ವಿಶ್ವಾಸಾರ್ಹವಲ್ಲವೆಂದು ರಾಜಸ್ಥಾನ ಕೈಬಿಟ್ಟಿರುವ ಕಿಟ್‌ಗಳನ್ನು ಖರೀದಿಸಿತೇ ಕರ್ನಾಟಕ?

ಬೆಂಗಳೂರು; ವಿಶ್ವಾಸಾರ್ಹವಲ್ಲದ ಫಲಿತಾಂಶ ನೀಡುತ್ತಿವೆ ಎಂಬ ಕಾರಣವನ್ನೊಡ್ಡಿ ರಾಜಸ್ಥಾನ ಸರ್ಕಾರ ಬಳಕೆ ಮಾಡುವುದನ್ನು ನಿಲ್ಲಿಸಿರುವ  ಚೀನಾ ಮೂಲದ ಎರಡು ಕಂಪನಿಗಳ ಪರೀಕ್ಷಾ ಕಿಟ್‌ಗಳನ್ನೇ ಕರ್ನಾಟಕ ಸರ್ಕಾರ ಇದೀಗ ಖರೀದಿಸಿದೆ ಎಂದು ಗೊತ್ತಾಗಿದೆ.

ದಕ್ಷಿಣ ಕೊರಿಯಾ ಮೂಲದ ಕಂಪನಿ ಎಸ್‌ ಡಿ ಬಯೋಸೆನ್ಸರ್‌ನಿಂದ ದುಬಾರಿ ದರದಲ್ಲಿ ಕ್ಷಿಪ್ರಗತಿಯ ಪರೀಕ್ಷಾ ಕಿಟ್‌ಗಳ ಖರೀದಿಸಲು ಆಂಧ್ರಪ್ರದೇಶ ಸರ್ಕಾರದ ನಿರ್ಧಾರ ತೀವ್ರ ಪ್ರತಿರೋಧಕ್ಕೆ ಕಾರಣವಾಗಿರುವ ಬೆನ್ನಲ್ಲೇ  ವಿಶ್ವಾಸಾರ್ಹವಲ್ಲ ಎಂಬ ಕಾರಣಕ್ಕೆ ರಾಜಸ್ಥಾನ ಸರ್ಕಾರ ಬಳಕೆ ಮಾಡುವುದನ್ನು ನಿಲ್ಲಿಸಲು ಮುಂದಾಗಿರುವ ಕಿಟ್‌ಗಳನ್ನೇ ಕರ್ನಾಟಕ ಸರ್ಕಾರ ಖರೀದಿಸಿರುವುದು ವಿವಾದಕ್ಕೆ ಕಾರಣವಾಗಲಿದೆ.  

ಚೀನಾ ಮೂಲದ ಆ ಎರಡು ಕಂಪನಿಗಳು ಗುಹಾಂಗ್‌ವೋ ನಗರದಿಂದ  ರಾಜಸ್ಥಾನಕ್ಕೆ 3 ಲಕ್ಷ  ಕಿಟ್‌ಗಳನ್ನು ಪೂರೈಸಿತ್ತು. ಆದರೆ ಈ ಕಿಟ್‌ಗಳು ನಿರೀಕ್ಷಿತ ಶೇ.90ಕ್ಕಿಂತಲೂ ಕೇವಲ ಶೇ.5.4ರಷ್ಟು ಮಾತ್ರ ಕರಾರುವಕ್ಕಾದ ಫಲಿತಾಂಶಗಳನ್ನು ನೀಡಿದ್ದವು. ಹೀಗಾಗಿ ಈ ಕಿಟ್‌ಗಳ  ಬಳಕೆ ಅಷ್ಟು ಉಪಯೋಗವಾಗುವುದಿಲ್ಲ ಎಂದು ರಾಜಸ್ಥಾನ  ಸರ್ಕಾರದ ಆರೋಗ್ಯ ಸಚಿವರೇ ಹೇಳಿಕೆ ನೀಡಿದ್ದರು ಎಂದು ಪಿಟಿಐ ವರದಿ ಮಾಡಿತ್ತು. 

ಅಲ್ಲದೆ ಪರೀಕ್ಷೆ ನಂತರ ಹೊರಹೊಮ್ಮಿದ್ದ ಫಲಿತಾಂಶಗಳು ವಿಶ್ವಾಸಾರ್ಹವಾಗಿಲ್ಲ ಅಥವಾ ಅಮಾನ್ಯಗೊಂಡಿವೆ(INVALID)ಎಂಬ ಕಾರಣಕ್ಕಾಗಿ ಅವುಗಳನ್ನು ಬಳಸುವುದನ್ನು ನಿಲ್ಲಿಸಲಾಗುವುದು ಎಂದು ಅಲ್ಲಿನ ಸರ್ಕಾರ 2020ರ ಏಪ್ರಿಲ್‌ 21ರಂದು ಹೇಳಿತ್ತು.

