ಬೆಂಗಳೂರು; ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿನ ದಿಂಡದಹಳ್ಳಿ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಅದಿರು ಗಣಿಗಾರಿಕೆ ನಡೆಸುತ್ತಿರುವ ಉದ್ಯಮಿಗಳು, ಕಂಪನಿಗಳು ಅರಣ್ಯ ಪ್ರದೇಶದಿಂದ ಕಬ್ಬಿಣದ ಅದಿರು ಮತ್ತು ಮಣ್ಣನ್ನು ಖಾಸಗಿ ಜಮೀನುಗಳ ಮಾಲೀಕರ ಪೂರ್ವಾನುಮತಿಯಿಲ್ಲದೇ ಅನಧಿಕೃತವಾಗಿ ಲಕ್ಷಾಂತರ ಮೆಟ್ರಿಕ್ ಟನ್ ಪ್ರಮಾಣದ ಅದಿರು ದಾಸ್ತಾನು ಮಾಡುತ್ತಿವೆ. ಮತ್ತು ಎನ್‌ಒಸಿ ಇಲ್ಲದೆಯೇ ಖಾಸಗಿ ಜಮೀನು ಸೇರಿದಂತೆ ಸರ್ಕಾರಿ ಜಮೀನುಗಳಲ್ಲಿನ ಕಬ್ಬಿಣದ ಅದಿರನ್ನು ಹರಾಜು ಮಾಡುತ್ತಿವೆ.
ಅಲ್ಲದೇ ಅರಣ್ಯ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಕಣ್ಣು ತಪ್ಪಿಸಿ ಲಕ್ಷಾಂತರ ಮೆಟ್ರಿಕ್ ಟನ್ ಪ್ರಮಾಣದ ಅದಿರು ಸಾಗಿಸುತ್ತಿವೆ. ಹಾಗೆಯೇ ಇನ್ನು ಕೆಲವು ಪ್ರಕರಣಗಳಲ್ಲಿ ಜಮೀನುಗಳ ಮಾಲೀಕರ ಪೂರ್ವಾನುಮತಿ ಪಡೆಯದೇ ಕಬ್ಬಿಣದ ಅದಿರನ್ನು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಬೆಲೆಬಾಳುವ ಶ್ರೀಗಂಧ ಮತ್ತು ಇತರೆ ಜಾತಿಯ ಮರಗಳನ್ನೂ ಹಾಳುಗೆಡವುತ್ತಿರುವ ಪ್ರಕರಣಗಳು ಬಹಿರಂಗವಾಗಿವೆ.
ಕೇಂದ್ರ ಸರ್ಕಾರದ ಎರಡನೇ ಹಂತದ ಫಾರೆಸ್ಟ್ ಕ್ಲಿಯರೆನ್ಸ್ ಪ್ರಸ್ತಾವನೆ ಪಡೆಯದೇ ಅರಣ್ಯ ಕಾಯ್ದೆ ಉಲ್ಲಂಘನೆ ಮತ್ತು ಅದಿರು ಸಾಗಾಣಿಕೆ ರಸ್ತೆಯನ್ನು ಬಳಸಲು ಸರ್ಕಾರದ ಅನುಮತಿ ಮುಕ್ತಾಯಗೊಂಡ ನಂತರವೂ ಜೆಎಸ್‌ಡಬ್ಲ್ಯೂ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿದೆ ಎಂದು ಕಾಂಗ್ರೆಸ್ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರು ಗುರುತರವಾದ ಆರೋಪ ಮಾಡಿದ್ದರ ಬೆನ್ನಲ್ಲೇ ಅದೇ ಹೋಬಳಿಯ ದಿಂಡದಹಳ್ಳಿಯಲ್ಲಿ ಮತ್ತೊಂದು ಕಂಪನಿಯ ಪ್ರಕರಣವು ಬಹಿರಂಗವಾಗಿರುವುದು ಮುನ್ನೆಲೆಗೆ ಬಂದಿದೆ.
