ಬೆಂಗಳೂರು; ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ದಂಪತಿ ಹತ್ಯೆಗೀಡಾದ ಪ್ರಕರಣದಲ್ಲಿ ಸಂತ್ರಸ್ತ ಮಕ್ಕಳಿಗೆ 5 ಲಕ್ಷ ರು. ಗಳನ್ನು ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ದಂಪತಿ ಮತ್ತು ಇವರನ್ನು ಕೊಲೆ ಮಾಡಿದ ಅಪರಾಧಿಗಳು ಪರಿಶಿಷ್ಟ ಜಾತಿಯವರಾಗಿರುವುದರಿಂದ ಈ ಪ್ರಕರಣವನ್ನು ದೌರ್ಜನ್ಯ ಪ್ರತಿಬಂಧಕ ಅಧಿನಿಯಮದಡಿಯಲ್ಲಿ ದಾಖಲಿಸಿಲ್ಲ. ಹೀಗಾಗಿ ಇಲಾಖೆಯಿಂದ ಪರಿಹಾರ ಧನ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಕಾರಣವನ್ನು ಸರ್ಕಾರವು ಮುಂದೊಡ್ಡಿತ್ತು.
ಕಡೆಗೆ ಆಯೋಗದ ಶಿಫಾರಸ್ಸಿನಂತೆಯೇ ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ ಧನ ಮಂಜೂರು ಮಾಡುವ ಅನುದಾನದಡಿಯಲ್ಲಿ 5 ಲಕ್ಷ ರು.ಗಳನ್ನು ಸಂತ್ರಸ್ತ ಮಕ್ಕಳ ಹೆಸರಿನಲ್ಲಿ ಸ್ಥಿರ ಠೇವಣಿ ಇರಿಸಲು ಸರ್ಕಾರವು ಅನುಮತಿ ನೀಡಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ ದಂಪತಿ ಪ್ರಕರಣದಲ್ಲಿ ಕೈಗೊಂಡ ಕ್ರಮದ ಬಗ್ಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರದಿ ನೀಡಿಲ್ಲ ಎಂದು ‘ದಿ ಫೈಲ್’ ವರದಿ ಮಾಡಿದ್ದ ಬೆನ್ನಲ್ಲೇ ಇದೀಗ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಆಯೋಗಕ್ಕೆ ಅನುಪಾಲನ ವರದಿ ಸಲ್ಲಿಸಿದ್ದಾರೆ. ಈ ವರದಿಯಲ್ಲಿ 5 ಲಕ್ಷ ರು.ಗಳನ್ನು ಸ್ಥಿರ ಠೇವಣಿ ಇರಿಸಲು ನಿರ್ದೇಶನ ನೀಡಲಾಗಿದೆ ಎಂಬ ಮಾಹಿತಿಯನ್ನು ಅನುಪಾಲನೆ ವರದಿಯಲ್ಲಿ ಉಲ್ಲೇಖಿಸಿದೆ.
ಇಲಾಖೆಯ ಆಯುಕ್ತರು ಇದಕ್ಕೂ ಮೊದಲು ಅಂದರೆ 2025ರ ಜನವರಿ 13ರಂದು ಆಯೋಗಕ್ಕೆ ವರದಿ ನೀಡಿದ್ದರು.
ಅದರಲ್ಲಿ ಸಂತ್ರಸ್ತ ಮಕ್ಕಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಅನುಮೋದನೆ ಕೋರಿ ಪತ್ರ ಬರೆಯಲಾಗಿದೆ ಎಂದು ಮೊದಲ ಪತ್ರದಲ್ಲಿ ತಿಳಿಸಿದ್ದರು. ಈ ಪ್ರಕರಣದ ಕುರಿತು ‘ದಿ ಫೈಲ್’ 2025ರ ಜನವರಿ 25ರಂದು ವರದಿ ಪ್ರಕಟಿಸಿತ್ತು.
ಅಂತರ್ಜಾತಿ ದಂಪತಿ ಕೊಲೆ ಪ್ರಕರಣ; ವರದಿ ನೀಡದ ಸರ್ಕಾರದ ವಿರುದ್ಧ ಆಯೋಗ ಗರಂ, ಇಲಾಖೆಗೆ ಎಚ್ಚರಿಕೆ
‘ದಿ ಫೈಲ್’ ವರದಿ ಬೆನ್ನಲ್ಲೇ ಆಯೋಗಕ್ಕೆ 2025ರ ಜನವರಿ 27ರಂದು ಅನುಪಾಲನೆ ವರದಿ ಸಲ್ಲಿಕೆಯಾಗಿದೆ.
