ಬೆಂಗಳೂರು; ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಿತ ಪ್ರಕರಣದಲ್ಲಿ ಎಸ್ಪಿ ಶ್ರೀನಾಥ ಜೋಷಿ ಅವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಲೋಕಾಯುಕ್ತವು ಇದುವರೆಗೂ ದೋಷಾರೋಪಣೆಯ ಅನುಬಂಧಗಳ ಪಟ್ಟಿ ಸಲ್ಲಿಸಿಲ್ಲ.
ವಿಶೇಷವೆಂದರೇ ಶ್ರೀನಾಥ ಜೋಷಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಖುದ್ದು ಲೋಕಾಯುಕ್ತ ಸಂಸ್ಥೆಯೇ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಪತ್ರವನ್ನಾಧರಿಸಿ ಸರ್ಕಾರವು ಅಗತ್ಯ ದಾಖಲೆಗಳು, ಸ್ಪಷ್ಟ ಶಿಫಾರಸ್ಸು ಮತ್ತು ಪರಿಪೂರ್ಣವಾಗಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಬೇಕು ಎಂದು 2025ರ ಜುಲೈ ಮತ್ತು ಆಗಸ್ಟ್‌ನಲ್ಲಿ ಪತ್ರ ಬರೆದಿತ್ತು. ಆದರೂ ಲೋಕಾಯುಕ್ತ ಸಂಸ್ಥೆಯು ಸರ್ಕಾರಕ್ಕೆ ಈ ಯಾವ ಮಾಹಿತಿಯನ್ನೂ ಒದಗಿಸಿಲ್ಲ.
ಈ ಸಂಬಂಧ ಮುಖ್ಯ ಕಾರ್ಯದರ್ಶಿಯವರು ಬರೆದಿದ್ದ ಪತ್ರದ ಮಾಹಿತಿಯನ್ನು ‘ದಿ ಫೈಲ್’, ಆರ್‍ಟಿಐ ಅಡಿಯಲ್ಲಿ ಕೋರಿತ್ತು. ಇದಕ್ಕೆ ಮಾಹಿತಿ ನೀಡಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ಲೋಕಾಯುಕ್ತ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ಒದಗಿಸಿತ್ತು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು 2025ರ ಆಗಸ್ಟ್ 7ರಂದು ಪತ್ರ (ಡಿಪಿಎಆರ್ /158/ಎಸ್‌ಪಿಎಸ್/2025) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮುಖ್ಯ ಕಾರ್ಯದರ್ಶಿ ಪತ್ರದಲ್ಲೇನಿದೆ?
ಜೋಷಿ ಶ್ರೀನಾಥ್ ಮಹದೇವ ಇವರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಸಂಸ್ಥೆಯು 2025ರ ಜೂನ್ 23ರಂದು ಪತ್ರ ಬರೆದಿತ್ತು. ಇವರ ವಿರುದ್ಧ ಕ್ರಮ ಜರುಗಿಸಲು ಲೋಕಾಯುಕ್ತ ಸಂಸ್ಥೆಯ ಸ್ಪಷ್ಟ ಶಿಫಾರಸ್ಸಿನೊಂದಿಗೆ ಮತ್ತು ಅಗತ್ಯ ದಾಖಲೆಗಳೊಂದಿಗೆ ಪರಿಪೂರ್ಣವಾದ ದೋಷಾರೋಪಣೆ ಅನುಬಂಧ 1ರಿಂದ 4ನ್ನು ಸಿದ್ಧಪಡಿಸಿ ಒದಗಿಸಬೇಕು ಎಂದು 2025ರ ಜುಲೈ 3ರಂದು ಕೋರಲಾಗಿತ್ತು.
ಆದರೆ ಈವರೆಗೂ ಯಾವುದೇ ಮಾಹಿತಿ, ವಿವರ ಸ್ವೀಕೃತವಾಗಿಲ್ಲ. ಜುಲೈ 3ರಂದು ಕೋರಿರುವ ಮಾಹಿತಿಯನ್ನು ಜರೂರಾಗಿ ಒದಗಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು 2025ರ ಆಗಸ್ಟ್ 7ರಂದು ಪತ್ರದಲ್ಲಿ ನಿರ್ದೇಶಿಸಿರುವುದು ಈ ದಾಖಲೆಯಿಂದ ಗೊತ್ತಾಗಿದೆ.

