ಲೋಕಾಯುಕ್ತ ಹುದ್ದೆಗೆ ಸಿದ್ದರಾಮಯ್ಯರಿಂದಲೂ ಬಿ ಎಸ್‌ ಪಾಟೀಲ್‌ ಹೆಸರು ಶಿಫಾರಸ್ಸು; ತನಿಖೆ ಮೇಲೆ ಪ್ರಭಾವ?

ಬೆಂಗಳೂರು;  ಹದಿನಾಲ್ಕು ಬದಲಿ ನಿವೇಶನ ಪಡೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ತನಿಖೆಗೆ ಆದೇಶ ಮಾಡಿರುವ ಬೆನ್ನಲ್ಲೇ ಲೋಕಾಯುಕ್ತ ತನಿಖೆಯು ಪಾರದರ್ಶಕವಾಗಿರಲಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.

 

ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಾರಾದರೂ ಇಲ್ಲಿನ ಪೊಲೀಸ್‌ ವಿಭಾಗವು ನೇರವಾಗಿ ಲೋಕಾಯುಕ್ತರ ಅಧೀನದಲ್ಲೇ ಬರಲಿದೆ. ಅಲ್ಲದೇ  ಸಿದ್ದರಾಮಯ್ಯ ಅವರು  ಪ್ರತಿಪಕ್ಷ ನಾಯಕರಾಗಿದ್ದ ಅವಧಿಯಲ್ಲಿಯೇ ಬಿ ಎಸ್‌ ಪಾಟೀಲ್‌ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಲು ಶಿಫಾರಸ್ಸು ಮಾಡಿದ್ದರು. ಹೀಗಾಗಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಮತ್ತು ಅವರ ಭಾಮೈದುನ ವಿರುದ್ಧ ಲೋಕಾಯುಕ್ತ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಗಳು ಮೂಡಿವೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿದ್ದ ತೀರ್ಪನ್ನಾಧರಿಸಿ  ದೂರು ನೀಡಲು ದೂರದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ತೆರಳಿದ್ದರು. ಆದರೆ ಲೋಕಾಯುಕ್ತ ಎಸ್‌ಪಿ ಸ್ಥಳದಲ್ಲಿ ಇರಲಿಲ್ಲ. ಹಾಗೂ ದೂರದಾರ ಸ್ನೇಹಮಯಿ ಕೃಷ್ಣ ಅವರು ಎಸ್‌ ಪಿ ಗೆ ಮಾಡಿದ್ದ ಕರೆಯನ್ನೂ ಸ್ವೀಕರಿಸಿರಲಿಲ್ಲ. ಈ ಸಂಗತಿಯನ್ನು ಸ್ನೇಹಮಯಿ ಕೃಷ್ಣ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅಲ್ಲದೇ ಎಸ್‌ ಪಿ ವಿರುದ್ಧವೂ ದೂರು ದಾಖಲಿಸಿದ್ದರು.  ಇದೇ ಬರಹವನ್ನು ಜಾತ್ಯತೀತ ಜನತಾದಳದ ಅಧಿಕೃತ ಎಕ್ಸ್‌ ನಲ್ಲಿಯೂ ಟೀಕಿಸಿತ್ತು.

 

‘ಮುಡಾ ಪ್ರಕರಣದ ಆರೋಪ ಹೊತ್ತಿರುವ ಸಿದ್ದರಾಮಯ್ಯ  ಪ್ರಭಾವ ಬೀರುತ್ತಲೇ ಇದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಹೇಳಿದಂತೆ ಕೇಳುತ್ತಿರುವುದು ಸ್ಪಷ್ಟ..! ನೀವು ಮುಖ್ಯಮಂತ್ರಿ ಸ್ಥಾನದಲ್ಲೇ ಇದ್ದರೇ ಪಾರದರ್ಶಕ ತನಿಖೆ ಹೇಗೆ ಸಾಧ್ಯ..? ನಿಮ್ಮ ಪ್ರಭಾವ ಇದ್ದೇ ಇರುತ್ತದೆ ! ಹಿಂದೆಯೂ ಕೂಡ ನಿಮ್ಮ ಅಕ್ರಮಗಳನ್ನು ಮುಚ್ಚಿಹಾಕಲು ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ “ಲೋಕಾಯುಕ್ತ ಸಂಸ್ಥೆಗೆ” ಬೀಗ ಹಾಕಿಸಿದ್ದ ಮಹಾನ್ ಭ್ರಷ್ಟ ಮುಖ್ಯಮಂತ್ರಿ ನೀವು… ನಿಮ್ಮ ಭಂಡತನ ಬಿಟ್ಟು ರಾಜೀನಾಮೆ ನೀಡಿ, ತನಿಖೆ ಎದುರಿಸಿ, ‘ ಎಂದು ಎಕ್ಸ್‌ ನಲ್ಲಿ ಟೀಕಿಸಿದೆ.

 

ಇದರ ಬೆನ್ನಲ್ಲೇ ಬಿ ಎಸ್‌ ಪಾಟೀಲ್‌ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಲು ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದಾಗಲೇ ಮಾಡಿದ್ದ ಶಿಫಾರಸ್ಸು ಕೂಡ ಮುನ್ನೆಲೆಗೆ ಬಂದಿದೆ.

 

ಬಿ ಎಸ್‌ ಪಾಟೀಲ್‌ ಅವರು ಉಪ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸ್ಥಾನಕ್ಕೆ ದಲಿತ ಅಥವಾ ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿಗಳನ್ನು ನೇಮಿಸಲು ಅವಕಾಶಗಳಿದ್ದವು. ಆದರೆ ಲಿಂಗಾಯತ ಸಮುದಾಯದವರನ್ನು ಓಲೈಸುವ ಉದ್ದೇಶದಿಂದಲೇ ಉಪ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ ಎಸ್‌ ಪಾಟೀಲ್‌ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಿಸಲಾಗಿತ್ತು.

 

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಎಡಗೈ ಸಮುದಾಯಕ್ಕೆ ಸೇರಿರುವ ಹಿಮಾಚಲ ಪ್ರದೇಶದ ಉಚ್ಛ ನ್ಯಾಯಾಲಯ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ ಎಲ್‌ ನಾರಾಯಣಸ್ವಾಮಿ (ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು) ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾರಾದರೂ ಇದೇ ಶಿಫಾರಸ್ಸಿನ ಪಟ್ಟಿಯಲ್ಲಿ ಬಿ ಎಸ್‌ ಪಾಟೀಲ್‌ ಅವರ ಹೆಸರೂ ಕೂಡ ಇತ್ತು. ಕಡೆಯಲ್ಲಿ ಬಿ ಎಸ್‌ ಪಾಟೀಲ್‌ ಅವರನ್ನೇ ಹಿಂದಿನ ಬಿಜೆಪಿ ಸರ್ಕಾರವು ಲೋಕಾಯುಕ್ತರನ್ನಾಗಿ ನೇಮಿಸಿತ್ತು.

 

ಬಿ ಎಸ್‌ ಪಾಟೀಲ್‌ ಅವರ ಹೆಸರನ್ನು ಪ್ರತಿಪಕ್ಷ ನಾಯಕರಿಬ್ಬರೂ ಶಿಫಾರಸ್ಸು ಮಾಡಿರುವುದರ ಹಿಂದೆ ಕಾಂಗ್ರೆಸ್‌ನ ಪ್ರಭಾವಿ ಮುಖಂಡರೊಬ್ಬರು ಪಾತ್ರ ವಹಿಸಿದ್ದರು. ಈ ಪ್ರಭಾವಿ ಮುಖಂಡರು ಸದ್ಯ ಸಿದ್ದರಾಮಯ್ಯ ಸಂಪುಟದಲ್ಲಿ ಮಹತ್ವದ ಖಾತೆಯ ಸಚಿವರಾಗಿದ್ದಾರೆ.

 

ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ರಿತುರಾಜ್‌ ಅವಸ್ಥಿ, ವಿಧಾನಸಭೆ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕರು, ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ  ವಿಶ್ವೇಶ್ವರ ಹೆಗಡೆ, ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರೂ ಸಹ ಬಿ ಎಸ್‌ ಪಾಟೀಲ್‌ ಅವರ ಹೆಸರನ್ನೇ ಶಿಫಾರಸ್ಸು ಮಾಡಿದ್ದರು.

 

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಮಾಡಿದ್ದ ಶಿಫಾರಸ್ಸು ಪಟ್ಟಿಯಲ್ಲಿ ಬಿ ಎಸ್ ಪಾಟೀಲ್ ಅವರ ಹೆಸರು ಮೊದಲನೇ ಕ್ರಮಾಂಕದಲ್ಲಿತ್ತು. ಉಳಿದಂತೆ ಅಶೋಕ್‌ ಹಿಂಚಗೇರಿ ಮತ್ತು ಎಡಗೈ ಸಮುದಾಯಕ್ಕೆ ಸೇರಿರುವ ಎಲ್‌ ನಾರಾಯಣಸ್ವಾಮಿ ಅವರ ಹೆಸರು ಮೂರನೇ ಕ್ರಮಾಂಕದಲ್ಲಿತ್ತು.

 

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಮಾಡಿದ್ದ ಶಿಫಾರಸ್ಸು ಪ್ರತಿ

 

ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ  ಸಿದ್ದರಾಮಯ್ಯ ಅವರು ಕಳಿಸಿದ್ದ ಶಿಫಾರಸ್ಸು ಪಟ್ಟಿಯಲ್ಲಿ ಎಲ್ ನಾರಾಯಣಸ್ವಾಮಿ ಅವರ ಹೆಸರು ಮೊದಲನೇ ಕ್ರಮಾಂಕದಲ್ಲಿದ್ದರೆ ಬಿ ಎಸ್‌ ಪಾಟೀಲ್‌ ಅವರ ಹೆಸರು ಎರಡನೇ ಕ್ರಮಾಂಕದಲ್ಲಿತ್ತು.

 

 

ಉಳಿದವರು ಕೇವಲ ಬಿ ಎಸ್‌ ಪಾಟೀಲ್‌ ಅವರೊಬ್ಬರ ಹೆಸರನ್ನೇ ಶಿಫಾರಸ್ಸು ಮಾಡಿದ್ದರು.

 

ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿಫಾರಸ್ಸು ಪ್ರತಿ

 

ಈ ಎಲ್ಲರೂ ಕಳಿಸಿದ್ದ ಶಿಫಾರಸ್ಸು ಪಟ್ಟಿಯಲ್ಲಿಯೂ ಬಿ ಎಸ್ ಪಾಟೀಲ್‌ ಅವರ ಹೆಸರು ಇದ್ದದ್ದರಿಂದ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಅನುಮೋದಿಸಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

ವಿಧಾನಪರಿಷತ್‌ನ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರ ಶಿಫಾರಸ್ಸಿನ ಪ್ರತಿ

 

ರಾಜಕೀಯ ಹಿನ್ನೆಲೆ ಮತ್ತು ಪ್ರಭಾವ ಹೊಂದಿರುವ ಘಟಾನುಘಟಿ ಜನಪ್ರತಿನಿಧಿಗಳ ವಿರುದ್ಧ ಲೋಕಾಯುಕ್ತದಲ್ಲಿ ಹತ್ತಿಪ್ಪತ್ತು ವ‍ರ್ಷಗಳ ಹಿಂದಿನಿಂದಲೂ ಪ್ರಕರಣಗಳು ಬಾಕಿ ಇವೆ. ಈ ಯಾವ ಪ್ರಕರಣಗಳ ತನಿಖೆಗೆ ಇದುವರೆಗೂ ಬಿರುಸಿನ ಚಾಲನೆ ಸಿಕ್ಕಿಲ್ಲ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣವೂ ನ್ಯಾಯಾಲಯ ಆದೇಶದ ಮೇರೆಗೆ ತನಿಖೆಯನ್ನು ನಡೆಸಬೇಕಾಗಿದೆ. ಆದರೆ ಈ ಪ್ರಕರಣದ ತನಿಖೆಯು ನ್ಯಾಯಾಲಯವು ನೀಡಿರುವ ಗಡುವಿನೊಳಗೇ ಮುಗಿಯುವುದು ಅನುಮಾನ ಎನ್ನಲಾಗಿದೆ.

 

ಲೋಕಾಯುಕ್ತರ ನೇಮಕ; ದಲಿತ ನ್ಯಾಯಮೂರ್ತಿಗಳಿಗೆ ದೊರಕದ ಅವಕಾಶ, ಲಿಂಗಾಯತ ಸಮುದಾಯದ ಓಲೈಕೆ?

ಕರ್ನಾಟಕದಲ್ಲಿ ಲೋಕಾಯುಕ್ತ ಸ್ಥಾಪನೆಯಾಗಿದ್ದ ವರ್ಷದಲ್ಲಿ ಅಂದರೆ 1986ರಲ್ಲಿ ಎ ಡಿ ಕೋಶಾಲ್‌ ಅವರು (1986-1991) ಮೊದಲ ಲೋಕಾಯುಕ್ತರಾಗಿದ್ದರು. ಆ ನಂತರ ರಬೀಂದ್ರನಾಥ (1991-1996), 1996-2001ರವರೆಗೆ ಅಬ್ದುಲ್‌ ಹಕೀಮ್‌, 2001ರಿಂದ 2006ರವರೆಗೆ ಎನ್‌ ವೆಂಕಟಾಚಲ, 2006ರಿಂದ 2011ರವರೆಗೆ ಸಂತೋಷ್‌ ಹೆಗ್ಡೆ, 2011 ಆಗಸ್ಟ್‌ 3ರಿಂದ ಸೆ.2011ರವರೆಗೆ ಶಿವರಾಜ್‌ ಪಾಟೀಲ್‌, 2013ರ ಫೆ.14ರಿಂದ 2015ವರೆಗೆ ವೈ ಭಾಸ್ಕರರಾವ್‌, 2017ರ ಜನವರಿ 28ರಿಂದ 2022ರ ಜನವರಿವರೆಗೆ ಪಿ ವಿಶ್ವನಾಥ್ ಶೆಟ್ಟಿ ಅವರು ಕರ್ನಾಟಕ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ.

the fil favicon

SUPPORT THE FILE

Latest News

Related Posts