ಬೆಂಗಳೂರು; ಸರ್ಕಾರದ ಅನುಮೋದನೆಯಿಲ್ಲದೇ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‍ಬಿಎಸ್‌ಕೆ) ಯೋಜನೆ ವ್ಯಾಪ್ತಿಯನ್ನು ವಿಸ್ತರಣೆ ಮಾಡಿರುವುದು ಮತ್ತು ಅನುದಾನವಿಲ್ಲವಿದ್ದರೂ ಹೆಚ್ಚುವರಿ ಸಂಖ್ಯೆಯ ಚಿಕಿತ್ಸೆಗಳಿಗೆ ಅಂದಾಜು 23.30 ಕೋಟಿ ರು ವೆಚ್ಚ ಮಾಡಿರುವ ಹಗರಣವನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಸಂದರ್ಭದಲ್ಲೇ ಈ ಹಗರಣ ನಡೆದಿತ್ತು. ಆಗ ಈ ಹಗರಣವನ್ನು ತನಿಖೆಗೊಳಪಡಿಸದೇ ಮುಚ್ಚಿಡಲಾಗಿತ್ತು. ಆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ಈ ಹಗರಣ ಮುಂದುವರೆದಿತ್ತು.
ಸರ್ಕಾರದ ಅನುಮೋದನೆಯಿಲ್ಲದೇ ಮತ್ತು ಅನುದಾನವಿಲ್ಲದಿದ್ದರೂ ಹೆಚ್ಚುವರಿ ಚಿಕಿತ್ಸೆಗಳ ಹೆಸರಿನಲ್ಲಿ 23.30 ಕೋಟಿ ರು.ಗಳ ವೆಚ್ಚವನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪಾವತಿಸುವ ಸಂಬಂಧ ಪ್ರಸ್ತಾವವು ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ವಿಶೇಷ.
ಈ ಮಧ್ಯೆ ಬಾಕಿ ಇರುವ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಬೇಕು, ಇಲ್ಲದಿದ್ದಲ್ಲಿ ಕಾನೂನಿನ ಮೊರೆ ಹೋಗಲಾಗುವುದು ಎಂದು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿವೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷಗಳಾದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಹಣವನ್ನು ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಭರಿಸುವುದೇ ಅಥವಾ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಪಾವತಿಸಬೇಕೇ ಎಂಬ ಕುರಿತು ಅಧಿಕಾರಿಗಳ ಮಧ್ಯೆಯೇ ತಿಕ್ಕಾಟ ನಡೆಯುತ್ತಿದೆ.
ಸತ್ಯ ಸಂಗತಿ ಎಂದರೆ ಬಾಕಿ ಮೊತ್ತವನ್ನು ಪಾವತಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಬಳಿ ಯಾವುದೇ ನಿಧಿ ಲಭ್ಯವಿಲ್ಲ. ಹೀಗಾಗಿ ಖಾತೆಗಳ ಹೊಂದಾಣಿಕೆ ಪ್ರಕ್ರಿಯೆ ನಡೆಸಲು ಚಿಂತಿಸುತ್ತಿದೆ. ಅಧಿಕಾರಿಗಳ ಮಟ್ಟದಲ್ಲಿ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಅಲ್ಲದೆ, ಹೆಚ್ಚುವರಿ ಅನುದಾನಕ್ಕೆ ಆರ್ಥಿಕ ಇಲಾಖೆ ಕದ ತಟ್ಟಲು ಚಿಂತನೆ ನಡೆಸಲಾಗುತ್ತಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ 38 ಪುಟಗಳನ್ನೊಳಗೊಂಡ ಕಡತವು ‘ದಿ ಫೈಲ್’ ಗೆ ಲಭ್ಯವಾಗಿದೆ.
ಏನಿದು ಯೋಜನೆ?
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‍ಬಿಎಸ್‌ಕೆ) ವು, ಕೇಂದ್ರ ಸರ್ಕಾರದ ಯೋಜನೆಯಾಗಿದೆ. 0 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿನ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಉಚಿತ ಚಿಕಿತ್ಸೆ ಮತ್ತು ಅನುಸರಣಾ ಆರೈಕೆ ಒದಗಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ. ಜನನ ಸಮಯದಲ್ಲಿನ ದೋಷಗಳು, ನ್ಯೂನತೆಗಳು, ರೋಗಗಳು, ಬೆಳವಣಿಗೆಯಲ್ಲಿನ ವಿಳಂಬ ಕುರಿತು ತಪಾಸಣೆಯೂ ಈ ಯೋಜನೆಯಲ್ಲಿ ಸೇರಿದೆ. ಆರಂಭಿಕ ಪತ್ತೆ, ಉಚಿತ ಚಿಕಿತ್ಸೆ, ನಿರ್ವಹಣೆ, ಶಸ್ತ್ರ ಚಿಕಿತ್ಸೆಗಳೂ ಈ ಯೋಜನೆ ವ್ಯಾಪ್ತಿಯಲ್ಲಿವೆ.
ಈ ಯೋಜನೆಯನ್ನು ಕರ್ನಾಟಕದಲ್ಲಿ 2015ರಿಂದ 2019ನೇ ಸಾಲಿನವರೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಅನುಷ್ಠಾನಗೊಳಿಸಲಾಗಿತ್ತು. ಒಪ್ಪಂದದ ಪ್ರಕಾರ ಕೇವಲ 148 ಚಿಕಿತ್ಸಾ ವಿಧಾನಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕಿತ್ತು.
ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಹಂತದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ 538 ಚಿಕಿತ್ಸೆ ವಿಧಾನ, ಯಶಸ್ವಿನಿ ಯೋಜನೆಯ 345 ಚಿಕಿತ್ಸಾ ವಿಧಾನಗಳನ್ನು ಆರ್‍ಬಿಎಸ್‌ಕೆ ಯೋಜನೆಯ ಆನ್‌ಲೈನ್ ವರ್ಟಿಕಲ್‌ನಲ್ಲಿ ಸೇರಿಸಿ ಅನುಷ್ಠಾನಗೊಳಿಸಿತ್ತು. ಒಟ್ಟಾರೆ 15,532 ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಎಲ್ಲಾ ಚಿಕಿತ್ಸೆಗಳ ವೆಚ್ಚದ ಮೊತ್ತವು ಒಟ್ಟಾರೆ 80.17 ಕೋಟಿ ರು ಗಳಾಗಿತ್ತು.