ಹಾಗೆಯೇ ಅಧಿಕಾರಿಗಳು ಒಂದೇ ಗ್ರಾಮದ ಒಂದೇ ಸರ್ವೆ ನಂಬರ್‍ನ ಪ್ರದೇಶದಲ್ಲಿ ದಾಸ್ತಾನು ಇರುವ ಅದಿರು ಮತ್ತು ಗಿಡಮರಗಳ ಕಟಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ವರದಿಗಳನ್ನು ಸಲ್ಲಿಸಿದ್ದರು. ಎರಡು ಪ್ರತ್ಯೇಕ ಅಳತೆ ಪಟ್ಟಿಗಳನ್ನು ಸಹ ಕೂಲಂಕುಶವಾಗಿ ಪರಿಶೀಲಿಸುತ್ತಿಲ್ಲ. ಮತ್ತು ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಸಂಗತಿಯು ಅಕ್ರಮ ಅದಿರು ಸಾಗಾಣಿಕೆಯು ನಿರಂತರವಾಗಿ ನಡೆಯುತ್ತಿದೆ ಎಂಬುದಕ್ಕೆ ಪುರಾವೆ ಸಿಕ್ಕಂತಾಗಿದೆ.
ಶ್ರೀ ಸಾಯಿ ಬಾಲಾಜಿ ಐರನ್ ಇಂಡಿಯಾ ಪ್ರೈ ಲಿಮಿಟೆಡ್ ಈ ಹಿಂದೆ ದಿಂಡದಹಳ್ಳಿಯ ಸರ್ವೆ ನಂಬರ್ 35 ಮತ್ತು 38ರಲ್ಲಿ ದಾಸ್ತಾನು ಮಾಡಿದ್ದ 2,48,500.00 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಖಾಸಗಿ ಜಮೀನಿನಲ್ಲಿ ದಾಸ್ತಾನು ಮಾಡಿತ್ತು. ಅದನ್ನು ಸಾಗಿಸಲು ಜಮೀನಿನ ಮಾಲೀಕರ ಪೂರ್ವಾನುಮತಿ ಪಡೆಯದೇ ಸಾಗಾಣಿಕೆ ಮಾಡಲು 25ರಿಂದ 35 ಸೆಂ.ಮೀ ಸುತ್ತಳತೆಯುಳ್ಳ ಬೆಲೆಬಾಳುವ ಶ್ರೀಗಂಧ ಹಾಗೂ ಇತರೆ ಜಾತಿಯ ಮರಗಳನ್ನು ಹಾಳು ಮಾಡಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಈ ವರದಿಯ ಪ್ರತಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಿಂಡದಹಳ್ಳಿ ಗ್ರಾಮದ ಸರ್ವೆ ನಂಬರ್ 35 ಮತ್ತು ರಿ ಸ ನಂ 38ರ ಈ ಜಮೀನಿನಲ್ಲಿ ಕಬ್ಬಿಣದ ಅದಿರಿನ ಮಣ್ಣನ್ನು ದಾಸ್ತಾನು ಮಾಡಿರುವ ಕುರಿತು ಶಿವಕಕುಮಾರ್ ಮತ್ತಿತರರು ವಲಯ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಕಬ್ಬಿಣದ ಅದಿರು ದಾಸ್ತಾನಿನ ಮೇಲೆ ನೈಸರ್ಗಿಕವಾಗಿ ಶ್ರೀಗಂಧ, ತೇಗ, ಬೀಟೆ, ಅಕೇಶಿಯಾ, ನೀಲಗಿರಿ, ಬೇವು ಸೇರಿದಂತೆ ಇನ್ನಿತರೆ ನೂರಾರು ಮರಗಿಡಗಳು ಬೆಳೆದಿದ್ದವು. ಈ ಮರಗಿಡಗಳನ್ನು ಆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಕಡಿದು ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಹಾಗೆಯೇ ಈ ಜಾಗದಲ್ಲಿ ದಾಸ್ತಾನಾಗಿದ್ದ 2.5 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಹರಾಜು ಮಾಡಿಸಿ ಅರಣ್ಯ ಪ್ರದೇಶದಿಂದ ದಾಸ್ತಾನು ಮಾಡಿರುವ ಕಬ್ಬಿಣದ ಅದಿರನ್ನು ಸಾಗಾಣಿಕೆ ಮಾಡಲು ಯತ್ನಿಸಿದ್ದಾರೆ. ಈ ಸರ್ವೇ ನಂಬರ್‍ನಲ್ಲಿ 2.5 ಲಕ್ಷ ಟನ್ ಕಬ್ಬಿಣದ ಅದಿರು ಸಂಗ್ರಹಣೆಯಾಘಿಲ್ಲ. ಅಲ್ಲಿ ಸುಮಾರು 1 ಲಕ್ಷ ಟನ್ ಕಬ್ಬಿಣದ ಅದಿರು ಇತ್ತು. ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು 2.5 ಲಕ್ಷ ಟನ್ ಕಬ್ಬಿಣದ ಅದಿರು ಇದೆ ಎಂದು ಹರಾಜು ಹಾಕಲಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ನಿಯಮಾವಳಿಗಳ ಪ್ರಕಾರ ಖಾಸಗಿ ಜಮೀನು ಮತ್ತು ಸರ್ಕಾರಿ ಜಮೀನುಗಳಲ್ಲಿ ಕಬ್ಬಿಣದ ಅದಿರನ್ನು ಹರಾಜು ಹಾಕುವಾಗ ಅರಣ್ಯ ಇಲಾಖೆಯಿಂದ ಎನ್‌ಒಸಿ ಪಡೆಯಬೇಕು. ಆದರೆ ಈ ಪ್ರಕರಣದಲ್ಲಿ ಎನ್‌ಒಸಿ ಪಡೆದಿಲ್ಲ ಎಂದು ದೂರಿದ್ದರು.
ಈ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಶ್ರೀ ಸಾಯಿ ಬಾಲಾಜಿ ಸ್ಪಾಂಜ್ ಐರನ್ ಇಂಡಿಯಾ ಪ್ರೈ ಲಿಮಿಟೆಡ್, ಸಾಗಾಣಿಕೆ ಮಾಡುತ್ತಿದ್ದವರ ವಿರುದ್ಧ 2024ರ ಅಕ್ಟೋಬರ್ 15ರಂದು ಅರಣ್ಯ ಮೊಕದ್ದಮೆ ದಾಖಲಿಸಿದ್ದರು.
ಆದರೆ ಈ ಪ್ರಕರಣದಲ್ಲಿ ಯಾವೊಬ್ಬ ಆರೋಪಿಯನ್ನೂ ಬಂಧಿಸಿರಲಿಲ್ಲ. ಕಾನೂನುಬಾಹಿರವಾಗಿ 5 ಲಾರಿಗಳಲ್ಲಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡಲಾಗಿದೆ ಎಂದು ಎಫ್‌ಓಸಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಈ ಸಂಬಂಧ ಚಿತ್ರದುರ್ಗ ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿಗಳು 2024ರ ನವೆಂಬರ್ 6ರಂದು ಬಳ್ಳಾರಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಿಸ್ತೃತವಾದ ವರದಿ ಸಲ್ಲಿಸಿದ್ದರು.
ವರದಿಯಲ್ಲೇನಿದೆ?
ದಿಂಡದಹಳ್ಳಿ ಸರ್ವೆ ನಂಬರ್ 38ರ ಹಾಗೂ ಇತರೆ ರಿ.ಸರ್ವೆ ನಂಬರ್‍ನ ವಿವಿಧ ಪ್ರದೇಶದಲ್ಲಿ 2008-09ರಲ್ಲಿ ಎಂಎಂಇಸಿ ಖಾಸಗಿ ರೈಲ್ವೇ ಸೈಡಿಂಗ್ ಸಮಯದಲ್ಲಿ ಅಂದಾಜು ನಕ್ಷೆಗೆ ಅನುಗುಣವಾಗಿ ಭೂಮಿಯನ್ನು 5ರಿಂದ 6 ಮೀಟರ್ ಅಗೆದು ಬಂದಂತಹ ಮಣ್ಣು ಮಿಶ್ರಿತ ಕಡಿಮೆ ಗುಣಮಟ್ಟದ ಕಬ್ಬಿಣದ ಅದಿರನ್ನು ದಾಸ್ತಾನು ಮಾಡಲಾಗಿತ್ತು.
ಈ ದಾಸ್ತಾನಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಮೌಲ್ಯ ಬಂದ ಕಾರಣ ಮತ್ತು ಕರ್ನಾಟಕ ಭೂ ಕಂದಾಯ ನಿಯಮಗಳು 1964ರ ನಿಯಮ 70ರ ಅನ್ವಯ ಭೂಮಿಯ ಮೇಲಿನ ಯಾವುದೇ ಸ್ವತ್ತಿನ ಖನಿಜ ಸಂಪತ್ತು ಸರ್ಕಾರದ ಸ್ವತ್ತಾಗಿರುತ್ತದೆ. ಹಾಗೂ ಈ ಕಡಿಮೆ ಗುಣಮಟ್ಟದ ಅದಿರಿಗೆ ಐಬಿಎಂ ಸಂಸ್ಥೆಯು ಮಾರಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ 2024ರ ಮಾರ್ಚ್ 25ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಇ-ಹರಾಜು ಮೂಲಕ ವಿಲೇ ಮಾಡಿದೆ ಎಂದು ನೀಡಿದ್ದ ವರದಿಯನ್ನು ಉಲ್ಲೇಖಿಸಿರುವುದು ತಿಳಿದು ಬಂದಿದೆ.
ದಿಂಡದಹಳ್ಳಿ ಗ್ರಾಮದ ಪಟ್ಟಾ ಜಮೀನಿನ ಮಾಲೀಕರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸೂಕ್ತ ಸೂಚನೆಗಳು ಇರಲಿಲ್ಲ. ಹೀಗಾಗಿ ಮಾಲೀಕರ ತಕರಾರು ಇದೆ.
ಲಾರಿಯಲ್ಲಿ ಅದಿರಿನ ಪುಡಿಯನ್ನು ತುಂಬಿ ಗಣಿ ಭೂ ವಿಜ್ಞಾನ ಇಲಾಖೆಯ ರಹದಾರಿಯಲ್ಲಿ ಲಂಪ್ಸ್ ಶೇ. 0-45 ಎಂದು ನಮೂದಿಸಿತ್ತು. ಈ ಲಾರಿಗಳಲ್ಲಿ ತುಂಬಿರುವ ಅದಿರಿನ ಪುಡಿ ಬಗ್ಗೆ ಅನುಮಾನಗಳಿದ್ದವು. ಅಲ್ಲದೇ ಈ ಪ್ರದೇಶದಲ್ಲಿ ಮಣ್ಣು ಮಿಶ್ರಿತ ಕಡಿಮೆ ಗುಣಮಟ್ಟದ ಕಬ್ಬಿಣದ ಅದಿರು ದಾಸ್ತಾನು ಮಾಡಿದ್ದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ಖಚಿತಪಡಿಸಿಕೊಂಡಿದ್ದರು ಎಂಬ ಸಂಗತಿಯನ್ನು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮಣ್ಣು ಮಿಶ್ರಿತ ಕಬ್ಬಿಣದ ಅದಿರನ್ನು ತುಂಬಿದ ಎರಡು ಲಾರಿಗಳಿಗೆ ಪರವಾನಿಗೆ ತೆಗೆಯಲು ಸಾಧ್ಯವಾಗಿಲ್ಲ ಎಂದು ಬಿಡ್‌ದಾರರು ಹೇಳಿದ್ದರು. ಅಲ್ಲದೇ ಐದು ಲಾರಿಗಳಲ್ಲಿ ಅದಿರನ್ನು ತುಂಬಿಸಿಕೊಂಡು ಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳು ತಡೆದಿದ್ದರು. ಇದೇ ವೇಳೆಯಲ್ಲಿ ಚಿತ್ರದುರ್ಗ ವಲಯದ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
‘ಶ್ರೀಗಂಧದ ಕೆಲವು ಮರಗಳನ್ನು ಬುಡಸಮೇತ ಕಿತ್ತು ಹಾಕಿರುತ್ತಾರೆ. ಕೆಲವು ಶ್ರೀಗಂಧ ಮರಗಳನ್ನು ಕಟಾವಣೆ ಮಾಡಿ ತೆಗೆದುಕೊಂಡು ಹೋಗಿರುವುದು ಮತ್ತು ಇನ್ನಿತರೆ ಮರಗಳನ್ನು ಬುಡಸಮೇತ ಕಿತ್ತು ಹಾಕಿರುತ್ತಾರೆ. ಜಮೀನಿನ ಮಾಲೀಕರ ಪೂರ್ವಾನುಮತಿ ಪಡೆಯದೇ ಕಬ್ಬಿಣದ ಅದಿರನ್ನು ಸಾಗಾಣಿಕೆ ಮಾಡಲು 25ರಿಂದ 35 ಸೆಂಟಿಮೀಟರ್ ಸುತ್ತಳತೆಯುಳ್ಳ ಬೆಲೆಬಾಳುವ ಶ್ರೀಗಂಧ ಹಾಗೂ ಇತರೆ ಜಾತಿಯ ಮರಗಳನ್ನು ಹಾಳು ಮಾಡಿರುತ್ತಾರೆ ಎಂದು,’ ವರದಿ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಹಾಗೆಯೇ ದಿಂಡದಹಳ್ಳಿ ಗ್ರಾಮದ ಸರ್ವೆ ನಂಬರ್ 38ರ ಪ್ರದೇಶದಲ್ಲಿರುವ ಗಿಡಮರಗಳ ಅಳತೆ ಪಟ್ಟಿಗೆ ಸಂಬಂಧಿಸಿದಂತೆ ಹೊಳಲ್ಕೆರೆ ವಲಯ ಅರಣ್ಯಾಧಿಕಾರಿ ಮತ್ತು ಚಿತ್ರದುರ್ಗ ವಲಯದ ವಲಯ ಅರಣ್ಯಾಧಿಕಾರಿಗಳು ಭಿನ್ನವಾದ ವರದಿಗಳನ್ನು ನೀಡಿದ್ದರು. ಎರಡು ಪ್ರತ್ಯೇಕ ಅಳತೆ ಪಟ್ಟಿಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿಲ್ಲ. ನಿಯಮಾನುಸಾರ ಕ್ರಮ ಕೈಗೊಂಡಿರಲಿಲ್ಲ. ಒಂದೇ ಗ್ರಾಮದ ಒಂದೇ ಸರ್ವೆ ನಂಬರ್ ಪ್ರದೇಶದಲ್ಲಿ ದಾಸ್ತಾನು ಇರುವ ಅದಿರು ಮತ್ತು ಗಿಡಮರಗಳ ಕಟಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ವರದಿ ನೀಡಿದ್ದರು. ಈ ಕುರಿತು ಇಬ್ಬರೂ ಅಧಿಕಾರಿಗಳಿಗೆ ನೋಟೀಸ್ ಕೂಡ ಜಾರಿಯಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಸರ್ವೆ ನಂಬರ್ 35 ಮತ್ತು 38ರಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಅದಿರು ದಾಸ್ತಾನು ಇರುವುದು ಮತ್ತು ಬೆಲೆಬಾಳು ಮರಗಳು ಇವೆ ಎಂದು ಹೊಳಲ್ಕೆರೆ ವಲಯ ಅರಣ್ಯಾಧಿಕಾರಿಗಳು 2024ರ ಜೂನ್ 6ರಂದು ನೀಡಿದ್ದ ವರದಿಯಲ್ಲಿ ಸ್ಪಷ್ಟಪಡಿಸಿದ್ದರು.
ರೈಲ್ವೆ ವ್ಯಾಗನ್‌ಗಳಲ್ಲಿ 35 ಕೋಟಿ ಟನ್ ಅದಿರು ರಫ್ತು, 1.43 ಲಕ್ಷ ಕೋಟಿ ನಷ್ಟ!; ಹೆಚ್‌ಕೆಪಿ ವರದಿ ಮೂಲೆಗುಂಪು
ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಹೋಬಳಿಯ ದಿಂಡದಹಳ್ಳಿ ಸರ್ವೆನಂಬರ್ 18ರಲ್ಲಿ ಜೆಎಸ್‌ಡಬ್ಲ್ಯೂ ಬೊಮ್ಮನಹಳ್ಳಿ ಮೈನ್ಸ್ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿದೆ ಮತ್ತು ಕೇಂದ್ರ ಸರ್ಕಾರದ ಎರಡನೇ ಹಂತದ ಫಾರೆಸ್ಟ್ ಕ್ಲಿಯರೆನ್ಸ್ ಪ್ರಸ್ತಾವನೆ ಪಡೆಯದೇ ಅರಣ್ಯ ಕಾಯ್ದ ಉಲ್ಲಂಘನೆ ಮಾಡಿದೆ ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಸಚಿವ ಈಶ್ವರ ಖಂಡ್ರೆ ವಾಸ್ತವ ವರದಿ ಕೇಳಿದ್ದರು.
ಅರಣ್ಯ ಕಾಯ್ದೆ ಉಲ್ಲಂಘನೆ, ಅಕ್ರಮ ಅದಿರು ಸಾಗಾಣಿಕೆ; ಜಿಂದಾಲ್ ವಿರುದ್ಧ ಕಾಂಗ್ರೆಸ್ ಶಾಸಕ ಆರೋಪ
ಈ ಸಂಬಂಧ ಅರಣ್ಯ ಪಡೆಯ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2023ರ ಜುಲೈ 11ರಂದು ವರದಿ ಸಲ್ಲಿಸಿರುವುದನ್ನು ಸ್ಮರಿಸಬಹುದು.