ಬೆಂಗಳೂರು; ಕೊರೊನಾ ವೈರಸ್ ಸೋಂಕಿತರಿರುವ ಮನೆ, ಆಸ್ಪತ್ರೆ ಮತ್ತು ಸರ್ಕಾರ ನಿಗದಿಪಡಿಸಿರುವ ಪ್ರತ್ಯೇಕ ಕೇಂದ್ರಗಳು, ಸೋಂಕು ಪೀಡಿತ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಘನ ಹಾಗೂ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿಯ ಮೇಲ್ವಿಚಾರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಇದರ ಮೇಲ್ವಿಚಾರಣೆ ನಡೆಸಬೇಕಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಸೋಂಕುಪೀಡಿತ ಪ್ರದೇಶಗಳಿಗೆ ನಿಯಮಿತವಾಗಿ ತೆರಳಿ ತಪಾಸಣೆ ನಡೆಸುತ್ತಿಲ್ಲ. ಬದಲಿಗೆ ಈ ಎಲ್ಲಾ ಕಾರ್ಯಗಳನ್ನು ನಗರಾಡಳಿತ ಸ್ಥಳೀಯ ಸಂಸ್ಥೆಗಳ ಹೆಗಲಿಗೆ ಹಾಕಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್’ಗೆ ತಿಳಿಸಿವೆ.
ಕೋವಿಡ್-19 ಲಾಕ್ ಡೌನ್ ಪರಿಸ್ಥಿಯಲ್ಲಿ ಕ್ವಾರೆಂಟೈನ್ ಮನೆಗಳಿಂದ ಹೇಗೆ ತ್ಯಾಜ್ಯ ಸಂಗ್ರಹಣೆ ಮಾಡುವ ಕುರಿತು ಪೌರಾಡಳಿತ ನಿರ್ದೇಶನಾಲಯವು ನಿರ್ದೇಶನ ನೀಡಿದೆ. ಆದರೆ ಪೌರಾಡಳಿತ ಸಿಬ್ಬಂದಿಗೆ ಇದರ ವೈಜ್ಞಾನಿಕ ಅರಿವು ಇರುವುದಿಲ್ಲ. ಹೀಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಅವರಿಗೆ ತರಬೇತಿ ನೀಡುವ ಜತೆಯಲ್ಲಿ ನಿಯಮಿತವಾಗಿ ತಪಾಸಣೆ ನಡೆಸುತ್ತಲೇ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿಲ್ಲ.
ಪರಿಸರ ಸಚಿವ ಆನಂದ್‌ಸಿಂಗ್ ಕೂಡ ಮಂಡಳಿ ಕಾರ್ಯಚಟುವಟಿಕೆಗಳತ್ತ ಗಮನಹರಿಸದಿರುವುದು ಮತ್ತು ಮಂಡಳಿ ಅಧ್ಯಕ್ಷ ಡಾ ಸುಧೀಂದ್ರರಾವ್ ಮತ್ತು ಸದಸ್ಯ ಕಾರ್ಯದರ್ಶಿ ನಡುವೆ ಸಮನ್ವಯ, ಹೊಂದಾಣಿಕೆ ಇರದಿರುವ ಕಾರಣ ಪರಿಸರ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗೊತ್ತಾಗಿದೆ.
ಸಾಂಕ್ರಾಮಿಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೈಗೊಳ್ಳಬೇಕಿತ್ತು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಮನ್ವಯದೊಂದಿಗೆ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಪ್ರಕ್ರಿಯೆ ಮೇಲೆ ನಿಗಾ ಇಡಬೇಕಿತ್ತು. ಆದರೆ ಮಂಡಳಿಯ ಪರಿಸರ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಂಡಿರುವುದು ಕೊರೊನಾ ವೈರಸ್ ಹರಡುವಿಕೆಯೂ ಸೇರಿದಂತೆ ಮತ್ತಿತರೆ ಅನಾಹುತಗಳಿಗೆ ಕಾರಣವಾಗಲಿದೆ ಎಂಬ ಆತಂಕವೂ ಎದುರಾಗಿದೆ.
ಇನ್ನು ಕೆಲ ಸಾರ್ವಜನಿಕರು ತಾವು ಬಳಸಿದ ಮಾಸ್ಕ್ ಅನ್ನು ಬಿಸಾಡುತ್ತಿರುವುದು ಕಂಡು ಬಂದಿದೆ. ಈ ತ್ಯಾಜ್ಯದಿಂದ ಪರಿಸರ ಮಾಲಿನ್ಯವಾಗುವುದು ಮಾತ್ರವಲ್ಲದೆ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರಿಂದ ಸೋಂಕು ಹರಡುವ ಹೆಚ್ಚಿನ ಸಾಧ್ಯತೆಗಳಿವೆ.
