ಬೆಂಗಳೂರು; ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಹೆಚ್ ವಿ ರಾಜೀವ್ ಅವರು ಮುಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿಧಿ ನಿರ್ವಹಣೆ ಸಂಬಂಧ ತೆರೆದಿದ್ದ ಒಟ್ಟು 23 ಬ್ಯಾಂಕ್ ಖಾತೆಗಳ ನಗದು ಪುಸ್ತಕಗಳಲ್ಲಿನ ಹಲವು ನ್ಯೂನತೆಗಳನ್ನು ರಾಜ್ಯ ಲೆಕ್ಕಪತ್ರ ಮತ್ತ ಲೆಕ್ಕ ಪರಿಶೋಧನೆ ಇಲಾಖೆಯು ಪತ್ತೆ ಹಚ್ಚಿದೆ.
ಹಾಗೆಯೇ ಮುಡಾದಲ್ಲಿ ಚಾಲ್ತಿಯಲ್ಲಿದ್ದ 23 ಖಾತೆಗಳಲ್ಲಿ 15 ಖಾತೆಗಳಲ್ಲಿನ ಮೊತ್ತವನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆಯೇ ಆಂತರಿಕ ವರ್ಗಾವಣೆ ಮಾಡಲಾಗಿತ್ತು ಎಂಬುದನ್ನೂ ಸಹ ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.
ವಿಶೇಷವೆಂದರೇ ಮುಡಾದಲ್ಲಿನ ಬದಲಿ ನಿವೇಶನ ಅಕ್ರಮಗಳ ರೂವಾರಿ ಎಂದು ಜಾರಿ ನಿರ್ದೇಶನಾಲಯವು ಗುರುತಿಸಿದ್ದ ಜಿ ಟಿ ದಿನೇಶ್ ಕುಮಾರ್, ಡಾ ಡಿ ಬಿ ನಟೇಶ್, ಜಿ ಲಕ್ಷ್ಮಿಕಾಂತ ರೆಡ್ಡಿ ಅವರು ಇದೇ ಅವಧಿಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.
2021-22ನೇ ಸಾಲಿನ ಲೆಕ್ಕ ಪರಿಶೋಧನೆಯ ವರದಿಯು ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಗಂಭೀರ ಅಕ್ರಮಗಳ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಗದು ಪುಸ್ತಕ ನಿರ್ವಹಣೆಯಲ್ಲಿರುವ ಲೋಪಗಳೇನು?
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಪ್ರಾಧಿಕಾರದ ನಿಧಿ ನಿರ್ವಹಣೆಗಾಗಿ ಒಟ್ಟು 23 ಬ್ಯಾಂಕ್ ಖಾತೆಗಳನ್ನು ನಿರ್ವಹಿಸಿತ್ತು. ಆದರೆ ನಗದು ಪುಸ್ತಕಗಳನ್ನು ನಿರ್ವಹಣೆಯಲ್ಲಿ ಹಲವು ಲೋಪಗಳಿದ್ದವು ಎಂದು ಲೆಕ್ಕ ಪರಿಶೋಧಕರ ವರದಿಯಲ್ಲಿ ವಿವರಿಸಲಾಗಿದೆ.
ಬದಲಿ ನಿವೇಶನ, ತುಂಡು ಭೂಮಿ ಮಂಜೂರು; ಸರ್ಕಾರಿ ಲೆಕ್ಕ ಪರಿಶೋಧನೆಗೂ ಕಡತ ಹಾಜರುಪಡಿಸದ ಅಧಿಕಾರಿಗಳು
ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇಧ 328 ಮತ್ತು 329(1)ರಿಂದ (8)ರ ಅನ್ವಯ ಪ್ರಾರಂಭಿಕ ಶಿಲ್ಕು ಬ್ಯಾಂಕ್ ಖಾತೆವಾರು ಪ್ರತ್ಯೇಕ ನಗದು ಪುಸ್ತಕವನ್ನು ನಿರ್ವಹಿಸಬೇಕಿತ್ತು. ಪ್ರತಿ ದಿನದ ವ್ಯವಹಾರದ ಸ್ವೀಕೃತಿ ಮತ್ತು ವೆಚ್ಚದ ವಿವರಗಳನ್ನು ದಾಖಲಿಸಬೇಕಿತ್ತು. ನಗದು ವಹಿ ಶಿಲ್ಕು ಮತ್ತು ಬ್ಯಾಂಕ್ ಶಿಲ್ಕಿಗೂ ಆಸಿಕವಾಗಿ ಸಮನ್ವಯ ಮಾಡಿಕೊಂಡು ದೃಢೀಕರಿಸಬೇಕಿತ್ತು. ಆದರೆ ಮುಡಾ ಅಧಿಕಾರಿಗಳು ಈ ಯಾವ ಪ್ರಕ್ರಿಯೆಗಳನ್ನೂ ಮಾಡಿಲ್ಲ ಎಂದು ಗೊತ್ತಾಗಿದೆ.
‘ನಗದು ಪುಸ್ತಕವನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಿರುವುದಿಲ್ಲ. ಟ್ಯಾಲಿ ತಂತ್ರಾಂಶದಲ್ಲಿ ನಿರ್ವಹಿಸಿರುವ ನಗದು ಪುಸ್ತಕದ ಪ್ರತಿಯನ್ನು ಮಾತ್ರ ಪರಿಶೀಲನೆಗೆ ಹಾಜರುಪಡಿಸಿದ್ದಾರೆ. ನಗದು ಪುಸ್ತಕವನ್ನು ಸಕ್ಷಮ ಅಧಿಕಾರಿಯು ಸಹಿ ಮಾಡಿ ದೃಢೀಕರಿಸಿಲ್ಲ. ಮತ್ತು ಪ್ರತಿ ಮಾಹೆಯ ಅಂತ್ಯಕ್ಕೆ ನಗದಾಗದೇ ಉಳಿದಿರುವ ಧನಾದೇಶಗಳ ವಿವರಗಳನ್ನು ಮಾಹೆವಾರು ಸಮನ್ವಯ ಮಾಡಿ ನಗದು ಪುಸ್ತಕದಲ್ಲಿ ದಾಖಲಿಸಿ ದೃಢೀಕರಿಸಿರುವುದಿಲ್ಲ,’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಮೂಲೆ, ಮಧ್ಯಂತರ, ಸಿ ಎ ನಿವೇಶನಗಳ ಹಂಚಿಕೆ; ಹರಾಜು ಮೊತ್ತ ಸ್ವೀಕೃತದಲ್ಲೇ 90.76 ಕೋಟಿ ರು ವ್ಯತ್ಯಾಸ
ಹಾಗೆಯೇ ನೆಫ್ಟ್ ಮತ್ತು ಆರ್‍ಟಿಜಿಎಸ್ ಮೂಲಕ ಪ್ರಾಧಿಕಾರಕ್ಕೆ ಜಮೆಯಾದ ಮೊತ್ತಗಳು ಯಾವ ಯಾವ ಬಾಬ್ತು ಜಮೆಯಾಗಿದೆ ಎಂಬುದೂ ಸಹ ನಗದು ಪುಸ್ತಕದಲ್ಲಿ ನಮೂದಿಸಿಲ್ಲ ಎಂಬ ಸಂಗತಿಯು ವರದಿಯಿಂದ ಗೊತ್ತಾಗಿದೆ.
