ರಸ್ತೆ, ಸೇತುವೆ ಯೋಜನೆಗಳಿಗೆ ಅನುದಾನ ಹಂಚಿಕೆಯಲ್ಲಿ ಇಳಿಕೆ; 8,920 ಕೋಟಿಯಲ್ಲಿ 4,482 ಕೋಟಿಯಷ್ಟೇ ವೆಚ್ಚ

ಬೆಂಗಳೂರು; ವ್ಯಾಜ್ಯ ಮತ್ತಿತರೆ ಕಾರಣಗಳಿಂದ ರಾಜ್ಯದಲ್ಲಿ ಸಾವಿರಾರು ಕೋಟಿ ರುಪಾಯಿ ಮೊತ್ತದ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅಲ್ಲದೇ ನಿಗದಿಪಡಿಸಿದ್ದ ಗುರಿ ಮತ್ತು ಅವಧಿಯೊಳಗೆ ಹಲವು ಯೋಜನೆಗಳು ಪೂರ್ಣಗೊಂಡಿಲ್ಲ.  ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಅಪೂರ್ಣವಾಗಿಯೇ ಉಳಿದಿವೆ.   ಹೀಗೆ ಅಪೂರ್ಣಗೊಂಡಿರುವ ಯೋಜನೆಗಳಲ್ಲಿ ರಾಜ್ಯದ ಬಂಡವಾಳವೂ ಬಂಧಿತವಾಗಿದೆ. ಅಲ್ಲದೇ ವೆಚ್ಚದ ಗುಣಮಟ್ಟದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿರುವುದನ್ನು  ಸಿಎಜಿಯು ಪತ್ತೆ ಹಚ್ಚಿದೆ.

 

2025ರ ಆಗಸ್ಟ್‌ನಲ್ಲಿ ನಡೆದಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು, ಅಪೂರ್ಣ ಯೋಜನೆಗಳಲ್ಲಿ ಬಂಧಿತವಾಗಿರುವ ಬಂಡವಾಳದ ಕುರಿತೂ ವಿಶ್ಲೇಷಣೆ ನಡೆಸಿದೆ.

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಮತ್ತು ಎರಡನೇ  ಅವಧಿಯ 2023-24ರವರೆಗೆ ಅಪೂರ್ಣಗೊಂಡಿರುವ ಯೋಜನೆಗಳು ಮತ್ತು ಈ ಯೋಜನೆಗಳ ಮೇಲೆ ಹೂಡಿಕೆ ಮಾಡಿರುವ ಬಂಡವಾಳದ ಅಂಕಿ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.

 

ಲೋಕೋಪಯೋಗಿ, ಬಂದರು, ಒಳನಾಡು ಜಲ ಸಾರಿಗೆ ಮತ್ತು ನೀರಾವರಿ ಇಲಾಖೆಗಳಲ್ಲಿಯೇ ಅತೀ ಹೆಚ್ಚು ಯೋಜನೆಗಳು ಅಪೂರ್ಣಗೊಂಡಿವೆ. ಕಾಮಗಾರಿಗಳ ವಿಳಂಬದಿಂದಾಗಿ ಯೋಜನೆಗಳು ಅಪೂರ್ಣಗೊಂಡಿರುವುದಕ್ಕೆ ಈ ಇಲಾಖೆಗಳು ಸಮರ್ಥನೀಯ ಅಂಶ ಅಥವಾ ಯಾವುದೇ ಕಾರಣಗಳನ್ನೂ ಸಿಎಜಿಗೆ ಒದಗಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ರಸ್ತೆ ಮತ್ತು ಸೇತುವೆಗಳ ಮೇಲಿನ ಬಂಡವಾಳ ಹೂಡಲು ಹಂಚಿಕೆ ಮಾಡಿರುವ ಮೊತ್ತವನ್ನು ಇಳಿಕೆ ಮಾಡಿರುವ ಕಾರಣ, ಈ ವಿಭಾಗಗಳಲ್ಲಿ ಯೋಜನೆಗಳು ಅಪೂರ್ಣಗೊಂಡಿವೆ. ಸರ್ಕಾರದ ಈ ಕ್ರಮದಿಂದಾಗಿ ಈ ಯೋಜನೆಗಳು ಕುಂಠಿತಗೊಂಡಿವೆ. ಇದರಿಂದಾಗಿ ವೆಚ್ಚದಲ್ಲಿಯೂ ಸಹ ಗಣನೀಯ ಏರಿಕೆ ಕಂಡಿದೆ.

