ನಾಡ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ 137 ಕೋಟಿ; ವಿಶೇಷ ಅನುದಾನ ಪ್ರಸ್ತಾವನೆ ಪರಿಗಣಿಸದ ಕೇಂದ್ರ

ಬೆಂಗಳೂರು; ರಾಜ್ಯದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಡ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ 135 ಕೋಟಿ ರು  ಅನುದಾನ ಒದಗಿಸುವ ಸಂಬಂಧ ರಾಜ್ಯ ಸರ್ಕಾರವು ಸಲ್ಲಿಸಿದ್ದ ಪ್ರಸ್ರಾವನೆಯನ್ನು  ಕೇಂದ್ರ ಸರ್ಕಾರವು ಪರಿಗಣಿಸಿಲ್ಲ.

 

ರಾಜ್ಯ ಸರ್ಕಾರದ ಹಲವು ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರವು ಅಸಹಕಾರ ತೋರುತ್ತಿದೆ ಎಂದು ಆಡಳಿತ ಪಕ್ಷವು ಪದೇಪದೇ ಆರೋಪಿಸುತ್ತಿರುವ ನಡುವೆಯೇ ನಾಡ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ವಿಶೇಷ  ಅನುದಾನ ಒದಗಿಸುವ ಪ್ರಸ್ತಾವನೆಯನ್ನು ಪರಿಗಣಿಸಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ವಿಶೇಷ ಅನುದಾನ ಒದಗಿಸಲು ಕೇಂಧ್ರ ಸರ್ಕಾರವು ನಿರಾಕರಿಸಿರುವ  ಕಾರಣ ಇದೀಗ ರಾಜ್ಯ ಸರ್ಕಾರವೇ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದಲ್ಲಿಯೇ ನಿರ್ಮಾಣ ಮಾಡಲು ಮುಂದಾಗಿದೆ. ಈ ಸಂಬಂಧ ಕಂದಾಯ ಇಲಾಖೆಯು  ಸಚಿವ ಸಂಪುಟಕ್ಕೆ ಪ್ರಸ್ತಾವವನ್ನು ಸಲ್ಲಿಸಿತ್ತು. ಇದರ ಪ್ರತಿಯು ‘ದಿ ಫೈಲ್’ಗೆ (ಕಂಇ 41 ಎಜೆಎಸ್ 2024/2025)  ಲಭ್ಯವಾಗಿದೆ.

 

ರಾಜ್ಯದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಡ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದ ವಿಶೇಷ ಅನುದಾನದಡಿಯಲ್ಲಿ 137 ಕೋಟಿ ರು ಗಳ ಅನುದಾನ ಕೋರಿ ರಾಜ್ಯ ಸರ್ಕಾರವು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ಪರಿಗಣಿಸಿಲ್ಲ.

 

 

ಹೀಗಾಗಿ 2025-26ನೇ ಸಾಲಿಗೆ (ಲೆಕ್ಕ ಶೀರ್ಷಿಕೆ; 4059-01-0501-0-01) ಒದಗಿಸಿರುವ 2.15.00 ಕೋಟಿ ರು ಅನುದಾನದಿಂದ ಹಂತಹಂತವಾಗಿ ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆಯು ಸಹಮತಿಸಿರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

2025-26ನೇ ಸಾಲಿನ ಆಯವ್ಯಯ (ಕಂಡಿಕೆ 422ರಲ್ಲಿ) ರೈತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಮರ್ಪಕ ಸೌಲಭ್ಯಗಳನ್ನೊಳಗೊಂಡ ಹೊಸದಾಗಿ 100 ನಾಡ ಕಚೇರಿಗಳನ್ನು ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ರಾಜ್ಯದಾದ್ಯಂತ ಅಟಲ್‌ ಜಿ ಜನಸ್ನೇಹಿ ನಿರ್ದೇಶನಾಲಯದಡಿ ನಾಡ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಚೇರಿಯಲ್ಲಿ ಸಾರ್ವಜನಿಕರಿಗೆ ಅತ್ಯವಶ್ಯಕವಾದ ಪ್ರಮಾಣ ಪತ್ರಗಳನ್ನು ಒದಗಿಸುತ್ತಿದೆ. ಮತ್ತು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವಲ್ಲಿ ನಾಡ ಕಚೇರಿಗಳು ಪ್ರಮುಖ ಪಾತ್ರ ವಹಿಸುತ್ತಿವೆ.

 

ಆದರೆ ನಾಡ ಕಚೇರಿಗಳಿಗೆ ಸ್ವಂತ ಕಟ್ಟಡಗಳಿರಲಿಲ್ಲ. ಹೀಗಾಗಿ ಪ್ರತಿ ನಾಡ ಕಚೇರಿಯು ಸ್ವಂತ ಕಟ್ಟಡ ಹೊಂದಿದ್ದಲ್ಲಿ ಸಾರ್ವಜನಿಕರಿಗೆ ತ್ವರಿತ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ನಾಡ ಕಚೇರಿ ಕಟ್ಟಡಕ್ಕೆ 18.84 ಲಕ್ಷ ರು.ಗಳಂತೆ ಅನುದಾನ ಬಿಡುಗಡೆಯಾಗಿತ್ತು. ನಂತರ ಈ ಕಟ್ಟಡ ನಿರ್ಮಾಣ ವೆಚ್ಚದಲ್ಲಿ ಹೆಚ್ಚಳವಾಗಿತ್ತು. ಹೀಗಾಗಿ ಪ್ರತಿ ನಾಡ ಕಚೇರಿಗೆ 18.84 ಲಕ್ಷ ರುಗಳಿಮದ 20.00 ಲಕ್ಷ ರು.ಗಳಿಗೆ ಹೆಚ್ಚಳ ಮಾಡಿ ಅನುದಾನ ಬಿಡುಗಡೆಗೊಳಿಸಿತ್ತು.

 

ಒಟ್ಟು 771 ನಾಡ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 139 ಹೊಸ ನಾಡ ಕಚೇರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ವಾಸ್ತುಶಿಲ್ಪಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯು ಅಂದಾಜು ಮೊತ್ತ ನೀಡಿತ್ತು. ಇದರ ಪ್ರಕಾರ ನಗರ ಪ್ರದೇಶದ ಪ್ರತಿ ಕಟ್ಟಡ ನಿರ್ಮಾಣಕ್ಕಾಗಿ 72.85 ಲಕ್ಷ ರು ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಕಟ್ಟಡ ನಿರ್ಮಾಣಕ್ಕೆ 55.23 ಲಕ್ಷ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. 139 ಹೊಸ ನಾಡ ಕಚೇರಿಗಳ ಕಟ್ಟಡಗಳಿಗೆ ಒಟ್ಟು 78.18 ಅನುದಾನ ಅವಶ್ಯಕತೆ ಇತ್ತು. ಈ ಅನುದಾನವನ್ನುಕೇಂದ್ರ ಸರ್ಕಾರದ ವಿಶೇಷ  ಅನುದಾನದಡಿಯಲ್ಲಿ  ರಾಜ್ಯ ಸರ್ಕಾರವು ಕೋರಿತ್ತು.

 

