ಬೆಂಗಳೂರು; ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್, ವಿಶೇಷ ರಿಯಾಯಿತಿಗೆ ಸಂಬಂಧಿಸಿದಂತೆ ಸರ್ಕಾರವು ಹೊರಡಿಸಿದ್ದ ಸುತ್ತೋಲೆಯ ಲಾಭಕ್ಕೆ ಅರ್ಹವಾಗಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದ್ದ ಬನಶಂಕರಿ 5ನೇ ಬ್ಲಾಕ್ ಬಡಾವಣೆಯಲ್ಲಿ ಪಡೆದಿದ್ದ ನಾಗರಿಕ ಸೌಲಭ್ಯ ನಿವೇಶನ, ನಂತರ ಇದೇ ನಿವೇಶನಕ್ಕೆ ಬಿಟಿಎಂ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ, ಈ ನಿವೇಶನದ ಬೆಲೆಯಲ್ಲಿ ವಿಶೇಷ ರಿಯಾಯಿತಿಗೆ ಸಿದ್ದಾರ್ಥ ವಿಹಾರ ಟ್ರಸ್ಟ್ ಅರ್ಹವಿಲ್ಲ ಎಂದು ಬಿಡಿಎನ ಕಾನೂನು ಅಧಿಕಾರಿಯು ಅಭಿಪ್ರಾಯಿಸಿದ್ದರು.
ಬೆಂಗಳೂರಿನ ಏರೋಸ್ಪೇಸ್, ಡಿಫೆನ್ಸ್ ಪಾರ್ಕ್‌ನಲ್ಲಿ ಅಭಿವೃದ್ಧಿಪಡಿಸಿದ್ದ ಸಿ ಎ ನಿವೇಶನವನ್ನು ಸಿದ್ದಾರ್ಥ ವಿಹಾರ ಟ್ರಸ್ಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೋಟಾದಡಿಯಲ್ಲಿ ಮಂಜೂರು ಮಾಡಿಸಿಕೊಂಡಿತ್ತು. ಇದರ ಬೆನ್ನಲ್ಲೇ ಮುನ್ನೆಲೆಗೆ ಬಂದಿರುವ ಈ ಹೊಸ ಸಂಗತಿಯು ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಪ್ರಕರಣದ ವಿವರ
ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರಿನ ಬನಶಂಕರಿ 6ನೇ ಹಂತದ 5ನೇ ಬ್ಲಾಕ್‌ನನಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು 30 ವರ್ಷಗಳ ಗುತ್ತಿಗೆ ಅವಧಿಗೆ (ಸಂಖ್ಯೆ 3) ಬಿಡಿಎಯು 2010ರ ಏಪ್ರಿಲ್ 7ರಂದು ಹಂಚಿಕೆ ಪತ್ರ ವಿತರಿಸಿತ್ತು.
ಬಿಡಿಎಯು ವಿಧಿಸಿದ್ದ ಗುತ್ತಿಗೆ ಶುಲ್ಕದಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ವಿಶೇಷ ರಿಯಾಯಿತಿ ಕೋರಿತ್ತು. ಈ ಸಂಬಂಧ 2010ರ ಜೂನ್ 8ರಂದೇ ಟ್ರಸ್ಟ್‌ನ ಟ್ರಸ್ಟಿ ರಾಧಾಕೃಷ್ಣ ಅವರು (ಹಾಲಿ ಕಾಂಗ್ರೆಸ್ ಸಂಸದ) ಬಿಡಿಎ ಆಯುಕ್ತರಿಗೆ ಪತ್ರ ಬರೆದಿದ್ದರು.
ಪತ್ರದಲ್ಲೇನಿದೆ?
ಬಿಡಿಯು ಹಂಚಿಕೆ ಮಾಡಿರುವ ಸಿಎ ನಿವೇಶನಕ್ಕೆ ಗುತ್ತಿಗೆ ಹಣ 2,03,12,500 ರು ಎಂದು ತಿಳಿಸಿರುವುದು ಸರಿಯಷ್ಟೇ. ಈ ನಮ್ಮ ಸಂಸ್ಥೆಯು ಸಂಪೂರ್ಣ ಪರಿಶಿಷ್ಟ ಜಾತಿಯ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುತ್ತಿದೆ. ಇಂತಹ ನಾಗರೀಕ ಸೌಲಭ್ಯ ನಿವೇಶನಗಳನ್ನು ಹಂಚಿಕೆ ಮಾಡುವಾಗ ನಿವೇಶನದ ಬೆಲೆಯಲ್ಲಿ ವಿಶೇಷ ರಿಯಾಯಿತಿಗಳಿಗೆ ಅರ್ಹವಾಗಿರುತ್ತದೆ.
ಸಂಪೂರ್ಣ ಪರಿಶಿಷ್ಟ ಜಾತಿ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುವ ಸಂಸ್ಥೆಗಳಿಗೆ ತೋರಬಹುದಾದ ಗರಿಷ್ಠ ರಿಯಾಯಿತಿಗಳನ್ನು ನೀಡಿ, ಹಂಚಿಕೆ ಪತ್ರದಲ್ಲಿ ನಮೂದಿಸಿರುವ ಒಂದೇ ಕಂತಿನಲ್ಲಿ ಪಾವತಿಸಬೇಕಾದ ಗುತ್ತಿಗೆ ಹಣವನ್ನು ದಯವಿಟ್ಟು ಪರಿಷ್ಕರಿಸಿ ತಿಳಿಸಬೇಕು. ಮತ್ತು ಪರಿಷ್ಕೃತ ಆದೇಶದಂತೆ ಹಣ ಪಾವತಿ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಟ್ರಸ್ಟ್‌ನ ಟ್ರಸ್ಟಿ ರಾಧಾಕೃಷ್ಣ ಅವರು ಪತ್ರದಲ್ಲಿ ಕೋರಿದ್ದರು.
ಈ ಪತ್ರವನ್ನು ಬಿಡಿಎ ಪರಿಗಣಿಸಿತ್ತು. ಈ ಸಂಬಂಧ ಕಾನೂನು ಅಧಿಕಾರಿ (2) ಅಭಿಪ್ರಾಯವನ್ನು ಕೋರಿದ್ದರು.
ಕಾನೂನು ಅಧಿಕಾರಿಯ ಅಭಿಪ್ರಾಯದಲ್ಲೇನಿತ್ತು?
ಕಡತದ ಪುಟ ಸಂಖ್ಯೆ 28ರಿಂದ 50ರಲ್ಲಿರುವ ಟ್ರಸ್ಟ್ ಡೀಡ್ ನಕಲಿನಿಂದ ಕಂಡುಬರುವಂತೆ ಸಿದ್ದಾರ್ಥ ವಿಹಾರ ಟ್ರಸ್ಟ್‌ನ್ನು ಪರಿಶಿಷ್ಟ ಜಾತಿ ಮತತು ಪರಿಶಿಷ್ಟ ಪಂಗಡಗಳ ಹಿತ ಚಿಂತನೆ ಅಥವಾ ಅಭಿವೃದ್ಧಿಯ ಸಲುವಾಗಿ ಮಾತ್ರ ರಚಿಸಿಲ್ಲ.
‘ಬದಲಾಗಿ ಸಿದ್ದಾರ್ಥ ವಿಹಾರ ಟ್ರಸ್ಟ್‌ನ್ನು ಟ್ರಸ್ಟ್‌ನ ಡೀಡ್‌ನ 31ನೇ ಕಂಡಿಕೆಯಲ್ಲಿ ಉಲ್ಲೇಖಿಸಿರುವಂತೆ ಇಡೀ ಸಮಾಜದ ಒಳಿತಿಗಾಗಿ ಅಂದರೆ ಜಾತಿ, ಮತ, ಲಿಂಗ, ವರ್ಣ ಇತ್ಯಾದಿಗಳ ಬೇಧ ಭಾವವಿಲ್ಲದೆ ಎಲ್ಲಾ ಕ್ಷೇತ್ರದ ಜನರ ಹಿತರಕ್ಷಣೆ ಮತ್ತು ಹೇಳಿಕೆಗಾಗಿ ರಚಿಸಲಾಗಿದೆ. ಆದ್ದರಿಂದ ಕಡತದ ಪುಟ ಸಂಖ್ಯೆ 56ರಲ್ಲಿರುವ ಸರ್ಕಾರಿ ಸುತ್ತೋಲೆಯ ಲಾಭ, ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಲಭ್ಯವಾಗುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ,’ ಎಂದು ಅಭಿಪ್ರಾಯಿಸಿದ್ದರು.
ಅದೇ ರೀತಿ ಬಿಡಿಎ (ಸಿಎ ನಿವೇಶನಗಳ ಹಂಚಿಕೆ) ನಿಯಮಗಳು 1999ನ್ನೂ ಪರಿಶೀಲಿಸಿದ್ದ ಕಾನೂನು ಅಧಿಕಾರಿಯವರು ತಮ್ಮ ಅಭಿಪ್ರಾಯವನ್ನೂ ವಿಸ್ತರಿಸಿದ್ದರು.
