ಬೆಂಗಳೂರು: ಕೇಂದ್ರ ರೈಲ್ವೆ ಖಾತೆಯ ಈಗಿನ ರಾಜ್ಯ ಸಚಿವ ವಿ ಸೋಮಣ್ಣ ಅವರ ಪುತ್ರರಿಬ್ಬರು ನಿರ್ದೇಶಕರಾಗಿದ್ದ ಮಾತಾ ಮಿನರಲ್ಸ್ ಕಂಪನಿಯು ಅನಧಿಕೃತ ಗಣಿಗಾರಿಕೆ ಮತ್ತು ಕಬ್ಬಿಣದ ಅದಿರು ಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ 53.12 ಕೋಟಿ ರು ದಂಡದ ಮೊತ್ತವು ಕಳೆದ 12 ವರ್ಷಗಳಿಂದಲೂ ವಸೂಲಾಗಿಲ್ಲ.
ಹಾಗೆಯೇ ಈ ಕಂಪನಿಯಿಂದ 53.12 ಕೋಟಿ ರು ಗಳನ್ನು ಭೂ ಕಂದಾಯ ಬಾಕಿ ರೂಪದಲ್ಲಿ ವಸೂಲು ಮಾಡುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ವರ್ಷದ ಹಿಂದೆಯೇ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದರು.
ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಇದುವರೆಗೂ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ಅಲ್ಲದೇ ಮಾತಾ ಮಿನರಲ್ಸ್ ಸಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಜಾಯಿಷಿಯನ್ನು ನೀಡಿಲ್ಲ. ಹಾಗೆಯೇ ದಂಡದ ಮೊತ್ತವನ್ನು ಪಾವತಿಸಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಈ ಬಗ್ಗೆ ಗಂಭೀರವಾಗಿ ಗಮನಹರಿಸಿಲ್ಲ ಎಂದು ಗೊತ್ತಾಗಿದೆ.
ರೈಲ್ವೇ ಸೈಡಿಂಗ್‌ಗಳಿಂದ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿ ಸರ್ಕಾರಕ್ಕೆ 1.50 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂದು ಈಚೆಗಷ್ಟೇ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನಾಧರಿಸಿ ಎಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿಯೇ ಸಚಿವ ಸಂಪುಟ ಉಪ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಿತಿಯು ಸರಣಿ ಸಭೆಗಳನ್ನೂ ನಡೆಸುತ್ತಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರ ಪುತ್ರರಿಬ್ಬರು ನಿರ್ದೇಶಕರಾಗಿದ್ದ ಮಾತಾ ಮಿನರಲ್ಸ್ ಕಂಪನಿಯಿಂದ 53.12 ಕೋಟಿ ರು ವಸೂಲು ಮಾಡದೇ ಇರುವ ಪ್ರಕರಣವು ಮುನ್ನೆಲೆಗೆ ಬಂದಿದೆ.
53.12 ಕೋಟಿ ರು ದಂಡದ ಮೊತ್ತವನ್ನು ವಸೂಲು ಮಾಡಬೇಕು ಎಂದು 2024ರ ಆಗಸ್ಟ್ 3ರಂದು ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ಸರ್ಕಾರಕ್ಕೆ ಬರೆದಿದ್ದ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
ಉಪ ನಿರ್ದೇಶಕರ ಪತ್ರದಲ್ಲೇನಿದೆ?
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಮೂಡಲಪಾಳ್ಯ ಮತ್ತು ಕೊಂಡ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಾತಾ ಮಿನರಲ್ಸ್ ಗೆ ಮಂಜೂರಾಗಿದ್ದ ಗಣಿ ಗುತ್ತಿಗೆ (ಸಂಖ್ಯೆ 2600 (1975)ಯ ಪ್ರದೇಶದಲ್ಲಿ ಗಣಿಗಾರಿಕೆ ಯೋಜನೆ ಇಲ್ಲದೇ 2004ರಿಂದ 2006ರ ಸಾಲಿನಲ್ಲಿ ಗಣಿಗಾರಿಕೆ ನಡೆಸಲಾಗಿದೆ.
ಹಾಗೂ 2006ರಿಂದ 2009ನೇ ಸಾಲಿನಲ್ಲಿ ಗಣಿಗಾರಿಕೆ ಯೋಜನೆಯಲ್ಲಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಗಣಿಗಾರಿಕೆ ನಡೆಸಿದೆ ಕಬ್ಬಿಣ ಅದರಿನ್ನು ಉತ್ಪಾದಿಸಿ, ಸಾಗಾಣಿಕೆ ಮಾಡಿದೆ. ಇದು ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಎಂದು ಪರಿಗಣಿಸಿ ಖನಿಜದ ಮೌಲ್ಯವನ್ನು ವಸೂಲು ಮಾಡಬೇಕು ಎಂದು ಮಹಾಲೇಖಪಾಲರ ತಂಡವು (2013ರ ಫೆ.5) ಆಕ್ಷೇಪಣೆ ವ್ಯಕ್ತಪಡಿಸಿದೆ.
ಗಣಿಗಾರಿಕೆ ಯೋಜನೆ ಇಲ್ಲದಿದ್ದರೂ 2004ರಿಂದ 2006ರೆಗೆ ಗಣಿಗಾರಿಕೆ ನಡೆಸಿ 3,56, 466 ಮೆಟ್ರಿಕ್ ಟನ್‌ನಷ್ಟು ಕಬ್ಬಿಣದ ಅದಿರನ್ನು ಉತ್ಪಾದನೆ ಮಾಡಿ ಸಾಗಾಣಿಕೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯವು 24.47 ಕೋಟಿ ರು, ಆಗಿದೆ. 2006ರಿಂದ 2009ವರೆಗೆ 2,77, 295 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆ ಮಾಡಿ ಸಾಗಾಣಿಕೆ ಮಾಡಲಾಗಿದೆ. ಇದರ ಒಟ್ಟು ಮೌಲ್ಯವು 28.65 ಕೋಟಿ ರು ಆಗಿದೆ. ಒಟ್ಟಾರೆ 6,33,761 ಮೆಟ್ರಿಕ್ ಟನ್‌ನಷ್ಟು ಕಬ್ಬಿಣ ಅದಿರು ಉತ್ಪಾದಿಸಿ ಸಾಗಾಣಿಕೆ ಮಾಡಲಾಗಿದೆ. ಒಟ್ಟಾರೆ ಮೌಲ್ಯವು 53.12 ಕೋಟಿ ರು ಯಷ್ಟಿದೆ ಎಂದು ಸಿಎಜಿಯ ಆಕ್ಷೇಪಣೆಯ ಮಾಹಿತಿಯನ್ನು ಉಲ್ಲೇಖಿಸಿರುವುದು ಪತ್ರದಿಂದ ಗೊತ್ತಾಗಿದೆ.
ಮಹಾಲೇಖಪಾಲರ ಆಕ್ಷೇಪಣೆಯಂತೆ ಒಟ್ಟು 53.12 ಕೋಟಿ ರುಗಳ ಖನಿಜ ಮೌಲ್ಯವನ್ನು ಅಂತಿಮ ನೋಟೀಸ್ ದಿನಾಂಕದಿಂದ 15 ದಿನದೊಳಗಾಗಿ ಈ ಕಚೇರಿಗೆ ಪಾವತಿಸಬೇಕು. ಈ ಮೊತ್ತವನ್ನು ಪಾವತಿಸದಿದ್ದಲ್ಲಿ ಭೂ ಕಂದಾಯ ಬಾಕಿ ಎಂದು ಪರಿಗಣಿಸಬೇಕು. ಆರ್‍ಅರ್‍ಸಿ ಜಾರಿ ಮಾಡಿ ವಸೂಲಿಗೆ ಕ್ರಮ ಕೈಗೊಳ್ಳಲು ಕೇಂದ್ರ ಕಚೇರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅಂತಿಮ ನೋಟೀಸ್ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
‘ಆದರೆ ಗುತ್ತಿಗೆದಾರರು ಇದುವರೆಗೂ ಯಾವುದೇ ಸಮಜಾಯಿಷಿ ನೀಡಿರುವುದಿಲ್ಲ. ಹಾಗೂ ದಂಡ/ಬಾಕಿ ಮೊತ್ತವನ್ನು ಪಾವತಿಸಿರುವುದಿಲ್ಲ. ಆದ್ದರಿಂದ ಎಂಎಂ(ಡಿಅಂಡ್‌ಆರ್) ಕಾಯ್ದೆ 1957ರ ಕಲಂ 25ರಂತೆ ಗಣಿಗುತ್ತಿಗೆಗೆ ಸಂಬಂಧಿಸಿದಂತೆ ಬಾಕಿಯನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿಗಾಗಿ ಆರ್‍ಆರ್‍ಸಿ ಜಾರಿ ಮಾಡಲು ಮುಂದಿನ ಕ್ರಮ ಕೈಗೊಳ್ಳಬೇಕು,’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತುಮಕೂರು ಜಿಲ್ಲೆಯ ಉಪ ನಿರ್ದೇಶಕರು ಇಲಾಖೆಯ ನಿರ್ದೇಶಕರಿಗೆ 2024ರ ಆಗಸ್ಟ್ 3ರಂದು ವರದಿ ನೀಡಿರುವುದು ಗೊತ್ತಾಗಿದೆ.
ಕೇಂದ್ರ ಸಚಿವ ವಿ ಸೋಮಣ್ಣ ಅವರ ಕುಟುಂಬ ಒಡೆತನದಲ್ಲಿದ್ದ ಮಾತಾ ಮಿನರಲ್ಸ್, ಮಾಜಿ ಶಾಸಕ ಅನಿಲ್ ಲಾಡ್ ಒಡೆತನದ ಕಂಪನಿಯೂ ಸೇರಿದಂತೆ ತೀವ್ರ ತರದ ಅಕ್ರಮ ಗಣಿಗಾರಿಕೆ ನಡೆಸಿದ್ದ ಐದು ಕಂಪನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಮಾಡಿದ್ದ ಶಿಫಾರಸ್ಸನ್ನು ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸಿರಲಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲೇ ಈ ಶಿಫಾರಸ್ಸು, ಸಚಿವ ಸಂಪುಟದ ಮುಂದಿತ್ತು. ಈ ಶಿಫಾರಸ್ಸಿನಂತೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರವು ಸಿಬಿಐ ತನಿಖೆಗೆ ವಹಿಸಲು ಆದೇಶಿಸಿರಲಿಲ್ಲ. ಆ ನಂತರ ಬಂದ ಸರ್ಕಾರಗಳೂ ಸಹ ಈ ಐದು ಗಣಿ ಗುತ್ತಿಗೆಗಳ ಕುರಿತು ಸಿಬಿಐ ತನಿಖೆಗೆ ವಹಿಸಲು ಕ್ರಮ ವಹಿಸಿರಲಿಲ್ಲ.
ಮಾತಾ ಸೇರಿ 5 ಗಣಿ ಗುತ್ತಿಗೆಗಳ ವಿರುದ್ಧ ಸಿಬಿಐ ತನಿಖೆ; ಶಿಫಾರಸ್ಸು ಕೈಬಿಟ್ಟು ಸೋಮಣ್ಣರನ್ನು ರಕ್ಷಿಸಿದ್ದರೇ ಸಿದ್ದು?
ಉನ್ನತ ಮಟ್ಟದ ಸಮಿತಿಯು 2011ರ ಅಕ್ಟೋಬರ್ 24ರಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಹಾಗೂ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಬೇಕು. ಸಚಿವ ಸಂಪುಟ ಟಿಪ್ಪಣಿಯ ಕಂಡಿಕೆ 15ರಲ್ಲಿ ನಮೂದಿಸಿರುವಂತೆ ಉನ್ನತ ಮಟ್ಟದ ಸಮಿತಿ ಮಾಡಿರುವ ಸಲಹೆಗಳನ್ನು ಒಪ್ಪಿಕೊಂಡು ಅದರಂತೆ ಕ್ರಮ ವಹಿಸಲು ಒಪ್ಪಿಗೆ ನೀಡಬೇಕು ಎಂದು ಸಚಿವ ಸಂಪುಟದ ಮುಂದೆ ಕೋರಿತ್ತು.
ಅಲ್ಲದೇ ಲೋಕಾಯುಕ್ತರು 2011ರಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಮತ್ತು ಅದನ್ನಾಧರಿಸಿ ಕ್ರಮ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಕುರಿತು ಉನ್ನತ ಮಟ್ಟದ ಸಮಿತಿಯು ಸೂಚಿಸಿರುವ ಕ್ರಮಗಳಿಗೆ (ಪುಟ 11-17, ಅನುಬಂಧ 5) ಅನುಮೋದನೆ ನೀಡಬೇಕು ಎಂದೂ ಕೋರಿತ್ತು.
ಇದೇ ಪ್ರಸ್ತಾವನೆಯಲ್ಲಿಯೇ ತೀವ್ರ ತರದ ಅಕ್ರಮ ಗಣಿಗಾರಿಕೆ ಎಸಗಿರುವ ಡೆಕ್ಕನ್ ಮೈನಿಂಗ್, ಕೆನರಾ ಮಿನರಲ್ಸ್, ಲತಾ ಮೈನಿಂಗ್, ಮಾತಾ ಮಿನರಲ್ಸ್ ಮತ್ತು ಆರ್ ಪ್ರವೀಣ್ ಚಂದ್ರ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಶಿಫಾರಸ್ಸು ಮಾಡಬಹುದು ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಕೆ ಅಮರನಾರಾಯಣ ಅವರು ಶಿಫಾರಸ್ಸು ಮಾಡಿದ್ದರು.
ಈ ಕುರಿತು ಕ್ರಮ ಕೈಗೊಂಡಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ನೀಡಿರುವ ಉತ್ತರದ ಪ್ರಕಾರ ಈ ಐದೂ ಗಣಿ ಗುತ್ತಿಗೆಗಳ ವಿರುದ್ಧ ಸಿಬಿಐ ತನಿಖೆಗೆ ವಹಿಸಿರುವ ಕುರಿತು ಯಾವುದೇ ಆದೇಶ, ಮಾಹಿತಿಯೂ ಲಭ್ಯವಿಲ್ಲ ಎಂದು ಉತ್ತರ ಒದಗಿಸಿತ್ತು.
ಇಲಾಖೆ ನೀಡಿರುವ ಉತ್ತರದಲ್ಲೇನಿದೆ?
ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಉನ್ನತಾಧಿಕಾರಸ್ಥ ಸಮಿತಿಯು ತೀವ್ರವಾಗಿ ಅಕ್ರಮ ನಡೆದಿರುವ 51 ಸಿ ವರ್ಗದ ಗಣಿ ಗುತ್ತಿಗೆಗಳನ್ನು ವರ್ಗೀಕರಿಸಿದೆ. ಈ 51 ಸಿ ವರ್ಗದ ಗಣಿ ಗುತ್ತಿಗೆಗಳ ಪೈಕಿ ಡೆಕ್ಕನ್ ಮೈನಿಂಗ್ ಕಂಪನಿ ಲಿ.., ಕೆನರಾ ಮಿನರಲ್ಸ್ ಲಿ., ಲತಾ ಮೈನಿಂಗ್ ಕಂಪನಿ ಲಿ., ಮತ್ತು ಮಾತಾ ಮಿನರಲ್ಸ್ ಪ್ರೈವೈಟ್ ಲಿ., ಗಣಿ ಗುತ್ತಿಗೆಗಳು ಸಹ ಒಳಗೊಂಡಿರುತ್ತದೆ. ಈ ಗಣಿ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಹಾಗೂ ವಿಶೇಷ ತನಿಖಾ ದಳದಿಂದ ತನಿಖೆ ನಡೆಯುತ್ತಿರುವುದು ಕಂಡು ಬರುತ್ತದೆ.
ಹಾಗೆಯೇ ಆರ್ ಪ್ರವೀಣ್ ಚಂದ್ರ ಇವರ ಗಣಿ ಗುತ್ತಿಗೆ ಸಂಬಂಧ ತನಿಖೆಯ ಕುರಿತು ಯಾವುದೇ ಮಾಹಿತಿ ಇರುವುದು ಕಂಡು ಬರುತ್ತಿಲ್ಲ. ಅಲ್ಲದೇ ಮೇಲಿನ ಗಣಿ ಗುತ್ತಿಗೆಗಳ ಸಂಬಂಧ ಸರ್ಕಾರದಿಂದ ಸಿಬಿಐ ತನಿಖೆ ನಡೆಸಲು ವಹಿಸಿರುವ ಕುರಿತು ಯಾವುದೇ ಆದೇಶ, ಮಾಹಿತಿ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಒದಗಿಸಿತ್ತು.
ಅಷ್ಟೇ ಅಲ್ಲ ‘ದಿ ಫೈಲ್’ ಈ ಬಗ್ಗೆ ಗೃಹ ಇಲಾಖೆಯಿಂದಲೂ ಆರ್‍ಟಿಐ ಅಡಿಯಲ್ಲಿ ಮಾಹಿತಿಯನ್ನು ಪಡೆದುಕೊಂಡಿತ್ತು.
‘ಡೆಕ್ಕನ್ ಮೈನಿಂಗ್, ಕೆನರಾ ಮಿನರಲ್ಸ್, ಲತಾ ಮೈನಿಂಗ್, ಮಾತಾ ಮಿನರಲ್ಸ್, ಆರ್ ಪ್ರವೀಣ್ ಚಂದ್ರ ಈ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಲು ಸರ್ಕಾರದ ಹಂತದಲ್ಲಿ ಸಿಬಿಐಗೆ ವಹಿಸಿರುವುದಿಲ್ಲ,’ ಎಂದು ಗೃಹ ಇಲಾಖೆಯು ಮಾಹಿತಿ ನೀಡಿತ್ತು.
ಮತ್ತೊಂದು ವಿಶೇಷವೆಂದರೇ 2011ರಲ್ಲಿಯೂ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದಲೇ ಮಾತಾ ಮಿನರಲ್ಸ್ ಖನಿಜ ಗಣಿ ಗುತ್ತಿಗೆ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿದ್ದರು.
2011ರ ನಂತರ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಮಾತಾ ಮಿನರಲ್ಸ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಲ್ಲ. ಇದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿತ್ತು.
ಮಾತಾ ಮಿನರಲ್ಸ್ , ಅನಧಿಕೃತವಾಗಿ ಕಬ್ಬಿಣ ಅದಿರನ್ನು ರಫ್ತು ಮಾಡಿದ್ದ ಪ್ರಕರಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂದಿನ ನಿರ್ದೇಶಕ ಡಾ ಎಂ ಬಸಪ್ಪ ರೆಡ್ಡಿ ಅವರಿಂದ 77.34 ಕೋಟಿ ರು. ವಸೂಲಿಗೆ ಸಂಬಂಧಿಸಿದಂತೆ ಬಿಗಿಯಾದ ಕ್ರಮ ವಹಿಸಿಲ್ಲ.
ಎಸ್ ಎಂ ಕೃಷ್ಣ, ಧರ್ಮಸಿಂಗ್, ಎಚ್ ಡಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಡಾ ಎಂ ಬಸಪ್ಪ ರೆಡ್ಡಿ ಅವರ ದುರ್ನಡತೆಯಿಂದ ಮಾತಾ ಮಿನರಲ್ಸ್ ಕಂಪನಿ, 68,23,95,611 ರೂಪಾಯಿ ಮೌಲ್ಯದ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ರಫ್ತು ಮಾಡಿತ್ತು.
ಇವರ ದುರ್ನಡತೆಯಿಂದಾಗಿ ಸರ್ಕಾರಕ್ಕೆ 68.23 ಕೋಟಿ ರು.ನಷ್ಟವಾಗಿತ್ತು ಎಂದು ಮೊದಲು ಮಾಡಿದ್ದ ಅಂದಾಜನ್ನು ಪರಿಷ್ಕರಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 9.11 ಕೋಟಿ ರು.ಹೆಚ್ಚಳ ಮಾಡಿ ಒಟ್ಟು 77.34 ಕೋಟಿ ರು.ಗಳನ್ನು ವಸೂಲು ಮಾಡಲು ಅಸಲು ದಾವೆ ಹೂಡಲು 2020ರ ಜುಲೈ 1ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು.
1998ರ ಮೇ 5ರಿಂದ 2004ರ ಅಕ್ಟೋಬರ್ 31ರವರೆಗೆ ಡಾ ಬಸಪ್ಪ ರೆಡ್ಡಿ ಅವರು ಗಣಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಭಾರತ ಸರ್ಕಾರದ ಪೂರ್ವಾನುಮೋದನೆ ಇಲ್ಲದೆ ಮಾತಾ ಮಿನರಲ್ಸ್ ಪರವಾಗಿ ಗಣಿ ಗುತ್ತಿಗೆ ನಕ್ಷೆಯನ್ನು 2000ರ ಅಕ್ಟೋಬರ್ 23ರಂದು ಬದಲಾಯಿಸಲಾಗಿತ್ತು. ಬದಲಾವಣೆ ಮಾಡಿದ ದಿನಾಂಕದಿಂದ ಗುತ್ತಿಗೆ ಪ್ರದೇಶದಲ್ಲಿ 77.34 ಕೋಟಿ ರು. ಮೌಲ್ಯದ 641023 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಮತ್ತು 1,49 ಕೋಟಿ ರು.ಮೌಲ್ಯದ 7,347 ಮೆಟ್ರಿಕ್ ಟನ್ ಮ್ಯಾಂಗನೀಸ್ ಅದಿರು ರವಾನೆಯಾಗಿತ್ತು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಡಾ ಎನ್ ಶಿವಶಂಕರ್ ಅವರು ಬರೆದಿದ್ದ ಪತ್ರದಲ್ಲಿ ವಿವರಿಸಲಾಗಿತ್ತು.
ಅಕ್ರಮ ಅದಿರು ರಫ್ತು; ಮಾತಾ ಮಿನರಲ್ಸ್ ಪ್ರಕರಣದಲ್ಲಿ ದಾವೆ ಹೂಡದ ಸರ್ಕಾರ
ಮಾತಾ ಮಿನರಲ್ಸ್ ಗಣಿ ಪ್ರದೇಶದಿಂದ ರವಾನೆಯಾಗಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಗುಣಮಟ್ಟಕ್ಕೆ ಅನುಗುಣವಾಗಿ ಸಾಗಿಸಿದ ಕಬ್ಬಿಣದ ಅದಿರಿಗೆ 66,70,72,434, ಮ್ಯಾಂಗನೀಸ್ ಅದಿರಿಗೆ 1,53,23,177 ಸೇರಿ ಒಟ್ಟು 68,23,95,611 ವೌಲ್ಯದ ಖನಿಜ ರವಾನೆಯಾಗಿದೆ ಎಂದು ಡಾ.ಬಸಪ್ಪ ರೆಡ್ಡಿ ಅವರ ವಿರುದ್ಧ ದೋಷಾರೋಪ ಹೊರಿಸಿತ್ತು.
ದೋಣಿಮಲೈ ರೇಂಜಿನ ಕಬ್ಬಿಣದ ಅದಿರಿನ ಮಾರಾಟ ಬೆಲೆ ಅಧಾರದ ಮೇಲೆ ಮತ್ತು ಮ್ಯಾಂಗನೀಸ್ ಅದಿರಿಗೆ 2002ರಿಂದ ಲಭ್ಯ ಇದ್ದ ಸರಾಸರಿ ಮಾರಾಟ ಬೆಲೆಗೆ ಸಂಬಂಧಿಸಿದಂತೆ ಎನ್‌ಎಂಡಿಸಿ ಒದಗಿಸಿದ್ದ ದರದ ಆಧಾರದ ಮೇಲೆ ಈ ಲೆಕ್ಕಾಚಾರವನ್ನು ಮಾಡಿತ್ತು.
ಸರ್ಕಾರಕ್ಕೆ ಸೇರಿರುವ ಸಂಪತ್ತನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಲು ಅನುವು ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಲು ಬಸಪ್ಪರೆಡ್ಡಿ ಅವರು ಕಾರಣಕರ್ತರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಿದ್ದ ಗಣಿ ಇಲಾಖೆ ನಿರ್ದೇಶಕರಾಗಿದ್ದ ಶಂಕರನಾರಾಯಣ ಅವರು, ಬಸಪ್ಪ ರೆಡ್ಡಿ ಅವರು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1966ನ್ನು ಉಲ್ಲಂಘಿಸಿದ್ದಾರೆ ಎಂದು ವಿವರಿಸಿದ್ದರು. ಇವರ ವಿರುದ್ಧದ ಆರೋಪಗಳು, ಸಾಕ್ಷ್ಯಗಳು ಮತ್ತು ದಾಖಲೆಗಳು ನಿಖರವಾಗಿ ದೊರಕುತ್ತವೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ತಿಳಿಸಿದ್ದರು.
ಡಾ.ಬಸಪ್ಪರೆಡ್ಡಿ ಅಕ್ಟೋಬರ್ 31,2004ರಂದು ವಯೋ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ಹೊಂದಿ 4 ವರ್ಷ ಮೇಲ್ಪಟ್ಟಿರುವ ಕಾರಣ ಸರ್ಕಾರಕ್ಕೆ ಆದ ನಷ್ಟವನ್ನು ವಸೂಲಿ ಮಾಡಲು ಸಕ್ಷಮ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಸರ್ಕಾರ 5 ವರ್ಷದ ಹಿಂದೆಯೇ ಅನುಮತಿ ನೀಡಿತ್ತು. ಅದೇ ರೀತಿ, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ನಂತರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿತ್ತು. ಆದರೆ ಈ ಯಾವ ಪ್ರಕ್ರಿಯೆಗಳೂ ನಡೆದಿಲ್ಲ ಎಂದು ಗಣಿ ಇಲಾಖೆ ಮೂಲಗಳು ತಿಳಿಸಿವೆ.
ಬಸಪ್ಪ ರೆಡ್ಡಿ ಅವರು ನಿವೃತ್ತಿ ನಂತರದ ಎಲ್ಲಾ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ನಂತರ ಇವರು ಖಾಸಗಿ ಗಣಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಅವಧಿಯಲ್ಲಿ ಬಳ್ಳಾರಿ, ಚಿತ್ರದುರ್ಗ, ಬೆಳಗಾವಿ, ಚಿಕ್ಕಮಗಳೂರಿನಲ್ಲಿ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ್ದರು. ಈ ಅಕ್ರಮದಿಂದಾಗಿ ರಾಜ್ಯದ ಬೊಕ್ಕಸಕ್ಕೆ ರಾಜಸ್ವ ರೂಪದಲ್ಲಿ ಬರಬೇಕಿದ್ದ 6.14 ಲಕ್ಷ ರೂಪಾಯಿ ನಷ್ಟವಾಗಿತ್ತು.
ಅದೇ ರೀತಿ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದ ಬಸಪ್ಪರೆಡ್ಡಿ ಅವರ ಕಾರ್ಯವೈಖರಿಯಿಂದ ಕಬ್ಬಿಣದ ಅದಿರು ಹೆಚ್ಚು ಲಭ್ಯ ಇರುವ ಬಳ್ಳಾರಿಯಲ್ಲಿ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆದಿತ್ತು. ಈ ಅಕ್ರಮ ಅನುಮತಿಯಿಂದಾಗಿ ಹಲವು ಗಣಿ ಉದ್ದಿಮೆಗಳು ಸಾಕಷ್ಟು ಹಣ ಗಳಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು.
ಲೋಕಾಯುಕ್ತ ತನಿಖೆ ಪ್ರಕಾರ ಬಸಪ್ಪ ರೆಡ್ಡಿ ಅವರು 82 ಪ್ರಕರಣಗಳಲ್ಲಿ ಇಲಾಖೆಯ ಉಪ ನಿರ್ದೇಶಕರಿಗೆ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಸೂಚಿಸಿದ್ದರು. ಗಣಿಗಾರಿಕೆ ನಡೆಸಲು ಪರವಾನಿಗೆ ಇಲ್ಲದಿದ್ದರೂ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.