ಈ ಹಿಂದೆ ಆರೋಪಿಗಳೊಂದಿಗೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ಸಂಪರ್ಕದಲ್ಲಿದ್ದರು ಮತ್ತು ಆರೋಪಿಗಳನ್ನು ಭೇಟಿ ಮಾಡಿದ್ದರು ಎಂಬ ಸಂಗತಿಯನ್ನು ಲೋಕಾಯುಕ್ತ ಸಂಸ್ಥೆಯು ಮುಚ್ಚಿಟ್ಟಿತ್ತು.
ಸುಲಿಗೆ; ಸರ್ಕಾರಕ್ಕೆ ಬರೆದ ಪತ್ರ, ಹೇಳಿಕೆಗಳಲ್ಲಿ ಸಚಿವ ತಿಮ್ಮಾಪುರ ಹೆಸರಿಲ್ಲ, ರಕ್ಷಣೆಗಿಳಿದಿದೆಯೇ ಲೋಕಾಯುಕ್ತ?
ಲೋಕಾಯುಕ್ತ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ನಿಂಗಪ್ಪನ ಪ್ರಕರಣವು ಅಧಿಕಾರಿಗಳ ವರ್ಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆರೋಪಿ ನಿಂಗಪ್ಪ, ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಷಿ ಅವರನ್ನು ಬೆಂಗಳೂರಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂದು ತಿಳಿದು ಬಂದಿತ್ತು.
ಲೋಕಾ ಎಸ್ಪಿ ಜೋಷಿ, ನಿಂಗಪ್ಪನೊಂದಿಗೆ ಅಬಕಾರಿ ಸಚಿವ ತಿಮ್ಮಾಪುರ ನಂಟು; ಐಷಾರಾಮಿ ಹೋಟೆಲ್‌ನಲ್ಲಿ ಭೇಟಿ?
ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರನ್ನು ಆರೋಪಿ ನೇರವಾಗಿ ತಿಳಿಸಿದ್ದರೂ ಸಹ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಹೆಸರಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಎರಡು ಪತ್ರಿಕಾ ಹೇಳಿಕೆಗಳಲ್ಲೂ ಸಚಿವ ತಿಮ್ಮಾಪುರ ಅವರ ಹೆಸರನ್ನು ಹೇಳಿರಲಿಲ್ಲ.
ಲೋಕಾಯುಕ್ತ ಪೊಲೀಸ್ ವಿಭಾಗವು 2025ರ ಜೂನ್ 17ರಂದು ಮೊದಲ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು. ಆರೋಪಿಯು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ಅಧಿಕೃತವಾಗಿ ಹೇಳಿತ್ತು. ಮತ್ತು ಲೋಕಾಯುಕ್ತ ಹೆಸರಿನಲ್ಲಿ ರಾಜ್ಯದ ವಿವಿಧೆಡೆ ಹಲವು ಖಾಸಗಿ ವ್ಯಕ್ತಿಗಳು ಹಣ ವಸೂಲಿ ಮಾಡಿದ್ದಾರೆ ಎಂದು ಪ್ರಕರಣಗಳ ಸಂಖ್ಯೆ ಸಮೇತ ವಿವರಿಸಲಾಗಿತ್ತು.
ಈ ಹೇಳಿಕೆ ಬಿಡುಗಡೆ ಮಾಡುವ ಹೊತ್ತಿಗೆ ಆರೋಪಿ ನಿಂಗಪ್ಪ, ತನಿಖಾಧಿಕಾರಿ ಮುಂದೆ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರನ್ನು ಬಾಯಿಬಿಟ್ಟಿದ್ದ. ಆದರೂ ಮೊದಲ ಪತ್ರಿಕಾ ಹೇಳಿಕೆಯಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿರಲಿಲ್ಲ.
ಈ ಹೇಳಿಕೆ ಬಿಡುಗಡೆ ಮಾಡಿದ 7 ದಿನದೊಳಗೇ ಲೋಕಾಯುಕ್ತ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅರೆ ಸರ್ಕಾರಿ ಪತ್ರ ಬರೆದಿದ್ದರು.
ಆರೋಪಿ ನಿಂಗಪ್ಪನೊಂದಿಗೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ಅವರು ಅಪರಾಧಿಕ ಒಳ ಸಂಚು ನಡೆಸಿ ಹಣ ವಸೂಲಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರಿಗೆ ಲೋಕಾಯುಕ್ತ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು 2025ರ ಜೂನ್ 23ರಂದು 2 ಪುಟಗಳ ಪತ್ರದಲ್ಲಿ (ಸಂಖ್ಯೆ; ಲೋಕ್/ಆಡಳಿತ-1/17/2025-26) ವಿವರಿಸಿದ್ದರು.
