ಮಾದಕ ವಸ್ತು ಸೇವನೆ, ಪೂರೈಕೆ; ನಟಿ ಸಂಜನಾ ಗಲ್ರಾನಿ ಪ್ರಕರಣದಲ್ಲಿ ಎಸ್‌ಎಲ್‌ಪಿ ಸಲ್ಲಿಸಲು ನಿರ್ಧರಿಸಿದ ಸರ್ಕಾರ

ಬೆಂಗಳೂರು: ಡ್ರಗ್ಸ್‌ ಸೇವನೆ ಮತ್ತು ಪೂರೈಕೆ ಪ್ರಕರಣದಲ್ಲಿ ಸಿಲುಕಿದ್ದ ನಟಿ ಸಂಜನಾ ಗಲ್ರಾನಿ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇ‍ಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಸರ್ಕಾರದ ಈ ನಡೆಯಿಂದಾಗಿ ಸಿಐಡಿ ಪೊಲೀಸರಿಗೆ ಬಲ ಬಂದಂತಾಗಿದೆ.

 

ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳಿದ್ದ ಡ್ರಗ್ಸ್‌ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಅವರೂ ಆರೋಪಿಯಾಗಿದ್ದರು. ಈ ಪ್ರಕರಣವು ನಾಲ್ಕು ವರ್ಷಗಳ ಹಿಂದೆ ಬಿರುಗಾಳಿ ಎಬ್ಬಿಸಿತ್ತು. ಇವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ಇತ್ತೀಚೆಗಷ್ಟೇ ರದ್ದುಗೊಳಿಸಿ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಈ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ದಾಖಲಿಸಲು ಅರ್ಹವಾಗಿದೆ ಎಂದು ನಿರ್ಧರಿಸಿದೆ.

 

ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸುವ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌ ಆರ್‍‌ ಉಮಾಶಂಕರ್‍‌, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು (ಅಪರಾಧ), ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್‌ ರವಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಾದ ಅಂಜಲಿದೇವಿ, ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ, ಸಿಐಡಿ ಪೊಲೀಸ್‌ ಮಹಾನಿರ್ದೇಶಕರು ಸೇರಿದಂತೆ ಇನ್ನಿತರೆ ಅಧಿಕಾರಿಗಳನ್ನೊಳಗೊಂಡ ಸಮಿತಿಯು ನಿರ್ಧರಿಸಿದೆ.

 

ಸಮಿತಿಯು ಈಚೆಗಷ್ಟೇ ನಡೆಸಿರುವ ಸಭೆಯಲ್ಲಿ ಸಂಜನಾ ಗರ್ಲಾನಿ ವಿರುದ್ಧದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಅರ್ಹವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಈ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯ  ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ನಟಿ ಸಂಜನಾ ಗರ್ಲಾನಿ ಅವರು ಸ್ವ ಇಚ್ಛಾ ಹೇಳಿಕೆ ನೀಡಿದ್ದರು. ಹೇಳಿಕೆ ಪ್ರಕಾರ ಪ್ರತೀಕ್ ಶೆಟ್ಟಿ ಎಂಬುವವರೊಂದಿಗೆ ಸಂಜನಾ ಗರ್ಲಾನಿ ಅವರು ಸಂಪರ್ಕದಲ್ಲಿದ್ದರು, ಅವರು ಸ್ವಯಂ ಸೇವನೆಗಾಗಿ ಮತ್ತು ಪಾರ್ಟಿಗಳಲ್ಲಿ ವಿತರಿಸಲು ಡ್ರಗ್ಸ್‌ಗಳನ್ನು ಪೂರೈಸುತ್ತಿದ್ದರು. ಈ ಸಂಬಂಧ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದ ವೇಳೆಯಲ್ಲಿಯೂ 11.5 ಗ್ರಾಂ ತೂಕದ ಎಸಿಟಿಎಎಸ್‌ಐ ಮಾತ್ರೆ ಪತ್ತೆಯಾಗಿತ್ತು. ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂದು ಸಭೆಯ ನಡವಳಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಸಂಜನಾ ಗಲ್ರಾನಿ ಹೇಳಿಕೆಯ ಆಧಾರದ ಮೇಲೆ ಪ್ರತೀಕ್ ಶೆಟ್ಟಿ ಅವರ ಮನೆಯಿಂದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಇದು ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಬರುತ್ತದೆ ಎಂಬ ಅಂಶವನ್ನು ಸಹ ಸಭೆ ನಡವಳಿಯಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

 

‘ಆಕೆ ಮತ್ತು ಆಕೆಯ ಇತರ ಆರೋಪಿಗಳಿಗೆ ವಿವಿಧ ಪಾರ್ಟಿಗಳನ್ನು ಸಂಘಟಿಸುವ, ಗ್ರಾಹಕರು, ಯುವಕರು ಮತ್ತು ಮಹಿಳೆಯರನ್ನು ಅಂತಹ ಪಾರ್ಟಿಗಳಿಗೆ ಆಕರ್ಷಿಸುವ ಮತ್ತು ಮಾದಕ ದ್ರವ್ಯಗಳನ್ನು ಮಾರಾಟ ಮಾಡುವ ಕಾರ್ಯಗಳನ್ನು ನಿಯೋಜಿಸಲಾಗಿತ್ತು. ಹಾಗೆಯೇ ಸಂಜನಾ ಗಲ್ರಾನಿ ಅವರು ಕೊಕೈನ್‌ ಮತ್ತು ಎಂಡಿಎಂಎ ಸೇವಿಸಿದ್ದರು ಎಂಬುದು ಪರೀಕ್ಷೆಯಿಂದ ಸಾಬೀತಾಗಿತ್ತು. ಅಲ್ಲದೆ ಎರಡನೇ ಬಾರಿಗೆ ಕೂದಲು ಮಾದರಿಯನ್ನೂ ಹೈದರಾಬಾದ್‌ನಲ್ಲಿರುವ ಸಿಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳಿಸಿತ್ತು ಎಂಬ ಸಂಗತಿಯನ್ನು ನಡವಳಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಇವಿಷ್ಟು ಆರೋಪಿಯು ಅಪರಾಧ ಮಾಡಿದ್ದಾನೆಂದು ನಂಬಲು ಲಭ್ಯವಿರುವ ಪ್ರಾಥಮಿಕ ದಾಖಲೆಗಳಾಗಿವೆ. ನಿಯಮಿತ ವಿಚಾರಣೆಯ ನಂತರ ಆರೋಪಿಗಳ ಮೇಲೆ ಆರೋಪ ಹೊರಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಬೇಕು. ಎಫ್‌ಐಆರ್ ಒಂದು ವಿಶ್ವಕೋಶವಲ್ಲ. ಅದೇ ಅಪರಾಧಕ್ಕಾಗಿ ಎರಡನೇ ಎಫ್‌ಐಆರ್ ನೋಂದಣಿಯೂ ಸಹ ಕಾನೂನಿನಡಿಯಲ್ಲಿ ಸ್ವೀಕಾರಾರ್ಹವಲ್ಲ ಎಂಬ ಅಭಿಪ್ರಾಯವೂ ಸಮಿತಿ ಸಭೆಯಲ್ಲಿ ವ್ಯಕ್ತವಾಗಿರುವುದು ತಿಳಿದು ಬಂದಿದೆ.

 

 

ತನಿಖಾಧಿಕಾರಿಯು ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಬಹುದು. ಆದ್ದರಿಂದ, ಪೊಲೀಸರು ಆ ಹಿಂದಿನ ಅಪರಾಧಗಳಿಗೆ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವುದು ಅಗತ್ಯವಾಗಿತ್ತು ಎಂದು ಹೇಳಲಾಗುವುದಿಲ್ಲ ಎಂಬ ಅಂಶವನ್ನೂ ಉಲ್ಲೇಖಿಸಿದೆ.

 

ಪೊಲೀಸರು 2015, 2018, 2019 ಮತ್ತು 2020 ವರ್ಷಗಳಿಗೆ ಸಂಬಂಧಿಸಿದದಂತೆ ಆರೋಪಿಗಳ ವಿರುದ್ಧ ಒಂದೇ ಚಾರ್ಜ್‌ಶೀಟ್ ಸಲ್ಲಿಸಿದ್ದರೆ, ಪ್ರತಿ ವರ್ಷ ಅಂತಹ ಅಪರಾಧಗಳಿಗೆ ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲು ಮತ್ತು ಆರೋಪಿಗಳ ವಿರುದ್ಧ ಪ್ರತಿ ವರ್ಷಕ್ಕೆ ಪ್ರತ್ಯೇಕವಾಗಿ ಆರೋಪಗಳನ್ನು ರೂಪಿಸಲು ನ್ಯಾಯಾಲಯವು ಪೊಲೀಸರಿಗೆ ನಿರ್ದೇಶಿಸಬಹುದು. ಸಿಆರ್‌ಪಿಸಿಯ ಸೆಕ್ಷನ್ 219 ಸಹ ಆರೋಪಗಳನ್ನು ಸೇರಿಸುವವರ ಬಗ್ಗೆಯೂ ಹೇಳಿದೆ ಎಂಬ ಅಂಶದ ಕುರಿತೂ ಚರ್ಚೆಯಾಗಿದೆ.

 

ಸಿಆರ್‌ಪಿಸಿ ಸೆಕ್ಷನ್ 219 ರ ಪ್ರಕಾರ ಒಂದು ವರ್ಷದೊಳಗೆ ಮಾಡಿದ ಮೂರು ರೀತಿಯ ಅಪರಾಧಗಳನ್ನು ಒಟ್ಟಿಗೆ ಆರೋಪಿಸಬಹುದು. ಅಪರಾಧಗಳು ಒಂದೇ ಆಗಿರುವಾಗ ವಿಚಾರಣೆಯ ನಕಲು ಮಾಡುವುದನ್ನು ತಪ್ಪಿಸುತ್ತದೆ. ಇದಲ್ಲದೆ, ಹೈಕೋರ್ಟ್ ಸರ್ಕಾರಿ ವಕೀಲರು ಎತ್ತಿರುವ ವಿವಿಧ ಕಾನೂನು ಪ್ರಶ್ನೆಗಳನ್ನು ವಿಶೇಷ ಮೇಲ್ಮವನಿ ಅರ್ಜಿಯಲ್ಲಿ ನಿರ್ಧರಿಸಲಾಗುವುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಇದು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಸಲು ಸೂಕ್ತವಾದ ಪ್ರಕರಣವಾಗಿದೆ ಎಂದು ನಿರ್ಧರಿಸಿರುವುದು ಗೊತ್ತಾಗಿದೆ.

 

‘ಎಸ್‌ಎಲ್‌ಪಿ ಪರಿಶೀಲನಾ ಸಭೆಯಲ್ಲಿ ಪ್ರಕರಣದ ಬಗ್ಗೆ ಚರ್ಚಿಸಲಾಯಿತು, ಆರೋಪಿಗಳಿಂದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ. ಆದ್ದರಿಂದ, ಸುಪ್ರೀಂ ಕೋರ್ಟ್ ಮುಂದೆ ವಿಶೇಷ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಲು ಇದು ಸೂಕ್ತವಾದ ಪ್ರಕರಣ ಎಂದು ನಿರ್ಧರಿಸಲಾಯಿತು,’ ಎಂದು ನಡವಳಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

”2015, 2018 ಮತ್ತು 2019ರಲ್ಲಿ ನಡೆದಿದೆ ಎನ್ನಲಾದ ಮಾದಕ ದ್ರವ್ಯ ಸೇವನೆ ಸಂಬಂಧ ಅರ್ಜಿದಾರರ ವಿರುದ್ಧ 2020ರಲ್ಲಿ ಪ್ರಕರಣ ದಾಖಲಾಗಿತ್ತು. ಸಿಆರ್‌ಪಿಸಿ ಸೆಕ್ಷನ್‌ 219(1) ಪ್ರಕಾರ ಅರ್ಜಿದಾರರ ವಿರುದ್ಧ ಹಿಂದೆ ಮಾಡಿರುವ ಆರೋಪಗಳಿಗೆ ಈಗ ವಿಚಾರಣೆ ನಡೆಸಲಾಗದು ಮತ್ತು ಹೈಕೋರ್ಟ್‌ನ ಹಿಂದಿನ ತೀರ್ಪು ಮತ್ತು ನಿಯಮದ ಪ್ರಕಾರ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಬೇಕಿತ್ತು. ಆದರೆ, ದಾಖಲಿಸಿಲ್ಲ. ಆದ್ದರಿಂದ ಆರೋಪಿಗಳ ವಿರುದ್ಧ ಪ್ರಕರಣ ಮುಂದುವರಿಸಿದರೆ ಅದು ಕಾನೂನು ದುರ್ಬಳಕೆಯಾಗಲಿದೆ,” ಎಂದು ಹೈಕೋರ್ಟ್‌ ಆದೇಶಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts