‘ದಿ ಫೈಲ್‌’ ವರದಿ ಪರಿಣಾಮ; ಮೂವರು ಐಎಎಸ್‌ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ದಾಖಲು

ಬೆಂಗಳೂರು; ನಾಲ್ಕು ಕೋಟಿ ರು.ಗೂ ಅಧಿಕ ಮೊತ್ತದ ಅನುದಾನ ಬಳಕೆ ಪ್ರಮಾಣ ಪತ್ರ ಸಲ್ಲಿಸದಿರುವುದು ಸೇರಿದಂತೆ ಇನ್ನಿತರೆ ನಿಯಮಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿದ್ದ ಐಎಎಸ್‌ ಅಧಿಕಾರಿ ಡಾ ಪಿ ಸಿ ಜಾಫರ್‌, ಡಾ ಎಂ ಒ ರೇಜು, ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಈಗಿನ ಆಯುಕ್ತ ಕೆ ಪಿ ಜಗದೀಶ್‌ ಸೇರಿದಂತೆ ಒಟ್ಟು 7 ಮಂದಿ ಅಧಿಕಾರಿಗಳ ವಿರುದ್ಧ ಲಂಚಮುಕ್ತ ಕರ್ನಾಟಕ ವೇದಿಕೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಿಸಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಲೆಕ್ಕ ಪರಿಶೋಧನಾ ವರದಿ ಆಧರಿಸಿ  ‘ದಿ ಫೈಲ್‌’ ವಿಶೇಷ ವರದಿ ಪ್ರಕಟಿಸಿತ್ತು. ‘ದಿ ಫೈಲ್‌’ ವರದಿ ಮತ್ತು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಇಲಾಖೆಯ ವರದಿ ಆಧರಿಸಿ ಲಂಚಮುಕ್ತ ಕರ್ನಾಟಕ ವೇದಿಕೆಯ ಸಂಘಟನಾ ಕಾರ್ಯದರ್ಶಿ ಎಚ್‌ ಎಂ ವೆಂಕಟೇಶ್‌ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ. 

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಸುಮಂಗಲ,ಯಶೋಧ ಬೋಪಣ್ಣ, ಡಿ  ಎಂ ದಾನೋಜಿ, ಎಂ ಜಿ ಜೈಪ್ರಕಾಶ್‌ ಅವರ ಕರ್ತವ್ಯ ಲೋಪವನ್ನೂ ವೇದಿಕೆ ತನ್ನ ದೂರಿನಲ್ಲಿ ಉಲ್ಲೇಖಿಸಿದೆ. 

2017-18 ಮತ್ತು 2018-19ನೇ ಸಾಲಿನ ಲೆಕ್ಕ ಪರಿಶೋಧನ ವರದಿಯಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ  ವಾರ್ಷಿಕ ಪರೀಕ್ಷೆ ಚಟುವಟಿಕೆಗಳಿಗೆ ಬಿಡುಗಡೆ ಮಾಡಿದ್ದ ಅನುದಾನ, ಮೌಲ್ಯಮಾಪನ ಚಟುವಟಿಕೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿನ ಲೋಪಗಳನ್ನು ಬಯಲಿಗೆಳೆದಿತ್ತು. ಅಲ್ಲದೆ, ಆರ್ಥಿಕ ಅಶಿಸ್ತು ಮತ್ತು ಆಡಳಿತ ನಿರ್ಲಕ್ಷ್ಯಗಳನ್ನು ಲೆಕ್ಕ ಪರಿಶೋಧನೆ ವರದಿ ಬಹಿರಂಗಗೊಳಿಸಿತ್ತು. 

‘ಕಾಲಕಾಲಕ್ಕೆ ಸರಿಯಾಗಿ ಪರೀಕ್ಷೆಗಳನ್ನು ನಡೆಸಿ ಉತ್ತರ ಪತ್ರಿಕೆಗಳ  ಮೌಲ್ಯಮಾಪನ ಮಾಡಿ  ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ನ್ಯಾಯವಾಗಿ ಸಿಗುವ ಹಣಕಾಸಿನ ಸೌಲಭ್ಯ ಮತ್ತು ಮೌಲ್ಯಮಾಪನಗಳಿಂದ ಮಾರ್ಕ್ಸ್‌ಕಾರ್ಡ್‌ಗಳನ್ನು ವಿತರಿಸುವ ಜವಾಬ್ದಾರಿಯನ್ನು ಹೊಂದಿರುವ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು  ತನ್ನ ವ್ಯಾಪ್ತಿಯಲ್ಲಿ ಕೆಲಸವನ್ನು ನಿರ್ವಹಿಸದೆ ಕರ್ತವ್ಯಲೋಪ ಎಸಗಿದ್ದಾರೆ. ಅಲ್ಲದೆ ಆರ್ಥಿಕ ವ್ಯವಹಾರಗಳಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸದೆ ಅವ್ಯವಹಾರ ನಡೆಸಿರುವುದನ್ನು ಲೆಕ್ಕ ಪರಿಶೋಧನೆ  ವರದಿಯಲ್ಲಿ ವಿವರಿಸಲಾಗಿದೆ. ಇದಕ್ಕೆ ಕಾರಣರಾದ ಮತ್ತು ಲೆಕ್ಕ ಪರಿಶೋಧನೆ ವರದಿಯಲ್ಲಿ ಉಲ್ಲೇಖಿಸಿರುವ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಿ ಶಿಕ್ಷೆ ವಿಧಿಸಬೇಕು,’ ಎಂದು ವೇದಿಕೆಯ ಸಂಘಟನಾ ಕಾರ್ಯದರ್ಶಿ ಎಚ್‌ ಎಂ ವೆಂಕಟೇಶ್‌ ಅವರು ದೂರಿನಲ್ಲಿ ಕೋರಿದ್ದಾರೆ. 

ಮಂಡಳಿಯ ಅಧ್ಯಕ್ಷರು, ಸದಸ್ಯರು ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಲೆಕ್ಕ ಪತ್ರಗಳನ್ನು ಸರಿಯಾಗಿ ನೀಡದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿರುವ ವೇದಿಕೆ, ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಬೇಕು ಎಂದು ದೂರಿನಲ್ಲಿ ತಿಳಿಸಿದೆ. 

ವೆಚ್ಚದ ವಿವರವೇ ಇಲ್ಲ

2018 ಮತ್ತು 2019ರ ಮಾರ್ಚ್  ಮತ್ತು ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ದಿನಗಳಂದು ಪರಿಶೀಲಿಸುವ ಉದ್ದೇಶಕ್ಕೆ 34  ಜಿಲ್ಲಾ ಉಪ ನಿರ್ದೇಶಕರುಗಳಿಗೆ ಇಂಧನ ಸೇರಿದಂತೆ ಇನ್ನಿತರೆ ವೆಚ್ಚವೆಂದು ಬಿಡುಗಡೆಯಾಗಿದ್ದ ಒಟ್ಟು 1.36 ಕೋಟಿ ರು. ಪೈಕಿ ಬಳಕೆ ಮಾಡಿ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಬಹುತೇಕ ಜಿಲ್ಲಾ ಉಪನಿರ್ದೇಶಕರುಗಳು ಮಂಡಳಿಗೆ ಹಿಂತಿರುಗಿಸಿರಲಿಲ್ಲ. ಅಲ್ಲದೆ ಇಲಾಖೆ ಅಧಿಕಾರಿಗಳಿಗೆ ಬಿಡುಗಡೆಯಾಗಿರುವ ಹಣಕ್ಕೆ ವೆಚ್ಚದ  ವಿವರಗಳೇ ಇರಲಿಲ್ಲ ಎಂದು  ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು. 

‘ನಿಗದಿತ ಸಮಯದಲ್ಲಿ ಮಂಡಳಿಗೆ ಬರಬೇಕಾದ ಹಣವು ಇದುವರೆಗೂ  ಮಂಡಳಿಗೆ  ಸಲ್ಲಿಕೆಯಾಗದಿರುವುದು ಆಡಳಿತದಲ್ಲಿನ ನಿರ್ಲಕ್ಷ್ಯತೆ ತೋರುತ್ತದೆ,’ ಎಂದು ವರದಿಯಲ್ಲಿ ಲೆಕ್ಕ ಪರಿಶೋಧಕರು ಅಭಿಪ್ರಾಯಿಸಿದ್ದರು. 

2017-18ನೇ ಸಾಲಿನ ಪ್ರಶ್ನೆಪತ್ರಿಕೆ ಮುದ್ರಣ, ಸರಬರಾಜು (ಗೌಪ್ಯ) ಬಾಬ್ತಿಗೆ  ಸಂಬಂಧಿಸಿದಂತೆ ಮಂಡಳಿ ಪಾವತಿಸಿದ್ದ   ಒಟ್ಟು 3.11  ಕೋಟಿ  ರು.ಗೆ ಸಂಬಂಧಿಸಿದ ಪಾವತಿ ವೋಚರ್ಸ್‌ ಹಾಗೂ ಪೂರಕ ದಾಖಲೆಗಳನ್ನು ಲೆಕ್ಕ ಪರಿಶೋಧನೆಯ ಪರಿಶೀಲನೆಗೆ ಮಂಡಳಿ ಹಾಜರುಪಡಿಸಿರಲಿಲ್ಲ ಎಂಬುದನ್ನು ಲೆಕ್ಕ ಪರಿಶೋಧಕರು ಬಹಿರಂಗಪಡಿಸಿದ್ದರು. 

2017-18 ಮತ್ತು 2018-19 ನೇ ಸಾಲಿನ ಪರೀಕ್ಷೆಗಳ ಮೌಲ್ಯಮಾಪನ ಕ್ಯಾಂಪ್‌ಗಳ ಬಿಲ್‌ಗಳು ನಿಯಮಬಾಹಿರವಾಗಿ ಮೌಲ್ಯಮಾಪಕರಿಗೆ ಪಾವತಿಯಾಗಿದೆ ಎಂಬ ಅಂಶವನ್ನು ಲೆಕ್ಕಪರಿಶೋಧನೆ ವರದಿ ಹೊರಗೆಡವಿತ್ತು. ನಿಗದಿಯಂತೆ ಪ್ರತಿ ಶಿಕ್ಷಕರಿಗೆ ಪ್ರತಿ  ದಿನ 20 ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಿರ್ವಹಿಸಬೇಕು. ಆದರೆ ಉತ್ತರ ಪತ್ರಿಕೆಗಳು ಮತ್ತು ಶಿಕ್ಷಕರ ಅನುಪಾತದಲ್ಲಿ ವ್ಯತ್ಯಾಸವಿರುವುದನ್ನು ಲೆಕ್ಕ ಪರಿಶೋಧಕರು ತನಿಖೆಯಲ್ಲಿ ಪತ್ತೆ ಹಚ್ಚಿದ್ದರು.

ಇದಲ್ಲದೆ ಮೌಲ್ಯಮಾಪಕರಿಗೆ 2017-18ನೇ ಸಾಲಿನಲ್ಲಿ ಪಾವತಿಯಾಗಿರುವ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು  ಸಂಭಾವನೆ ಪಾವತಿಗಳ ಬಿಲ್‌ಗಳಲ್ಲಿ ಹಲವು ನ್ಯೂನತೆಗಳು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಬೆಳಕಿಗೆ ಬಂದಿತ್ತು

ಕೆಲವು ಮೌಲ್ಯಮಾಪಕರ  ಪ್ರಯಾಣ ಭತ್ಯೆ,  ದಿನಭತ್ಯೆ ಮತ್ತು ಸಂಭಾವನೆ ಬಿಲ್‌ಗಳಲ್ಲಿ ಮೊತ್ತಗಳನ್ನು ಹಾಗೂ ವಿಷಯ ಪತ್ರಿಕೆಗಳನ್ನು ತಿದ್ದಿದ್ದಾರೆ. ಹಾಗೆಯೇ ಅದನ್ನು ಬಿಳಿ ಶಾಯಿಯಿಂದ ಹಚ್ಚಿರುವುದು  ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. 

ಮೌಲ್ಯಮಾಪಕರ ಪ್ರಯಾಣಕ್ಕೆ ಸಂಬಂಧಿಸಿದ ದಿನಚರಿಯೇ ಇಲ್ಲ. ಆದೇಶದ ಪ್ರತಿ ಹಾಗೂ ಹಾಜರಾತಿ ಪತ್ರವೂ ಇಲ್ಲ ಎಂಬ ಸಂಗತಿಯನ್ನು ಹೊರಗೆಡವಿದ್ದ ಲೆಕ್ಕ ಪರಿಶೋಧಕರು ಮೌಲ್ಯಮಾಪಕರು ಯಾವ ದಿನಾಂಕ, ಯಾವ ಸ್ಥಳಕ್ಕೆ ಹಾಜರಾಗಿದ್ದರು  ಎಂಬ ಬಗ್ಗೆ ತಿಳಿಯಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ವಿವರಿಸಿದ್ದರು. 

ಗೌಪ್ಯತಾ ವೆಚ್ಚಕ್ಕೆಂದು ಒಟ್ಟು 60,12,667 ರು.ಪಾವತಿಯಾಗಿದೆಯಾದರೂ ಈ ವೆಚ್ಚಗಳಿಗೆ ಸಂಬಂಧಿಸಿದಂತೆ ದರ ನಿಗದಿ, ಪರಿಮಾಣ, ಗುಣಮಟ್ಟ,  ಕಾಲಮಿತಿಯಲ್ಲಿ ಕಾರ್ಯನಿರ್ವಹಣೆ ಮಾಹಿತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸದ ಕಾರಣ ಈ ಮೊತ್ತವನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿದ್ದಾರೆ.

the fil favicon

SUPPORT THE FILE

Latest News

Related Posts