ಬೆಂಗಳೂರು; ಕಡಿಮೆ ದರದಲ್ಲಿ ವಿದ್ಯುತ್ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಟೆಂಡರ್‌ನ್ನು ಅಂತಿಮಗೊಳಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ರಾಹಕರ ಮೇಲೆ ಹೆಚ್ಚುವರಿಯಾಗಿ 113.42 ಕೋಟಿ ರು.ನಷ್ಟು ಹೊರೆ ಹೊರಿಸಿದೆ.
ಅಲ್ಪಾವಧಿ ಅವಧಿಗೆ ಕಡಿಮೆ ದರದಲ್ಲಿ ವಿದ್ಯುತ್ ಖರೀದಿ ಸಂಬಂಧ ಇಂಧನ ಇಲಾಖೆಯು ಅನುಸರಿಸಿದ್ದ ವಿಳಂಬದ ಕುರಿತು ಪ್ರಧಾನ ಮಹಾಲೇಖಪಾಲರು (ಸಿಎಜಿ) ಗ್ರಾಹಕರ ಮೇಲೆ 113.42 ಕೋಟಿಯಷ್ಟು ಹೊರೆ ಹೊರಿಸಿರುವ ಬಗ್ಗೆ ವಿವರಣೆ ಕೇಳಿ ಪತ್ರ ಬರೆದಿದೆ.
ಪ್ರಧಾನ ಮಹಾಲೇಖಪಾಲರು 2024ರ ಆಗಸ್ಟ್ 23ರಂದು ಸರ್ಕಾರಕ್ಕೆ ಬರೆದಿರುವ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಕ್ಟೋಬರ್ 2023 ರಿಂದ ಮೇ 2024 ರ ಅವಧಿಗೆ ಅಲ್ಪಾವಧಿಯ ವಿದ್ಯುತ್ ಖರೀದಿ ಸಂಬಂಧ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿರಲಿಲ್ಲ. ವಿದ್ಯುತ್‌ನ್ನು ಸ್ಪರ್ಧಾತ್ಮಕ ದರಗಳಲ್ಲಿ ಖರೀದಿಸಲು ಕರೆದಿದ್ದ ಟೆಂಡರ್‌ನ್ನು ನಾಲ್ಕು ಬಾರಿ ತಿದ್ದುಪಡಿ ಮಾಡಲಾಗಿತ್ತು. ಆದರೂ ಟೆಂಡರ್‌ನ್ನು ನಿಗದಿತ ಅವಧಿಯೊಳಗೇ ಅಂತಿಮಗೊಳಿಸಿರಲಿಲ್ಲ. ಹೀಗಾಗಿ ಗ್ರಾಹಕರಿಗೆ ಹೆಚ್ಚುವರಿಯಾಗಿ 113.42 ಕೋಟಿ ರು.ನಷ್ಟು ಹೊರೆ ಹೊರಿಸಿದಂತಾಗಿದೆ ಎಂದು ಸಿಎಜಿ ಪತ್ರದಿಂದ ತಿಳಿದು ಬಂದಿದೆ.
ಟ್ಯಾರಿಫ್ ಆಧಾರಿತ ಬಿಡ್ಡಿಂಗ್ ಮತ್ತು ವಿತರಣಾ ಪರವಾನಗಿಗಳ ಮೂಲಕ ಅಲ್ಪಾವಧಿಯ ವಿದ್ಯುತ್ ಸಂಗ್ರಹಣೆಗೆ ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ನೀಡಿತ್ತು. ಹಿಂದಿನ ವರ್ಷಗಳ ಮಳೆಯ ಪ್ರವೃತ್ತಿಗಳು ಮತ್ತು ವಿದ್ಯುತ್ ಬೇಡಿಕೆಯನ್ನು ಹೋಲಿಕೆ ಮಾಡಿದ ನಂತರ ಅಂದಾಜು ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಸಂಗ್ರಹಿಸಬೇಕು ಎಂಬ ಮುನ್ಸೂಚನೆ ನೀಡಿತ್ತು.
