ಬೆಂಗಳೂರು; ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ವಿವಿಧೆಡೆ ಅಕ್ರಮವಾಗಿ ಜಮೀನು ಮಂಜೂರು ಮಾಡಿರುವ ಪ್ರಕರಣಗಳಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಟ್ರಸ್ಟ್‌ನ ಇತರ ಸದಸ್ಯರು ಮತ್ತು ಸಚಿವ ಎಂ ಬಿ ಪಾಟೀಲ್ ಅವರ ವಿರುದ್ಧ ಐಪಿಸಿಯ ವಿವಿಧ ಕಲಂಗಳಡಿಯಲ್ಲಿ ಪೊಲೀಸ್ ಠಾಣೆಗೆ ದೂರರ್ಜಿ ಸಲ್ಲಿಕೆಯಾಗಿದೆ.
ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರಿನಲ್ಲಿ ಸಿಎ ನಿವೇಶನ ಮಂಜೂರಾಗಿದ್ದ ಪ್ರಕರಣಗಳ ಕುರಿತು ದಾಖಲೆಗಳ ಸಮೇತ ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಈ ವರದಿಗಳ ಬೆನ್ನಲ್ಲೇ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಐಪಿಸಿ ಕಲಂಗಳಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರರ್ಜಿಯು ಈ ಪ್ರಕರಣವನ್ನು ಕಾನೂನಾತ್ಮಕವಾದ ಹೋರಾಟದ ಮುಂದುವರಿಕೆಯಾಗಿ ಕಾಣುತ್ತಿದೆ.
ವಿಶೇಷವೆಂದರೇ ದೂರರ್ಜಿಯನ್ನು ಸ್ವೀಕರಿಸಲು ಅರ್ಜಿದಾರರನ್ನು ಪೊಲೀಸರು ಸತಾಯಿಸಿದ್ದರು. ಎರಡನೇ ದಿನದಂದು ದೂರನ್ನು ಸ್ವೀಕರಿಸಿದ್ದ ಪೊಲೀಸರು, ದೂರಿನಲ್ಲಿ ಉಲ್ಲೇಖಿಸಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ. ಮತ್ತು ದೂರು ಸ್ವೀಕೃತಿಯಲ್ಲಿ ದಿನಾಂಕವನ್ನೂ ನಮೂದಿಸದೇ ವಾಟ್ಸಪ್ ಮುಖಾಂತರ ದೂರಿನ ಪ್ರತಿಯನ್ನು ಅರ್ಜಿದಾರರಿಗೆ ನೀಡಿದ್ದರು.
ಬೆಂಗಳೂರಿನ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಹೈಗ್ರೌಂಡ್ಸ್‌ನ ಪೊಲೀಸ್ ಠಾಣೆಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ವೇದಿಕೆಯು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿ, ಬಿಡಿಎಯು ನಿಯಮಗಳನ್ನು ಉಲ್ಲಂಘಿಸಿ ಪರಿಶಿಷ್ಟ ಜಾತಿ ಕೋಟಾದಡಿಯಲ್ಲಿ ಸಿ ಎ ನಿವೇಶನಗಳನ್ನು ಮಂಜೂರು ಮಾಡಿದೆ. ಸಿದ್ದಾರ್ಥ ವಿಹಾರ ಟ್ರಸ್ಟ್, ಪರಿಶಿಷ್ಟ ಜಾತಿ ಪ್ರಾತಿನಿಧ್ಯದಡಿಯಲ್ಲಿ ಮೀಸಲಾತಿಗೆ ಅನರ್ಹವಾಗಿದ್ದರೂ ಸಹ ಸಿ ಎ ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಧಾಬಾಯಿ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ಖರ್ಗೆ, ರಾಹುಲ್ ಖರ್ಗೆ, ಶಾಂತಪ್ಪ, ಮತ್ತು ಸಚಿವ ಎಂ ಬಿ ಪಾಟೀಲ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಐಪಿಸಿ ಕಲಂ 403, 406, 409, 420, 426 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಬೇಕು ಎಂದು ವೇದಿಕೆಯ ಅಧ್ಯಕ್ಷ ವಿ ಆರ್ ಮರಾಠೆ ಅವರು ಕೋರಿರುವುದು ದೂರಿನಿಂದ ತಿಳಿದು ಬಂದಿದೆ.