 

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಂದರೆ 2013-14ರಿಂದ 2018-19ರವರೆಗೆ 884 ಕೋಟಿ ರು ವೆಚ್ಚದಲ್ಲಿ 271  ಯೋಜನೆಗಳಿಗೆ ಚಾಲನೆ ನೀಡಿತ್ತು. ಈ ಪೈಕಿ 479 ಕೋಟಿ ವೆಚ್ಚವಾಗಿತ್ತು. ಇದಾದ ನಂತರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ  ಆರಂಭಿಕ ವರ್ಷದಲ್ಲೇ  1,236 ಯೋಜನೆಗಳಿಗೆ ಚಾಲನೆ ನೀಡಿತ್ತು. ಈ ಯೋಜನೆಗಳಿಗೆ 3,579 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 1,175 ಕೋಟಿ ವೆಚ್ಚವಾಗಿದೆ.

 

2013-14ರಿಂದ 2023-24ರವರೆಗೆ ಜಾರಿಗೊಂಡಿದ್ದ ಒಟ್ಟು ಯೋಜನೆಗಳ ಪೈಕಿ 3,140 ಯೋಜನೆಗಳು ಅಪೂರ್ಣಗೊಂಡಿವೆ. ಇದರ ಅಂದಾಜು  ಮೊತ್ತ 8,920 ಕೋಟಿ ರು ಇದೆ. ಈ ಪೈಕಿ ಈಗಾಗಲೇ 4,482 ಕೋಟಿ ರು ವೆಚ್ಚವಾಗಿದೆ. ಇದರಲ್ಲಿ ರಸ್ತೆ, ಸೇತುವೆ, ನೀರಾವರಿ ಮತ್ತು ಕಟ್ಟಡಗಳಿಗೆ ಸಂಬಂಧಿತ ಕಾಮಗಾರಿಗಳಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

‘ವ್ಯಾಜ್ಯ ಇತ್ಯಾದಿ ಕಾರಣಗಳಿಂದ ಸ್ಥಗಿತಗೊಂಡ ಕಾಮಗಾರಿಗಳನ್ನು ಒಳಗೊಂಡಿರುವ ಅಪೂರ್ಣ ಕಾಮಗಾರಿಗಳಲ್ಲಿ ಹಣವು ಬಂಧಿತವಾಗುವುದು ವೆಚ್ಚದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಅಭಿಪ್ರಾಯಿಸಿದೆ.

 

ವರ್ಷವಾರು ವಿವರ

 

2013-14ರವರೆಗೆ ಒಟ್ಟು 269 ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಈ ಯೋಜನೆಗಳ ಮೇಲೆ 750 ಕೊಟಿ ವೆಚ್ಚ ಎಂದು ಅಂದಾಜಿಸಲಾಗಿತ್ತು. ಈ ಪೈಕಿ 418 ಕೋಟಿ ರು ವೆಚ್ಚವಾಗಿದೆ. 2014-15ರಲ್ಲಿ 28 ಯೋಜನೆಗಳಿಗೆ ಚಾಲನೆ ನೀಡಿದ್ದ ಸರ್ಕಾರವು 82 ಕೋಟಿ ಅಂದಾಜು ವೆಚ್ಚವಾಗಲಿದೆ ಎಂದು ಹೇಳಿತ್ತು. ಆದರೆ ಈ ಅವಧಿಯಲ್ಲಿ 27 ಕೋಟಿ ಮಾತ್ರ ವೆಚ್ಚವಾಗಿದೆ.

 

2015-16ರಲ್ಲಿ 43 ಯೋಜನೆಗಳಿದ್ದವು. ಇದಕ್ಕೆ 173 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ  95 ಕೋಟಿ ಮಾತ್ರ ವೆಚ್ಚವಾಗಿತ್ತು. 2016-17ರಲ್ಲಿ 57 ಯೋಜನೆಗಳಿಗೆ 181 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 100 ಕೋಟಿ ವೆಚ್ಚವಾಗಿತ್ತು. 2017-18ರಲ್ಲಿ 68 ಯೋಜನೆಗಳಿಗೆ 221 ಕೋಟಿ ವೆಚ್ಚವೆಂದು ಅಂದಾಜು ಮಾಡಲಾಗಿತ್ತು. 112 ಕೋಟಿ ರು ವೆಚ್ಚವಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

2018-19ರಲ್ಲಿ 75 ಯೋಜನೆಗಳಿದ್ದವು. ಈ ಯೋಜನೆಗಳಿಗೆ 227 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತಾದರೂ 145 ಕೋಟಿ ರು ಮಾತ್ರ ವೆಚ್ಚವಾಗಿತ್ತು. 2019-10ರಲ್ಲಿ 153 ಯೋಜನೆಗಳಿಗೆ 524 ಕೋಟಿ ರು ಎಂದು ಅಂದಾಜಿಸಲಾಗಿತ್ತು. ಈ ಪೈಕಿ   378 ಕೋಟಿ ರು ವೆಚ್ಚವಾಗಿದೆ. 2020-21ರಲ್ಲಿ 235 ಯೋಜನೆಗಳಿಗೆ 588 ಕೋಟಿ ರು ವೆಚ್ಚವಾಗಲಿದ ಎಂದು ಅಂದಾಜಿಸಲಾಗಿತ್ತು. ಒಟ್ಟು ಅಂದಾಜು ವೆಚ್ಚದಲ್ಲಿ  499 ಕೋಟಿ ರು ವೆಚ್ಚವಾಗಿತ್ತು.

 

2021-22ರಲ್ಲಿ  323 ಯೋಜನೆಗಳಿಗೆ 792 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 543 ಕೋಟಿ ರು ವೆಚ್ಚವಾಗಿತ್ತು. 2022-23ರಲ್ಲಿ 653 ಯೋಜನೆಗಳಿಗೆ 1,803 ಕೋಟಿ ರು ಅಂದಾಜು ವೆಚ್ಚದ ಪೈಕಿ 990 ಕೋಟಿ ರು ವೆಚ್ಚವಾಗಿತ್ತು. 2023-24ರಲ್ಲಿ 1,236 ಯೋಜನೆಗಳಿಗೆ 3,529 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಇದರಲ್ಲಿ 1,175 ಕೋಟಿ ಮಾತ್ರ ವೆಚ್ಚವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಒಂದು ಕೋಟಿಗೂ ಮೀರಿದ ಮೌಲ್ಯದ ಅಪೂರ್ಣ ಯೋಜನೆಗಳ ಮೇಲೂ ಸಿಎಜಿಯು ಬೆಳಕು ಚೆಲ್ಲಿದೆ.

 

2013-14ರಲ್ಲಿ ರಸ್ತೆ ಮತ್ತು ಸೇತುವೆಗಳಿಗೆ ಸಂಬಂಧಿಸಿದಂತೆ 2,104 ಯೋಜನೆಗಳಿದ್ದವು. ಈ ಯೋಜನೆಗಳಿಗೆ 6,236 ಕೋಟಿ ಅಂದಾಜು ವೆಚ್ಚವಾಗಲಿದೆ ಎಂದು ಹೇಳಲಾಗಿತ್ತು. ಆದರೆ 3,047 ಕೋಟಿ ಮಾತ್ರ ವೆಚ್ಚವಾಗಿತ್ತು. ನೀರಾವರಿಗೆ ಸಂಬಂಧಿಸಿದಂತೆ 694 ಯೋಜನೆಗಳಿಗೆ 1,709 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 921 ಕೋಟಿ ರು ಮಾತ್ರ ವೆಚ್ಚವಾಗಿದೆ. ಕಟ್ಟಡಗಳಿಗೆ ಸಂಬಂಧಿಸಿದಂತೆ 208 ಯೋಜನೆಗಳಿದ್ದವು. ಇವಕ್ಕೆ 590 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತಾದರೂ 337 ಕೋಟಿ ಖರ್ಚಾಗಿತ್ತು. ಇತರೆ ವಿಭಾಗಗಳಲ್ಲಿ 134 ಯೋಜನೆಗಳಿಎ 385 ಕೋಟಿ ಎಂದು ಅಂದಾಜಿಸಲಾಗಿತ್ತು. ಈ ಪೈಕಿ 176 ಕೋಟಿ ರು ಮಾತ್ರ ವೆಚ್ಚವಾಗಿತ್ತು.