ಮೃತ ದಂಪತಿ ಮಕ್ಕಳ ಪೈಕಿ 8 ವರ್ಷದ ಮಗು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರೇ, 05 ವರ್ಷದ ಮಗು ಅಂಗನವಾಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ. ಗೌಪ್ಯತೆ ಕಾರಣಕ್ಕೆ ಮಕ್ಕಳ ಹೆಸರು ಮತ್ತು ವ್ಯಾಸಂಗ ಮಾಡುತ್ತಿರುವ ಸ್ಥಳದ ಗುರುತು, ವಿವರ ಬಹಿರಂಗಪಡಿಸುತ್ತಿಲ್ಲ.
ಹತ್ಯೆಗೀಡಾದ ವ್ಯಕ್ತಿಯ ಸೋದರನ ಆಶ್ರಯದಲ್ಲಿ ಮಕ್ಕಳು ಪಾಲನೆ, ಪೋಷಣೆ ನಡೆಯುತ್ತಿದ. ಹೀಗಾಗಿ ಚಿಕ್ಕಪ್ಪನ ಪಾಲಕತ್ವದಲ್ಲಿ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಸ್ಥಿರ ಠೇವಣಿ ಖಾತೆಯಲ್ಲಿ ಠೇವಣಿ ಇರಿಸಬೇಕು. ಮತ್ತು ಮಕ್ಕಳಿಗೆ 18 ವರ್ಷ ತುಂಬುವವರೆಗೆ ಮಕ್ಕಳ ಪೋಷಣೆಗೆ ಮಾಸಿಕ ಬಡ್ಡಿ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. 18 ವರ್ಷಗಳನ್ನು ದಾಟಿದ ನಂತರ ಎಫ್ ಡಿ ಮೊತ್ತವನ್ನು ಅವರ ಮುಂದಿನ ಬಳಕೆಗಾಗಿ ಇಬ್ಬರು ಮಕ್ಕಳಿಗೆ ಸಮಾನವಾಗಿ ವರ್ಗಾಯಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಸರ್ಕಾರಕ್ಕೆ ತಿಳಿಸಿದ್ದರು.
‘ಕೊಲೆಯಾದ ದಂಪತಿಗಳು ಹಾಗೂ ಕೊಲೆ ಮಾಡಿದ ಅಪರಾಧಿಗಳು ಪರಿಶಿಷ್ಟ ಜಾತಿಯವರಾಗಿರುವುದರಿಂದ ಈ ಪ್ರಕರಣವು ದೌರ್ಜನ್ಯ ಪ್ರತಿಬಂಧ ಅಧಿನಿಯಮದಡಿ ದಾಖಲಾಗಿರುವುದಿಲ್ಲ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಧನ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲದ ಕಾರಣ ಸದರಿ ಅನುದಾನ 5.00 ಲಕ್ಷ ರು.ಗಳನ್ನು ಮೃತ ದಂಪತಿಗಳ ಮಕ್ಕಳ ಹೆಸರಿಗೆ ಠೇವಣಿ ಇಡಲಾಗುವುದು. ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ ಧನ ಮಂಜೂರು ಮಾಡುವ ಅನುದಾನದ ಲೆಕ್ಕ ಶೀರ್ಷಿಕೆಯಡಿಯಲ್ಲಿ ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ ಧನ ನೀಡಲು ಅನುಮತಿ ನೀಡಬೇಕು,’ ಎಂದು ಆಯುಕ್ತರು ಸರ್ಕಾರವನ್ನು ಕೋರಿದ್ದರು.
ಪರಿಶಿಷ್ಟ ಜಾತಿಯಯವರಿಗೆ ವಿವಿಧ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು 2024-25ನೇ ಸಾಲಿನಲ್ಲಿ ಒದಗಿಸಿದ್ದ ಅನುದಾನದಡಿಯಲ್ಲಿ ಗದಗ್ ಜಿಲ್ಲೆಗೆ 7 ಲಕ್ಷ ರು. ಬಿಡುಗಡೆ ಮಾಡಿತ್ತು. ಈ ಅನುದಾನದಲ್ಲಿಯೇ 5 ಲಕ್ಷ ರು. ಗಳನ್ನು ಆಯೋಗದ ಶಿಫಾರಸ್ಸಿನಂತೆ ಇಲಾಖೆಯ ಗದಗ ಜಿಲ್ಲೆಯ ಉಪ ನಿರ್ದೇಶಕರಿಗೆ ಬಿಡುಗಡೆ ಮಾಡಲು ಸೂಚಿಸಿದೆ.
ಈ ಪ್ರಕರಣವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಮಾನವ ಹಕ್ಕುಗಳ ಕಾಯ್ದೆ 1993ರ ಸೆಕ್ಷನ್ 18(ಇ)ಯನ್ನು ಇಲಾಖೆಯು ಸ್ಪಷ್ಟವಾಗಿ ಉಲ್ಲಂಘಿಸಿತ್ತು. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆಯೋಗದ ರಿಜಿಸ್ಟ್ರಾರ್ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮಣಿವಣ್ಣನ್ ಅವರಿಗೆ ಎಚ್ಚರಿಕೆಯನ್ನೂ ನೀಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದ ರಿಜಿಸ್ಟ್ರಾರ್ ಅವರು 2024ರ ಡಿಸೆಂಬರ್ 6ರಂದೇ ಪತ್ರ ಬರೆದಿದ್ದರು.
ಅಂತರ್ಜಾತಿ ವಿವಾಹವಾಗಿದ್ದ ರಮೇಶ್ ಮಾದರ್ ಮತ್ತು ಗಂಗಮ್ಮ ರಾಠೋಡ್ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ವರದಿ ಮತ್ತು ಶಿಫಾರಸ್ಸುಗಳನ್ನು ಮಾನವ ಹಕ್ಕುಗಳ ಆಯೋಗವು ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿ ಮೇಲೆ ಕೈಗೊಂಡ ಕ್ರಮದ ಕುರಿತು ವರದಿಯನ್ನು ಬಯಸಿ ಪತ್ರ ಬರೆದಿತ್ತು. ಈ ಬಗ್ಗೆ 2019ರಿಂದಲೂ ಹಲವಾರು ಬಾರಿ ನೆನಪೋಲೆಗಳನ್ನು ಕಳಿಸಿತ್ತು.
ಆದರೆ ಈ ಪ್ರಕರಣದ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಸಮಾಜ ಕಲ್ಯಾಣ ಇಲಾಖೆಯು ವರದಿಯನ್ನು ಸಲ್ಲಿಸಿಲ್ಲ. ಹೀಗಾಗಿ 2024ರ ಡಿಸೆಂಬರ್ 31ರೊಳಗೆ ವರದಿಯನ್ನು ಆದ್ಯತೆ ಮೇಲೆ ಸಲ್ಲಿಸಬೇಕು ಎಂದು ಆಯೋಗವು ನಿರ್ದೇಶಿಸಿತ್ತು.
ಪ್ರಕರಣದ ವಿವರ
ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ನಿವಾಸಿ ರಮೇಶ್ ಮಾದರ್ (29) ಮತ್ತು ಗಂಗಮ್ಮ ರಾಠೋಡ್ (23) ಅಂತರ್ಜಾತಿ ವಿವಾಹವಾಗಿದ್ದರು. ಇದು ಇಬ್ಬರ ಕುಟುಂಬಸ್ಥರದಲ್ಲಿ ತೀವ್ರ ಅಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ದಂಪತಿಗಳಿಬ್ಬರು ಶಿವಮೊಗ್ಗದಲ್ಲಿ ಜೀವನ ಸಾಗಿಸಿದ್ದರು.
ಗ್ರಾಮದಲ್ಲಿದ್ದ ರಮೇಶ ಅವರ ಮನೆಗೆ ಗಂಗಮ್ಮ ಅವರ ಸೋದರರು ಏಕಾಏಕೀ ನುಗ್ಗಿ ಇಬ್ಬರನ್ನೂ ಬರ್ಬರವಾಗಿ ಹತ್ಯೆಗೈದಿದ್ದರು. ಇವರಿಬ್ಬರಿಗೆ 3 ವರ್ಷದ ಅನಿಲ್ ಮತ್ತು 2 ತಿಂಗಳ ಮಗುವಿತ್ತು. ಈ ಘಟನೆ ಕುರಿತು ಪರಿಶೀಲನೆ ನಡೆಸಿದ್ದ ಅಂದಿನ ಎಸ್ಪಿ ಶ್ರೀನಾಥ ಜೋಶಿ, ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ವಿರುದ್ಧ (Cr. No: 116/2019 u/s 449, 302, 506 (2) R/w 34 I.P.C) ಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿದ್ದರು. ಈ ಸಂಬಂಧ ಆಯೋಗವು ಪ್ರಕರಣವನ್ನು ದಾಖಲಿಸಿಕೊಂಡಿತ್ತು. 2019ರಿಂದಲೂ ಹಲವು ನೋಟಿಸ್‌ಗಳನ್ನು ಜಾರಿಗೊಳಿಸಿತ್ತು.
ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ್ದ ಆಯೋಗವು ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗದಗ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮತ್ತು ಅಂಬೇಡ್ಕರ್ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿತ್ತು. ಮಾನವೀಯ ಆಧಾರದ ಮೇಲೆ ಮಕ್ಕಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ಪರಿಹಾರ ನೀಡುವಂತೆ ಗದಗ ಜಿಲ್ಲಾಧಿಕಾರಿ ಮತ್ತೊಂದು ಪತ್ರ ಬರೆದಿದ್ದರು.
ಮಕ್ಕಳ ಚಿಕ್ಕಪ್ಪಂದಿರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿತ್ತು. ಅಂಬೇಡ್ಕರ್ ಆವಾಜ್ ಯೋಜನೆಯಡಿಯಲ್ಲಿ ಮೃತರ ಪೋಷಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ಅವರ ಜೀವನೋಪಾಯಕ್ಕಾಗಿ ಹಾಲಿನ ಡೈರಿಯನ್ನು ಸ್ಥಾಪಿಸಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದರು.
ಅದರಲ್ಲಿ ಭವಿಷ್ಯದಲ್ಲಿ ಅನಾಥ ಮಕ್ಕಳ ಜೀವನಕ್ಕೆ ಯಾವುದೇ ಆರೈಕೆ ಅಥವಾ ರಕ್ಷಣೆ ನೀಡುವ ಯಾವುದೇ ಯೋಜನೆ ಇಲ್ಲ ಎಂದು ಮಾಹಿತಿ ನೀಡಿದ್ದರು. ದಂಪತಿಗಳ ಹತ್ಯೆಯನ್ನು ತಡೆಯದಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಏಕೆ ಹೊಣೆಗಾರರನ್ನಾಗಿ ಮಾಡಬಾರದು ಎಂದು ಆಯೋಗವು ಜಿಲ್ಲಾ ಎಸ್‌ಪಿಗೆ ನೋಟೀಸ್ ಕೂಡ ಜಾರಿಗೊಳಿಸಿತ್ತು. ಹಾಗೂ ಅನಾಥ ಮಕ್ಕಳ ಜೀವನ ಮತ್ತು ಶಿಕ್ಷಣದ ಹಕ್ಕನ್ನು ರಕ್ಷಿಸಲು ಪೊಲೀಸ್ ಇಲಾಖೆಯಲ್ಲಿ ಅಸ್ತಿತ್ವದಲ್ಲಿ ಯೋಜನೆಗಳಿವೆಯೇ ಎಂಬ ಮಾಹಿತಿಯನ್ನೂ ಬಯಸಿತ್ತು.
ಆಯೋಗವು ಹಲವಾರು ಬಾರಿ ಈ ಸಂಬಂಧ ವರದಿ ನೀಡಲು ಕೋರಿದ್ದರೂ ಇಲಾಖೆಯು ಡಿಸೆಂಬರ್ 2024ರವರೆಗೂ ವರದಿಯನ್ನು ನೀಡಿರಲಿಲ್ಲ.
ಅಲ್ಲದೇ 2024ರ ಫೆ.8ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು.
ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ನೋಟೀಸ್ ಜಾರಿಗೊಳಿಸಿತ್ತು.
ಕೊಲೆಯಾದ ದಂಪತಿಗಳ ಚಿಕ್ಕ ಮಕ್ಕಳಿಗೆ ಅಗತ್ಯ ನೆರವು, ಪರಿಹಾರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಅನ್ವಯವಾಗುವ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ನೀಡಲಾಗುವುದು ಮತ್ತು ಅವರ ಶಿಕ್ಷಣದ ಹಕ್ಕನ್ನು ಕಾನೂನಿನ ಪ್ರಕಾರ ರಕ್ಷಿಸಲಾಗುತ್ತದೆ ಮತ್ತು ಜಾರಿಗೊಳಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಆಯೋಗಕ್ಕೆ ವಿವರ ನೀಡಿದ್ದರು. ಈ ಸಂಬಂಧ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದರು.