ಬೆಂಗಳೂರು; ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆ ಮೂಲಕ ದೇಶದ ಸಾರ್ವಭೌಮೆ, ಏಕತೆ, ಭದ್ರತೆಗೆ ಹಾನಿಯನ್ನುಂಟು ಮಾಡಲಿದ್ದಾನೆ ಎಂಬ ಆರೋಪಕ್ಕೆ ಒಳಗಾಗಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಚೆನ್ನೈ ಮೂಲದ ಅನಿರುದ್ಧ ರಾಜನ್ ಎಂಬಾತನ ಪ್ರಕರಣವನ್ನು ಎನ್‌ಐಎಗೆ ವಹಿಸುವ ಸಂಬಂಧ ಅಗತ್ಯ ಕ್ರಮ ವಹಿಸಬೇಕು ಎಂದು ರಾಜ್ಯ ಗೃಹ ಇಲಾಖೆಯು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ.
ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ(ಯುಎಪಿಎ) ಅಡಿಯಲ್ಲಿ 2024ರ ಸೆಪ್ಟಂಬರ್‍ನಲ್ಲೇ ಪ್ರಕರಣ ದಾಖಲಾಗಿದೆ. ಈ ಪ್ರಕರಣವು ಎನ್‌ಐಎ ಪ್ರಕರಣಗಳೊಂದಿಗೆ ಸಂಬಂಧವಿರುವ ಕಾರಣ ಎನ್‌ಐಎಗೆ ವಹಿಸಬೇಕು ಎಂದು ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ನಾಲ್ಕು ತಿಂಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.
ಇದೀಗ ಈ ಪ್ರಕರಣದ ಕುರಿತು ಅಗತ್ಯ ಕ್ರಮ ವಹಿಸಬೇಕು ಎಂದು ರಾಜ್ಯ ಸರ್ಕಾರದ ಗೃಹ ಇಲಾಖೆಯು ಡಿಜಿಪಿಗೆ ಪತ್ರ ಬರೆದಿದೆ.
ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿರುವುದು ಮತ್ತು ದೇಶದ ಸಾರ್ವಭೌಮತೆ, ಏಕತೆ, ಸಮಗ್ರತೆ ಹಾಗೂ ಭದ್ರತೆಗೆ ಅನಿರುದ್ಧ ರಾಜನ್ ಎಂಬಾತ ಹಾನಿಯುಂಟು ಮಾಡಿದ್ದಾನೆ ಎಂಬ ಪ್ರಕರಣವನ್ನು ಎನ್‌ಐಎಗೆ ವಹಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಗೃಹ ಇಲಾಖೆಯು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.
ಈ ಕುರಿತು ಒಳಾಡಳಿತ ಇಲಾಖೆಯ ಅಧಿಕಾರಿಗಳು ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2025ರ ಜನವರಿ 3ರಂದೇ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯು ಬರೆದಿರುವ ಪತ್ರವೂ ಸೇರಿದಂತೆ ಹಲವು ಮಹತ್ವದ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಯುಎಪಿಎ 1967ರ ಕಲಂ 10ರ ಅಡಿಯಲ್ಲಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 2024ರ ಸೆ. 5ರಂದು ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣದ ಕುರಿತು ಕೇಂದ್ರ ಸರ್ಕಾರವು 2024ರ ಸೆ.13ರಂದೇ ರಾಜ್ಯದಿಂದ ಹೆಚ್ಚಿನ ಮಾಹಿತಿ ಬಯಸಿತ್ತು. ಮತ್ತು ಈ ಪ್ರಕರಣವನ್ನು ಎನ್‌ಐಎ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಅಗತ್ಯ ಕ್ರಮ ವಹಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯಕ್ಕೆ ಪತ್ರ ಬರೆದಿತ್ತು.
ಕೇಂದ್ರದ ಪತ್ರದಲ್ಲೇನಿದೆ?
ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ಯುಎಪಿಎ ಕಾಯ್ದೆಯಡಿಯಲ್ಲಿ ಚೆನ್ನೈ ಮೂಲದ ಅನಿರುದ್ಧ ರಾಜನ್ ಎಂಬಾತನ ವಿರುದ್ಧ ದಾಖಲಾಗಿರುವ (ಎಫ್‌ಐಆರ್ ಸಂಖ್ಯೆ; 0207/2024, 02.09.2024) ಪ್ರಕರಣದ ಮಾಹಿತಿಯನ್ನು ಕೇಂದ್ರ ಸರ್ಕಾರವು ಸ್ವೀಕರಿಸಿದೆ.
ವಿಚಾರಣೆ ವೇಳೆಯಲ್ಲಿ ತನ್ನ ಮೂಲ ಮಾಹಿತಿಯನ್ನು ಮರೆ ಮಾಚಿದ್ದನು. ನಿಷೇಧಿತ ಸಂಘಟನೆಯ ವಿಚಾರಗಳನ್ನು ಪ್ರಚಾರ ಮಾಡಲು ಮತ್ತು ಸದಸ್ಯರನ್ನು ಸಂಪರ್ಕಿಸಲು ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಆಧಾರ್ ಸೃಷ್ಟಿಸಿಕೊಂಡಿದ್ದಾನೆ. ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಬಳಸಿಕೊಂಡಿದ್ದಾನೆ.
ಬೇರೆ ಬೇರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡಿದ್ದಾನೆ. ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯನಾಗಿ ದೇಶದ ಸಾರ್ವಭೌಮತ್ವಕ್ಕೆ, ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಹಾನಿಯನ್ನುಂಟು ಮಾಡುವ ಉದ್ದೇಶ ಹೊಂದಿದ್ದಾನೆ. ಈತನಿಂದ 2 ಬ್ಯಾಗ್‌ಗಳು, ಪೆನ್ ಡ್ರೈವ್, ಟ್ಯಾಬ್ ಮತ್ತು ವಿಕಾಸ್ ಫಾಡ್ಗೆ ಹೆಸರಿನಲ್ಲಿ ಮಾಡಿಸಿಕೊಂಡಿರುವ ಆಧಾರ್ ಕಾರ್ಡ್ ಕೂಡ ಪತ್ತೆಯಾಗಿದೆ. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಕರಣವು ಎನ್‌ಐಎ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಕೇಂದ್ರ ಗೃಹ ಮಂತ್ರಾಲಯವು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಬರೆದಿದ್ದ ಪತ್ರದಲ್ಲಿ ವಿವರಿಸಿತ್ತು.
ಬಂಧಿತ ವ್ಯಕ್ತಿ ಅನಿರುದ್ಧ ರಾಜನ್, ಎನ್‌ಆರ್‍ಬಿ (Northern Regional Bureau) ವಲಯದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯೊಂದಿಗೆ ಅಂತರ್ (RC-01/2023/NIA/LKW) ಸಂಪರ್ಕವಿದೆ. ನಿಷೇಧಿತ ಸಂಘಟನೆಯ ಸಕ್ರೀಯ ಸದಸ್ಯನಾಗಿದ್ದಾನೆ. ಮತ್ತು ಎನ್‌ಐಎ ಪ್ರಕರಣದಲ್ಲಿ ಈತ ಮುಖ್ಯ ಶಂಕಿತರಲ್ಲಿ ಒಬ್ಬ. ಹಾಗಾಗಿ ಎನ್‌ಐಎ ಕಾಯ್ದೆ 2008ರ ಅಡಿಯಲ್ಲಿ ತನಿಖೆಗೆ ಒಳಪಡಿಸಬೇಕು. ಈ ಸಂಬಂಧ ಸೂಕ್ತ ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ಕೇಂದ್ರ ಸರ್ಕಾರವು ಸೂಚಿಸಿತ್ತು ಎಂಬುದು ಪತ್ರದಿಂದ ತಿಳಿದು ಬಂದಿದೆ.
ಈ ಕುರಿತು ರಾಜ್ಯ ಗೃಹ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2024ರ ನವೆಂಬರ್ 27ರಂದು ಕೇಂದ್ರ ಸರ್ಕಾರದ ಗಮನಕ್ಕೆ ತಂದಿತ್ತು.
ಇದಾದ ನಂತರ ರಾಜ್ಯ ಗೃಹ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 4 ತಿಂಗಳ ನಂತರ ಪೊಲೀಸ್ ಮಹಾನಿರ್ದೇಶಕರಿಗೆ 2025ರ ಜನವರಿ 3ರಂದು ಪತ್ರ ಬರೆದಿದೆ. ‘ಕೇಂದ್ರ ಗೃಹ ಮಂತ್ರಾಲಯವು 2024ರ ಸೆ.13ರಂದು ಬರೆದಿರುವ ಪತ್ರ ಮತ್ತು ಆದೇಶದ ಪ್ರಕಾರ ನಿಯಮಾನುಸಾರ ಮುಂದಿನ ಅಗತ್ಯಕ್ರಮ ಕೈಗೊಳ್ಳಬೇಕು,’ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶಿಸಿರುವುದು ಗೊತ್ತಾಗಿದೆ.
ಈ ಪ್ರಕರಣದ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ಒದಗಿಸಲು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಗಿರೀಶ್ ಎಸ್ ಅವರು, ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೆ 2024ರ ಸೆ.6ರಂದೇ ಪತ್ರ ಬರೆದಿದ್ದರು.
ಈ ಪತ್ರದಲ್ಲೇನಿದೆ?
ಬೆಂಗಳೂರು ನಗರದಲ್ಲಿ ಸಕ್ರೀಯರಾಗಿರುವ ಟೆರೆರಿಸ್ಟ್ ಮತ್ತು ನಕ್ಸಲ್ ಸಂಘಟನೆಯವರ ಮೇಲೆ ನಿಗಾವಹಿಸಿ ಅವರು ನಡೆಸುತ್ತಿರುವ ಇಲ್ಲವೇ ನಡೆಸಲು ಉದ್ದೇಶಿಸಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಬೇಕು ಎಂದು ಭಯೋತ್ಪಾದಕ ದಳಕ್ಕೆ ಸೂಚನೆ ನೀಡಲಾಗಿತ್ತು. ಅದರಂತೆ ಭಯೋತ್ಪಾದಕ ದಳವು ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಬಾತ್ಮಿದಾರರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿತ್ತು.
‘ತಮಿಳುನಾಡು ಚೆನ್ನೈ ಮೂಲದ ಅನಿರುದ್ಧ ರಾಜನ್ ಎಂಬಾತ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದು ಉತ್ತರ ಭಾರತದ ಕಡೆ ಸಕ್ರೀಯ ಆಗಿರುವ ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐ (ಮಾವೋವಾದಿ) ಸಂಘಟನೆಯಲ್ಲಿ ತೊಡಗಿಸಿಕೊಂಡು ಸಂಘಟನೆಯಲ್ಲಿ ಭೂಗತವಾಗಿ ಇದ್ದುಕೊಂಡು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿರುವ ಸದಸ್ಯರ ಜೊತೆ ಸೇರಿ ಕಾರ್ಯನ್ಮುಖವಾಗಿದ್ದಾನೆ. ಈತ ಹಾಲಿ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಬಸ್ ಬಳಸುತ್ತಿದ್ದಾನೆ. ಈತ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೇರೆ ಊರಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಭಯೋತ್ಪಾದಕ ದಳದವರು ಬಂಧಿಸಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈತ ಸಿಪಿಐ (ಮಾವೋವಾದಿ) ನಿಷೇಧಿತ ಸಂಘಟನೆಯ ಧೈಯೋದ್ದೇಶವನ್ನು ಈಡೇರಿಸಲು ತನ್ನ ಇತರೆ ಸಹ ಸದಸ್ಯರೊಂದಿಗೆ ಎಡ ಪಂಥೀಯ ಉಗ್ರ ಚಟುವಟಿಕೆಗಳ ಬಗ್ಗೆ ಸಹಾನುಭೂತಿಯುಳ್ಳ ವ್ಯಕ್ತಿಗಳ ಜತೆಯಲ್ಲಿ 4-5 ವರ್ಷಗಳಿಂದ ಸಂಪರ್ಕ ಬೆಳೆಸಿಕೊಂಡು ಕೊರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಈ ಮೂಲಕ ನಿಷೇಧಿತ ನಕ್ಸ್‌ಲ್ ಸಂಘಟನೆಯನ್ನು ನಡೆಸುವ ಸಲುವಾಗಿ ಹಣ ಸಂಗ್ರಹಣೆ ಮಾಡುವುದು, ಗುಪ್ತವಾಗಿ ರಹಸ್ಯ ಸಭೆಗಳನ್ನು ಏರ್ಪಡಿಸಿ ನಕ್ಸಲ್ ಸಂಘಟನೆಗೆ ದೇಶದ ಯುವಕರನ್ನು ಒಟ್ಟುಗೂಡಿಸಲಾಗುತ್ತಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
‘ಇದು ದೇಶದ ಸಾರ್ವಭೌಮತೆಗೆ, ಏಕತೆಗೆ, ಸಮಗ್ರತೆಗೆ ಹಾಗೂ ಭದ್ರತೆಗೆ ಹಾನಿಯುಂಟು ಮಾಡಿ ದೇಶದಲ್ಲಿ ನಕ್ಸಲ್ ಸಂಘಟನೆಯ ಆಡಳಿತ ನಡೆಸುವ ಉದ್ದೇಶವಾಗಿ ಅಪರಾಧಿಕ ಕೃತ್ಯಗಳನ್ನು ಎಸಗುವ ಸಲುವಾಗಿ ಬೆಂಗಳೂರಿಗೆ ಬಂದಿರುತ್ತಾನೆ,’ ಎಂಬ ಮಾಹಿತಿಯನ್ನು ಹಂಚಿಕೊಂಡಿರುವುದು ಗೊತ್ತಾಗಿದೆ.
ಯಾವ ಪ್ರಶ್ನೆಗೂ ಉತ್ತರಿಸಲಿಲ್ಲವೇ?
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 2024ರ ಸೆ.5ರಂದು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಅನಿರುದ್ಧ ರಾಜನ್ ಎಂಬಾತನನ್ನು ಭಯೋತ್ಪಾದಕ ದಳದವರು ಬಂಧಿಸಿದ್ದರು. ಪೊಲೀಸರು ಕೇಳಿದ್ದ ಯಾವ ಪ್ರಶ್ನೆಗೂ ಉತ್ತರಿಸಿರಲಿಲ್ಲ. ಪ್ರಯಾಣದ ಸ್ಥಳದ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದ. 10-15 ನಿಮಿಷಗಳ ಕಾಲ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ಉಳಿದ ವಿವರಗಳನ್ನು ತಿಳಿಯುವ ಸಲುವಾಗಿ ಮಡಿವಾಳದಲ್ಲಿರುವ ಸಿಸಿಬಿ ವಿಚಾರಣೆ ಕಚೇರಿಗೆ ಕರೆದೊಯ್ದಿದ್ದರು. ಅಲ್ಲಿ ನಡೆದಿದ್ದ ಪ್ರಾಥಮಿಕ ವಿಚಾರಣೆಯಲ್ಲಿಯೂ ತನ್ನ ಹೆಸರನ್ನಷ್ಟೇ ಹೇಳಿದ್ದನೇ ಹೊರತು ಉಳಿದ ಯಾವುದೇ ವಿವರಗಳನ್ನು ತಿಳಿಸಿರಲಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಎಡಪಂಥೀಯ ವಿಷಯಗಳಲ್ಲಿ ಆಕರ್ಷಣೆ
ಈತನನ್ನು ನಿರಂತರವಾಗಿ ವಿಚಾರಣೆ ನಡೆಸಿದ್ದ ಪೊಲೀಸರು ಮತ್ತಷ್ಟು ಮಾಹಿತಿ, ವಿವರಗಳನ್ನು ಬಯಲು ಮಾಡಿದ್ದರು. ‘ತಾನು ಈಗ್ಗೆ 5 ವರ್ಷಗಳ ಹಿಂದೆ ಎಡಪಂಥೀಯ ವಿಷಯಗಳಲ್ಲಿ ಆಕರ್ಷಣೆಯಾಗಿ ತಾನು ಯಾರಿಗೂ ಗೊತ್ತಾಗದಂತೆ ಸಿಪಿಐ (ಮಾವೋವಾದಿ) ಸಂಘಟನೆಯವರೊಂದಿಗೆ ಸಂಪರ್ಕದಲ್ಲಿ ಇಟ್ಟುಕೊಂಡಿದ್ದು ಅದಕ್ಕಾಗಿ ತಾನು ಒಪ್ಪಿಕೊಂಡು ತನ್ನ ಬಳಿ ಇರುವ ಪೆನ್ ಡ್ರೈವ್‌ಗಳಲ್ಲಿ ಸಿಪಿಐ (ಮಾವೋವಾದಿ) ಗೆ ಸಂಬಂಧಿಸಿದ ಲೆಟರ್‍ಗಳು, ಇತ್ಯಾದಿ ವಿಚಾರಗಳು ಇವೆ ಎಂದು ತಿಳಿಸಿದ್ದಾನೆ,’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಈತ ನೀಡಿದ್ದ ಪೆನ್ ಡ್ರೈವ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇದರಲ್ಲಿ ಸಿಪಿಐ (ಮಾವೋವಾದಿ) ಗೆ ಸಂಬಂಧಿಸಿದ ದಾಖಲಾತಿಗಳ ಫೈಲ್‌ಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇನ್ನೂ ಕೆಲವು ಪೆನ್ ಡ್ರೈವ್‌ಗಳನ್ನು ಬೆಂಗಳೂರಿನ ಇಂದಿರಾ ನಗರದ ತನ್ನ ಸ್ನೇಹಿತ ಮನೆಯಲ್ಲಿ ಇದೆ ಎಂದು ತಿಳಿಸಿದ್ದ. ಈತನು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ನಕಲಿ ಆಧಾರ್ ಕಾರ್ಡ್‌ನ್ನು ವಿಕಾಶ್ ಘಾಡ್ಗೆ ಎಂಬ ಹೆಸರಿನಲ್ಲಿ ಮಾಡಿಸಿಕೊಂಡಿದ್ದ ಎಂಬ ಸಂಗತಿಯನ್ನು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.
‘ಈತನು ತನ್ನ ಮೂಲ ಮಾಹಿತಿಯನ್ನು ಮರೆಮಾಚಿ ನಿಷೇಧಿತ ಸಂಘಟನೆಯ ವಿಚಾರಗಳನ್ನು ಪ್ರಚಾರ ಮಾಡಲು ಮತ್ತು ಸದಸ್ಯರನ್ನು ಸಂಪರ್ಕಿಸಲು ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದಲ್ಲದೇ ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಬಳಸಿಕೊಂಡಿದ್ದಾನೆ. ಮತ್ತು ಬೇರೆ ಬೇರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ನಿಷೇಧಿತ ಸಿಪಿಐ ಸಂಘಟನೆಯ ಸದಸ್ಯನಾಗಿ ದೇಶದ ಸಾರ್ವಭೌಮತೆ, ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಹಾನಿಯುಂಟು ಮಾಡಲಿದ್ದಾನೆ,’ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈತನಿಂದ ಮುಂದೆ ಆಗಬಹುದಾದ ಅನಾಹುತ ತಪ್ಪಿಸುವ ಸಲುವಾಗಿ ಈತನನ್ನು ಮತ್ತು ಈತನ ವಶದಲ್ಲಿರುವ 2 ಬ್ಯಾಗ್‌ಗಳು ಮತ್ತು ಆತನ ವಶದಲ್ಲಿದ್ದ ಆತನು ನೀಡಿದ್ದ ಪೆನ್‌ಡ್ರೈವ್‌ನ್ನು ಟ್ಯಾಬ್ ಮತ್ತು ಆತನು ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವುದು ಸಿಸಿಬಿ ವಿಚಾರಣೆ ವೇಳೆಯಲ್ಲಿ ಸಾಬೀತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
‘ಇದು ಷೆಡ್ಯೂಲ್ ಅಪರಾಧವಾಗಿರುವುದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ, ದಳ ಎನ್‌ಐಎ ಕಾಯ್ದೆ 2008ರ ಕಲಂ 6ರ ಪ್ರಕಾರ ಕಡ್ಡಾಯವಾಗಿ ಕೇಂದ್ರ ಸರ್ಕಾರಕ್ಕೆ ಈ ಮಾಹಿತಿ ರವಾನಿಸಬೇಕಾಗಿದೆ. ಉಪ್ಪಾರಪೇಟೆ ಠಾಣೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ವರದಿ ಮತ್ತು ಎಫ್‌ಐಆರ್ ಸಲ್ಲಿಸಿದ್ದಾರೆ,’ ಎಂದು ಉಪ ಪೊಲೀಸ್ ಆಯುಕ್ತ ಗಿರೀಶ್ ಎಸ್ ಅವರು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿರುವುದು ಗೊತ್ತಾಗಿದೆ.
ಈ ಪ್ರಕರಣದ ಕುರಿತು ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಪ್ರಕರಣದ ಕುರಿತು 2024ರ ಸೆ.17ರಂದು ಐಜಿಪಿಗೆ ವರದಿ ಸಲ್ಲಿಸಿದ್ದರು.
ಈ ವರದಿ ಆಧರಿಸಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆರ್ ಹಿತೇಂದ್ರ ಅವರು 2024ರ ಸೆ.23ರಂದು ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪ್ರಕರಣದ ಕುರಿತು ಮುಂದಿನ ಕ್ರಮಕ್ಕಾಗಿ ಪತ್ರ ಬರೆದಿದ್ದರು.
ಅನಿರುದ್ಧ ರಾಜನ್ ಎಂಬಾತನನ್ನು ಬಂಧಿಸಿದ್ದಕ್ಕೆ ಕಾರ್ಮಿಕ ಹಕ್ಕುಗಳ ಸಂಘಟನೆಯಾದ ಮಾನೇಸರ್ ಜನರಲ್ ಮಜ್ದೂರ್ ಸಂಘದ ಸದಸ್ಯರು ಪೊಲೀಸರ ವಿರುದ್ಧ ಆರೋಪಿಸಿದ್ದರು. ಕಾರ್ಮಿಕ ಹಕ್ಕುಗಳ ಕಾರ್ಯಕರ್ತ ಮತ್ತು ಬರಹಗಾರ ಅನಿರುದ್ಧ್ ರಾಜನ್ ಅವರನ್ನು ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗದ ಭಯೋತ್ಪಾದನಾ ನಿಗ್ರಹ ಘಟಕ ಪೊಲೀಸರು ಅಪಹರಿಸಿದ್ದಾರೆ ಎಂದು ದೂರಿದ್ದರು.
“ನಮ್ಮ ಗುರುತನ್ನು ಬಹಿರಂಗಪಡಿಸುವಂತೆ ನಮಗೆ ಕರೆಗಳು ಮತ್ತು ಬೆದರಿಕೆಗಳು ಬರಲು ಪ್ರಾರಂಭಿಸಿದವು. ಅನಿರುದ್ಧ್ ಹೇಡಿಯಲ್ಲ, ಆದರೆ ಹಲವಾರು ಸಂದರ್ಭಗಳಲ್ಲಿ, ಅವನು ತನ್ನ ನಡವಳಿಕೆಯನ್ನು ಬದಲಾಯಿಸದಿದ್ದರೆ ಅವನ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು,’ ಎಂದು ಸಂಘಟನೆಯ ಬಿಂದು ರಾಮ್ ಹೇಳಿದ್ದರು.
“ರಾಜನ್ ಒಬ್ಬ ಸಾಮಾನ್ಯ ವ್ಯಕ್ತಿ, ಕಾರ್ಮಿಕರ ಕಷ್ಟಗಳ ಬಗ್ಗೆ ಅವನಿಗೆ ಸಹಾನುಭೂತಿ ಇದೆ. ಅವನ ಅಪಹರಣವು ಅಧಿಕಾರದ ದುರುಪಯೋಗದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ರಾಜ್ಯ ಅಭಿಯಾನದ ಬಾದಲ್ ಎಂಬುವರು ಹೇಳಿದ್ದರು.
ಬೆಂಗಳೂರು ನಗರದಲ್ಲಿ ಸಕ್ರೀಯರಾಗಿರುವ ಟೆರರಿಸ್ಟ್ ಮತ್ತು ನಕ್ಸಲ್ ಸಂಘಟನೆಯವರ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರವು ಗೃಹ ಇಲಾಖೆಗೆ ಸೂಚಿಸಿತ್ತು. ಮತ್ತು ನಕ್ಸಲ್ ಸಂಘಟನೆಯವರು ನಡೆಸಲು ಉದ್ದೇಶಿಸಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು. ಅದರಂತೆ ಇದಕ್ಕಾಗಿ ಪ್ರತ್ಯೇಕವಾಗಿ ಭಯೋತ್ಪಾದಕ ನಿಗ್ರಹ ದಳವನ್ನು ರಚಿಸಿರುವುದನ್ನು ಸ್ಮರಿಸಬಹುದು.