‘ಅನುಮೋದನೆಯಿಲ್ಲ, ಟೆಂಡರ್ ಪ್ರಕ್ರಿಯೆಯಿಲ್ಲ, ದಂಡವಿಲ್ಲ, ಗುಣಮಟ್ಟವೂ ಇಲ್ಲ’; ನ್ಯೂನತೆಗಳ ಸ್ವರ್ಗಸೀಮೆ ಅನಾವರಣ

ಬೆಂಗಳೂರು; ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಶೇ.40ರಷ್ಟು ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು 17 ದೂರುಗಳಿಗೆ ಸಂಬಂಧಿಸಿದಂತೆ ವಿಚಾರಣೆ ಆಯೋಗಕ್ಕೆ ಮಾಹಿತಿಯನ್ನೇ ನೀಡಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಹಾಗೆಯೇ ಆಡಳಿತಾತ್ಮಕ ಅನುಮೋದನೆ ಪಡೆಯದ, ಸರ್ಕಾರದ ಅನುಮೋದನೆಗೂ ಮೊದಲೇ ತಯಾರಿಸಿದ್ದ ಅಂದಾಜು ಪಟ್ಟಿ, ಕೃತಕವಾಗಿ ಪರಿಮಾಣವನ್ನು ಹೆಚ್ಚಿಸಿರುವುದು, ಟೆಂಡರ್ ಪ್ರಕ್ರಿಯೆಯನ್ನು ಪಾಲಿಸದೇ ನಡೆಸಿರುವ ಕಾಮಗಾರಿಗಳು, ಗುಣಮಟ್ಟ ಕಾಯ್ದುಕೊಳ್ಳದೇ ಇರುವ ಕಾಮಗಾರಿ ಅನುಷ್ಠಾನಗೊಳಿಸಿರುವುದು, ಕಾಮಗಾರಿ ನಿರ್ವಹಿಸದೇ ಇದ್ದರೂ ಬಿಲ್‌ ಪಾವತಿಸಿರುವುದು ಸೇರಿದಂತೆ ಹಲವು ಅಕ್ರಮಗಳು, ನಿಯಮಬಾಹಿರ ಚಟುವಟಿಕೆಗಳು, ಅಧಿಕಾರ ದುರುಪಯೋಗದ ಹಲವು ಮುಖಗಳನ್ನು ವಿಚಾರಣೆ ಆಯೋಗವು ವರದಿಯಲ್ಲಿ ತೆರೆದಿಟ್ಟಿದೆ.

 

ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ವಿಚಾರಣಾ ಆಯೋಗವು ಸಲ್ಲಿಸಿರುವ ವರದಿಯಲ್ಲಿನ ಅಂಶಗಳ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡ(ಎಸ್‍ಐಟಿ) ರಚಿಸಲು ಸಚಿವ ಸಂಪುಟ ನಿರ್ಧರಿಸಿರುವ ಬೆನ್ನಲ್ಲೇ ವಿಚಾರಣೆ ಆಯೋಗದ ವರದಿಯ ಸಂಪುಟಗಳಲ್ಲಿನ ಮಹತ್ವದ ಅಂಶಗಳು ಮುನ್ನೆಲೆಗೆ ಬಂದಿವೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2019ರ ಜುಲೈನಿಂದ 2023ರ ಮಾರ್ಚ್‌ ಅವಧಿಯಲ್ಲಿ ಈ ಐದು ಇಲಾಖೆಗಳಲ್ಲಿ 4.70 ಲಕ್ಷ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ 3.32 ಲಕ್ಷ ಕಾಮಗಾರಿಗಳು ಶೇ. 70ರಷ್ಟು ಪೂರ್ಣಗೊಂಡಿವೆ. ಆಯೋಗಕ್ಕೆ ನೀಡಿದ್ದ ಸೀಮಿತ ಗಡುವು ಮತ್ತು ಒದಗಿಸಿದ್ದ ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ 3.32 ಲಕ್ಷ ಅಗಾಧ ಸಂಖ್ಯೆಯ ಕಾಮಗಾರಿಗಳನ್ನು ತಪಾಸಣೆ ಕೈಗೊಳ್ಳುವುದು ಕಾರ್ಯಸಾಧುವಾಗಿಲ್ಲ ಎಂದು ವಿಚಾರಣೆ ಆಯೋಗವು ವರದಿಯಲ್ಲಿ ಹೇಳಿರುವುದು ಗೊತ್ತಾಗಿದೆ.

 

 

ಹೀಗಾಗಿ ಮಾದರಿ ಗಾತ್ರದ ಆಧಾರದಲ್ಲಿ (SAMPLE SIZE) ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಿತ್ತು. ಅದರಂತೆ ಜಿಲ್ಲಾವಾರು, ಇಲಾಖಾವಾರು ಹಾಗೂ ವರ್ಗ (ವೆಚ್ಚ)ವಾರು ಕಾಮಗಾರಿಗಳನ್ನು ವಿಂಗಡಿಸಿತ್ತು. ಮಾದರಿ ಗಾತ್ರದ ಪ್ರಕಾರ 1,729 ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಮಾಡಲಾಗಿತ್ತು.

 

 

1,719 ಕಾಮಗಾರಿಗಳಲ್ಲಿ 341 ನರೇಗಾ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ 1,378 ಕಾಮಗಾರಿಗಳಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿತ್ತು. ಈ ಕಾಮಗಾರಿಗಳ ನಿರ್ವಹಣೆಯಲ್ಲಿ ಹಲವು ನ್ಯೂನತೆಗಳನ್ನು ವಿಚಾರಣೆ ಆಯೋಗವು ಗಮನಿಸಿದೆ. ಅದನ್ನು ಶೇಕಡವಾರು ಪ್ರಮಾಣ ಮತ್ತು ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ವಿವರವಾದ ಪಟ್ಟಿಯನ್ನು ವರದಿಯಲ್ಲಿ ಒದಗಿಸಿರುವುದು ತಿಳಿದು ಬಂದಿದೆ.

 

ಲೋಕೋಪಯೋಗಿ ಇಲಾಖೆಯಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯದೇ 48 ಕಾಮಗಾರಿಗಳನ್ನು ನಿರ್ವಹಿಸಲಾಗಿತ್ತು.  ಸರ್ಕಾರದ ಆಡಳಿತಾತ್ಮಕ ಅನುಮೋದನೆಗೆ ಮೊದಲೇ 12 ಕಾಮಗಾರಿಗಳ ಅಂದಾಜು ಪಟ್ಟಿಯನ್ನು ತಯಾರಿಸಿತ್ತು. ಅಂದಾಜು ಪಟ್ಟಿಯನ್ನು ಅನುಸೂಚಿತ ದರಪಟ್ಟಿಗೆ, ತಾಂತ್ರಿಕ ವಿವರಣೆಗೆ ಅನುಗುಣವಾಗಿ ತಯಾರಿಸದಿರುವ ಮತ್ತು ಪರಿಮಾಣವನ್ನು ಕೃತಕವಾಗಿ ಹೆಚ್ಚಿಸಲಾಗಿದ್ದ ಕಾಮಗಾರಿಗಳ ಸಂಖ್ಯೆ ಐದರಷ್ಟಿತ್ತು. ಅದೇ ರೀತಿ ಟೆಂಡರ್‍‌ ಪ್ರಕ್ರಿಯೆ ಪಾಲಿಸದೇ 58 ಕಾಮಗಾರಿಗಳನ್ನು ನಿರ್ವಹಿಸಲಾಗಿತ್ತು ಎಂಬ ಅಂಶವನ್ನು ವಿಚಾರಣೆ ಆಯೋಗವು ತನಿಖೆಯಿಂದ ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

 

ಅದೇ ರೀತಿ ಸಣ್ಣ ನೀರಾವರಿ ಇಲಾಖೆಯಲ್ಲಿ 5 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯೇ ದೊರೆತಿರಲಿಲ್ಲ. 21 ಕಾಮಗಾರಿಗಳನ್ನು ಟೆಂಡರ್‍‌ ಪ್ರಕ್ರಿಯೆ ಇಲ್ಲದೆಯೇ ನಡೆಸಲಾಗಿತ್ತು. ನಗರಾಭಿವೃದ್ಧಿ ಇಲಾಖೆಯಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯದೇ 17 ಕಾಮಗಾರಿಗಳನ್ನು ನಿರ್ವಹಿಸಲಾಗಿತ್ತು. 12 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಗೆ ಮೊದಲೇ ಅಂದಾಜುಪಟ್ಟಿ ತಯಾರಿಸಲಾಗಿತ್ತು. ಟೆಂಡರ್ ಪ್ರಕ್ರಿಯೆ ಪಾಲಿಸದೇ 38 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದು ಆಯೋಗದ ಶೋಧದಿಂದ ಬೆಳಕಿಗೆ ಬಂದಿದೆ.