ಅದರಂತೆ ಸೆಪ್ಟೆಂಬರ್ 2023 ರಿಂದ ಮೇ 2024 ರ ನಡುವೆ ಕರ್ನಾಟಕ ರಾಜ್ಯಕ್ಕೆ ಖರೀದಿ ಅಗತ್ಯತೆ, ರಾಜ್ಯದ ಉಷ್ಣ ಉತ್ಪಾದನೆಯ ಜಲವಿದ್ಯುತ್ ಸ್ಥಾವರದ ಲಭ್ಯತೆ ಮತ್ತು ಬೇಡಿಕೆ ಹಾಗೂ ನಿರೀಕ್ಷಿತ ಬೆಳವಣಿಗೆ, ಕೊರತೆಯ ಪ್ರಮಾಣವನ್ನು 1200 ಮೆಗಾ ಯೂನಿಟ್ ಎಂದು ಆರ್‌ಟಿಸಿಯಲ್ಲಿ ಪರಿಗಣಿಸಿತ್ತು. ಇದನ್ನಾಧರಿಸಿ ಗಂಟೆವಾರು ಲೋಡ್ ಉತ್ಪಾದನಾ ಸಮತೋಲನ ವರದಿಯನ್ನು ಸಿದ್ಧಪಡಿಸಿತ್ತು.
ಸೆಪ್ಟೆಂಬರ್ 2023 ರಿಂದ ಡಿಸೆಂಬರ್ 2023 ರ ನಡುವಿನ ಅವಧಿಗೆ ಮತ್ತು ಜನವರಿ 2024 ರಿಂದ ಮೇ 2024 ರ ನಡುವಿನ ಅವಧಿಗೆ ಆರ್‌ಟಿಸಿ ಪ್ರಕಾರ 1500 ಮೆಗಾ ಯೂನಿಟ್, ಪೀಕ್ ಅವರ್‌ಗಳಿಗೆ ನಿರೀಕ್ಷಿತ ಬೇಡಿಕೆ 500 ಮೆಗಾ ಯೂನಿಟ್ ಎಂದು ಅಂದಾಜಿಸಿತ್ತು. ಹರಾಜು ಪ್ರಕ್ರಿಯೆಯ ಮೂಲಕ ಖರೀದಿಯಾಗಿ ಉಳಿಕೆಯಾದ ನಂತರ ಉದ್ಬವಿಸುವ ಯಾವುದೇ ಹೆಚ್ಚುವರಿ ವಿದ್ಯುತ್ ಕೊರತೆಯನ್ನು ವಿದ್ಯುತ್ ಮಾರುಕಟ್ಟೆಯಿಂದ ದಿನಂಪ್ರತಿ ಖರೀದಿಸಲಾಗುವುದು ಎಂದು ಸೂಚಿಸಿತ್ತು ಎಂದು ಸಿಎಜಿ ಪತ್ರದಿಂದ ತಿಳಿದು ಬಂದಿದೆ.
ಡೀಪ್ ಪೋರ್ಟಲ್ ಅಥವಾ ವಿದ್ಯುತ್ ವಿನಿಮಯ ಮೂಲಕ ನಿಗದಿತ ಅವಧಿ ಮತ್ತು ಪ್ರಮಾಣಕ್ಕೆ ಅಗತ್ಯವಿರುವ ವಿದ್ಯುತ್ ಸಂಗ್ರಹಣೆ ಕುರಿತು ಪಿಸಿಕೆಲ್, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಕೋರಿಕೆ ಸಲ್ಲಿಸಿತ್ತು. ಈ ಕುರಿತು ವಿವರವಾಗಿ ಚರ್ಚೆಗಳೂ ನಡೆದಿದ್ದವು. ಇದಾದ ನಂತರ ಮತ್ತು ಕೊರತೆಯನ್ನು ನಿರ್ವಹಿಸಲು ಅಲ್ಪಾವಧಿಯ ವಿದ್ಯುತ್‌ನ್ನು ಸಂಗ್ರಹಿಸುವ ಅಗತ್ಯವನ್ನು ಪರಿಗಣಿಸಿತ್ತು.
ಸೆಪ್ಟೆಂಬರ್ 2023 ರಿಂದ ಮೇ 2024 ರವರೆಗೆ 5ರಿಂದ 9 ಗಂಟೆಗಳು ಮತ್ತು 18 ರಿಂದ 22 ಗಂಟೆಗಳ ನಡುವೆ 1000 ಮೆಗಾ ವ್ಯಾಟ್ ಆರ್‌ಟಿಸಿ ಮತ್ತು 250 ಮೆಗಾ ವ್ಯಾಟ್‌ನ ಅಲ್ಪಾವಧಿಯ ವಿದ್ಯುತ್‌ನ್ನು ಖರೀದಿಸುವ ಪ್ರಸ್ತಾವನೆಯನ್ನು ಕೆಇಆರ್‌ಸಿ ಅನುಮೋದಿಸಿತ್ತು.
ಮತ್ತು ಡೀಪ್ ಪೋರ್ಟಲ್ ಮೂಲಕ ಪ್ರತಿ ಯೂನಿಟ್‌ಗೆ 4.02493 ರು ನಂತೆ ವೆಚ್ಚದ ಬೆಲೆಯನ್ನು ಅನುಮೋದಿಸಿತ್ತು. ಹಾಗೆಯೇ ವಿದ್ಯುತ್ ವಿನಿಮಯದ ಪ್ರಕಾರ ಕೆಪಿಟಿಸಿಎಲ್ ಮತ್ತು ಪಿಸಿಕೆಎಲ್ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಓವರ್‌ಲೋಡ್ ಕಡಿತವನ್ನು ಕಡಿಮೆ ಮಾಡಬೇಕು ಎಂಬ ಷರತ್ತನ್ನು ವಿಧಿಸಿತ್ತು.
ಡೀಪ್ ಪೋರ್ಟಲ್ ಅಥವಾ ವಿದ್ಯುತ್ ವಿನಿಮಯ ಮೂಲಕ ಸ್ಪರ್ಧಾತ್ಮಕ ಬಿಡ್ಡಿಂಗ್ ಮಾರ್ಗದ ಮೂಲಕ ವಿದ್ಯುತ್ ಖರೀದಿಸಲು ಟೆಂಡರ್ ಆಹ್ವಾನಿಸಲು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೂರ್ವ ಟೆಂಡರ್ ಪರಿಶೀಲನಾ ಸಮಿತಿಯು ಸೂಚನೆ ನೀಡಿತ್ತು.
ನಿರ್ಮಾಣ ಕಾರ್ಯಗಳು ಸೇರಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಗೆ ಸಂಬಂಧಿಸಿದಂತೆ ಅಂದಾಜಿಸಿದ್ದ ಮೌಲ್ಯ 50 ಕೋಟಿ ಮೀರಿತ್ತು. ರಾಜ್ಯ ಪೂರ್ವ ಟೆಂಡರ್ ಪರಿಶೀಲನಾ ಸಮಿತಿಯು ವಿದ್ಯುತ್ ಸಂಗ್ರಹಣೆಯ ಪರಿಶೀಲನೆಯನ್ನು ತೆಗೆದುಕೊಳ್ಳುವ ಮೊದಲು ಆಡಳಿತಾತ್ಮಕ ಅನುಮೋದನೆ ಮತ್ತು ತಾಂತ್ರಿಕ ಮಂಜೂರಾತಿಯನ್ನು ಒದಗಿಸಬೇಕು ಎಂದು ಪಿಸಿಕೆಎಲ್‌ನ್ನು ಕೋರಿತ್ತು.
ಅಕ್ಟೋಬರ್ 2023 ರಿಂದ ಮೇ 2024 ರ ಅವಧಿಗೆ ಅಲ್ಪಾವಧಿಯ ವಿದ್ಯುತ್ ಖರೀದಿಗೆ ಆಡಳಿತಾತ್ಮಕ ಅನುಮೋದನೆಯನ್ನು ಪಡೆದಿರಲಿಲ್ಲ. ಪಿಸಿಕೆಎಲ್ ಸುತ್ತೋಲೆ ಮೂಲಕ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಮತ್ತು 2023ರ ಅಕ್ಟೋಬರ್ 9ರಂದು ಈ ಸಂಬಂಧ ಟೆಂಡರ್ ಪರಿಶೀಲನಾ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ರಾಜ್ಯ ಪೂರ್ವ ಟೆಂಡರ್ ಪರಿಶೀಲನಾ ಸಮಿತಿಯು ಟೆಂಡರ್ ಅಧಿಸೂಚನೆಯನ್ನು ಪ್ರಕ್ರಿಯೆಗೊಳಿಸಲು ಅನುಮೋದಿಸಿತ್ತು. ಮತ್ತು ಪ್ಯಾರಾ 6 ರಲ್ಲಿ ನೀಡಿದ್ದ ನಿರ್ದೇಶನಗಳನ್ನು ಸರಿಯಾಗಿ ಅನುಸರಿಸಿ ಟೆಂಡರ್ ನ್ನು ತೆರೆಯುವ ಮೊದಲು ಸಲಹಾ ಅನುಸರಣೆ ವರದಿ ಸಲ್ಲಿಸಬೇಕು ಎಂಬ ಸೂಚನೆ ನೀಡಿತ್ತು. ಇದರ ಅನುಸರಣೆ ವರದಿಯನ್ನು 2023ರ ಅಕ್ಟೋಬರ್ 25ರಂದು ಸಲ್ಲಿಸಿತ್ತು.
ಸಮಿತಿಯು ನೀಡಿದ್ದ ಸಲಹೆಯನ್ನು ಪರಿಶೀಲಿಸಿದ ನಂತರ 2023ರ ನವೆಂಬರ್ 20ರಿಂದ 2024ರ ಮೇ 31ರವರೆಗಿನ ಅವಧಿಗೆ ಅಲ್ವಾವಧಿ ಆಧಾರದ ಮೇಲೆ 1000 ಮೆಗಾ ವ್ಯಾಟ್ ಆರ್‌ಟಿಸಿ ವಿದ್ಯುತ್ ಮತ್ತು 250 ಮೆಗಾ ವ್ಯಾಟ್ ಪೀಕ್ ಅವಧಿಗೆ ವಿದ್ಯುತ್ ಖರೀದಿಗೆ ಟೆಂಡರ್ ಅಧಿಸೂಚನೆಯನ್ನು ಹೊರಡಿಸಿತ್ತು.
ಟೆಂಡರ್, ಬಿಡ್‌ನ ಸ್ಪಷ್ಟೀಕರಣ ಮತ್ತು 4 ಬಾರಿ ತಿದ್ದುಪಡಿ ಮಾಡಲಾಗಿತ್ತು. ನಾಲ್ಕನೇ ತಿದ್ದುಪಡಿ ಪ್ರಕಾರ ಬಿಡ್‌ದಾರರ ಕೋರಿಕೆಯ ಮೇರೆಗೆ ರೆಪ್ ಬಿಡ್ ಸಲ್ಲಿಸುವ ಕೊನೆಯ ದಿನಾಂಕ 2023ರ ಡಿಸೆಂಬರ್ 22 ಎಂದು ಗೊತ್ತುಪಡಿಸಿತ್ತು. ಆ ನಂತರ ಇದನ್ನು 2023ರ ಡಿಸೆಂಬರ್ 29ರವರೆಗೆ ರವರೆಗೆ ವಿಸ್ತರಿಸಿತ್ತು. ಏತನ್ಮಧ್ಯೆ, 2023ರ ಅಕ್ಟೋಬರ್ 25ರಂದೇ ಇದನ್ನು ಕೆಇಆರ್‌ಇಸಿಗೂ ತಿಳಿಸಿತ್ತು.
ಮತ್ತೊಂದು ವಿಶೇಷವೆಂದರೇ ರಿವರ್ಸ್ ಹರಾಜಿನಲ್ಲಿ ಕಂಡುಕೊಂಡಿದ್ದ ಬೆಲೆ ಮರು ಪರಿಶೀಲನೆ ಮಾಡಿದ್ದ 4.02493 ರ ಬೆಲೆಯ ಮಿತಿಗಿಂತ ಹೆಚ್ಚಾಗಿತ್ತು. ಪ್ರತಿ ಯೂನಿಟ್‌ಗೆ ಬಿಡ್‌ಗಳನ್ನು ಪ್ರತಿ ಯೂನಿಟ್ ನಂತೆ ಪಿಸಿಕೆಎಲ್ ನಿಂದ ಸ್ವೀಕರಿಸಿರಲಿಲ್ಲ. ರಾಜ್ಯವು ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ಕಾರಣ, ಅದನ್ನು ತಡೆಗಟ್ಟುವ ಸಲುವಾಗಿ ರಿವರ್ಸ್ ಹರಾಜು ಅಥವಾ ಡೀಪ್ ಪೋರ್ಟಲ್ ಅಡಿಯಲ್ಲಿ ವಿನಿಮಯ ಕೇಂದ್ರಗಳ ಮೂಲಕ ವಿದ್ಯುತ್ ಖರೀದಿಸಲು ಬೆಲೆ ಮಿತಿಯನ್ನು ತೆಗೆದುಹಾಕಲು ಆಯೋಗವನ್ನು ವಿನಂತಿಸಿತ್ತು.
ಟ್ಯಾರಿಫ್ ಆಧಾರಿತ ಬಿಡ್ಡಿಂಗ್ ಪ್ರಕ್ರಿಯೆಯ ಮಾರ್ಗಸೂಚಿಗಳ ಪ್ರಕಾರ ಮತ್ತು ಆಯೋಗದ ನಿರ್ದೇಶನದ ಪ್ರಕಾರ ಡೀಪ್ ಪೋರ್ಟಲ್ ಮೂಲಕ ದರವನ್ನು ನಿಗದಿಪಡಿಸಲು ಆಯೋಗವು ಪಿಸಿಕೆಎಲ್‌ಗೆ ತಿಳಿಸಿತ್ತು. ಮಾರುಕಟ್ಟೆ ದರಗಳು ಸೀಲಿಂಗ್ ಬೆಲೆಗಿಂತ ಹೆಚ್ಚಿತ್ತು. ಹೀಗಾಗಿ ಪ್ರತಿ ಯೂನಿಟ್‌ಗೆ 4.0243 ರು.ನಂತೆ ಸೀಲಿಂಗ್ ಟ್ಯಾರಿಫ್‌ಗಾಗಿ ಕಂಪನಿಯು ಮತ್ತೊಮ್ಮೆ 2023ರ ನವೆಂಬರ್ 28ರಂದು ಆಯೋಗಕ್ಕೆ ಕೋರಿಕೆ ಸಲ್ಲಿಸಿತ್ತು.
ಪಿಸಿಕೆಎಲ್‌ನ ಕೋರಿಕೆಯನ್ನು 2023ರ ಡಿಸೆಂಬರ್ 13ರಂದು ಅನುಮೋದಿಸಿತ್ತು. ಡೀಪ್ ಪೋರ್ಟಲ್ ಮೂಲಕ ಮತ್ತು ಮಾರ್ಗಸೂಚಿಗಳ ಪ್ರಕಾರ ಟ್ಯಾರಿಫ್ ಆಧಾರಿತ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ದರವನ್ನು ಸೀಲಿಂಗ್ ಬೆಲೆ ಇಲ್ಲದೆ ನಿಗದಿಇಪಡಿಸಬೇಕು ಎಂಬ ನಿರ್ದೇಶನ ನೀಡಿತ್ತು. ಈ ದರವನ್ನು ಆಯೋಗಕ್ಕೆ ಸಲ್ಲಿಸಬೇಕು. ಆದರೆ ಆಯೋಗವು ಸೀಲಿಂಗ್ ಬೆಲೆಯನ್ನು ತೆಗೆದು ಹಾಕಿದ್ದರಿಂದಾಗಿ 2023ರ ಡಿಸೆಂಬರ್ 14ರಂದು ತಿದ್ದುಪಡಿ ಮಾಡಲಾಗಿತ್ತು.
ಈ ಟೆಂಡರ್ ಪ್ರಕ್ರಿಯೆಯಲ್ಲಿ ತಮಿಳುನಾಡು ಮೂಲದ ಕೋಸ್ಟಲ್ ಎನರ್ಜಿ ಲಿಮಿಟೆಡ್ ಮತ್ತು ಡಿಬಿ ಪವರ್ ಲಿಮಿಟೆಡ್ ಮಾತ್ರ ಬಿಡ್ ಮಾಡಿದ್ದವು. ಹೀಗಾಗಿ ಈ ಪ್ರಕ್ರಿಯೆಯನ್ನು ಅಂತಿಮಗೊಳಿಸಲು 2024ರ ಜನವರಿ 3ರಂದು ಚರ್ಚೆ ನಡೆದಿತ್ತು. ನಂತರ ಕೈಗೊಂಡ ನಿರ್ಧಾರವನ್ನು ಸ್ಥಾಯಿ ಸಮಿತಿ ಮುಂದೆ ಇಟ್ಟಿತ್ತು ಎಂದು ಸಿಎಜಿ ಅವಲೋಕಿಸಿರುವುದು ಗೊತ್ತಾಗಿದೆ.
ಪ್ರಧಾನ ಮಹಾಲೇಖಪಾಲರು ಮಾಡಿರುವ ಅವಲೋಕನದ ಕುರಿತು ಇಂಧನ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ ಜೆ ಜಾರ್ಜ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.