ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಖರೀದಿ ಪ್ರಕ್ರಿಯೆಯಲ್ಲಿ ಖಾಸಗಿ ಏಜೆನ್ಸಿಗಳ ಲಾಬಿಗೆ ಮಣಿದಿರುವ ತಾಂತ್ರಿಕ ಶಿಕ್ಷಣ ಇಲಾಖೆ ಅಕ್ರಮದ ಹಾದಿಯಲ್ಲಿ ಸಾಗಿದೆ.
ಟೆಂಡರ್ ಪ್ರಕ್ರಿಯೆ ಮತ್ತು ಸಚಿವ ಸಂಪುಟದ ಅನುಮೋದನೆ ಪಡೆಯುವುದರಿಂದ ತಪ್ಪಿಸಿಕೊಳ್ಳಲು ಖರೀದಿಯ ಒಟ್ಟು ಮೊತ್ತವನ್ನು ವಿಭಜಿಸಿ ತುಂಡು ಗುತ್ತಿಗೆ ನೀಡಲು ಅಧಿಕಾರಿಗಳು ನಡೆಸಿರುವ ಹುನ್ನಾರವನ್ನು ‘ದಿ ಫೈಲ್’ ಹೊರಗೆಡವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಟಿಪ್ಪಣಿ ಹಾಳೆಗಳು ಮತ್ತು ದಾಖಲೆಗಳು ಲಭ್ಯವಾಗಿವೆ.
ಖಾಸಗಿ ಏಜೆನ್ಸಿಗಳೊಂದಿಗೆ ಕೈಜೋಡಿಸಿ ಕರ್ನಾಟಕ ಪಾರದರ್ಶಕ ಕಾಯ್ದೆಯನ್ನೇ ಗಾಳಿಗೆ ತೂರಿರುವ ತಾಂತ್ರಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ(ಎಸ್‌ಸಿಪಿ, ಎಸ್‌ಟಿಪಿ)ಯಡಿಯಲ್ಲಿ ಲಭ್ಯ ಇರುವ 18.34 ಕೋಟಿ ರು. ಸೇರಿದಂತೆ ಒಟ್ಟು 27.86 ಕೋಟಿ ರು. ಅನುದಾನವನ್ನು ಜೇಬಿಗಿಳಿಸಿಕೊಳ್ಳಲು ಹವಣಿಸಿದ್ದಾರೆ.
ಆಡಳಿತಾತ್ಮಕ ಅನುಮೋದನೆ ಇಲ್ಲದೆಯೇ ಟೆಂಡರ್ ಕರೆದಿರುವ ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಚಿವ ಸಂಪುಟವನ್ನೂ ಕತ್ತಲಲ್ಲಿಡುವ ಸಂಚು ರೂಪಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ಅಲ್ಲದೆ ಟೆಂಡರ್ ಅವಧಿ ಪೂರ್ಣಗೊಂಡ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಅಧಿಕಾರಿಗಳು ಅಕ್ರಮಕ್ಕೆ ದಾರಿಮಾಡಿಕೊಟ್ಟಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ ಅಶ್ವಥ್‌ನಾರಾಯಣ್ ಅವರು ಅತ್ತ ತಲೆಹಾಕದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಸ್‌ಸಿಪಿ ಮತ್ತು ಎಸ್‌ಟಿಪಿ ಯೋಜನೆಯಡಿಯಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಗೆ 2019-20ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 18.34 ಕೋಟಿ ರು.ಒದಗಿಸಿದೆ.
ಲ್ಯಾಪ್‌ಟಾಪ್ ಖರೀದಿಯಲ್ಲಾಗಿರುವುದೇನು?
ಈ ಪೈಕಿ 5,360 ಸಂಖ್ಯೆಯ ಲ್ಯಾಪ್‌ಟಾಪ್ ಖರೀದಿಗೆ ಕ್ರಿಯಾಯೋಜನೆಗೆ ಅನುಮೋದನೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ಪಡೆದುಕೊಂಡಿದೆ. ಲ್ಯಾಪ್‌ಟಾಪ್‌ವೊಂದಕ್ಕೆ 34,220 ರು.ದರದ ಪ್ರಕಾರ ಒಟ್ಟು 4.04 ಕೋಟಿ ರು.ಮೊತ್ತದಲ್ಲಿ 1,180 ಲ್ಯಾಪ್‌ಟಾಪ್‌ಗಳ ಖರೀದಿಸಲು ಅನುಮೋದನೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ 5,075 ಲ್ಯಾಪ್‌ಟಾಪ್‌ಗಳ ಖರೀದಿಗೆ ಅವಕಾಶ ಕಲ್ಪಿಸಿದೆಯಾದರೂ ಈ ಪೈಕಿ 1,084 ಲ್ಯಾಪ್‌ಟಾಪ್‌ಗಳನ್ನು ಮಾತ್ರ ಖರೀದಿಸಲು ಅಧಿಕಾರಿಗಳು ತಯಾರಿ ನಡೆಸಿದ್ದರು. ಇನ್ನು 3,991 ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು 2019-20ನೇ ಸಾಲಿಗೆ ಕ್ರಿಯಾಯೋಜನೆಗೆ ಅನುಮತಿ ಕೊಟ್ಟಲ್ಲಿ ಉಳಿತಾಯವಾಗಬಹುದಾದ ಒಟ್ಟು 11.95 ಕೋಟಿ ರು.ಗಳಿಂದ 3,991 ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಪ್ರಕ್ರಿಯೆ ನಡೆದಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಕಾರ್ಯಾದೇಶಕ್ಕೆ ಸರ್ಕಾರದ ಅನುಮತಿಯೇ ಇಲ್ಲ
ಲ್ಯಾಪ್‌ಟಾಪ್ ಖರೀದಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಟೆಂಡರ್ ದಾಖಲಾತಿಗಳನ್ನು ಪರಿಶೀಲಿಸಿದ್ದರು. ಇದರ ಪ್ರಕಾರ 2019ರ ಏಪ್ರಿಲ್ 27ರಂದು ಟೆಂಡರ್ ಆಹ್ವಾನಿಸಿದ್ದ ಇಲಾಖೆ, ಬಿಡ್ ಸಲ್ಲಿಸಲು 2019ರ ಮೇ 8 ಕೊನೆಯ ದಿನಾಂಕವೆಂದು ನಿಗದಿಪಡಿಸಿತ್ತು.
ಟೆಂಡರ್ ದಾಖಲಾತಿ ಮತ್ತು ಅದಕ್ಕೆ ತರಲಾಗಿರುವ ತಿದ್ದುಪಡಿಗಳ ಪ್ರಕಾರ ಬಿಡ್ ಅವಧಿಯ ಕಾಲಾವಧಿ ಎಂದು 120 ದಿನಗಳೆಂದು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅದರ ಪ್ರಕಾರ 2019ರ ಸೆ.6 (120 ದಿನಗಳು ಪೂರ್ಣ)ಕೊನೆಗೊಂಡಿದೆ ಎಂದು ಆಯುಕ್ತರು ತಿಳಿಸಿದ್ದರು. ಆದರೆ ನಿಗದಿತ ದಿನಾಂಕದೊಳಗಾಗಿ ಸರಬರಾಜುದಾರರಿಗೆ ಕಾರ್ಯಾದೇಶ ನೀಡಲು ಸರ್ಕಾರ ಅನುಮೋದನೆಯನ್ನು ನೀಡಿರಲಿಲ್ಲ. ಹೀಗಾಗಿ ಪ್ರಸ್ತುತ ಟೆಂಡರ್‌ನ ಕಾಲಾವಧಿ 2019ರ ಸೆ.6ಕ್ಕೆ ಮುಗಿದಿತ್ತು ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಅಲ್ಲದೆ ತಾಂತ್ರಿಕ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು 2019ರ ಡಿಸೆಂಬರ್ 10ರಂದು ಸ್ವೀಕರಿಸಿದ್ದ ಸರ್ಕಾರ, ಈ ಸಂಬಂಧ 2020ರ ಜನವರಿ 9ರಂದು ಸರ್ಕಾರಿ ಆದೇಶ ಹೊರಡಿಸಿತ್ತು. ಇನ್ನು, ಟೆಂಡರ್ ಕಾಯ್ದೆಯನ್ವಯ ಟೆಂಡರ್ ಅವಧಿ ಮುಗಿದ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಆದೇಶ ಹೊರಡಿಸಿದ ನಂತರವೂ ಸರ್ಕಾರದ ಗಮನಕ್ಕೂ ತಂದಿರಲಿಲ್ಲ ಎಂಬ ಸಂಗತಿ ದಾಖಲೆಯಿಂದ ಗೊತ್ತಾಗಿದೆ.
ಹಾಗೆಯೇ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ಡೆಸ್ಕ್‌ಟಾಪ್ ಖರೀದಿ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆದಿರುವ ಶಂಕೆ ಇದೆ. ಟೆಂಡರ್ ಪ್ರಕ್ರಿಯೆಗಳಿಂದ ನುಣುಚಿಕೊಳ್ಳಲು ಹವಣಿಸಿರುವ ತಾಂತ್ರಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತುಂಡು ಗುತ್ತಿಗೆ ಕಾರ್ಯಾಚರಣೆಗಿಳಿದಿದ್ದಾರೆ.
ರಾಜ್ಯದ ಒಟ್ಟು 8 ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ 9,52,41,000 ರು.ಮೊತ್ತದಲ್ಲಿ ಡೆಸ್ಕ್‌ಟಾಪ್ ಖರೀದಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ 25.00 ಲಕ್ಷ ರು.ಗಳ ಮಿತಿಯಲ್ಲಿ ಖರೀದಿಸಲು ಸರ್ಕಾರ ಹೊರಡಿಸಿರುವ ಆದೇಶವನ್ನೇ ತಾಂತ್ರಿಕ ಶಿಕ್ಷಣ ಇಲಾಖೆ ಗಾಳಿಗೆ ತೂರಿದೆ. ಅಷ್ಟೇ ಅಲ್ಲ ಸಚಿವ ಸಂಪುಟದ ಅನುಮೋದನೆ ಪಡೆಯುವುದನ್ನು ತಪ್ಪಿಸಿಕೊಳ್ಳಲು ರಂಗೋಲಿ ಕೆಳಗೆ ನುಸುಳಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಪ್ರತಿ ಟೆಂಡರ್‌ಗೆ 25.00 ಲಕ್ಷ ರು.ಮೊತ್ತದ ಮಿತಿ ಮೀರದಂತೆ ಆಯಾ ಆಡಳಿತ ಇಲಾಖೆಯ ಆಡಳಿತಾತ್ಮಕ ಅನುಮೋದನೆ ಪಡೆದು ಖರೀದಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಆದೇಶದ ಪ್ರಕಾರ ಇಲಾಖೆಯಂದರೆ ತಾಂತ್ರಿಕ ಶಿಕ್ಷಣ ಇಲಾಖೆಯಾಗುತ್ತದೆ. ಇದರ ಪ್ರಕಾರ ಇಲಾಖೆಯ ಅಧೀನದಲ್ಲಿ ಬರುವ ಪ್ರತಿ ಪಾಲಿಟೆಕ್ನಿಕ್‌ಗಳಲ್ಲಿ 25.00 ಲಕ್ಷ ರು.ಗಳ ಮಿತಿಸಯಲ್ಲಿ ಖರೀದಿಸಲು ಈ ಆದೇಶ ಅನ್ವಯವಾಗುವುದಿಲ್ಲ ಎಂಬ ಅಂಶ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅಷ್ಟೇ ಅಲ್ಲ, ಅಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ಇಲ್ಲದೆಯೇ ಟೆಂಡರ್ ಕರೆದಿರುವ ಅಧಿಕಾರಿಗಳು ಲೋಪ ಎಸಗಿದ್ದಾರೆ. ಇದು ಸಮಂಜಸವಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ತಿಳಿಸಿದ್ದಾರೆ.
ಅದೇ ರೀತಿ ಸರಕು ಮತ್ತು ಸೇವೆಗಳ ಸಂಗ್ರಹಣೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಆಡಳಿತ ಇಲಾಖೆಗೆ 5.00 ಕೋಟಿ ರು.ಗಳವರೆಗೆ ಮಾತ್ರ ಆರ್ಥಿಕ ಅಧಿಕಾರವನ್ನು ಪ್ರತ್ಯಾಯೋಜಿಸಿದೆ. ಆದರೆ ಇಲಾಖೆ ಪ್ರಸ್ತಾಪಿಸಿರುವ ಮೊತ್ತ 5.00 ಕೋಟಿ ರು.ಗೂಮೀರಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆಯಬೇಕು.
ಹೀಗಾಗಿ ಅಧಿಕಾರಿಗಳು ‘ಸಚಿವ ಸಂಪುಟದ ಅನುಮೋದನೆಯನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿಯೇ ಈ ರೀತಿ ತುಂಡು ಗುತ್ತಿಗೆಗೆ ಅವಕಾಶ ಕಲ್ಪಿಸಿಕೊಂಡಿದ್ದಾರೆ. ತುಂಡು ಗುತ್ತಿಗೆಯನ್ನು ನಡೆಸಿದ್ದೇ ಆದಲ್ಲಿ ಇದು ಕೂಡ ಮುಂದಿನ ದಿನಗಳಲ್ಲಿ ಮಹಾಲೇಖಪಾಲರ ಆಕ್ಷೇಪಣೆಗೆ ಗುರಿಯಾಗುವ ಸಾಧ್ಯತೆಗಳೂ ಇವೆ,’ ಎಂದು ಆಂತರಿಕ ಸಲಹೆಗಾರರು ಎಚ್ಚರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.