ಬೆಂಗಳೂರು; ಭರ್ತಿಯಾಗಿರುವ 400 ಹುದ್ದೆಗಳಲ್ಲಿ ಆದಿ ಕರ್ನಾಟಕ ಸೇರಿದಂತೆ ಇನ್ನಿತರೆ ಉಪ ಜಾತಿಗಳಿಗೆ ಸೇರಿದ 76 ಮಂದಿ ಅಧಿಕಾರಿಗಳು ಮಾತ್ರ ನೇಮಕವಾಗಿದ್ದಾರೆ ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಯು ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣೆ ಆಯೋಗಕ್ಕೆ ಅಂಕಿ ಅಂಶಗಳ ಸಮೇತ ವರದಿ ನೀಡಿದೆ.
ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಬಿ ಆರ್ ಭಾಸ್ಕರ್ ಪ್ರಸಾದ್ ಅವರ ನೇತೃತ್ವದಲ್ಲಿ ಸರಣಿ ಪಾದಯಾತ್ರೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಈ ಕುರಿತು ಸಚಿವರ ಸಭೆ ನಡೆಸಿದ್ದಾರೆ. ಮಧ್ಯಂತರ ವರದಿ ನೀಡಲು ಆಯೋಗಕ್ಕೆ ಸೂಚನೆಯನ್ನು ನೀಡಿದದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ಆಯೋಗಕ್ಕೆ ನೀಡಿರುವ ಅಂಕಿ ಅಂಶಗಳ ವಿವರಗಳು ಮುನ್ನೆಲೆಗೆ ಬಂದಿವೆ.
ಈ ಸಂಸ್ಥೆಯು 2025ರ ಫೆ.24ರಂದೇ ಈ ಮಾಹಿತಿಯನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಏಕ ಸದಸ್ಯ ವಿಚಾರಣೆ ಆಯೋಗದ ಕಾರ್ಯದರ್ಶಿಗೆ ರವಾನಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಂಸ್ಥೆ ನೀಡಿರುವ ಅಂಕಿ ಅಂಶಗಳಲ್ಲೇನಿದೆ?
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಯ್ಲಿ ಒಟ್ಟು 1,208 ಹುದ್ದೆಗಳು ಮಂಜೂರಾತಿಯಾಗಿವೆ. ಈ ಪೈಕಿ 117 ಹುದ್ದೆಗಳು ಗ್ರೂಪ್ ಎ ವೃಂದದಲ್ಲಿವೆ. ಬಿ ವೃಂದದಲ್ಲಿ 272, ಸಿ ವೃಂದದಲ್ಲಿ 596, ಡಿ ವೃಂದದಲ್ಲಿ 223 ಹುದ್ದೆಗಳಿದ್ದವು. ಈ ನಾಲ್ಕು ವೃಂದಗಳಲ್ಲಿ 400 ಹುದ್ದೆಗಳು ಭರ್ತಿಯಾಗಿವೆ. ಎ ವೃಂದದಲ್ಲಿ 99, ಬಿ ವೃಂದದಲ್ಲಿ 62, ಸಿ ವೃಂದದಲ್ಲಿ 205, ಡಿ ವೃಂದದಲ್ಲಿ 34 ಹುದ್ದೆಗಳಷ್ಟೇ ಭರ್ತಿಯಾಗಿವೆ. ಇನ್ನೂ 808 ಹುದ್ದೆಗಳು ಭರ್ತಿಯಾಗಬೇಕಿವೆ. ಈ 808 ಹುದ್ದೆಗಳಲ್ಲಿ ಎ ವೃಂದದಲ್ಲಿ 18, ಬಿ ವೃಂದದಲ್ಲಿ 210, ಸಿ ವೃಂದದಲ್ಲಿ 391 ಮತ್ತು ಡಿ ವೃಂದದಲ್ಲಿ 189 ಹುದ್ದೆಗಳಿರುವುದು ತಿಳಿದು ಬಂದಿದೆ.
ಒಟ್ಟಾರೆ ಭರ್ತಿಯಾಗಿರುವ 400 ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವರ ಸಂಖ್ಯೆ ಕೇವಲ 76 ಮಾತ್ರ. ಗ್ರೂಪ್ ಎ ವೃಂದದಲ್ಲಿ 25, ಬಿ ವೃಂದದಲ್ಲಿ 14, ಸಿ ವೃಂದದಲ್ಲಿ 30, ಡಿ ವೃಂದದಲ್ಲಿ 7 ಮಂದಿ ನೇಮಕವಾಗಿದ್ದಾರೆ.
ಆದೇ ರೀತಿ ಆದಿ ಕರ್ನಾಟಕ, ಲಂಬಾಣಿ, ಛಲವಾದಿ, ಭೋವಿ, ಮೊಗೇರಾ, ಹರಿಜನ, ರಾಣೇಯಾರ್, ಕೊರಮ, ಹೊಲೆಯ, ಚಮಗಾರ, ಮೋಚಿ, ಮಾದಿಗ ಜಾತಿಗೆ ಸೇರಿದ 23 ಅಧಿಕಾರಿಗಳು ಎ ವೃಂದದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಿ ವೃಂದದಲ್ಲಿ 12, ಸಿ ವೃಂದದಲ್ಲಿ 27, ಡಿ ವೃಂದದಲ್ಲಿ 6 ಸೇರಿ ಒಟ್ಟಾರೆ 68 ಮಂದಿ ಅಧಿಕಾರಿಗಳು ಈ ಜಾತಿಗಳಿಗೆ ಸೇರಿದ್ದಾರೆ.
ಆದಿ ದ್ರಾವಿಡ ಜಾತಿಯಲ್ಲಿನ ಉಪ/ಒಳ ಜಾತಿಗಳಾದ ಭೋವಿ ,ಹರಿಜನ ಜಾತಿಗೆ ಸೇರಿದ ಒಟ್ಟು 6 ಮಂದಿ ಅಧಿಕಾರಿಗಳಿದ್ದಾರೆ. ಈ ಪೈಕಿ ಗ್ರೂಪ್ ಎ ವೃಂದದಲ್ಲಿ 2, ಬಿ ವೃಂದದಲ್ಲಿ 2, ಸಿ ವೃಂದದಲ್ಲಿ 1 ಮತ್ತು ಡಿ ವೃಂದದಲ್ಲಿ 1 ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆದಿ ಆಂಧ್ರ ಜಾತಿಯಲ್ಲಿನ ಉಪ ಜಾತಿಯಾದ ಲಮಾಣಿ ಜಾತಿಗೆ ಸೇರಿದವರು ಇಬ್ಬರು ಅಧಿಕಾರಿಗಳಷ್ಟೇ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಸಿ ವೃಂದದಲ್ಲಿದ್ದಾರೆ. ಎ, ಬಿ ಮತ್ತು ಡಿ ಗುಂಪಿನಲ್ಲಿ ಈ ಜಾತಿಗೆ ಸೇರಿದ ಅಧಿಕಾರಿಗಳು ಇಲ್ಲವಾಗಿದೆ.
ಅದೇ ರೀತಿ 2021-22, 2022-23, 2023-24ರ ಅವಧಿಯಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ ವರ್ಗದವರಿಗೆ ಯಾವುದೇ ಪ್ರತ್ಯೇಕ ಯೋಜನೆಯನ್ನು ರೂಪಿಸಿಲ್ಲ.
ಹೀಗಾಗಿ ಈ ವರದಿಯನ್ನು ಶೂನ್ಯವೆಂದು ಪರಿಗಣಿಸಬೇಕು ಎಂದು ಕೋರಿದೆ. ಅದೇ ರೀತಿ ಪರಿಶಿಷ್ಟ ಜಾತಿಯ ಉಪ ಜಾತಿಗಳ ಫಲಾನುಭವಿಗಳ ವಿವರಗಳಿಗೆ ಸಂಬಂಧಿಸಿದಂತೆ ಅನ್ವಯಿಸುವುದಿಲ್ಲ ಎಂದು ಸಂಸ್ಥೆಯು ವರದಿ ಮಾಡಿದೆ.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಯ ಅಧಿಕಾರಿಗಳು ಈ ಕುರಿತಾದ ಮಾಹಿತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೂ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿಲ್ಲ. ಅಲ್ಲದೇ ಸರ್ಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ 4 ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವ ಅಂಕಿ ಅಂಶವೂ ಇಲ್ಲ ಎಂದು ಕಾಂಗ್ರೆಸ್ ಸರ್ಕಾರವು ಹೇಳಿತ್ತು.
ಅಲ್ಲದೇ 2011ರ ಜನಗಣತಿಯಂತೆಯೇ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಕಾಂಗ್ರೆಸ್ ಸರ್ಕಾರವು ಸಮರ್ಥಿಸಿಕೊಂಡಿತ್ತು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿದ್ದ ಟಿಪ್ಪಣಿಯಲ್ಲಿ ಈ ಅಂಶವಿದೆ. 2024ರ ಅಕ್ಟೋಬರ್ 25ರಂದು ಮಂಡಿಸಿತ್ತು.
2011ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಇದೆ. ಈ ಪೈಕಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿ ಇದೆ. (ಗ್ರಾಮೀಣ 75 ಲಕ್ಷ ಮತ್ತು ನಗರ 30 ಲಕ್ಷ) ರಾಜ್ಯದ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಶೇ.17.15ರಷ್ಟು ಇದೆ.
‘2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿರುವುದಿಲ್ಲ. ಕಾರಣ ಒಟ್ಟಾರೆ ಜಾತಿವಾರು ನಿಖರ ಜನಸಂಖ್ಯೆ 97.56 ಲಕ್ಷ ಎಂದು ಪರಿಗಣಿಸಲಾಗಿದೆ. ಈ ಜನಸಂಖ್ಯೆಯಲ್ಲಿ ಆದಿ ಕರ್ನಾಟಕ ಜನಸಂಖ್ಯೆ 29.21 ಲಕ್ಷ ಮತ್ತು ಆದಿ ದ್ರಾವಿಡರು 7.95 ಲಕ್ಷ ಸಂಖ್ಯೆಯಲ್ಲಿದ್ದಾರೆ,’ ಎಂದು ಟಿಪ್ಪಣಿಯಲ್ಲಿ ಅಂಕಿ ಅಂಶಗಳನ್ನು ಒದಗಿಸಿತ್ತು.
ಮೊದಲ ಗುಂಪಿನಲ್ಲಿ (ಶೇ.6) ಆದಿದ್ರಾವಿಡ, ಭಂಬಿ, ಮಾದಿಗ, ಸಮಗಾರ ಒಟ್ಟು 4 ಜಾತಿಗಳಿವೆ. ಈ ಗುಂಪಿನ ಒಟ್ಟು ಜನಸಂಖ್ಯೆ 32.60 ಲಕ್ಷ ಇದೆ. ಎರಡನೇ ಗುಂಪಿನಲ್ಲಿ ಆದಿ ಕರ್ನಾಟಕ, ಛಲವಾದಿ, ಚನ್ನದಾಸರ, ಹೊಲೆಯ, ಮಹರ್ ಜಾತಿಗಳಿವೆ. ಈ ಗುಂಪಿನಲ್ಲಿ ಒಟ್ಟು 32.58 ಲಕ್ಷ ಜನಸಂಖ್ಯೆ ಇದೆ. ಮೂರನೇ ಗುಂಪಿನಲ್ಲಿ ಬಂಜಾರ ಹಾಗೂ ಇದರ ಸಮನಾಂತರ ಜಾತಿಗಳಿವೆ.
ಭೋವಿ ಮತ್ತು ಇದರ ಸಮನಾಂತರ ಜಾತಿಗಳು, ಕೊರಚ,/ಕೊರಚರ್ ಮತ್ತು ಕೊರಮ/ಕೊರವ,/ಕೊರವಾರ್ ಜಾತಿ ಸೇರಿ ಒಟ್ಟು 4 ಜಾತಿಗಳಿವೆ. ಈ ಗುಂಪಿನಲ್ಲಿ ಒಟ್ಟು 26.51 ಲಕ್ಷ ಜನಸಂಖ್ಯೆ ಇದೆ. ನಾಲ್ಕನೇ ಗುಂಪಿನಲ್ಲಿ (ಮೊದಲ ಮತ್ತು ಎರಡನೇ ಗುಂಪು) ಈ ಹಿಂದೆ ಅಸ್ಪ್ರಶ್ಯತೆಗೆ ಒಳಗಾದ ಮತ್ತು ಕಡಿಮೆ ಜನಸಂಖ್ಯೆ ಇರುವ ಒಟ್ಟು 88 ಪರಿಶಿಷ್ಟ ಜಾತಿಗಳನ್ನು ಸೇರಿಸಲಾಗಿದೆ. ಈ ಗುಂಪಿನಲ್ಲಿ ಒಟ್ಟು 5.87 ಲಕ್ಷ ಜನಸಂಖ್ಯೆ ಇದೆ.
‘2011ರ ಜನಸಂಖ್ಯೆಯ ಆಧಾರದ ಮೇಲೆ ಒಳ ಮೀಸಲಾತಿ ಮಾಡಲಾಗಿದೆ. ಆದರೆ ಸರ್ಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ ನಾಲ್ಕು ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವುದೇ ಅಂಕಿ ಅಂಶವೂ ಇಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.
ಸಮರ್ಥನೆ ಏನು?
ಪಂಜಾಬ್ ರಾಜ್ಯ ಸರ್ಕಾರ ಇತರರ ಮತ್ತು ದಾವಿಂದರ್ ಸಿಂಗ್ ಮತ್ತಿತರರು (ಸಿವಿಲ್ ಅಪೀಲು 2317 /2011) ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1ರಂದು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಗಳು ಭಾರತ ಸಂವಿಧಾನದ ಅನುಚ್ಛೇಧ 15(4) ಮತ್ತು 16(4)ರಂತೆ ಶಿಕ್ಷಣ ಮತ್ತು ರಾಜ್ಯ ಸರ್ಕಾರದ ಅಧೀನದ ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಆದ್ದರಿಂದ 2011ರ ಜನಗಣತಿಯಂತೆ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸುವುದು ಸಮರ್ಥನೀಯವಾಗಿರುತ್ತದೆ ಎಂದು ಟಿಪ್ಪಣಿಯಲ್ಲಿ ವಿವರಿಸಿತ್ತು.
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಅವರ ನೇತೃತ್ವದ ಆಯೋಗದ ಶಿಫಾರಸ್ಸು ಪ್ರಸ್ತುತವಲ್ಲ ಎಂದು ಹಿಂದಿನ ಬಿಜೆಪಿ ಸರ್ಕಾರವೇ ಆದೇಶ ಹೊರಡಿಸಿತ್ತು.
ಒಳ ಮೀಸಲಾತಿ; ಪ್ರಸ್ತುತವಾಗದ ಸದಾಶಿವ ಆಯೋಗದ ವರದಿ, ಚರ್ಚೆಗೆ ಗ್ರಾಸವಾದ 2 ವರ್ಷದ ಹಿಂದಿನ ಆದೇಶ
ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಬಗ್ಗೆ ಭಾರತ ಸಂವಿಧಾನಕ್ಕೆ ಅನುಚ್ಛೇಧ 341ರಲ್ಲಿ ತಿದ್ದುಪಡಿ ಮೂಲಕ Clasue (3)ನ್ನು ಸೇರಿಸಲು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಂಬಂಧ ತೆರೆದಿರುವ ಕಡತದಲ್ಲಿ ಈ ಆದೇಶದ ಅಂಶವನ್ನು ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.