 

ಹಾಗೆಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 44 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿರಲಿಲ್ಲ. 23 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕುವ ಮುನ್ನವೇ  ಅಂದಾಜು ಪಟ್ಟಿ ತಯಾರಿಸಲಾಗಿತ್ತು. 19 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂದಾಜು ಪಟ್ಟಿಯನ್ನು ಅನುಸೂಚಿತ ದರಪಟ್ಟಿಗೆ, ತಾಂತ್ರಿಕ ವಿವರಣೆಗೆ ಅನುಗುಣವಾಗಿ ತಯಾರಿಸಿರಲಿಲ್ಲ. ಮತ್ತು ಪರಿಮಾಣವನ್ನು ಕೃತಕವಾಗಿ ಹೆಚ್ಚಿಸಲಾಗಿತ್ತು. ಮತ್ತು 75 ಕಾಮಗಾರಿಗಳಿಗೆ ಟೆಂಡರ್‍‌ ಪ್ರಕ್ರಿಯೆಗಳನ್ನೇ ಪಾಲಿಸಿರಲಿಲ್ಲ  ಎಂಬ ಸಂಗತಿಯು ವರದಿಯಿಂದ ತಿಳಿದು ಬಂದಿದೆ.

 

 

ಲೋಕೋಪಯೋಗಿ ಇಲಾಖೆಯಲ್ಲಿ 31 ಕಾಮಗಾರಿಗಳಿಗೆ ಗುಣಮಟ್ಟ ಕಾಯ್ದುಕೊಳ್ಳಲಾಗಿರಲಿಲ್ಲ. ಆದರೂ ಈ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ 11, ನಗರಾಬಿವೃದ್ದಿ ಇಲಾಖೆಯಲ್ಲಿ 13 ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 86 ಕಾಮಗಾರಿಗಳಲ್ಲಿ  ಗುಣಮಟ್ಟ  ಕಾಯ್ದುಕೊಳ್ಳದೇ ಅನುಷ್ಠಾನಗೊಳಿಸಲಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

ಅದೇ ರೀತಿ ವೇರಿಯೇಷನ್‌ ಅನಿವಾರ್ಯತೆಗೆ ಅನುಗುಣವಾಗಿ ಮತ್ತು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಲೋಕೋಪಯೋಗಿ ಇಲಾಖೆಯಲ್ಲಿ 13 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಜಲಸಂಪನ್ಮೂಲದಲ್ಲಿ 2, ನಗರಾಭಿವೃದ್ಧಿಯಲ್ಲಿ 5, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ನಲ್ಲಿ ಈ ವರ್ಗದಲ್ಲಿ  7 ಕಾಮಗಾರಿಗಳಿದ್ದವು.

 

ಕಾಮಗಾರಿ ನಿರ್ವಹಿಸದೇ ಬಿಲ್‌ ಪಾವತಿಸಿದ್ದ ಕಾಮಗಾರಿಗಳ ಸಂಖ್ಯೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲೇ ಅತೀ ಹೆಚ್ಚಿದ್ದವು. ಈ ಸಂಖ್ಯೆ 40ರಷ್ಟಿತ್ತು. ಕಾಮಗಾರಿಗಳ ಗುಣಮಟ್ಟ ಸರಿಯಿಲ್ಲದೇ ಹಾಗೂ ಅನುಷ್ಠಾನ ಪ್ರಮಾಣಕ್ಕಿಂತ ಹೆಚ್ಚು ಪಾವತಿಸಿದ್ದ ಕಾಮಗಾರಿಗಳ ಸಂಖ್ಯೆಯೂ ಇದೇ ಇಲಾಖೆಯಲ್ಲಿ ಹೆಚ್ಚಿತ್ತು. ಈ ಸಂಖ್ಯೆ 41ರಷ್ಟಿತ್ತು.

 

ಕಾಮಗಾರಿಗಳ ಕಾಲಾವಧಿ ವಿಸ್ತರಣೆಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಮತ್ತು ದಂಡ ವಿಧಿಸದೇ ಇರುವ ಪಟ್ಟಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 24 ಕಾಮಗಾರಿಗಳಿದ್ದವು. ನಗರಾಭಿವೃದ್ಧಿಯಲ್ಲಿ 10 ಮತ್ತು ಆರ್‍‌ಡಿಪಿಆರ್‍‌ನಲ್ಲಿ 17 ಕಾಮಗಾರಿಗಳಿದ್ದವು.  ಪರಿಷ್ಕೃತ ಅಂದಾಜಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ನಲ್ಲಿ 22  ಕಾಮಗಾರಿಗಳನ್ನು ನಡೆಸಲಾಗಿತ್ತು. ನಿಗದಿತ ನಮೂನೆಯಂತೆ ಕಡತಗಳನ್ನು ಸಲ್ಲಿಸದೇ ಇದ್ದ ಕಾಮಗಾರಿಗಳ ವರ್ಗದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 100, ನಗರಾಭಿವೃದ್ಧಿಯಲ್ಲಿ 82, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 163 ಕಾಮಗಾರಿಗಳಿದ್ದವು.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 105 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಲ್‌ಗಳಲ್ಲಿ ಶಾಸನಬದ್ಧ ಕಟಾವಣೆಯಲ್ಲಿ ವ್ಯತ್ಯಾಸವಿತ್ತು. ಲೋಕೋಪಯೋಗಿಯಲ್ಲಿ 13, ಜಲಸಂಪನ್ಮೂಲದಲ್ಲಿ 2, ಸಣ್ಣ ನೀರಾವರಿಯಲ್ಲಿ 7, ನಗರಾಭಿವೃದ್ಧಿಯಲ್ಲಿ 52 ಕಾಮಗಾರಿಗಳಲ್ಲಿ ಶಾಸನಬದ್ಧ ಕಟಾವಣೆಯಲ್ಲಿ ವ್ಯತ್ಯಾಸಗಳಿದ್ದವು ಎಂಬುದು ವರದಿಯಿಂದ ಗೊತ್ತಾಗಿದೆ.

 

ಭದ್ರತಾ ಠೇವಣಿಯನ್ನುನಿಗದಿತ ಅವಧಿಯಲ್ಲಿ  ಬಿಡುಗಡೆ ಮಾಡದ ಕಾಮಗಾರಿಗಳನ್ನೂ ವಿಚಾರಣೆ ಆಯೋಗವು ಪತ್ತೆ ಹಚ್ಚಿದೆ. ಈ ವರ್ಗದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 62, ಜಲಸಂಪನ್ಮೂಲದಲ್ಲಿ 25, ಸಣ್ಣ ನೀರಾವರಿಯಲ್ಲಿ 17, ನಗರಾಭಿವೃದ್ಧಿಯಲ್ಲಿ 68, ಆರ್‍‌ಡಿಪಿಆರ್‍‌ನಲ್ಲಿ 62 ಕಾಮಗಾರಿಗಳಲ್ಲಿ ನಿಗದಿತ ಅವಧಿಯಲ್ಲಿ ಭದ್ರತಾ ಠೇವಣಿಯನ್ನು ಬಿಡುಗಡೆ ಮಾಡಿರಲಿಲ್ಲ.

 

 

ಅದೇ ರೀತಿ ಬಿಲ್‌ಗಳ ಪಾವತಿಯಲ್ಲಿ ಸೀನಿಯಾರಿಟಿ ಪಾಲಿಸಿರಲಿಲ್ಲ. ಮತ್ತು ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಲ್ಲಿ ಪಾವತಿ ಮಾಡದೇ ಇದ್ದ ಕಾಮಗಾರಿಗಳ ಪಟ್ಟಿಯನ್ನೂ ವಿಚಾರಣೆ ಆಯೋಗವು ವರದಿಯಲ್ಲಿ ಒದಗಿಸಿದೆ. ಈ ಪೈಕಿ ಲೋಕೋಪಯೋಗಿಯಲ್ಲಿ 50, ಜಲಸಂಪನ್ಮೂಲದಲ್ಲಿ 25, ಸಣ್ಣ ನೀರಾವರಿಯಲ್ಲಿ 26, ನಗರಾಭಿವೃದ್ಧಿಯಲ್ಲಿ 60, ಆರ್‍‌ಡಿಪಿಆರ್‍‌ನಲ್ಲಿ 153 ಕಾಮಗಾರಿಗಳಿದ್ದವು.

 

ಈ ಅವಧಿಯಲ್ಲಿ ಕೆ ಎಸ್‌ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಚಿವರಾಗಿದ್ದರು. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ರಾಜೀನಾಮೆ ನೀಡಿದ್ದರು. ಈ ಖಾತೆಯೊಂದಿಗೆ ನಗರಾಭಿವೃದ್ಧಿ ಇಲಾಖೆಯ ಖಾತೆಯನ್ನೂ ಸಹ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ವಹಿಸಿದ್ದನ್ನು ಸ್ಮರಿಸಬಹುದು.

 

ಗುತ್ತಿಗೆದಾರರ ಸಂಘ ಮಾಡಿದ್ದ 40 ಪರ್ಸೆಂಟ್ ಲಂಚದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ಸಹ ಶೇ.40ರಷ್ಟು ಕಮಿಷನ್‌ ಬಗ್ಗೆ ಪ್ರಸ್ತಾಪವೇ ಇಲ್ಲ. ಹಾಗೂ ಈ ದಾಖಲೆಗಳು ಯಾವ ಸಂದರ್ಭದಲ್ಲೂ ಕಮಿಷನ್‌ ಆರೋಪವನ್ನು ಸಾಬೀತುಪಡಿಸಲು ಪೂರಕವಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನ್‌ ದಾಸ್‌ ವಿಚಾರಣೆ ಆಯೋಗವು ಅಭಿಪ್ರಾಯಪಟ್ಟಿತ್ತು.

 

40 ಪರ್ಸೆಂಟ್‌ ಕಮಿಷನ್‌; ದೂರಿನಲ್ಲಿ ಪ್ರಸ್ತಾವವೇ ಇಲ್ಲ, ಖಚಿತ ಅಭಿಪ್ರಾಯ ತಳೆಯಲು ಕಷ್ಟಸಾಧ್ಯವೆಂದ ಆಯೋಗ

ತನಿಖೆಯ ಸಾರಾಂಶದಲ್ಲೇನಿದೆ?

 

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ನೀಡಿರುವ ದಾಖಲೆಗಳಲ್ಲಿ ಎಲ್ಲಿಯೂ ಸಹ ಶೇ. 40ರಷ್ಟು ಕಮಿಷನ್ ಬಗ್ಗೆ ಪ್ರಸ್ತಾಪವಿಲ್ಲ. ಹಾಗೂ ಈ ದಾಖಲೆಗಳು ಯಾವ ಸಂದರ್ಭದಲ್ಲೂ ಕಮಿಷನ್‌ ಆರೋಪವನ್ನು ಸಾಬೀತುಪಡಿಸಲು ಪೂರಕವಾಗಿರುವುದಿಲ್ಲ. ಅವಶ್ಯ ದಾಖಲೆ ಹಾಗೂ ಪುರಾವೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಅಲ್ಲದೇ ಗುತ್ತಿಗೆದಾರರು ನೀಡುವ ದೂರುಗಳು, ಹೇಳಿಕೆಗಳ ಗೌಪ್ಯತೆ ಕಾಪಾಡಲು ಮತ್ತು ಅವಶ್ಯಕತೆ ಇರುವವರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವ ಬಗ್ಗೆ ಆಶ್ವಾಸನೆ ನೀಡಿದರೂ ಸಹ ಯಾವುದೇ ಸ್ಪಷ್ಟೀಕರಣ ಸಲ್ಲಿಕೆಯಾಗಿರುವುದಿಲ್ಲ. ಆದ್ದರಿಂದ ಈ ಆರೋಪದ ಬಗ್ಗೆ ಖಚಿತ ಅಭಿಪ್ರಾಯ ತಳೆಯುವುದು ಆಯೋಗಕ್ಕೆ ಕಷ್ಟಸಾಧ್ಯವಾಗಿದೆ ಎಂದು ಅಭಿಪ್ರಾಯಿಸಿರುವುದನ್ನು ಸ್ಮರಿಸಬಹುದು.

 

Your generous support will help us remain independent and work without fear.

Latest News

Related Posts