‘ಬಿಡಿಎ (ಸಿಎ ನಿವೇಶನಗಳ ಹಂಚಿಕೆ) ನಿಯಮಗಳು 1999ನ್ನು ತಿದ್ದುಪಡಿ (ಸರ್ಕಾರಿ ಸುತ್ತೋಲೆ ಸಂಖ್ಯೆ 20-04-2010) ಮಾಡಿದ್ದು ಈ ತಿದ್ದುಪಡಿಯು 2010ರ ಮೇ 17ರಿಂದ ಜಾರಿಗೆ ಬಂದಿರುತ್ತದೆ. ಈ ತಿದ್ದುಪಡಿಯನ್ನು ನಿಯಮಾವಳಿಗಳ ನಿಯಮ 8 (4)(ಎ)ರಿಂದ (ಸಿ)ರಲ್ಲಿನ ಸಂಸ್ಥೆಗಳ ಬಾಪ್ತು ಮಾತ್ರ ಶೇ.50ರಷ್ಟು ಗುತ್ತಿಗೆ ಹಣದ ಪಾವತಿ ಲಾಭಕ್ಕೆ ಅರ್ಹತೆ ಕಲ್ಪಿಸಲಾಗಿದೆ. ಈಗಾಗಲೇ ತಿಳಿಸಿದಂತೆ ಸಿದ್ದಾರ್ಥ ವಿಹಾರ ಟ್ರಸ್ಟ್, ಸದರಿ ರಿಯಾಯಿತಿ ಲಾಭಕ್ಕೆ ಅರ್ಹವಿಲ್ಲವೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದು ಆಯುಕ್ತರು ಜಾರಿ ಮಾಡಿರುವ ಆದೇಶಕ್ಕೆ ಹೊರತಾಗಿದೆ,’ ಎಂದು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಹಾಗೆಯೇ ಇದೇ ಸಿಎ ನಿವೇಶನವನ್ನು ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಹಂಚಿಕೆ ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು 2022ರಲ್ಲೇ ಬಿಡಿಎ ಆಯುಕ್ತರಿಗೆ ದೂರು ಕೂಡ ಸಲ್ಲಿಸಲಾಗಿತ್ತು. ಎ ಜಿ ಕೃಷ್ಣಾರೆಡ್ಡಿ ಎಂಬುವರು ದೂರು ಸಲ್ಲಿಸಿದ್ದರು.
ಈ ದೂರಿನಲ್ಲೇನಿದೆ?
ಬಿಟಿಎಂ ಬಡಾವಣೆಯ 4ನೇ ಹಂತದ 2ನೇ ಬ್ಲಾಕ್‌ನಲ್ಲಿರುವ ಸಿ ಎ ನಿವೇಶನವನ್ನು (ಸಂಖ್ಯೆ 5)ನ್ನು ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಬದಲಿ ನಿವೇಶನವಾಗಿ ಹಂಚಿಕೆ ಮಾಡಿದೆ. 2014ರ ಮೇ 12ರಂದು ಈ ನಿವೇಶನದ ಗುತ್ತಿಗೆ ಕರಾರು ಪತ್ರ ನೋಂದಣಿಯಾಗಿದೆ. ಸರ್ಕಾರದ ಯೋಜನೆಯ ನಕ್ಷೆಯಂತೆ ಈ ಸಿ ಎ ನಿವೇಶನವು ಗ್ರೂಪ್ ಹೌಸಿಂಗ್ ಉದ್ದೇಶಕ್ಕೆ ಮೀಸಲಿಟ್ಟಿತ್ತು. ಹೀಗಾಗಿ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಈ ನಿವೇಶನವನ್ನು ಹಂಚಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಎ ಜಿ ಕೃಷ್ಣಾರೆಡ್ಡಿ ಅವರು ದೂರಿನಲ್ಲಿ ವಿವರಿಸಿದ್ದರು.
‘ಯಾವುದೇ ಬಡಾವಣೆಯ ಸಿ ಎ ನಿವೇಶನವನ್ನು ಮೂಲ ಯಾವ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರವು ಮೀಸಲಿಟ್ಟಿರುತ್ತದೆಯೋ ಅದೇ ಉದ್ದೇಶಕ್ಕೆ ಈ ನಿವೇಶನವನ್ನು ಹಂಚಿಕೆ ಮಾಡಬೇಕಾಗಿರುತ್ತದೆ. ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಸಿ ಎ ನಿವೇಶನವನ್ನು ಹಂಚಿಕೆ ಮಾಡಲು ಬರುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಈ ನಿವೇಶನವನ್ನು ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ನೀಡಿದೆ. ಹಂಚಿಕೆಯ ಮೂಲ ಉದ್ದೇಶವನ್ನು ಕಾನೂನು ಬಾಹಿರವಾಗಿ ಬದಲಾಯಿಸಿರುವುದು ಕಂಡು ಬಂದಿದೆ,’ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೋಟಾದಡಿಯಲ್ಲಿ ಮಂಜೂರು ಮಾಡಿಸಿಕೊಂಡಿದ್ದ ಸಿ ಎ ನಿವೇಶನವನ್ನು ಸಿದ್ದಾರ್ಥ ವಿಹಾರ ಟ್ರಸ್ಟ್, ಈಚೆಗಷ್ಟೇ ಅದನ್ನು ಕೆಐಎಡಿಬಿಗೆ ವಾಪಸ್ ನೀಡಿತ್ತು. ಈ ಕುರಿತು ಟ್ರಸ್ಟ್‌ನ ಟ್ರಸ್ಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ಸಮರ್ಥನೆಗಳನ್ನೂ ಒದಗಿಸಿದ್ದನ್ನು ಸ್ಮರಿಸಬಹುದು.