ಶುದ್ದ ಕುಡಿಯುವ ನೀರಿಲ್ಲ, ಹಾಸಿಗೆಯಿಲ್ಲ, ಬಿಸಿ ನೀರೂ ಇಲ್ಲ; ಮಕ್ಕಳ ರಕ್ಷಣಾ ಆಯೋಗದ ವರದಿಗೆ ಮೆತ್ತಿಕೊಂಡ ಧೂಳು

ಬೆಂಗಳೂರು; ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ವಸತಿ ನಿಲಯಗಳು ಶಿಥಿಲಗೊಂಡಿವೆ. ಈ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರೂ ಇಲ್ಲ, ಅಷ್ಟೇ ಏಕೆ ಮಕ್ಕಳಿಗೆ ಸ್ನಾನಕ್ಕಾಗಿ ಬಿಸಿ ನೀರೂ ಇಲ್ಲ.

 

ಹೀಗೆಂದು 2024ರ ಸೆ 30ರಂದೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ವಸತಿ ಶಾಲೆಗಳ ನೈಜ ಸ್ಥಿತಿಯನ್ನು ಅನಾವರಣಗೊಳಿಸಿತ್ತು. ಆಯೋಗವು ವರ್ಷದ ಹಿಂದೆಯೇ ನೀಡಿದ್ದ ವರದಿಯ  ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಸತಿ ಶಾಲೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋವು 2024ರ ಮೇ 18ರಂದೇ ತನ್ನ ವರದಿಯನ್ನು ನೀಡಿದೆ. ಈ ವರದಿ ಸಲ್ಲಿಕೆಯಾಗಿ ವರ್ಷ ಕಳೆದರೂ ಇದುವರೆಗೂ ಇಲಾಖೆಯು ಯಾವುದೇ ಕ್ರಮವಹಿಸಿಲ್ಲ ಎಂದು ಗೊತ್ತಾಗಿದೆ.

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಸತಿ ಶಾಲೆ, ಕಾಲೇಜುಗಳಲ್ಲಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುರುಕು ಡೆಸ್ಕ್‌, ಹರಿದ, ಧೂಳು ಹಿಡಿದ ಹಾಸಿಗೆ, ದಿಂಬು, ಜಮಖಾನಾಗಳಲ್ಲೇ  ದಿನ ದೂಡುತ್ತಿದ್ದಾರೆ. ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ವಿದ್ಯಾರ್ಥಿಗಳು ಹಲವೆಡೆ ಪ್ರತಿಭಟನೆಗಿಳಿದಿರುವ ನಡುವೆಯೇ  ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವರ್ಷದ ಹಿಂದೆಯೇ  ಸಲ್ಲಿಸಿದ್ದ  ವರದಿಯು ಮುನ್ನೆಲೆಗೆ ಬಂದಿದೆ.

 

ವರದಿಯಲ್ಲೇನಿದೆ?

 

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಸೆಕ್ಷನ್‌ 13ರ ಅನ್ವಯ ದೂರುಗಳನ್ನು ವಿಚಾರಣೆಗೊಳಪಡಿಸುವ ಮತ್ತು ಸೆಕ್ಷನ್‌ 14 ಅಡಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತಗೆ ಸಿವಿಲ್‌ ನ್ಯಾಯಾಲಯದ ಸೆಕ್ಷನ್‌ 5ರಂತೆ ಕಾರ್ಯನಿರ್ವಹಿಸುತ್ತಿದೆ. ಹಾಗೆಯೇ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳನ್ನು ಆಯೋಗವು ಸ್ವಯಂ ಪ್ರೇರಣೆಯಿಮದ ದೂರು ದಾಖಲಿಸಿಕೊಂಡು ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಹೊಂದಿದೆ.

 

ಅಲ್ಲದೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಉಚಿತ ಮತ್ತು ಕಡ್ಡಾಯ ಶಿಕ್ಷಣ, ಪೋಕ್ಸೋ ಕಾಯ್ದೆ ಮತ್ತು ಬಾಲ ನ್ಯಾಯ 2015 ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

 

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಾ ಆಯೋಗದ ತಂಡವು ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಇಲಾಖೆಯು ನಡೆಸುತ್ತಿರುವ ವಸತಿ ಶಾಲೆ, ವಸತಿ ನಿಲಯಗಳಿಗೆ ಭೇಟಿ ನೀಡಿತ್ತು. ಈ ಸಮಯದಲ್ಲಿ ವಸತಿ ಶಾಲೆಗಳು ಶಿಥಿಲಗೊಂಡಿರುವುದು ಕಂಡು ಬಂದಿದೆ. ಶುದ್ಧ ಕುಡಿಯುವ ನೀರು ಇಲ್ಲ, ಮಕ್ಕಳಿಗೆ ಸ್ನಾನಕ್ಕಾಗಿ ಬಿಸಿ ನೀರಿನ ಕೊರತೆ ಇದೆ. ಮಲಗಲು ಕಾಟ್‌, ಬೆಡ್‌ಗಳಿಲ್ಲ. ತರಗತಿಯಲ್ಲಿ ಮಕ್ಕಳಿಗೆ ಡೆಸ್ಕ್‌ ಸಮಸ್ಯೆಗಳಿರುವುದನ್ನು ಆಯೋಗವು ಗಮನಿಸಿದೆ ಎಂದು ವರದಿಯಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

 

 

 

ಸರ್ಕಾರದ ವಿವಿಧ ಇಲಾಖೆಗಳ ಅಡಿಯಲ್ಲಿ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಮಕ್ಕಳಿಗೆ ಸೌಲಭ್ಯಗಳು ನಿಗದಿತ ಸಮಯದಲ್ಲಿ ತಲುಪುತ್ತಿದೆಯೇ ಸೌಲಭ್ಯಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆಯೇ ಎಂಬ ಕುರಿತು ಪರಿಶೀಲನೆ, ಸಂಯೋಜನೆ ನಡೆಸಲು ಇಲಾಖೆಯ ಸಿಬ್ಬಂದಿ ಅಧಿಕಾರಿ ಅವಶ್ಯಕತೆ ಇದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡವು ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ನಿಲಯಗಳಿಗೆ ಭೇಟಿ ನೀಡಿ ಸಲ್ಲಿಕೆ ಮಾಡಿದ್ದ ವರದಿಗೂ ಈಗ ಧೂಳು ಮೆತ್ತಿಕೊಂಡಿದೆ.

 

ವಸತಿ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ ಬಿಡಿಗಾಸಿನ ಅನುದಾನವನ್ನೇ ಒದಗಿಸಿಲ್ಲ.  ಹಾಸಿಗೆ, ದಿಂಬು, ತಟ್ಟೆ, ಲೋಟ, ಡೆಸ್ಕ್‌, ಟ್ರಂಕ್‌ ಸೇರಿದಂತೆ ಇನ್ನಿತರೆ 30 ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಂಶುಪಾಲರುಗಳು 464.60 ಕೋಟಿ ರು. ಅನುದಾನ ಕೋರಿದ್ದರು. ಆದರೆ 2024-25ನೇ ಸಾಲಿನ ಆಯವ್ಯಯದಲ್ಲಿ ಈ ಸಂಬಂಧ ನಯಾಪೈಸೆಯನ್ನೂ ನೀಡಿರಲಿಲ್ಲ.

 

 

ಪ.ಜಾತಿ ಮತ್ತು ಪ.ಪಂಗಡ ವಸತಿ ಶಾಲೆ, ಕಾಲೇಜುಗಳಿಗೆ ಹಾಸಿಗೆ, ದಿಂಬು, ತಟ್ಟೆ, ಲೋಟ, ಬಕೆಟ್‌, ಜಗ್ಗು, ಡಸ್ಟ್‌ ಬಿನ್‌, ಜಮಖಾನಾ, ಶಾಲಾ ಬ್ಯಾಗ್‌, ಪಾಠೋಪಕರಣ, ಕಂಪ್ಯೂಟರ್‍‌ ಟೇಬಲ್‌ಗಳು ಸೇರಿದಂತೆ ಒಟ್ಟಾರೆ 30 ಬಗೆಯಲ್ಲಿ 5,96,318 ಪರಿಕರಗಳ ಬೇಡಿಕೆ ಇದೆ. 2024-25ನೇ ಸಾಲಿಗೆ ಈ ಸೌಕರ್ಯಗಳಿಗೆ ಅನುದಾನ ಒದಗಿಸಬೇಕು ಎಂದು ಇಲಾಖೆಯು ಪ್ರಸ್ತಾವನೆ ಸಲ್ಲಿಸಿದ್ದರೂ ಸಹ ಆಯವ್ಯಯದಲ್ಲಿ ಬಿಡಿಗಾಸಿನ ಅನುದಾನವನ್ನೂ ನೀಡಿರಲಿಲ್ಲ.

 

ಮೂಲಸೌಕರ್ಯಗಳಿಗಿಲ್ಲ ಅನುದಾನ; ಹಾಸಿಗೆ, ದಿಂಬು, ತಟ್ಟೆ, ಲೋಟ ಖರೀದಿಗೂ ಹಣವಿಲ್ಲವಾಯಿತೇ?

 

ಪರಿಶಿಷ್ಟ ಜಾತಿಯ ವಸತಿ ಶಾಲೆ, ಕಾಲೇಜುಗಳಲ್ಲಿ 19.603 ಡೆಸ್ಕ್‌ ಕಮ್‌ ಬೆಂಚ್‌ ಗಳಿವೆ. ಇನ್ನೂ 4,601 ಡೆಸ್ಕ್‌ ಕಮ್‌ ಬೆಂಚ್‌ಗಳ ಬೇಡಿಕೆ ಇದೆ. ಪರಿಶಿಷ್ಟ ವರ್ಗ ವಸತಿ ಶಾಲೆ, ಕಾಲೇಜುಗಳಲ್ಲಿ 6,044 ಡೆಸ್ಕ್‌ ಕಮ್‌ ಬೆಂಚ್‌ಗಳಿವೆ. ಇನ್ನೂ 316 ಬೇಡಿಕೆ ಇದೆ. ಒಟ್ಟಾರೆ ಈ ಎರಡೂ ವರ್ಗಗಳ ವಸತಿ ಶಾಲೆ, ಕಾಲೇಜುಗಳಿಗೆ 4,917 ಡೆಸ್ಕ್‌ ಕಮ್‌ ಬೆಂಚ್‌ಗಳ ಬೇಡಿಕೆ ಇರುವುದು ವರದಿಯಿಂದ ಗೊತ್ತಾಗಿದೆ.

 

ಅದೇ ರೀತಿ ಪರಿಶಿಷ್ಟ ಜಾತಿಯ ವಸತಿ ಶಾಲೆ, ಕಾಲೇಜುಗಳಲ್ಲಿ 27,381 ಹಾಸಿಗೆ, 22,643 ದಿಂಬುಗಳಿವೆ. ಆದರೆ ಸದ್ಯದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 76,214 ಹಾಸಿಗೆ, 95,237 ದಿಂಬುಗಳ ಬೇಡಿಕೆ ಇದೆ. ಅದೇ ರೀತಿ ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳಲ್ಲಿ 12,609 ಹಾಸಿಗೆ, 17,625 ದಿಂಬುಗಳಿವೆ. ವಾಸ್ತವದಲ್ಲಿ 93,839 ಹಾಶಿಗೆ, 1,13, 877 ದಿಂಬುಗಳ ಬೇಡಿಕೆ ಇದ್ದವು.

Your generous support will help us remain independent and work without fear.

Latest News

Related Posts