ಸಂಘಟಿತ ಅಪರಾಧ ನಿಯಂತ್ರಣ ನಿಯಮಕ್ಕೆ ತಿದ್ದುಪಡಿ; ಭೂಕಬಳಿಕೆ, ಹವಾಲಾ, ಸುಲಿಗೆ, ಬೆಟ್ಟಿಂಗ್ ಸೇರ್ಪಡೆ

ಬೆಂಗಳೂರು; ಕರ್ನಾಟಕ ವ್ಯವಸ್ಥಿತ ಅಪರಾಧಗಳ ನಿಯಂತ್ರಣ ಅಧಿನಿಯಮ 2000ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು  ಹೊರಟಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಭೂಕಬಳಿಕೆ, ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ,  ಒಪ್ಪಂದದ ಕೊಲೆ, ಸುಲಿಗೆ, ಹವಾಲಾ ವಹಿವಾಟು, ನಕಲಿ ದಾಖಲೆ, ಬೆಟ್ಟಿಂಗ್‌, ಅನಧಿಕೃತ ಟಿಕೆಟ್ ಮತ್ತು ಸಾರ್ವಜನಿಕ ಪ್ರಶ್ನೆಪತ್ರಿಕೆಗಳ ಮಾರಾಟ, ವಾಹನ ಕಳ್ಳತನ ಸೇರಿದಂತೆ ಮತ್ತಿತರ ಅಪರಾಧಗಳನ್ನೂ ಈ ಅಧಿನಿಯಮದ ವ್ಯಾಪ್ತಿಗೆ ತರಲಿದೆ.

 

ಕರ್ನಾಟಕ ವ್ಯವಸ್ಥಿತ ಅಪರಾಧಗಳ ನಿಯಂತ್ರಣ ಅಧಿನಿಯಮ 2000ಕ್ಕೆ ತಿದ್ದುಪಡಿ ವಿಧೇಯಕವನ್ನು ಈಗಾಗಲೇ ರೂಪಿಸಲಾಗಿದೆ. 2002ರ ಈ ವಿಧೇಯಕಕ್ಕೆ 23 ವರ್ಷಗಳಾದರೂ ಯಾವುದೇ ತಿದ್ದುಪಡಿ ತಂದಿರಲಿಲ್ಲ. ಹೀಗಾಗಿ ಈ ವಿಧೇಯಕಕ್ಕೆ ಹಲವು ತಿದ್ದುಪಡಿಗಳನ್ನು ತರಲು ಹೊರಟಿದೆ.

 

ತಿದ್ದುಪಡಿ ವಿಧೇಯಕದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ,  ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರೊಂದಿಗೆ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ಸಚಿವ ಸಂಪುಟ ಸಭೆಗೆ ಈ ತಿದ್ದುಪಡಿ ವಿಧೇಯಕವನ್ನು ಮಂಡಿಸಲಿದ್ದಾರೆ ಎಂದು ಗೊತ್ತಾಗಿದೆ.

 

ಈ ತಿದ್ದುಪಡಿ ವಿಧೇಯಕದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2002ರ ವಿಧೇಯಕದಲ್ಲೇನಿತ್ತು?

 

ವ್ಯವಸ್ಥಿತ ಅಪರಾಧ ಎಂದರೇ ವ್ಯವಸ್ಥಿತ ಅಪರಾಧಿಗಳ ಕೂಟದ ಸದಸ್ಯನಾಗಿಯಾಗಲಿ ಅಥವಾ ಅಂಥ ಕೂಟದ ಪರವಾಗಿಯಾಗಲಿ ಒಬ್ಬನೇ ಅಥವಾ ಜಂಟಿಯಾಗಿ ತನಗಾಗಿ ಅಥವಾ ಯಾವನೇ ಇತರ ವ್ಯಕ್ತಿಗಾಗಿ ಅಥವಾ ದಂಗೆಯನ್ನು ಉತ್ತೇಜಿಸುವುದು ಸಹ ವ್ಯವಸ್ಥಿತ ಅಪರಾಧವಾಗಿತ್ತು. ಅದೇ ರೀತಿ ಇಂತಹ ಅಪರಾಧದ ಮೂಲಕ ಆರ್ಥಿಕ ಪ್ರಯೋಜನವನ್ನು ಪಡೆಯುವ ಅಥವಾ ಅನುಚಿತ ಹಣಕಾಸಿನ ಅಥವಾ ಇತರ ಅನುಕೂಲಗಳನ್ನು ಪಡೆಯುವ ಉದ್ದೇಶವನ್ನು ಈ ಅಪರಾಧದ ವ್ಯಾಪ್ತಿಗೆ ತಂದಿತ್ತು.

 

 

ಹಾಗೆಯೇ ಈ ಮೂಲಕ ಹಿಂಸೆಯ ಬಳಕೆ, ಅಥವಾ ಹಿಂಸೆಯ ಬೆದರಿಕೆ, ಅಥವಾ ಭಯೋತ್ಪಾದನೆ, ಬಲಾತ್ಕಾರ ಅಥವಾ ಇತರ ಕಾನೂನುಬಾಹಿರ ವಿಧಾನಗಳ ಮೂಲಕ ಒಬ್ಬ ವ್ಯಕ್ತಿಯು ಕೈಗೊಳ್ಳುವ ಮುಂದುವರೆಯುತ್ತಿರುವ ಯಾವುದೇ ಕಾನೂನು ಬಾಹಿರ ಚಟುವಟಿಕೆಯು ವ್ಯವಸ್ಥಿತ ಅಪರಾಧವೆಂದು ಹೇಳಿತ್ತು.

 

 

ಆದರೀಗ ಈ ಅಪರಾಧಗಳು ಬೇರೆ ಬೇರೆ ಸ್ವರೂಪದಲ್ಲಿವೆ. ಹೀಗಾಗಿ ಮೂಲ ಅಧಿನಿಯಮದ 2ನೇ ಪ್ರಕರಣದಲ್ಲಿ ಸಾಕಷ್ಟು ತಿದ್ದುಪಡಿಗಳನ್ನು ತರಲಿದೆ.

 

2025ರ ತಿದ್ದುಪಡಿ ವಿಧೇಯಕದಲ್ಲೇನಿದೆ?

 

ಸಂಘಟಿತ ಅಪರಾಧ ಎಂದರೆ ಅಪಹರಣ, ದರೋಡೆ, ವಾಹನ ಕಳ್ಳತನ, ಸುಲಿಗೆ, ಭೂಕಬಳಿಕೆ, ಗುತ್ತಿಗೆ ಅಥವಾ ಒಪ್ಪಂದದ ಹತ್ಯೆ, ಆರ್ಥಿಕ ಅಪರಾಧ, ಸೈಬರ್ ಅಪರಾಧಗಳು, ವ್ಯಕ್ತಿಗಳ ಕಳ್ಳಸಾಗಣೆ, ಮಾದಕ ದ್ರವ್ಯಗಳು, ಶಸ್ತ್ರಾಸ್ತ್ರಗಳು ಅಥವಾ ಅಕ್ರಮ ಸರಕುಗಳು ಅಥವಾ ಸೇವೆಗಳು, ವೇಶ್ಯಾವಾಟಿಕೆ ಅಥವಾ ಸುಲಿಗೆಗಾಗಿ ಮಾನವ ಕಳ್ಳಸಾಗಣೆ ಸೇರಿದಂತೆ ಯಾವುದೇ ನಿರಂತರ ಕಾನೂನುಬಾಹಿರ ಚಟುವಟಿಕೆಯನ್ನೂ ತಿದ್ದುಪಡಿ ವಿಧೇಯಕದಲ್ಲಿ ಸೇರ್ಪಡೆಗೊಳಿಸಲಿರುವುದು ತಿಳಿದು ಬಂದಿದೆ.

 

 

ಹಾಗೆಯೇ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು, ಏಕಾಂಗಿಯಾಗಿ ಅಥವಾ ಜಂಟಿಯಾಗಿ, ಸಂಘಟಿತ ಅಪರಾಧ ಸಿಂಡಿಕೇಟ್‌ನ ಸದಸ್ಯರಾಗಿ ಅಥವಾ ಅಂತಹ ಸಿಂಡಿಕೇಟ್‌ನ ಪರವಾಗಿ, ಹಿಂಸೆಯ ಬಳಕೆ, ಹಿಂಸೆಯ ಬೆದರಿಕೆ, ಬೆದರಿಕೆ, ಬಲವಂತ ಅಥವಾ ಯಾವುದೇ ಇತರ ಕಾನೂನುಬಾಹಿರ ವಿಧಾನಗಳಿಂದ ನೇರ ಅಥವಾ ಪರೋಕ್ಷ ವಸ್ತು ಲಾಭವನ್ನು ಪಡೆಯುವುದು, ಸಂಘಟಿತ ಅಪರಾಧವಾಗುತ್ತದೆ ಎಂದು ತಿದ್ದುಪಡಿ ವಿಧೇಯಕದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ತಿದ್ದುಪಡಿ ವಿಧೇಯಕದಲ್ಲಿ ಆರ್ಥಿಕ ಅಪರಾಧವನ್ನು ಮತ್ತಷ್ಟು ವಿಶ್ಲೇಷಿಸಲಾಗಿದೆ ಮತ್ತು ಇದರ ವ್ಯಾಪ್ತಿಗೆ ಮತ್ತಷ್ಟು ಅಪರಾಧಗಳನ್ನು ತಂದಿದೆ.

 

‘ಆರ್ಥಿಕ ಅಪರಾಧವೆಂದರೆ ನಂಬಿಕೆ ದ್ರೋಹ, ನಕಲಿ ದಾಖಲೆ, ನೋಟುಗಳ ನಕಲಿ, ಬ್ಯಾಂಕ್ ನೋಟುಗಳು ಮತ್ತು ಸರ್ಕಾರಿ ಮುದ್ರೆಗಳು, ಹವಾಲಾ ವಹಿವಾಟು, ಸಾಮೂಹಿಕ ಮಾರುಕಟ್ಟೆ ವಂಚನೆ ಅಥವಾ ಹಲವಾರು ವ್ಯಕ್ತಿಗಳನ್ನು ವಂಚಿಸುವ ಯಾವುದೇ ಯೋಜನೆಯನ್ನು ನಡೆಸುವುದು ಅಥವಾ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಅಥವಾ ಯಾವುದೇ ಇತರ ಸಂಸ್ಥೆ ಅಥವಾ ಸಂಸ್ಥೆಯನ್ನು ವಂಚಿಸುವ ಉದ್ದೇಶದಿಂದ ಯಾವುದೇ ರೀತಿಯಲ್ಲಿ ಏನಾದರೂ ಮಾಡುವುದು,’ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ವ್ಯವಸ್ಥಿತ ಅಪರಾಧಕ್ಕಾಗಿ ದಂಡನೆ ಕುರಿತಾದ 2002ರ ಮೂಲ ಕಾಯ್ದೆಯ ಪ್ರಕರಣಗಳಿಗೂ ತಿದ್ದುಪಡಿ ತರಲಿದೆ.

 

2002ರ ಕಾಯ್ದೆಯಲ್ಲಿದ್ದ ದಂಡನೆ ವಿವರಗಳಿವು

 

ಯಾವೊಬ್ಬನು ವ್ಯವಸ್ಥಿತ ಅಪರಾಧವನ್ನು ಮಾಡಿದಾಗ ಅಂಥ ಕೃತ್ಯವು ಯಾವೊಬ್ಬ ವ್ಯಕ್ತಿಯ ಮರಣದಲ್ಲಿ ಪರಿಣಿಮಿಸಿದರೆ ಆಗ ಮರಣ ದಂಡನೆಯಿಂದ ಅಥವಾ ಆಜೀವ ಕಾರವಾಸದಿಂದ ದಂಡಿತನಾತಕ್ಕದ್ದು ಮತ್ತು ಒಂದು ಲಕ್ಷ ರುಪಾಯಿಗಳಿಗೆ ಕಡಿಮೆಯಾಗಿರತಕ್ಕದ್ದಲ್ಲದ ಜುಲ್ಮಾನೆ ವಿಧಿಸಲಾಗಿತ್ತು.

 

 

ಇತರೆ ಯಾವುದೇ ಯಾವುದೇ ಪ್ರಕರಣದಲ್ಲಿ 5 ವರ್ಷಗಳ ಅವಧಿಗೆ ಕಡಿಮೆಯಲ್ಲದ ಆದರೆ ಆಜೀವಾವಧಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಿಂದ ದಂಡಿಸಬಹುದಾಗಿತ್ತು. ಮತ್ತು 5 ಲಕ್ಷ ರುಪಾಯಿಗಳಿಗೆ ಕಡಿಮೆಯಾಗಿರತಕ್ಕದ್ದಲ್ಲದ ದಂಡ ವಿಧಿಸಬಹುದಾಗಿತ್ತು.

 

ಯಾವೊಬ್ಬನು ಒಂದು ವ್ಯವಸ್ಥಿತ ಅಪರಾಧವನ್ನು ಅಥವಾ ವ್ಯವಸ್ಥಿತ ಅಪರಾಧಕ್ಕೆ ಪೂರ್ವ ಸಿದ್ಧತೆ ಮಾಡಿಕೊಡುವ ಯಾವುದೇ ಕೃತ್ಯವನ್ನು ನಡೆಸುವ ಒಳಸಂಚು ಮಾಡಿದರೆ ಅಥವಾ ನಡೆಸಲು ಯತ್ನಿಸಿದರೆ ಅಥವಾ ಪ್ರತಿಪಾದಿಸಿದರೆ, ದುಷ್ಪೇರಿಸಿದರೆ ಅಥವಾ ಗೊತ್ತಿದ್ದೂ ಅನುಕೂಲ ಮಾಡಿಕೊಟ್ಟರೇ 5 ವರ್ಷಗಳ ಅವಧಿಗೆ ಕಡಿಮೆಯಿಲ್ಲದ ಆದರೆ ಜೀವಾವಧಿವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಿಂದ ದಂಡಿತನಾಗತಕ್ಕದದು ಮತ್ತು 5 ಲಕ್ಷ ರುಪಾಯಿಗೆ ಕಡಿಮೆ ಇಲ್ಲದ ದಂಡವನ್ನು ವಿಧಿಸಬಹುದಾಗಿತ್ತು.

 

ಯಾವೊಬ್ಬನು ವ್ಯವಸ್ಥಿತ ಅಪರಾಧಿಗಳ ಕೂಟದ ಯಾವೊಬ್ಬ ಸದಸ್ಯನಿಗೆ ಆಶ್ರಯ ನೀಡಿದರೇ ಅಥವಾ ಬಚ್ಚಿಟ್ಟರೇ ಅಥವಾ ಆಶ್ರಯ ನೀಡಲು ಅಥವಾ ಬಚ್ಚಿಡಲು ಪ್ರಯತ್ನ ಮಾಡಿದರೇ 5 ವರ್ಷಗಳ ಅವಧಿಗೆ ಕಡಿಮೆಯಿಲ್ಲದ ಆದರೆ ಜೀವಾವಧಿವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 5 ಲಕ್ಷ ರುಪಾಯಿಗಳ ಜುಲ್ಮಾನೆ ವಿಧಿಸಲು ಅವಕಾಶವಿತ್ತು.

 

 

ಇದೇ ಮೂಲ ಕಾಯ್ದೆಗೆ ಮತ್ತಷ್ಟು ಅಂಶಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.

 

ಈ ಮೂಲ ಕಾಯ್ದೆಯ ಪ್ರಕರಣ 3ರಲ್ಲಿಯೇ ಸಣ್ಣ ಸಂಘಟಿತ ಅಪರಾಧಕ್ಕೆ ಶಿಕ್ಷೆ ವಿಧಿವಿಧಾನಗಳ ಕುರಿತು 3 ಎ ರಲ್ಲಿ ಸೇರ್ಪಡೆಗೊಳಿಸಲಾಗಿದೆ.

 

3 ಎ ಪ್ರಕರಣದ ಪ್ರಕಾರ ಒಬ್ಬಂಟಿಯಾಗಿ ಅಥವಾ ಜಂಟಿಯಾಗಿ ಒಂದು ಗುಂಪು ಅಥವಾ ಗ್ಯಾಂಗ್‌ನ ಸದಸ್ಯರಾಗಿ ಕಳ್ಳತನ, ಕಸಿದುಕೊಳ್ಳುವಿಕೆ, ವಂಚನೆ, ಟಿಕೆಟ್‌ಗಳ ಅನಧಿಕೃತ ಮಾರಾಟ, ಅನಧಿಕೃತ ಬೆಟ್ಟಿಂಗ್ ಅಥವಾ ಜೂಜಾಟ, ಸಾರ್ವಜನಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾರಾಟ ಅಥವಾ ಯಾವುದೇ ರೀತಿಯ ಅಪರಾಧ ಕೃತ್ಯವನ್ನು ಎಸಗಿದರೆ, ಅವರನ್ನು ಸಣ್ಣ ಸಂಘಟಿತ ಅಪರಾಧ ಎಂದು ಕರೆಯಲಾಗುತ್ತದೆ.

 

ಈ ಉದ್ದೇಶಗಳಿಗಾಗಿ ಕಳ್ಳತನವು ತಂತ್ರದ ಕಳ್ಳತನ, ವಾಹನ, ವಾಸಸ್ಥಳ ಅಥವಾ ವ್ಯಾಪಾರ ಆವರಣದಿಂದ ಕಳ್ಳತನ, ಸರಕು ಕಳ್ಳತನ, ಪಿಕ್ ಪಾಕೆಟ್ ಮಾಡುವುದು, ಕಾರ್ಡ್ ಸ್ಕಿಮ್ಮಿಂಗ್ ಮೂಲಕ ಕಳ್ಳತನ, ಅಂಗಡಿ ಕಳ್ಳತನ ಮತ್ತು ಎಟಿಎಂ ಕಳ್ಳತನವನ್ನು ತಿದ್ದುಪಡಿಯಲ್ಲಿ ಸೇರ್ಪಡೆಗೊಳಿಸಿದೆ.

 

 

‘ಯಾವುದೇ ಸಣ್ಣ ಸಂಘಟಿತ ಅಪರಾಧವನ್ನು ಮಾಡುವ ಯಾರೇ ಆಗಲಿ ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಆದರೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಮತ್ತು ದಂಡಕ್ಕೂ ಗುರಿಯಾಗುತ್ತಾರೆ,’ ಎಂದು ವಿವರಿಸಿದೆ.

 

ಮೂಲ ಕಾಯ್ದೆಯ 23 ಪ್ರಕರಣದಲ್ಲೇನಿದೆ?

 

ಅಪರಾಧಗಳ ಸಂಬಂಧದಲ್ಲಿ ಪೂರ್ವ ಭಾವನೆಯ ಕುರಿತಾಗಿರುವ ಪ್ರಕರಣದಲ್ಲಿಯೂ ಮತ್ತಷ್ಟು ಅಂಶಗಳನ್ನು ಸೇರ್ಪಡೆಗೊಳಿಸುತ್ತಿದೆ.

 

ಪ್ರಕರಣದ 23 ಎ ಅಪರಾಧಿ ಮಾನಸಿಕ ಸ್ಥಿತಿಯ ಊಹೆ ಎಂಬ ಹೊಸ ಪ್ರಕರಣವನ್ನು 2025ರ ತಿದ್ದುಪಡಿ ವಿಧೇಯಕದಲ್ಲಿ ಸೇರ್ಪಡೆಗೊಳಿಸುತ್ತಿದೆ.

 

ಈ ಕಾಯ್ದೆಯಡಿಯಲ್ಲಿ ಆರೋಪಿಯ ಮಾನಸಿಕ ಸ್ಥಿತಿಯ ಅಗತ್ಯವಿರುವ ಯಾವುದೇ ಅಪರಾಧಕ್ಕಾಗಿ, ವಿಶೇಷ ನ್ಯಾಯಾಲಯವು ಅಂತಹ ಮಾನಸಿಕ ಸ್ಥಿತಿಯ ಅಸ್ತಿತ್ವವನ್ನು ಊಹಿಸುತ್ತದೆ. ಆದರೆ ಆ ಪ್ರಾಸಿಕ್ಯೂಷನ್‌ನಲ್ಲಿ ಅಪರಾಧವೆಂದು ಆರೋಪಿಸಲಾದ ಕೃತ್ಯಕ್ಕೆ ಸಂಬಂಧಿಸಿದಂತೆ ಅವನಿಗೆ ಅಂತಹ ಯಾವುದೇ ಮಾರಕ ಸ್ಥಿತಿ ಇರಲಿಲ್ಲ ಎಂಬ ಅಂಶವನ್ನು ಸಾಬೀತುಪಡಿಸುವುದು ಆರೋಪಿಗೆ ರಕ್ಷಣೆಯಾಗಿರುತ್ತದೆ ಎಂದು ಹೇಳಿದೆ.
ಒಂದು ಅಪರಾಧದ ಸಂಜ್ಞೇಯತೆ ಮತ್ತು ತನಿಖೆ ವಿಧಿ ವಿಧಾನಗಳ ಕುರಿತು ಮೂಲ ಕಾಯ್ದೆಯ 24ಕ್ಕೂ ತಿದ್ದುಪಡಿ ತರಲಿದೆ.

 

ಈ ಅಧಿನಿಯಮದ ಅಡಿಯಲ್ಲಿ ವ್ಯವಸ್ಥಿತ ಅಪರಾಧದ ಒಂದು ಅಪರಾಧವನ್ನು ಎಸಗಲಾಗಿದೆ ಎಂಬ ಮಾಹಿತಿಯನ್ನು ಡೆಪ್ಯುಟಿ ಇನ್ಸ್‌ಪೆಕ್ಟರ್‍‌ ಜನರಲ್‌ ಅಫ್‌ ಪೊಲೀಸ್‌, ಇವರ ದರ್ಜೆಗೆ ಕಡಿಮೆಯಿಲ್ಲದ ಒಬ್ಬ ಪೊಲೀಸ್‌ ಅಧಿಕಾರಿಯ ಪೂರ್ವ ಅನುಮೋನದೆಯ ಹೊರತಾಗಿ ಒಬ್ಬ ಪೊಲಿಸ್‌ ಅಧಿಕಾರಿಯು ದಾಖಲು ಮಾಡತಕ್ಕದ್ದಲ್ಲ ಎಂದಿತ್ತು.

 

ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಒಂದು ಅಪರಾಧದ ತನಿಖೆಯನ್ನು ಡೆಪ್ಯುಟಿ ಸೂಪರಿಟೆಂಡೆಂಟ್‌ ಆಫ್‌ ಪೊಲಿಸ್‌ ಇವರ ದರ್ಜೆಗೆ ಕಡಿಮೆ ದರ್ಜೆಯ ಒಬ್ಬ ಪೊಲೀಸ್‌ ಅಧಿಕಾರಿಯು ನಡೆಸತಕ್ಕದ್ದಲ್ಲ. ವಿಶೇಷ ನ್ಯಾಯಾಲಯವು ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಅಪರಾಧದ ಸಂಜ್ಞೇಯತೆಯನ್ನು ಅಪರ ಪೊಲಿಸ್‌ ಮಹಾನದಿಏFಶಕರ ದರ್ಜೆಗಿಂತ ಕಡಿಮೆಯಲ್ಲದ ಒಬ್ಬ ಪೊಲೀಸ್‌ ಅಧಿಕಾರಿಯ ಪೂರ್ವ ಮಂಜೂರಾತಿಯ ಹೊರತು ಕೈಗೊಳ್ಳತಕ್ಕದ್ದಲ್ಲ ಎಂದಿದೆ.

 

2025ರಲ್ಲಿ ತಿದ್ದುಪಡಿ ವಿಧೇಯಕದಲ್ಲೇನಿರಲಿದೆ?

 

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (2023 ರ ಕೇಂದ್ರ ಕಾಯ್ದೆ 46) ಯಲ್ಲಿ ಉಲ್ಲೇಖಿಸಲಾದ ಯಾವುದೇ ವಿಷಯಗಳ ಹೊರತಾಗಿಯೂ, ಅಪರಾಧದ ಅರಿವು ಮತ್ತು ತನಿಖೆ ಇರಲಿದೆ. ಈ ಸಂಘಟಿತ ಅಪರಾಧದ ಕಾಯ್ದೆಯಡಿಯಲ್ಲಿನ ದಂಡನಾ ವಿಭಾಗಗಳನ್ನು ಪೊಲೀಸ್ ಅಧೀಕ್ಷಕ ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯ ಪೊಲೀಸ್ ಅಧಿಕಾರಿಯ ಪೂರ್ವಾನುಮೋದನೆ ಇಲ್ಲದೆ ಅನ್ವಯಿಸಬಹುದು ಎಂದು ತಿದ್ದುಪಡಿ ವಿಧೇಯಕದಲ್ಲಿ ವಿವರಿಸಿದೆ.

 

ಈ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಯಾವುದೇ ಅಪರಾಧದ ತನಿಖೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್ ದರ್ಜೆಗಿಂತ ಕಡಿಮೆ ಇರುವ ಪೊಲೀಸ್ ಅಧಿಕಾರಿ ನಡೆಸಬಾರದು ಎಂದಿದೆ.

SUPPORT THE FILE

Latest News

Related Posts