ಬೆಂಗಳೂರು; ರಾಜ್ಯದ ಜಿಲ್ಲೆಗಳಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ, ಶಿಕ್ಷಕರ ಅಸಭ್ಯ ವರ್ತನೆ ಕಿರುಕುಳಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಪ್ರತಿ ನಿತ್ಯ ಒಂದಲ್ಲ ಒಂದು ವಸತಿ ಶಾಲೆ, ವಸತಿ ನಿಲಯದಲ್ಲಿ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆ ಪ್ರಕರಣಗಳು ಪದೇ ಪದೇ ಪುನರಾವರ್ತನೆ ಆಗುತ್ತಲೇ ಇವೆ.
ಇಂತಹ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸಹ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ವಿದ್ಯಾರ್ಥಿನಿಯರ ಸುರಕ್ಷತಾ ಕ್ರಮಗಳ ಬಗ್ಗೆ ಕ್ರಮವನ್ನೂ ವಹಿಸಿಲ್ಲ. ಈ ಕುರಿತು ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರೊಂದಿಗೆ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಕ್ರಮಕ್ಕೆ ನಿರ್ದೇಶನವಿದ್ದರೂ ಸಹ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2024ರ ಸೆ.17ರಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೋಲಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕನ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ ಫೋಟೋ ಇಟ್ಟುಕೊಂಡಿದ್ದ ಪ್ರಕರಣದ ಕುರಿತು ಹೈಕೋರ್ಟ್ ಕಿಡಿ ಕಾರಿತ್ತು. ಇದರ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ಪತ್ರದಲ್ಲೇನಿದೆ?
ತೀರ್ಥಹಳ್ಳಿ ತಾಲೂಕಿನ ಆನಂದಗಿರಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಇಮ್ತಿಯಾಜ್ ಎಂಬುವರು 10ನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಹಾಗೂ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವುದರ ಬಗ್ಗೆ ಮತ್ತು ತನಿಖಾ ತಂಡ ನೇಮಿಸಿರುವ ಬಗ್ಗೆ ಸರ್ಕಾರಕ್ಕೆ ಗಮನಕ್ಕೆ ತರಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ತಮ್ಮ ಹಂತದಲ್ಲಿ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಏಕೆ ಕೈಗೊಳ್ಳುತ್ತಿಲ್ಲ , ಕೈಗೊಂಡಿದ್ದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಏಕೆ ನಡೆಯುತ್ತಿವೆ ಎಂದು ಪತ್ರದಲ್ಲಿ ಪ್ರಶ್ನಿಸಿರುವುದು ಗೊತ್ತಾಗಿದೆ.
‘ಇಂತಹ ಶಿಕ್ಷಕರ ಮೇಲೆ ಯಾವ ಕ್ರಮ ವಹಿಸಲಾಗಿದೆ ಮತ್ತು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಯಾವ ನಿರ್ದೇಶನ ನೀಡಲಾಗಿದೆ ಎಂಬ ಅಂಶಗಳ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ಸ್ಪಷ್ಟ ಅಭಿಪ್ರಾಯವನ್ನು ಸರ್ಕಾರಕ್ಕೆ ಕೂಡಲೇ ಸಲ್ಲಿಸಬೇಕು,’ ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು 2024ರ ಸೆ.9ರಂದು ಕ್ರೈಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನಿರ್ದೇಶಿಸಿರುವುದು ಗೊತ್ತಾಗಿದೆ.
ತೀರ್ಥಹಳ್ಳಿ ಪ್ರಕರಣವೇನು?
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆನಂದಗಿರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಇಮ್ತಿಯಾಜ್ ಎಂಬಾತ 10ನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದ. ಶಾಲೆಯಲ್ಲಿ ಮತ್ತು ಪ್ರವಾಸದ ವೇಳೆಯಲ್ಲಿ ಅನುಚಿತ ವರ್ತನೆ ತೋರಿದ್ದ ಎಂಬ ಆರೋಪವಿತ್ತು. ಈ ಕುರಿತು ಶಾಲೆಯ ಪ್ರಾಂಶುಪಾಲರಿಗೆ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಲಾಗಿತ್ತು. ನಂತರ ಆರೋಪಿತ ಶಿಕ್ಷಕಕನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಕುರಿತು ತನಿಖಾ ತಂಡ ನೇಮಿಸಲಾಗಿತ್ತು.
ತೀರ್ಥಹಳ್ಳಿಯ ಆನಂದಗಿರಿ ಶಾಲೆ ಪ್ರಕರಣವಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹಲವು ಪ್ರಕರಣಗಳು ವರದಿಯಾಗಿವೆ. ಕೋಲಾರ ಜಿಲ್ಲೆಯ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ (46) ಎಂಬಾತನ ಮೊಬೈಲ್ ನಲ್ಲಿ ಅದೇ ವಸತಿ ಶಾಲೆಯ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುತ್ತಿರುವ ಸುಮಾರು 5 ಸಾವಿರ ಫೋಟೋಗಳು ಪತ್ತೆಯಾಗಿದ್ವು. ಇದು ತಿಳಿಯುತ್ತಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುನಿಯಪ್ಪನವರನ್ನು ಬಂಧಿಸಿದ್ದರು.
ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ. ಇದಾದ ಮೇಲೆಯೂ ಶಿಕ್ಷಕ ಮುನಿಯಪ್ಪ, ತನ್ನ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದ. ಆದರೆ, ದೀರ್ಘಕಾಲದ ವಿಚಾರಣೆಯ ಬಳಿಕ ಆತನ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೆ. 6ರಂದು ತಿರಸ್ಕರಿಸಿತ್ತು.
ಚಿತ್ರಕಲಾ ಶಿಕ್ಷಕನಾಗಿರುವ ಮುನಿಯಪ್ಪನ ಮೊಬೈಲ್ ನಲ್ಲಿ ಅದೇ ಶಾಲೆಯ ವಿದ್ಯಾರ್ಥಿನಿಯರ ನಗ್ನ ಫೋಟೋಗಳು ಬಂದಿದ್ದಾದರೂ ಹೇಗೆ, ಆ ವಿಡಿಯೋ ಹಾಗೂ ಚಿತ್ರಗಳು ಯಾವುವು ಎಂಬುದು ಸೂಕ್ತವಾದ ತನಿಖೆಯಿಂದ ಬಹಿರಂಗವಾಗಬೇಕಿದೆ ಎಂದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿತ್ತು. ಇಂಥ ಪ್ರಕರಣಗಳನ್ನು ರದ್ದುಪಡಿಸಿದರೆ ಇಂಥ ತಪ್ಪುಗಳನ್ನು ಮಾಡುವವರನ್ನು ಉತ್ತೇಜಿಸಿದಂತಾಗುತ್ತದೆ. ಹಾಗಾಗಿ, ಅವರ (ಮುನಿಯಪ್ಪ) ವಿರುದ್ಧದ ಕೇಸ್ ರದ್ದು ಮಾಡುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದನ್ನು ಸ್ಮರಿಸಬಹುದು.
ಶಿಕ್ಷಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಐಎಎಸ್ ಮಣಿವಣ್ಣನ್ ವಿರುದ್ಧ ದೂರು, ಮುಕ್ತಾಯಗೊಳಿಸಿದ ಸರ್ಕಾರ
ಯಾದಗಿರಿಯ ಗುರಮಠಕಲ್ ತಾಲೂಕಿನ ಗುಂಜನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ಆರೋಪದ ಮೇರೆಗೆ ಇಬ್ಬರ ಶಿಕ್ಷಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಗುಂಜನೂರು ಎಂಡಿಆರ್‍ಎಸ್‌ಪ್ರಾಂಶುಪಾಲ ಅಕ್ಬರ್ ಅಲಿ ಅತ್ತಾರ್ ನೀಡಿದ್ದ ದೂರಿನಂತೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಶಾಂತಪ್ಪ ಮ್ಯಾಗೇರಿ ಮತ್ತು ಅತಿಥಿ ಶಿಕ್ಷಕ ಅಂಬರೀಶ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರ ಜತೆಗೆ ಅಸಭ್ಯ ವರ್ತನೆ, ಭುಜದ ಮೆಲೆ ಕೈ ಹಾಕುವುದು, ಕೆಟ್ಟ ಶಬ್ದಗಳಿಂದ ಬಯ್ಯುವುದು ಮತ್ತು ದ್ವಂದ್ವಾರ್ಥದ ಶಬ್ದಗಳನ್ನು ಮಾತನಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ವಾರ್ಡನ್ ಮೀರನ್ ಅಲಿ ವಿರುದ್ಧವೂ ಆರೋಪ ಕೇಳಿ ಬಂದಿತ್ತು.
ಹಾವೇರಿ ಜಿಲ್ಲೆ ಹಿರೆಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಬಸಪ್ಪ ಗೌಡಪ್ಪನವರ ಅನುಮಾನಸ್ಪದವಾಗಿ ರೀತಿಯಲ್ಲಿ ಮೃತಪಟ್ಟಿದ್ದರು. ನೇಣಿಗೆ ಕೊರಳಡ್ಡುವ ಮುನ್ನ ಅರ್ಚನ ಬರೆದಿದ್ದಳು ಎನ್ನಲಾಗಿದ್ದ ಡೆತ್ ನೋಟ್ ಸಿಕ್ಕಿತ್ತು. ಆ ನಂತರ ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.
ದೂರು ನೀಡಿದ ನಂತರ ವಿದ್ಯಾರ್ಥಿನಿ ಮೃತ ದೇಹವನ್ನು ಹೊರತೆಗೆಯಲಾಗಿತ್ತು. ಮೊರಾಜಿ ವಸತಿ ಶಾಲಾ ಶಿಕ್ಷಕನೋರ್ವನ ಕುಟುಂಬದಿಂದ ಕಿರುಕುಳ ಆರೋಪ ಕೇಳಿಬಂದಿತ್ತು. ಮೊರಾರ್ಜಿ ಶಾಲೆಯ ಹಿಂದಿನ ಶಿಕ್ಷಕನ ಮಗಳು ಹಾಗೂ ಮೃತ ಅರ್ಚನಾ ಇಬ್ಬರೂ ಸಹಪಾಠಿಗಳಾಗಿದ್ದರು. ಓದಿನಲ್ಲಿ ಅರ್ಚನಾ ಶಿಕ್ಷಕನ ಮಗಳಿಗಿಂತ ಮುಂದಿದ್ದಳು. ಇದೇ ಕಾರಣದಿಂದ ಹಿಂದಿ ಶಿಕ್ಷಕನ ಪತ್ನಿ, ಅರ್ಚನಾಳಿಗೆ ನನ್ನ ಮಗಳಿಗಿಂತ ನೀನೇಕೆ ಓದಿನಲ್ಲಿ ಮುಂದೆ ಇದ್ದೀಯಾ ಎಂದು ಕಿರಕುಕುಳ ನೀಡಿದ್ದರು ಎಂದು ಅರ್ಚನಾ ಡೆತ್‌ನೋಟ್‌ನಲ್ಲಿ ಅರೋಪ ಮಾಡಿದ್ದಳು ಎನ್ನಲಾಗಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋನಮೆಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿವ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜತೆಗೆ ಪ್ರಾಂಶುಪಾಲ, ಶಿಕ್ಷಕರು, ಅನುಚಿತ ವರ್ತನೆ ತೋರಿದ್ದರು. ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಕಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ವಸತಿ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ತೋರುತ್ತಿದ್ದ ಶಾಲೆಯ ಪ್ರಾಂಶುಪಾಲರನ್ನು ಸೇವೆಯಿಂದ ಬಿಡುಗಡೆಗೊಳಿಸಿತ್ತು.
ಗಂಗಾವತಿ ತಾಲೂಕಿನ ಹೇಮಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗಿತ್ತು. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಶಿರಸಿಯಲ್ಲಿ ಲೈಂಗಿಕ ಕಿರುಕುಳ ಆರೋಪ ಹೊತ್ತಿದ್ದ ಪ್ರಾರ್ಚಾಯರನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೇಮಿಸಲಾಗಿತ್ತು. ಹೀಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು. ಆಹಾರ, ನೀರು ತ್ಯಜಿಸಿ ಪ್ರತಿಭಟನೆ ನಡೆಸಿದ್ದರು.
ಕಾರವಾರದ ಕಿತ್ತೂರ ರಾಣಿ ವಸತಿ ಶಾಲೆಯಲ್ಲಿ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ಅವರನ್ನು ನೇಮಕ ಮಾಡಿತ್ತು. ರಾಘವೇಂದ್ರ ನಾಯ್ಕ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಾಡಿದ್ದ ಆದೇಶವನ್ನು ವಿದ್ಯಾರ್ಥಿಗಳು ವಿರೋಧಿಸಿದ್ದರು. ಇದರಿಂದ ಆಕ್ರೋಶೊಗೊಂಡಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಚಂದ್ರಶೇಖರ ನಾಯ್ಕ ಮೇಲೆ ನಮಗೆ ನಂಬಿಕೆ ಇಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಅವರೇ ನೇರ ಹೊಣೆಯಾಗುತ್ತಾರೆ ಎಂದು ಪಾಲಕರು ಎಚ್ಚರಿಸಿದ್ದರು.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದರು. ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾಗರ ತಾಲೂಕಿನ ಇರುವಕ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ವಸತಿ ಶಾಲೆಯ ಪ್ರಾಂಶುಪಾಲ ಬಿ.ಕೆ. ಚಂದ್ರಪ್ಪ ಹಾಗೂ ಕೆಲ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಕಾಲಿನಿಂದ ಒದ್ದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕಳಪೆ ಗುಣಮಟ್ಟದ ಆಹಾರವನ್ನು ವಸತಿ ಶಾಲೆಯಲ್ಲಿ ನೀಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ, ವಿದ್ಯಾರ್ಥಿಗಳಿಗೆ ಕೆಟ್ಟ ಪದಗಳಿಂದ ನಿಂದಿಸಿ ವರ್ಗಾವಣೆ ಪತ್ರ (ಟಿಸಿ) ಕೊಡುತ್ತೇವೆ. ನಾವು ಹೇಳಿದ ಹಾಗೆ ಕೇಳದಿದ್ದರೆ ಮನೆಗೆ ಕಳುಹಿಸುತ್ತೇವೆ ಎಂದು ಬೆದರಿಸಿದ್ದರು ಎಂದು ವಿದ್ಯಾರ್ಥಿಗಳು ಆಪಾದಿಸಿದ್ದರು.
ಕಲ್ಬುರ್ಗಿಯ ಜೇವರ್ಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಕ ಅಮಾನತುಗೊಳಿಸಿದ್ದರು. ವಿದ್ಯಾರ್ಥಿನಿಯರ ದೂರಿನ ಕುರಿತು ನಿರ್ಲಕ್ಷ್ಯ ವಹಿಸಿದ್ದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರನ್ನು ಸಹ ಅಮಾನತುಗೊಳಿಸಿತ್ತು.