ಮತ್ತೊಂದು ಸಂಗತಿ ಎಂದರೇ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ನಿಯಮ ಬಾಹಿರವಾಗಿ ಸಿ ಎ ನಿವೇಶನಗಳನ್ನು ಮಂಜೂರು ಮಾಡಿರುವ ಸಂಬಂಧ ದಾಖಲಾತಿಗಳ ಸಮೇತ ನೀಡಿದ್ದ ದೂರನ್ನು ಸ್ವೀಕರಿಸಲು ಹೈಗ್ರೌಂಡ್ಸ್ ಪೊಲೀಸ್ ಠಾಣಾಧಿಕಾರಿಗಳು ಸತಾಯಿಸಿದ್ದರು.
‘ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಇಬ್ಬರು ಸದಸ್ಯರು ತಮ್ಮ ವಕೀಲರೊಂದಿಗೆ 2025ರ ಜನವರಿ 21ರಂದು ದೂರು ಸಲ್ಲಿಸಲು ತೆರಳಿದ್ದರು. ದೂರು ಸ್ವೀಕರಿಸಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಕೋರಿದ್ದೆವು. ಆದರೆ ಅಲ್ಲಿನ ಠಾಣಾಧಿಕಾರಿಯು ದೂರುದಾರರು ಹಿರಿಯ ನಾಗರೀಕರಾಗಿದ್ದರೂ ಸಹ ಸಂಜೆ 6.30 ರವರೆಗೂ ಠಾಣೆಯಲ್ಲಿ ಕೂರಿಸಿಕೊಂಡಿದ್ದರು. ಅಂದು ದೂರು ಸ್ವೀಕರಿಸಲಿಲ್ಲ. ಬದಲಿಗೆ ಮರು ದಿನ ಬರುವಂತೆ ತಿಳಿಸಿ ಅಲ್ಲಿಂದ ಕಳಿಸಿದ್ದರು,’ ಎಂದು ವೇದಿಕೆಯ ವಿ ಆರ್ ಮರಾಠೆ ಅವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅದೇ ರೀತಿ ಮರು ದಿನ ಅಂದರೆ 2025ರ ಜನವರಿ 22ರಂದು ವೇದಿಕೆಯು ತನ್ನ ವಕೀಲರೊಂದಿಗೆ ದೂರು ಸಲ್ಲಿಸಲು ತೆರಳಿತ್ತು. ಅಂದೂ ಸಹ ಸುಮಾರು 4 ಗಂಟೆಗಳ ಕಾಲ ಅನಾವಶ್ಯಕವಾಗಿ ಕಾಯಿಸಿದ್ದರು. ದೂರನ್ನು ಸ್ವೀಕರಿಸಲು ಪೊಲೀಸ್ ಉಪ ಆಯುಕ್ತರೊಂದಿಗೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಬೇಕು ಎಂದು ಹೇಳಿದ್ದರು. ಸಂಜ್ಞೆಯ ಅಪರಾಧದ ದೂರು ಸ್ವೀಕೃತಿಯು ಯಾವುದೇ ತಾರ್ಕಿಕ ಅಂತ್ಯಕ್ಕೆ ಬರಲಿಲ್ಲ. ಹೀಗಾಗಿ ವೇದಿಕೆಯ ಸದಸ್ಯರು ಠಾಣೆಯಿಂದ ತೆರಳಿದ್ದರು ಎಂಬ ಸಂಗತಿಯನ್ನು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
‘ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳದೆ ವಾಟ್ಸಪ್ ಮುಖಾಂತರ ಉದ್ದೇಶಪೂರ್ವಕವಾಗಿ ದಿನಾಂಕವನ್ನೂ ನಮೂದಿಸದೆ ಸ್ವೀಕೃತಿಯನ್ನು ನಮಗೆ ಕಳುಹಿಸಿದ್ದಾರೆ,’ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ದೂರಿನಲ್ಲೇನಿದೆ?
ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬದವರೇ ಹೆಚ್ಚಾಗಿ ಸದಸ್ಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಮೂಲಕ ತಮ್ಮ ರಾಜಕೀಯ ಪ್ರಭಾವವನ್ನು ದುರ್ಬಳಕೆ ಮಾಡಿಕೊಂಡಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಸಾವಿರಾರು ಕೋಟಿ ರೂ. ಮೌಲ್ಶದ ಸರ್ಕಾರಿ ಆಸ್ತಿಯನ್ನು ಕಬಳಿಸಿದೆ. ಇವುಗಳ ಬಗ್ಗೆ ದಾಖಲೆಗಳನ್ನು ಮಾಹಿತಿ ಹಕ್ಕಿನಡಿಯಲ್ಲಿ ಪಡೆದಿದೆ. ಇದೊಂದು ಕ್ರಿಮಿನಲ್ ಅಪರಾಧವಾಗಿದೆ ಎಂದು ದೂರಿನಲ್ಲಿ ವಿವರಿಸಿದೆ.
ಖರ್ಗೆ ಕುಟುಂಬದವರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಅಕ್ರಮವಾಗಿ ಕೆಐಡಿಬಿ ಭೂಮಿಯನ್ನು ಪಡೆದುಕೊಂಡಿತ್ತು. ಈ ಅಕ್ರಮವು ಬಹಿರಂಗವಾದ ನಂತರ ಈ ಭೂಮಿಯನ್ನು ಹಿಂತಿರುಗಿಸಲಾಗಿದೆ. ಅಕ್ರಮ ನಡೆಯದಿದ್ದರೆ, ಈ ಭೂಮಿಯನ್ನು ಹಿಂತಿರುಗಿಸುವ ಅವಶ್ಯಕತೆ ಇರುತ್ತಿರಲಿಲ್ಲ ಎಂದೂ ದೂರಿನಲ್ಲಿ ಹೇಳಲಾಗಿದೆ.
ದೇವನಹಳ್ಳಿಯಲ್ಲಿನ ಏರೋಸ್ಪೇಸ್ ಮತ್ತು ಹೈಟೆಕ್ ಡಿಫೆನ್ಸ್‌ನ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ನಾಗರಿಕ ಸೌಕರ್ಯ ಪ್ಲಾಟ್‌ಗಳ ಹಂಚಿಕೆ ಕುರಿತು ಅಧಿಸೂಚನೆ (ಫೆಬ್ರವರಿ 5, 2024ರ ಸರ್ಕಾರದ ಆದೇಶ ಸಂಖ್ಯೆ CI 78 SPQ 2021) ಹೊರಡಿಸಿತ್ತು. ಈ ಕೈಗಾರಿಕೆ ಪ್ರದೇಶದಲ್ಲಿ ಶೇ.24.10ರಷ್ಟು ಸಿಎ ನಿವೇಶನಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಮೀಸಲಿಡಲಾಗಿತ್ತು. ಇದನ್ನು 2024ರ ಫೆ.8ರಂದೇ ಕೆಐಎಡಿಯ ಅಧಿಕೃತ ವೆಬ್ ಜಾಲತಾಣದಲ್ಲಿ ಪ್ರಕಟಿಸಿತ್ತು.
ಈ ಕೈಗಾರಿಕೆ ಪ್ರದೇಶದಲ್ಲಿ ಸಿ ಎ ನಿವೇಶನಕ್ಕಾಗಿ ಸಿದ್ದಾರ್ಥ ವಿಹಾರ ಟ್ರಸ್ಟ್ ಪರಿಶಿಷ್ಟ ಜಾತಿ ಕೋಟಾದಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಟ್ರಸ್ಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದೆ ಮತ್ತು ಆಟೋಮೊಬೈಲ್ ಮತ್ತು ಬಸ್‌ಗಳ ಹೊರ ಕವಚ ಅಭಿವೃದ್ಧಿ ಸಂಶೋಧನೆ, ಅಭಿವೃದ್ದಿ ಕೇಂದ್ರಕ್ಕೆಂದು ಪ್ರಸ್ತಾವನೆಯೊಂದಿಗೆ ವಿವರವಾದ ಯೋಜನಾ ವರದಿ ಸಲ್ಲಿಸಿತ್ತು ಎಂದು ವಿವರಿಸಿದೆ.
ಸಚಿವ ಎಂ ಬಿ ಪಾಟೀಲ್ ಅಧ್ಯಕ್ಷತೆಯಲ್ಲಿನ ಏಕ ಗವಾಕ್ಷಿ ಸಮಿತಿಯು ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ಭೂಮಿಯನ್ನು ಹಂಚಿಕೆ ಮಾಡಲು ಅನುಮೋದಿಸಿತ್ತು. ಆದರೆ ಈ ಟ್ರಸ್ಟ್, ಪರಿಶಿಷ್ಟ ಜಾತಿ ಮತ್ತ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮಾತ್ರ ಸ್ಥಾಪಿತವಾಗಿದೆಯೇ ಇಲ್ಲವೇ ಎಂಬ ಕುರಿತು ಪರಿಶೀಲನೆ ಮಾಡದೆಯೇ ಹಂಚಿಕೆ ಮಾಡಲು ಅನುಮೋದಿಸಿತ್ತು ಎಂದು ದೂರಿನಲ್ಲಿ ವೇದಿಕೆಯು ಆಪಾದಿಸಿದೆ.
‘ಆದರೆ ಟ್ರಸ್ಟ್ ಡೀಡ್ ದಾಖಲೆಗಳ ಪ್ರಕಾರ ಸಿದ್ದಾರ್ಥ ವಿಹಾರ ಟ್ರಸ್ಟ್‌ನ ಉದ್ದೇಶಗಳು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಟ್ರಸ್ಟ್ ಎಲ್ಲಾ ಸಮುದಾಯಗಳಿಗೆ ಅಂದರೆ ಜಾತಿ, ಧರ್ಮ, ಲಿಂಗ, ಇತ್ಯಾದಿಗಳನ್ನು ಪರಿಗಣಿಸದೇ ಸೇವೆ ನೀಡಲು ಉದ್ದೇಶಿಸಿದೆ. ಆದ್ದರಿಂದ ಇದನ್ನು ಸಾಮಾನ್ಯ ವರ್ಗದ ಟ್ರಸ್ಟ್ ಎಂದು ವರ್ಗೀಕರಿಸಲಾಗಿದೆ. ಹೀಗಾಗಿ ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಮೀಸಲಾಗಿಲ್ಲ,’ ಎಂದು ದೂರಿನಲ್ಲಿ ವಿವರಿಸಿರುವ ವೇದಿಕೆಯು ಈ ಸಂಬಂಧ ಟ್ರಸ್ಟ್ ಡೀಡ್ ಮತ್ತು ಬಿಡಿಎ ಸಿ ಎ ನಿವೇಶನ ಪ್ರಕರಣದಲ್ಲಿ ಕಾನೂನು ಅಧಿಕಾರಿ ನೀಡಿದ್ದ ಅಭಿಪ್ರಾಯವನ್ನೂ ಪುರಾವೆಯನ್ನಾಗಿ ನೀಡಿರುವುದು ಗೊತ್ತಾಗಿದೆ.
