ವಸೂಲಾಗದ ಸಾಲ ಸಚಿವ ರಮೇಶ್‌ ಜಾರಕಿಹೊಳಿ ಒಡೆತನದ ಕಂಪನಿಯಲ್ಲೇ ಹೆಚ್ಚು

ಬೆಂಗಳೂರು; ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರ ಒಡೆತನದ  ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್‌, ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿರುವ ಸಾಲವನ್ನು ತೀರಿಸದೇ ಅನುತ್ಪಾದಕ ಸಾಲಗಾರರ ಪಟ್ಟಿಗೆ ಸೇರ್ಪಡೆಯಾಗಿದೆ. ರಾಜಕೀಯ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳ ಪೈಕಿ ರಮೇಶ್‌ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯಲಕ್ಷ್ಮಿ ಶುಗರ್ಸ್‌ ಲಿಮಿಟೆಡ್‌ನಲ್ಲೇ ವಸೂಲಾಗದ ಆಸ್ತಿ ಪ್ರಮಾಣ ಹೆಚ್ಚಿದೆ. 

ಈ ಕಾರ್ಖಾನೆ ವಿವಿಧ ಉದ್ದೇಶಗಳ ಹೆಸರಿನಲ್ಲಿ ಪಡೆದಿರುವ  ಸಾಲಗಳಲ್ಲಿ  2019ರ ಮಾರ್ಚ್‌ 31ರ ಅಂತ್ಯಕ್ಕೆ ಅಸಲು ಒಟ್ಟು 74.48 ಕೋಟಿ ರು., 29.05 ಕೋಟಿ ರು. ಬಡ್ಡಿ ಸೇರಿ ಒಟ್ಟು 103.54 ಕೋಟಿ ರು.ಬಾಕಿ ಇದೆ. ಆದರೆ ಈ ಸಾಲ ಸುಸ್ತಿಯಾಗಿದೆಯಲ್ಲದೆ 2017ರ ಏಪ್ರಿಲ್‌ 16ರಂದೇ ಇದು ವಸೂಲಾಗದ ಆಸ್ತಿ(ಎನ್‌ಪಿಎ)  ಎಂದು ಬ್ಯಾಂಕ್‌ ಪರಿಗಣಿಸಿದೆ. 

ಕೇವಲ ರಮೇಶ್‌ ಜಾರಕಿಹೊಳಿ ಮಾತ್ರವಲ್ಲ ಕಾಂಗ್ರೆಸ್‌ನ ಪ್ರಭಾವಿ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳೂ ಇದೇ ಪಟ್ಟಿಗೆ ಸೇರಿವೆ. ಇವರ  ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳು ಅಪೆಕ್ಸ್‌ ಬ್ಯಾಂಕ್‌ನಿಂದ ವಿವಿಧ ಉದ್ದೇಶಗಳಿಗಾಗಿ ಪಡೆದಿದ್ದ ಸಾಲ ಮರುಪಾವತಿಯಾಗದ ಕಾರಣ ವಸೂಲಾದ ಆಸ್ತಿ ಎಂದು ಪರಿಗಣಿಸಿದೆ ಎಂದು  ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ ಡಿ ನರಸಿಂಹಮೂರ್ತಿ ನೇತೃತ್ವದ ತನಿಖಾ ತಂಡ ಬಯಲು ಮಾಡಿದೆ. 

ಸೌಭಾಗ್ಯಲಕ್ಷ್ಮಿ ಶುಗರ್ಸ್‌ ಲಿಮಿಟೆಡ್‌ಗೆ ಸಕ್ಕರೆ ದಾಸ್ತಾನು ಆಧಾರದ ಮೇಲೆ ದುಡಿಯುವ ಬಂಡವಾಳವಾಗಿ ಸಾಲ ಮಂಜೂರಾಗಿತ್ತು. ಆದರೆ ಮಂಜೂರಾತಿ ಮಾಡುವ ಮುನ್ನ ಅಥವಾ ಆ ನಂತರವಾಗಲಿ ಸಕ್ಕರೆ ದಾಸ್ತಾನು ಇರುವ ಬಗ್ಗೆ ಯಾವುದೇ ದಾಖಲೆಗಳು ಬ್ಯಾಂಕ್ ಅಧಿಕಾರಿಗಳ  ಬಳಿ ಇರಲಿಲ್ಲ ಎಂಬುದನ್ನು ತನಿಖಾ ತಂಡ ಹೊರಗೆಡವಿದೆ. 

