂ ಅನುಮತಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ಬಾಟ್ಲಿಂಗ್ ಟೈ ಅಪ್ ಒಪ್ಪಂದಗಳ ವ್ಯವಸ್ಥೆಯು ಅರ್ಥಿಕ ನಷ್ಟದಲ್ಲಿರುವ ಸ್ಥಳೀಯ ಡಿಸ್ಟಿಲಿರಿಗಳಿಗೆ ಸಹಾಯ ಮಾಡಿದ್ದು, ಇಂತಹ ಒಪ್ಪಂದಗಳು ಆ ಕಂಪನಿಗಳ ಮಾರುಕಟ್ಟೆ ಉಪಸ್ಥಿತಿಯನ್ನು ಹೆಚ್ಚಿಸಲು ಪರಿಣಾಮಕಾರಿಯಾದ ಮಾರ್ಗವಾಗಿದೆ. ಆದರೂ ಬಾಟ್ಲಿಂಗ್ ಟೈ ಅಪ್ ಒಪ್ಪಂದಗಳ ಮೇಲೆ ಶುಲ್ಕ ವಿಧಿಸುವ ಬಗ್ಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸುವ ಬಗ್ಗೆ ಸರ್ಕಾರದ ನಿರ್ದೇಶನ ಕೋರಲಾಗುವುದು,’ ಎಂದು 2024ರ ನವೆಂಬರ್‍ನಲ್ಲಿ ಅಬಕಾರಿ ಇಲಾಖೆಯು ಸಿಎಜಿಗೆ ಖಚಿತಪಡಿಸಿರುವುದು ತಿಳಿದು ಬಂದಿದೆ.
ಅಬಕಾರಿ ಭದ್ರತಾ ಚೀಟಿ ಮುದ್ರಣ ಟೆಂಡರ್‌ನಲ್ಲಿ ಅಕ್ರಮ; ಹೆಚ್ಚಿನ ದರ ನಮೂದು, 51.26 ಕೋಟಿ ನಷ್ಟ
ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ವೆಚ್ಚವು ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ದರವನ್ನು ನಮೂದಿಸಿದ್ದ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ಗೆ ಟೆಂಡರ್ ನೀಡಿದ್ದ ಸರ್ಕಾರವು ಬೊಕ್ಕಸಕ್ಕೆ 51.26 ಕೋಟಿಯಷ್ಟು ನಷ್ಟವಾಗಿರುವ ಪ್ರಕರಣವನ್ನು ‘ದಿ ಫೈಲ್’ ಬಹಿರಂಗಗೊಳಿಸಿತ್ತು.
ಬಿಜೆಪಿ ಅವಧಿಯಲ್ಲಿ ತಡೆಹಿಡಿದಿದ್ದ ಆದೇಶಕ್ಕೆ ಮರುಜೀವ; ಅಬಕಾರಿಯಲ್ಲಿ 1,000 ಕೋಟಿ ಅಕ್ರಮ ಆರೋಪ
ಅಬಕಾರಿ ಭದ್ರತಾ ಚೀಟಿಗಳ ವೆಚ್ಚವನ್ನ ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸಲು ಡಿಸ್ಟಿಲಿರಿಗಳಿಗೆ ಅನುಮತಿ ನೀಡಿತ್ತು. ಇದರಲ್ಲಿ 1,000 ಕೋಟಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತೂ ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
‘ದಿ ಫೈಲ್’ ವರದಿ ಪರಿಣಾಮ; 1,000 ಕೋಟಿ ಅಕ್ರಮಕ್ಕೆ ನಾಂದಿ ಹಾಡಿದ್ದ ಆದೇಶ ಹಿಂಪಡೆದ ಸರ್ಕಾರ
ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿದ ನಂತರ ಸರ್ಕಾರವು ಈ ಆದೇಶವನ್ನು ಹಿಂಪಡೆದುಕೊಂಡಿತ್ತು.