ಬೆಂಗಳೂರು; ಡಾ ಬಿ ಆರ್ ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ಒಟ್ಟಾರೆ 6,24,101 ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ವಸತಿ ಇಲಾಖೆಯು ಆರ್ಥಿಕ ಬಿಕ್ಕಟ್ಟು ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಈ ಯೋಜನೆಗಳನ್ನು 2025-26ರೊಳಗೇ ಪೂರ್ಣಗೊಳಿಸಬೇಕಾಗಿರುವ ಅನಿವಾರ್ಯತೆಯಲ್ಲಿರುವ ವಸತಿ ಇಲಾಖೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉಪ ಯೋಜನೆ ನಿಧಿಗೆ ಕೈ ಹಾಕಿದೆ.
ವಸತಿ ಯೋಜನೆಗಳ ಫಲಾನುಭವಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ವಂತಿಕೆ ಸಂಗ್ರಹಣೆಯಾಗುತ್ತಿಲ್ಲ. ಹೀಗಾಗಿ ವಸತಿ ಯೋಜನೆಗಳಡಿಯಲ್ಲಿ ನಿಗದಿತ ಗುರಿ ಪ್ರಕಾರ 6,24,101 ಮನೆಗಳನ್ನು 2025-26ರಲ್ಲಿ ಪೂರ್ಣಗೊಳಿಸಲೇಬೇಕಾಗಿದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ಎಸ್‌ಸಿಸಿಪಿ ಮತ್ತು ಎಸ್‌ಟಿಪಿ ನಿಧಿಯಿಂದ 6,871 ಕೋಟಿ ರು.ಗಳನ್ನು ಒದಗಿಸಬೇಕು ಎಂದು ವಸತಿ ಇಲಾಖೆಯು ಕೋರಿದೆ.
ಇದಕ್ಕೆ ಸಂಬಂಧಿಸಿದಂತೆ ವಸತಿ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವದ (DOH 25 HFA 2025) ರಹಸ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಷ್ಟೇ ಅಲ್ಲ, ಫಲಾನುಭವಿಗಳಿಂದ ವಂತಿಕೆ ಸಂಗ್ರಹಣೆಯೂ ಕಷ್ಟಕರವಾಗಿರುವುದರಿಂದ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣವೂ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರೂ ಆಸಕ್ತಿ ತೋರಿಸುತ್ತಿಲ್ಲ. ಮತ್ತು ಬಾಕಿ ಹಣಕ್ಕಾಗಿ ಆರ್ಬಿಟ್ರೇಷನ್‌ಗೆ ಕದ ತಟ್ಟುತ್ತಿದ್ದಾರೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಅದೇ ರೀತಿ ವಸತಿ ಯೋಜನೆಗಳ ಫಲಾನುಭವಿಗಳ ಹಲವು ಪ್ರಕರಣಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಮಂಜೂರಾಗಿಲ್ಲ. ಮತ್ತು ಸಕಾಲದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಈ ಕಾರಣಗಳನ್ನು ಮುಂದಿಟ್ಟುಕೊಂಡಿರುವ ವಸತಿ ಇಲಾಖೆಯು ಇದೀಗ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿನ ಅನುದಾನ ಪೈಕಿ 6,871 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟಕ್ಕೆ ಪ್ರಸ್ತಾವವನ್ನು ಸಲ್ಲಿಸಿರುವುದು ಗೊತ್ತಾಗಿದೆ.
ಕೇಂದ್ರ ಸರ್ಕಾರ ಪುರಸ್ಕೃತ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಂದ ಒಟ್ಟು 7,544 ಕೋಟಿ ರೂಪಾಯಿಗಳನ್ನು ಸಂಗ್ರಹಿಸಬೇಕಿತ್ತು. ಆದರೆ ಇದುವರೆಗೆ ಕೇವಲ 673 ಕೋಟಿ ರೂಪಾಯಿಗಳನ್ನು ಮಾತ್ರ ಸಂಗ್ರಹಿಸಲಾಗಿದೆ. ಇದು ಬಾಕಿ ಇರುವ ಫಲಾನುಭವಿಗಳ ಕೊಡುಗೆಯ ಒಂದು ಭಾಗವಷ್ಟೇ ಆಗಿದೆ. ಉಳಿದ 6,871 ಕೋಟಿ ಫಲಾನುಭವಿಗಳ ಕೊಡುಗೆಯನ್ನು ನಿಗದಿತ ಸಮಯದಲ್ಲಿ ಸಂಗ್ರಹಿಸುವುದು ತುಂಬಾ ಕಷ್ಟಕರವಾಗಿದೆ.
ಫಲಾನುಭವಿಗಳು ಬ್ಯಾಂಕುಗಳಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಫಲಾನುಭವಿಗಳಿಗೆ ಸಾಲವು ಮಂಜೂರಾಗಿಲ್ಲ. ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರೂ ಬ್ಯಾಂಕುಗಳಿಂದ ಸಾಲಗಳು ಸಕಾಲದಲ್ಲಿ ಮಂಜೂರು ಆಗುತ್ತಿಲ್ಲ ಎಂದು ವಸತಿ ಇಲಾಖೆಯು ಸಮರ್ಥಿಸಿಕೊಂಡಿರುವುದು ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವದ ಹಾಳೆಯಿಂದ ತಿಳಿದು ಬಂದಿದೆ.
ಫಲಾನುಭವಿಗಳಿಂದ ಕೊಡುಗೆ ಮೊತ್ತವನ್ನು ಸಂಗ್ರಹಿಸುವಲ್ಲಿ ಹಿನ್ನಡೆಯಾಗಿದೆ. ಹೀಗಾಗಿ ಮನೆಗಳ ನಿರ್ಮಾಣ ವಿಳಂಬವಾಗಿದೆ. ಆದ್ದರಿಂದ, ವಿವಿಧ ಮೂಲಗಳಿಂದ ಹಣಕಾಸು ನೆರವು ಪಡೆಯುವುದು ಮತ್ತು ಸರ್ಕಾರದಿಂದ ಹಣಕಾಸು ಒದಗಿಸುವುದು ಅಗತ್ಯವಾಗಿದೆ. ಸದ್ಯ ಪ್ರಗತಿಯಲ್ಲಿರುವ ಮನೆಗಳ ನಿರ್ಮಾಣ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವುದು ಅಗತ್ಯವಾಗಿದೆ ಎಂದೂ ತನ್ನ ಸಮರ್ಥನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಹೀಗಾಗಿ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಇತರ ವಿಶೇಷ ವರ್ಗದ ಫಲಾನುಭವಿಗಳಿಗೆ ಸೇರಿದ ಫಲಾನುಭವಿಗಳ ಕೊಡುಗೆ ಮೊತ್ತವನ್ನು ಸಂಪೂರ್ಣವಾಗಿ ನಿಧಿ ಸಂಗ್ರಹಿಸುವುದು ಅವಶ್ಯಕವಾಗಿದೆ ಎಂದು ವಿವರಿಸಿದೆ.
‘ಫಲಾನುಭವಿಗಳಿಂದ ವಂತಿಕೆ ಪಾವತಿಯಲ್ಲಿ ವಿಳಂಬವಾಗಿದೆ. ಯೋಜನೆಗಳ ಅನುಷ್ಠಾನವು ಕಷ್ಟಕರವಾಗಿದೆ ಮತ್ತು ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಸಮಯಕ್ಕೆ ಪಾವತಿಸಲಾಗುತ್ತಿಲ್ಲ. ಇದರ ಪರಿಣಾಮವಾಗಿ, ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಸಕ್ತಿಯನ್ನು ತೋರಿಸುತ್ತಿಲ್ಲ. ಇದಲ್ಲದೆ, ಗುತ್ತಿಗೆದಾರರು ಬಾಕಿ ಇರುವ ಬಿಲ್‌ಗಳ ಪಾವತಿ ವಿಳಂಬಕ್ಕಾಗಿ ಮಧ್ಯಸ್ಥಿಕೆ ವೇದಿಕೆಗಳನ್ನು ಸಂಪರ್ಕಿಸುತ್ತಿದ್ದಾರೆ,’ ಎಂದು ಸದ್ಯದ ಬೆಳವಣಿಗೆಯನ್ನು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
2025-26 ರ ಅಂತ್ಯದ ವೇಳೆಗೆ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಗುರಿಯನ್ನು ಹೊಂದಿದೆ. ಆದರೆ ಕಾಮಗಾರಿಗಳು ಮತ್ತಷ್ಟು ವಿಳಂಬವಾಗುತ್ತಿದೆ. ನಿಗದಿತ ಸಮಯದೊಳಗೆ ಯೋಜನೆಗಳ ನಿರ್ಮಾಣಗಳನ್ನು ಪೂರ್ಣಗೊಳಿಸುವುದು ಸವಾಲಿನ ಸಂಗತಿಯಾಗಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
‘ಆದ್ದರಿಂದ ಎಸ್‌ಸಿಪಿ ಟಿಎಸ್‌ಪಿ ನಿಧಿಯ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಎಸ್‌ಸಿ ಎಸ್ ಟಿ ಮತ್ತು ಇತರ ವಿಶೇಷ ವರ್ಗದ ಫಲಾನುಭವಿಗಳಿಗೆ ಸೇರಿದ ಸಂಪೂರ್ಣ ಫಲಾನುಭವಿಗಳ ಕೊಡುಗೆಯನ್ನು ಸರ್ಕಾರವು ಭರಿಸಬೇಕು, ‘ ಎಂದು ಪ್ರತಿಪಾದಿಸಿರುವುದು ತಿಳಿದು ಬಂದಿದೆ.
ಕೆಎಸ್‌ಡಿಬಿ ಯೋಜನೆಯಡಿಯಲ್ಲಿ ಎಸ್ ಸಿ ಸಮುದಾಯದ 74,340, ಎಸ್ ಟಿ ಸಮುದಾಯದ 12,169 ಸೇರಿ ಒಟ್ಟಾರೆ 86,509 ಮಂದಿ ಫಲಾನುಭವಿಗಳಿದ್ದಾರೆ. ಸ್ಥಳೀಯ ನಗರ ಸಂಸ್ಥೆಗಳಲ್ಲಿ 12,645 ಮಂದಿ ಎಸ್ ಸಿ, 5,955 ಮಂದಿ ಎಸ್ ಟಿ ಸೇರಿ ಒಟ್ಟಾರೆ 18,600 ಫಲಾನುಭವಿಗಳಿರುವುದು ಗೊತ್ತಾಗಿದೆ.
ಬೆಂಗಳೂರು ನಗರದಲ್ಲಿ ಜಾರಿಯಲ್ಲಿರುವ ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಡಿಯಲ್ಲಿ 13,533 ಮಂದಿ ಎಸ್ ಸಿ, 4,512 ಮಂದಿ ಎಸ್ ಟಿ ಸೇರಿ ಒಟ್ಟಾರೆ 18,045 ಮಂದಿ ಫಲಾನುಭವಿಗಳಿದ್ದಾರೆ. ವಿಶೇಷ ವಸತಿ ಯೋಜನೆಯಡಿಯಲ್ಲಿ ಎಸ್ ಸಿ ಸಮುದಾದಯ 22,783, ಎಸ್ ಟಿ ಸಮುದಾಯದ 9,764 ಸೇರಿ ಒಟ್ಟಾರೆ 32,547 ಮಂದಿ ಫಲಾನುಭವಿಗಳಿದ್ದಾರೆ. ಪಿಎಂಎಐ ಜಿ ಯೋಜನೆಡಿಯಲ್ಲಿ ಎಸ್ ಸಿ ಸಮುದಾಯದ 4,68,400 ಮಂದಿ ಫಲಾನುಭವಿಗಳಿದ್ದಾರೆ. ಒಟ್ಟಾರೆಯಾಗಿ ಈ ಎಲ್ಲಾ ಯೋಜನೆಗಳಲ್ಲಿ 6,24,101 ಮಂದಿ ಫಲಾನುಭವಿಗಳಿರುವುದು ತಿಳಿದು ಬಂದಿದೆ.
ವಸತಿ ಇಲಾಖೆಯ ಅಧಿಕಾರಿಗಳು ಈ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.