ರಮೇಶ್‌ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್‌ಗೆ ಅಪೆಕ್ಸ್‌ ಬ್ಯಾಂಕ್‌ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒಟ್ಟು 122.38 ಕೋಟಿ ರು.ಸಾಲ ನೀಡಿತ್ತು. ಇದರಲ್ಲಿ ಅವಧಿ ಸಾಲದ ರೂಪದಲ್ಲಿ 10.00 ಕೋಟಿ ರು.(2014ರ ಏಪ್ರಿಲ್‌  15), 2014ರ ನವೆಂಬರ್‌ 12ರಂದು 35 ಕೋಟಿ ರು.,  2013ರ ಜುಲೈ 12ರಂದು ದುಡಿಯುವ ಬಂಡವಾಳ ರೂಪದಲ್ಲಿ 60.00 ಕೋಟಿ ರು., 2017ರ ಮಾರ್ಚ್‌ 2017ರಂದು 9.50 ಕೋಟಿ ರು., 2016ರ ಮಾರ್ಚ್‌ 31ರಂದು ಬ್ರಿಡ್ಜ್‌ ಲೋನ್‌ ರೂಪದಲ್ಲಿ 7.88 ಕೋಟಿ ರು., ಸಾಲ ಮಂಜೂರಾಗಿತ್ತು ಎಂಬ ವಿಚಾರ ತನಿಖಾ ವರದಿಯಿಂದ ತಿಳಿದು ಬಂದಿದೆ. 

ಈ ಪೈಕಿ ಕಾರ್ಖಾನೆ ವಿಸ್ತರಣೆಗೆಂದು  10.00 ಕೋಟಿ ರು., ಎಥೆನಾಲ್‌ ಘಟಕ ಸ್ಥಾಪಿಸಲು 35.00 ಕೋಟಿ ರು., ಮತ್ತು ಬಾಕಿ ಇರುವ ಎಥೆನಾಲ್‌ ಘಟಕಕ ಹಾಕಲು 7.88 ಕೋಟಿ ರು ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಬ್ಯಾಂಕ್‌ನ ಅಧಿಕಾರಿಗಳು ಕಾರ್ಖಾನೆಯಿಂದ ದೃಢೀಕರಣ ಪತ್ರವನ್ನು ಪಡೆದಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ದಾಖಲಾತಿಗಳು ಲಭ್ಯವಿರಲಿಲ್ಲ  ಎಂಬುದನ್ನು ತನಿಖಾ ತಂಡ ಬಹಿರಂಗಗೊಳಿಸಿದೆ. 

ಮತ್ತೊಂದು ವಿಶೇಷವೆಂದರೆ ಕಾರ್ಖಾನೆ ಹೊಂದಿರುವ 16.00 ಕೋಟಿ ರು ಮತ್ತು 21.10 ಕೋಟಿ ರು. ಮೌಲ್ಯದ  ಸ್ಥಿರಾಸ್ತಿಯನ್ನು ಬ್ಯಾಂಕ್‌ ಅಡಮಾನ ಇರಿಸಿಕೊಂಡಿತ್ತಾದರೂ ಸ್ಥಿರಾಸ್ತಿಯ ಮೌಲ್ಯವು ನೀಡಿರುವ ಸಾಲದ ಮೊತ್ತಕ್ಕಿಂತ ಕಡಿಮೆ ಇತ್ತು.  ಅದೇ  ರೀತಿ ಸಕ್ಕರೆ ದಾಸ್ತಾನು ಆಧಾರದ ಮೇಲೆ ದುಡಿಯುವ ಬಂಡವಾಳ  60.00 ಕೋಟಿ ಮತ್ತು 9.50 ಕೋಟಿ ರು. ಬಿಡುಗಡೆ ಮಾಡಿದ್ದ ಅಪೆಕ್ಸ್‌ ಬ್ಯಾಂಕ್‌, ಹಣ ಬಿಡುಗಡೆ ಸಂದರ್ಭದಲ್ಲಿ ಸಕ್ಕರೆ ದಾಸ್ತಾನು ಇರುವ ಬಗ್ಗೆ  ಖಾತರಿಪಡಿಸಿಕೊಂಡಿರಲಿಲ್ಲ ಎಂಬ ಸಂಗತಿ ತನಿಖಾ ವರದಿಯಿಂದ ತಿಳಿದು ಬಂದಿದೆ. 

ಒಟ್ಟು 103.54 ಕೋಟಿ ರು.ವಸೂಲಾಗದ ಆಸ್ತಿ ಎಂದು ಪರಿಗಣಿಸಿರುವ ಅಪೆಕ್ಸ್ ಬ್ಯಾಂಕ್‌, ಸುಸ್ತಿ ಸಾಲದ ವಸೂಲಾತಿಗಾಗಿ ಸರ್‌ಫೇಸಿಯಾ ಕಾಯ್ದೆ 2002ರ ರೀತಿ ವಸೂಲಾತಿಗೆ ನೋಟಿಸ್‌ ನೀಡಿರುವುದು ವರದಿಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts