ಅಕ್ರಮ ಅದಿರು ಸಾಗಾಣಿಕೆ; 78,245.27 ಕೋಟಿ ರು ನಷ್ಟ ಅಂದಾಜು, ಉಪ ಸಮಿತಿ ವರದಿಯಲ್ಲಿ ಬಹಿರಂಗ

ಬೆಂಗಳೂರು; ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ‘ಬಿ’ ಮತ್ತು ‘ಸಿ’ ವರ್ಗದ ಗಣಿ ಗುತ್ತಿಗೆಗಳ ಪ್ರದೇಶಗಳಿಂದ 19.07 ಕೋಟಿ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಾಣಿಕೆ ಆಗಿರುವ ಸಾಧ್ಯತೆ ಇದೆ.  ಇದರ ನಷ್ಟದ ಮೊತ್ತವೇ 78,245.27 ಕೋಟಿ ರುಪಾಯಿ ಎಂದು ಅಂದಾಜಿಸಿರುವ ವಿಶೇಷ ತನಿಖಾ ತಂಡವು, ಒಟ್ಟಾರೆ ಸಂಭವಿಸಿರುವ ಆರ್ಥಿಕ ನಷ್ಟದ ವಿವರಗಳನ್ನು ಸಚಿವ ಸಂಪುಟದ ಉಪ ಸಮಿತಿಯ ಗಮನಕ್ಕೆ ತಂದಿದೆ.

 

ಅಲ್ಲದೇ ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣೆ ಪಟ್ಟಿಯಲ್ಲಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಲೆಕ್ಕ ಹಾಕುವಾಗ ಪರಿಸರ ಮತ್ತು ಅರಣ್ಯಕ್ಕಾದ ನಷ್ಟವನ್ನು ಅಂದಾಜಿಸಿಲ್ಲ. ಪರಿಸರ ಮತ್ತು ಅರಣ್ಯ ಇಲಾಖೆಗೆ ಆದ ನಷ್ಟವನ್ನು ಅಂದಾಜಿಸಲು ಅರಣ್ಯ ಇಲಾಖೆಯಲ್ಲಿ ಪ್ರಕರಣವಾರು ತನಿಖಾ ತಂಡವನ್ನು ರಚಿಸಿ ವಿವರಗಳನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿಯು ಸೂಚಿಸಿದೆ.

 

ಹಾಗೆಯೇ ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ 29 ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್‌ಗಳು ಸಮಂಜಸವಾಗಿಲ್ಲ ಎಂದು ಸಚಿವ ಸಂಪುಟ ಉಪ ಸಮಿತಿಯು ನಿರ್ಧರಿಸಿದೆ.

 

ಲೋಕಾಯುಕ್ತ ವರದಿ ಅನ್ವಯ ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯವಾಗಿ ವಸೂಲಾತಿ ಆಯುಕ್ತರನ್ನು ನೇಮಕಾತಿಮಾಡುವ ಬಗ್ಗೆ ಮತ್ತು ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಸಚಿವ ಹೆಚ್‌ ಕೆ ಪಾಟೀಲ್‌ ನೇತೃತ್ವದಲ್ಲಿ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯು 2025ರ ಆಗಸ್ಟ್‌ 13ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ.

 

35 ಪುಟಗಳ ವರದಿಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿರುವ ಹಾಗೂ ಇದರಿಂದ ಸಂಭವಿಸಿರುವ ಆರ್ಥಿಕ ನಷ್ಟದ ಕುರಿತಾದ ಸಂಪೂರ್ಣ ವಿವರಗಳಿವೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಧನ್ಬಾದ್‌ನಲ್ಲಿರುವ ಐಐಟಿ ತಜ್ಞರೊಂದಿಗೂ ಸಮಾಲೋಚಿಸಿರುವ ವಿಶೇಷ ತನಿಖಾ ತಂಡವು, ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ವಸ್ತು ಸ್ಥಿತಿಯನ್ನು ಸಚಿವ ಸಂಪುಟದ ಉಪ ಸಮಿತಿಯ ಮುಂದೆ ವಿವರಿಸಿದೆ.

 

2006-07 ಮತ್ತು 2018-19ರಲ್ಲಿ ಉಪಗ್ರಹ ಚಿತ್ರಗಳ ಮಾಹಿತಿ ಆಧರಿಸಿ ವಸ್ತುಸ್ಥಿತಿಯ ಮಾಹಿತಿಯನ್ನು ನೀಡಿರುವ ವಿಶೇಷ ತನಿಖಾ ತಂಡವು, ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ಸಾಗಾಣಿಕೆಯಿಂದಾಗಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಂದಾಜಿಸಿದೆ.

 

ಕೆಎಸ್‌ಆರ್‍‌ಎಸ್‌ಎಸಿ ಸಂಸ್ಥೆಯು 2006-07 ಮತ್ತು 2018-19ನೇ ಸಾಲಿನ ಉಪಗ್ರಹ ಚಿತ್ರಗಳ ಮಾಹಿತಿ ಆಧರಿಸಿ ಗಣಿ ಗುತ್ತಿಗೆ ಪ್ರದೇಶಗಳಿಂದ ಎಷ್ಟು ಪ್ರಮಾಣದಲ್ಲಿ ಕಬ್ಬಿಣದ ಅದಿರನ್ನು ಹೊರತೆಗೆಯಲಾಗಿದೆ ಎಂದು ಪ್ರಾಯೋಗಿಕವಾಗಿ ಅಂದಾಜಿಸಿದೆ. ಇದರ ಪ್ರಕಾರ 38 ಸಿ ವರ್ಗದ ಗಣಿ ಗುತ್ತಿಗೆಗಳಿಂದ ರಾಜಧನ ಪಾವತಿಸದೇ ತೆಗೆದಿರುವ ಖನಿಜದ ಪ್ರಮಾಣ 5.14 ಕೋಟಿ ಟನ್‌ನಷ್ಟಿದೆ. ಒಟ್ಟು ಸಿ ವರ್ಗದ ಗಣಿ ಗುತ್ತಿಗೆಗಳಿಂದ 9.70 ಕೋಟಿ ಕಬ್ಬಿಣದ ಅದಿರು ಹೊರತೆಗೆದಿರಬಹುದೆಂದು ಅಂದಾಜಿಸಿದೆ.

 

‘ಬಿ’ ಮತ್ತು ‘ಸಿ’ ವರ್ಗದ 111 ಗಣಿ ಗುತ್ತಿಗೆಗಳಿಂದ ಒಟ್ಟು ಅಂದಾಜು 19.07 ಕೋಟಿ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಾಣಿಕೆಯಾಗಿರುವ ಸಾಧ್ಯತೆ ಇದೆ ಎಂದು ಸಮಿತಿಯ ಗಮನಕ್ಕೆ ತಂದಿರುವುದು ವರದಿಯಿಂದ ಗೊತ್ತಾಗಿದೆ.

 

ಲೋಕಾಯುಕ್ತರ ವರದಿಯಲ್ಲಿ ಉಲ್ಲೇಖಿಸಿದಂತೆ 2.98 ಮೆಟ್ರಿಕ್‌ ಟನ್‌ ಅಕ್ರಮವಾಗಿ ರಫ್ತಾಗಿದೆ. ಈ ರಫ್ತಿನ ಮೌಲ್ಯವನ್ನು 12,228 ಕೋಟಿ ಎಂದು ಅಂದಾಜಿಸಲಾಗಿತ್ತು. ಈ ಪ್ರಮಾಣವನ್ನು ಹೊರತುಪಡಿಸಿ 16.09 ಕೋಟಿ ಮೆಟ್ರಿಕ್‌ ಟನ್‌ ಅಕ್ರಮವಾಗಿ ರಫ್ತಾಗಿದೆ ಎಂದು ಪರಿಗಣಿಸಿದಾಗ ಲೋಕಾಯುಕ್ತರ ವರದಿಯಲ್ಲಿ ಪರಿಗಣಿಸಿದ ಸರಾಸರಿ ಬೆಲೆ ಪ್ರತಿ ಟನ್‌ ಗೆ 4,103 ರು ನಂತೆ ಸರ್ಕಾರಕ್ಕೆ ಆಗುವ ನಷ್ಟ ಒಟ್ಟು 66,017.27 ಕೋಟಿ ಆಗಲಿದೆ. ಒಟ್ಟಾರೆಯಾಗಿ 78,245.27 ಕೋಟಿ ನಷ್ಟವಾಗಿರುವ ಸಾಧ್ಯತೆ ಇದೆ ಎಂದು ವಿವರಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

 

‘ಒಂದು ವೇಳೆ ಮೇಲ್ಕಂಡ 16.09 ಕೋಟಿ ಟನ್‌ ಸ್ಥಳೀಯವಾಗಿ ಬಳಸಿದೆ ಎಂದು ಪರಿಗಣಿಸಿದಾಗ ಲೋಕಾಯುಕ್ತರ ವರದಿಯಲ್ಲಿ ಪರಿಗಣಿಸಿದಂತೆ ಪ್ರತಿ ಟನ್‌ 2,500 ರು ನಂತೆ ಸರ್ಕಾರಕ್ಕೆ ಆಗುವ ನಷ್ಟ 40,225 ಕೋಟಿ ಆಗಲಿದ್ದು ಒಟ್ಟಾರೆಯಾಗಿ 52,453 ಕೋಟಿ ನಷ್ಟವಾಗಿರುವ ಸಾಧ್ಯತೆ ಇದೆ,’ ಎಂದು ಅಂದಾಜಿಸಿರುವುದು ಗೊತ್ತಾಗಿದೆ.

 

ಪ್ರಮುಖವಾಗಿ ಲೋಕಾಯುಕ್ತರ ವರದಿ ಭಾಗ 2 ರ ಅಧ್ಯಾಯ 1 ಮತ್ತು 3 ರಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತಾಗಿರುವ ಬಗ್ಗೆ ಸಮಗ್ರವಾಗಿ ತನಿಖೆ ಕೈಗೊಂಡಿದ್ದಾರೆ. ಲೋಕಾಯುಕ್ತ ತಂಡವು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಿವಿಧ ಬಂದರುಗಳಿಗೆ ವಿತರಿಸಲಾದ ಪರವಾನಿಗೆಗಳನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದೆ.

 

ಅಲ್ಲದೇ ವಿವಿಧ ಬಂದರುಗಳ ಮೂಲಕ ಕರ್ನಾಟಕ ರಾಜ್ಯದಿಂದ ಉತ್ಪಾದಿಸಿ ರಫ್ತುಮಾಡಿದ ಕಬ್ಬಿಣದ ಅದರಿನ ಪ್ರಮಾಣವನ್ನು ಸುಂಕ ಕಚೇರಿಯಿಂದ ಶಿಪ್ಪಿಂಗ್‌ ಬಿಲ್‌ಗಳನ್ನು ಪಡೆದಿದೆ ಈ ಮೂಲಕ ವಿವಿಧ ಬಂದರುಗಳ ಮೂಲ ರಫ್ತಾದ ಕಬ್ಬಿಣದ ಅದಿರಿನ ಪ್ರಮಾಣವನ್ನು ಲೆಕ್ಕ ಹಾಕಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಲೋಕಾಯುಕ್ತರ ವರದಿ ಭಾಗ 2 ರ ಅಧ್ಯಾಯ 3ರಲ್ಲಿ ವಿವಿಧ ಗಣಿ ಕಂಪನಿಗಳು ರೈಲ್ವೇ ಮೂಲಕ ಗೋವಾಕ್ಕೆ ಅಂದಾಜು 45,59,365 ಮೆಟ್ರಿಕ್‌ ಟನ್‌ ಕಬ್ಬಿಣ ಅದಿರು ಸಾಗಾಣಿಕೆ ಆಗಿದೆ ಎಂದು ವರದಿ ಮಾಡಲಾಗಿದೆ. ಒಟ್ಟು 40 ಗಣಿ ಗುತ್ತಿಗೆದಾರರು, ವ್ಯಾಪಾರಿಗಳು 45,59,365 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಅಕ್ರಮವಾಗಿ ರೈಲ್ವೇ ಮೂಲಕ ಸಾಗಾಣಿಕೆ ಮಾಡಿರುವುದಾಗಿ ವರದಿ ಮಾಡಿದ್ದಾರೆ. ಅಧ್ಯಾಯ 1 ಮತ್ತು ಅಧ್ಯಾಯ 3ರಮತೆ ಒಟ್ಟು 3,44,20.012 ಟನ್‌ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಾಣಿಕೆಯಾಗಿತ್ತು ಎಂಬ ವಿವರಗಳು ವರದಿಯಲ್ಲಿವೆ.

 

 

‘ಬಿ’ ವರ್ಗದ ಗಣಿ ಗುತ್ತಿಗೆಗಳಿಂದ ವಸೂಲಿ ಮಾಡಲಾದ ಪರಿಹಾರಾತ್ಮಕ ಮೊತ್ತ – 2012ರ ಸೆ.28ರಂದು ನೀಡಿದ್ದ ಆದೇಶದಂತೆ ಬಿ ವರ್ಗದ ಗಣಿಗುತ್ತಿಗೆದಾರರು ಗಣಿಗಾರಿಕೆ ಪುನರಾರಭಿಸಲು ಶಾಸನಬದ್ಧ ದಾಖಲೆಗಳೊಂದಿಗೆ ಅತಿಕ್ರಮಣ ಮಾಡಿದ ಪ್ರತಿ ಹೆಕ್ಟೇರ್‍‌ ಪ್ರದೇಶಕ್ಕೆ 5.00 ಕೋಟಿ ಮತ್ತು ಅದಿರನ್ನು ಸಂಗ್ರಹಣೆ ಮಾಡಿದ ಪ್ರತಿ ಹೆಕ್ಟೇರ್‍‌ ಪ್ರದೇಶಕ್ಕೆ 1 ಕೋಟಿ ರು ಪರಿಹಾರಾತ್ಮಕ ಮೊತ್ತವನ್ನು ಪಾವತಿಸಬೇಕು ಎಂದು ಮಾಹಿತಿ ಒದಗಿಸಿದೆ.

 

 

ಕೆಎಸ್‌ಆರ್‍‌ಎಸಿ ಮೂಲಕ 19 ಬಿ ವರ್ಗದ ಗಣಿ ಗುತ್ತಿಗೆಗಳಿಂದ 2.44 ಕೋಟಿ ಟನ್‌ ಕಬ್ಬಿಣದ ಅದಿರನ್ನು ಅನುಮತಿ ಇಲ್ಲದೇ ಹೆಚ್ಚುವರಿಯಾಗಿ ಹೊರತೆಗೆಯಲಾಗಿದೆ ಎಂದು ಅಂದಾಜಿಸಲಾಗಿದೆ. 2006-07 ಮತ್ತು 2018-19ನೇ ಸಾಲಿನ ಉಪಗ್ರಹ ಚಿತ್ರಗಳ ಮಾಹಿತಿ ಆಧರಿಸಿ 43 ಬಿ ವರ್ಗದ ಗಣಿ ಗುತ್ತಿಗೆಗಳಿಂದ ಹೊರತೆಗೆದಿರಬಹುದಾದ ಕಬ್ಬಿಣದ ಅದಿರಿನ ಪ್ರಮಾಣವನ್ನು ಪ್ರಾಯೋಗಿಕವಾಗಿ ಅಂದಾಜಿಸಿದ್ದಾರೆ. ಅದರಂತೆ ರಾಜಧನ ಪಾವತಿಸದೇ ತೆಗೆದಿರುವ ಖನಿಜ ಪ್ರಮಾಣ 6.93 ಕೋಟಿ ಟನ್‌ ಆಗಿದೆ. ಒಟ್ಟು 62 ಬಿ ವರ್ಗದ ಗಣಿ ಗುತ್ತಿಗೆಗಳಿಂದ 9.37 ಕೋಟಿ ಕಬ್ಬಿಣ ಅದಿರು ಹೊರತೆಗೆದಿರಬಹುದೆಂದು ಅಂದಾಜಿಸಲಾಗಿದೆ.

 

 

ಸಿ ವರ್ಗದ ಗಣಿ ಗುತ್ತಿಗೆಗಳಿಂದ ತೆಗೆದ ಕಬ್ಬಿಣದ ಅದಿರಿನ ಪ್ರಮಾಣವನ್ನು ಅಂದಾಜಿಸುವ ಕುರಿತು ನಡೆಸಿರುವ ಪ್ರಕ್ರಿಯೆಯು ಹೆಚ್ಚಿನ ಕಾಲಾವಕಾಶ ತೆಗೆದುಕೊಂಡಿದೆ. ಈ ಹಿಂದೆ ಯಾವುದೇ ನಿರ್ದಿಷ್ಟವಾದ ಮಾನದಂಡ, ಮಾರ್ಗಸೂಚಿಗಳು ಮತ್ತು ಸಾಬೀತಾದ ವಿಧಾನಗಳು ಇರುವುದಿಲ್ಲ. ಈ ಕುರಿತು ಪ್ರಸ್ತುತವೂ ಸಹ ಯಾವುದೇ ನಿಯಮಗಳಲ್ಲಿ ಸ್ಪಷ್ಟವಾದ ಮಾರ್ಗಸೂಚಿಗಳು ಇರುವುದಿಲ್ಲ ಎಂಬ ಮಾಹಿತಿಯು ವರದಿಯಲ್ಲಿದೆ.

 

ಈ ಪ್ರಕ್ರಿಯೆ ಹೆಚ್ಚಿನ ತಾಂತ್ರಿಕ ಅಂಶಗಳನ್ನು ಹಾಗೂ ಅನಿರೀಕ್ಷಿತ ಅಂಶಗಳನ್ನು ಪರಿಗಣಿಸಬೇಕಾಗುವ ಸಾಧ್ಯತೆಗಳ ಬಗ್ಗೆ ವಿವಿಧ ಸಂಸ್ಥೆಗಳ ತಜ್ಞರೊಂದಿಗೆ ಚರ್ಚೆ ಮಾಡಲಾಗಿದೆ. ತಜ್ಞರ ಸಲಹೆ ಮೇರೆಗೆ ಸರ್ವೇ ಆಫ್‌ ಇಂಡಿಯಾದಲ್ಲಿ 1993ರ ವೈಮಾನಿಕ ಛಾಯಾಚಿತ್ರಗಳನ್ನು ಪಡೆದು ಪ್ರಿ ಲೆವೆಲ್‌ ಆಗಿ ಪರಿಗಣಿಸಲು ನಿರ್ಧರಿಸಲಾಗಿತ್ತು. ಅದರಂತೆ ಸರ್ವೆ ಆಫ್‌ ಇಂಡಿಯಾ ಬೆಂಗಳೂರು ಇವರಿಂದ ಏರಿಯಲ್‌ ಫೋಟೋಗ್ರಾಫ್‌ ಗುರುತಿಸಿ ಪಡೆಯಲಾಗಿದೆ ಎಂದು ವಿವರಿಸಿದೆ.

 

ಪೋಸ್ಟ್‌ ಲೆವೆಲ್ ಮಾಹಿತಿಗಾಗಿ ಸರ್ವೆ ಆಫ್‌ ಇಂಡಿಯಾ, ಎನ್ಐಟಿ ಕೆ, ಕೆಎಸ್‌ಆರ್‍‌ಎಸ್‌ಎಸಿ ಮತ್ತು ಗಣಿ ಭೂ ವಿಜ್ಞಾನ ಇಲಾಖೆಯಿಂದ ಗಣಿ ಗುತ್ತಿಗೆಗಳ ಗಡಿ ಬಾಂಧುಗಳನ್ನು ಹಾಗೂಗಣಿ ಗುತ್ತಿಗೆ ಪ್ರದೇಶದ ಶಾಶ್ವತ ರೆಫರೆನ್ಸ್‌ ಪಾಯಿಂಟ್‌ಗಳನ್ನು ಗುರುತಿಸಲು ಜಂಟಿ ಮೋಜಣಿ ಸೆರ್ವ ಮಾಡಿರುವುದು ವರದಿಯಿಂದ ಗೊತ್ತಾಗಿದೆ.

 

 

ಗಣಿ ಗುತ್ತಿಗೆಗಳ ಡಿಜಿಪಿಎಸ್ ಸರ್ವೇ ಮತ್ತು ಈ ಪ್ರದೇಶಗಳ ಡ್ರೋಣ್‌ ಸರ್ವೆ ದತ್ತಾಂಶ ಅವಶ್ಯಕತೆ ಇದ್ದ ಕಾರಣ ಸದರಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪೋಸ್ಟ್‌ ಲೆವೆಲ್‌ ಪರಿಗಣಿಸಲು ಟೋಟಲ್‌ ಸ್ಟೇಷನ್‌ ಸರ್ವೆ ಅವಶ್ಯಕತೆ ಇದೆ. ಎಂಇಸಿಎಲ್‌ ಸಂಸ್ಥೆಯಿಂದ ಸಿ ವರ್ಗದ ಗಣಿ ಗುತ್ತಿಗೆಗಳಲ್ಲಿ ಖನಿಜಾನ್ವೇಷಣೆ ನಡೆಸುವಾಗ ಟೋಟಲ್‌ ಸ್ಟೇಷನ್‌ ಸರ್ವೆ ನಡೆಸಲಾಗಿದ್ದು ಸದರಿ ದತ್ತಾಂಶವನ್ನು ಪರಿಗಣಿಸಿದೆ.

 

ಎಂಇಸಿಎಲ್‌ ಸಂಸ್ಥೆ ನಡೆಸಿದ ಟೋಟಲ್‌ ಸ್ಟೇಷನ್‌ ಸರ್ವೆಗೂ ಕೆಎಸ್‌ಆರ್‍‌ಅಸಿ ಕೈಗೊಂಡ ಟೋಟಲ್‌ ಸ್ಟೇಷನ್‌ ಸರ್ವೆಗೂ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ತಂಡವನ್ನು ಪುನರ್‍‌ ರಚಿಸಿ ಪುನಃ ಸ್ಥಳ ತಪಾಸಣೆ ನಡೆಸಿ ಪರಿಷ್ಕೃತ ಟೋಟಲ್‌ ಸ್ಟೇಷನ್‌ ಸರ್ವೆ ದತ್ತಾಂಶವನ್ನು ಎಂಸಿಸಿಎಲ್‌ ಸಂಸ್ಥೆಯಿಂದ ಪಡೆದಿರುವುದು ತಿಳಿದು ಬಂದಿದೆ.
ಪ್ರಿ ಲೆವೆಲ್‌ ಮತ್ತು ಪೋಸ್ಟ್‌ ಲೆವೆಲ್‌ಗಳ ನಡುವಿನ ಅಂತರವನ್ನು ಗುರುತಿಸಲು ಸದರಿ ಗಣಿ ಗುತ್ತಿಗೆಗಳಲ್ಲಿನ ಮೂಲ ಪ್ರದೇಶಗಳನ್ನು ಗುರುತಿಸಿ ಡಿಜಿಪಿಎಸ್‌ ಸರ್ವೆ ಮುಖಾಂತರ ಸದರಿ ಪ್ರದೇಶಗಳ ಎತ್ತರದ ಮಾಹಿತಿಯನ್ನು ಪಡೆದು ತಾಳೆ ಮಾಡಿದೆ.

 

 

‘ಈ ಮೇಲಿನ ಪ್ರಕ್ರಿಯೆಯಿಂದ ಹೊರತೆಗೆಯಲಾದ ಕಬ್ಬಿಣದ ಅದಿರಿನ ಗಾತ್ರ ಲಭ್ಯವಾಗಿದ್ದು ಸದರಿ ಮಾಹಿತಿಯಂತೆ ಟನ್‌ಗಳಲ್ಲಿ ಲೆಕ್ಕ ಹಾಕಲು ಬಲ್ಕ್‌ ಡೆನ್ಸಿಟಿ ಮಾಹಿತಿ ಲಭ್ಯವಿರುವುದಿಲ್ಲ. ಈ ಸಂಬಂಧ ಐಬಿಎಂ ಸಂಸ್ಥೆಯೊಂದಿಗೆ ಪತ್ರ ವ್ಯವಹಾರ ನಡೆಸಿ ಎಲ್ಲಾ ಗಣಿ ಗುತ್ತಿಗೆಗಳ ಎಲ್ಲಾ ಮೈನಿಂಗ್‌ ಪ್ಲಾನ್‌ಗಳಲ್ಲಿ ಲಭ್ಯವಿರುವ ಸರಾಸರಿ ಪರಿಗಣಿಸಲು ತೀರ್ಮಾನಿಸಲಾಯಿತು,’ ಎಂದು ವಿವರಿಸಿದೆ.

 

ಇನ್‌ಸೈಟಿವ್ ಬಲ್ಕ್‌ ಡೆನ್ಸಿಟಿಯನ್ನು ಮೇಲಿನಂತೆ ಐಬಿಎಂ ಅನುಮೋದಿಸಿದ ಗಣಿ ಯೋಜನೆಯನ್ನು ಪಡೆದಿದೆ. ಆದರೆ ತ್ಯಾಜ್ಯದ ಮಾಹಿತಿ ಇರದ ಕಾರಣ ಸ್ಥಳದಲ್ಲಿ ಲಾರಿಗಳಲ್ಲಿ ಡಂಪ್‌ನ ಮಾದರಿಯನ್ನು ಸಂಗ್ರಹಿಸಿ ಬಲ್ಕ್‌ ಡೆನ್ಸಿಟಿಯನ್ನು ಪಡೆಯಲು ಪ್ರಯತ್ನಿಸಲಾಗಿದೆ. ಆದರೆ ತ್ಯಾಜ್ಯ ಡಂಪ್‌ಗಳು ಏಕರೂಪ ಮತ್ತು ಏಕ ಮಾದರಿಯ ಶಿಲೆಗಳಿಂದ ಕೂಡಿರುವುದಿಲ್ಲ. ಆದ್ದರಿಂದ ಈ ಪ್ರಕ್ರಿಯೆಯು ಕಾರ್ಯಸಾಧುವಲ್ಲ ಎಂದು ಕೈ ಬಿಡಲಾಗಿದೆ ಎಂಬ ಮಾಹಿತಿಯನ್ನು ಸಚಿವ ಸಂಪುಟ ಉಪ ಸಮಿತಿಗೆ ಒದಗಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಅಸ್ತಿತ್ವದಲ್ಲಿರುವ ಯಾವುದೇ ಕಾಯ್ದೆ ಮತ್ತು ನಿಯಮಗಳಲ್ಲಿ ಯಾವುದೇ ನಿಗದಿತ ಕಾರ್ಯವಿಧಾನವನ್ನು ಹೊಂದಿಲ್ಲ. ಹೀಗಾಗಿ ಕೆಎಸ್‌ಆರ್‍‌ಎಸಿ ಸಿದ್ಧಪಡಿಸಿದ ವರದಿಗಳನ್ನು ತಾಂತ್ರಿಕ ತಜ್ಞರು ಪರಿಶೀಲಿಸಬೇಕು ಎಂದು ಅದಿರು ಮೌಲ್ಯಮಾಪನ ಸಮಿತಿಯು ತೀರ್ಮಾನಿಸಿದೆ. ಈ ಸಂಬಂಧ ಐಐಟಿ ಧನ್ಬಾದ್‌ನಿಂದ ವರದಿಗಳನ್ನು ದೃಢೀಕರಿಸಲು ತೀರ್ಮಾನಿಸಿರುವುದು ತಿಳಿದು ಬಂದಿದೆ.

 

ಐಐಟಿ ಧನ್ಬಾದ್‌ನ ಪ್ರೊ ಧೀರಜ್‌ ಕುಮಾರ್‍‌ ಅವರು 9 ವರದಿಗಳನ್ನು ಪರಿಶೀಲಿಸಿ ಹಲವು ಸಲಹೆಗಳನ್ನು ನೀಡಿದ್ದಾರೆ. ಅದರಲ್ಲಿ ವಿವಿಧ ಮಾದರಿಯಲ್ಲಿ ಹೊರತೆಗೆಯಲಾದ ಕಬ್ಬಿಣದ ಅದಿರಿನ ಗಾತ್ರದ ಮಾಹಿತಿಯನ್ನು ಅಳವಡಿಸಿ ತಾಳೆ ಮಾಡಲು ಸಲಹೆ ನೀಡಿದ್ದಾರೆ. ಅದರಂತೆ ಮೈನಿಂಗ್‌ ಸಾಫ್ಟ್‌ವೇರ್‍‌ ಮತ್ತು ಮೈಕ್ರೋಸ್ಟೇಷನ್‌ ಆಫ್‌ ಬೆಂಟ್ಲಿ ಗಳನ್ನು ಖರೀದಿಸುವ ಪ್ರಕ್ರಿಯೆ ನಡೆಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

 

‘ಇವರ ಸಲಹೆಗಳನ್ನು ಅಳವಡಿಸಿಕೊಂಡು ಕೆಎಸ್‌ಆರ್‍‌ಎಸ್‌ಎಸಿ ವರದಿ ತಯಾರಿಸಿದೆ. ಅಂತಿಮಗೊಳಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಉಂಟಾದ ವಿವಿಧ ಸವಾಲುಗಳನ್ನು ಬಗೆಹರಿಸಲು 26 ಸಭೆಗಳನ್ನು ನಡೆಸಿದೆ. ಮತ್ತು ಸಾಕಷ್ಟು ಬಾರಿ ತಜ್ಞರೊಂದಿಗೆ ಚರ್ಚೆ ನಡೆಸಿದೆ. ಅದರಂತೆ ಕೆಎಸ್‌ಆರ್‍‌ಎಸ್‌ಎಸಿ ಸಂಸ್ಥೆಯು ಅದಿರು ಮೌಲ್ಯಮಾಪನ ಸಮಿತಿ ನೀಡಿದ ನಿರ್ದೇಶನದಂತೆ ಅಂತಿಮಗೊಳಿಸಿದ 13 ವರದಿಗಳ ಪ್ರಕಾರ ಒಟ್ಟು 4.50 ಕೊಟಿ ಟನ್‌ ನಷ್ಟು ಅದಿರು ಪರವಾನಿಗೆ ಪ್ರಮಾಣಕ್ಕಿಂತ ಹೆಚ್ಚಾಗಿ ಸಾಗಾಣಿಕೆಯಾಗಿದೆ,’ ಎಂದು ಮಾಹಿತಿ ಒದಗಿಸಿದೆ.

 

ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಏರಿಯಲ್‌ ಫೋಟೋಗಳು ಲಭ್ಯವಿರುವುದಿಲ್ಲ. ಆದ ಕಾರಣ ಪರ್ಯಾಯ ವಿಧಾನಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕೆಎಸ್‌ಆರ್‍‌ಎಸ್‌ಎಸಿ ಸಂಸ್ಥೆಯು ಉಳಿದ 38 ಪ್ರಕರಣಗಳಲ್ಲಿ ಹೊರತೆಗೆಯಲಾದ ಕಬ್ಬಿಣದ ಅದಿರಿನ ಪ್ರಮಾಣವನ್ನು ಅಂದಾಜಿಸಲು ಕನಿಷ್ಠ ಒಂದೂವರೆ ರ್ವ ಕಾಲಾವಕಾಶ ಅವಶ್ಯಕವಾಗಿದೆ ಎಂದು ತಿಳಿಸಿರುವುದು ಗೊತ್ತಾಗಿದೆ.

 

‘ಸಿ’ ವರ್ಗದ ಗಣಿ ಗುತ್ತಿಗೆಗಳ ಪೈಕಿ ನಿಧಿ ಎಂಟರ್‍‌ ಪ್ರೈಸೆಸ್‌ನ ಕೆ ಎಂ ಪಾರ್ವತಮ್ಮ, ಮಿನಿರಲ್ಸ್‌ 1993-94ರಿಂದ 2015ರ ಮೇ 31ರವರೆಗೆ ಪರವಾನಿಗಿ ಪಡೆದಿದ್ದಕ್ಕಿಂತಲೂ ಹೆಚಚಗಿಎ 26,89,633 ಟನ್‌ ಅದಿರನ್ನು ಸಾಗಾಣಿಕೆ ಮಾಡಿದೆ. ಮೈನರ್ಸ್‌ ಅಂಡ್‌ ಟ್ರೇಡರ್ಸ್‌ ಇದೇ ಅವಧಿಯಲ್ಲಿ 68,685 ಟನ್‌, ರಾಮಘಡ್‌ ಮೈನ್ಸ್‌ ಮತ್ತು ಮಿನರಲ್ಸ್‌ ಪ್ರೈ ಲಿ., 24,07,994 ಟನ್‌, ರಾಮರಾವ್‌ ಪೋಲ್‌ 15,43,017 ಅದಿರನ್ನು ಹೆಚ್ಚಿಗೆ ಸಾಗಾಣಿಕೆ ಮಾಡಿದ್ದಾರೆ. ಇದನ್ನು ಧನ್ಬಾದ್‌ನ ಐಐಟಿ ಕೂಡ ಒಪ್ಪಿಕೊಂಡಿದೆ.

 

 

ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಪ್ರೈವೈಟ್‌ ಲಿಮಿಟೆಡ್‌ ಕೂಡ ಪರವಾನಿಗೆ ಪಡೆದಿದ್ದಕ್ಕಿಂತಲೂ0, 98,396 ಟನ್‌, ಕಾರ್ತಿಕೇಯ ಮ್ಯಾಂಗನೀಸ್‌ 14,91,313, ಹೊತ್ತೂರ್‍‌ ಟ್ರೇಡರ್ಸ್‌ 11,11,245, ಬಿ ಆರ್ ಯೋಗೇಂದ್ರನಾಥ್‌ ಸಿಂಗ್‌ 10,40,901 ಅದಿರನ್ನು ಸಾಗಿಸಿದೆ. ಲಕ್ಷ್ಮಿ ನಾರಾಯಣ ಮೈನಿಂಗ್‌ ಕಂಪನಿಯು 2,17,51,140 ಟನ್‌, ಎಸ್‌ ಬಿ ಮಿನರಲ್ಸ್‌ 77,66,104 ಟನ್‌, ತುಂಗಭದ್ರಾ ಮಿನರಲ್ಸ್‌ 17,92,568 ಟನ್‌, ವಿ ಎಸ್‌ ಲಾಡ್‌ ಅಂಡ್‌ ಸನ್ಸ್‌ ಕಂಪನಿಯು 43,78,062 ಟನ್‌ ಅದಿರನ್ನು ಸಾಗಿಸಿದೆ. ಈ ಕುರಿತಾದ ಮಾಹಿತಿಯನ್ನು ಧನ್ಬಾದ್‌ನ ಐಐಟಿಗೆ 2025ರ ಜುಲೈ 14ರಂದು ವರದಿ ಸಲ್ಲಿಸಿರುವುದು ತಿಳಿದು ಬಂದಿದೆ.

 

ಅರಣ್ಯ, ಪರಿಸರಕ್ಕಾದ ನಷ್ಟವನ್ನೇ ಅಂದಾಜಿಸಿಲ್ಲ

 

ಅಕ್ರಮ ಗಣಿಗಾರಿಕೆ ಮತ್ತು ಅದಿರಿ ಅಕ್ರಮ ಸಾಗಾಣಿಕೆಯಿಂದಾಗಿ ಸರ್ಕಾರಕ್ಕೆ ಸಂಭವಿಸಿರುವ ನಷ್ಟ ಲೆಕ್ಕ ಹಾಕುವಾಗ ಪರಿಸರ ಮತ್ತು ಅರಣ್ಯಕ್ಕಾದ ನಷ್ಟವನ್ನು ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಅಂದಾಜಿಸಿಲ್ಲ. ಸಚಿವ ಸಂಪುಟ ಉಪ ಸಮಿತಿಯು ಈ ಅಂಶವನ್ನು ಗಮನಿಸಿದೆ.

 

 

ಪರಿಸರ ಮತ್ತು ಅರಣ್ಯ ಇಲಾಖೆಗೆ ಉಂಟಾದ ನಷ್ಟವನ್ನು ಅಂದಾಜಿಸಲು ನಿರ್ದೇಶಿಸಿದ ಮೇರೆಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರು ಈ ಬಗ್ಗೆ ಪರಿಶೀಲಿಸಿ ಅರಣ್ಯ ಇಲಾಖೆಯಿಂದ ನಷ್ಟದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು. ಮತ್ತು ಅರಣ್ಯ ಇಲಾಖೆಗೆ ಉಂಟಾದ ನಷ್ಟವನ್ನು ದೋಷಾರೋಪಣೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕ್ರಮವಹಿಸಬೇಕು ಎಂದು ಸೂಚಿಸಿರುವುದು ವರದಿಯಿಂದ ಗೊತ್ತಾಗಿದೆ.

 

‘ಪರಿಸರ ಮತ್ತು ಅರಣ್ಯ ಇಲಾಖೆಗೆ ಆದ ನಷ್ಟವನ್ನು ಅಂದಾಜಿಸಲು ಅರಣ್ಯ ಇಲಾಖೆಯಲ್ಲಿ ಪ್ರಕರಣವಾರು ತನಿಖಾ ತಂಡವನ್ನು ರಚಿಸಿ ವಿವರಗಳನ್ನು ಮುಂದಿನ ಕ್ರಮಕ್ಕಾಗಿ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸಬೇಕು,’ ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.

 

‘ಬಿ’ ರಿಪೋರ್ಟ್‌ಗಳು ಸಮಂಜಸವಾಗಿಲ್ಲವೆಂದ ಸಮಿತಿ

 

ವಿಶೇಷ ತನಿಖಾ ತಂಡವು ನ್ಯಾಯಾಲಯಕ್ಕೆ 29 ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್‌ ಸಲ್ಲಿಸಿದೆ. ‘ಬಿ’ ರಿಪೋರ್ಟ್‌ನಲ್ಲಿ ದಾಖಲಿಸಿದ್ದ ಕಾರಣಗಳನ್ನು ಸಚಿವ ಸಂಪುಟ ಉಪ ಸಮಿತಿಯು ಅವಲೋಕಿಸಿದೆ. ಕೆಲವು ಪ್ರಕರಣಗಳಲ್ಲಿ ನೀಡಲಾದ ಕಾರಣಗಳು ಮೇಲ್ನೋಟಕ್ಕೆ ಸಮಂಜಸವಾಗಿಲ್ಲ ಎಂದು ಗಮನಿಸಿದೆ.

 

ಮತ್ತೊಮ್ಮೆ 29 ಪ್ರಕರಣಗಳಲ್ಲಿನ ‘ಬಿ’ ರಿಪೋರ್ಟ್‌ನ್ನು ಮರು ಪರಿಶೀಲಿಸಲು ವಿಶೇಷ ತನಿಖಾ ತಂಡಕ್ಕೆ ತಿಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.

 

ಸಚಿವ ಸಂಪುಟವು ಈ ಬಗ್ಗೆ ಕ್ರಮ ಕೈಗೊಳ್ಳುವವರೆಗೆ ವಿಶೇಷ ತನಿಖಾ ತಂಡವು ನ್ಯಾಯಾಲಯಲದ್ಲಿ ಬಿ ರಿಪೋರ್ಟ್‌ಗಳನ್ನು ಸಲ್ಲಿಸಿರುವ 8 ಪ್ರಕರಣಗಳ ಬಿ ರಿಪೋರ್ಟ್‌ನ್ನು ಪರಿಗಣಿಸದಂತೆ ನ್ಯಾಯಾಲಯಕ್ಕೆ ಕೋರಬೇಕು ಎಂದು ನಿರ್ದೇಶಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

 

 

ನಿಖರವಾಗಿ ಆರೋಪ ಕಷ್ಟಸಾಧ್ಯವೆಂದ ಎಸ್‌ಐಟಿ

 

ಗೋವಾ ರಾಜ್ಯದ ಪಣಜಿ, ಮರ್ಮಗೋವಾ, ಚೆನ್ನೈ, ಎನ್ನೋರ್‍‌ ಬಂದರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು 3 ವರ್ಷ 6 ತಿಂಗಳ ನಂತರ ಸಿಬಿಐ ಹಿಂದಿರುಗಿಸಿತ್ತು. ಅದೇ ರೀತಿ ಕರ್ನಾಟಕದ ನವ ಮಂಗಳೂರು ಹಾಗೂ ಕಾರವಾರ ಬಂದರುಗಳಿಗೆ ಸಂಬಂಧಿಸಿದಂತೆ ಸದರಿ ಬಂದರುಗಳಿಂದ ರಫ್ತಾದ ಅದಿರು ಅನೇಕ ಗಣಿಗುತ್ತಿಗೆದಾರರು, ವ್ಯಾಪಾರಿಗಳು ಮತ್ತು ಇತರೆ ಮಧ್ಯವರ್ತಿಗಳಲ್ಲಿ ಅನೇಕ ಬಾರಿ ಕೈ ಬದಲಾಗಿದೆ. ಹೀಗಾಗಿ ನಿಖರವಾಗಿ ಕಾಯ್ದೆಗಳನ್ವಯ ಆರೋಪ ನಿಗದಿಪಡಿಸುವುದು ಕಷ್ಟಸಾಧ್ಯವಾಗಿದೆ ಎಂದು ಸಿಬಿಐ ಹೇಳಿತ್ತು.

 

 

ಈ ಬಗ್ಗೆ ರಾಜ್ಯ ಸರ್ಕಾರವೇ ಮುಂದಿನ ಕ್ರಮ ಜರುಗಿಸಬೇಕು ಎಂದು ಹೇಳಿದ್ದ ಸಿಬಿಐ ಸಂಸ್ಥೆಯು 03 ವರ್ಷ 10 ತಿಂಗಳ ನಂತರ ಈ ಎಲ್ಲಾ ಪ್ರಕರಣಗಳನ್ನೂ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದೆ ಎಂಬ ಮಾಹಿತಿಯನ್ನು ಸಚಿವ ಸಂಪುಟ ಉಪ ಸಮಿತಿ ಗಮನಕ್ಕೆ ತಂದಿದೆ.

 

ಅಲ್ಲದೇ ಈ 6 ಬಂದರುಗಳಿಂದ ಅಕ್ರಮವಾಗಿ ರಫ್ತಾಗಿರುವ ಕುರಿತಂತೆ 3ರಿಂದ 4 ವರ್ಷಗಳವರೆಗೆ ಯಾವುದೇ ತನಿಖೆ ನಡೆಸದೇ ಸಿಬಿಐ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿತ್ತು. ಈ ಬಂದರುಗಳಿಂದ ಅಕ್ರಮ ರಫ್ತಾಗಿರುವ ಕುರಿತು ರಾಜ್ಯ ಸರ್ಕಾರವು 2018ರ ಮಾರ್ಚ್‌ 21ರಂದು ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ ವಹಿಸಿತ್ತು.

 

ಸಿಬಿಐ,  ಪ್ರಾಥಮಿಕ ತನಿಖೆಯನ್ನು 04 ಬಂದರುಗಳ ಕುರಿತಂತೆ ಅಂದರೆ ಪಣಜಿ, ಮರ್ಮಗೋವಾ, ನವ ಮಂಗಳೂರು, ಕಾರವಾರ ನಡಸಿದ್ದು ವಿಶೇಷ ತನಿಖಾ ತಂಡ ಹಲವಾರು ಬಾರಿ  ಮಾಹಿತಿ ಕೋರಿದರು ಸಹ ಯಾವುದೇ ಮಾಹಿತಿಯನ್ನು ವಿಶೇಷ ತನಿಖಾ ತಂಡಕ್ಕೆ ನೀಡಿರುವುದಿಲ್ಲ ಎಂದು ಸಚಿವ ಸಂಪುಟ ಉಪ ಸಮಿತಿಯ ಗಮನಕ್ಕೆ ತಂದಿದೆ.

 

ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಬಂದರಿನಿಂದ ಶೇ.30ಕ್ಕಿಂತ ಹೆಚ್ಚಿನ ಪ್ರಮಾಣದ ಅದಿರು ಅಕ್ರಮವಾಗಿ ರಫ್ತಾಗಿದ್ದರೂ ಸಿಬಿಐ ಸಂಸ್ಥೆಯು 10 ವರ್ಷ ಕಳೆದರೂ ಯಾವುದೇ ತನಿಖೆಯನ್ನು ನಡೆಸಿರುವುದು ಕಂಡು ಬಂದಿಲ್ಲ. ವಿಶೇಷ ತನಿಖಾ ತಂಡವು ಈ ಪ್ರಕರಣಗಳಲ್ಲಿ ಆಗಿರುವ ವಿಳಂಬದ ಕುರಿತು ಸಚಿವ ಸಂಪುಟ ಉಪ ಸಮಿತಿಯ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

 

10 ವರ್ಷಗಳ ನಂತರ ಸಿಬಿಐ ತಂಡ ತನಿಖೆ ನಡೆಸದೇ ಇರುವಂತಹ ಈ ಗಂಭೀರ ಲೋಪವನ್ನು ತಿಳಿಸಿ ತಕ್ಷಣ ತನಿಖೆ ಪೂರ್ಣಗೊಳಿಸಬೇಕು. ಈ ಸಂಬಂಧ ಕ್ರಮ ತೆಗೆದುಕೊಳ್ಳಲು ಅಥವಾ ವಿಶೇಷ ತನಿಖಾ ತಂಡದ ಮೂಲಕ ತನಿಖೆಗೆ ಒಳಪಡಿಸಲು ಸಿಬಿಐಗೆ ಹಿಸಿದ ಪ್ರಕರಣಗಳನ್ನು ವಾಪಸ್ಸು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರಬಹುದು ಎಂದು ಉಪ ಸಮಿತಿಯು ಶಿಫಾರಸ್ಸು ಮಾಡಿದೆ.

 

 

ಎಸ್‌ಐಟಿಯು ಒಟ್ಟು 109 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಪೈಕಿ 62 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಇದರಲ್ಲಿ 26 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ವಿಧಿಸಿದೆ. 35 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದೆ. 29 ಪ್ರಕರಣಗಳಲ್ಲಿ ಬಿ ರಿಪೋರ್ಟ್‌ ಸಲ್ಲಿಸಿದೆ. 3 ಪ್ರಕರಣಗಳಲ್ಲಿ ಸಿ ವರದಿ ಸಲ್ಲಿಸಿದೆ.

 

ಇನ್ನು 15 ಪ್ರಕರಣಗಳು ತನಿಖೆ ಹಂತದಲ್ಲಿದೆ. ಈ ಪೈಕಿ 2 ತನಿಖಾ ಪ್ರಕರಣಗಳಿಗೆ ತಡೆಯಾಜ್ಞೆ ಇದೆ. ಇನ್ನುಳಿದ 13 ಪ್ರಕರಣಗಳು ತನಿಖೆಯಲ್ಲಿದೆ ಎಂದು ವಸ್ತು ಸ್ಥಿತಿ ವರದಿಯನ್ನು ಸಚಿವ ಸಂಪುಟ ಉಪ ಸಮಿತಿ ಗಮನಕ್ಕೆ ತಂದಿದೆ.

SUPPORT THE FILE

Latest News

Related Posts