ಬೆಂಗಳೂರು; ಜನಾಂಗೀಯ ನಿಂದನೆ, ಭಾಷೆ, ಜನಸ್ಥಳ, ಜಾತಿ, ಧರ್ಮ ಆಧರಿಸಿ ದ್ವೇಷದ ಅಪರಾಧ ಮತ್ತು ದ್ವೇಷ ಭಾಷಣ ಮಾಡುವುದನ್ನು ತಡೆಗಟ್ಟಲು ಕಾಂಗ್ರೆಸ್ ಸರ್ಕಾರವು ಇದೀಗ ವಿಧೇಯಕವೊಂದನ್ನು ಸಿದ್ಧಪಡಿಸುತ್ತಿದೆ. ಮುಂಬರುವ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲು ತಯಾರಿಯನ್ನೂ ನಡೆಸುತ್ತಿದೆ.
ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ (ಹೋರಾಟ, ತಡೆಗಟ್ಟುವಿಕೆ ಮತ್ತು ಶಿಕ್ಷೆ) ವಿಧೇಯಕ 2025ನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಿದೆ.
ದ್ವೇಷ ಭಾಷಣವು ದೇಶದ ಜಾತ್ಯತೀತ ಸಂರಚನೆಗೆ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರಿಂ ಕೋರ್ಟ್ ಇತ್ತೀಚೆಗಷ್ಟೇ ವ್ಯಾಖ್ಯಾನಿಸಿತ್ತು. ಜತೆಗೆ ಯಾವುದೇ ದೂರು ದಾಖಲಾಗದೆ ಇದ್ದರೂ ದ್ವೇಷ ಭಾಷಣ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.
ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ಉದ್ದೇಶದಿಂದ ತರಲು ಉದ್ದೇಶಿಸಿರುವ ವಿಧೇಯಕವು ಮುನ್ನೆಲೆಗೆ ಬಂದಿದೆ.
ವಿಧೇಯಕದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ವಿಧೇಯಕ 2025ದ ಪ್ರಕಾರ ಅಪರಾಧಗಳ ಪಟ್ಟಿಯನ್ನು ವಿಧೇಯಕದಲ್ಲಿ ನಮೂದಿಸಿದೆ. ಇದರ ಪ್ರಕಾರ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ರೆಸಿಡೆನ್ಸ್, ಅಂಗವೈಕಲ್ಯ, ಬುಡಕಟ್ಟುವಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸಲಿದೆ. ಅಥವಾ 5 ಸಾವಿರ ರುವರೆಗೆ ದಂಡ ಮತ್ತು ಈ ಎರಡನ್ನೂ ವಿಧಿಸಲಿದೆ.
ಅದೇ ರೀತಿ ಧಾರ್ಮಿಕ, ಜನಾಂಗೀಯ, ಜಾತಿ, ಸಮುದಾಯ, ಲಿಂಗ, ಹುಟ್ಟಿನ ಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವಂತೆ ಉದ್ದೇಶಪೂರ್ವಕವಾಗಿ ಪ್ರಕಟಿಸುವವರು, ಪ್ರಚಾರ ಮಾಡುವವರು ಅಥವಾ ಸಮರ್ಥಿಸುವವರು, ವಕಾಲತ್ತು ವಹಿಸುವವರನ್ನೂ ಶಿಕ್ಷೆಗೆ ಗುರಿಪಡಿಸಲಿದೆ.
ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಇದರಲ್ಲಿ ಒಳಗೊಂಡಿದೆ. ಇದರ ಮಾಹಿತಿಯು ದತ್ತಾಂಶ, ಸಂದೇಶ, ಪಠ್ಯ, ಚಿತ್ರಗಳು, ಧ್ವನಿ, ಧ್ವನಿ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂಗಳು ಸಾಫ್ಟ್‌ವೇರ್ ಮತ್ತು ಡೇಟಾಬೇಸ್‌ಗಳು ಅಥವಾ ಮೈಕ್ರೋಫಿಲ್ಮ್ ಅಥವಾ ಕಂಪ್ಯೂಟರ್ ರಚಿತ ಮೈಕ್ರೋಫಿಚೆಗಳನ್ನು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧದ ವ್ಯಾಪ್ತಿಗೆ ಒಳಪಡಿಸಿರುವುದು ವಿಧೇಯಕದಿಂದ ತಿಳಿದು ಬಂದಿದೆ.
ಅಲ್ಲದೇ ಯಾವುದೇ ನಿರ್ದಿಷ್ಟ ಎಲೆಕ್ಟ್ರಾನಿಕ್ ದಾಖಲೆಗಳಿಗೆ ಸಂಬಂಧಿಸಿದಂತೆ ಮಧ್ಯವರ್ತಿ ಎಂದರೆ, ಇನ್ನೊಬ್ಬ ವ್ಯಕ್ತಿಯ ಪರವಾಗಿ ಆ ದಾಖಲೆಯನ್ನು ಸ್ವೀಕರಿಸುವ, ಸಂಗ್ರಹಿಸುವ ಅಥವಾ ರವಾನಿಸುವ ಅಥವಾ ಆ ದಾಖಲೆಗೆ ಸಂಬಂಧಿಸಿದಂತೆ ಯಾವುದೇ ಸೇವೆಯನ್ನು ಒದಗಿಸುವ ಯಾವುದೇ ವ್ಯಕ್ತಿ ಮತ್ತು ಪ್ರಸಾರ ಮಾಡುವ ವಾಹಿನಿಗಳು (ಚಾನೆಲ್‌ಗಳು), ಟೆಲಿಕಾಂ ಸೇವಾ ಪೂರೈಕೆದಾರರು, ನೆಟ್‌ವರ್ಕ್ ಸೇವಾ ಪೂರೈಕೆದಾರರು, ಇಂಟರ್ನೆಟ್ ಸೇವಾ ಪೂರೈಕೆದಾರರು, ವೆಬ್‌ಹೋಸ್ಟಿಂಗ್ ಸೇವಾ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್ ಇಂಜಿನ್‌ಗಳು ಆನ್‌ಲೈನ್ ಪಾವತಿ ಸೈಟ್‌ಗಳು, ಆನ್‌ಲೈನ್-ಹರಾಜು ಸೈಟ್‌ಗಳು, ಆನ್‌ಲೈನ್-ಮಾರುಕಟ್ಟೆಗಳು ಮತ್ತು ಸೈಬರ್ ಕೆಫೆಗಳನ್ನೂ ಇದರ ವ್ಯಾಪ್ತಿಗೆ ಸೇರಿಸಿರುವುದು ಗೊತ್ತಾಗಿದೆ.
ಧಾರ್ಮಿಕ ಸೌಹಾರ್ದತೆಗೆ ಧಕ್ಕೆ, ಕೋಮು ಸೌಹಾರ್ದವನ್ನು ಹಾಳುಗೆಡವುದು, ಸಾರ್ವಜನಿಕರಲ್ಲಿ ದ್ವೇಷ ಭಾವನೆ ಮೂಡಿಸಿರುವುದು, ಸುಳ್ಳು, ಪ್ರಚೋದಕ ಮತ್ತು ವಿಡಿಯೋ ತುಣುಕುಗಳನ್ನು ಬದಲಿಸಿ ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವುದು ಸೇರಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಿರುವಂತಹ ಗುರುತರ ಆರೋಪ ಮತ್ತು ಹಲವು ಗಂಭೀರ ಅಪರಾಧಗಳನ್ನು ಎಸಗಿರುವುದು ಸಾಬೀತಾಗಿರುವ ಪ್ರಕರಣಗಳೂ ಸೇರಿದಂತೆ ಕಳೆದ ಒಂದೇ ವರ್ಷದಲ್ಲಿ ಒಟ್ಟು 330 ಪ್ರಕರಣಗಳನ್ನು ಹಿಂದಿನ ಬಿಜೆಪಿ ಸರ್ಕಾರವು ಅಭಿಯೋಜನೆಯಿಂದಲೇ ಹಿಂಪಡೆದಿತ್ತು.
2013-14ರಿಂದ 2017-18ರವರೆಗೆ 600 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆದಿತ್ತು. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳಿಗೆ ಸೇರಿದ ಯಾರೊಬ್ಬರ ಪ್ರಕರಣವನ್ನು ಹಿಂಪಡೆದಿರುವುದಿಲ್ಲ ಎಂಬುದು ಆರ್‌ಟಿಐ ಅಡಿ ನೀಡಿರುವ ದಾಖಲೆಗಳಿಂದ ಗೊತ್ತಾಗಿದೆ. ಆದರೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಒಂದೇ ಒಂದು ವರ್ಷದಲ್ಲಿ 330 ಪ್ರಕರಣಗಳನ್ನು ಹಿಂಪಡೆದಿತ್ತು.
ಹೆಚ್ಚಿನ ಪ್ರಕರಣಗಳಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಉತ್ತರ ಕನ್ನಡ ಹಿಂದೂ ಬಳಗ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳಾಗಿದ್ದಾರೆ. ಕಾವೇರಿ ನೀರಿನ ಗಲಾಟೆ, ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಹಿಂಪಡೆದಿದ್ದಾರಾದರೂ ಈ ಸಂಖ್ಯೆ ಬೆರಳಣಿಕೆಯಷ್ಟಿದ್ದವು.
ರೈತರ, ನಕ್ಸಲರ, ಕನ್ನಡ ಪರ ಹೋರಾಟಗಾರರ ವಿರುದ್ಧ ಹಿಂದಿನ ಕಾಂಗ್ರೆಸ್ ಸರ್ಕಾರವು ಮೊಕದ್ದಮೆಗಳನ್ನು ಹಿಂಪಡೆಯಲಾಗಿತ್ತೇ ವಿನಃ ಕೋಮು ಸೌಹಾರ್ದ ಹಾಳುಗೆಡವಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆದಿರಲಿಲ್ಲ. ಆದರೆ ಹಿಂದಿನ ಅವಧಿಯಲ್ಲಿ ಕೋಮು ಮತ್ತು ಧಾರ್ಮಿಕ ಸೌಹಾರ್ದ ಹಾಳುಗೆಡವಿರುವ ಪ್ರಕರಣಗಳನ್ನು ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿಯೋಜನೆಯಿಂದ ಹಿಂಪಡೆದಿತ್ತು.
ದ್ವೇಷ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ,ಹಿಂಸಾಚಾರ; ಒಂದೇ ವರ್ಷದಲ್ಲಿ 330 ಪ್ರಕರಣ ಹಿಂಪಡೆದ ಸರ್ಕಾರ
ಅದೇ ರೀತಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿಯೂ (2018ರ ಆಗಸ್ಟ್ 7) 98 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ, ಹಿಂದೂ ಹೃದಯ ಸಂಗಮ ಕಾರ್ಯಕ್ರಮದ ಸಂದರ್ಭದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆಗಳೊಂದಿಗೆ ಕೋಳಿ ಅಂಗಡಿ (ಪುತ್ತೂರು)ಗೆ ನುಗ್ಗಿ, ಕಲ್ಲು ತೂರಾಟ ನಡೆಸಿದ್ದ ಪ್ರಕರಣವೂ ಈ ಪಟ್ಟಿಯಲ್ಲಿತ್ತು.
ಕನ್ನಯ್ಯಕುಮಾರ್ ಮತ್ತು ವೇಮುಲ ಕುಮಾರ್ ಪರ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುತ್ತಿದ್ದ ಸಂದರ್ಭದಲ್ಲಿ ಎಬಿವಿಪಿ, ಆರ್‌ಎಸ್‌ಎಸ್ ಸಂಘಟನೆಯವರು ಎಂದು ಹೇಳಿಕೊಂಡಿದ್ದವರು ಕರಪತ್ರ ಹಂಚುತ್ತಿದ್ದವರಿಗೆ ಕೈಗಳಿಂದ ಮತ್ತು ಹೆಲ್ಮಟ್‌ಗಳಿಂದ ಹೊಡೆದು ಹಲ್ಲೆ ಮಾಡಿದ್ದ ಪ್ರಕರಣವನ್ನೂ ಕೈ ಬಿಡಲಾಗಿತ್ತು.