ಆದರೂ ಸಹ ಸಿದ್ದಾರ್ಥ ವಿಹಾರ ಟ್ರಸ್ಟ್, ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಲ್ಲಿಸಿದ ಅರ್ಜಿಯಲ್ಲಿ ಟ್ರಸ್ಟ್‌ನ ಸ್ಥಿತಿಯನ್ನು ತಪ್ಪಾಗಿ ಪ್ರತಿನಿಧಿಸುವ ಮೂಲಕ ಅಪ್ರಾಮಾಣಿಕ ಉದ್ದೇಶವನ್ನು ಹೊಂದಿದೆ ಎಂದು ವೇದಿಕೆಯು ಆರೋಪಿಸಿದೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ಕೇವಲ ಕೆಐಎಡಿಬಿ ಮಾತ್ರವಲ್ಲದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಡಾವಣೆಯಲ್ಲಿ ಸಿ ಎ ನಿವೇಶನವನ್ನೂ ಮಂಜೂರು ಮಾಡಿಸಿಕೊಂಡಿದೆ. 2009ರಲ್ಲಿ ಬನಶಂಕರಿಯ 6ನೇ ಹಂತ 5ನೇ ಬ್ಲಾಕ್‌ನಲ್ಲಿ ಬಡಾವಣೆಯಲ್ಲಿ ಸಿ ಎ ನಿವೇಶನ ಹಂಚಿಕೆ ಮಾಡಲು ಬಿಡಿಎಯು ಜನವರಿ 30, 2009 ರಂದು ಅಧಿಸೂಚನೆ ಹೊರಡಿಸಿತ್ತು.
ಈ ಬಡಾವಣೆಯಲ್ಲಿನ ಸಿ ಎ ನಿವೇಶನಗಳು ಪ್ರಮುಖವಾಗಿ ಅನುಸೂಚಿತ ಜಾತಿ (ಎಸ್‌ಸಿ) ಮತ್ತು ಅನುಸೂಚಿತ ಪಂಗಡ (ಎಸ್‌ಟಿ)ಗಳ ಏಳ್ಗೆಗಾಗಿ ಕೆಲಸ ಮಾಡುವ ಟ್ರಸ್ಟ್‌ಗಳಿಗಷ್ಟೇ ಮೀಸಲಾಗಿದ್ದವು. ಆದರೆ ಸಿದ್ದಾರ್ಥ ವಿಹಾರ ಟ್ರಸ್ಟ್ ತನ್ನನ್ನು ಎಸ್‌ಸಿ/ಎಸ್ಟಿ ಸಮುದಾಯಗಳ ಏಳಿಗೆಗಾಗಿ ಸ್ಥಾಪಿತವಾಗಿರುವ ಟ್ರಸ್ಟ್ ಎಂದು ಎಸ್ ಸಿ ಪ್ರಾತಿನಿಧ್ಯದಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ಮತ್ತು ಕೋರಿದ್ದ ಪ್ರಾತಿನಿಧ್ಯಕ್ಕೇ ಮನ್ನಣೆ ನೀಡಿದ್ದ ಬಿಡಿಎಯು ಸಿಎ ನಿವೇಶನವನ್ನು ಮಂಜೂರು ಮಾಡಲು ನಿರ್ಣಯಿಸಿತು ಎಂದು ದೂರಿನಲ್ಲಿ ವೇದಿಕೆಯು ವಿವರಿಸಿದೆ.
ಈ ಸಿ ಎ ನಿವೇಶನಗಳಿಗೆ ಬಿಡಿಎಯು ಅಧಿಸೂಚನೆ ಹೊರಡಿಸಿದ ನಂತರ ಅಂದಿನ ಸರ್ಕಾರವು 1989ರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ನಾಗರಿಕ ಸೌಲಭ್ಯ ಸೈಟ್ಗಳ ಮಂಜೂರು) ನಿಯಮ 8ಕ್ಕೆ ತಿದ್ದುಪಡಿ ಮಾಡಿತ್ತು. ಈ ತಿದ್ದುಪಡಿಯ ಪ್ರಕಾರ, ದೈಹಿಕ ಮತ್ತು ಮಾನಸಿಕ ಅಂಗವಿಕಲರು ಹಾಗೂ ಎಸ್ಎಸಿ / ಎಸ್ಟಿ ಸಮುದಾಯಗಳ ಏಳಿಗೆಗೆ ಮಾತ್ರ ನಿಷ್ಠಾವಂತವಾಗಿ ಕೆಲಸ ಮಾಡುವ ಟ್ರಸ್ಟ್‌ಗಳಿಗೆ ಗುತ್ತಿಗೆ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ/ವಿನಾಯಿತಿ ನೀಡುವ ನಿಯಮಗಳನ್ನು ಜಾರಿಗೊಳಿಸಿತ್ತು. ಈ ರಿಯಾಯಿತಿಯು 2010ರ ಏಪ್ರಿಲ್ 20ರ ದಿನಾಂಕದಿಂದ ಅನ್ವಯವಾಗಲಿದೆ ಎಂದೂ ಹೇಳಿತ್ತು.
ತಿದ್ದುಪಡಿ ನಿಯಮಗಳನ್ನಾಧರಿಸಿ ಸಿದ್ದಾರ್ಥ ವಿಹಾರ ಟ್ರಸ್ಟ್, ತಮಗೆ ಮಂಜೂರಾಗಿದ್ದ ಸಿ ಎ ನಿವೇಶನದ ಗುತ್ತಿಗೆ ಮೌಲ್ಯದಲ್ಲಿ ಶೇ.50ರಷ್ಟು ರಿಯಾಯಿತಿ/ವಿನಾಯಿತಿ ನೀಡಬೇಕು ಎಂದು ಬಿಡಿಎಗೆ ಅರ್ಜಿ ಸಲ್ಲಿಸಿತ್ತು. ಆದರೆ, ಸಿಎ ಸೈಟ್‌ಗಳನ್ನು ಮಂಜೂರು ಮಾಡಿದ ಅಧಿಸೂಚನೆಯು ಈ ತಿದ್ದುಪಡಿಯ ವರ್ಷಕ್ಕಿಂತ ಹೆಚ್ಚಿನ ಕಾಲದ ಹಿಂದಿನದಾಗಿತ್ತು. ಆದರೂ, ಬಿಡಿಎ ಅಧಿಕಾರಿಗಳು ಈ ತಿದ್ದುಪಡಿಯನ್ನು ಪೂರ್ವಾನ್ವಯವಾಗಿ ಅನ್ವಯಿಸಿದ್ದರು. ಮತ್ತು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಅಕ್ರಮವಾಗಿ ಗುತ್ತಿಗೆ ಮೌಲ್ಯದಲ್ಲಿ ಶೇ. 50ರಷ್ಟು ಕಡಿಮೆ ದರದಲ್ಲಿ ಮಂಜೂರು ಮಾಡಿದ್ದರು ಎಂದು ದೂರಿನಲ್ಲಿ ವೇದಿಕೆಯು ಆಪಾದಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಕಾಕಂಬಿ ರಫ್ತು ಹಗರಣದ ಕುರಿತೂ ಲಂಚಮುಕ್ತ ಕರ್ನಾಟಕ ವೇದಿಕೆಯು ದನಿ ಎತ್ತಿತ್ತು. ಈ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿರುವ ವೇದಿಕೆಯು, ಮಾಜಿ ಸಚಿವ ಎನ್ ಗೋಪಾಲಯ್ಯ, ಆರ್ಥಿಕ ಇಲಾಖೆಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್, ಅಬಕಾರಿ ಆಯುಕ್ತರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಇತ್ತೀಚೆಗಷ್ಟೇ ಪತ್ರವನ್ನೂ ಬರೆದಿರುವುದು ಗೊತ್ತಾಗಿದೆ.