3,493 ನಿವೇಶನಗಳಿಗೆ ಭೂಮಿ ಖರೀದಿ ವ್ಯವಹಾರ; ಲೆಕ್ಕಪರಿಶೋಧನೆಗೆ ಸಿಗದ ಸಬ್ ರಿಜಿಸ್ಟ್ರಾರ್ ದಾಖಲೆಗಳು
ಹೊಸದಾಗಿ ಪ್ರಾರಂಭಿಸಲಾದ ಖಾತೆಗಳ ಉದ್ದೇಶ ಮತ್ತು ಈಗಾಗಲೇ ತೆರೆಯಲಾಗಿರುವ ಖಾತೆಗಳಲ್ಲಿ ಉದ್ದೇಶಿತ ಪ್ರಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲವಾದಲ್ಲಿ ಮಾತ್ರ ಹೊಸ ಖಾತೆ ತೆರೆಯಬಹುದು. ಮತ್ತು ಹಳೆಯ ಖಾತೆಗಳನ್ನು ಮುಕ್ತಾಯಗೊಳಿಬಹುದು. ಹಳೆ ಖಾತೆಗಳು ಇದ್ದರೂ ಸಹ ಅದೇ ಸ್ವರೂಪದ ಪ್ರಕಾರ್ಯಗಳಿಗೆ ಹೊಸ ಬ್ಯಾಂಕ್ ಖಾತೆಗಳನ್ನು ಪ್ರಾರಂಭಿಸಿರುವ ಮತ್ತು ಹಳೆಯ ಖಾತೆಗಳನ್ನು ಮುಕ್ತಾಯಗೊಳಿಸದೇ ಮುಂದುವರೆಸಿರುವ ಸಂಬಂಧ ಮಾಹಿತಿಯನ್ನು ಹಾಜರುಪಡಿಸಲು ಲೆಕ್ಕ ಪರಿಶೋಧಕರು ಸೂಚಿಸಿದ್ದರು.
2021-22ನೇ ಸಾಲಿನಲ್ಲಿ ಪ್ರಾಧಿಕಾರದಲ್ಲಿ ಚಾಲ್ತಿಯಲ್ಲಿರುವ ಒಟ್ಟು 23 ಖಾತೆಗಳಲ್ಲಿ 15 ಖಾತೆಗಳಲ್ಲಿ ಆಂತರಿಕ ವರ್ಗಾವಣೆ ಮಾಡಲಾಗಿದ್ದನ್ನು ಲೆಕ್ಕ ಪರಿಶೋಧಕರು ತಪಾಸಣೆ ಮೂಲಕ ಬಯಲು ಮಾಡಿದ್ದಾರೆ.
‘ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಮೊಬಲಗನ್ನು ವರ್ಗಾವಣೆ ಮಾಡಿರುವ ಸಂಬಂಧವಾಗಿ ವಿವರಗಳನ್ನು ಹಾಗೂ ವರ್ಗಾವಣೆ ಸಂಬಂಧವಾಗಿ ಸಕ್ಷಮ ಪ್ರಾಧಿಕಾರದಿಂದ ಪಡೆಯಲಾದ ಅನುಮೋದನೆಯ ಕಡತವನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿರುವುದಿಲ್ಲ. ಆದರೆ ವರ್ಗಾವಣೆ ಮತ್ತು ಸ್ವೀಪ್ ಖಾತೆಗಳನ್ನು ಪ್ರತ್ಯೇಕಿಸಿ ಮಾಹಿತಿಯನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿದ್ದಾರೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇದರ ಪ್ರಕಾರ ನಿವ್ವಳ ಆಂತರಿಕ ವರ್ಗಾವಣೆ ಸ್ವೀಕೃತಿಯು 223,65,52,671 ರು. ಮತ್ತು ಅಂತರಿಕ ವರ್ಗಾವಣೆ ಪಾವತಿಯು 223,65,52,671 ರು.ಗಳಿದೆ. ಒಟ್ಟು ವರ್ಗಾವಣೆ ಮೊತ್ತ ಸ್ವೀಕೃತಿ ಮತ್ತು ಪಾವತಿಯು 447.31,05,342 ರುಗಳಾಗಿವೆ. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡುವಾಗ ಒಂದು ನಿರ್ದಿಷ್ಟ ಉದ್ದೇಶ ಮತ್ತು ದಿನಾಂಕದಂದು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ಹಣ ವರ್ಗಾಯಿಸಲಾಗಿದೆ. ಮುಡಾದ ಈ ಲೋಪವನ್ನು ಲೆಕ್ಕ ಪರಿಶೋಧಕರು ಗಂಭೀರವಾಗಿ ಪರಿಗಣಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಅಕ್ರಮಗಳ ಕುರಿತು ಲೆಕ್ಕ ಪರಿಶೋಧಕರು ಸಲ್ಲಿಸಿದ್ದ ವರದಿಯತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ, ಸಚಿವ ಬೈರತಿ ಸುರೇಶ್ ಅವರಾಗಲೀ ಕಣ್ಣಾಡಿಸಿಲ್ಲ. ವರದಿ ಆಧರಿಸಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.