ಬೆಂಗಳೂರು; ಸಂಜಯನಗರ ಠಾಣೆಯ ಪೊಲೀಸ್ ಪೇದೆಗಳಿಬ್ಬರು ಅನಾಗರಿಕವಾಗಿ ವರ್ತಿಸಿದ್ದಲ್ಲದೆ ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿ, ಕಾಲಿಗೆ ಗುಂಡು ಹಾರಿಸಿದ್ದ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್ ವೇದಿಕೆ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಓಕಾ ಅವರ ನೇತೃತ್ವದ ದ್ವಿ ಸದಸ್ಯ ಪೀಠ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿತು. ಅಡ್ವೋಕೇಟ್ ಜನರಲ್ ಈ ಸಂಬಂಧ ಹೇಳಿಕೆ ನೀಡಿದ್ದು 2020ರ ಏಪ್ರಿಲ್ 3ರಂದು ಈ ಕುರಿತು ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ಪ್ರಕರಣ ಏಪ್ರಿಲ್ 3ಕ್ಕೆ ಮುಂದೂಡಿಕೆಯಾಗಿದೆ.
ಪ್ರಕರಣದಲ್ಲಿ ಸಂಜಯನಗರ ಪೊಲೀಸ್ ಠಾಣೆಯ ಪೇದೆ ಬಸವರಾಜ್, ಮಂಜುನಾಥ್, ಸಬ್ ಇನ್ಸ್‌ಪೆಕ್ಟರ್,ಇನ್ಸ್‌ಪೆಕ್ಟರ್,ಎಸಿಪಿ, ಡಿಸಿಪಿ ಅಲ್ಲದೆ ಬೆಂಗಳೂರು ಪೊಲೀಸ್ ಕಮಿಷನರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿಯನ್ನಾಗಿಸಿದೆ.
ಏನದು ಪ್ರಕರಣ?
ಕರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆ ನಂತರ ರಸ್ತೆಗೆ ಇಳಿದಿದ್ದ ಕಾರಣಕ್ಕೆ ತಾಜುದ್ದೀನ್ ಮತ್ತು ಕುತುಬುದ್ದೀನ್ ಎಂಬಿಬ್ಬರು ಸಂಜಯನಗರ ಠಾಣೆಯ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಹರಿದಾಡಿತ್ತಲ್ಲದೆ, ಇದು ಪೊಲೀಸ್ ಸಮೂಹವನ್ನು ಸಿಟ್ಟಿಗೆಬ್ಬಿಸಿತ್ತು.
ಆದರೆ ಅದಕ್ಕೂ ಮುನ್ನ ಪೊಲೀಸ್ ಪೇದೆಗಳಿಬ್ಬರು ಈ ಇಬ್ಬರು ಯುವಕರ ಮೇಲೆ ಅನಾಗರಿಕವಾಗಿ ವರ್ತಿಸಿದ್ದಲ್ಲದೆ ಗಂಭೀರ ಹಲ್ಲೆ ನಡೆಸಿದ್ದರು. ಈ ಕುರಿತಾದ ವಿಡಿಯೋ ವೈರಲ್ ಆಗಿತ್ತು. ಯುವಕರಿಬ್ಬರ ಮೇಲೆ ಪೊಲೀಸ್ ಪೇದೆಗಳು ನಡೆಸಿದ್ದ ಹಲ್ಲೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಅಲ್ಲದೆ ಬಂಧಿತ ಆರೋಪಿಗಳಿಬ್ಬರ ಜತೆ ಸೇರಿ ಕೆಲವು ಸಾರ್ವಜನಿಕರೂ ಪೊಲೀಸ್ ಪೇದೆಗೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ವೈರಲ್ ಆಗಿದ್ದ ಮತ್ತೊಂದು ವಿಡಿಯೋದಲ್ಲಿ ಪೊಲಿಸ್ ಪೇದೆಯೇ ತಾಜುದ್ದೀನ್ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸುತ್ತಿರುವುದು, ಬೂಟು ಕಾಲಿನಲ್ಲಿ ಒದೆಯುವುದು, ಗೋಡೆಗೆ ಒತ್ತಿ ಹಿಡಿದು ಮುಖಕ್ಕೆ ಗುದ್ದುವುದು, ಜೇಬಿಗೆ ಬಲವಂತವಾಗಿ ಕೈ ತುರುಕುವುದು, ಮೊಬೈಲ್ ಕಸಿದುಕೊಳ್ಳುವ ದೃಶ್ಯಗಳಿದ್ದವು.
ಈ ವಿಡಿಯೋ ಹೊರಬೀಳುವ ಮುನ್ನವೇ ಪೊಲೀಸ್ ಪೇದೆಗಳಿಬ್ಬರ ಮೇಲೆ ನಡೆದಿದ್ದ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರ ಡಿಸಿಪಿ ವಿಭಾಗದ ಪೊಲೀಸರು ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರಲ್ಲದೆ ಇಬ್ಬರ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೆ ಬಂಧಿತ ತಾಜುದ್ದೀನ್ ಎಂಬಾತನನ್ನು ಕಳೆದ ಗುರುವಾರ ನಸುಕಿನಲ್ಲಿ ಮಹಜರ್‌ಗೆಂದು ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎಂದು ಬಿಂಬಿಸಲಾಗಿತ್ತು.
ಈ ವೇಳೆ ಸಬ್ ಇನ್ಸ್‌ಪೆಕ್ಟರ್ ರೂಪಾ ಮತ್ತು ಹೆಡ್ ಕಾನ್‌ಸ್ಟೆಬಲ್ ಮಂಜಣ್ಣಗೆ ಗಾಯವಾಗಿತ್ತು ಎಂದು ಹೇಳಿದ್ದ ಪೊಲೀಸ್ ಇಲಾಖೆ, ತಕ್ಷಣ ಸಂಜಯನಗರ ಇನ್‌ಸ್ಪೆಕ್ಟರ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಮಾತು ಕೇಳದಿದ್ದಾಗ ಆರೋಪಿ ಶರಣಾಗಿರಲಿಲ್ಲ ಎಂದು ಕಾರಣ ನೀಡಿದ್ದ ಪೊಲೀಸರು ಎಡಗಾಲಿಗೆ ಗುಂಡು ಹೊಡೆದಿದ್ದರು.
ತಾಜುದ್ದೀನ್‌ಗೆ ಮೊದಲು ಹೊಡೆದು ಆತನಿಂದ ಮೊಬೈಲ್ ಕಿತ್ತುಕೊಂಡಿದ್ದ ಪೇದೆಗಳಿಬ್ಬರು ಹಿರಿಯ ಅಧಿಕಾರಿಗಳಿಗೆ ಅರ್ಧ ಸತ್ಯವನ್ನು ಮಾತ್ರ ಹೇಳಿ, ಉಳಿದರ್ಧ ಸತ್ಯವನ್ನು ಮುಚ್ಚಿಟ್ಟು ಕತೆ ಕಟ್ಟಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿದ್ದವು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಇದು ಇಡೀ ಇಲಾಖೆಗೆ ಆದ ಅವಮಾನ. ಅವರು ಹೊಡೆದಿದ್ದು ಅವರಿಬ್ಬರಿಗರಲ್ಲ (ಕಾನ್‌ಸ್ಟೆಬಲ್‌ಗಳು) ಇಡೀ ಪೊಲೀಸ್ ಸಮೂಹಕ್ಕೆ’ ಎಂದಿದ್ದನ್ನು ಸ್ಮರಿಸಬಹುದು.