ಬೆಂಗಳೂರು: ಒಳ ಮೀಸಲಾತಿ ಜಾರಿಯಲ್ಲಿ ಅಲೆಮಾರಿಗಳಿಗೆ ಅನ್ಯಾಯ ಮಾಡಲಾಗಿದೆ ಎಂಬ ಕೂಗು ಜೋರಾಗುತ್ತಿರುವಾಗಲೇ, ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಲೆಮಾರಿಗಳಿಗೆ ಒಂದೇ ಒಂದು ಮನೆ ಮಂಜೂರು ಮಾಡದಿರುವುದು ಬೆಳಕಿಗೆ ಬಂದಿದೆ.
2023-24 ರಿಂದ 2025-26ನೇ ಇದುವರೆಗೆ ವಿವಿಧ ವಸತಿ ಯೋಜನೆಗಳಡಿ ಹಿಂದುಳಿದ ಅಲೆಮಾರಿ ಜನಾಂಗದವರಿಗೆ ಮನೆಗಳನ್ನು ಮಂಜೂರು ಮಾಡಿರುವುದಿಲ್ಲ ಎಂದು ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್‌ಖಾನ್ ಅವರೇ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಕೇಳಿರುವ ಚುಕ್ಕೆ ಗುರುತಿನ ಪ್ರಶ್ನೆ, ʻʻ2023-24 ರಿಂದ 2025-26ರವರೆಗೆ ವಿವಿಧ ವಸತಿ ಯೋಜನೆಗಳಡಿ ಹಿಂದುಳಿದ ಅಲೆಮಾರಿ ಜನಾಂಗದವರಿಗೆ ಮಂಜೂರು ಮಾಡಲಾದ ಮನೆಗಳ ಸಂಖ್ಯೆ ಎಷ್ಟು?ʼʼ ಎಂಬುದಕ್ಕೆ, ಸಚಿವರು ʻಮನೆಗಳನ್ನು ಮಂಜೂರು ಮಾಡಿರುವುದಿಲ್ಲʼ ಎಂದು ಉತ್ತರಿಸಿದ್ದಾರೆ.
ʻʻಮಂಜೂರಾತಿಯಾದ ಈ ಮನೆಗಳ ಪೈಕಿ ಇದುವರೆಗೂ ನಿರ್ಮಾಣ ಕಾರ್ಯ ಪೂರ್ಣಗೊಂಡ ಮನೆಗಳ ಸಂಖ್ಯೆ ಎಷ್ಟು, ಅಪೂರ್ಣ ಮನೆಗಳ ಸಂಖ್ಯೆ ಎಷ್ಟು?ʼʼ ಎಂಬ ಮತ್ತೊಂದು ಪ್ರಶ್ನೆಗೆ ಸಚಿವ ಜಮೀರ್ ಅಹ್ಮದ್‌ಖಾನ್ ʻಅನ್ವಯಿಸುವುದಿಲ್ಲʼ ಎಂಬ ಉತ್ತರ ನೀಡಿ, ಒಂದೇ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ನಿವೇಶನ ಇಲ್ಲದಿರುವ ಅಲೆಮಾರಿ ಕುಟುಂಬಗಳಿಗೆ ನಿವೇಶನಗಳನ್ನು ನೀಡುವ ಬಗ್ಗೆ ಸರ್ಕಾರದ ಕ್ರಮಗಳೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ʻʻರಾಜೀವ್ ಗಾಂಧಿ ವಸತಿ ನಿಗಮದಿಂದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಮುಖ್ಯಮಂತ್ರಿಗಳ ಗ್ರಾಮೀಣ ಮತ್ತು ನಗರ ನಿವೇಶನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಗಳಲ್ಲಿ ವಸತಿಗೆ ಯೋಗ್ಯ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಮೀನು ಖರೀದಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಮೂಲಕ ನಿವೇಶನಕ್ಕೆ ಯೋಗ್ಯ ಜಮೀನನ್ನು ಗುರುತಿಸಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ ಜಮೀನು ಖರೀದಿಸಲು ಅನುದಾನ ಬಿಡುಗಡೆ ಮಾಡಲಾಗುವುದುʼʼ ಎಂದು ತಿಳಿಸಿದ್ದಾರೆ.
15 ವರ್ಷದಲ್ಲಿ ಕೇವಲ 53 ಸಾವಿರ ಮನೆ
ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ರಲ್ಲಿ ಬರುವ ಅಲೆಮಾರಿ ಸಮುದಾಯಗಳಿಗೆ ವಿವಿಧ ವಸತಿ ಯೋಜನೆಗಳಡಿ 2010-11ನೇ ಸಾಲಿನಿಂದ ಇದುವರೆಗೆ ಕೇವಲ 53,755 ಮನೆಗಳನ್ನು ಮಂಜೂರು ಮಾಡಲಾಗಿದೆ.
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಆಯೋಗವು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ್ದ ಒಳ ಮೀಸಲಾತಿ ವರ್ಗೀಕರಣದ ವರದಿಯಲ್ಲಿ ಪರಿಶಿಷ್ಟ ಜಾತಿಯ ಪ್ರವರ್ಗ-ಎ ಅಡಿ ವರ್ಗೀಕರಿಸಲಾಗಿರುವ 59 ಜಾತಿಗಳ ಒಟ್ಟು ಜನಸಂಖ್ಯೆ 5,22,099 ಎಂದು ಹೇಳಿದೆ. ಅಲೆಮಾರಿಗಳ ಜನಸಂಖ್ಯೆಗೆ ಹೋಲಿಸಿದಲ್ಲಿ ಕಳೆದ 15 ವರ್ಷಗಳಲ್ಲಿ ಮಂಜೂರಾದ ಮನೆಗಳ ಸಂಖ್ಯೆ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ.
53,755 ಮನೆಗಳನ್ನು ಮಂಜೂರು ಮಾಡಿರುವ ವಿಷಯವನ್ನು ಕೂಡ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ತಿಗೆ ಅಧಿಕೃತವಾಗಿ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ. ತಳವಾರ್ ಸಾಬಣ್ಣ ಕೇಳಿದ ಚುಕ್ಕೆ ಗುರಿತನ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜೀವ್ ಗಾಂಧಿ ವಸತಿ ನಿಗಮದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರಲ್ಲಿ ಬರುವ ಅಲೆಮಾರಿ ಸಮುದಾಯದ ಫಲಾನುಭವಿಗಳಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ. ಅಲ್ಲದೇ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ ಸಮುದಾಯಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
2010-2011ನೇ ಸಾಲಿನಿಂದ ಇಲ್ಲಿಯವರೆಗೆ, ರಾಜೀವ್ ಗಾಂಧಿ ವಸತಿ ನಿಗಮದ ದೇವರಾಜ ಅರಸು ವಸತಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ/ಪಂಗಡದ ಅಲೆಮಾರಿಗಳಿಗೆ 684, ರಾಜೀವ್ ಗಾಂಧಿ ವಸತಿ ನಿಗಮದ ದೇವರಾಜ ಅರಸು ವಸತಿ ಯೋಜನೆ ಪ್ರವರ್ಗ-1 ರ ಅಲೆಮಾರಿಗಳಿಗೆ 36,195, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಗಳ ಅಭಿವೃದ್ಧಿ ನಿಗಮದಲ್ಲಿನ ವಸತಿ ಯೋಜನೆಗಳಿಗೆ ಎಸ್.ಸಿ.- 5,021 ಮತ್ತು ಎಸ್‌ಟಿ-995, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ವಸತಿ ಯೋಜನೆಗಳಡಿ 10,860 ಒಟ್ಟು 53,755 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ವಿಧಾನ ಪರಿಷತ್ತಿಗೆ ನೀಡಿರುವ ಈ ಉತ್ತರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಲೆಮಾರಿ ಸಮುದಾಯದವರು ಅವರ ಸಾಂಪ್ರದಾಯಿಕ ಉದ್ಯೋಗಗಳು ಇಲ್ಲದೇ ತೀರ ಬಡತನದ ಜೀವನ ನಡೆಸುತ್ತಿರುವುದರಿಂದ ಮತ್ತು ಮನೆ ಕಟ್ಟಿಕೊಳ್ಳಲು ಜಾಗ ಹಾಗೂ ಹಣವಿಲ್ಲದ ಕಾರಣ ಅವರಿಗೆ ವಸತಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಸಚಿವರು ನೇರವಾಗಿ ಉತ್ತರ ನೀಡಿಲ್ಲ.
ರಾಜೀವ್ ಗಾಂಧಿ ವಸತಿ ನಿಗಮದಿಂದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಮುಖ್ಯ ಮಂತ್ರಿಗಳ ಗ್ರಾಮೀಣ ಮತ್ತು ನಗರ ನಿವೇಶನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಗಳಲ್ಲಿ ವಸತಿಗೆ ಯೋಗ್ಯ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಮೀನು ಖರೀದಿ ಸಮಿತಿ ಇದ್ದು, ಸದರಿ ಸಮಿತಿ ಮೂಲಕ ನಿವೇಶನಕ್ಕೆ ಯೋಗ್ಯವಾದ ಖಾಸಗಿ ಜಮೀನನ್ನು ಗುರುತಿಸಿ ನಿಗಮಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ ಜಮೀನು ಖರೀದಿಸಲು ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಅಲೆಮಾರಿ ಸಮುದಾಯದವರ ವಸತಿ ಸಮಸ್ಯೆಯನ್ನು ಬಗೆಹರಿಸಿ ಅವರಿಗೆ ಇಷ್ಟು ವಸತಿಗಳು ಎಂದು ಮೀಸಲಿಟ್ಟು, ಅವರಿಗೆ ಆದ್ಯತೆ ನೀಡಲು ಸರ್ಕಾರ ನೀತಿ ನಿರೂಪಿಸಿ ತಕ್ಷಣವೇ ಕ್ರಮ ಕೈಗೊಳ್ಳುವುದೇ ಎಂದು ಡಾ. ತಳವಾರ್ ಸಾಬಣ್ಣ ಅವರು ಕೇಳಿದ ಪ್ರಶ್ನೆಗೂ ಸಚಿವರು ನೇರವಾಗಿ ಉತ್ತರ ನೀಡಿಲ್ಲ.
ಅಲೆಮಾರಿ ಸಮುದಾಯದ ಫಲಾನುಭವಿಗಳನ್ನು ಒಳಗೊಂಡಂತೆ 14 ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ದೇವರಾಜ ಅರಸು ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಪ್ರತಿ ವರ್ಷ ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನಕ್ಕೆ ಅನುಗುಣವಾಗಿ ಗುರಿ ನಿಗಧಿಪಡಿಸಿ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಉತ್ತರದಲ್ಲಿ ಸಚಿವರು ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದಿನ ಶ್ರೇಣಿಗಳಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಬಿಡುಗಡೆ ಮಾಡಲಾದ ಅನುದಾನದಲ್ಲಿ ಬಾಕಿ ಇರುವ ಅನುದಾನಕ್ಕೆ ಅನುಗುಣವಾಗಿ 2022-23ನೇ ಸಾಲಿನಲ್ಲಿ ಒಟ್ಟು 6,141 ಮನೆಗಳ ಜಿಲ್ಲಾವಾರು ಗುರಿ ನಿಗದಿಪಡಿಸಲಾಗಿರುತ್ತದೆ. ಫಲಾನುಭವಿಗಳ ಆಯ್ಕೆ ಮತ್ತು ಅನುಮೋದನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತಿದೆ ಎಂದು ಸಚಿವರು ಉತ್ತರದಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ವಸತಿ ರಹಿತ ಅಲೆಮಾರಿ ಸಮುದಾಯದ ಫಲಾನುಭವಿಗಳ ಸರ್ವೆ ನಡೆಸಿ ಅವರಿಗೆ ಪ್ರತ್ಯೇಕವಾಗಿ ಗುರಿ ನಿಗದಿಪಡಿಸಿ ವಸತಿ ಸೌಲಭ್ಯ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ್ಯ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಈ ನಿಗಮದಿಂದ ಅಲೆಮಾರಿ ಸಮುದಾಯದವರಿಗೆ 11,525 ಮನೆಗಳನ್ನು ನೀಡುವ ಗುರಿಯನ್ನು ಇಟ್ಟುಕೊಂಡು, ಆದ್ಯತೆ ಮೇರೆಗೆ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ. 2017-18, 2020-21 ಮತ್ತು 2021-22ನೇ ಸಾಲಿನಲ್ಲಿ 6,016 ಫಲಾನುಭವಿಗಳನ್ನು ಆಯ್ಕೆಮಾಡಿ ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದು ಸಚಿವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಮನೆಗಳ ಮಾಹಿತಿಯನ್ನು ಈ ಉತ್ತರದಲ್ಲಿ ಒದಗಿಸಿದ್ದಾರೆ.
ಘೋಷಿಸಿದ್ದು 100 ಕೋಟಿ ಕೊಟ್ಟಿದ್ದು 30 ಕೋಟಿ
ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 202-26ನೇ ಸಾಲಿನ ಆಯವ್ಯಯ ಕಂಡಿಕೆ 26ರ ಘೋಷಣೆಯಲ್ಲಿ100 ಕೋಟಿಗಳ ಅನುದಾನ ಒದಗಿಸಲಾಗುವುದೆಂದು ತಿಳಿಸಲಾಗಿದೆ.
ಆದರೆ ಕಳೆದ ಜುಲೈ 31ರಂದು ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು (ಬಿಸಿಡಬ್ಲ್ಯು 602 ಬಿಎಂಎಸ್ 2025, ದಿನಾಂಕ: 31-07-2025) ಪ್ರಸಕ್ತ ಸಾಲಿನಲ್ಲಿ 30 ಕೋಟಿ ರು. ಅನುದಾನ ಒದಗಿಸಲಾಗಿದ್ದು, ಒದಗಿಸಿರುವ ಅನುದಾನಕ್ಕೆ ಸೀಮಿತವಾಗಿ ಅಲೆಮಾರಿ/ಅರೆ ಅಲೆಮಾರಿ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕೆಂದು ಸೂಚಿಸಲಾಗಿದೆ.
ಈ ವಿಷಯವನ್ನು ಕೂಡ ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ವಿಧಾನ ಪರಿಷತ್ತಿಗೆ ನೀಡಿರುವ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. ಅಲೆಮಾರಿ ಸಮುದಾಯದವರು ಬಯಲು ಪ್ರದೇಶಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ವಸತಿ ರಹಿತರಾಗಿ ಜೀವನ ನಡೆಸುತ್ತಿರುವುದಕ್ಕೆ ಪರಿಹಾರವಾಗಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದಾರೆ.
ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರು ಮಾಡಲಾಗದ ಮನೆಗಳಿಗೆ ಅವರು ಹೊಂದಿದ್ದ ನಿವೇಶನಗಳಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದೂ ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಮೂಲ ದಾಖಲೆಗಳಿಲ್ಲದಿರುವುದೇ ಸಮಸ್ಯೆ
ಅಲೆಮಾರಿ ಜನಾಂಗದವರಿಗೆ ವಸತಿ ಸೌಕರ್ಯವನ್ನು ಇನ್ನೂ ಒದಗಿಸಲು ಸಾಧ್ಯವಾಗದೇ ಇರುವುದಕ್ಕೆ ಅಲೆಮಾರಿಗಳಾಗಿರುವ ಅವರಲ್ಲಿ ಮೂಲ ದಾಖಲೆಗಳು ಅಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮುಖ್ಯವಾಗಿ ಜಾತಿ ಪ್ರಮಾಣ ಪತ್ರ ಇತ್ಯಾದಿಗಳು ಇಲ್ಲದೇ ಇರುವುದು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಅವರಿಗೆ ಅರಿವಿಲ್ಲದಿರುವುದು ಕಾರಣ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ʻದಿ ಫೈಲ್ʼಗೆ ತಿಳಿಸಿದ್ದಾರೆ.

ಈಗಾಗಲೇ ನಿಗಮವು ವಸತಿ ಹೀನ ಅಲೆಮಾರಿಗಳನ್ನು ಗುರುತಿಸಲು ಮಾಹಿತಿ ಸಂಗ್ರಹಿಸುತ್ತಿದೆ. ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೆ ಮೂರು ಬಾರಿ ಪತ್ರ ಬರೆದು, ಜಿಲ್ಲೆಗಳಲ್ಲಿರುವ ಅಲೆಮಾರಿಗಳ ಮಾಹಿತಿ ಒದಗಿಸುವಂತೆ ಕೋರಲಾಗಿದೆ. ಈಗಾಗಲೇ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾಹಿತಿಯನ್ನು ನಿಗಮಕ್ಕೆ ನೀಡಿದ್ದಾರೆ. ಎಲ್ಲ ಜಿಲ್ಲೆಯಿಂದಲೂ ಮಾಹಿತಿ ಲಭ್ಯವಾದ ನಂತರ ವಸತಿ ಒದಗಿಸುವ ಕುರಿತು ಪ್ರಸ್ತಾವನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಲೆಮಾರಿಗಳ ಮೂಲ ದಾಖಲೆಗಳ ಸಮಸ್ಯೆಯನ್ನು ಬಗೆಹರಿಸಲು ಈಗ ನಿಗಮ ಪ್ರಯತ್ನಿಸುತ್ತಿದ್ದು, ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ನೆಲದ ಮೂಲ ನಿವಾಸಿಗಳಾದ ಅಲೆಮಾರಿಗಳು ಒಂದೆಡೆ ನೆಲೆ ನಿಲ್ಲುವಂತೆ ಮಾಡಿ, ಅವರಿಗೆ ಮೂಲ ಸೌಕರ್ಯ ಒದಗಿಸಿ, ಕೃಷಿ ಮಾಡಲು ಭೂಮಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ ಎಂದು ಜಿ. ಪಲ್ಲವಿ ಹೇಳಿದ್ದಾರೆ.
ಅಲೆಮಾರಿಗಳಿಗೆ ಮನೆ ನಿರ್ಮಾಣ; 206.26 ಕೋಟಿ ರು ಅನುದಾನದ ಬಾಕಿ ಉಳಿಸಿಕೊಂಡ ಸರ್ಕಾರ
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ 206.26 ಕೋಟಿ ರು.ಗಳ ಅನುದಾನವನ್ನು ಸರ್ಕಾರ ಬಾಕಿ ಉಳಿಸಿಕೊಂಡಿರುವುದು 2024ರಲ್ಲಿ ಬೆಳಕಿಗೆ ಬಂದಿತ್ತು. ಡಾ ಬಿ ಆರ್ ಅಂಬೇಡ್ಕರ್ ನಿವಾಸ್ ಯೋಜನೆಯ 1,25,00 ಮನೆಗಳ ಗುರಿಯಲ್ಲಿ ಎಸ್ ಸಿ ಎಸ್ ಟಿ ಫಲಾನುಭವಿಗಳಿಗೆ ಹಂಚಿಕೆ ಮಾಡಿ 13,545 ಮನೆಗಳು ಬಾಕಿ ಇದ್ದವು. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಅಲೆಮಾರಿ ಸಮುದಾಯದವರಿಗೆ 10,000 ಮನೆಗಳು ನಿಗದಿಪಡಿಸಲಾಗಿತ್ತು. ಈ ಪೈಕಿ 5,313 ಮನೆಗಳ ಗುರಿಯನ್ನು ಮಾತ್ರ ನಿಗದಿಪಡಿಸಲಾಗಿತ್ತು.
ಈ ಸಂಬಂಧ ರಾಜೀವ್‌ಗಾಂಧಿ ವಸತಿ ನಿಗಮವು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2024ರ ಜನವರಿ 16ರಂದೇ ಬರೆದಿದ್ದ ಪತ್ರ ಆಧರಿಸಿ ‘ದಿ ಫೈಲ್’ ವಿಶೇಷ ವರದಿ ಪ್ರಕಟಿಸಿತ್ತು.