ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕೆಆರ್‌ಇಐಎಸ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ಹೆಚ್ಚು ದರ ನೀಡಿ ಮಂಚ (ಕಾಟ್) ಮತ್ತು ಹಾಸಿಗೆ ಖರೀದಿಸುತ್ತಿರುವುದನ್ನು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯು ಪತ್ತೆ ಹಚ್ಚಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆ ಅಥವಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಮಂಚ (ಕಾಟ್), ಹಾಸಿಗೆ ಮತ್ತು ದಿಂಬನ್ನು ಒದಗಿಸಲಾಗುತ್ತಿದೆ. ಇದರ ಖರೀದಿಯಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚು ದರ ನೀಡಲಾಗುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗಿದೆ ಎಂದು ಹೇಳಲಾಗಿದೆ.
ಟೆಂಡರ್ ಪ್ರಕ್ರಿಯೆಯ ಮೂಲಕವೇ ಈ ಖರೀದಿ ನಡೆಯುತ್ತಿದ್ದರೂ, ಮಾರುಕಟ್ಟೆ ಬೆಲೆಗಿಂತ ಹೆಚ್ಚು ಹಣ ನೀಡಿ ಹಾಸಿಗೆ, ಮಂಚ ಮತ್ತು ದಿಂಬುಗಳನ್ನು ಖರೀದಿಸಲಾಗುತ್ತಿದೆ ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಉಭಯ ಸದನಗಳಲ್ಲಿ ಮಂಡಿಸಿರುವ ತನ್ನ ಐದನೇ ವರದಿಯಲ್ಲಿ ಹೇಳಿದೆ.
ಈ ಖರೀದಿ ಸಂಬಂಧ ಕರೆಯಲಾಗಿದ್ದ ಟೆಂಡರ್‌ನಲ್ಲಿ ಯಶಸ್ವಿದಾರರಾದ ಬಿಡ್ಡುದಾರರು ಹಾಸಿಗೆಯ ಬೆಲೆಯು 5,300 ರು.ಗಳೆಂದು, ದಿಂಬಿನ ಬೆಲೆಯು 498 ರು.ಗಳೆಂದು ಹಾಗೂ ಟು-ಟಯರ್ ಕಾಟ್ ನ ಬೆಲೆಯು 22,420 ರು.ಗಳೆಂದು ನಮೂದಿಸಿದ್ದಾರೆ. ಆದರೆ ಇದೇ ಮಾದರಿ ಹಾಗೂ ಗುಣಮಟ್ಟದ ಹಾಸಿಗೆ, ದಿಂಬು, ಟು- ಟಯರ್ ಕಾಟ್‌ಗಳನ್ನು ಕಡಿಮೆ ಬೆಲೆಗೆ ಬೇರೆ ಖಾಸಗಿ ಸಂಸ್ಥೆಗಳು ಸರಬರಾಜು ಮಾಡುತ್ತಿವೆ ಎಂದು ಸಮಿತಿಯು ತನ್ನ ವರದಿಯಲ್ಲಿ ವಿವರಿಸಿದೆ.
ಉದಾಹರಣೆಗೆ ವಸತಿ ನಿಲಯಗಳಿಗೆ ಸರಬರಾಜು ಮಾಡುವ ಹಾಸಿಗೆಗೆ 5,300 ರು. ನೀಡಲಾಗುತ್ತಿದೆ. ಆದರೆ ಇದೇ ಮಾದರಿ ಗುಣಮಟ್ಟದ ಹಾಸಿಗೆಯನ್ನು ಪ್ರೈವೇಟ್ ಇಂಜಿನಿಯರಿಂಗ್ ಕಾಲೇಜ್‌ಗೆ ಒದಗಿಸಲಾಗಿದ್ದು, ಅಲ್ಲಿ 3,000 ರು. ಬೆಲೆ ನಿಗದಿಪಡಿಸಲಾಗಿದೆ. ಒಂದು ಹಾಸಿಗೆ 2, 300 ರು. ಹೆಚ್ಚಿಗೆ ನೀಡಲಾಗುತ್ತಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಒಟ್ಟು 843 ವಸತಿ ಶಾಲೆ/ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಮುಖ್ಯವಾಗಿ ಸ್ವಂತ ಕಟ್ಟಡ ಹೊಂದಿರುವ ವಸತಿ ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಟು-ಟಯರ್ ಕಾಟ್, ಹಾಸಿಗೆ, ದಿಂಬು ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ಒದಗಿಸಲಾಗುತ್ತಿದೆ.
2024-25ನೇ ಸಾಲಿನಲ್ಲಿ ಕೇವಲ ಟು-ಟಯರ್ ಕಾಟ್ ಖರೀದಿಸಲೆಂದೇ 9.09 ಕೋಟಿ ರು. ಖರ್ಚು ಮಾಡಲಾಗಿತ್ತು. ಹೀಗಾಗಿ ಈ ಮೂರು ಸಾಮಗ್ರಿಗಳನ್ನು ಖರೀದಿಸುವಾಗ ಹೆಚ್ಚು ಬೆಲೆ ನೀಡಿದ್ದರಿಂದ, ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟ ಉಂಟಾಗಿರಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ಹೆಚ್ಚು ಬೆಲೆಗೆ ಸಾಮಗ್ರಿಗಳನ್ನು ಖರೀದಿಸುತ್ತಿರುವ ವಿಷಯವನ್ನು ಸಮಿತಿಯು ಸಮಾಜ ಕಲ್ಯಾಣ ಇಲಾಖೆಯು ಗಮನಕ್ಕೆ ತಂದಿದ್ದು, ಕಾಟ್‌ಗೆ (ಮಂಚ) ಸಂಬಂಧಿಸಿದಂತೆ ಹಾಗೂ ಇನ್ನಿತರ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಯಾವುದಕ್ಕೂ ಸಹ 4 (ಜಿ) ವಿನಾಯಿತಿ ನೀಡಿರುವುದಿಲ್ಲ.
ಮಾರುಕಟ್ಟೆ ಬೆಲೆಗೆ ಹಿಂದೆ ಏನು ಟೆಂಡರ್ ಕರೆಯಲಾಗಿತ್ತು ಅದಕ್ಕನುಗುಣವಾಗಿ ಶೇ.5 ರಷ್ಟು, ಶೇ.10 ರಷ್ಟು ಅಥವಾ ಶೇಕಡ 20 ರಷ್ಟು ವ್ಯತ್ಯಾಸದಲ್ಲಿ ಮಾರುಕಟ್ಟೆ ದರ ಕೊಡಲಾಗುತ್ತದೆ. ಇದು ಗೌಪ್ಯವಾಗಿದ್ದು, ಟೆಂಡರ್ ಕರೆಯುವ ಸಂದರ್ಭದಲ್ಲಿ ಸ್ಪರ್ಧಿಗಳು ಇರುತ್ತಾರೆ. ಅವರು ಕಡಿಮೆ ಬೆಲೆ ಕೋಟ್ ಮಾಡಬಹುದು, ಆದರೆ ಹೆಚ್ಚು ಕೋಟ್ ಮಾಡುತ್ತಿದ್ದಾರೆ. ಇದರಿಂದಾಗಿ ಹೆಚ್ಚು ಬೆಲೆ ನೀಡಿ, ಈ ವಸ್ತುಗಳನ್ನು ಖರೀದಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯವರು ಸಮಿತಿಗೆ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಸತಿ ಶಾಲೆಗಳಿಗೆ, ಕಾಲೇಜುಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಟೆಂಡರ್ ಮುಖಾಂತರ ಖರೀದಿಸುವಾಗ ಮೌಲೀಕರಣವನ್ನು (Cross Verification) ಮಾಡಿ ಕೊಳ್ಳದಿರುವುದರಿಂದಲೇ ಹೀಗೆ ಹೆಚ್ಚು ಬೆಲೆ ನೀಡಿ ಸಾಮಗ್ರಿಗಳನ್ನು ಖರೀದಿಸಲಾಗುತ್ತಿದೆ ಎಂದು ಸಮಿತಿಯು ಪರಿಶೀಲನೆ ನಡೆಸಿ, ಅಭಿಪ್ರಾಯ ಪಟ್ಟಿದೆ.
ಅಗತ್ಯವಿರುವ ಸಾಮಗ್ರಿಗಳನ್ನು ಟೆಂಡರ್ ಮುಖಾಂತರ ಖರೀದಿಸುವಾಗ ಮೌಲೀಕರಣವನ್ನು (Cross Verification) ಮಾಡಿಕೊಳ್ಳದಿರುವ ಬಗ್ಗೆ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ. ಇನ್ನು ಮುಂದೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಸಂಘದ ಅಧೀನದಲ್ಲಿರುವ ವಸತಿ ಶಾಲೆಗಳು/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸುವಾಗ ಸಾಮಗ್ರಿಗಳ ದರಗಳನ್ನು ಮೌಲೀಕರಣ ಮಾಡಿಕೊಳ್ಳಬೇಕೆಂದು ಶಿಫಾರಸು ಕೂಡ ಮಾಡಿದೆ.
ವಸತಿ ನಿಲಯಗಳಲ್ಲಿರುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಸುಧಾರಣೆ ಮಾಡಬೇಕಾಗಿರುತ್ತದೆ. ಈ ಸಂಸ್ಥೆಗೆ ಸರ್ಕಾರವು ಒದಗಿಸುವ ಅನುದಾನವು ಪೂರ್ಣಪ್ರಮಾಣದಲ್ಲಿ ಖರ್ಚಾಗದೆ ಈ ಮೊತ್ತದಲ್ಲಿ ಅವ್ಯವಹಾರವಾಗುತ್ತಿದೆ. ವಸತಿ ನಿಲಯ ಮತ್ತು ವಿಶೇಷ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಸಿಗುತ್ತಿಲ್ಲದಿರುವುದು ಸಮಿತಿಯು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವಸತಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಂಡು ಬಂದಿದೆ ಎಂದು ಸಮಿತಿಯು ಈ ವರದಿಯಲ್ಲಿ ಹೇಳಿದೆ.
ರಾಜ್ಯದಲ್ಲಿನ ವಸತಿ ಶಾಲೆಗಳಿಗೆ ಹೊಸ ರೂಪ ಕೊಡಬೇಕಾಗಿರುವುದರಿಂದ ವಸತಿ ನಿಲಯ ಮತ್ತು ವಸತಿ ಸಂಸ್ಥೆಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅಧ್ಯಕ್ಷತೆಯ ಈ ಸಮಿತಿಯು ಸರ್ಕಾರಕ್ಕೆ ಶಿಫಾರಸು ಕೂಡ ಮಾಡಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂದರೆ 2015ರಲ್ಲಿ ಕೂಡ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ನೀಡುವ ಹಾಸಿಗೆ ಮತ್ತು ದಿಂಬುಗಳ ಖರೀದಿಯಲ್ಲಿ ಅಕ್ರಮ ನಡೆದಿದ್ದು ಬೆಳಕಿಗೆ ಬಂದಿತ್ತು. ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಅವರೇ ಇಲಾಖೆಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಇದಕ್ಕೆ ಹೊಣೆ ಎಂದು ಆರೋಪಿಸಿದ್ದರು. ಅವರು ಈ ಆರೋಪವನ್ನು ನಿರಾಕರಿಸಿ, ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಸಹ ಬರೆದಿದ್ದರು. ಸುಮಾರು 14 ಕೋಟಿ ರು. ಅವ್ಯವಹಾರ ಇದಾಗಿತ್ತು.
ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗಿಲ್ಲ ರಕ್ಷಣೆ; ಕಠಿಣ ಕ್ರಮ, ಸುರಕ್ಷತೆ ಕೈಗೊಳ್ಳದ ಕ್ರೈಸ್ ಇ.ಡಿ., ಸಚಿವರ ಮೌನವೇಕೆ?
ರಾಜ್ಯದ ವಿವಿಧ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ, ಶಿಕ್ಷಕರ ಅಸಭ್ಯ ವರ್ತನೆ ಕಿರುಕುಳಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಪ್ರತಿ ನಿತ್ಯ ಒಂದಲ್ಲ ಒಂದು ವಸತಿ ಶಾಲೆ, ವಸತಿ ನಿಲಯದಲ್ಲಿ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆ ಪ್ರಕರಣಗಳು ಪದೇ ಪದೇ ಪುನರಾವರ್ತನೆ ಆಗುತ್ತಲೇ ಇವೆ. ಈ ಕುರಿತೂ ʻದಿ ಫೈಲ್ʼ ವಿಶೇಷ ವರದಿ ಪ್ರಕಟಿಸಿತ್ತು.