ಈ ಕುರಿತು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ ಮಂಡಳಿಯ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ್ ಅವರು ‘ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಸ್ಥಳೀಯ ಸಂಸ್ಥೆಗಳ ಮೂಲಕ ನಿರ್ವಹಿಸಲಾಗುತ್ತಿದೆ,’ ಎಂದು ತಿಳಿಸಿ ಸಂಪರ್ಕವನ್ನು ಅರ್ಧದಲ್ಲಿಯೇ ಕಡಿತಗೊಳಿಸಿದರು. ಆ ನಂತರ ಕರೆಯನ್ನು ಸ್ವೀಕರಿಸಲಿಲ್ಲ. ತ್ಯಾಜ್ಯ ಸಂಗ್ರಹದ ಪರಿಮಾಣ ಮತ್ತು ವಿಲೇವಾರಿ ಕುರಿತು ದೈನಂದಿನ ಮಾಹಿತಿ ಕೇಳಿ ವಾಟ್ಸಾಪ್‌ನಲ್ಲಿ ಕಳಿಸಿದ ಸಂದೇಶಕ್ಕೂ ಬಸವರಾಜ ಪಾಟೀಲ ಅವರು ಪ್ರತಿಕ್ರಿಯೆ ನೀಡಿಲ್ಲ.
ಕೋವಿಡ್ 19ರ ವಿರುದ್ಧ ಸೆಣೆಸುತ್ತಿರುವ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಬಳಸುವ ಪಿಪಿಇ ಕಿಟ್, ಮುಖಗವಸುಗಳನ್ನು ಬಳಸಿದ ನಂತರ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ನಡೆಸಬೇಕು. ಹಾಗೆಯೇ ಸಿಬ್ಬಂದಿಯಿಂದ ಈ ಎಲ್ಲಾ ಬಗೆಯ ತ್ಯಾಜ್ಯಗಳನ್ನು ಸಂಗ್ರಹಿಸುವ ಖಾಸಗಿ ಸಂಸ್ಥೆಗಳು ಅವುಗಳನ್ನು ಹೇಗೆ ವಿಲೇವಾರಿ ಮಾಡುತ್ತಿವೆ ಎಂಬುದರ ಮೇಲೆ ನಿಗಾ ಇಟ್ಟಿರಬೇಕು. ಕೆಲ ಖಾಸಗಿ ಸಂಸ್ಥೆಗಳ ನೌಕರರು ಈ ತ್ಯಾಜ್ಯವನ್ನು ಮಾರ್ಗ ಮಧ್ಯದಲ್ಲಿಯೇ ಸುರಿದು ಹೋಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದಲ್ಲದೆ, ಆಸ್ಪತ್ರೆ, ತುರ್ತು ನಿಗಾ ಘಟಕ ಮತ್ತು ಪ್ರತ್ಯೇಕ ನಿಗಾ ಕೇಂದ್ರಗಳಲ್ಲಿರುವ ಕೊರೊನಾ ಸೋಂಕಿತರಿಂದ ಸಂಗ್ರಹಿಸುವ ರಕ್ತದ ಮಾದರಿ, ಮೂತ್ರ ಸೇರಿದಂತೆ ಎಲ್ಲಾ ಬಗೆಯ ದ್ರವರೂಪದ ತ್ಯಾಜ್ಯಗಳ ಸಂಗ್ರಹಣೆ ಮತ್ತು ವಿಲೇವಾರಿ ಕ್ರಮವನ್ನು ನಿಯಮಿತವಾಗಿ ತಪಾಸಣೆ ನಡೆಸುತ್ತಲೇ ಇರಬೇಕು.
ಪಿಪಿಇ ಕಿಟ್‌ಗಳನ್ನು 8 ಗಂಟೆಗಳ ತನಕ ಬಳಸಬಹುದು. ಆ ನಂತರ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಹೀಗಾಗಿ ಇವುಗಳ ಸಂಗ್ರಹಣೆ ಮತ್ತು ವಿಲೇವಾರಿ ಕುರಿತು ಹೊರಡಿಸಿರುವ ಮಾರ್ಗಸೂಚಿಗಳು ಪಾಲನೆ ಅಗುತ್ತಿದೆಯೇ ಇಲ್ಲವೇ ಎಂಬ ಕುರಿತೂ ಪ್ರತಿ ದಿನವೂ ವರದಿ ಮಾಡಬೇಕು.
ಸದ್ಯ ಲಾಕ್‌ಡೌನ್ ಇರುವ ಕಾರಣ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಕೈಗಾರಿಕೆಗಳು ಉತ್ಪಾದನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಹೀಗಾಗಿ ಕಾರ್ಖಾನೆಗಳ ತ್ಯಾಜ್ಯ ವಿಲೇವಾರಿ ಪರಿಶೀಲನೆ ನಡೆಸುವ ಕಾರ್ಯಭಾರವೂ ಮಂಡಳಿಯ ಪರಿಸರ ಅಧಿಕಾರಿಗಳ ಮೇಲಿಲ್ಲ. ಹೀಗಾಗಿ ಕೊರೊನಾ ಸೋಂಕು ಪೀಡಿತ ಪ್ರದೇಶಗಳು, ಆಸ್ಪತ್ರೆಯಲ್ಲಿರುವ ಸೋಂಕಿತರ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿತ್ತು.
ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯದ ಜೊತೆಗೆ ಮನೆಯಲ್ಲಿಯೂ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ತ್ಯಾಜ್ಯವನ್ನೂ ವ್ಯವಸ್ಥಿತವಾಗಿ ವಿಂಗಡಿಸುವ ಜತೆಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಖಾಸಗಿ ಸಂಸ್ಥೆ, ಕಂಪನಿಗಳು ತ್ಯಾಜ್ಯ ಸಂಗ್ರಹಿಸುವ ಮತ್ತು ವಿಲೇವಾರಿ ಹೇಗಾಗುತ್ತಿದೆ ಎಂಬುದರ ಕುರಿತು ಮೇಲ್ವಿಚಾರಣೆಯೂ ಅಷ್ಟೇ ಸಮರ್ಪಕವಾಗಿರಬೇಕು.
ನೋಂದಾಯಿತ ಪ್ರತಿ ಆಸ್ಪತ್ರೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಂಗಡಣೆ ಮಾಡುತ್ತಿವೆಯೇ ಇಲ್ಲವೇ ಎಂಬುದನ್ನು ನಿಯಮಿತವಾಗಿ ತಪಾಸಣೆ ನಡೆಸಬೇಕು. ಹಾಗೆಯೇ ಪೌರಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ವೈಯುಕ್ತಿಕ ಸುರಕ್ಷತೆಗಾಗಿ ನೀಡಿರುವ ಪಿಪಿಇ ಕಿಟ್ ಗಳ ಬಳಕೆ ಮತ್ತು ತ್ಯಾಜ್ಯ ವಿಲೇವಾರಿ ಮಾಡುವ ವಾಹನವನ್ನು ಪ್ರತಿನಿತ್ಯ ಹೈಪೋಕ್ಲೋರೈಟ್ ಸೊಲ್ಯೂಷನ್ ಸಿಂಪಡಿಸಲಾಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಮಂಡಳಿ ಪರಿಸರ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸುತ್ತಿರಬೇಕು.
ಆರಂಭದಲ್ಲಿ ಅಗತ್ಯ ಸೇವೆಗಳ ಕಾಯ್ದೆಗಳಡಿಯಲ್ಲಿ ಮಂಡಳಿಯನ್ನು ಹೊರಗಿಟ್ಟಿದ್ದ ಸರ್ಕಾರ, ಹಲವು ದಿನಗಳ ನಂತರ ಮಂಡಳಿಯನ್ನು ಅಗತ್ಯ ಸೇವೆಗಳ ಕಾಯ್ದೆಯಡಿಯಲ್ಲಿ ಸೇರ್ಪಡಗೊಳಿಸಿ ಅಧಿಸೂಚನೆ ಹೊರಡಿಸಿತು. ಈ ಮಧ್ಯದಲ್ಲಿ ಮಂಡಳಿ ಪರಿಸರ ಅಧಿಕಾರಿಗಳು, ಪ್ರಯೋಗಾಲಯ ಸಿಬ್ಬಂದಿ ಸೇರಿದಂತೆ ಇನ್ನಿತರ ಅಧಿಕಾರಿ, ನೌಕರರು ಲಾಕ್‌ಡೌನ್ ಅವಧಿಯಲ್ಲಿ ಸ್ವಂತ ಸ್ಥಳಗಳಿಗೆ ತೆರಳಿದ್ದರು. ಅಧಿಸೂಚನೆ ಹೊರಟ ಬಳಿಕ ಕಚೇರಿಗೆ ಬಂದ ನೌಕರರ ಸಂಖ್ಯೆಯೂ ಕಡಿಮೆ ಇದೆ ಎನ್ನಲಾಗಿದೆ.