ಆದರೆ ಈ ಪೈಕಿ 4,969 ಪ್ರಕರಣಗಳಿಗೆ ಆರ್‍ಬಿಎಸ್‌ಕೆ ಯೋಜನೆಯಡಿ ಅನುದಾನ ಬಿಡುಗಡೆಯಾಗಿರಲಿಲ್ಲ. ಆದರೆ ಈ 4,969 ಪ್ರಕರಣಗಳ ಪೈಕಿ 4,870 ಪ್ರಕರಣಗಳ ಚಿಕಿತ್ಸೆಗಳಿಗೆ 21,44, 59,329 ರು.ಗಳ ವೆಚ್ಚಕ್ಕೆ ಅನುಮೋದನೆ ದೊರೆತಿತ್ತು.
ಪೀಡಿಯಾಟ್ರಿಕ್ ಸರ್ಜರಿ, ಜನರಲ್ ಮೆಡಿಸಿನ್, ಕಾರ್ಡಿಯಾಲಜಿ, ಜನರಲ್ ಸರ್ಜರಿ, ಮೆಡಿಕಲ್ ಅಂಕಾಲಜಿ, ಇಎನ್‌ಟಿ, ನ್ಯೂರೋ ಸರ್ಜರಿ, ಸುಟ್ಟ ಗಾಯಗಳು, ಆರ್ಥೋಪೆಡಿಕ್ಸ್, ರೇಡಿಯೇಷನ್ ಆಂಕಾಲಜಿ, ಆಫ್ತಾಮಾಲಜಿ, ಸರ್ಜಿಕಲ್ ಆಂಕಾಲಜಿ, ಅಬ್ಸೆಟ್ರಿಕ್ಸ್ ಮತ್ತು ಗೈನೋಕಾಲಜಿ, ದಂತ ಚಿಕಿತ್ಸೆಯೂ ಈ ಪಟ್ಟಿಯಲ್ಲಿ ಸೇರಿತ್ತು. ಈ ಎಲ್ಲಾ ಚಿಕಿತ್ಸೆಗಳಿಗೆ ವೆಚ್ಚ ಪಾವತಿಸುವ ಸಂಬಂಧದ ಕಾರ್ಯವಿಧಾನಗಳು ಹೊಂದಿಕೆಯಾಗಿದ್ದವು.
ಆದರೆ ಇನ್ನುಳಿದ 99 ಚಿಕಿತ್ಸೆಗಳಿಗೆ ವೆಚ್ಚ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನಗಳು ಹೊಂದಿಕೆಯಾಗಿರಲಿಲ್ಲ. ಆದರೂ ವೆಚ್ಚಕ್ಕೆ ಅನುಮೋದನೆ ದೊರೆತಿತ್ತು. ಇದರ ಮೊತ್ತ 5,34,290 ರು ಆಗಿತ್ತು. ಇಎನ್‌ಟಿ ವಿಭಾಗದಲ್ಲಿ 55 ಪ್ರಕರಣ, ಪಾಲಿಟ್ರಾಮಾ 15, ಜನರಲ್ ಮೆಡಿಸಿನ್ 8, ದಂತ 6, ಒಬ್ಸಟ್ರಿಕ್ಸ್ ಮತ್ತು ಗೈನೋಕಾಲಾಜಿ 6, ಪೀಡಿಯಾಟ್ರಿಕ್ಸ್ ಸರ್ಜರಿ 6, ಇನ್ವೆಸ್ಟಿಗೇಷನ್ಸ್ 2, ಜೆನಿಟೋ ಯೂರಿನೆರಿ ಸರ್ಜರಿ 1 ಪ್ರಕರಣಗಳು ಈ ಪಟ್ಟಿಯಲ್ಲಿದ್ದವು.
ಮತ್ತೊಂದು ವಿಶೇಷವೆಂದರೇ ಇದರಲ್ಲಿ ಕೆಲವು ಪ್ರಕರಣಗಳು ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯೊಂದಿಗೂ ಸೇರಿದ್ದವು. ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿಯಲ್ಲಿ 530, ಮತ್ತು 345 ದ್ವಿತೀಯ ಹಂತದ ಕಾರ್ಯವಿಧಾನಗಳು ಯಶಸ್ವಿನಿ ಯೋಜನೆಯಲ್ಲಿ ಸೇರಿತ್ತು.
ಆ ನಂತರ ಈ ಎಲ್ಲ ಯೋಜನೆಗಳನ್ನು ವಿಲೀನಗೊಳಿಸಿದ್ದ ಸರ್ಕಾರವು, 883 ಕಾರ್ಯವಿಧಾನಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರ್‍ಬಿಎಸ್‌ಕೆ ಯೋಜನೆಯನ್ನು ಜಾರಿಗೆ ತಂದಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಾರಿಗೊಳಿಸಿದ್ದ ಈ ಎರಡು ಯೋಜನೆಗಳ ಹೊರಗೆ ಶ್ರವಣ ಯಂತ್ರ ಅಳವಡಿಕೆ (ಕಾಕ್ಲಿಯರ್ ಇಂಪ್ಲಾಂಟ್) ಸರ್ಜರಿ ಎವಿ ಥೆರಪಿ ಕಾರ್ಯವಿಧಾನವೂ ಸೇರಿತ್ತು.
ಬಿಪಿಎಲ್-ಎಪಿಎಲ್ ಪ್ರಕರಣಗಳ ವಿವರ
ಒಟ್ಟು 4,969 ಪ್ರಕರಣಗಳಲ್ಲಿ 2,424 ಪ್ರಕರಣಗಳು ಬಿಪಿಎಲ್ ವರ್ಗಕ್ಕೆ ಸೇರಿದ್ದವು. ಇದರಲ್ಲಿ ಸುಮಾರು 1,246 ಪ್ರಕರಣಗಳನ್ನು ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಕಾರ್ಯವಿಧಾನ ಸಂಕೇತಗಳೊಂದಿಗೆ ನೇರವಾಗಿ ಹೊಂದಿಸಿತ್ತು. ಮತ್ತು 1,125 ಪ್ರಕರಣಗಳನ್ನು ಇದೇ ರೀತಿಯಲ್ಲಿ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಕಾರ್ಯವಿಧಾನ ಸಂಕೇತಗಳೊಂದಿಗೇ (code) ಹೊಂದಿಸಿತ್ತು.