139 ಹೊಸ ನಾಡ ಕಚೇರಿ ಕಟ್ಟಡಗಳಿಗೆ ಒಟ್ಟಾರೆ 78.18 ಕೋಟಿ ಅನುದಾನ ಅವಶ್ಯಕತೆ ಇತ್ತು. ಪ್ರಜಾ ಸೌಧ ಹಾಗೂ ನಾಡಕಚೇರಿಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ 137 ಕೋಟಿ ರು ಗೆ ಅನುಮೋದನೆ ನೀಡಿತ್ತು. ಈ ಮೊತ್ತದಿಂದಲೇ 78.18 ಕೋಟಿ ರು.ಗಳನ್ನು ಬಳಸಿಕೊಂಡು 139 ನಾಡ ಕಚೇರಿಗಳನ್ನು ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಾಣಕ್ಕೆ ಸರ್ಕಾರವು ಉದ್ದೇಶಿಸಿರುವುದು ಸಚಿವ ಸಂಪುಟ ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಅಟಲ್‌ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ವಿತರಣೆ, ಪಿಂಚಣಿ ಮಂಜೂರಾತಿ, ಭೂಮಿ ಸೇವೆಗಳು, ಮೋಜಣಿ, ಆಧಾರ್‍‌ ನೋಂದಣಿ ಮತ್ತು ಇತರೆ ಇಲಾಖೆಯ ಸೇವೆಗಳು ಸೇರಿದಂತೆ ಒಟ್ಟಾರೆ 54 ಸೇವೆಗಳು ದೊರಕುತ್ತಿವೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ 771 ನಾಡ ಕಚೇರಿಗಳಲ್ಲಿ ಇ-ಆಫೀಸ್‌ ಕಡ್ಡಾಯಗೊಂಡಿದೆ. ಸಾರ್ವಜನಿಕರಿಂದ ಸ್ವೀಕರಿಸುತ್ತಿರುವ ಅರ್ಜಿಗಳನ್ನು ಇ-ಅಫೀಸ್‌ ಮೂಲಕ ಕ್ರಮ ವಹಿಸುತ್ತಿದೆ.

 

ಹಾಗೆಯೇ ಅಟಲ್‌ ಜಿ ಜನಸ್ನೇಹಿ ಕೇಂದ್ರಗಳಲ್ಲಿ ವಿತರಿಸುತ್ತಿರುವ ಪ್ರಮಾಣ ಪತ್ರಗಳನ್ನು ನೇರವಾಗಿ ಸಾರ್ವಜನಿಕರಿಗೆ ಸ್ಪೀಡ್‌ ಪೋಸ್ಟ್‌ ಮೂಲಕ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಿದೆ. ಎಲ್ಲಾ ವಿಧದ ಜಾತಿ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ಅರ್ಜಿನಮೂನೆಗಳನ್ನು ಫ್ರಂಟ್‌ ಆಫೀಸ್‌ನಲ್ಲಿಯೂ ದಾಖಲೆಗಳನ್ನು ತಂತ್ರಾಂಶಗಳಲ್ಲಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಿದೆ. ಅರ್ಜಿಯ ಪ್ರತೀ ಹಂತದಲ್ಲಿನ ಪ್ರಕ್ರಿಯೆಯನ್ನು ಹಾಗೂ ಯಾವ ಹಂತದಲ್ಲಿ ಬಾಕಿ ಇದೆ ಎಂಬ ಮಾಹಿತಿಯನ್ನೂ ಸಹ ಅರ್ಜಿದಾರರ ಮೊಬೈಲ್‌ ಸಂಖ್ಯೆಗೆ  ಎಸ್‌ಎಂಎಸ್‌ ಮೂಲಕ ಕಳಿಸುತ್ತಿದೆ.

 

ಗ್ರಾಮ ಆಡಳಿತಾಧಿಕಾರಿಗಳ ಕಾರ್ಯಾಲಯದ ವಿಳಾಸ ಇಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

 

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ 676 ನಾಡ ಕಚೇರಿಳೀವೆ. ಈ ಐಕಿ 640 ಸ್ವಂತ ಕಟ್ಟಡ, 36 ಕಡೆಗಳಲ್ಲಿ ಬಾಡಿಗೆ ಕಟ್ಟಡಗಳಿವೆ.  ಒಟ್ಟು 7,547 ಗ್ರಾಮ ಆಡಳಿತಾಧಿಕಾರಿಗಳ ಕಚೇರಿಗಳಿವೆ. ಈ ಪೈಕಿ 6,991 ಕಡೆಗಳಲ್ಲಿ ಸ್ವಂತ ಕಟ್ಟಡಗಳಿವೆ. 556 ಕಡೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

 

801 ರಾಜಸ್ವ ನಿರೀಕ್ಷಕರ ಕಚೇರಿ ಕಟ್ಟಡಗಳಿವೆ. ಇದರಲ್ಲಿ ಈ ಪೈಕಿ 754 ಸ್ವಂತ ಮತ್ತು 47 ಬಾಡಿಗೆ ಕಟ್ಟಡಗಳಲ್ಲಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts