ಬೆಂಗಳೂರು; ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ. 4ಷ್ಟು ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (2ನೇ ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ ತರಲು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಗೆ ಸೂಚನೆ ನೀಡಿದೆ.
ಗುತ್ತಿಗೆ ಕಾಮಗಾರಿಗಳಲ್ಲಿ 2 ಕೋಟಿ ವರೆಗೆ ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿರುವುದು ಮುನ್ನೆಲೆಗೆ ಬಂದಿದೆ.
ಕೆಟಿಪಿಪಿ ಕಾಯ್ದೆಗೆ ಪ್ರವರ್ಗ ಬಿ ಗೆ ಶೇ.4ಷ್ಟು ಮೀಸಲಾತಿ ನೀಡುವ ಸಂಬಂಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ತನ್ವೀರ್ ಸೇಠ್, ವಿಧಾನಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಅಬ್ದುಲ್ ಜಬ್ಬಾರ್, ಎನ್ ಎ ಹ್ಯಾರೀಸ್, ರಿಜ್ವಾನ್ ಅರ್ಷದ್, ಆಸೀಫ್ ಸೇಠ್, ಖನೀಜ್ ಫಾತಿಮಾ, ಇಕ್ಬಾಲ್ ಹುಸೇನ್ ಮತ್ತು ಬಲ್ಕೀಷ್ ಬಾನು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2024ರ ಆಗಸ್ಟ್ 24ರಮದು ಪತ್ರ ಬರೆದು ಕೋರಿದ್ದರು.
‘ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದ ಪ್ರವರ್ಗ 2 ಬಿ ಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಿಲ್ಲ. ಈ ಸೌಲಭ್ಯವನ್ನು ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಿ ಸೂಕ್ತ ಆದೇಶ ನೀಡಬೇಕು,’ ಎಂದು ಮನವಿಯಲ್ಲಿ ಕೋರಿದ್ದರು.
ಈ ಪತ್ರವನ್ನು ಪರಿಶೀಲಿಸಿ ಮಂಡಿಸಿ ಎಂದು ಅದೇ ದಿನದಂದು ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಈ ಪತ್ರದ ಕುರಿತು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ
ಈ ಸಂಬಂಧ ಕೆಟಿಪಿಪಿ ಕಾಯ್ದೆಯ 1999ರ 6ನೇಪ್ರಕರಣಕ್ಕೆ ತಿದ್ದುಪಡಿ ಮಾಡಲಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ಟೆಂಡರ್ ಆಹ್ವಾನಿಸುವ ಪ್ರಾಧಿಕಾರವು ಅಧಿಸೂಚಿತ ಇಲಾಖೆಗಳಿಂದ ನಿಯಮಿಸಿದ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಕೈಗೊಳ್ಳಬೇಕಾದ ಅಗತ್ಯ ನೋಟೀಸ್, ಪತ್ರ ವ್ಯವಹಾರಗಳು ಮತ್ತು ಪ್ರಕಟಣೆಗಳನ್ನು ಹೊರಡಿಸುವಾಗ ನಿರ್ಮಾಣ ಕಾಮಗಾರಿಗಳ ಮೌಲ್ಯ ಒಂದು ಕೋಟಿ ರು.ಗಳಿಗೆ ಮೀರದ ಅಂಥ ಕಾಮಗಾರಿಗಳ ಸಂಖ್ಯೆಯ ಶೇ.4ರಷ್ಟನ್ನು ಮೀರದಂತೆ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ರಲ್ಲಿ ನಿರ್ದಿಷ್ಟಪಡಿಸಿದ ಅಲ್ಪಸಂಖ್ಯಾತರ ಜಾತಿಗಳಿಗೆ ಸೇರಿದ ಟೆಂಡರ್‍ದಾರರುಗಳಿಗೆ ನೀಡಬೇಕು. ಅಲ್ಲದೇ ಎರಡು ಬಾರಿಗಳಲ್ಲಿ ಆಹ್ವಾನಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಸೇರಿದ ವ್ಯಕ್ತಿಗಳಿಂದ ಟೆಂಡರ್ ಸ್ವೀಕರಿಸದಿದ್ದಲ್ಲಿ ಅಂಥ ಕಾಮಗಾರಿಗಳನ್ನು ಇತರರಿಗೆ ಟೆಂಡರ್ ನೀಡಬಹುದು,’ ಎಂದು 6ನೇ ಪ್ರಕರಣದಲ್ಲಿ ತಿದ್ದುಪಡಿ ತರಲಿರುವುದು ಗೊತ್ತಾಗಿದೆ.
ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಗುತ್ತಿಗೆ ಕಾಮಗಾರಿಗಳಲ್ಲಿ 50 ಲಕ್ಷದವರೆಗೆ ಗುತ್ತಿಗೆ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರವು 2016ರಲ್ಲೇ ಕಲ್ಪಿಸಿತ್ತು. ಇದಾದ ನಂತರ ಇದನ್ನು 1 ಕೋಟಿಗೆ ಹೆಚ್ಚಳ ಮಾಡಲಾಗಿತ್ತು.
50 ಲಕ್ಷದಿಂದವರೆಗಿನ ಟೆಂಡರ್ ಮೀಸಲಾತಿಯನ್ನು 1 ಕೋಟಿವರೆಗೆ ವಿಸ್ತರಿಸುವ ಪ್ರಸ್ತಾವನೆಯು ಬಿಜೆಪಿ ಸರಕಾರದ ಮುಂದಿರಲಿಲ್ಲ. ತಾಂತ್ರಿಕವಾಗಿ ಅರ್ಹಗೊಂಡು ಅತಿಕಡಿಮೆ ದರಗಳನ್ನು ನಮೂದಿಸಿದ ಗುತ್ತಿಗೆದಾರರಿಂದ ದರಪಟ್ಟಿ ದರಗಳಿಗಿಂತ ಕಡಿಮೆಯಿರುವ ಮೊತ್ತಕ್ಕೆ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಪಡೆದುಕೊಂಡು ಗುತ್ತಿಗೆ ಕರಾರನ್ನು ಮಾಡಿಕೊಳ್ಳಲಾಗುತ್ತದೆ.
ಈ ಗುತ್ತಿಗೆದಾರರು ವಿಶಿಷ್ಟ ವಿವರಣೆಯ ಹಾಗೂ ಗುತ್ತಿಗೆ ಕರಾರಿನ ನಿಯಮಾವಳಿಯಂತೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಮೊತ್ತವನ್ನು ಗುತ್ತಿಗೆದಾರರಿಗೆ ಹಿಂತಿರುಗಿಸಲಾಗುತ್ತಿದೆ.