 

‘ಮಾರ್ಚ್‌ 2024 ಅಥವಾ ಅದಕ್ಕೂ ಮೊದಲು ಪೂರ್ಣಗೊಳ್ಳಲು ನಿಗದಿಪಡಿಸಲಾಗಿದ್ದ 3,140 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆರಂಭಿಕ ಆಯವ್ಯಯ ಅಂದಾಜಿನ ಮೊತ್ತ 8,920 ಕೋಟಿಗೆ ಪ್ರತಿಯಾಗಿ ಈವರೆಗಿನ ವೆಚ್ಚವು 4,4482 ಕೋಟಿ ರುಪಾಯಿ ಆಗಿದೆ. ಯೋಜನೆಗಳಲ್ಲಿನ ವಿಳಂಬವು  5 ವರ್ಷಗಳಿಗಿಂತ  ಹೆಚ್ಚು (540 ಕಾಮಗಾರಿ) ಐದು ವರ್ಷಗಳಿಗಿಂತ ಕಡಿಮೆ ಆದರೆ ಒಂದು ವರ್ಷಕ್ಕಿಂತ ಹೆಚ್ಚು (1,364 ಕಾಮಗಾರಿ) ಮತ್ತು ಒಂದು ವರ್ಷಕ್ಕಿಂತ ಕಡಿಮೆ (1,2236) ವ್ಯಾಪ್ತಿಯಲ್ಲಿವೆ. ಕಾಮಗಾರಿಯ ವಿಳಂಬಕ್ಕೆ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಮತ್ತು ನೀರಾವರಿ ಇಲಾಖೆಗಳು ಯಾವುದೇ ಕಾರಣಗಳನ್ನು ನೀಡಿಲ್ಲ,’ ಎಂದು ಸಿಎಜಿ ವರದಿಯು ವಿಶ್ಲೇಷಣೆ ಮಾಡಿದೆ.

 

 

2024ರ ಮಾರ್ಚ್‌ ಅಂತ್ಯಕ್ಕೆ 3,410 ಯೋಜನೆಗಳಲ್ಲಿ ಶೇ.30ರಷ್ಟು ಯೋಜನೆಗಳು ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಅಪೂರ್ಣವಾಗಿ ಉಳಿದಿವೆ. ಹಣಕಾಸು ನಿರ್ವಹಣಾ ಸಮೀಕ್ಷೆ ಸಲಹೆ ಪ್ರಕಾರ ಸಮಯ ಮತ್ತು ವೆಚ್ಚದ ಹೆಚ್ಚಳವನ್ನು ಕಡಿಮೆ ಮಾಡಲು ಪೂರ್ಣಗೊಳ್ಳುತ್ತಿರುವ ಯೋಜನೆಗಳಿಗೆ ಆದ್ಯತೆ ಮೇಲೆ ಹಣವನ್ನು ಒದಗಿಸಬೇಕು. ಆದರೂ ಅಪೂರ್ಣ ಯೋಜನೆಗಳ ಸಂಖ್ಯೆಯು 2023ರ ಮಾರ್ಚ್‌ 31ರಂದು ಇದ್ದ 1,864ರಿಂದ 2024ರ ಮಾರ್ಚ್‌ ಅಂತ್ಯಕ್ಕೆ 3,140ಕ್ಕೆ ಏರಿದೆ ಎಂದು ಲೆಕ್ಕ ಪರಿಶೋಧನೆಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.

 

ರಸ್ತೆಗಳು, ಸೇತುವೆಗಳ ಮೇಲಿನ ಬಂಡವಾಳ ವೆಚ್ಚದಲ್ಲಿನ ಹಂಚಿಕೆಯಲ್ಲಿನ ಇಳಿಕೆಯೂ ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೇ ರಸ್ತೆ ಮತ್ತು ಸೇತುವೆಗಳಿಗೆ ಸಂಬಂಧಿಸಿದಂತೆ 12.05 ಕೋಟಿ ಉಳಿತಾಯವಾಗಿದೆ. ಇದು ಸಂಪೂರ್ಣ ಹಂಚಿಕೆಯನ್ನು ಸಹ ಬಂಡವಾಳ ಸೃಷ್ಟಿಗೆ ವೆಚ್ಚ ಮಾಡಲು ಸಾಧ್ಯವಾಗಲಿಲ್ಲ ಎಂಬುದು ವರದಿಯಿಂದ ಕಂಡು ಬಂದಿದೆ. ಈ ಎಲ್ಲಾ ಯೋಜನೆಗಳನ್ನು ಸಮಯ ಮೀರಿದ ಕಾರಣ ಮತ್ತು ಹೆಚ್ಚಿನ ವೆಚ್ಚವನ್ನು ತಪ್ಪಿಸಲು ವಿಳಂಬವಿಲ್ಲದೇ ಪೂರ್ಣಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಜಿ ವರದಿಯು ಶಿಫಾರಸ್ಸು ಮಾಡಿದೆ.

SUPPORT THE FILE

Latest News

Related Posts