70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

ಬೆಂಗಳೂರು; ಕುಲಪತಿ ಅಧಿಕಾರಾವಧಿ ಪೂರ್ಣಗೊಳ್ಳಲು 2 ತಿಂಗಳ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ವಿವಿಧ ರೀತಿಯ ನೇಮಕ ಮತ್ತು ಪ್ರಮುಖ ನೀತಿಗಳನ್ನು ಕೈಗೊಳ್ಳಬಾರದು ಎಂದು ಕುಲಾಧಿಪತಿಗಳು ಹೊರಡಿಸಿದ್ದ ಆದೇಶವನ್ನು ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳು ಉಲ್ಲಂಘಿಸಿರುವುದು ಇದೀಗ ಬಹಿರಂಗವಾಗಿದೆ.

 

ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ ವಿದ್ಯಾಶಂಕರ್‍‌ ಅವರ ಅಧಿಕಾರಾವಧಿ ಇದೇ 2025ರ ಸೆಪ್ಟಂಬರ್‍‌ 29ಕ್ಕೆ ಪೂರ್ಣಗೊಳ್ಳಲಿದೆ. ಆದರೂ ಸಹ ಕುಲಪತಿಗಳು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಸುಮಾರು 70 ಹುದ್ದೆಗಳ ತಾತ್ಕಾಲಿಕ ನೇಮಕಾತಿಗೆ ತರಾತುರಿಯಲ್ಲಿ ಅರ್ಜಿ ಆಹ್ವಾನಿಸಲು ಅನುಮೋದನೆ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಅಲ್ಲದೇ ಕುಲಪತಿ ವಿದ್ಯಾಶಂಕರ್‍‌ ಅವರ ನೇಮಕಾತಿಯನ್ನೇ ರದ್ದುಗೊಳಿಸಬೇಕು ಎಂದು ಕೋರಿರುವ ರಿಟ್‌ ಅರ್ಜಿಯು (16651/2025) ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಸಂಬಂಧ ರಾಜ್ಯಪಾಲರು, ಸರ್ಕಾರ ಮತ್ತು ವಿಶ್ವವಿದ್ಯಾಲಯಕ್ಕೆ  ನೋಟೀಸ್‌ ಕೂಡ ಜಾರಿಯಾಗಿದೆ. ಹೀಗಿದ್ದರೂ ಸಹ 70 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

 

ವಿದ್ಯಾಶಂಕರ್‍‌ ಅವರು ತಮ್ಮ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಿಕೊಳ್ಳಲು ಲಾಬಿ ನಡೆಸಿದ್ದಾರೆ ಎಂಬ ಆರೋಪಗಳ ನಡುವೆಯೇ 70 ಹುದ್ದೆಗಳ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲು ಹೊರಡಿಸಿರುವ ಅಧಿಸೂಚನೆಯು ಮುನ್ನೆಲೆಗೆ ಬಂದಿದೆ.

 

ಕುಲಪತಿ ಅಧಿಕಾರಾವಧಿ ಪೂರ್ಣಗೊಳ್ಳಲು 2 ತಿಂಗಳ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ವಿವಿಧ ರೀತಿಯ ನೇಮಕ ಮತ್ತು ಪ್ರಮುಖ ನೀತಿಗಳನ್ನು ಕೈಗೊಳ್ಳಬಾರದು ಎಂದು ಕುಲಾಧಿಪತಿಗಳು 2021ರ ಸೆ.28ರಂದೇ ಆದೇಶ ಹೊರಡಿಸಿದ್ದರು.

 

2021ರ ಆದೇಶದಲ್ಲೇನಿದೆ?

 

ವಿಶ್ವವಿದ್ಯಾಲಯದ ಕುಲಪತಿಗಳು ತಮ್ಮ ಕಡೆಯ 2 ತಿಂಗಳ ಅವಧಿಯಲ್ಲಿ ಯಾವುದೇ ರೀತಿಯ ಪ್ರಮುಖ ಆಡಳಿತಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ಆದೇಶದಲ್ಲಿ ವಿವರಿಸಿದೆ. ಈ ಆದೇಶವನ್ನು ಕುಲಪತಿಗಳು ಪಾಲನೆ ಮಾಡಬೇಕು. ಈ ಆದೇಶವು ಸದ್ಯ ಚಾಲನೆಯಲ್ಲಿದ್ದರೂ ಸಹ ಉಲ್ಲಂಘನೆ ಮಾಡಿರುವುದು  ರಾಜ್ಯಪಾಲರ ಆದೇಶಕ್ಕೆ ಕಿಮ್ಮತ್ತಿಲ್ಲದಂತಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

 

 

ಅಧಿಸೂಚನೆಗೆ ಮಾನ್ಯತೆ ಇದೆಯೇ?

 

ಕಂಪ್ಯೂಟರ್‍‌ ಸೈನ್ಸ್‌ ಅಂಡ್‌ ಇಂಜಿನಿಯರಿಮಗ್‌, ಎಲೆಕ್ಟ್ರಾನಿಕ್ಸ್‌ ಕಮ್ಯುನಿಕೇಷನ್ಸ್‌ ಅಂಡ್‌ ಇಂಜಿನಿಯರಿಂಗ್‌, ಮೆಕ್ಯಾನಿಕಲ್‌ ಇಂಜಿನಿಯರಿಂಗ್‌, ಏರೋಸ್ಪೇಸ್‌ ಇಂಜಿನಿಯರಿಂಗ್‌, ನ್ಯಾನೋ ಟೆಕ್ನಾಲಜಿ, ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ (ಎಂಬಿಎ) ಡಿಜಿಟಲ್‌ ಮಾರ್ಕೆಟಿಂಗ್‌, ಭೌತಶಶಾಸ್ತ್ರ, ರಸಾಯನ ಶಾಸ್ತ್ರ, ಎಂ ಪ್ಲಾನ್‌, ಟೌನ್‌ ಕಂಟ್ರಿ ಪ್ಲಾನಿಂಗ್‌, ಗ್ರಂಥಪಾಲಕ, ಪ್ರೋಗ್ರಾಮರ್‍‌, ಲ್ಯಾಬ್‌ ಇನ್ಸ್‌ಟ್ರಕ್ಟರ್‍‌ ಸೇರಿ ಒಟ್ಟಾರೆ 70 ಹುದ್ದೆಗಳನ್ನು ಭರ್ತಿ ಮಾಡಲು ವಿಶ್ವವಿದ್ಯಾಲಯವು 2025ರ ಆಗಸ್ಟ್‌ 1ರಂದು ಅಧಿಸೂಚನೆ ಹೊರಡಿಸಿತ್ತು.

 

 

 

ಕುಲಾಧಿಪತಿಗಳ ಆದೇಶವನ್ನು ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಹೊರಡಿಸಿರುವ ಅಧಿಸೂಚನೆಗೆ ಮಾನ್ಯತೆ ಇದೆಯೇ ಎಂಬ ಪ್ರಶ್ನೆಯು ಉದ್ಭವವಾಗಿದೆ.

 

ಕುಲಪತಿ ನೇಮಕಕ್ಕೆ ಆಕ್ಷೇಪವೇಕೆ?

 

ವಿಟಿಯು ಕುಲಪತಿ ಹುದ್ದೆಗೆ ನೇಮಕವಾಗಿರುವ ಡಾ ಎಸ್‌ ವಿದ್ಯಾಶಂಕರ್‍‌ ಅವರ ನೇಮಕ ಪ್ರಕ್ರಿಯೆಯಲ್ಲಿಯೇ ಹಲವು ಲೋಪಗಳಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ವಿದ್ಯಾಶಂಕರ್‍‌ ಅವರು ಬಹು ಪ್ರಯತ್ನಗಳ ನಂತರ ಬಿ ಇ ಪದವಿಯನ್ನು ಎರಡನೇ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.

 

 

ಹೀಗಾಗಿ ವಿಟಿಯು ಕುಲಪತಿಯಂತಹ ಉನ್ನತ ಹುದ್ದೆಗೆ ನೇಮಕಾತಿ ಅರ್ಹತಾ ಮಾನದಂಡಗಳಲ್ಲಿರುವಂತೆ ಅತ್ಯುತ್ತಮ ಶಿಕ್ಷಣ ತಜ್ಞರೆಂದು ಪರಿಗಣಿಸಲಾಗುವುದಿಲ್ಲ.

 

ಅಲ್ಲದೇ ಆಯ್ಕೆ ಸಮಿತಿಯೂ ಸಹ ಯುಜಿಸಿ 2018ರ ನಿಯಮಾವಳಿಗಳ ಅನ್ವಯ ರಚನೆ ಆಗಿರಲಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ವಿವರಿಸಿದೆ.

 

‘ಇಷ್ಟೆಲ್ಲಾ ನ್ಯೂನತೆಗಳಿದ್ದರೂ ವಿದ್ಯಾಶಂಕರ್‍‌ ಅವರು 70 ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗೆ ಮುಂದಾಗಿರುವುದೇಕೆ, ಕುಲಾಧಿಪತಿಗಳ ಆದೇಶಕ್ಕೆ ಬೆಲೆಯಿಲ್ಲವೇ, ತಮ್ಮದೇ ಆದೇಶಕ್ಕೆ ವಿರುದ್ಧವಾಗಿ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದುಕೊಳ್ಳಲು ಮುಂದಾಗದಿರುವುದು ಏನನ್ನು ಸೂಚಿಸಲಿದೆ,’ ಎಂದು ಪ್ರಶ್ನಿಸುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

 

ಈ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‍‌ ಅವರಿಗೆ ‘ದಿ ಫೈಲ್‌’, ಈ ಮೇಲ್‌ ಮೂಲಕ  ಪ್ರತಿಕ್ರಿಯೆ ಕೋರಿದೆ. ಪ್ರತಿಕ್ರಿಯೆ, ಮಾಹಿತಿ ಲಭ್ಯವಾದ ನಂತರ ಇದೇ ವರದಿಯನ್ನು ನವೀಕರಿಸಲಾಗುವುದು.

 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿಯೂ  ಲಕ್ಷಾಂತರ ರುಪಾಯಿಗಳ ಅಕ್ರಮ ವರ್ಗಾವಣೆ ಮತ್ತು ಅಕ್ರಮವಾಗಿ ಲಾಭ ಮಾಡಿಕೊಟ್ಟ ಪ್ರಕರಣದಲ್ಲಿ ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರು ಆರೋಪಕ್ಕೆ ಗುರಿಯಾಗಿದ್ದರು.  ಅವರ ವಿರುದ್ಧದ  ವಿಚಾರಣೆಗೆ ಕೋರಿದ್ದ ಪೂರ್ವಾನುಮತಿ ಪ್ರಸ್ತಾವವನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.

 

ಡಾ ಎಸ್‌ ವಿದ್ಯಾಶಂಕರ್‍‌ ಮತ್ತಿತರರ ವಿರುದ್ಧದ ವಿಚಾರಣೆಗೆ ಭ್ರಷ್ಟಾಚಾರ ನಿಗ್ರಹ  ಕಾಯ್ದೆಯ ಸೆಕ್ಷನ್‌ 17(ಎ) ರಡಿ    ಪೂರ್ವಾನುಮತಿ ನೀಡಬೇಕು ಎಂದು ಲೋಕಾಯುಕ್ತ  ಪೊಲೀಸ್‌ ವಿಭಾಗದ ಮೈಸೂರು ಘಟಕವು  ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿತ್ತು.  ಆದರೆ ರಾಜ್ಯಪಾಲರು ಎರಡು ವರ್ಷದಿಂದಲೂ ಅನುಮತಿ ನೀಡಿರಲಿಲ್ಲ. ಇದೀಗ ಅವರು ವಿಚಾರಣೆಯ ಪೂರ್ವಾನುಮತಿ ಪ್ರಸ್ತಾವವನ್ನೇ ತಿರಸ್ಕರಿಸಿರುವುದು ಚರ್ಚೆಗೆ ಗ್ರಾಸವಾಗಿತ್ತು.

 

ರಾಜ್ಯಪಾಲರು ಈ ಪ್ರಸ್ತಾವವನ್ನು ತಿರಸ್ಕರಿಸಿರುವ ಕಾರಣ ಹೈಕೋರ್ಟ್‌ ಮೆಟ್ಟಿಲೇರಿರುವ ಅರ್ಜಿದಾರ ಜಗದೀಶ್‌ ಬಾಬು ಅವರು. ಈ ಸಂಬಂಧ ರಿಟ್‌ ಅರ್ಜಿ( W.P 18433 / 2025)  ಸಲ್ಲಿಸಿದ್ದರು. ಅರ್ಜಿ ಇನ್ನೂ ವಿಚಾರಣೆ ಹಂತದಲ್ಲಿದೆ.

 

 

 

 

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರ ವರದಿಯನ್ನಾಧರಿಸಿ ವಿಚಾರಣೆಗೆ ಪೂರ್ವಾನುಮತಿ ಪ್ರಸ್ತಾವವನ್ನು ತಿರಸ್ಕರಿಸಿರುವುದು ರಾಜ್ಯಪಾಲರ ಪತ್ರದಿಂದ ಗೊತ್ತಾಗಿದೆ. ಈ ಪ್ರಕ್ರಿಯೆಯಲ್ಲಿ    ಡಾ. ಶರಣಪ್ಪ ಹಲಸೆ ಹಾಗೂ ರಾಜ್ಯಪಾಲರ ಸಚಿವಾಲಯದ ಸಿಬ್ಬಂದಿಗಳೂ ಸಹ ಶಾಮೀಲಾಗಿದ್ದಾರೆ ಎಂದು ದೂರುದಾರ ಜಗದೀಶ್‌ ಬಾಬು ಅವರು ಅರ್ಜಿಯಲ್ಲಿ ಆರೋಪಿಸಿದ್ದರು.

 

ಈ ರಿಟ್‌ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಸೇರಿದಂತೆ ಒಟ್ಟು 18 ಮಂದಿ ಪ್ರತಿವಾದಿಗಳಿಗೆ ನೋಟೀಸ್‌ ಜಾರಿಗೊಳಿಸಿತ್ತು.

 

 

 

ವಿಶೇಷವೆಂದರೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್‌ ಬಾಬು ಅವರು ಸಲ್ಲಿಸಿದ್ದ ದೂರನ್ನೇ ಹೋಲುವ ರೀತಿಯಲ್ಲಿ  ಟಿ ಪ್ರಭಾಕರ್‍‌ ಎಂಬುವರು ಸಹ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಶರಣಪ್ಪ ಹಲಸೆ ಅವರಿಗೆ  ದೂರು ಸಲ್ಲಿಸಿದ್ದರು. ಈ ದೂರು ಸಲ್ಲಿಕೆಯಾಗುತ್ತಿದ್ದಂತೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸುಮತಿ ಆರ್‍‌ ಗೌಡ ಅವರಿಂದ ಆಕ್ಸಿಸ್‌ ಬ್ಯಾಂಕ್‌ನಲ್ಲಿನ ಖಾತೆಗೆ ಸಂಬಂಧಿಸಿದ ಕಡತ ಹಾಗೂ ದಾಖಲೆಗಳು ಅವರ ಕಚೇರಿಯಿಂದ ಕಳುವಾಗಿದೆ ಎಂದು ಹೇಳಿಕೆಯನ್ನೂ ಪಡೆಯಲಾಗಿತ್ತು.

 

ಪ್ರಭಾಕರ್‍‌ ಎಂಬುವರ ದೂರು ಮತ್ತು ಸುಮತಿ ಆರ್‍‌ ಗೌಡರ ಹೇಳಿಕೆ ಆಧರಿಸಿ ಇದು ಡಾ ಎಸ್‌ ವಿದ್ಯಾಶಂಕರ್ ಅವರ ಅವಧಿಯಲ್ಲಾಗಿರುವ ಹಗರಣವಾಗಿದೆ. ಹೀಗಾಗಿ ದಾಖಲೆಗಳ ಸಲ್ಲಿಕೆ ಕಷ್ಟಕರವಾಗಿದೆ. ಈ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಹಲಸೆ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

 

 

 

ಮತ್ತೊಂದು ವಿಶೇಷವೆಂದರೇ ರಾಜ್ಯಪಾಲರು ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಅಧಿಸೂಚನೆ ಹೊರಡಿಸುವ ಮುನ್ನವೇ ದಾಖಲೆಗಳು ಲಭ್ಯವಿಲ್ಲ ಎಂಬ ಕಾರಣವನ್ನು ಮುಂದೊಡ್ಡಲಾಗಿತ್ತು. ಡಾ ಎಸ್‌ ವಿದ್ಯಾಶಂಕರ್‍‌ ಮತ್ತು ಇತರರ ವಿರುದ್ಧದ ಆಪಾದನೆಗಳನ್ನು ಸಾಬೀತುಪಡಿಸಲು ಸಾಕ್ಷ್ಯಗಳ ಕೊರತೆ ಇದೆ ಎಂದು ವರದಿಯನ್ನೂ ಮಾಡಲಾಗಿತ್ತು.

 

ಅಕ್ರಮ ಹಣ ವರ್ಗಾವಣೆ; ವಿಟಿಯು ಹಾಲಿ ಕುಲಪತಿ ಸೇರಿ ಇತರರ ವಿರುದ್ಧ ತನಿಖೆಗೆ ಸಿಗದ ಪೂರ್ವಾನುಮತಿ

 

‘ಮೈಸೂರು ಮುಕ್ತ ವಿವಿ ಕುಲಪತಿಗಳಾಗಿದ್ದ ಡಾ ಎಸ್‌ ವಿದ್ಯಾಶಂಕರ್, ಹಣಕಾಸು ಅಧಿಕಾರಿ ಡಾ ಎ ಖಾದರ್ ಪಾಷ, ಸಹಾಯಕ ಪ್ರಾಧ್ಯಾಪಕರಾದ ಡಾ ಸುಮತಿ ಆರ್ ಗೌಡ, ಕುಲ ಸಚಿವ ಡಾ ಎಸ್‌ ಎಲ್‌ ಎನ್‌ ಮೂರ್ತಿ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಖಾತೆ ತೆರೆದು ಸ್ವಂತಕ್ಕೆ ಡ್ರಾ ಮಾಡಿಕೊಂಡು ಹಣ ದುರುಪಯೋಗಪಡಿಸಿಕೊಂಡಿಸಿರುವ ಕುರಿತು ತನಿಖೆ, ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ಒದಗಿಸಿಕೊಡಬೇಕು,’ ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಮೈಸೂರು ಎಸ್ಪಿಯು ಲೋಕಾಯುಕ್ತ ಎಡಿಜಿಪಿಗೆ ಬರೆದಿದ್ದ ಪತ್ರದಲ್ಲಿ ಕೋರಿದ್ದರು.

SUPPORT THE FILE

Latest News

Related Posts