ರಿಜಿಸ್ಟ್ರಾರ್ ಬರೆದಿರುವ ಪತ್ರದಲ್ಲೇನಿತ್ತು?
ಸರ್ಕಾರಿ ಅಧಿಕಾರಿಗಳೊಂದಿಗೆ ಹಣ ವಸೂಲಿ ಮಾಡಿರುವ ಪ್ರಕರಣದಲ್ಲಿ ಎಸ್ಪಿ ಶ್ರೀನಾಥ್ ಜೋಷಿ ಅವರು ಆರೋಪಿ ನಿಂಗಪ್ಪನೊಂದಿಗೆ ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಪ್ರಾಥಮಿಕ ವಿಚಾರಣೆಯಲ್ಲಿ ದೃಢಪಡಿಸಿರುವುದನ್ನು ರಿಜಿಸ್ಟ್ರಾರ್ ಅವರು ಸರ್ಕಾರಕ್ಕೆ ಖಚಿತಪಡಿಸಿದ್ದರು.
ಅಲ್ಲದೇ ಇದೇ ಪ್ರಕರಣದಲ್ಲಿ ಎಸ್ಪಿ ಶ್ರೀನಾಥ್ ಜೋಷಿ ಅವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ರಿಜಿಸ್ಟ್ರಾರ್ ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
‘ಲೋಕಾಯುಕ್ತವರಿಂದ ನಿರ್ದೇಶಿಸಲ್ಪಟ್ಟಿರುವ ಪ್ರಕಾರ ಕರ್ನಾಟಕ ಲೋಕಾಯುಕ್ತ ಬೆಂಗಳೂರು ನಗರ ವಿಭಾಗ 1ರಲ್ಲಿ ಪೊಲೀಸ್ ಅಧೀಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಾಥ ಜೋಷಿ ಅವರು ಅಖಿಲ ಭಾರತ ಸೇವೆಗಳ ನಿಯಮಗಳು 1968ರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಇವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಗಳನ್ನು ಜರುಗಿಸಬೇಕು. ಹಾಗೂ ಜರುಗಿಸಿದ ಕ್ರಮಗಳ ಬಗ್ಗೆ ಈ ಕಚೇರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು,’ ಎಂದು ರಿಜಿಸ್ಟ್ರಾರ್ ಚಂದ್ರಶೇಖರ್ ರೆಡ್ಡಿ ಅವರು ಕೋರಿದ್ದರು.
ಈ ಪತ್ರ ಆಧರಿಸಿ ‘ದಿ ಫೈಲ್’, ವರದಿ ಪ್ರಕಟಿಸಿತ್ತು.
ಹಣ ಸುಲಿಗೆ; ಸರ್ಕಾರದ ಕೈ ಸೇರಿದ ವಾಟ್ಸಾಪ್ ಸಂದೇಶಗಳ ಪ್ರತಿ, ಲೋಕಾಯುಕ್ತ ರಿಜಿಸ್ಟ್ರಾರ್ ಪತ್ರ ಬಹಿರಂಗ
‘ದಿ ಫೈಲ್’, ವರದಿ ಪ್ರಕಟಿಸುತ್ತಿದ್ದಂತೆ ಲೋಕಾಯುಕ್ತ ಸಂಸ್ಥೆಯು 2025ರ ಜುಲೈ 2ರಂದು ಮತ್ತೊಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು.
ಶ್ರೀನಾಥ್ ಜೋಷಿ ಅವರ ವಿರುದ್ಧ ಅಖಿಲ ಭಾರತ ಸೇವೆಗಳ ನಿಯಮಗಳ ಆಧರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ ಎಂದು ಅರೆ ಸರ್ಕಾರಿ ಪತ್ರದಲ್ಲಿನ ಅಂಶಗಳನ್ನು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿತ್ತು.
ಅಲ್ಲದೇ ಲೋಕಾಯುಕ್ತ, ಉಪ ಲೋಕಾಯುಕ್ತರು ನಡೆಸಿದ್ದ ದಾಳಿಗಳ ವಿವರಗಳು, ಲೋಕಾಯುಕ್ತ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ವಿವರಗಳು, ಸರ್ಕಾರದ ಮುಂದಿರುವ ಪ್ರಸ್ತಾವನೆಗಳು, ಬಾಕಿ ಇರುವ ಪ್ರಕರಣಗಳ ವಿವರಗಳನ್ನಷ್ಟೇ ಹೇಳಿಕೆಯಲ್ಲಿ ತಿಳಿಸಿತ್ತು.
ಕ್ರಿಪ್ಟೋ ಕರೆನ್ಸಿಯಲ್ಲಿ ಲೋಕಾಯುಕ್ತದ ಮತ್ತೊಬ್ಬ ಎಸ್ಪಿಯೂ ಸಹ ಹೂಡಿಕೆ ಮಾಡಿದ್ದಾರೆ. ಈ ಸಂಬಂಧ ಗಿರಿರಾಜ್ ಎಂಬ ಮಧ್ಯವರ್ತಿಯೊಬ್ಬನನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದರು.
ಸುಲಿಗೆ; ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ, ಮತ್ತೊಬ್ಬ ಎಸ್ಪಿಯ ಹೆಸರು ಬಾಯ್ಬಿಟ್ಟ ಮಧ್ಯವರ್ತಿ ಗಿರಿರಾಜ್?
ಹಣ ಸುಲಿಗೆ ಸಂಬಂಧ ಲೋಕಾಯುಕ್ತ ಪೊಲೀಸರು ಸೂಕ್ತ ಪುರಾವೆ, ಸಾಕ್ಷ್ಯಗಳನ್ನು ಪತ್ತೆ ಹಚ್ಚಿದ್ದರೂ ಸಹ ಶ್ರೀನಾಥ್ ಜೋಷಿ ಅವರನ್ನು ಅಮಾನತುಗೊಳಿಸಲು ಶಿಫಾರಸ್ಸು ಮಾಡಿರಲಿಲ್ಲ.
ಸುಲಿಗೆ ಆರೋಪ; ಸಾಕ್ಷ್ಯ ಇದ್ದರೂ ಎಸ್ಪಿ ಶ್ರೀನಾಥ ಜೋಷಿ ಅಮಾನತಿಗೆ ಶಿಫಾರಸ್ಸು ಮಾಡದ ಲೋಕಾಯುಕ್ತ
ಲೋಕಾ ಹೆಸರಿನಲ್ಲಿ ವಸೂಲಿ ಮಾಡಿದ್ದ ಹಣವನ್ನು ಹವಾಲಾ ರೂಪದಲ್ಲಿ ಪರಿವರ್ತಿಸಲಾಗಿತ್ತು. ಮತ್ತು ಆರೋಪಿ ನಿಂಗಪ್ಪ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿದ್ದ ಎಂಬ ಸಂಗತಿಯು ಸಹ ಬಹಿರಂಗವಾಗಿತ್ತು.
ಲೋಕಾ ಹೆಸರಿನಲ್ಲಿ ಹಣ ವಸೂಲಿ ಪ್ರಕರಣ; ಕಾಂಗ್ರೆಸ್ ಪಕ್ಷದ ಬುಡಕ್ಕೆ ಬರಲಿದೆಯೇ, ಹವಾಲಾ ನಂಟಿದೆಯೇ?
ಆರೋಪಿ ನಿಂಗಪ್ಪನಿಗೆ ಕಪ್ಪ ಕೊಟ್ಟಿರುವ ಅಬಕಾರಿ ಅಧಿಕಾರಿಗಳ ಪೈಕಿ ಒಬ್ಬ ಅಧಿಕಾರಿ ಮೈಸೂರಿನ ಸಚಿವರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದ. ಮತ್ತು ಮುಖ್ಯಮಂತ್ರಿಗಳ ಸಲಹೆಗಾರರೊಬ್ಬರೊಂದಿಗೆ ಮತ್ತೊಬ್ಬ ಅಧಿಕಾರಿಯ ಸಂಬಂಧವಿದೆ ಎಂದು ಹೇಳಲಾಗಿತ್ತು.
ನಿಂಗಪ್ಪನಿಗೆ ಕಪ್ಪ ಕೊಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಲಹೆಗಾರರು, ಮೈಸೂರಿನ ಸಚಿವರ ನಂಟು?
ಲೋಕಾಯುಕ್ತರು, ಉಪ ಲೋಕಾಯುಕ್ತರು ದಾಳಿ ನಡೆಸಿ ಸ್ವಯಂ ಪ್ರೇರಿತವಾಗಿ ದಾಖಲಿಸುತ್ತಿದ್ದ ಪ್ರಕರಣಗಳೇ ಆರೋಪಿ ನಿಂಗಪ್ಪನಿಗೆ ಹಣ ವಸೂಲಿಗೆ ಮೂಲವಾಗಿದ್ದವು.
ಲೋಕಾಯುಕ್ತರೇ ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣದ ಆರೋಪಿಗಳ ಬೆನ್ನೆತ್ತಿದ್ದ ಆರೋಪಿ ನಿಂಗಪ್ಪ?
ಹಾಗೆಯೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಂಗಳಿಗೆ 3 ಲಕ್ಷ ರು. ಹಣಕ್ಕಾಗಿ ಬೇಡಿಕೆ ಇರಿಸಿದ್ದ. 3 ಲಕ್ಷವನ್ನು 3 ಕೆ ಜಿ ರೈಸ್ ಎಂಬುದಾಗಿ ಕೋಡ್ ವರ್ಡ್ ಬಳಸಿದ್ದ. ಮತ್ತು ಆರೋಪಿ ನಿಂಗಪ್ಪನಿಗೆ ಲಕ್ಷಾಂತರ ರುಪಾಯಿಗಳನ್ನು ನೀಡಿದ್ದ ಅಬಕಾರಿ ಇಲಾಖೆಯ ಕೆಲವು ಆಯುಕ್ತರ ಹೆಸರುಗಳನ್ನೂ ‘ದಿ ಫೈಲ್’, ಹೊರಗೆಡವಿತ್ತು.
ತಿಂಗಳಿಗೆ 3 ಲಕ್ಷಕ್ಕೆ ಬೇಡಿಕೆ, ಹಣದ ಮೌಲ್ಯಕ್ಕೆ ‘ಕೆ ಜಿ’ ಕೋಡ್‌ವರ್ಡ್; ಅಧಿಕಾರಿಗಳ ಹೆಸರು ಬಾಯ್ಬಿಟ್ಟ ನಿಂಗಪ್ಪ
ಲೋಕಾಯುಕ್ತ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ನಿಂಗಪ್ಪನ ಪ್ರಕರಣವು ಅಧಿಕಾರಿಗಳ ವರ್ಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಹೊತ್ತಿನಲ್ಲೇ ಇದೀಗ ನೇರವಾಗಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರು ತಳಕು ಹಾಕಿಕೊಂಡಿತ್ತು.
ನಿಂಗಪ್ಪನಿಗೆ ಅಬಕಾರಿ, ಬಿಬಿಎಂಪಿ ಅಧಿಕಾರಿಗಳೇ ಗುರಿ; ಎಫ್‌ಐಆರ್‍ನಲ್ಲಿಲ್ಲ ಎಸ್ಪಿ ಜೋಷಿ ಹೆಸರು
ಅಲ್ಲದೇ ಆರೋಪಿ ನಿಂಗಪ್ಪ ಎಂಬಾತನು 6 ತಿಂಗಳಿನಿಂದಲೂ ಅಧಿಕಾರಿಗಳಿಂದ ವಸೂಲಿ ಮಾಡಿದ್ದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿದ್ದ ಎಂದು ‘ದಿ ಫೈಲ್’, ವರದಿ ಪ್ರಕಟಿಸಿತ್ತು. ಈ ವರದಿಯು ಅಧಿಕಾರಿ ವರ್ಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಲೋಕಾಯುಕ್ತ ಸಂಸ್ಥೆಯು ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿಯೂ ಈ ಅಂಶವಿತ್ತು.
ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ
ಈ ಪ್ರಕರಣದಲ್ಲಿ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರೂ ಸಹ ತಳಕು ಹಾಕಿಕೊಂಡಿತ್ತು.
ಲೋಕಾ ಹೆಸರಿನಲ್ಲಿ ವಸೂಲಿ; ಬಂಧಿತ ಆರೋಪಿಯೊಂದಿಗೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಂಟು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಸ್ಪಿ ಶ್ರೀನಾಥ ಜೋಷಿ ಅವರ ಮನೆಯನ್ನು ಶೋಧಿಸಿದ್ದರು.
ಲೋಕಾ ಪೊಲೀಸರ ಶೋಧ; ಬರಿಗೈಯಲ್ಲಿ ಮರಳಿದ ಪೊಲೀಸರು, ತಲೆಮರೆಸಿಕೊಂಡಿದ್ದಾರೆಯೇ ಜೋಷಿ?
ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಲೋಕಾಯುಕ್ತರಾಗಿದ್ದ ಭಾಸ್ಕರರಾವ್ ಅವರ ಪುತ್ರ ಮತ್ತು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಲವರಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರು ಈ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹುದ್ದೆಗೆ ಭಾಸ್ಕರರಾವ್ ಅವರು ರಾಜೀನಾಮೆ ನೀಡಿದ್ದರು. ಹಾಗೂ ಅವರ ಪುತ್ರ ಅಶ್ವಿನ್ ರಾವ್ ಸಹ ಪೊಲೀಸರ ಬಂಧನಕ್ಕೆ ಒಳಗಾಗಿದ್ದ.