ರಾಜಸ್ಥಾನಕ್ಕೆ ಪೂರೈಕೆ ಮಾಡಿದ್ದ ಚೀನಾ ಕಂಪನಿಗಳು ಕರ್ನಾಟಕಕ್ಕೆ ಸರಬರಾಜು ಮಾಡಿರುವ ಕಿಟ್‌ಗಳ ದರ ಎಷ್ಟೆಂದು ಮಾಹಿತಿ ತಿಳಿದು ಬಂದಿಲ್ಲ. ಕಿಟ್‌ ಖರೀದಿಸುವ ಮುನ್ನ ಕರ್ನಾಟಕ  ಸರ್ಕಾರದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಉನ್ನತ ತಂಡ, ರಾಜಸ್ಥಾನದ ಪ್ರಕರಣವನ್ನು ಅಧ್ಯಯನ ಮಾಡದೆಯೇ ಈ ಕಿಟ್‌ಗಳನ್ನು ತರಿಸಲು ಏಕೆ ಶಿಫಾರಸ್ಸು ಮಾಡಿತ್ತು ಎಂಬುದು ಪ್ರಶ್ನಾರ್ಹ. ರಾಜ್ಯದಲ್ಲಿ ಈ ಕಿಟ್‌ಗಳ ಬಳಕೆ ನಂತರ ಹೊರಹೊಮ್ಮುವ  ಫಲಿತಾಂಶಗಳು ಕಿಟ್‌ ಬಳಕೆಯನ್ನು ಅಂತಿಮವಾಗಿ ನಿರ್ಧರಿಸಲಿವೆ ಎಂದು ಹೇಳಲಿವೆ. 

ಚೀನಾ ಕಂಪನಿಗಳು ಪೂರೈಸಿದ್ದ ಕಿಟ್‌ಗಳನ್ನು ಬಳಸಿ ತಪಾಸಣೆ ಮಾಡಿದ್ದ ರಾಜಸ್ಥಾನದ ಆರೋಗ್ಯ ಇಲಾಖೆ, ಆಗ ಹೊರಹೊಮ್ಮಿದ  ಫಲಿತಾಂಶಕ್ಕೂ ಪಿಸಿಆರ್‌ ಮೂಲಕ ಮಾಡಿದ ತಪಾಸಣೆ ಫಲಿತಾಂಶ ಒಂದೇ  ತೆರನಾಗಿರಲಿಲ್ಲ ಎಂಬ ಸಂಗತಿಯನ್ನು ಹೊರಗೆಡವಿತ್ತು. ಚೀನಾ ಕಂಪನಿಯ ಕಿಟ್‌ನಿಂದ ತಪಾಸಣೆ ಮಾಡಿದಾಗ ಕರೊನಾ ವೈರಸ್‌ ಸೋಂಕಿರುವುದು ದೃಢಪಟ್ಟಿದ್ದರೆ, ಪಿಸಿಆರ್‌ ಮೂಲಕ ತಪಾಸಣೆ ಮಾಡಿದ ನಂತರ ಪ್ರಕರಣ ದೃಢಪಟ್ಟಿರಲಿಲ್ಲ. ಹೀಗಾಗಿ ಚೀನಾ ಕಂಪನಿಗಳು ಪೂರೈಸಿರುವ ಕಿಟ್‌ಗಳು  ವಿಶ್ವಾಸಾರ್ಹವಾಗಿಲ್ಲ ಎಂದು ರಾಜಸ್ಥಾನದ ಆರೋಗ್ಯ ಸಚಿವರೇ ಹೇಳಿಕೆ ನೀಡಿದ್ದರು ಎಂಬ  ಮಾಹಿತಿ ಪಿಟಿಐ ವರದಿಯಿಂದ ಗೊತ್ತಾಗಿದೆ. 

ಕರ್ನಾಟಕ ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಯೊಬ್ಬರು ನೀಡಿರುವ  ಮಾಹಿತಿ ಪ್ರಕಾರ ಗುವಾಂಗ್‌ ವೊಂಡ್‌ಪೋ  ಬಯೋಟೆಕ್‌ ಕಂಪನಿಯಿಂದ 1 ಲಕ್ಷ  ಕಿಟ್‌ಗಳು, ಮತ್ತು ಜುವಾಯ್‌ ಲಿವ್ಜಾನ್‌ ಡಯಗ್ನೋಸ್ಟಿಕ್ಸ್‌ ನಿಂದ 50,000 ಕಿಟ್‌ಗಳನ್ನು ಖರೀದಿಸಲಾಗಿದೆ. ಇದಕ್ಕೂ ಮುನ್ನ ಅಂದರೆ  ಎರಡು ದಿನಗಳ ಹಿಂದೆಯಷ್ಟೇ ಕೇಂದ್ರದಿಂದ 12,500 ಕಿಟ್‌ಗಳು ಬಂದಿವೆ. 50,000ದಿಂದ 1 ಲಕ್ಷ  ಕಿಟ್‌ಗಳನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದೆ ಎಂದು ತಿಳಿದು ಬಂದಿದೆ.  

ಕೊರೊನಾ ವೈರಸ್‌ ಸೋಂಕು ಹರಡುವಿಕೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ದುಪ್ಪಟ್ಟಾಗುತ್ತಿದೆ. ಸೋಂಕು ಕಂಡ ಬಂದ ಆರಂಭದ ದಿನದಲ್ಲೇ ಕ್ಷಿಪ್ರಗತಿ ಪರೀಕ್ಷೆ ನಡೆಸುವ ಕಿಟ್‌ ಬಳಸಲು ನಿರ್ಧರಿಸಿದ ಒಂದು ತಿಂಗಳ ನಂತರ ಕಿಟ್‌ಗಳು ಬಂದಿವೆಯಾದರೂ ಅವುಗಳ ಗುಣಮಟ್ಟದ  ಬಗ್ಗೆಯೇ ಇದೀಗ ಅನುಮಾನಗಳು ವ್ಯಕ್ತವಾಗುತ್ತಿವೆ. 

ಒಂದೂವರೆ ತಿಂಗಳಲ್ಲಿ ರಾಜ್ಯದೆಲ್ಲೆಡೆ ಕೇವಲ 22,000 ತಪಾಸಣೆ ಅಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಕಡಿಮೆ. ಸಕಾಲದಲ್ಲಿ ಆಡಳಿತಾತ್ಮಕ  ನಿರ್ಧಾರಗಳು ಹೊರಬೀಳದ ಕಾರಣ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆಗಳು ನಡೆಯುತ್ತಿಲ್ಲ.  

ಸಿಂಗಾಪೂರ್‌ ಮೂಲದ  ಕಂಪನಿಯೊಂದರಿಂದ ಕಿಟ್‌ಗಳನ್ನು ತರಿಸಿಕೊಳ್ಳಲು ಮುಂದಾಗಿತ್ತಾದರೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಅದನ್ನು ಅನುಮೋದಿಸಿರಲಿಲ್ಲ.  ಹೀಗಾಗಿ ಕಿಟ್‌ಗಳ ಖರೀದಿ ಪ್ರಕ್ರಿಯೆಲ್ಲಿ ವಿಳಂಬವಾಗಿತ್ತು. 

ಕಿಟ್‌ ಖರೀದಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶವೂ ವಿವಾದದಲ್ಲಿ ಸಿಲುಕಿದೆ.  ದಕ್ಷಿಣ ಕೊರಿಯಾ ಕಂಪನಿ ಎಸ್‌ಡಿ ಬಯೋಸೆನ್ಸರ್‌ನಿಂದ 1 ಲಕ್ಷ ಸಂಖ್ಯೆಯ ಕ್ಷಿಪ್ರಗತಿ ಪರೀಕ್ಷೆ ನಡೆಸುವ ಕಿಟ್‌ಗಳನ್ನು ಖರೀದಿಸಿತ್ತು. ಆದರೆ  ಅದೇ ಕಂಪನಿ ಛತ್ತೀಸ್‌ಗಢಕ್ಕೆ ಕಡಿಮೆ ದರದಲ್ಲಿ ಪೂರೈಸಿದೆ. 

ಛತ್ತಿಸ್‌ಗಢಕ್ಕೆ ಪ್ರತಿ ಯೂನಿಟ್‌ಗೆ 337 ರೂ (ಜಿಎಸ್‌ಟಿ ಸೇರಿದಂತೆ) ದರದಲ್ಲಿ ಎಸ್‌ ಡಿ ಬಯೋಸೆನ್ಸರ್‌ ಕಂಪನಿ ಪೂರೈಸಿತ್ತು. ಆದರೆ ಆಂಧ್ರ ಪ್ರದೇಶಕ್ಕೆ ಕಿಟ್‌ನ ಯೂನಿಟ್‌ವೊಂದಕ್ಕೆ 700 ರೂ. ನಿಗದಿಪಡಿಸಿತ್ತು. ಈ ದರವನ್ನೇ ಆಂಧ್ರಪ್ರದೇಶ ಸರ್ಕಾರ ಅಂತಿಮಗೊಳಿಸಿತ್ತು. ಈ ವಿಚಾರ ಸಾಕಷ್ಟು ಪ್ರತಿರೋಧಕ್ಕೆ ಕಾರಣವಾಗಿತ್ತು. 

the fil favicon

SUPPORT THE FILE

Latest News

Related Posts