ಅಲ್ಲದೇ, ಇನ್ನುಳಿದ 53 ಪ್ರಕರಣಗಳನ್ನು ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕದ ಕಾರ್ಯವಿಧಾನದೊಂದಿಗೆ ಹೊಂದಾಣಿಕೆ ಮಾಡಿರಲಿಲ್ಲ. ಹಾಗೆಯೇ 2,545 ಬಿಪಿಎಲ್ ಅಲ್ಲದ ವರ್ಗಗಳಲ್ಲಿ ಸುಮಾರು 1,690 ಪ್ರಕರಣಗಳನ್ನು ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕದ ಕಾರ್ಯವಿಧಾನ ಸಂಕೇತಗಳೊಂದಿಗೆ (code) ನೇರವಾಗಿ ಹೊಂದಿಸಲಾಗಿತ್ತು. ಮತ್ತು 809 ಪ್ರಕರಣಗಳನ್ನು ಇದೇ ರೀತಿಯ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕದ ಕಾರ್ಯವಿಧಾನ ಸಂಕೇತಗಳ (code)ಗಳೊಂದಿಗೆ ಹೊಂದಿಸಿತ್ತು. ಮತ್ತು 46 ಪ್ರಕರಣಗಳನ್ನು ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕದ ಕಾರ್ಯವಿಧಾನದೊಂದಿಗೆ ಹೊಂದಾಣಿಕೆ ಮಾಡಿತ್ತು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ 883 ಕಾರ್ಯವಿಧಾನದಲ್ಲಿ 349 ಕಾರ್ಯವಿಧಾನಗಳನ್ನಷ್ಟೇ ಬಳಸಲಾಗಿತ್ತು. ಇದರ ವೆಚ್ಚದ ಮೊತ್ತ 21.49 ಕೋಟಿ ರು ಗಳಷ್ಟಿತ್ತು. ಇದಲ್ಲದೆ 349 ಕಾರ್ಯವಿಧಾನಗಳಲ್ಲಿ, 275 ಕಾರ್ಯವಿಧಾನಗಳನ್ನು ( ಶೇ.79) ನೇರವಾಗಿ ಆಯುಷ್ಮಾನ್ ಭಾರತ್, ಪಿಎಂಜೆವೈ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಪ್ಯಾಕೇಜ್ ಅಡಿಯಲ್ಲಿ ಮ್ಯಾಪ್ ಮಾಡಲಾಗಿತ್ತು. ಇದರ ವೆಚ್ಚದ ಮೊತ್ತ 13.01 ಕೋಟಿಯಷ್ಟಿತ್ತು.
55 ಕಾರ್ಯವಿಧಾನಗಳು ಆಯುಷ್ಮಾನ್ ಭಾರತ್, ಪಿಎಂಜೆವೈ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಪ್ಯಾಕೇಜ್‌ಗೆ ಸಂಬಂಧಿಸಿದ್ದವು. ಇದಕ್ಕಾಗಿ ಆಯವ್ಯಯದಲ್ಲಿ 8.43 ಕೋಟಿ ರು ಒದಗಿಸಿತ್ತು. ಒಟ್ಟು 330 ಕಾರ್ಯವಿಧಾನಗಳಿಗೆ 21.44 ಕೋಟಿ ರುಪಾಯಿ ಬಳಕೆಯಾಗಿತ್ತು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ರತಿಪಾದಿಸಿರುವುದು ಗೊತ್ತಾಗಿದೆ.
349 ಕಾರ್ಯವಿಧಾನಗಳಲ್ಲಿ 19 ಕಾರ್ಯವಿಧಾನಗಳು ಅಂದರೇ 99 ಪ್ರಕರಣಗಳಿಗೆ 5,34,290 ರು ವೆಚ್ಚವಾಗಿತ್ತು. ಆದರೆ ಇದು ಆಯುಷ್ಮಾನ್ ಭಾರತ್, ಪಿಎಂಜೆವೈ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕದ ಪ್ಯಾಕೇಜ್‌ಗೆ ಸಂಬಂಧವೇ ಇರಲಿಲ್ಲ ಎಂಬ ಸಂಗತಿಯು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ (ಎವಿ ಥೆರಪಿ ಸೇರಿದಂತೆ) ಗೆ 1,86,01,500 ರು ವೆಚ್ಚವಾಗಿತ್ತು ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ (ಎವಿ ಥೆರಪಿ ಸೇರಿದಂತೆ) ದತ್ತಾಂಶವು ಬಿಪಿಎಲ್ ಮತ್ತು ಬಿಪಿಎಲ್‌ಯೇತರ ಎಂದು ಪ್ರತ್ಯೇಕಿಸಿರಲಿಲ್ಲ. ಹಾಗೆಯೇ ಆಯುಷ್ಮಾನ್ ಭಾರತ್, ಪಿಎಂಜೆವೈ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕದ ಕಾರ್ಯವಿಧಾನಗಳೊಂದಿಗೆ 19 ಕಾರ್ಯವಿಧಾನಗಳು ಮ್ಯಾಪ್ ಮಾಡಿರಲಿಲ್ಲ. ಇದರಲ್ಲಿ 99 ಪ್ರಕರಣಗಳಿದ್ದವು. ಇದು 5,34,290 ರು ವೆಚ್ಚವನ್ನೊಳಗೊಂಡಿತ್ತು.
ಒಟ್ಟಾರೆ 5,069 ಪ್ರಕರಣಗಳು 352 ಕಾರ್ಯವಿಧಾನಗಳನ್ನೊಳಗೊಂಡಿದ್ದವು. ಈ ಎಲ್ಲಾ ಚಿಕಿತ್ಸೆಗಳಿಗೆ 23,35,95, 119 ರು ವೆಚ್ಚದ ಮೊತ್ತ ಒಳಗೊಂಡಿತ್ತು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳು ಅಂಕಿ ಅಂಶಗಳನ್ನು ಸರ್ಕಾರದ ಮುಂದಿರಿಸಿದ್ದಾರೆ.
ಆರ್‌ಬಿಎಸ್‌ಕೆ ಯೋಜನೆಯಡಿಯಲ್ಲಿ ಸೌಲಭ್ಯವಾರು ನಿರ್ವಹಿಸಿರುವ ಕಾರ್ಯವಿಧಾನಗಳ ಒಟ್ಟು ಪ್ರಕರಣಗಳು ಮತ್ತು ಇದರ ಮೊತ್ತದ ಅಂಕಿ ಅಂಶಗಳನ್ನು ಟ್ರಸ್ಟ್ ಪಟ್ಟಿ ಮಾಡಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ 653 ಬಿಪಿಎಲ್ ಪ್ರಕರಣಗಳಿದ್ದವು. 92,83,989 ರು ಅನುಮೋದನೆಯಾಗಿತ್ತು. ಬಿಪಿಎಲ್‌ಯೇತರ 297 ಪ್ರಕರಣಗಳಿದ್ದವು. ಇದಕ್ಕೆ 45,98,535 ರು ಅನುಮೋದನೆಯಾಗಿತ್ತು. ಒಟ್ಟು 950 ಪ್ರಕರಣಗಳಿಗೆ 1,38,82,524 ರು ಅನುಮೋದನೆಯಾಗಿತ್ತು.
ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ 255 ಬಿಪಿಎಲ್ ಪ್ರಕರಣಗಳಿದ್ದವು. 89,88,175 ರು ಅನುಮೋದನೆಯಾಗಿತ್ತು. ಬಿಪಿಎಲ್‌ಯೇತರ 328 ಪ್ರಕರಣಗಳಿದ್ದವು. ಇದಕ್ಕೆ 2,34,48, 350 ರು ಅನುಮೋದನೆಯಾಗಿತ್ತು. ಒಟ್ಟಾರೆ 538 ಪ್ರಕರಣಗಳಿಗೆ 3,24,36,525 ರು ಅನುಮೋದನೆಯಾಗಿತ್ತು.
ಒಟ್ಟಾರೆ ಸರ್ಕಾರಿ ಸರ್ಕಾರಿ ವ್ಯವಸ್ಥೆಯಲ್ಲಿ 908 ಪ್ರಕರಣಗಳು ಬಿಪಿಎಲ್ ಆಗಿದ್ದವು. ಇದಕ್ಕಾಗಿ 1,82, 72,164 ರು ಅನುಮೋದನೆಯಾಗಿತ್ತು. 625 ಬಿಪಿಎಲ್ ಯೇತರ ಪ್ರಕರಣಗಳಾಗಿದ್ದವು. ಇದಕ್ಕೆ 2,80,46,885 ರು ಅನುಮೋದನೆ ದೊರೆತಿತ್ತು. ಒಟ್ಟಾರೆ 1,535 ಪ್ರಕರಣಗಳಿಗೆ 4,63,19,049 ರು ಅನುಮೋದನೆ ಸಿಕ್ಕಿತ್ತು.
ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 800 ಪ್ರಕರಣಗಳು ಬಿಪಿಎಲ್ ವ್ಯಾಪ್ತಿಯಲ್ಲಿದ್ದವು. ಇದಕ್ಕೆ 3,74,82,168 ರು ವೆಚ್ಚದ್ದಾಗಿದ್ದವು. 1,031 ಬಿಪಿಎಲ್‌ಯೇತರ ಪ್ರಕರಣಗಳಲ್ಲಿ 6,25,23,854 ರು ಗೆ ಅನುಮೋದನೆ ದೊರೆತಿತ್ತು. ಒಟ್ಟಾರೆ 10,00,06,022 ರು ಅನುಮೋದನೆ ದೊರೆತಿತ್ತು.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 716 ಬಿಪಿಎಲ್ ಪ್ರಕರಣಗಳಿದ್ದವು. 2,69,97,347 ರು ಅನುಮೋದನೆ ದೊರೆತಿತ್ತು. 889 ಬಿಪಿಎಲ್‌ಯೇತರ ಪ್ರಕರಣಗಳಿದ್ದವು. 4,16,71,201 ರು ಅನುಮೋದನೆ ದೊರೆತಿತ್ತು. ಒಟ್ಟಾರೆ 6,86,68,548 ರು ಅನುಮೋದನೆ ಸಿಕ್ಕಿತ್ತು. ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 1,516 ಬಿಪಿಎಲ್ ಪ್ರಕರಣಗಳಿದ್ದವು. 6,44,79,515 ರು ಅನುಮೋದನೆ ದೊರೆತಿತ್ತು. 1,920 ಪ್ರಕರಣಗಳು ಬಿಪಿಎಲ್‌ಯೇತರವಾಗಿದ್ದವು. 10, 41, 95,055 ರು ಅನುಮೋದನೆ ಸಿಕ್ಕಿತ್ತು. ಒಟ್ಟಾರೆ 3,436 ಪ್ರಕರಣಗಳಲ್ಲಿ 16,86, 74, 570 ರು ಅನುಮೋದನೆ ದೊರೆತಿತ್ತು.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟಾರೆ 2,424 ಪ್ರಕರಣಗಳು ಬಿಪಿಎಲ್‌ಗೆ ಸೇರಿದ್ದವು. ಇದಕ್ಕೆ 8,27,51,679 ರು ಅನುಮೋದನೆ ದೊರೆತಿದ್ದರೇ 2,545 ಬಿಪಿಎಲ್‌ಯೇತರ ಪ್ರಕರಣಗಳಲ್ಲಿ 13,22,41,940 ರು ಅನುಮೋದನೆ ದೊರೆತಿತ್ತು. ಒಟ್ಟಾರೆ 4,949 ಪ್ರಕರಣಗಳಲ್ಲಿ 21,49,93,619 ರು ಗಳಿಗೆ ಅನುಮೋದನೆ ನೀಡಲಾಗಿತ್ತು.
330 ಕಾರ್ಯವಿಧಾನಗಳು ಆಯುಷ್ಮಾನ್ ಭಾರತ್, ಪಿಎಂಜೆವೈ, ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಒಳಗೊಂಡಿದ್ದವು. ಹೀಗಾಗಿ ಎಪಿಎಲ್ ರೋಗಿಗಳು ಸಹ ಸಾಮಾನ್ಯ ರೋಗಿಗಳಾಗಿ ಚಿಕಿತ್ಸೆ ಪಡೆಯಲು ಅರ್ಹರಿದ್ದರು. ಉಳಿದ 3 ಶ್ರವಣ ಯಂತ್ರ ಅಳವಡಿಕೆ (ಕಾಕ್ಲಿಯರ್ ಇಂಪ್ಲಾಟ್) ಶಸ್ತ್ರಚಿಕಿತ್ಸೆ ಮತ್ತು ಎವಿ ಚಿಕಿತ್ಸೆಗೆ ಸಂಬಂಧಿಸಿದಂತೆ ಸಾಮಾನ್ಯ ರೋಗಿಗಳು ಸಹ ಒಳಗೊಂಡಿದ್ದರು.
ಈ ಎಲ್ಲಾ ಮಾಹಿತಿಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸರ್ಕಾರಕ್ಕೆ ನೀಡಿತ್ತು. ಆದರೆ ಚಿಕಿತ್ಸೆ ನೀಡಿದ್ದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ನೀಡಿರಲಿಲ್ಲ. ಬಾಕಿ ಇರುವ 23.35 ಕೋಟಿ ರು ಮೊತ್ತವನ್ನು ಪಾವತಿಸಲು ಸರ್ಕಾರಕ್ಕೆ ಕಡತ ಸಲ್ಲಿಕೆಯಾಗಿತ್ತು. ಈ ಏಕ- ಕಡತವನ್ನು ಪರಿಶೀಲನೆ ನಡೆಸಿದ್ದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕರು 2024ರ ಏಪ್ರಿಲ್ 20, ಮೇ 3, ಜೂನ್ 24 ಮತ್ತು ಆಗಸ್ಟ್ 20ರಂದು ಸಭೆ ನಡೆಸಿದ್ದರು.
ಸರ್ಕಾರದ ಅನುಮೋದನೆಯಿಲ್ಲದೇ ಮತ್ತು ಅನುದಾನವಿಲ್ಲದಿದ್ದರೂ ವೆಚ್ಚ ಮಾಡಿರುವುದನ್ನು ಎನ್‌ಎಚ್‌ಎಂ ಸಭೆ ಪರಿಶೀಲನೆ ವೇಳೆ ಪತ್ತೆ ಹಚ್ಚಲಾಗಿತ್ತು. ಅಲ್ಲದೇ ಅನುದಾನವನ್ನು ಎನ್‌ಎಚ್‌ಎಂನಿಂದ ಸುವರ್ಣ ಆರೋಗ್ಯ ಟ್ರಸ್ಟ್‌ಗೆ ಬಿಡುಗಡೆ ಮಾಡಲಾಗಿದೆ, ಯಾವುದೇ ಬಾಕಿ ಇರುವುದಿಲ್ಲ ಎಂದೂ ಸರ್ಕಾರಕ್ಕೆ ಎನ್‌ಎಚ್‌ಎಂನ ವ್ಯವಸ್ಥಾಪಕ ನಿರ್ದೇಶಕರು ವರದಿ ಸಲ್ಲಿಸಿದ್ದರು.
ಸುವರ್ಣ ಆರೋಗ್ಯ ಟ್ರಸ್ಟ್, 2017-18ರ ಅವಧಿಯಲ್ಲಿ ಎಂಒಯುಗಿಂತಲೂ ಹೆಚ್ಚಿನ ಕಾರ್ಯವಿಧಾನಗಳನ್ನು ಸಕ್ರಿಯಗೊಳಿಸಿದ್ದರು ಎಂಬ ಅಂಶವೂ ಈ ವರದಿಯಲ್ಲಿತ್ತು. ಅಲ್ಲದೇ ಸರ್ಕಾರದ ಅನುಮೋದನೆಯಿಲ್ಲದೇ ಆರ್‍ಬಿಎಸ್‌ಕೆ ಯೋಜನೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಯೋಜನೆಯ ವಿನ್ಯಾಸವನ್ನೂ ಮೀರಿದ ಹೆಚ್ಚುವರಿ ಸಂಖ್ಯೆಯ ಚಿಕಿತ್ಸೆ ನೀಡಲಾಗಿತ್ತು. ಇದಕ್ಕೆ ಅನುದಾನವಿರಲಿಲ್ಲ. ಆದರೂ ಚಿಕಿತ್ಸೆ ನೀಡಿ ವೆಚ್ಚ ಮಾಡಲಾಗಿದೆ. ಇವರುಗಳ ವಿರುದ್ಧ ವಿಚಾರಣೆಯನ್ನು ನಡೆಸಲು ಪರಿಗಣಿಸಬಹುದು ಎಂದು ಎನ್‌ಎಚ್‌ಎಂನ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಈ ಯೋಜನೆಯಡಿ 2015ರರಿಂದ 2018ರವರೆಗೆ ಒಟ್ಟು ಎಷ್ಟು ಮೊತ್ತವು ಪಾವತಿಸಲು ಬಾಕಿ ಇದೆ ಎಂಬ ವಿವರಗಳನ್ನೂ ಎನ್‌ಎಚ್‌ಎಂ ಒದಗಿಸಿದೆ.
ಒಟ್ಟು 15,532 ಪ್ರಕರಣಗಳಲ್ಲಿ 80.17 ಕೋಟಿ ರು ವೆಚ್ಚವಾಗಿದೆ. ಈ ಪೈಕಿ ಭಾರತ ಸರ್ಕಾರದ ಪ್ಯಾಕೇಜ್ ಅಡಿಯಲ್ಲಿನ 4,299 ಪ್ರಕರಣಗಳಲ್ಲಿ 35.28 ಕೋಟಿ ರು ವೆಚ್ಚವಾಗಿತ್ತು. ಇತರೆ 6, 264 ಪ್ರಕರಣಗಳಲ್ಲಿ 23.39 ಕೋಟಿ ರು ವೆಚ್ಚವಾಗಿತ್ತು. ಒಟ್ಟಾರೆ 10,563 ಪ್ರಕರಣಗಳಲ್ಲಿ 58.67 ಕೋಟಿ ರು ಮೊತ್ತಕ್ಕೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಬಿಲ್‌ಗಳನ್ನು ಸಲ್ಲಿಸಿದ್ದವು.
ಇನ್ನು 729 ಪ್ರಕರಣಗಳಿಗೆ ಭಾರತ ಸರ್ಕಾರದ ಪ್ಯಾಕೇಜ್ ಅಡಿಯಲ್ಲಿ 5.73 ಕೋಟಿ ರು ವೆಚ್ಚ ಮಾಡಲಾಗಿತ್ತು. ಇತರೆ ಪಟ್ಟಿಯಲ್ಲಿ 4,240 ಪ್ರಕರಣಗಳಲ್ಲಿ 15.76 ಕೋಟಿ ರು ಸೇರಿ ಒಟ್ಟಾರೆ 21.49 ಕೋಟಿ ರು ವೆಚ್ಚವಾಗಿತ್ತು. ಹೀಗೆ ಭಾರತ ಸರ್ಕಾರದ ಪ್ಯಾಕೇಜ್ ಅಡಿಯಲ್ಲಿ 5,028 ಪ್ರಕರಣಗಳಡಿಲ್ಲಿ 41.02 ಕೋಟಿ ರು, ಇತರೆ ಪಟ್ಟಿಯಲ್ಲಿ 10,504 ಪ್ರಕರಣಗಳಲ್ಲಿ 39.15 ಕೋಟಿ ರು ವೆಚ್ಚವಾಗಿತ್ತು. ಒಟ್ಟಾರೆಯಾಗಿ 15,532 ಪ್ರಕರಣಗಳಿಗೆ 80.17 ಕೋಟಿ ರು ಮೊತ್ತಕ್ಕೆ ಕ್ಲೈಮ್ ಮಾಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಚಿಕಿತ್ಸೆ ವೆಚ್ಚ ಪಾವತಿಸಲು ಬಾಕಿ ಇದೆ ಎಂದು ಪಟ್ಟಿ ಮಾಡಲಾಗಿರುವ 4,969 ಪ್ರಕರಣಗಳಲ್ಲಿ 1,530 ಸರ್ಕಾರಿ ಮತ್ತು 3,439 ಖಾಸಗಿ ಆಸ್ಪತ್ರೆಗಳಿವೆ. ಈ ಪೈಕಿ 1,530 ಸರ್ಕಾರಿ ಆಸ್ಪತ್ರೆಗಳಿಗೆ 4,62,26,049 ರು, 3,439 ಖಾಸಗಿ ಆಸ್ಪತ್ರೆಗಳಿಗೆ 16,87,67,570 ರು ಪಾವತಿಸಲು ಬಾಕಿ ಇದೆ. ಒಟ್ಟಾರೆ 4,969 ಪ್ರಕರಣಗಳಲ್ಲಿ 21,49,93,619 ರು ಬಾಕಿ ಇರುವುದು ಗೊತ್ತಾಗಿದೆ. ಬಾಕಿ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಕಾನೂನಿನ ಮೊರೆ ಹೋಗಲಾಗುವುದು ಎಂದು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿರುವ ಪ್ರಕಾರ ಈ ಬಾಕಿ ಮೊತ್ತವನ್ನು ಪಾವತಿಸಲು ಯಾವುದೇ ನಿಧಿ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಬಾಕಿ ಇರುವ 23.30 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ಹೆಚ್ಚುವರಿ ಅನುದಾನ ಕೋರುವುದು ಅಥವಾ ಪ್ರಸ್ತುತ ದಿನದವರೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಉಳಿತಾಯವಾಗಿರುವ ಬಡ್ಡಿ ಮೊತ್ತ 32.00 ಕೋಟಿ ರು.ಗಳಿಂದ ಈ ಮೊತ್ತವನ್ನು ಬಿಡುಗಡೆ ಮಾಡಬಹುದು ಎಂದು ಕೋರಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
2015-16ರಿಂದ 2018-19ರವರೆಗೆ ಸರ್ಕಾರದ ಅನುಮೋದನೆಯಿಲ್ಲದೇ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‍ಬಿಎಸ್‌ಕೆ) ಯೋಜನೆ ವ್ಯಾಪ್ತಿಯ ವಿಸ್ತರಣೆ ಮಾಡಿರುವುದು ಮತ್ತು ಅನುದಾನವಿಲ್ಲವಿದ್ದರೂ ಹೆಚ್ಚುವರಿ ಸಂಖ್ಯೆಯ ಚಿಕಿತ್ಸೆಗಳಿಗೆ ವೆಚ್ಚವಾಗಿದ್ದ ಅವಧಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಒಟ್ಟು ಒಟ್ಟು 10 ಮಂದಿ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದರು. ಈ ಪೈಕಿ ಐಎಎಸ್ ಅಧಿಕಾರಿಯೊಬ್ಬರೂ ಸಹ ಸೇರಿದ್ದಾರೆ.
ವಿಶೇಷವೆಂದರೇ ಈ ಪೈಕಿ ಕೆಲವರು ಗುತ್ತಿಗೆ ಆಧಾರದ ಮೇಲೆ ನೇಮಕಾತಿಯಾಗಿದ್ದರು. ಮತ್ತು ಅವರ ಗುತ್ತಿಗೆ ಅವಧಿಯೂ ಮುಕ್ತಾಯಗೊಂಡಿದೆ. ಒಬ್ಬ ಐಎಎಸ್ ಅಧಿಕಾರಿ ಕೇರಳ ಸರ್ಕಾರಕ್ಕೆ ವರ್ಗಾವಣೆಯಾಗಿದ್ದಾರೆ. ಇನ್ನು ಕೆಲವು ವಯೋ ನಿವೃತ್ತಿ ಹೊಂದಿದ್ದಾರೆ.
ಹೆಚ್ಚುವರಿ ವೆಚ್ಚ ಮಾಡಿರುವ ಅಧಿಕಾರಿಗಳ ಪಟ್ಟಿ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಡಾ ಬೋರೇಗೌಡ (ಗುತ್ತಿಗೆ ಆಧಾರದ ಮೇಲೆ ನೇಮಕಾತಿ), ಐಎಎಸ್ ಡಾ ರತನ್ ಕೇಲ್ಕರ್ (ಕೇರಳಕ್ಕೆ ವರ್ಗಾವಣೆ), ಎನ್ ಟಿ ಅಬ್ರೂ (ವಯೋ ನಿವೃತ್ತಿ) ಕಾರ್ಯಕಾರಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಹಾಗೆಯೇ ನಿರ್ದೇಶಕರ ಹುದ್ದೆಯಲ್ಲಿ (ಕಾರ್ಯಾಚರಣೆ) ಎಸ್ ಆರ್ ನಾಯಕ್ (ಗುತ್ತಿಗೆ), ಡಾ ಬಿ ಮಂಜುನಾಥ್ (ಗುತ್ತಿಗೆ), ಡಾ ರಘುನಂದನ್ ಕೆ ಆರ್ (ವಯೋ ನಿವೃತ್ತಿ) ಕಾರ್ಯನಿರ್ವಹಿಸಿದ್ದರು.
ವೈದ್ಯಕೀಯ ನಿರ್ವಹಣೆ ವಿಭಾಗದಲ್ಲಿ ಡಾ ಸುಧಾ ಚಂದ್ರಶೇಖರ್ ( ಗುತ್ತಿಗೆ), ಡಾ ಬಿ ಮಂಜುನಾಥ್, ಹಣಕಾಸು ವಿಭಾಗದಲ್ಲಿ ಹಾಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಚ್ ಬಿ ಪಾರ್ವತಿ ಮತ್ತು ಶಶಿಧರ್ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಇದೇ ಪ್ರಕರಣದ ಕುರಿತು ಮಹಾಲೇಖಪಾಲರು ಮತ್ತು ಅಕೌಂಟೆಂಟ್ ಜನರಲ್ ಅವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. (Audit observation ref no 16- OBS 1781553) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಎಲ್ಲಾ ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಸಿಎಜಿಯ ಆಕ್ಷೇಪಣೆಯಲ್ಲೇನಿದೆ?
ಆರ್‌ಬಿಎಸ್‌ಕೆ ಯೋಜನೆಯ ನಿರ್ವಹಣೆಯ ಕುರಿತು ಸಿಎಜಿಯೂ ಸಹ ಮೌಲ್ಯಮಾಪನ ಮಾಡಿತ್ತು. ಈ ವೇಳೆ ಯೋಜನೆಯ ಹಣಕಾಸಿನ ಮೇಲ್ವಿಚಾರಣೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿತ್ತು. ಚಿಕಿತ್ಸೆಗಳ ಸಂಖ್ಯೆಯನ್ನು 148 ರಿಂದ 883 ಕ್ಕೆ ಅನಧಿಕೃತವಾಗಿ ವಿಸ್ತರಿಸಲಾಗಿತ್ತು. ಇದರಿಂದ ಗಣನೀಯ ಆರ್ಥಿಕ ಪರಿಣಾಮ ಉಂಟಾಗಿತ್ತು. ಹೀಗಾಗಿ ಸರ್ಕಾರಕ್ಕೆ 56.88 ಕೋಟಿ ರೂಪಾಯಿ ನಷ್ಟವಾಯಿತು ಎಂದು ವಿವರಿಸಿತ್ತು.
ಅನಧಿಕೃತವಾಗಿ ಮಾಡಿದ್ದ ಈ ವಿಸ್ತರಣೆ ಮತ್ತು ದರಗಳಲ್ಲಿನ ಹೆಚ್ಚಳ, ಹಾಗೂ ಸಾಲ ಪರಿಹಾರ ಕಾರ್ಯವಿಧಾನಗಳಿಗಾಗಿ ಟ್ರಸ್ಟ್‌ನ ಹೆಸರಿನಲ್ಲಿನ ಖಾತೆಯಲ್ಲಿದ್ದ ಹಣವನ್ನು ಬೇರೆಡೆ ತಿರುಗಿಸಲಾಯಿತು. ಅಂದಾಜು 8.25 ಲಕ್ಷ ರು ಗಳನ್ನು ಬೇರೆ ಉದ್ದೇಶಗಳಿಗೆ ತಿರುಗಿಸಲಾಗಿದೆ. ಈ ಕ್ರಮಗಳು ಆಸ್ಪತ್ರೆಗಳಿಗೆ ಬಾಕಿ ಇರುವ 23.35 ಕೋಟಿ ರೂ. ಪಾವತಿ ಸೇರಿದಂತೆ ಆರ್ಥಿಕ ಹೊಣೆಗಾರಿಕೆಗಳಿಗೆ ಕಾರಣವಾಗಿವೆ. ಇದನ್ನು ಸಮಗ್ರವಾಗಿ ಪರಿಶೀಲಿಸಲು, ಹಣಕಾಸಿನ ಅಕ್ರಮಗಳ ವ್ಯಾಪ್ತಿಯನ್ನು ನಿರ್ಧರಿಸಬೇಕು. ಇದಕ್ಕಾಗಿ ಆರ್‌ಬಿಎಸ್‌ಕೆ ಯೋಜನೆಯ ನಿರ್ವಹಣೆಯಲ್ಲಿನ ಈ ಲೋಪಗಳಿಗೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಸಂಪೂರ್ಣ ತನಿಖೆಯನ್ನು ನಡೆಸಬೇಕು ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿತ್ತು.
32 ಕೋಟಿ ಮೂಲ ಅನುದಾನ ಯಾವುದು?
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಉಳಿತಾಯವಾಗಿರುವ 32 ಕೋಟಿ ರು.ಗಳಿಂದ 23.30 ಕೋಟಿ ರು.ಗಳನ್ನು ಬಿಡುಗಡೆ ಮಾಡಬಹುದು ಎಂದು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗಿದೆಯಾದರೂ ಸಹ ಈ 32.00 ಕೋಟಿ ರು. ಮೂಲ ಅನುದಾನ ಯಾವುದು ಎಂಬ ಮಾಹಿತಿಯನ್ನೇ ಸರ್ಕಾರಕ್ಕೆ ನೀಡಿಲ್ಲ.
ಹೀಗಾಗಿ ಈ ಹಣದ ಮೂಲ ಅನುದಾನ ಯಾವುದು ಎಂಬ ಬಗ್ಗೆ ಮಾಹಿತಿ ಪಡೆದು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಬಾಕಿ ಇರುವ 23.30 ಕೋಟಿ ರು.ಗಳನ್ನು ನೀಡುವ ಬಗ್ಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ನಿರ್ಧರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅಲ್ಲದೇ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಹಣ ಪಾವತಿಸಲು ಸುಮಾರು 4ರಿಂದ 5 ವರ್ಷಗಳ ಕಾಲ ವಿಳಂಬವಾಗಿದೆ. ಹೆಚ್ಚುವರಿಯಾಗಿ 883 ಚಿಕಿತ್ಸಾ ವಿಧಾನಗಳನ್ನು ಹೇಗೆ ಅಳವಡಿಸಿಕೊಳ್ಳಲಾಯಿತು, ಇದಕ್ಕೆ ಕಾರಣಗಳೇನು ಎಂದು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಆರ್‌ಬಿಎಸ್‌ಕೆ ಯೋಜನೆಯಡಿಯಲ್ಲಿ ಅನುಮತಿಸದ ಕಾರ್ಯವಿಧಾನಗಳನ್ನು ನಿರ್ವಹಿಸಿದಾಗ ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆ ಏನು ಎಂಬುದರ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕೂಡ ಈ ಪ್ರಕರಣಗಳ ಕುರಿತು ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿದೆ. ಚಿಕಿತ್ಸೆಗಳಿಗೆ ಟ್ರಸ್ಟ್, ಪೂರ್ವಾನುಮತಿಗಳನ್ನು ಅನುಮೋದಿಸಿದೆ. ಹೀಗಾಗಿ ಅಂತಹ ಕಾರ್ಯವಿಧಾನವನ್ನು ಕೈಗೊಳ್ಳಲು ಸರ್ಕಾರವು ಅವರಿಗೆ ಬಾಕಿ ಹಣ ಪಾವತಿ ಮಾಡಲು ಬಾಧ್ಯತೆ ಹೊಂದಿದೆ ಎಂದು ಕಾನೂನು ಸಲಹೆಗಾರರು ಅಭಿಪ್ರಾಯಪಟ್ಟಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಟ್ರಸ್ಟ್‌ನಿಂದಲೇ ಲೋಪ
ಆದರೆ ಈ ಪ್ರಕರಣದಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ಯೋಜನೆಗಳಲ್ಲಿ ಇಲ್ಲದೇ ಸಂಕೇತ (ಕೋಡ್) ಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಪೂರ್ವಾನುಮತಿ ನೀಡಿರುವ ಬಗ್ಗೆಯೇ ಸಮಸ್ಯೆ ಇದೆ. ಆರ್‌ಬಿಎಸ್‌ಕೆಯಲ್ಲಿಲ್ಲದ ಆದರೆ ಎಂಒಯುನ ಭಾಗವಲ್ಲದ ಕಾರ್ಯವಿಧಾನವನ್ನು ಕೈಗೊಳ್ಳಲು ನೆಟ್‌ವರ್ಕ್ ಆಸ್ಪತ್ರೆಗೆ ಅಧಿಕಾರ ಹೊಂದಿರುವ ಕಾರ್ಯವಿಧಾನಗಳಿಗೆ ಪೂರ್ವಾನುಮತಿ ಅನುಮೋದನೆ ನೀಡುವಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಲೋಪವೆಸಗಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಟ್ರಸ್ಟ್ ಎಸಗಿರುವ ಈ ಲೋಪದಿಂದಾಗಿಯೇ ಈ ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡುತ್ತದೆ. ಏಕೆಂದರೇ ಆರ್‍ಬಿಎಸ್‌ಕೆಯಲ್ಲಿ ಇಲ್ಲದ ಕಾರ್ಯವಿಧಾನಗಳ ವಿರುದ್ಧವಾಗಿ ಪೂರ್ವಾನುಮತಿ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
ಈ ಎಲ್ಲ ಮಾಹಿತಿ, ಅಂಕಿ ಅಂಶಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು ಸಮಗ್ರವಾಗಿ ಪರಿಶೀಲಿಸಿದ್ದಾರೆ. ಈ ಪ್ರಕರಣಗಳ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ವಿಚಾರವು ಬಹಳಷ್ಟು ವರ್ಷದಿಂದ ಬಾಕಿ ಇರುವ ಬಗ್ಗೆಯೂ ಅವಲೋಕಿಸಿದ್ದಾರೆ.
ಹರ್ಷ ಗುಪ್ತರ ಶಿಫಾರಸ್ಸೇನು?
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕದಡಿಯಲ್ಲಿನ ಕಾರ್ಯವಿಧಾನಗಳ ಮೂಲಕ ಬಿಪಿಎಲ್ ರೋಗಿಗಳಿಗೆ ನೀಡಿರುವ ಚಿಕಿತ್ಸೆ ವೆಚ್ಚವನ್ನು ಪಾವತಿಸಬಹುದು. ಏಕೆಂದರೆ ಈ ಕಾರ್ಯವಿಧಾನಗಳು ಆರ್‌ಬಿಎಸ್‌ಕೆ ಅಡಿಯಲ್ಲಿ ಲಭ್ಯವಿಲ್ಲದಿದ್ದರೂ ಸಹ ಬಿಪಿಎಲ್ ರೋಗಿಗಳಿಗೆ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕದಡಿಯಲ್ಲಿ ಲಭ್ಯವಿದೆ. ಅದರಂತೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕ್ರಮವಾಗಿ 1.81 ಕೋಟಿ ಮತ್ತು 6.44 ಕೋಟಿ ಮೊತ್ತವನ್ನು ಪಾವತಿಸಲು ಅನುಮೋದನೆ ನೀಡಬಹುದು ಎಂದು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಒಪ್ಪಂದದ ಪ್ರಕಾರ ಆಸ್ಪತ್ರೆಗಳು ಅನುಮತಿಸಲಾದ ಕಾರ್ಯವಿಧಾನಗಳನ್ನು ಮಾತ್ರ ಕೈಗೊಳ್ಳಲು ಬದ್ಧವಾಗಿರುತ್ತವೆ. ಆದ್ದರಿಂದ ಆರ್‌ಬಿಎಸ್‌ಕೆ ಅಡಿಯಲ್ಲಿ ಅನುಮೋದಿಸದ ಎಪಿಎಲ್ ಜನಸಂಖ್ಯೆಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಕೈಗೆತ್ತಿಕೊಳ್ಳಬಾರದಿತ್ತು. ಈ ಕಾರ್ಯವಿಧಾನಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅನುಮೋದಿಸಿದ್ದರೂ ಸಹ, ಆರ್‌ಬಿಎಸ್‌ಕೆ ಜೊತೆಗಿನ ಒಪ್ಪಂದದ ಪ್ರಕಾರ ಅನುಮತಿಸಲಾದ ಕಾರ್ಯವಿಧಾನಗಳನ್ನು ಪರಿಶೀಲಿಸುವ ಜವಾಬ್ದಾರಿಯಿಂದ ಆಸ್ಪತ್ರೆಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
ಆದ್ದರಿಂದ ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ ಎಪಿಎಲ್ ಜನಸಂಖ್ಯೆಗೆ ಕಾರ್ಯವಿಧಾನದ ವೆಚ್ಚದ 30 ಪ್ರತಿಶತವನ್ನು ಭರಿಸುವ ಅಂತಹ ಕಾರ್ಯವಿಧಾನಗಳ ವೆಚ್ಚದ 30 ಪ್ರತಿಶತವನ್ನು ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಮರುಪಾವತಿಸಬಹುದು ಎಂದು ಶಿಫಾರಸು ಮಾಡಲಾಗಿದೆ. ಉಳಿದ ಶೇಕಡಾ 70 ರಷ್ಟು ವೆಚ್ಚವನ್ನು ಆಸ್ಪತ್ರೆಯೇ ಭರಿಸಬೇಕಾಗುತ್ತದೆ.
ಇದಲ್ಲದೆ ಅಂತಹ ಕಾರ್ಯವಿಧಾನಗಳಿಗೆ ಪೂರ್ವ-ಪ್ರಮಾಣೀಕರಣವನ್ನು ಅನುಮೋದಿಸಿದವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಅಥವಾ ಇತರ ಸಿವಿಲ್ ನ್ಯಾಯಾಲಯದ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕಾಗುತ್ತದೆ. ಈ ಎಲ್ಲಾ ಮೊತ್ತವನ್ನು ನಿರ್ವಹಿಸಲಾದ ಕಾರ್ಯವಿಧಾನಗಳ ಸಂಪೂರ್ಣ ಪರಿಶೀಲನೆ ಮತ್ತು ಪರಿಶೀಲನೆಯ ನಂತರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪಾವತಿಸಬೇಕು ಎಂದು ಶಿಫಾರಸು ಮಾಡಿರುವುದು ತಿಳಿದು ಬಂದಿದೆ.
ಈ ಸಂಬಂಧ ‘ದಿ ಫೈಲ್’, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಂದ ಪ್ರತಿಕ್ರಿಯೆ ಬಯಸಿ ಪ್ರಶ್ನಾವಳಿಗಳನ್ನು ರವಾನಿಸಿದೆ. ಈ ಪ್ರಶ್ನಾವಳಿಗಳಿಗೆ ಉತ್ತರ, ಮಾಹಿತಿ ನೀಡಿದ ನಂತರ ಇದೇ ವರದಿಯನ್ನು ನವೀಕರಿಸಲಾಗುವುದು.